ಮುಖ್ಯಮಂತ್ರಿಗಳೇ, ಉಗ್ರಪ್ಪನ ದೌರ್ಜನ್ಯಕ್ಕೆ ತಡೆಹಾಕಿ!

Posted In : ಅಂಕಣಗಳು, ಪ್ರಥಮ ಪೂಜೆ

ಹೋದಲ್ಲೆಲ್ಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದು, ಏಕವಚನದಲ್ಲಿ ವಾಚಾಮಗೋಚರವಾಗಿ ಅಧಿಕಾರಿಗಳನ್ನು ಬಯ್ಯುವುದು, ಲೈಂಗಿಕ ಕಿರುಕುಳವಾದ ಶಾಲೆಗೆ ಭೇಟಿ ನೀಡಿದರೆ ಪ್ರಾಂಶುಪಾಲರನ್ನು ಹಿಗ್ಗಾಮುಗ್ಗಾ ಟೀಕಿಸುವುದು, ಹೀಗೇ ಮಾಡಬೇಕು ಎಂದು ನಿರ್ದೇಶನ ನೀಡುವುದು, ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಯಾಕೆ ಆ ಪ್ರಕರಣದಲ್ಲಿ ತನಿಖೆ ಮುಂದುವರಿಸಿಲ್ಲ? ಹೀಗ್ಯಾಕೆ ಮಾಡುತ್ತೀರಿ? ಬೇಗ ಮುಗಿಸುವುದಕ್ಕೇನು? ಎಂದು ಪ್ರಶ್ನಿಸುವುದು ಮತ್ತು ನಿರ್ದೇಶನ ನೀಡುವುದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಕರೆಯುವುದು, ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳುವುದು. ಇವು ನಮ್ಮ ರಾಜ್ಯ ಸರಕಾರವೇ ಸೃಷ್ಟಿಸಿದ ‘ಉಗ್ರ’ವಾದ!

ನಮ್ಮ ಸರಕಾರ ರಚಿಸಿರುವ ದೌರ್ಜನ್ಯ ಸಮಿತಿಯ, ಅಲ್ಲಲ್ಲ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರ ಬೈಗುಳದ ಧಾಟಿಗೆ ಮಂಗಳೂರಿನಲ್ಲಿ ಒಬ್ಬ ಅಧಿಕಾರಿ ಸಭೆಯಲ್ಲೇ ತಲೆತಿರುಗಿ ಬಿದ್ದಿದ್ದರು. ಉಡುಪಿಯಲ್ಲಿ ಇವರು ಸಭೆ ನಡೆಸಿದಾಗ ಖಾರವಾದ ಪ್ರಶ್ನೆ ಕೇಳಿದರೆಂಬ ಕಾರಣಕ್ಕೆ ಇಬ್ಬರನ್ನು ಬಂಧಿಸುವಂತೆ ಎಸ್ಪಿಗೆ ದರ್ಪದ ಆದೇಶ ನೀಡಿದ್ದರು. ಆದರೆ ಪೊಲೀಸರು ಅವರನ್ನು ಬಂಧಿಸದೇ ಸಭೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಆಗಲೇ ದೌರ್ಜನ್ಯದ ಮುನ್ಸೂಚನೆ ಸಿಕ್ಕಿತ್ತು. ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ನಮ್ಮ ರಾಜ್ಯ ಸರಕಾರ ಅಷ್ಟೆಲ್ಲ ಬೇಗ ಎಚ್ಚರಗೊಳ್ಳುವ ಜಾಯಮಾನದ್ದಲ್ಲ ಎಂಬುದು ನಿಮಗೆ ಗೊತ್ತೇ ಇದೆ.

