About Us Advertise with us Be a Reporter E-Paper

ಗುರು

ತರಕಾರಿ ಅಲಂಕಾರದ ಶಾಖಾಂಬರೀ ಈ ಬನಶಂಕರಿ

* ಸುರೇಶ ವೀ.ಗುದಗನವರ ರಾಮದುರ್ಗ

ಬಾಗಲಕೋಟೆ ಜಿಲ್ಲೆಯ ಬದಾಮಿಯ ಬಳಿಯ ಬನಶಂಕರಿ ದೇವಿ ಉತ್ತರ ಕರ್ನಾಟಕ ಸಮಸ್ತ ಜನರ ಅಧಿದೇವತೆ. ಬದಾಮಿಯಿಂದ 5ಕಿ.ಮೀ. ದೂರದಲ್ಲಿರುವ ಚೊಳಚಗುಡ್ಡ ಗ್ರಾಮದ ಸಮೀಪದ ತಿಲಕವನದಲ್ಲಿ ಬನಶಂಕರಿ ಕ್ಷೇತ್ರವಿದೆ. ಬನಶಂಕರಿ ದೇವಾಲಯದ ಸುತ್ತ ಹಚ್ಚ ಹಸುರಿನ ಸೌಂದರ್ಯ. ನಿಸರ್ಗದ ಮಡಿಲಲ್ಲಿ ಪ್ರಶಾಂತವಾದ ಪರಿಸರದಲ್ಲಿ ಇರುವ ದೇವಾಲಯದ ಗೋಪುರವು ಸರ್ವರನ್ನು ಆಕರ್ಷಿಸುತ್ತದೆ.

ತಿಲಕಾರಣ್ಯದಲ್ಲಿ ದುರ್ಗದತ್ತ ಹಾಗೂ ಧೂಮಾಕ್ಷಿ ಎಂಬ ರಾಕ್ಷಸರು ಋಷಿಗಳ ತಪಸ್ಸಿಗೆ ಹಾಗೂ ಜನರಿಗೆ ತೊಂದರೆ ಕೊಡುತ್ತಾ, ಹಿಂಸೆಯಲ್ಲಿ ತೊಡಗಿ ಜನಜೀವನವನ್ನು ನರಕಮಯಗೊಳಿಸುತ್ತಾರೆ. ಆಗ ದೇವಿ ಉಗ್ರರೂಪ ತಾಳಿ ತಿಲಕಾರಣ್ಯಕ್ಕೆ ಬಂದು ಈರ‌್ವರೂ ರಾಕ್ಷಸರನ್ನು ಸಂಹರಿಸಿ ಹಾಗೂ ಉಗ್ರಳಾಗಿ ಅಲ್ಲಿಯೇ ನೆಲೆಯೂರುತ್ತಾಳೆ. ಅವಳ ಉಗ್ರ ರೂಪದಿಂದ ಆತಂಕಕ್ಕೊಳಗಾದ ದೇವತೆಗಳು ಆಕೆಯನ್ನು ಶಾಂತಗೊಳಿಸುವಂತೆ ತ್ರಿದಂಡ ಮುನಿಗೆ ಶರಣು ಹೋದರು. ಆ ಮುನಿಯ ಭಕ್ತಿಗೆ ಒಲಿದ ದೇವಿ ಅದೇ ಬನದಲ್ಲಿ ಶಾಂತಳಾಗಿ ಭಕ್ತರ ಬೇಕು – ಬೇಡಗಳನ್ನು ಈಡೇರಿಸಲಾರಂಭಿಸಿದಳು. ಬನದಲ್ಲಿ ಬನಶಂಕರಿ, ಶಾಖಾಂಬರಿ ಎಂದೂ ಜನಪ್ರಿಯಳಾದಳು. ಬರ ಬಂದಾಗ ತನ್ನ ದೇಹದಿಂದ ಶಾಖ ಉತ್ಪನ್ನ ಮಾಡಿ ಮಳೆ ತರಿಸಿ, ಆ ಪ್ರದೇಶವನ್ನು ಸದಾ ಹಸಿರು ಬನವನ್ನಾಗಿ ಮಾಡಿದಳೆಂಬ ಪ್ರತೀತಿ ಇದೆ.

