ಗಣಪತಿಯ ನೇತು ಹಾಕಿ ಸತ್ಯವನ್ನು ಹೂತು ಹಾಕಿದರೆ ?

Posted In : ಸಂಗಮ, ಸಂಪುಟ

ಡಿವೈಎಸ್ಪಿ ಗಣಪತಿ ಮೃತಪಟ್ಟಿರಬಹುದು. ಆದರೆ ಸತ್ಯಕ್ಕೆ ಸಾವಿಲ್ಲ ಎಂಬುದು ತಡವಾಗಿಯಾದರೂ ಬೆಳಕಿಗೆ ಬರುತ್ತಿದೆ. ಈ ಭಾವನೆ ಮೂಡಲು ಕಾರಣ ವಿಧಿ ವಿಜ್ಞಾನ ವರದಿ ಮತ್ತು ಸಿಬಿಐ ತನಿಖೆ ಆರಂಭಿಸಿರುವುದು. ನಿಜ ಹೇಳಬೇಕೆಂದರೆ ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿಗೆ ಕಾರಣ ಹುಡುಕಲು ತನಿಖಾಧಿಕಾರಿಗಳಿಗೆ ವಿಶೇಷ ಶ್ರಮದ ಅಗತ್ಯವೇ ಇದ್ದಿರಲಿಲ್ಲ. ಏಕೆಂದರೆ ಸ್ವತಃ ಗಣಪತಿ ಅವರೇ ಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಎ.ಎಂ. ಪ್ರಸಾದ್ ಅವರ ಹೆಸರನ್ನು ಕ್ಯಾಮೆರಾ ಮುಂದೆ ಉಲ್ಲೇಖಿಸಿದ್ದರು. ಇಷ್ಟೇ ಸಾಕಿತ್ತು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದ್ದರೆ ಆತ್ಮಹತ್ಯೆಯೋ, ಕೊಲೆಯೋ ಎಂಬುದು ಬಹುಬೇಗ ತಿಳಿಯಬಹುದಿತ್ತು. ಆದರೆ ಆದದ್ದೇನು ? ಪೊಲೀಸ್ ತನಿಖೆಯನ್ನು ತರಾತುರಿಯಲ್ಲಿ ಸಿಐಡಿಗೆ ವಹಿಸಲಾಯಿತು. ಸಿಐಡಿ ಇದಕ್ಕಿಂತ ತರಾತುರಿಯಲ್ಲಿ ಎರಡು ತಿಂಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಿತು. ಪರಿಣಾಮ ಕೆ.ಜೆ.ಜಾರ್ಜ್ ಮುಖವನ್ನು ಮತ್ತೆ ಸಚಿವ ಸಂಪುಟದಲ್ಲಿ ಕಾಣುವಂತಾಯಿತು.

ಆದರೆ ತನಿಖೆಯ ವೇಳೆ ಹರಿದ ಪುಟಗಳೆಷ್ಟು, ಖರ್ಚಾದ ನೋಟುಗಳೆಷ್ಟು ? ನಾಶವಾದ ಸಾಕ್ಷಿಗಳೆಷ್ಟು ಎನ್ನುವ ಸಂಶಯಕ್ಕೆ ಈಗ ಪುಷ್ಠಿ ನೀಡುವಂಥ ಅಂಶಗಳು ಕಾಣಸಿಗುತ್ತಿವೆ. ಕರ್ನಾಟಕದ ಇತಿಹಾಸದಲ್ಲಿ 2 ತಿಂಗಳಲ್ಲಿಯೇ ಬಿ ರಿಪೋರ್ಟ್ ಹಾಕಿದ ಇತಿಹಾಸವೇ ಇಲ್ಲ. ಬಿ ರಿಪೋರ್ಟ್ ಹಾಕಿದ ಅಧಿಕಾರಿ ಈಗ ಎಲ್ಲಿದ್ದಾರೆ ? ಅವರಿಗೆ ಒಳ್ಳೊಳ್ಳೆ ಆಯಕಟ್ಟಿನ ಹುದ್ದೆಗಳು ಸಿಕ್ಕಿದ್ದು ಹೇಗೆ ? ಇದರಲ್ಲಿ ತನಿಖೆ ಮಾಡಿದ ಇತರ ಅಧಿಕಾರಿಗಳಿಗೂ ಆಯಕಟ್ಟಿನ ಹುದ್ದೆ ಸಿಕ್ಕಿದ್ದು ಹೇಗೆ ? ಎಫ್‌ಎಸ್‌ಎಲ್ ವರದಿ ಬರುವವರೆಗೆ ಸಿಐಡಿ ಅಧಿಕಾರಿಗಳು ಬಿ ರಿಪೋರ್ಟ್ ಹಾಕಲು ಏಕೆ ಕಾಯಲಿಲ್ಲ? ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ನೀಡದೇ ಇದ್ದದ್ದು ಏಕೆ ? ಅದರಲ್ಲಿದ್ದ ಕರೆಗಳನ್ನು ಡಿಲೀಟ್ ಮಾಡಿದ್ದು ಏಕೆ ? ಡಿಲೀಟ್ ಮಾಡಿದ ಅಧಿಕಾರಿಗಳು ಯಾರು ? ಡಿಲೀಟ್ ಮಾಡುವ ಉದ್ದೇಶ ಪ್ರಕರಣವನ್ನು ಮುಚ್ಚಿ ಹಾಕುವುದಾಗಿತ್ತೇ?

