About Us Advertise with us Be a Reporter E-Paper

ಅಂಕಣಗಳು

ಟ್ರಂಪ್ ಘೋಷಣೆಗಳೂ.. ಪ್ರಸ್ತುತ ಅಮೇರಿಕಾವೂ..

ಕುಮಾರ್ ಶೇಣಿ ರಾಜ್ಯಶಾಸ್ತ್ರ ಉಪನ್ಯಾಸಕ ಪುತ್ತೂರು

ಅಮೆರಿಕಾದ ರಾಜಕೀಯ ಇತಿಹಾಸದಲ್ಲಿ ಅದೊಂದು ಐತಿಹಾಸಿಕ ಕ್ಷಣ. ಬಾಯಿಯನ್ನೇ ಮಾಡಿಕೊಂಡು, ಎಲ್ಲ ದಿಕ್ಕೂಗಳಿಗೂ ಫೈರ್ ಮಾಡುತ್ತಿದ್ದ ಟ್ರಂಪ್ ಎನ್ನುವ ವ್ಯಕ್ತಿ ಅಮೇರಿಕಾದ ಅಧ್ಯಕ್ಷನಾಗುತ್ತಾನೆ ಎಂದು ಹಲವು ಅಮೇರಿಕನ್ನರು ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ. ಅಮೇರಿಕನ್ನರು ಬಿಡಿ, ಚುನಾವಣೆಗೆ ಕೆಲವು ಸಮಯದ ಹಿಂದೆ ರಿಪಬ್ಲಿಕ್ಲನ್ ಪಕ್ಷದ ಬೆಂಬಲಿಗರು ಊಹಿಸಿರಲಿಲ್ಲ. ಆದರೆ ಚುನಾವಣಾ ಫಲಿತಾಂಶ ಅವರ ಊಹೆಗಳನ್ನೆಲ್ಲ ಮೀರಿತ್ತು. ಹಲವು ಅಮೇರಿಕನ್ನರಲ್ಲಿ ಬಾಯಲ್ಲಿ ಜೋಕರ್ ಎನಿಸಿಕೊಂಡಿದ್ದ ಟ್ರಂಪ್ ಅಮೇರಿಕಾದ ಅಧ್ಯಕ್ಷ ಗದ್ದುಗೆಯೇರಿದ್ದ.

ಟ್ರಂಪ್ ಅಧಿಕಾರದ ಗದ್ದುಗೇರಲು ಹಲವು ಕಾರಣಗಳು ಇದ್ದವು. ಅದರಲ್ಲಿ ಮೊದಲನೆಯದು ಚುನಾವಣಾ ಘೋಷಣೆಗಳು. ಟ್ರಂಪ್ ಮಾತನಾಡಲು ಆರಂಭಿಸಿದರೆ, ಕೆಲವೊಮ್ಮೆ ಅವರನ್ನು ಜೋಕರ್ ಎಂದು ಪರಿಗಣಿಸುವಂತಹ ಘೋಷಣೆಗಳು ಅವರ ಮಾತುಗಳಲ್ಲಿ ಹೊರಬರುತಿದ್ದವು. ಅಮೇರಿಕಾದ ಎಲ್ಲ ಸಮಸ್ಯೆಗಳಿಗೂ ಅವರಲ್ಲಿ ಪರಿಹಾರವಿತ್ತು. ಅದು ಸಾಧ್ಯವೋ, ಅಸಾಧ್ಯವೋ ಎಂಬುದು ನಂತರದ ವಿಚಾರವಾಗಿತ್ತು. ಇಂತಹ ಹಲವಾರು ಘೋಷಣೆಗಳಿಂದ ಹಲವು ಅಮೇರಿಕನ್ನರ ಮನಸ್ಸಿನಲ್ಲಿ, ಟ್ರಂಪ್ ಹೊಸ ಕನಸುಗಳನ್ನು ಹುಟ್ಟು ಹಾಕಿದ್ದ. ಅಕ್ರಮ ವಲಸೆಯನ್ನು ತಡೆಯಲು ಮೆಕ್ಸಿಕೋ ಮತ್ತು ಅಮೇರಿಕಾದ ನಡುವೆ ಗೋಡೆಯನ್ನು ನಿರ್ಮಿಸುತ್ತೇನೆ ಎಂಬುದು ಇಂತಹ ಘೋಷಣೆಗಳಲ್ಲಿ ಒಂದು.