ಈಗ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ಸನ್ಮಾನ್ಯ ವಿ.ಎಸ್. ಉಗ್ರಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಮೊನ್ನೆ ಯಾರೋ ಬಂದು ಅವರಿಗೆ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ದೂರು ನೀಡಿದರಂತೆ. ಅದಕ್ಕಾಗಿ ಅವರು ವಿಶೇಷ ಕಾಳಜಿ ವಹಿಸಿ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಪ್ರಕರಣದ ತನಿಖೆ ಯಾಕೆ ವಿಳಂಬವಾಗುತ್ತಿದೆ ಎಂದು ವಿಚಾರಿಸಿದ್ದಾರೆ (ಆದರೆ ದೂರು ನೀಡಿದವರೇ ಪೊಲೀಸರ ನೋಟಿಸ್‌ಗೆ ಉತ್ತರಿಸದೆ ಧಾರಾವಾಹಿ ಗಳಲ್ಲಿ ಬ್ಯೂಸಿಯಾಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ).

ಅಷ್ಟಕ್ಕೇ ಸುಮ್ಮನಾಗದ ಅವರು ‘ಸ್ವಾಮೀಜಿಯಂತಹ ಸ್ಥಾನದಲ್ಲಿ ಕುಳಿತು ತಪ್ಪು ಮಾಡಬಾರದು’ ಎಂಬರ್ಥದ ಹೇಳಿಕೆ ನೀಡಿದ್ದರು. ಮೊದಲನೆಯದಾಗಿ ಒಬ್ಬರು ತಪ್ಪು ಮಾಡಿದ್ದಾರೊ ಇಲ್ಲವೊ ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ಅದನ್ನು ನ್ಯಾಯಾಲಯ ನಿರ್ಧರಿಸಬೇಕು (ಕೆಳಹಂತದ ನ್ಯಾಯಾಲಯ ಈಗಾಗಲೇ ರಾಘವೇಶ್ವರ ಶ್ರೀ ಅವರನ್ನು ಆರೋಪ ಮುಕ್ತಗೊಳಿಸಿದೆ ಎಂಬುದು ಅವರಿಗೆ ಗೊತ್ತಿಲ್ಲವೇನೊ). ನ್ಯಾಯಾಲಯ ತೀರ್ಮಾನಿಸದೇ ಒಬ್ಬರನ್ನು ಅಪರಾಧಿ ಎಂದು ಪರಿಗಣಿಸುವಂತಿಲ್ಲ. ಆರೋಪ ಸಾಬೀತಾಗು ವವರೆಗೂ ಆತನನ್ನು ಅಮಾಯಕ ಅಥವಾ ನಿರಪರಾಧಿ ಎಂದೇ ಪರಿಗಣಿಸಬೇಕು ಎಂಬುದು ನ್ಯಾಯವಾದಿ ಎಂದು ಹೇಳಿ ಕೊಳ್ಳುವ, ಕಾನೂನು ಓದಿರುವ ಉಗ್ರಪ್ಪ ಅವರಿಗೆ ಗೊತ್ತಿಲ್ಲ ಎಂದರೆ ನಗುಬರುತ್ತದೆ. ಅದರರ್ಥ ಅವರು ಸ್ವಾಮೀಜಿ ತಪ್ಪು ಮಾಡಿದ್ದಾರೆ ಎಂದು ಉದ್ದೇಶಪೂರ್ವಕವಾಗಿಯೇ ಹೇಳಿದ್ದಾರೆಂದು ಸ್ಪಷ್ಟ.