ಗಣಪತಿ ನೇಣು ಹಾಕಿಕೊಂಡಾಗ ರೂಮ್ ಬಾಯ್ ತೆಗೆದಿದ್ದ ಎನ್ನಲಾದ ಫೋಟೊ ಎಲ್ಲಿ ಹೋಯಿತು ? ಅಲ್ಲಿನ ಚಹರೆಗೂ ಬಳಿಕ ಪೊಲೀಸರು ತೆಗೆದ ಫೋಟೊದಲ್ಲಿರುವ ಚಹರೆಗೂ ವ್ಯತ್ಯಾಸ ಇದೆಯಲ್ಲವೇ ? ಡೆತ್ ನೋಟ್ ಮುಚ್ಚಿಟ್ಟವರು ಯಾರು? ಚಿಕ್ಕಮಗಳೂರು ಎಸ್ಪಿಗೆ ಕರೆ ಮಾಡಿದ ಹಿರಿಯ ಪೊಲೀಸ್ ಅಧಿಕಾರಿ ಯಾರು ? ಸಣ್ಣ ಪುಟ್ಟ ಕೇಸ್‌ಗಳಲ್ಲಿ ಕಳ್ಳರ ಸಿಡಿಆರ್ ತೆಗೆಯುವ ಪೊಲೀಸರೇ ನೀವು ಹೈ ಪ್ರೊಫೈಲ್ ಕೇಸ್ ನಲ್ಲಿ ಏಕೆ ಆರೋಪಿ ಅಧಿಕಾರಿಗಳ ಸಿಡಿಆರ್ ತೆಗೆಯಲಿಲ್ಲ ? ಆತ್ಮಹತ್ಯೆಗೆ ಕುಟುಂಬ ವ್ಯವಹಾರವೇ ಕಾರಣ ಎಂದು ಹೆತ್ತವರಿಂದ ಬರೆಸಿಕೊಂಡ ಅಧಿಕಾರಿ ಯಾರು ? ಆ ರೀತಿ ಬರೆಸಿಕೊಳ್ಳುವ ಅಗತ್ಯ ಏನು ? ಲಾಡ್ಜ್‌‌ನ ಸಿಸಿ ಟಿವಿಯ ಡಿವಿಆರ್‌ಲ್ಲಿ ಹಳೆಯ ಸಿಸಿ ಟಿವಿ ಫೂಟೇಜ್‌ಗಳು ಬಂದ ಕಾರಣ ಏನು ?ಅಧಿಕಾರಿಗಳೇ ನೀವು ಎಷ್ಟು ಸಾಕ್ಷಿ ನಾಶ ಮಾಡಿದ್ದೀರಿ ? ಏಕೆ ಮಾಡಿದ್ದೀರಿ ? ಇಲ್ಲೂ ಕೂಡಾ ಆರೋಪಿ ಸ್ಥಾನದಲ್ಲಿ ಪೊಲೀಸ್ ಅಧಿಕಾರಿಗಳೇ ಇದ್ದಿದ್ದರೆ ಇಷ್ಟು ಬೇಗ ತನಿಖೆ ಆಗುತ್ತಿರಲಿಲ್ಲವೇನೋ ಇಲ್ಲಿ ಗೃಹಸಚಿವರು ಕೂಡಾ ಆರೋಪಿ ಸ್ಥಾನದಲ್ಲಿದ್ದರು. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಕೊಳಕು ರಾಜಕೀಯ ತನ್ನೆಲ್ಲ ತಂತ್ರ ಬಳಸಿ ಏನು ಮಾಡಬೇಕೋ ಅದನ್ನೇ ಮಾಡಿತು.