ಸಸ್ಯ ತರಕಾರಿಗಳೇ ಉಡುಗೆ
ಶಾಖಾಂಬರಿ ಎಂದರೆ, ಸಸ್ಯವನ್ನು ಉಡುಗೆಯಾಗಿ ತೊಡುವವಳು. ಬನಶಂಕರಿ ದೇವಿಯ ಕುರುಹಿಗಾಗಿ ರಥೋತ್ಸವದ ಮುನ್ನಾದಿನ ಆರ್ಚಕರು ದೇವಿಗೆ 108 ತರಹದ ತರಕಾರಿ ನೈವೇದ್ಯವನ್ನು ಅರ್ಪಿಸುವರು. ಇದನ್ನು ಸುತ್ತಲಿನ ಸೀಮೆಯ ಭಕ್ತರು ಪಲ್ಲೇದ ಹಬ್ಬವೆಂದು ಆಚರಿಸುತ್ತಾರೆ. ಭೂಮಿಯಲ್ಲಿ ದ್ರಾವಿಡ ಶೈಲಿಯ ಬನಶಂಕರಿ ದೇವಾಲಯವನ್ನು ರಾಷ್ಟ್ರಕೂಟರು 9ನೆಯ ಶತಮಾನದಲ್ಲಿ ನಿರ್ಮಿಸಿರುವರು. ಇದೇ ಮೂಲ ಬನಶಂಕರಿ ದೇವಾಲಯವೆಂದು ಹೇಳುತ್ತಾರೆ. ದೇವಾಲಯದ ಎದುರಿಗೆ ವಿಶಾಲವಾದ ಹರಿದ್ರಾ ತೀರ್ಥವಿದೆ. ಹೊಂಡದ ಮೂರು ಕಡೆಗೆ ಕಲ್ಲಿನ ಮಂಟಪ ಬಹು ಆಕರ್ಷಕವಾಗಿದ್ದು, ಮೂರು ಅಂತಸ್ತಿನ ದೀಪಸ್ತಂಭವನ್ನು ಹಾಗೂ ಕೆಲವು ಚಿಕ್ಕಪುಟ್ಟ ದೇವಾಲಯಗಳನ್ನು ವಿಜಯನಗರದ ಅರಸರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

ಸ್ಥಳೀಯರು ದೇವತೆಯನ್ನು ಬನದವ್ವ, ಸಂಕವ್ವ, ಸಿರವಂತಿ, ಚೌಡಮ್ಮ ಮತ್ತು ವನದುರ್ಗೆ ಎಂಬ ಹೆಸರಿನಿಂದ ಕರೆಯುವರು. ಎಂಟು ಭುಜಗಳನ್ನು ಹೊಂದಿದ್ದು ತ್ರಿಶೂಲ, ಢಮರು, ಕಪಾಲಪತ್ರ, ಘಂಟೆ, ವೇದದ ಹೊತ್ತಿಗೆ ಮತ್ತು ಖಡ್ಗ-ಖೇತಗಳನ್ನು ಹೊಂದಿರುತ್ತಾಲೆ. ಚಾಲುಕ್ಯರ ಕುಲದೇವಿಯಾದ ಬನಶಂಕರಿಯು, ನೇಕಾರ ದೇವಾಂಗ ಸಮಾಜದವರ ಹಾಗೂ ದೇಶಸ್ಥ ಬ್ರಾಹ್ಮಣರ ಕುಲದೇವತೆಯು ಆಗಿರುತ್ತಾಳೆ. ಬನಶಂಕರಿ ದೇವಿಗೆ ಬೇಡಿಕೊಂಡ ಭಕ್ತರು ಹರಿದ್ರಾತೀರ್ಥ ಹೊಂಡದಲ್ಲಿ ತಮ್ಮ ಮಕ್ಕಳನ್ನು ತೆಪ್ಪ ಬಿಡುವದರ ಮೂಲಕ ದೇವಿಗೆ ಹರಕೆಯನ್ನು ಕೈಕೊಳ್ಳುವ ಸಂಪ್ರದಾಯ ಈಗಲೂ ನಡೆಯುತ್ತದೆ.

