About Us Advertise with us Be a Reporter E-Paper

ವಿವಾಹ್

ಅನುರಾಗ ಅಂತರ್ಮುಖವಾಗಲಿ..

* ಲಾವಣ್ಯ

ಪ್ರೀತಿ-ಈ ಪದದ ಅರ್ಥ, ಆಳ ಹಾಗೂ ಸಂವೇದನೆಗಳು ಈಗಿನ ಓಡುತ್ತಿರುವ ಯಾಂತ್ರಿಕ ಜೀವನದಲ್ಲಿ ತನ್ನ ಮೂಲಸತ್ವವನ್ನು ಎಲ್ಲಿ ಕಳೆದುಕೊಳ್ಳುತ್ತದೆಯೋ ಎನ್ನುವ ಅಳಲು ಸದಾ ಕಾಡುತ್ತದೆ. ಪ್ರೀತಿಯ ಮಜಲುಗಳು ಅನೇಕ. ಪ್ರೀತಿಸುವ ಪರಿಯೂ ವಿಭಿನ್ನ ಆದರ ಪ್ರೀತಿಯ ತೀವ್ರತೆ ಎಂದಿಗೂ ನಿರಂತರ.

ತಾಯಿಯ ಸಹನೆಯ ಪ್ರೀತಿ, ಅಪ್ಪನ ಬೆಟ್ಟದಂಥಾ ಪ್ರೀತಿ, ಮಗುವಿನ ನಿಷ್ಕಲ್ಮಷ ಪ್ರೀತಿ, ಅಣ್ಣ ತಮ್ಮಂದಿರ ಕಾಳಜಿ ತುಂಬಿದ ಪ್ರೀತಿ, ಹರೆಯದ ಚಿಗುರೆಲೆಯ ಹಸಿರಿನಂಥಾ ಪ್ರೀತಿ ಅನುಭವಿಸು ರೀತಿ ವಿಶಿಷ್ಟ. ಇವೆಲ್ಲಕ್ಕಿಂತ ಮುಖ್ಯವೂ ಮತ್ತು ನಾವು ಮರೆಯುತ್ತಿರುವುದು ನಮ್ಮನ್ನು ನಾವು ಪ್ರೀತಿಸಿಕೊಳ್ಳುವ ಆತ್ಮಗೌರವದ ಪ್ರೀತಿಯನ್ನು. ಎಷ್ಟೋ ಸಲ ನಮಗೇ ನಾವು ಅರ್ಥವಾಗಿರುವುದಿಲ್ಲ.ನಾವು ಯೋಚಿಸಿದ ರೀತಿಗೆ, ವರ್ತನೆಗಳಿಗೆ, ಮಾತಿಗೆ ಪ್ರತಿಯೊಂದಕ್ಕೂ ಕಾರಣ ಹುಡುಕುತ್ತಿರುತ್ತೇವೆ. ಬದುಕಿನ ಓಟದಲ್ಲಿ, ನಿಲ್ಲಬಾರದು ಎಂಬ ಹಂಬಲದಲ್ಲಿ, ನಿಶ್ಚಲತೆಯ ಸೌಂದರ್ಯ ನಮ್ಮ ಅರಿವಿಗೆ ಬರುವುದೇ ಇಲ್ಲ.

ಯಾವುದೋ ಹುಡುಗನಿಗೋಸ್ಕರ ತಾನು ಮಾಡುತ್ತಿದ್ದ ಇಷ್ಟದ ಕೆಲಸ ಬಿಡ್ತಾಳೆ. ಅವಳನ್ನು ಮೆಚ್ಚಿಸಬೇಕೆಂದು ಸಾಲ ಮಾಡಿಯಾದ್ರೂ ಬ್ರಾಂಡೆಡ್ ಬಟ್ಟೆ ಅವಳಿಷ್ಟದ ಮುಖವಾಡ ಹಾಕಿಕೊಳ್ಳುತ್ತಾನೆ. ಇದರ ನಡುವೆ ಜಗಳ, ಅಹಂಕಾರ, ಪುಟ್ಟ ಜಗಳಗಳನ್ನೂ ಸರಿ ಮಾಡಕೊಳ್ಳಕಾಗದೆ ಇರೋ ಅತಂತ್ರತೆ, ಪ್ರತಿ ನಿರ್ಧಾರಗಳಲ್ಲೂ ಅನುಮಾನ. ಇಂತಹ ಸ್ಪಷ್ಟತೆ ಇಲ್ಲದ ಪ್ರೀತಿಯ ಅಗತ್ಯವೇನು?

ಮೊದಲು ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡೋಣ. ನಮ್ಮ ಸಕಾರಾತ್ಮಕತೆ, ಬಲಹೀನತೆ, ಆತ್ಮಗೌರವಗಳನ್ನು ಪರಿಶೀಲಿಸೋಣ. ನಮ್ಮನ್ನು ನಾವು ಸಂಪೂರ್ಣವಾಗಿ ಪ್ರೀತಿಸೋಣ. ನಮ್ಮ ಕೆಲಸಗಳಲ್ಲಿ ಖುಷಿ ಹುಡುಕೋಣ. ನಮಗೆ ನಾವು ಅರ್ಥವಾದ ಮೇಲೆ, ಸಾಧ್ಯವಾದರೆ ಇನ್ನೊಬ್ಬರಿಗೆ ನಮ್ಮನ್ನು ಪರಿಚಯಿಸುವ, ಅರ್ಥೈಸುವ ಭಾವಗಳ ಸಾಕಾರ, ತನ್ನದೇ ದಾರಿಯಲ್ಲಿ ತಾನಾಗಿಯೇ ಹರಿಯುವ ಎಂದಿಗೂ ಬತ್ತದ ಮಹಾನದಿ!

Tags

Related Articles

Leave a Reply

Your email address will not be published. Required fields are marked *

Language
Close