ಆದರೆ ನ್ಯಾಯ, ಸತ್ಯ ಅಪರಾಧಿಗಳ ಬೆನ್ನು ಬಿಡುವುದಿಲ್ಲ. ಸಿಐಡಿಯಿಂದ ಬಿ ರಿಪೋರ್ಟ್, ಹೈಕೋರ್ಟ್‌ನಲ್ಲಿಯೂ ಖಾಸಗಿ ದೂರು ವಜಾ, ಮಡಿಕೇರಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಗಣಪತಿ ಪುತ್ರ ನೇಹಲ್ ಕೇಸ್ ಮುಂದುವರೆಸಲು ನಿರಾಸಕ್ತಿ ಹೀಗೆ ಇನ್ನೇನು ಈ ಪ್ರಕರಣ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ.  ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ತನಿಖೆಗೆ ಆಗ್ರಹಿಸುವಂತೆ ಗಣಪತಿ ತಂದೆ ಕುಶಾಲಪ್ಪ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕುಶಾಲಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದು, ನ್ಯಾಯಮೂರ್ತಿ ಆನಂದಕುಮಾರ್ ಗೊಯೇಲ್ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಸಿ, ಸಿಬಿಐಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದೆ. ಈಗ ಈ ಎಲ್ಲ ಅಧಿಕಾರಿ, ಸಚಿವರ ನಿದ್ದೆ ಹಾರಿ ಹೋಗಿದೆ. ಸತ್ಯಕ್ಕೆ ಮುಚ್ಚಿದ್ದ ಸುಳ್ಳಿನ ಬಟ್ಟೆ ಜಾರಿ ಹೋಗುತ್ತಿದೆ.

ಇದರ ಜತೆಯಲ್ಲಿ ಸಾವಿನ ಪ್ರಕರಣದ ಸತ್ಯಾಂಶ ಹೊರತರಲು ರಚಿಸಲಾಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅಧ್ಯಕ್ಷತೆಯ ವಿಚಾರಣಾ ಆಯೋಗದ ಮುಂದೆ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ಸಿ.ಎಚ್. ಈಶ್ವರ್ ಪ್ರಸಾದ್ ನೀಡಿರುವ ಹೇಳಿಕೆಯಲ್ಲಿ ಅಧಿಕಾರಿಗಳೂ ಮಾಡಿರುವ ತಪ್ಪುಗಳು ಒಂದೊಂದಾಗಿಯೇ ಬಹಿರಂಗವಾಗಿದೆ.  2016ರ ಜು.7ಕ್ಕೆ ಎಂ.ಕೆ.ಗಣಪತಿ ಶವ ಮಡಿಕೇರಿ ವಿನಾಯಕ ಲಾಡ್ಜ್‌‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಡಿಕೇರಿ ನಗರ ಪೊಲೀಸರು ಸ್ಥಳ ಮಹಜರು ಮಾಡಿ ಸಿಸಿ ಕ್ಯಾಮರಾದ ಡಿವಿಆರ್ ವಶಕ್ಕೆ ಪಡೆದಿದ್ದರು. ಬಳಿಕ ಸರಕಾರದ ನಿರ್ದೇಶನದಂತೆ ತನಿಖೆ ಕೈಗೊಂಡ ಸಿಐಡಿ 2016ರ ಜು.27ಕ್ಕೆ ಡಿವಿಆರ್ ವಶಕ್ಕೆ ಪಡೆದಿತ್ತು. ಈ ವೇಳೆ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಟ್ಟು ವರದಿ ಪಡೆದಿತ್ತು. ನಂತರ ತನಿಖೆ ಪೂರ್ಣಗೊಳಿಸಿ ಕೋರ್ಟ್‌ನಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು. ಆಯೋಗವು ಡಿವಿಆರ್‌ನನ್ನು ಮಡಿವಾಳ ಎಫ್‌ಎಸ್‌ಎಲ್ ಗೆ ರವಾನಿಸಿ ವರದಿ ನೀಡುವಂತೆ ