5,10 ರು. ಚಂದಾ ಸಂಗ್ರಹಿಸಿ ಚುನಾವಣೆ ಗೆದ್ದಿದ್ದೆ

Posted In : ಸಂಗಮ, ಸಂಪುಟ

-ವಾಟಾಳ್ ನಾಗರಾಜ್  ಕನ್ನಡ ಚಳವಳಿ ವಾಟಾಳ್ ಪಕ್ಷ

ಕನ್ನಡ ನಾಡಿಗಾಗಿ ಸದಾ ಒಂದಲ್ಲ ಒಂದು ರೀತಿಯ ಪ್ರತಿಭಟನೆ ಮಾಡುತ್ತ ಸದಾ ಕನ್ನಡ ಭಾಷೆಯ ಒಳಿತಿಗಾಗಿ ಸ್ಪಂದಿಸುವ ಜೀವ ಎಂದೇ ಹೆಸರು ವಾಸಿಯಾಗಿರುವ ವಾಟಾಳ್ ನಾಗರಾಜ್ ತಮ್ಮ ಮೊದಲ ಚುನಾವಣೆ ಸಂದರ್ಭದ ನೆನಪುಗಳನ್ನು ಬಿಚ್ಚಿಟ್ಟಿದ್ದು ಹೀಗೆ.

ನಾನು ಪ್ರಪ್ರಥಮವಾಗಿ ಬೆಂಗಳೂರಿನ ಚಿಕ್ಕಪೇಟೆ ಅಭ್ಯರ್ಥಿ ಯಾಗಿ ಶಾಸನ ಸಭೆಯ ಚುನಾವಣೆಗೆ ನಿಂತಿರುವುದು 1967ರಲ್ಲಿ .  ವೇಳೆ ಬೆಂಗಳೂರಿನಲ್ಲಿ 30ರಿಂದ 40 ಲಕ್ಷ ಜನಸಂಖ್ಯೆ ಇರಬಹುದು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಬೆಂಗಳೂರು ಸ್ವಚ್ಛಂದವಾದ ಹಸಿರು ತುಂಬಿದ ನಗರವಾಗಿತ್ತು.

ಶಾಸನಸಭೆಯ ಚುನಾವಣೆಯಲ್ಲಿ ನನ್ನ ಪ್ರತಿ ಸ್ಪರ್ಧಿಯಾಗಿದ್ದವರು ಬೆಂಗಳೂರು ಮೇಯರ್ ಆಗಿದ್ದ ವೈ.ರಾಮಚಂದ್ರ, ಕೆ.ಎಂ.  ನಾಗಣ್ಣ, ಎಂ.ವಿ. ತಿವಾರಿ. ಈ ಮೂವರು ಹೆಚ್ಚು ಪ್ರಸಿದ್ಧಿ ಗಳಿಸಿರುವ ಜತೆಗೆ ಹೆಸರು ವಾಸಿಯಾಗಿದ್ದರು. ಇವರ ಮುಂದೆ ನಾನು ಸ್ಪರ್ಧಿಸಬೇಕಾಗಿತ್ತು. ನಾನು ಹೆದರದೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದೆ. ಚುನಾವಣೆ ತಯಾರಿ ಆರಂಭವಾಯಿತು  ಸ್ಪರ್ಧಿಗಳಲ್ಲಿ ಹೆಸರಿನ ಬಲದ ಜತೆಗೆ ಹಣದ ಬಲವು ಇತ್ತು. ಆದರೆ ನನಗೆ ಜನ ಬಲದ ಮೇಲೆ ನಂಬಿಕೆ ಇದ್ದುದರಿಂದ ನಾನು ಪ್ರಚಾರ ಕಾರ್ಯ ಆರಂಭಿಸಿದೆ. ಸತತ 50 ದಿನಗಳಲ್ಲಿ ಭಾಷಣ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಅದು ಯಾವುದೇ ವೇದಿಕೆ ಸೃಷ್ಟಿಸದೆ ಕ್ಷೇತ್ರದಲ್ಲಿರುವ ಮನೆಯೊಂದರ ಮಹಡಿ ಮೇಲೆ ನಿಂತು ತಲೆಯ ಮೇಲೆ ಮೈಕ್ ಕಟ್ಟಿಕೊಂಡು ಭಾಷಣ ಮಾಡುವುದಾಗಿತ್ತು. ನನ್ನ ಭಾಷಣಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿತ್ತು. ಸಾವಿರ  ಹೆಚ್ಚು ಜನರು ಭಾಷಣ ಕೇಳಲು ಹಾಜರಾಗುತ್ತಿದ್ದರು.

ಭಾಷಣದ ನಂತರ ಚುನಾವಣೆ ಖರ್ಚಿಗಾಗಿ ಜನರೆ 5 ರು., 10 ರು. ಹೀಗೆ ನೀಡುತ್ತ ನನಗೆ ಅಶೀರ್ವದಿಸಿದ ಆ ಘಳಿಗೆ ನೆನೆದಾಗ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ಜನರೆ ನೀಡಿದ ಹಣ ಮತ್ತು ಸ್ನೇಹಿತರು, ಸಂಬಂಧಿಕರು ನೀಡುವ ಹಣವನ್ನು ಒಟ್ಟು ಮಾಡಿ ಚುನಾವಣೆಗೆ ಬೇಕಾದ ಖರ್ಚನ್ನು ಮಾಡಿದ್ದುಂಟು. ಆ ಸಮಯದಲ್ಲಿ ನಾನು ಚುನಾವಣೆಗೆ ಖರ್ಚು ಮಾಡಿದ್ದು 15 ಸಾವಿರ ರು. ಮಾತ್ರ.

ರಾತ್ರಿ ಎನ್ನದೇ ಪ್ರಚಾರ ಕಾರ್ಯದಲ್ಲಿ ಕ್ಷೇತ್ರವನ್ನು ಸುತ್ತಿ ದ್ದುಂಟು. ಕೊನೆಗೂ ಚುನಾವಣೆ ದಿನಾಂಕ ಹತ್ತಿರ ಬಂತು. ಯಾರು ಗೆಲುವು ಸಾಧಿಸಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಬೆಂಗಳೂರು ನಗರದ ಕಾರ್ಪೋರೇಷನ್‌ನಲ್ಲಿ ಮತ ಎಣಿಕೆ ನಡೆಯಿತು. ಅಭ್ಯರ್ಥಿಗಳ ಪರವಾಗಿದ್ದ ಲಕ್ಷಾಂತರ ಜನರು ಈ ಸಂದರ್ಭದಲ್ಲಿ ಸೇರಿದ್ದರು. ಮೊದಲ ಎಣಿಕೆಯಲ್ಲಿ ವೈ.ರಾಮಚಂದ್ರಪ್ಪ ಅವರು ಮೇಲುಗೈ ಸಾಧಿಸಿದರು. ಅದನ್ನು ಕಂಡು ನಾನು ಹಿಂಜರಿಯಲಿಲ್ಲ. ಜನರು ನನಗೆ ಮೋಸ ಮಾಡು ವುದಿಲ್ಲ ಎಂಬ  ನನ್ನಲ್ಲಿತ್ತು. ಕೊನೆಗೂ ಅದು ನಿಜವಾಯಿತು. ಎಲ್ಲ ಅಭ್ಯರ್ಥಿಗಳಿಗಿಂತ 5,300 ಮತಗಳ ಅಂತರದಲ್ಲಿ ನಾನು ಗೆಲುವು ಸಾಧಿಸಿದೆ. ನನಗೆ ನನ್ನ ಸಂಬಂಧಿಕರು, ಸ್ನೇಹಿತರು ಮತ್ತು ನನ್ನ ಜನರು ಯಾವ ಸಂದರ್ಭದಲ್ಲೂ ಮೋಸ ಮಾಡದೇ ಇದ್ದದರಿಂದ ಆವತ್ತು ನಾನು ಚುನಾವಣೆಯಲ್ಲಿ ಗೆದ್ದು ಬಂದೆ.

ನಿರೂಪಣೆ: ಹರ್ಷಿತಾ ಶೆಟ್ಟಿ ಕುತ್ತೆತ್ತೂರು

 

Leave a Reply

Your email address will not be published. Required fields are marked *

14 + 16 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top