ಸಮಸ್ಯೆಯಿಂದ ಬಳಲುತ್ತಿದ್ದ, ಅಮೇರಿಕನ್ನರಿಗೆ, ಟ್ರಂಪ್ ರ ಈ ಘೋಷಣೆ ಹೊಸ ಆಶಾಭಾವನೆಯನ್ನು ಮೂಡಿಸಿತ್ತು. ಆದರೆ ಅಮೇರಿಕದ ಜನರ ನಡುವೆ ಬೆರೆತು ಹೋಗಿರುವ ಮೆಕ್ಸಿಕೋ ವಲಸಿಗರನ್ನು ಹೊರಗಟ್ಟುವುದು ಮತ್ತು ಗೋಡೆಯನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ ಎಂಬುದು ಕೂಡ ಅಮೇರಿಕನ್ನರಿಗೆ ತಿಳಿದಿತ್ತು. ಯಾಕೆಂದರೆ ಮೆಕ್ಸಿಕನ್ನರ ವಲಸೆ ಆರಂಭವಾಗಿದ್ದು ಇತ್ತೀಚಿನ ದಿನಗಳಲ್ಲಂತೂ ಅಲ್ಲ. ಇದು ಆರಂಭವಾಗಿದ್ದು ಮೊದಲ ಮಹಾಯುದ್ಧದ ಸಮಯದಲ್ಲಿ. ಅಮೇರಿಕಾದಲ್ಲಿ ಇದ್ದ ಎಲ್ಲ ಕೆಲಸಗಾರರು, ವಿಶ್ವಯುದ್ಧದಲ್ಲಿ ತೊಡಗಿಕೊಂಡಾಗ, ಅಮೇರಿಕ ಸರಕಾರ ಮೆಕ್ಸಿಕೋ ಒಪ್ಪಂದ ಮಾಡಿಕೊಂಡು, ಮೆಕ್ಸಿಕನ್ನರನ್ನು ಆಮದು ಮಾಡಿಕೊಂಡಿತು. ಆದರೆ ಮಹಾಯುದ್ಧ ಮುಗಿದ ಬಳಿಕ, ಮತ್ತೆ ತಮ್ಮ ಕೆಲಸಗಳಿಗೆ ಮರಳಿದ ಅಮೇರಿಕನ್ನರಿಗೆ, ಅಲ್ಲಿ ಜಾಗವಿರಲಿಲ್ಲ.

ವಿಶ್ವಯುದ್ಧವೇ ಅಮೇರಿಕಾಕ್ಕೆ ಒಂದು ದೊಡ್ಡ ಆರ್ಥಿಕ ಸಂಕಷ್ಟವನ್ನು ತಂದಿಟ್ಟಿತ್ತು. ಅದರ ಜತೆಗೆ ನಿರುದ್ಯೋಗದ ಸಮಸ್ಯೆಯು ಆರಂಭವಾಯಿತು. ಅದನ್ನು ನಿವಾರಿಸಲು ಅಮೇರಿಕಾ, ಮೆಕ್ಸಿಕೋದ ಕೆಲಸಗಾರರನ್ನು ಹುಡುಕಿ, ಮತ್ತೆ ಮೆಕ್ಸಿಕೋಗೆ ಅಟ್ಟುವ ಕೆಲಸ ಆರಂಭಿಸಿತು. ಆದರೆ ಅಮೇರಿಕಾದ ಭೂಮಾಲೀಕರು ಅತೀ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಮೆಕ್ಸಿಕೋ ಕೆಲಸಗಾರರನ್ನು ಕಳೆದುಕೊಳ್ಳಲು ಆಗ ಆರಂಭವಾಗಿದ್ದು ಅಕ್ರಮ ವಲಸೆ. ಸರಕಾರ ಹೊರಗಟ್ಟುತಿದ್ದ ಮೆಕ್ಸಿಕನ್ನರನ್ನು ಭೂಮಾಲೀಕರು ಅಕ್ರಮವಾಗಿ ಕರೆಸಿಕೊಳ್ಳಲು ಆರಂಭಿಸಿದರು. ಇದು ಮತ್ತೊಂದು ದೊಡ್ಡ ಸಮಸ್ಯೆಯನ್ನು ಅಮೇರಿಕದಲ್ಲಿ ಸೃಷ್ಟಿಸಿತು. ವಲಸಿಗರ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಅಮೇರಿಕಾದ ಕೆಲವು ದಾಖಲೆಗಳ ಪ್ರಕಾರ, ಸದ್ಯ 1 ಕೋಟಿಗೂ ಅಧಿಕ ಅಕ್ರಮ ವಲಸಿಗರು ಅಮೇರಿಕದಲ್ಲಿದ್ದಾರೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮೆಕ್ಸಿಕನ್ನರು. ಇಷ್ಟು ಸಂಖ್ಯೆಯಲ್ಲಿ ಇರುವ ವಲಸಿಗರನ್ನು ಹೊರಗಟ್ಟುತ್ತೇನೆ ಎಂದು ಟ್ರಂಪ್ ಹೇಳಿದಾಗ ಕೆಲವರಲ್ಲಿ ಆಶಾಭಾವನೆ ಮೂಡಿಸಿದರೆ, ಇನ್ನೂ ಇದು ಎಂಬ ಪ್ರಶ್ನೆಯು ಮೂಡಿತ್ತು. ಅದಲ್ಲದೇ ಒಂದು ವರದಿಯ ಪ್ರಕಾರ ಒಬ್ಬ ಅಕ್ರಮ ವಲಸಿಗನನ್ನು ಹೊರಹಾಕಲು, ಅಮೇರಿಕಾವು ಕನಿಷ್ಠ 7 ಲಕ್ಷ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಇಷ್ಟು ಹಣ ಖರ್ಚು ಮಾಡಲು ಅಮೇರಿಕಾ ಸಿದ್ಧವಿದೆಯೇ ಎಂಬ ಪ್ರಶ್ನೆಯು ಮೂಡಿತ್ತು.

