About Us Advertise with us Be a Reporter E-Paper

ಅಂಕಣಗಳು

ಉಗಾಂಡ, ಅಧ್ಯಕ್ಷ ಮುಸೆವೆನಿ, ಅವರ ಟೋಪಿ ಇತ್ಯಾದಿ…

ಉಗಾಂಡ ರಾಜಧಾನಿ ಕಂಪಾಲದಲ್ಲಿ ‘ಭಾರತ- ಉಗಾಂಡ ಬಿಸಿನೆಸ್ ಫೋರಂ ಸಮಾವೇಶ’ದಲ್ಲಿ ಉಭಯ ನಾಯಕರು ಎರಡೂ ದೇಶಗಳ ಉದ್ದಿಮೆದಾರರನ್ನು ಉದ್ದೇಶಿಸಿ ಮಾತಾಡಿದರು. ಮೊದಲು ಉಗಾಂಡ ಅಧ್ಯಕ್ಷ ಯೊವೇರಿ ಕಗುಟಾ ಮುಸೆವೆನಿ ಮಾತಾಡಿದರು.  ಮಾತಿನಲ್ಲಿ ಕಾಟಾಚಾರಕ್ಕೂ ಭಾರತವನ್ನು ಹೊಗಳಲಿಲ್ಲ. ಅದರ ಬದಲು ತಮ್ಮ ಒಲವು ಚೀನಾ ಮೇಲಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದರು. ಎರಡು-ಮೂರು ಸಲ ಚೀನಾ ಪ್ರಸ್ತಾಪ ಮಾಡಿದರು. ಅವರು ತಮ್ಮ ಮಾತಿನಲ್ಲಿ, ಅದರಲ್ಲೂ ಮೋದಿ ಸಮ್ಮುಖದಲ್ಲಿ, ಆ ಮಾತುಗಳನ್ನಾಡುವ ಅಗತ್ಯವಿರಲಿಲ್ಲ.

ಅಷ್ಟೇ ಅಲ್ಲ, ಮೋದಿಯವರ ಕುರಿತು ಮುಸೆವೆನಿ ಹೇಳಿದ ಮತ್ತೊಂದು ಮಾತು ಸಹ ಆ ಸಂದರ್ಭಕ್ಕೆ ಸರಿ ಹೊಂದುವಂತಿರಲಿಲ್ಲ.

‘ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನನ್ನ ಭೇಟಿಯಾಗಲು ಅವಕಾಶ ಕೇಳಿದ್ದರು. ಆಗ ನಾನು  ಅರ್ಧಗಂಟೆ ಅಪಾಯಿಂಟ್‌ಮೆಂಟ್ ನೀಡಿದ್ದೆ. ಈಗ ಅವರು ದೊಡ್ಡ ವ್ಯಕ್ತಿಯಾಗಿದ್ದಾರೆ ಬಿಡಿ’ ಎಂದು ಮುಸೆವೆನಿ ಹೇಳಿದ್ದು ಒಳ್ಳೆಯ ಅಭಿರುಚಿಯಿಂದ ಕೂಡಿರಲಿಲ್ಲ ಎಂದೇ ಸಭೆಯ ನಂತರ ಸಭಿಕರು ಮಾತಾಡಿಕೊಂಡರು.

ಹಾಗಂತ ಅವರ ಮಾತಿನಲ್ಲಿ ನಂಜಿರಲಿಲ್ಲ, ಕೊಂಕಿರಲಿಲ್ಲ ಎಂಬ ಅಭಿಪ್ರಾಯಗಳೂ ಕೇಳಿಬಂದವು. ನಡೆದ ಘಟನೆಯನ್ನು, ಅನಿಸಿದ್ದನ್ನು ನೇರಾನೇರ ಹೇಳಿದ್ದಾರೆಂಬ ಅನಿಸಿಕೆಯೂ ಬಂತು. ಅವರ ಮನದ ಇಂಗಿತ ಒಳ್ಳೆಯದೇ ಇದ್ದಿರಬಹುದು, ಆದರೆ ಆ ಧಿಮಾಕಿನ ಮಾತು ಬೇಕಿರಲಿಲ್ಲ ಎಂಬುದಂತೂ ಸತ್ಯ. ಮುಸೆವೆನಿ ಸ್ವಭಾವ ಗೊತ್ತಿದ್ದವರು  ಭಾವಿಸಲಾರರು. ಕಾರಣ ಆ ಮನುಷ್ಯ ಸ್ವಲ್ಪ ಒರಟಾದರೂ, ನಿಷ್ಕಲ್ಮಶ ಮನಸ್ಸಿನವರು ಎಂಬುದು ಅವರ ಬಗ್ಗೆ ಇರುವ ಪ್ರತೀತಿ.

ಆದರೆ ಮೋದಿ ಆ ಎಲ್ಲ ಮಾತುಗಳನ್ನು ಸುಮ್ಮನೆ ಕೇಳಿ ಬರುವ ಜಾಯಮಾನದವರಲ್ಲವಲ್ಲ. ಚೀನಾದ ಶ್ರೇಷ್ಠತೆ ಬಗ್ಗೆ ಹೇಳಿದ್ದಕ್ಕೆ ಆ ದೇಶದ ಹೆಸರು ಹೇಳದೇ ತಿವಿದರು.

‘ನಮ್ಮ ದೇಶದಲ್ಲಿ ವಿದೇಶಗಳಿಂದ ಬಂದ ಬೀಸಣಿಕೆಗಳನ್ನು ಮಾರುತ್ತಾರೆ. ಅದರ ಬೆಲೆ ಒಂದೆರಡು ರುಪಾಯಿ ಅಷ್ಟೆ. ಎರಡು ಸಲ ಜೋರಾಗಿ ಬೀಸಿದರೆ ಕಿತ್ತು ಹೋಗುತ್ತದೆ. ಅದನ್ನುದುರಸ್ಥಿ  ಆಗುವುದಿಲ್ಲ. ಒಂದೋ ಬಿಸಾಡಬೇಕು, ಇಲ್ಲವೇ ಅಲ್ಲಿನವರನ್ನೇ ಕರೆಯಿಸಿ ದುರಸ್ಥಿ ಮಾಡಿಸಬೇಕು. ಬಿಸಾಡುವ ಬದಲು ಅಲ್ಲಿನವರನ್ನು ಕರೆಯಿಸಿದರೆ, ಅವರು ಏನು ಹೇಳ್ತಾರೆ ಗೊತ್ತಾ? ನಿಮಗೆ ಆ ಬೀಸಣಿಕೆಯನ್ನು ಬಳಸುವುದು ಹೇಗೆ ಎಂಬುದು ಗೊತ್ತಿಲ್ಲ. ಕೈಯಿಂದ ಬೀಸಣಿಕೆ ಬೀಸುವುದರ ಬದಲು, ಬೀಸಣಿಕೆಯನ್ನು ತಟಸ್ಥವಾಗಿ ಇಟ್ಟುಕೊಳ್ಳಿ, ಮುಖವನ್ನೇ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿಸಿ, ಆಗ ಬೀಸಣಿಕೆ ಹಲವಾರು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಅಂತಾರೆ. ಇಂಥ ಬೀಸಣಿಕೆ ತಯಾರಿಸುವುದರಲ್ಲಿ ಕೆಲವು ದೇಶಗಳು ಸಿದ್ಧಹಸ್ತರು. ಆದರೆ  ಈ ರೀತಿಯ ಬೀಸಣಿಕೆ ಬೇಕಿಲ್ಲ’ ಎಂದು ಮೋದಿಯವರು ಚೀನಾದ ಹೆಸರು ಹೇಳದೇ ಅತ್ಯಂತ ಮಾರ್ಮಿಕವಾಗಿ ಹೇಳಿದರು.

ಉಗಾಂಡ ಅಧ್ಯಕ್ಷರು ಟೈ ಸರಿಪಡಿಸಿಕೊಂಡರು.

ಮೋದಿಯವರು ಯಾರನ್ನು ಉದ್ದೇಶಿಸಿ ಆ ಮಾತನ್ನು, ಯಾರಿಗೆ ಹೇಳಿದರೆಂಬುದು ಸಭೆಯಲ್ಲಿದ್ದವರಿಗೆಲ್ಲ ಗೊತ್ತಾಯಿತು.

ರಾಷ್ಟ್ರಾಧ್ಯಕ್ಷನ ಗೆಟಪ್ಪು!

ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಉಗಾಂಡದ ರಾಜಧಾನಿ ಕಂಪಾಲಾಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷ ಮುಸೆವೆನಿ ಸ್ವತಃ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು. ಮೋದಿಯವರು ಮುಸೆವೆನಿಯವರನ್ನು ನೋಡಿದಾಗ  ಕಣ್ಣುಗಳಲ್ಲಿ ಅಚ್ಚರಿಯಿತ್ತು.

ಕಾರಣ ಮುಸೆವೆನಿ ವೇಷ-ಭೂಷಣವೇ ಹಾಗಿತ್ತು. ಅವರು ಎಲ್ಲ ದೇಶಗಳ ಅಧ್ಯಕ್ಷರಂತೆ ಠಾಕು-ಠೀಕಾಗಿದ್ದರು. ಆದರೆ ತಲೆಯ ಮೇಲೆ ಪನಾಮಾ ಅಥವಾ ಕೌಬಾಯ್ ಹ್ಯಾಟ್ ಇತ್ತು. ಅದು ಹಾರಿ ಹೋಗಬಾರದೆಂದು ಕೆನ್ನೆಯಿಂದ ಇಳಿಬಿಟ್ಟ ಗದ್ದದವರೆಗೆ ಚಾಚಿದ ಚರ್ಮದ ದಾರ ಕುತ್ತಿಗೆಯ ಬಳಿ ಜೋಲುತ್ತಿತ್ತು.

ಖಂಡಿತವಾಗಿಯೂ ಅದು ರಾಷ್ಟ್ರಾಧ್ಯಕ್ಷ ಧರಿಸುವಂಥ ಹ್ಯಾಟ್ ಆಗಿರಲಿಲ್ಲ. ಅದು ಸಂದರ್ಭವೂ ಆಗಿರಲಿಲ್ಲ. ಬಿಸಿಲಿನಿಂದ ರಕ್ಷಣೆ ಪಡೆಯಲು ಧರಿಸಿರಬಹುದು ಎಂದು ಅಂದುಕೊಳ್ಳೋಣ ಅಂದ್ರೆ ಆ ಪ್ರಮಾಣದ  ಇರಲಿಲ್ಲ. ವಿದೇಶಿ ಗಣ್ಯ ಅತಿಥಿಯನ್ನು, ಅದರಲ್ಲೂ ಭಾರತದಂಥ ದೇಶದ ಪ್ರಧಾನಿಯನ್ನು ಸ್ವಾಗತಿಸುವಾಗ ಪನಾಮಾ ಹ್ಯಾಟ್ ಧರಿಸುವುದು ರಾಷ್ಟ್ರಾಧ್ಯಕ್ಷನಿಗೆ ಶೋಭೆ ತರುವಂಥದ್ದಲ್ಲ ಎಂದು ಎಂಥವರಿಗಾದರೂ ಅನಿಸುತ್ತದೆ.

ಆದರೆ ಯಾರು ಏನೇ ಅಂದುಕೊಳ್ಳಲಿ, ಮುಸೆವೆನಿ ಇರುವುದೇ ಹಾಗೆ. ಅದೆಂಥ ಮಹತ್ವದ ಸಂದರ್ಭ, ಸನ್ನಿವೇಶವೇ ಇರಬಹುದು, ಅವರ ತಲೆ ಮೇಲೆ ಆ ಹ್ಯಾಟ್ ಇರಲೇಬೇಕು, ಗೋಟಿ ಇರುವ ಆ ಚರ್ಮದ ದಾರ ಕುತ್ತಿಗೆವರೆಗೆ ಜೋತಾಡುತ್ತಿರಬೇಕು. ಮೋದಿ ಯವರ ಜತೆ ಆರೇಳು ಕಾರ್ಯ ಕ್ರಮಗಳಲ್ಲಿ  ಜತೆಗಿದ್ದರು. ಆ ಎಲ್ಲ ಸಂದರ್ಭ ಗಳಲ್ಲೂ ಅವರು ಹ್ಯಾಟ್‌ಧಾರಿ ಆಗಿದ್ದರು.

‘ಆ ಗೆಟಪ್ಪಿನಲ್ಲಿ ನೀವು ಸುರಸುಂದರವಾಗಿ ಕಾಣುತ್ತೀರಿ’ ಎಂದು ಯಾರೋ ಅವರಿಗೆ ಹೇಳಿರಬೇಕು, ಮುಸೆವೆನಿ ಪನಾಮಾ ಹ್ಯಾಟ್‌ಗೆ ಅಮರಿ ಕೊಂಡುಬಿಟ್ಟಿದ್ದಾರೆ.

ಹೆಚ್ಚೆಂದರೆ ಆ ಹ್ಯಾಟ್‌ನ್ನು ವೈಲ್‌ಡ್ಲೈಫ್ ಸಫಾರಿಗೆ ಹೋಗುವಾಗ ಧರಿಸಬಹುದು. ಆದರೆ ಮುಸೆವೆನಿ ಮಾತ್ರ  ಎಲ್ಲ ಕಾರ್ಯಕ್ರಮಗಳಿಗೆ ಹೋಗುವಾಗಲೂ ಅದನ್ನು ಧರಿಸುತ್ತಾರೆ. ಅದು ಒಂದು ದೇಶದ ಅಧ್ಯಕ್ಷನ ತಲೆ ಮೇಲೆ ಇರುವ ಹ್ಯಾಟಂತೂ ಅಲ್ಲ. ಪಡಪೋಶಿ, ಪರಪುಟ್ಟಗಳು ಧರಿಸುವ  ಅದು.

ಹಾಗೇ ನೋಡಿದರೆ, ಅವರು ಹ್ಯಾಟ್ ಇಲ್ಲದೇ  ಸುಂದರವಾಗಿ ಕಾಣುತ್ತಾರೆ. ಉಗಾಂಡದಲ್ಲಿ ಬೋಡ ತಲೆ ಸಾಮಾನ್ಯ. ಬೋಡ ತಲೆಯಲ್ಲಿ ಮುಸೆವೆನಿ ಸಹಜವಾಗಿ, ಚೆನ್ನಾಗಿಯೇ ಕಾಣುತ್ತಾರೆ. ಆದರೆ ಟಕ್ಕಳು ತಲೆ ಮುಚ್ಚಿಕೊಳ್ಳಲು ಆ ಹ್ಯಾಟ್ ಧರಿಸುವುದಂತೂ ತೀರಾ ಕಳಪೆ, ಅಭಿರುಚಿಯೇ ಇಲ್ಲದ ಸ್ಟೈಲು.

ಆದರೆ ದೇಶದ ಅಧ್ಯಕ್ಷನಿಗೆ ಹೇಳೋರು ಯಾರು? ಅದರಲ್ಲೂ ‘ನೀವು ಈ ಹ್ಯಾಟ್‌ನಲ್ಲಿ ಸ್ವಲ್ಪವೂ ಚೆನ್ನಾಗಿ ಕಾಣೊಲ್ಲ’ ಎಂದು ಯಾರು ಹೇಳುತ್ತಾರೆ? ಅಧ್ಯಕ್ಷನ ಪತ್ನಿಯಾದರೂ ಹೇಳಬಹುದಿತ್ತು. ಯಾರಿಗೆ  ಅವಳ ಚಿತಾವಣೆಯಿಂದಲೇ ಅವರು ಪನಾಮಾಧಾರಿಯಾದರಾ? ಗೊತ್ತಿಲ್ಲ.

‘ನೀವು ಹಾಲಿವುಡ್ ಹೀರೋ ಥರಾ ಕಾಣುತ್ತೀರಿ’ ಎಂದು ಯಾರೋ ಮುಸೆವೆನಿ ಅವರಿಗೆ ಹವಾ ಹೊಡೆದಿರಬೇಕು. ಅಣ್ಣ, ಟೋಪಿಯನ್ನೇ ತೆಗೆಯುವುದಿಲ್ಲ.

ಇನ್ನು ಅದನ್ನು ತೆಗೆಸುವುದೂ ಕಷ್ಟವೇ. ಆದರೆ ಮೊದಲ ಸಲ ನೋಡುವವರಿಗೆ ಆ ರೂಪವನ್ನು ಅರಗಿಸಿಕೊಳ್ಳುವುದು ಕಷ್ಟವೇ.

ಯುವ ದೇಶ, ಆದರೆ…

ನಾನು ರವಾಂಡಕ್ಕೆ ಈ ಮೊದಲು ಹೋಗಿದ್ದೆ. ಆ ದೇಶದ ಕುರಿತು ‘ಗೊರಿಲ್ಲಾ ನಾಮಕರಣ ಪ್ರಸಂಗ ಹಾಗೂ ರವಾಂಡ ಪ್ರವಾಸದ ಕೆಲ  ಎಂಬ ಪುಸ್ತಕ ಸಹ ಬರೆದಿದ್ದೇನೆ. ರವಾಂಡದ ವಿದ್ಯಮಾನಗಳನ್ನು ಪ್ರತಿದಿನ ಗಮನಿಸುತ್ತೇನೆ. ಅಲ್ಲಿನ ಪತ್ರಿಕೆಗಳನ್ನು ನಿತ್ಯವೂ ಓದುತ್ತೇನೆ. ಆದರೆ ಉಗಾಂಡಕ್ಕೆ  ಹೋಗಿರಲಿಲ್ಲ. ‘ಘೆಜ್ಞಿಛಿಠಿ ಜ್ಞ್ಠಿಠಿಛಿ ಠಿ ಉ್ಞಠಿಛಿಚಿಚಿಛಿ’ ಎಂಬ ಪುಸ್ತಕವನ್ನು ಕಾಲೇಜಿನಲ್ಲಿ ಓದಿದ್ದೆ. ಒಂಬತ್ತನೇ ತರಗತಿಯಲ್ಲಿ ಓದುವಾಗ, ಉಗಾಂಡ ಅಧ್ಯಕ್ಷ ಇದಿ ಅಮಿನ್‌ನನ್ನು ಪದಚ್ಯುತಗೊಳಿಸಿದ ಸುದ್ದಿಯನ್ನು ನನ್ನ ಅಜ್ಜನಿಗೆ ಓದಿ ಹೇಳಿದ ನೆನಪು. ಆಗ ‘ಪ್ರಜಾವಾಣಿ’ಯಲ್ಲಿ (1979ರಲ್ಲಿ) ‘ಉಗಾಂಡದಲ್ಲಿ  ಕ್ಷಿಪ್ರಕ್ರಾಂತಿ: ಇದಿ ಅಮಿನ್ ಪದಚ್ಯುತಿ’ ಎಂಬ ಶಿರೋನಾಮೆಯಲ್ಲಿ ಆ ಸುದ್ದಿ

ಮೊನ್ನೆ ಉಗಾಂಡದ ಎಂಟೆಬ್ಬೆ ವಿಮಾನ ನಿಲ್ದಾಣದಲ್ಲಿ ಇಳಿದಾಗ ಇವೆಲ್ಲ ನೆನಪಾಯಿತು. ‘ನೈಂಟಿ ಮಿನಿಟ್‌ಸ್ ಅಟ್ ಎಂಟೆಬ್ಬೆ’ ಹೆಸರಿನ ಸಿನಿಮಾ ಕೂಡ ನೆನಪಾಯಿತು. ಇದು ವಿಮಾನ ಅಪಹರಣದ ಮೈನವಿರೇಳಿಸುವ ಕತೆ. ಇಸ್ರೇಲ್ ಬಗ್ಗೆ ಅಭಿಮಾನ ಮೂಡಿಸುವ ಪ್ರಸಂಗ. ಇಂದಿಗೂ ಎಂಟೆಬ್ಬೆ ಅಂದರೆ ನೆನಪಾಗುವುದು ಈ ಘಟನೆಯೇ. ಉಗಾಂಡದ ರಾಜಧಾನಿ ಕಂಪಾಲವಾದರೂ, ವಿಮಾನ ನಿಲ್ದಾಣ ಮಾತ್ರ ಎಂಟೆಬ್ಬೆಯೇ. ಕಂಪಾಲದಿಂದ ಸುಮಾರು ಒಂದೂಕಾಲು ಗಂಟೆ ರಸ್ತೆ ಪ್ರಯಾಣದಷ್ಟು ದೂರವಿದೆ. ಹತ್ತು ವರ್ಷಗಳ ಹಿಂದೆ  ಎಚ್‌ಎಎಲ್ ಏರ್‌ಪೋರ್ಟ್ ಹೇಗಿತ್ತೋ, ಎಂಟೆಬ್ಬೆ ಏರ್‌ಪೋರ್ಟ್ ಹಾಗಿದೆ.

ಎಲ್ಲ ವೈರುಧ್ಯಗಳ ನಡುವೆಯೂ ತಲೆಯೆತ್ತಿ ನಿಲ್ಲಲು, ಅಭಿವೃದ್ಧಿ ಹಪಾಹಪಿಗೆ  ಬಿದ್ದು ಮುಂದುವರಿಯಲು ಹೆಣಗುತ್ತಿರುವ ಉಗಾಂಡದ ಸಂಕಟಗಳನ್ನು ಅರ್ಥ ಮಾಡಿಕೊಳ್ಳಬಹುದು. ಕಣ್ಣುಗಳಿಗೆ ಕಪ್ಪುಬಟ್ಟೆ ಕಟ್ಟಿ ಉಗಾಂಡದಲ್ಲಿ ಬಿಟ್ಟರೆ, ಭಾರತದಲ್ಲಿದ್ದೇವೆಂದು ಹಲವರು ಹೇಳಬಹುದು. ಭಾರತವೇ ಮುಂದುವರಿದಿದೆಯೆಂದು ಜಂಭ ಕೊಚ್ಚಿಕೊಳ್ಳುವವರಿಗೆ ಈ ಸಂಗತಿ ಸಣ್ಣ ನಿರಾಸೆ, ಆತಂಕ ಮೂಡಿಸಬಹುದು.

ಉಗಾಂಡ ಜಗತ್ತಿನಲ್ಲಿಯೇ ಅತಿ ಯುವ ದೇಶ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಕಾರಣ ಅರ್ಧದಷ್ಟು ಜನಸಂಖ್ಯೆ  ವರ್ಷದವರಿಗಿಂತ ಕಿರಿಯರನ್ನು ಒಳಗೊಂಡಿದೆ. ಆ ದೇಶ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಇದೊಂದು ಸಂಗತಿ ಉತ್ತರವಾಗಬಲ್ಲುದು. ಅದರೆ ಇವರಷ್ಟು ಆಲಸಿಗಳು ಯಾರೂ ಇಲ್ಲವಂತೆ. ಹೀಗಾಗಿ ಆಲಸಿ ಯುವಕರೆಂದರೆ ಮುದುಕರಿಗೆ ಸಮಾನ. ಉಗಾಂಡದಿಂದ ಬರುವಾಗ ಹಲವು ಪ್ರಶ್ನೆಗಳನ್ನು ಹೊತ್ತು ಬಂದೆ, ಅವೆಲ್ಲ ಇನ್ನೂ ಕೊರೆಯುತ್ತಲೇ ಇವೆ.

ವಿಲಕ್ಷಣ, ವಿಚಿತ್ರ ಆದರೆ ವಿವೇಕಶಾಲಿ

ಉಗಾಂಡ ಅಧ್ಯಕ್ಷ ಯೊವೇರಿ ಮುಸೆವೆನಿ ತನ್ನ ಪೋಷಾಕಿನಿಂದ ನೋಡಲು ಒಂಥರಾ ಯಬಡೇಶಿ ಥರಾ ಇದ್ದಿರಬಹುದು. ಆದರೆ ಅವರು ಆಫ್ರಿಕಾ  ಅತ್ಯಂತ ಧೀಮಂತ, ದಿಟ್ಟ ಹಾಗೂ ದೀರ್ಘಕಾಲಿನ ಆಡಳಿತಗಾರ. 1986ರಿಂದ ಅಂದರೆ ಕಳೆದ ಮೂವತ್ತೆರಡು ವರ್ಷಗಳಿಂದ ಅವರು ಉಗಾಂಡ ಅಧ್ಯಕ್ಷರಾಗಿದ್ದಾರೆ. ಆರನೇ ಅವಧಿಗೆ ಸ್ಪರ್ಧಿಸಿದರೂ ಅವರೇ ಅಧ್ಯಕ್ಷರಾಗಿ ಪುನರಾಯ್ಕೆ ಆಗುವುದು ನಿಶ್ಚಿತ. ಪೂರ್ವ ಹಾಗೂ ಕೇಂದ್ರೀಯ ಆಫ್ರಿಕಾದಲ್ಲಿ ಮುಸೆವೆನಿಯಷ್ಟು  ಪ್ರಭಾವಿ ಮುತ್ಸದ್ದಿ  ಮತ್ತೊಬ್ಬರಿಲ್ಲ.

1970ರಿಂದ 1980ರವರೆಗೆ ನಡೆದ ಜನಾಂಗೀಯ ಕಲಹ ಹಾಗೂ ಆಂತರಿಕ ಕ್ಷೋಭೆ ನಂತರ, ಉಗಾಂಡದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ಹಾಗೂ ಸ್ಥಿರ ಆಡಳಿತ ನೀಡಿದ ಶ್ರೇಯಸ್ಸು ಮುಸೆವೆನಿಗೆ  1985ರಲ್ಲಿ ಅಧ್ಯಕ್ಷ ಮಿಲ್ಟನ್ ಒಬೋಟೆಯನ್ನು ಕ್ಷಿಪ್ರ ಕ್ರಾಂತಿಯಲ್ಲಿ ಪದಚ್ಯುತಗೊಳಿಸಿದ ಮುಸೆವೆನಿ, ಆನಂತರ ಉಗಾಂಡದಲ್ಲಿ ಒಂದು ಜನಪ್ರಿಯ ಆಡಳಿತ ನೆಲೆಯೂರುವಂತೆ ಮಾಡುವಲ್ಲಿ ಯಶಸ್ವಿಯಾದರು.

