ಮಸೀದಿ ಬಳಿ ಪಾದಚಾರಿಗಳ ಮೇಲೆ ಹರಿದ ವಾಹನ: ಹಲವರಿಗೆ ಗಾಯ

Posted In : ವಿದೇಶ

ಲಂಡನ್: ಉತ್ತರ ಲಂಡನ್‌ನ ಮಸೀದಿಯೊಂದರ ಬಳಿ ಪಾದಚಾರಿಗಳ ಮೇಲೆ ವಾಹನ ಹರಿದಿದ್ದು, ಹಲವರು ಗಾಯಗೊಂಡಿದ್ದಾರೆ. ಸೋಮವಾರ ಘಟನೆ ನಡೆದಿದೆ. ಫಿನ್ಸುಬರಿ ಪಾರ್ಕ್ ಮಸೀದಿ ಬಳಿಯಿರುವ ಮುಸ್ಲಿಂ ವೆಲ್‌ಫೇರ್ ಹೌಸ್ ಬಳಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಮುಸ್ಲಿಮರು ನೆರೆದಿದ್ದರು.

ಮಸೀದಿಯಿಂದ ಹೊರ ಬರುತ್ತಿದ್ದಂತೆಯೇ ಜನರ ಮೇಲೆ ವಾಹನ ಹರಿದಿತ್ತು. ಸಂತ್ರಸ್ತರ ಕುರಿತಂತೆ ನಾವು ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಬ್ರಿಟನ್ ಮುಸ್ಲಿಂ ಮಂಡಳಿ (ಎಂಸಿಬಿ) ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.  ಬ್ರಿಟನ್ ಮುಸ್ಲಿಂ ಮಂಡಳಿ ಮುಖ್ಯಸ್ಥ ಹರುನ್ ಖಾನ್ ಮಾತನಾಡಿ, ರಂಜಾನ್ ಪ್ರಯುಕ್ತ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮುಸ್ಲಿಮರ ಮೇಲೆ ವಾಹನ ಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ, ಬಹು ಸಂಖ್ಯೆಯಲ್ಲಿ ವೈದ್ಯರು ಹಾಗೂ ತುರ್ತುಚಿಕಿತ್ಸಾ ವಾಹನಗಳು ಸ್ಥಳಕ್ಕೆ ಬಂದಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಲಂಡನ್‌ನ ಹಲವೆಡೆ ಸಂಚಾರ ದಟ್ಟಣೆ ಕೂಡ ನಿರ್ಮಾಣವಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ. ಪ್ರಸ್ತುತ ವಾಹನ ಚಾಲಕನನ್ನು ಬಂಧನಕ್ಕೊಳಪಡಿಸಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಸಂಗೀತ ಕಾರ್ಯಕ್ರಮದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಪ್ರಕರಣ ನೆನಪು ಮಾಸುವ ಮೊದಲೇ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

seven + three =

 
Back To Top