ಪ್ರತಿವರ್ಷ ಬನದ ಹುಣ್ಣಿಮೆ (ಜನವರಿ ತಿಂಗಳು) ಯಂದು ಆರಂಭವಾಗುವ ಬನಶಂಕರಿ ಜಾತ್ರೆ ತಿಂಗಳವರೆಗೆ ನಿರಂತರವಾಗಿ ನಡೆಯುತ್ತದೆ. ಉತ್ತರ ಕರ್ನಾಟಕದ ಭಕ್ತರು ಬನಶಂಕರಿ ದೇವಿಯ ಜಾತ್ರೆಯನ್ನು ನಾಡಿನ ಒಂದು ಹಬ್ಬದಂತೆ ಆಚರಿಸುವರು. ಇಲ್ಲಿನ ರಥವು ರಾಜ್ಯದಲ್ಲಿಯೇ ಅತ ಎತ್ತರದ ರಥವೆಂದು ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಆಗಮಿಸುವರು.

ಈ ಜಾತ್ರೆಯು ಒಂದು ರೀತಿಯ ಗ್ರಾಮೀಣ ಮಾರುಕಟ್ಟೆಯೂ ಹೌದು. ಮನೆ ಕಟ್ಟಲು ಬೇಕಾದ ಸಾಗವಾನಿ, ತೇಗು, ಮತ್ತಿ ಮುಂತಾದ ಉತ್ಕೃಷ್ಟ ದರ್ಜೆಯ ಕಟ್ಟಿಗೆಯಿಂದ ನಾಜೂಕು ಕೆತ್ತನೆ ಮಾಡಿದ ಬಾಗಿಲು, ಚೌಕಟ್ಟು, ಕಿಟಕಿ, ತೊಲೆಗಳು, ಮಂಚ, ಕುರ್ಚಿ ಹಾಗೂ ಮೇಜುಗಳು ಇಲ್ಲಿ ಮಾರಲ್ಪಡುತ್ತವೆ. ಹೊಳೆಆಲೂರಿನ ಪ್ರಖ್ಯಾತ ಕುಶಲಕರ್ಮಿಗಳಿಂದ ನಿರ್ಮಿಸಿದ ಈ ಸಲಕರಣೆಗಳಿಗೆ ಸಾಕಷ್ಟು ಬೇಡಿಕೆ ಇದೆ.

ಕರ್ನಾಟಕದ ರಂಗಭೂಮಿಯ ಖ್ಯಾತರಾದ ಕಂದಗಲ್ಲ ಹನುಮಂತರಾಯ, ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಮೊದಲಾದವರ ಬಹುತೇಕ ಕಂಪನಿಗಳು ಇಲ್ಲಿ ಪ್ರದರ್ಶನ ಮಾಡಿವೆ. 1969ರಲ್ಲಿ ಮೇರು ನಟ ಡಾ.ರಾಜಕುಮಾರ ಸಹ ಬನಶಂಕರಿಯಲ್ಲಿ ತಮ್ಮ ಕಂಪನಿಯ ಕ್ಯಾಂಪ್ ನಾಟಕ ಆಡಿ ದೇವಿ ಹಾಗೂ ದೇವಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಂದಿನ ಅವರ ಕಂಪನಿಯಲ್ಲಿ ಚಿತ್ರರಂಗದ ನರಸಿಂಹರಾಜು, ಬಾಳಕೃಷ್ಣ, ಪಂಢರಿಬಾಯಿ, ಮೈನಾವತಿ ಮುಂತಾದವರು ಇದ್ದರು. ಬನಶಂಕರಿ ದೇಗುಲದ ಆವರಣದಲ್ಲಿರುವ ಕಲ್ಲಿನ ದೀಪಸ್ಥಂಭಗಳು ವಿಶಿಷ್ಟ.

Tags

Related Articles

Leave a Reply

Your email address will not be published. Required fields are marked *

Language
Close