ಇಂತಹ ಘೋಷಣೆಗಳನ್ನು ಮಾಡುತ್ತಾ ಬಂದ ಟ್ರಂಪ್, ಅಧ್ಯಕ್ಷರಾದ ನಂತರ ಅದೆಲ್ಲದರ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಇದು ಸದ್ಯಕ್ಕೆ ಅಮೇರಿಕಾದಲ್ಲಿ ಎಲ್ಲ ವಿದ್ಯಮಾನಗಳಿಗೆ ಕಾರಣವಾಗಿದೆ. ಮೆಕ್ಸಕೋ ತಡೆಗೋಡೆ ನಿರ್ಮಾಣಕ್ಕೆ ಅಮೇರಿಕಾದ ಬಜೆಟ್‌ನಲ್ಲಿ, ಹೊಂದಿಸುವ ಟ್ರಂಪ್ ಪ್ರಯತ್ನಕ್ಕೆ ಅಮೇರಿಕಾದ ಮೇಲ್ಮನೆಯಾಗಿರುವ ಸೆನೆಟ್ ಒಪ್ಪುತ್ತಿಲ್ಲ. ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಬಹುಮತ ಇಲ್ಲದ ಕಾರಣ ಟ್ರಂಪ್ ಅಕ್ಷರಶಃ ಅಸಹಾಯಕರಾಗಿದ್ದಾರೆ.

ಈ ವಿದ್ಯಮಾನಗಳು ಅಮೇರಿಕಾವನ್ನು ಶಟ್‌ಡೌನ್ ಸ್ಥಿತಿಗೆ ಕಾರಣವಾಗಿದೆ. ಶಟ್‌ಡೌನ್ ಸ್ಥಿತಿ ಎಂದರೆ ಹಣಕಾಸಿನ ಸಮಸ್ಯೆಯಿಂದ ಹಲವಾರು ಸರಕಾರಿ ವಿಭಾಗಗಳಲ್ಲಿ ತನ್ನ ಕೆಲಸವನ್ನು ಸ್ಥಗಿತಗೊಳಿಸುವುದು. ಇದರಿಂದ ಹಲವು ಕೆಲಸಗಾರರು ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಸತತ ದಿನಗಳ ಅಮೇರಿಕಾ ಇಂತಹ ಸ್ಥಿತಿಗೆ ತಲುಪಿ, ಜನವರಿ 26ರಂದು ಸಹಜ ಸ್ಥಿತಿಗೆ ಮುಂದಿನ ಮೂರು ವಾರಗಳವರೆಗೆ (ಅಂದರೆ ಫೆಬ್ರವರಿ 15ರ ವರೆಗೆ) ಸರಕಾರದ ಯೋಜನೆಗಳಿಗೆ ಹಣಕಾಸು ವೆಚ್ಚ ಭರಿಸುವ ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಗುವ ಮೂಲಕ, ಸದ್ಯಕ್ಕಂತೂ ನಿರಾಳವಾಗಿದೆ.

ಹೀಗೆ ಹಲವಾರು ಘೋಷಣೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಟ್ರಂಪ್‌ಗೆ ಅದೇ ಘೋಷಣೆಗಳು ಇಂದು ಮುಳುವಾಗುತ್ತಿದೆ. ಅದರ ನಡುವೆ ಅಮೇರಿಕಾದ ಒಂದು ದೊಡ್ಡ ಸಮಸ್ಯೆಯಾಗಿರುವ, ಮೆಕ್ಸಿಕೋ ವಲಸಿಗರ ಸಮಸ್ಯೆ ಬಗೆಹರಿದೀತೇ ಎಂದು ಕೆಲವರು ಕಾಯುತ್ತಿದ್ದಾರೆ. ಮುಂದೆನಾಗುವುದೋ ಕಾದು ನೋಡಬೇಕು ಅಷ್ಟೇ..

Tags

Related Articles

Leave a Reply

Your email address will not be published. Required fields are marked *

Language
Close