ಈ ಬಗ್ಗೆ ಫೇಸ್‌ಬುಕ್‌ಗಳಲ್ಲಿ ಚರ್ಚೆಯಾಯಿತು. ಸಾಕಷ್ಟು ಗ್ರೂಪ್‌ಗಳಿವೆ. ಅಲ್ಲೆಲ್ಲ ಪರಸ್ಪರ ಕಾಮೆಂಟ್, ಜಗಳಗಳಾದವು. ಅದ್ಯಾರೋ ಹಾಕಿದ ಕಾಮೆಂಟ್‌ಗಳನ್ನು ನೋಡಿದ ಜನವ್ಯಾಧಿಯ ವಿಮಲೆ, ಅದನ್ನು ಉಗ್ರಪ್ಪ ಗಮನಕ್ಕೆ ತಂದಿದ್ದಾಳೆ. ವಿಮಲೆಯ ಪ್ರಚೋದನೆಯಿಂದ ಇನ್ನಷ್ಟು ಉಗ್ರರಾದ ಅವರು ಫೇಸ್‌ಬುಕ್ ಕಾಮೆಂಟ್‌ಗಳನ್ನೇ ಆಧಾರವಾಗಿಟ್ಟುಕೊಂಡು, ‘ರಾಮಚಂದ್ರಾಪುರದ ಮಠದ ಭಕ್ತರು ನನಗೆ ಜೀವಬೆದರಿಕೆ ಹಾಕಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಏನು ಆದರೂ ರಾಮಚಂದ್ರಾಪುರ ಮಠದವರೇ ಹೊಣೆ’ ಎಂದು ಹೇಳಿದರು. ಅದರ ನಂತರ 10 ಜನರ ವಿರುದ್ಧ ಪೊಲೀಸರಿಗೆ ದೂರನ್ನೂ ನೀಡಿದರು. ಉಗ್ರಪ್ರತಾಪ ಗೊತ್ತಿರುವುದರಿಂದ ಪೊಲೀಸರು ಅತ್ಯಂತ ಚುರುಕಾಗಿ ಕೆಲಸ ಮಾಡಿ, ಶಿವಮೊಗ್ಗ ಹಾಗೂ ದಾವಣಗೆರೆಯಿಂದ ಇಬ್ಬರನ್ನು ಬಂಧಿಸಿ ಕರೆತಂದಿದ್ದಾರೆ. ಅವರ ವಿರುದ್ಧ ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಬಹುದಾದ ಐಪಿಸಿ ಕಲಂ 506ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪರಿ ಉಗ್ರಪ್ರತಾಪ ಮೆರೆದ ಪೊಲೀಸರಿಗೆ ಮಠದವತಿಯಿಂದ ಉಗ್ರಪ್ಪ ಹಾಗೂ ಅವರ ಕೆಲವು ಬೆಂಬಲಿಗರ ವಿರುದ್ಧ ಮಠದವರು ನೀಡಿದ ದೂರು ದಾಖಲಿಸುವ ತಾಕತ್ತೂ ಇರಲಿಲ್ಲ. ಅವರ ಶ್ರಮವೆಲ್ಲ ಉಗ್ರಪ್ಪ ದೂರಿನ ಕೆಲಸಕ್ಕೆ ಬತ್ತಿಹೋದಂತಿದೆ. ಮಠದವರು ನೀಡಿದ ದೂರಿಗೂ ಆಧಾರ ಫೇಸ್ ಬುಕ್ ಕಾಮೆಂಟ್‌ಗಳೇ ಆಗಿದ್ದವು.

ಉಗ್ರಪ್ಪ ಕೊಟ್ಟ ದೂರಿನ ಆರೋಪಿಗಳನ್ನು ಬಂಧಿಸುವುದಾದರೆ, ಇನ್ನೊಂದು ದೂರಿನಲ್ಲಿರುವ ಆರೋಪಿಗಳನ್ನೂ ಬಂಧಿಸಬೇಕಲ್ಲವೇ? ಒಬ್ಬೊಬ್ಬರಿಗೆ ಒಂದೊಂದು ಕಾನೂನೇ? ಆದರೆ ನಾವ್ಯಾರೂ ಗಮನಿಸದ ಸಂಗತಿಯೆಂದರೆ ರಾಜ್ಯಾದ್ಯಂತ ಇಷ್ಟೆಲ್ಲ ದೌರ್ಜನ್ಯ ಎಸಗುತ್ತಿರುವ, ಸುದ್ದಿ ಮಾಡುತ್ತಿರುವ ಈ ದೌರ್ಜನ್ಯ ತಡೆ ಸಮಿತಿಗೆ ಇದನ್ನೆಲ್ಲ ಮಾಡುವ ಅಧಿಕಾರವೇ ಇಲ್ಲ! ಸರಿಯಾಗಿ ಗಮನಿಸಿದರೆ ಈ ಸಮಿತಿ ಸ್ಥಾಪನೆಯಾದ ಉದ್ದೇಶವೇ ಬೇರೆ. ಈಗ ಆಗುತ್ತಿರುವುದೇ ಬೇರೆ. ಸಮಿತಿ ಅಧ್ಯಕ್ಷರಿಗೆ ಅದರ ಧ್ಯೇಯೋದ್ದೇಶದ ಬಗ್ಗೆ ಹೆಚ್ಚು ಆಸಕ್ತಿ, ಗಮನ ಇದ್ದಂತಿಲ್ಲ.

ಬೆಂಗಳೂರು ನಗರದ ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನಡೆದ ಒಂದಷ್ಟು ಪ್ರಕರಣಗಳು ಕಡಿಮೆ ಅವಧಿಯಲ್ಲಿ ನಡೆದಿದ್ದು ನಿಮಗೆ ನೆನಪಿರಬಹುದು. ಆ ಸಂದರ್ಭದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆಯಾಯಿತು. ಆಗ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಸದನದಲ್ಲಿ ಉತ್ತರಿಸುವಾಗ ‘ಈ ಬಗ್ಗೆ ಸಮಿತಿಯೊಂದನ್ನು ರಚಿಸಿ, ಕಾನೂನು ಬಲಪಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದಿದ್ದರು. ಅದರಂತೆ 12 ಮಂದಿ ವಿಧಾನಪರಿಷತ್ ಹಾಗೂ ವಿಧಾಸನಭೆ ಸದಸ್ಯರನ್ನು ಹಾಗೂ ಎನ್‌ಜಿಒಗಳ ಸದಸ್ಯರು, ಅಧಿಕಾರಿಗಳನ್ನು ಒಳಗೊಂಡ ಒಟ್ಟು 29 ಸದಸ್ಯರ ದೌರ್ಜನ್ಯ ತಡೆ ಸಮಿತಿ ಅಸ್ತಿತ್ವಕ್ಕೆ ಬಂತು. ಅದಕ್ಕೆ ಮೊದಲು ಅಧ್ಯಕ್ಷರಾಗಿದ್ದು ಹಿರಿಯ ಮುತ್ಸದ್ದಿ ಎಂ.ಸಿ. ನಾಣಯ್ಯ ಅವರು. ಈ ಸಮಿತಿಗೆ ಆರಂಭದಲ್ಲಿ ಕೇವಲ ಮೂರು ತಿಂಗಳ ಅವಕಾಶ ನೀಡಲಾಗಿತ್ತು. ನಾಣಯ್ಯ ಅವರೇ ಈ ಹಿಂದೆ ಸಾರ್ವಜನಿಕವಾಗಿ ಹೇಳಿರುವ ಪ್ರಕಾರ ‘ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯ ತಡೆಯಲು ಕಾನೂನಿಗೆ ಯಾವ ರೀತಿಯ ತಿದ್ದುಪಡಿ ಮಾಡಬಹುದು? ಅದು ಪರಿಣಾಮಕಾರಿ ಯಾಗುವುದೇ? ಈಗಿರುವ ಕಾನೂನುಗಳಲ್ಲಿ ಏನೇನು ಮಾರ್ಪಾಡು ಮಾಡಬಹುದು’ ಎಂಬ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡುವುದು ಸಮಿತಿಯ ಕೆಲಸವಾಗಿತ್ತು.

ಮೂರು ತಿಂಗಳಲ್ಲಿ ವರದಿ ನೀಡಲು ಸಾಧ್ಯವಾಗದಿದ್ದಾಗ ಸರಕಾರ ಸಮಿತಿಯ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿತ್ತು. ಅಷ್ಟರೊಳಗೆ ಸರಕಾರಕ್ಕೆ ವರದಿ ನೀಡಲು ಎಲ್ಲ ಸಿದ್ಧತೆ ನಡೆದಿತ್ತು. ಬಹುಶಃ ಎಂ.ಸಿ. ನಾಣಯ್ಯ ಅವರು ಅದರ ಅಧ್ಯಕ್ಷರಾಗಿ ಮುಂದುವರಿದಿದ್ದರೆ 2016ರ ಮೇ ತಿಂಗಳ ಹೊತ್ತಿಗೆ ಅಂತಿಮ ವರದಿ ಸಲ್ಲಿಕೆಯಾಗಿ, ಸಮಿತಿ ಬರ್ಖಾಸ್ತುಗೊಂಡಿರುತ್ತಿತ್ತು. ಆದರೆ ಎಚ್.ಡಿ. ಕುಮಾರಸ್ವಾಮಿ ಅವರ ಕೊಂಕು ಮಾತಿನಿಂದ ನೊಂದ ಎಂ.ಸಿ. ನಾಣಯ್ಯ ಅವರು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಗ ಆ ಸ್ಥಾನ ಏರಿದವರೇ ವಿ.ಎಸ್. ಉಗ್ರಪ್ಪ. ಬಹುಶಃ ಅವರು ಸಮಿತಿಯ ಉದ್ದೇಶವನ್ನಷ್ಟೇ ಗಮನದಲ್ಲಿರಿಸಿಕೊಂಡು ಕೆಲಸ ಮಾಡಿದ್ದರೆ 2016ರ ಮೇ- ಜೂನ್ ಹೊತ್ತಿಗೆ ಅಂತಿಮ ವರದಿ ಸಿದ್ಧ ಪಡಿಸಿ, ಸರಕಾರಕ್ಕೆ ಸಲ್ಲಿಸಬಹುದಿತ್ತು. ಆದರೆ ಸಮಿತಿಯ ಉದ್ದೇಶ, ಅಂತಿಮ ವರದಿ ಯಾರಿಗೆ ಬೇಕು? ಅಂತಿಮ ವರದಿ ಸಲ್ಲಿಕೆಯಾಗಿಬಿಟ್ಟರೆ, ಸಮಿತಿ ಬರ್ಖಾಸ್ತುಗೊಂಡರೆ ಬರಬೇಕಾದ ಸೌಲಭ್ಯಗಳೆಲ್ಲ ನಿಂತು ಹೋಗುವುದಿಲ್ಲವೇ? ಅದಕ್ಕೆ ಸರಕಾರ ಸಮಿತಿಯ ಅವಧಿ ವಿಸ್ತರಿಸಲು ಮೀನಮೇಷ ಎಣಿಸಿದಾಗ, ಉಗ್ರಪ್ಪ ಮುನಿಸಿಕೊಂಡಿದ್ದನ್ನೂ ನೆನಪಿಸಿಕೊಳ್ಳಬಹುದು. ಉಗ್ರಪ್ಪ ವಿಧಾನಪರಿಷತ್ ಸದಸ್ಯರಾಗಿದ್ದರು. ಶಾಸಕರ ವೇತನ ದೊರೆಯುತ್ತಿತ್ತು. ಆದರೆ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾದ ಮೇಲೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ದೊರೆಯಿತು.