1979ರಲ್ಲಿ ಉಗಾಂಡದ ಸರ್ವಾಧಿಕಾರಿ ಇದಿ ಅಮಿನ್ ಅವರ ವಿರುದ್ಧ ಬಂಡುಕೋರರನ್ನು ಎತ್ತಿಕಟ್ಟಿ, ಪದಚ್ಯುತಗೊಳಿಸುವಲ್ಲಿ ಮುಸೆವೆನಿ ಪಾತ್ರ ಮಹತ್ವದ್ದಾಗಿತ್ತು. ಮುಸೆವೆನಿಯ ತಂತ್ರಗಾರಿಕೆಯೇನಾದರೂ ಇದಿ ಅಮಿನ್‌ಗೆ ಮೊದಲೇ ಗೊತ್ತಾಗಿದ್ದಿದ್ದರೆ, ಅವರನ್ನು ಜೀವ ಸಹಿತ ಬಿಡುತ್ತಿರಲಿಲ್ಲ.

ಉಗಾಂಡದಂಥ ದೇಶವನ್ನು ಮೂವತ್ತೆರಡು ವರ್ಷಗಳ ಕಾಲ ಆಳುವುದು ಸಣ್ಣ ಮಾತಲ್ಲ. ಇದಿ ಅಮಿನ್‌ನಂಥ  ಮುಖ್ಯಸ್ಥ ಹಾಗೂ ಸರ್ವಾಧಿಕಾರಿಗೆ ಎಂಟು ವರ್ಷಕ್ಕಿಂತ ಹೆಚ್ಚು ವರ್ಷ ಅಧಿಕಾರದಲ್ಲಿ ಇರಲು ಆಗಲಿಲ್ಲ. ಆತ ತನ್ನ ವಿರೋಧಿಗಳನ್ನು ನಿರ್ದಾಕ್ಷಿಣ್ಯವಾಗಿ ಸಾಯಿಸಿದ. ಆತನ ಅಧಿಕಾರ ಅವಧಿಯಲ್ಲಿ ಏನಿಲ್ಲವೆಂದರೂ ಮೂರು ಲಕ್ಷ ಮಂದಿ ಕೊಲೆಗೀಡಾದರು. ಅರಾಜಕತೆ ತುಂಬಿ ತುಳುಕಾಡುತ್ತಿದ್ದ ಉಗಾಂಡದಲ್ಲಿ ಶಾಂತಿ ನೆಲೆಸುವಂತೆ ಮಾಡಿ, ಆ ದೇಶವನ್ನು ಅಭಿವೃದ್ಧಿ ಪಥದ ಮೇಲೆ ಹಾಕಿದ ಅಗ್ಗಳಿಕೆ ಮುಸೆವೆನಿಯದು.

ನೋಡಲು ವಿಚಿತ್ರವೆನಿಸಬಹುದು, ಮುಸೆವೆನಿ ಜಿಜ್ಝ ಛ್ಠ್ಚಿಠಿಛಿ. ಕಾನೂನು, ಸಾಹಿತ್ಯ ಹಾಗೂ ಧರ್ಮಶಾಸ್ತ್ರದಲ್ಲಿ ಮೂರು ಡಾಕ್ಟರೇಟ್  ಸಂಪಾದಿಸಿದವರು ಹಾಗೂ ಆಫ್ರಿಕಾದ ರಾಜಕಾರಣಿಗಳಲ್ಲೇ ಅತಿ ಹೆಚ್ಚು ಓದಿದ ಅಧ್ಯಕ್ಷ ಎಂಬ ಕೀರ್ತಿಗೆ ಭಾಜನರಾದವರು. ಇವರ ಒಬ್ಬನೇ ಮಗ ಉಗಾಂಡದ ಸೇನೆಯಲ್ಲಿ ಕಮಾಂಡರ್.

ಮುಸೆವೆನಿಗೆ ಸಲಿಂಗಕಾಮಿಗಳನ್ನು ಕಂಡರೆ ಆಗದು. ಸಲಿಂಗಕಾಮ ಹುಟ್ಟಿನಿಂದ ಬರುವಂಥದ್ದೋ, ನೋಡಿ ಕಲಿಯುವಂಥದ್ದೋ ಎಂಬುದನ್ನು ಅಧ್ಯಯನ ಮಾಡಲು ಅವರು ವಿಜ್ಞಾನಿಗಳ ಸಮಿತಿ ರಚಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಸಲಿಂಗಕಾಮದಲ್ಲಿ ನಿರತರಾದವರಿಗೆ ಜೀವವಿಡೀ ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಿದ್ದರು. ಸಲಿಂಗಕಾಮ ಅಸಹ್ಯದ ಪರಾಕಾಷ್ಠೆ ಎಂದು ಹೇಳಿ ಜಾಗತಿಕ ಸಲಿಂಗಕಾಮಿಗಳ  ಗುರಿಯಾಗಿದ್ದರು.