ಸಂಪುಟ ಸಚಿವರ ಸಂಬಳ, ಅವರಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಇವರಿಗೂ ಸಿಗುತ್ತಿವೆ. ಪ್ರವಾಸದ ಸಂದರ್ಭ ಒಂದು ಕಿ.ಮೀ.ಗೆ 30 ರು. ಪ್ರಯಾಣ ಭತ್ತೆ ಪಡೆಯಬಹುದು. ನೀವು ಯಾವುದೇ ಕಾರಿನಲ್ಲಿ ಹೋದರೂ ಒಂದು ಲೀಟರ್ ಡೀಸೆಲ್‌ಗೆ (60.67ರು.) 10 ಕಿ.ಮೀ. ಚಲಿಸುತ್ತದೆ. ಆದರೆ ಸರಕಾರದಿಂದ ಪ್ರತಿ ಕಿ.ಮೀ.ಗೆ 30 ಪಡೆಯುವ ಅವಕಾಶವಿದೆ. ಹಾಗಾಗಿ ನೀವು ಹೆಚ್ಚೆಚ್ಚು ಪ್ರವಾಸ ಮಾಡಿದಷ್ಟೂ ಒಳ್ಳೆಯದು! ಇಷ್ಟೇ ಸಾಲದು ಎಂಬಂತೆ ಉಗ್ರಪ್ಪ ಹೊಸ ಕಾರಿಗೆ ಬೇಡಿಕೆಯನ್ನೂ ಇಟ್ಟಿದ್ದರು! ಇಷ್ಟೆಲ್ಲ ಸುಖ, ಸೌಕರ್ಯಗಳು ಮನಸಿಗೆ ಬಂದಂತೆ ಕೆಲಸ ಮಾಡಿದ್ದಕ್ಕೆ ಸಿಗುತ್ತಿರುವಾರ ಸಮಿತಿಯ ಕೆಲಸ ಬೇಗ ಮುಗಿಸಿ ಯಾರಿಗೇನು ಆಗಬೇಕಿದೆ ಹೇಳಿ? ಮತ್ತೆ ಶಾಸಕರ ವೇತನ ಪಡೆದು ಸುಮ್ಮನಿರಬೇಕೆ? ಪತ್ರಿಕಾಗೋಷ್ಠಿ ಕರೆದು ಪ್ರಚಾರ ಗಿಟ್ಟಿಸುವುದು ಹೇಗೆ? ಸದಾ ಸುದ್ದಿಯಲ್ಲಿರುವುದು ಹೇಗೆ? ಅದಕ್ಕೆ ಸಮಿತಿ ಮೂಲ ಉದ್ದೇಶ ಬದಿಗೊತ್ತಿ, ಬೇರೇನೊ ಮಾಡಲು ಹೊರಟಿದ್ದಾರೆ. ದೌರ್ಜನ್ಯ ತಡೆಯುವ ನೆಪದಲ್ಲಿ ಈಗ ಮಾಡುತ್ತಿರುವ ಕೆಲಸಗಳನ್ನು ಬಿಟ್ಟು, ಸರಕಾರ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದರೆ, ಇಷ್ಟೊತ್ತಿಗೆ ಅಂತಿಮ ವರದಿ ಸಲ್ಲಿಸಬಹುದಿತ್ತು.

ಸರಕಾರದ ಹಣ ಉಳಿಸಬಹುದಿತ್ತು. ಒಳ್ಳೆಯ ಕಾರ್ಯದ ಅಷ್ಟು ಕಾಳಜಿ ಬೇಗ ಬರುವುದಿಲ್ಲ. ಇಷ್ಟಕ್ಕೂ ಇರುವ ಕಾನೂನಿಗೆ ಯಾವ ರೀತಿ ತಿದ್ದುಪಡಿ ಮಾಡಬೇಕು? ಅದನ್ನು ಹೇಗೆ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು? ಎಂಬ ಬಗ್ಗೆ ವರದಿ ನೀಡಲು ಜಿಲ್ಲೆ ಜಿಲ್ಲೆ ಪ್ರವಾಸ ಮಾಡಬೇಕು ಎಂದೇನಿದೆ? ಮಾಹಿತಿ ಬೇಕಾದರೆ ದೂರವಾಣಿಯಲ್ಲೂ ಸಿಗುತ್ತದೆ. ಅಲ್ಲಿ ಹೋಗಿ ಬಯ್ದರೆ ಮಾತ್ರ ಸರಿಯಾದ ಮಾಹಿತಿ ಸಿಗುತ್ತದಾ? ಆದರೆ ದೂರವಾಣಿಯಲ್ಲಿ ಮಾಹಿತಿ ಪಡೆದರೆ ಟಿಎ-ಡಿಎ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಇನ್ನು ಸರಕಾರ ಸಮಿತಿಗೆ ನೀಡಿದ ಉದ್ದೇಶದ ಈಡೇರಿಕೆಗಾಗಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಬಗ್ಗೆ ಸಂಬಂಧ ಪಟ್ಟವರಿಂದ ಮಾಹಿತಿ ಪಡೆಯಬಹುದು. ಹೊರತು ಅಲ್ಲಿ ಹೋಗಿ ವಿಚಾರಣೆ ಮಾಡುವ, ಸಂತ್ರಸ್ತರಿಂದ ದೂರು ಪಡೆಯುವ, ಅದರ ಬಗ್ಗೆ ಮನಸ್ಸಿಗೆ ಬಂದಂತೆ ಕಾಮೆಂಟ್ ಮಾಡುವ, ತನಿಖೆಗೆ ಸಂಬಂಧಿ ಸಿದಂತೆ ನಿರ್ದೇಶನ ನೀಡುವ ಅಧಿಕಾರ ಸಮಿತಿಗೆ ಇಲ್ಲ. ಸಮಿತಿಯ ಕೆಲಸಕ್ಕೆ ಅದರ ಅಗತ್ಯವೂ ಇಲ್ಲ. ಯಾವುದೇ ಕಾರಣಕ್ಕೂ ಸಮಿತಿಗೆ ಯಾವುದೇ ವ್ಯಕ್ತಿ, ಸಂಘಟನೆಗಳಿಂದ ದೂರು ಸ್ವೀಕರಿಸುವ ಅಧಿಕಾರ ವಿಲ್ಲ. ಯಾಕೆಂದರೆ ದೂರುಗಳನ್ನು ಸ್ವೀಕರಿಸುವುದು ಸಮಿತಿಯ ಕಾರ್ಯವ್ಯಾಪ್ತಿಯಲ್ಲಿ ಉದ್ಭವಿಸುವುದೇ ಇಲ್ಲ.

ರಾಜ್ಯದಲ್ಲಾದ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ಹರಿಸುವ, ಅವುಗಳ ತನಿಖೆ ಸರಿಯಾಗಿ ಆಗುತ್ತಿದೆಯೇ ಇಲ್ಲವೇ ಎಂಬುದನ್ನು ನೋಡುವ ಅಧಿಕಾರವನ್ನೂ ಸಮಿತಿಗೆ ನೀಡಲಾಗಿಲ್ಲ. ಯಾವ ರೀತಿಯ ತಿದ್ದುಪಡಿ ಮಾಡಬಹುದು ಎಂಬ ಬಗ್ಗೆ ಬೇಕಾದರೆ ಮನವಿ, ಸಲಹೆಗಳನ್ನು ಸ್ವೀಕರಿಸಬಹುದು. ಈಗಾಗಲೇ ವರದಿಯಾಗಿರುವ ಪ್ರಕರಣಗಳನ್ನು ಪರಿಶೀಲಿಸಬಹುದು. ಹಾಗಂತ ಆರೋಪಿ ವಿರುದ್ಧ ಹೇಳಿಕೆ ನೀಡಬಹುದು, ತನಿಖೆಯ ಬಗ್ಗೆ ವಿಚಾರ ಮಾಡಬಹುದು ಎಂದು ಹೇಳಿಲ್ಲ. ಸಮಿತಿಗೆ ನಿಜವಾಗಿಯೂ ಆಸಕ್ತಿಯಿದ್ದರೆ ಯಾವುದು ಸುಳ್ಳು, ಯಾವುದು ಸತ್ಯ ಪ್ರಕರಣ ಎಂಬುದನ್ನೆಲ್ಲ ಪರಿಶೀಲಿಸಿ ಒಂದು ಸಮಗ್ರ ಮತ್ತು ಸಮರ್ಪಕ ತಿದ್ದುಪಡಿಗೆ ಸಲಹೆ ನೀಡಬಹುದಿತ್ತು. ಹೀಗಿರುವಾಗ ಯಾವುದೋ ಸಂಘಟನೆ ಇವರಿಗೆ ದೂರು ನೀಡುವುದು, ಇವರು ಆ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡುವುದೇ ಅಧಿಕಾರ ದುರ್ಬಳಕೆ ಅಥವಾ ಅಧಿಕಾರ ವ್ಯಾಪ್ತಿ ಮೀರಿದ ಕೆಲಸವಾಗುತ್ತದೆ.

ಕಾನೂನು ಓದಿದವರು, ಪ್ರಖಾಂಡ ಪಂಡಿತರಂತೆ ಪೋಸು ನೀಡುವವರು, ಪದೇ ಪದೆ ಪಾಯಿಂಟ್ ಆಫ್ ಆರ್ಡರ್ ಎಂದು ಪುಸ್ತಕ ಎತ್ತಿ ತೋರುವವರು ತನ್ನದೇ ಅಧ್ಯಕ್ಷತೆಯ ಸಮಿತಿಯ ಅಧಿಕಾರ ವ್ಯಾಪ್ತಿ ತಿಳಿದಿಲ್ಲ ಎಂದರೆ ಏನರ್ಥ? ಅಥವಾ ತಿಳಿದೂ ಅದನ್ನು ಮೀರಿ ವರ್ತಿಸಿದರೆ ಅದು ಅಧಿಕಾರ ದುರ್ಬಳಕೆಯೇ ಅಲ್ಲವೇ? ಸರಕಾರ ಯಾಕೆ ಇಂತಹ ಸಮಿತಿಯನ್ನು ಇನ್ನೂ ಮುಂದುವರಿಸಬೇಕು? ದರ ಅಗತ್ಯವೇನು? ಅಧಿಕಾರ ದುರ್ಬಳಕೆ ಮಾಡಲು ಯಾಕೆ ಅವಕಾಶ ಕಲ್ಪಿಸಬೇಕು? ದೌರ್ಜನ್ಯ ತಡೆಯಲು ಏನು ಮಾಡಬೇಕು ಎಂದು ಹೇಳಬೇಕಾದ ಸಮಿತಿಯೇ ಅಧಿಕಾರ ವ್ಯಾಪ್ತಿ ಮೀರಿ ಕೆಲಸ ಮಾಡುವುದೂ ದೌರ್ಜನ್ಯವೇ ಅಲ್ಲವೇ? ಮಾಡಬೇಕಾದ ಕೆಲಸ ಮಾಡದೇ, ವ್ಯಾಪ್ತಿ ಮೀರಿ ವರ್ತಿಸುವ, ಅನಗತ್ಯ ಸಮಸ್ಯೆ ಸೃಷ್ಟಿಸುವ ಸಮಿತಿಗಳಿಂದಾಗುವ ಸಾಧನೆಯೇನು? ಸಾರ್ವಜನಿಕರ ಹಣದ ದುಂದುವೆಚ್ಚವಲ್ಲವೇ? ಸರಕಾರಕ್ಕೆ ಈ ರೀತಿಯ ಅನಗತ್ಯ ವಿವಾದಗಳು ಬೇಕು, ಅದರಿಂದ ಸಮಾಜಕ್ಕೆ, ಸರಕಾರಕ್ಕೆ, ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆಯಿದ್ದರೆ ಮಾತ್ರ ಈ ಸಮಿತಿ ಮುಂದುವರಿಸಬಹುದು.

ಇಲ್ಲವಾದಲ್ಲಿ ಈ ಸಮಿತಿಯಿಂದ ಯಾವ ಉಪಯೋಗವೂ ಆಗುವ ಲಕ್ಷಣಗಳಿಲ್ಲ. ಕೊನೆಯಲ್ಲಿ ಉಗ್ರಪ್ಪ ಅವರ ಶೈಲಿಯಲ್ಲಿಯೇ ಹೇಳುವುದಾದರೆ, ‘ಈಗ ನಾನು ಉಗ್ರಪ್ಪ ಅವರ ವಿರುದ್ಧ ಲೇಖನ ಬರೆದಿರುವುದರಿಂದ ನನಗೆ ಮತ್ತು ನನ್ನ ಕುಟುಂಬದವರಿಗೆ ಏನಾದರೂ ಆದರೆ ಉಗ್ರಪ್ಪ ಅವರೇ ಹೊಣೆಯಾಗುತ್ತಾರೆ!’

One thought on “ಮುಖ್ಯಮಂತ್ರಿಗಳೇ, ಉಗ್ರಪ್ಪನ ದೌರ್ಜನ್ಯಕ್ಕೆ ತಡೆಹಾಕಿ!

  1. If anything wrong he has to prevent it in a polite way. If he dont talk about that People will think what government and minister doing?
    It is tough to be a politician. as always people object for everything.

Leave a Reply

Your email address will not be published. Required fields are marked *

eleven − 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top