‘ಮೂವತ್ತೆರಡು ವರ್ಷಗಳಿಂದ ಅಧಿಕಾರದಲ್ಲಿರಬಹುದು, ಆದರೆ ಇಡೀ ಆಫ್ರಿಕಾ ಖಂಡದಲ್ಲಿಯೇ ನನ್ನಷ್ಟು ಕಡಿಮೆ ವೇತನಕ್ಕೆ ದುಡಿಯುತ್ತಿರುವ ಅಧ್ಯಕ್ಷ ಮತ್ತೊಬ್ಬರಿಲ್ಲ’ ಎಂಬ ಮುಸೆವೆನಿ ಹೇಳಿಕೆ (ಹಿಂದಿನ ವರ್ಷ) ಭಾರೀ ಚರ್ಚೆಗೆ ಗುರಿಯಾಗಿತ್ತು. ಮುಸೆವೆನಿ ಅಧಿಕಾರಕ್ಕೇರಿದ ಆರಂಭದಲ್ಲಿ ಉಗಾಂಡ ಮಾರಕ ಏಡ್‌ಸ್ ರೋಗದ ಕೂಪವಾಗಿತ್ತು. ಇದನ್ನು ನಿಯಂತ್ರಿಸಲು ಅವರು ಹಮ್ಮಿಕೊಂಡ ದೇಶವ್ಯಾಪಿ ಅಭಿಯಾನ ಐದು ವರ್ಷಗಳಲ್ಲಿ ಫಲಕೊಟ್ಟಿತು. ಅವರು ಆರಂಭಿಸಿದ ಅಆಇ ಯೋಜನೆ (ಅಚಿಠಿಜ್ಞಿ, ಆಛಿ ಊಜಿಠ್ಛ್ಠ್ಝಿ ಟ್ಟ ಖಿಛಿ ಇಟ್ಞಟಞ)ಯಿಂದ  ಆ ಮಾರಕ ರೋಗ ನಿಯಂತ್ರಿಸಲು ಯಶಸ್ವಿಯಾಯಿತು.

ಇಂದಿಗೂ ಅತಿ ಸೋವಿ ಬೆಲೆಯ ಚೀಪ್ ಫೋನುಗಳನ್ನು ಬಳಸುವ ಮುಸೆವೆನಿಗೆ ‘ಅಧ್ಯಕ್ಷರಾದವರು ಅಂಥ ಮೊಬೈಲ್ ಬಳಸಬಾರದು, ಸುರಕ್ಷಿತವಲ್ಲ. ನೀವು ಬ್ಲ್ಯಾಕ್‌ಬೆರ್ರಿ ಅಥವಾ ಐಫೋನ್ ಬಳಸಬೇಕು’ ಎಂದು ಯಾರೋ ಸಲಹೆ ಮಾಡಿದರು. ಅಂಥ ಸಲಹೆಗಳಿಗೆ ಅವರು ಸೊಪ್ಪು ಹಾಕಲಿಲ್ಲ. ಎಫ್‌ಎಂ ರೇಡಿಯೋ ಹಾಗೂ ಟಾರ್ಚ್ ಇರುವ ಅತಿ ಕಡಿಮೆ ದರದ ಬೆಲೆ ಫೋನ್ ಕೊಡಿ ಎಂದು ಆದೇಶಿಸಿದರು.

ಇಂದಿಗೂ ಅವರು ಜನಸಾಮಾನ್ಯರು ಬಳಸುವ,  ಬೆಲೆಯ, ಟಾರ್ಚ್ ಸೌಲಭ್ಯ ಇರುವ ಕಳಪೆ ಗುಣಮಟ್ಟದ ಮೊಬೈಲ್ ಫೋನನ್ನೇ ಬಳಸುತ್ತಾರೆ.

ನೋಡಲು ಒಂದೇ, ಆದರೆ ಭಿನ್ನ

ಆಫ್ರಿಕಾ ಖಂಡದಲ್ಲಿ 54 ದೇಶಗಳಿವೆ. ಆದರೆ ಒಂದು ದೇಶದಂತೆ ಮತ್ತೊಂದಿಲ್ಲ. ಪ್ರತಿ ದೇಶವೂ ವಿಭಿನ್ನ. ಭಾಷೆ, ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ.. ಎಲ್ಲವೂ ಭಿನ್ನ ಭಿನ್ನ. ರವಾಂಡಕ್ಕೆ ತಾಕಿಕೊಂಡೇ ಉಗಾಂಡವಿದೆ. ರವಾಂಡ ರಾಜಧಾನಿ ಕಿಗಾಲಿಯಿಂದ ಉಗಾಂಡ ರಾಜಧಾನಿ ಕಂಪಾಲ ವಿಮಾನ ಪ್ರಯಾಣದಲ್ಲಿ ನಲವತ್ತು ನಿಮಿಷಗಳಷ್ಟು ಹತ್ತಿರ ಅಥವಾ ದೂರದಲ್ಲಿದೆ. ಆದರೆ  ಡಿಫರೆನ್‌ಸ್ ಒಂದು ಗಂಟೆ.

 ಆಫ್ರಿಕಾದ ಪ್ರತಿ ದೇಶವೂ ಬೇರೆ ಬೇರೆಯಾದರೂ, ಅಲ್ಲಿನ ಜನ ಮಾತ್ರ ನೋಡಲು ಒಂದೇ ಥರಾ ಕಾಣುತ್ತಾರೆ. ಆದರೆ ಅವರಲ್ಲೂ ಬಹಳ ವ್ಯತ್ಯಾಸವಿದೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ. ಅವರು ಪತ್ತೆ ಹಚ್ಚುತ್ತಾರೆ. ನಮ್ಮಲ್ಲಿ ಉತ್ತರಪ್ರದೇಶವರಿಗೂ, ಬಿಹಾರಿಗಳಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಕನ್ನಡದವರಿಗೂ, ತೆಲುಗರಿಗೂ ತುಂಬಾ ಹೋಲಿಕೆ. ಆದರೆ ಭಾಷೆ, ಉಚ್ಚಾರಣೆಗಳಿಂದ ಅವರು ಯಾರು ಎಂಬುದು ಗೊತ್ತಾಗುತ್ತದೆ.

ಅದೇ ರೀತಿ ಆಫ್ರಿಕನ್‌ರು ಸಹ ಬೇರೆ ದೇಶದವರನ್ನು ಹಾಗೂ ಉಚ್ಚಾರದಿಂದಲೇ ಪ್ರತ್ಯೇಕಿಸುತ್ತಾರೆ.

ಮಲಾವಿಯ ಭಾಷೆಗೂ, ಸುಡಾನ್ ಭಾಷೆಗೂ ಸಂಬಂಧವೇ ಇಲ್ಲ. ಒಂದೊಂದು ದೇಶದಲ್ಲಿ 10-15 ಅಧಿಕೃತ ಭಾಷೆಗಳಿವೆ. ಕತ್ತಲಖಂಡ ಆಫ್ರಿಕಾದಲ್ಲಿ ಬೆಳಕಿನ ಕಿಂಡಿಗಳಿಂದ ಕಿರಣಗಳು ತೂರಿ ಬರುತ್ತಿವೆ. ಬದಲಾವಣೆ ಗಾಳಿ ಬೀಸುತ್ತಿದೆ. ಆದರೆ ಬಡತನ ಮಾತ್ರ ಕಿತ್ತು ತಿನ್ನುತ್ತಿದೆ.

ಕೋಡುಗಳೇ ಕಿರೀಟ!

ರವಾಂಡ ಹಾಗೂ ಉಗಾಂಡದಲ್ಲಿ ‘ಇನ್ಯಾಂಕೋರೆ’ ಅಥವಾ ‘ಅಂಕೋಲೆ’ ಎಂದು ಕರೆಯುವ ದನದ ತಳಿಯಿದೆ. ಆ ದನಗಳನ್ನು ನೋಡುವುದೇ ಕಣ್ಣಿಗೆ ಆನಂದ. ಹಸು ಹಾಗೂ ಎತ್ತುಗಳಿಗೆ  ಕೋಡುಗಳೇ ಲಕ್ಷಣ. ಈ ದನಗಳಿಗೆ ಅವುಗಳ ಕೋಡುಗಳೇ ಕಿರೀಟ! ಒಂದೊಂದು ಕೋಡು ಮೀಟರ್‌ಗಟ್ಟಲೇ ಉದ್ದ.

ಯಾರಿಗಾದರೂ ತಿವಿದರೆ ಕತೆ ಮುಗಿಯಿತು. ಈ ಕೋಡುಗಳೇ ಅವುಗಳಿಗೆ ಶತ್ರು. ತಲೆ ಮೇಲೆ ಸದಾ ಪಗಡೆ ಕಟ್ಟಿಕೊಂಡವರಂತೆ ಓಡಾಡಬೇಕು. ಆತ್ಮರಕ್ಷಣೆಗೆ  ಸಹಾಯವಾಗುವ ಕೋಡುಗಳನ್ನು ಜೋಪಾನವಾಗಿ ಕಾದುಕೊಳ್ಳದಿದ್ದರೆ ಮುರಿದುಹೋಗುವ ಅಪಾಯವೂ ಇರುತ್ತದೆ. ಒಂದು ಕಡೆ ಕೋಡು ಮುರಿದರೆ ಅದು ಅವಲಕ್ಷಣ. ಆದರೆ ಈ ದನಗಳು ಹಿಂಡಿನಲ್ಲಿ ಬರುತ್ತಿದ್ದರೆ ದಸರಾ ಮೆರವಣಿಗೆಯನ್ನು ನೆನಪಿಸುತ್ತದೆ. ಈ ತಳಿಯ  ದನಕ್ಕೆ ಏನಿಲ್ಲವೆಂದರೂ ಐವತ್ತು ಸಾವಿರ ರೂಪಾಯಿ ಬೆಲೆ. ಕರು ಹಾಕಿದ ಐದು ವರ್ಷಕ್ಕೆ ಕೋಡು ಬಲಿತು ತಾಯಿ ಹಸುವನ್ನು ಮೀರಿಸುತ್ತದೆ. ಕೋಡನ್ನು ನೋಡಿಯೇ ವಯಸ್ಸನ್ನು ನಿರ್ಧರಿಸಬಹುದು.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close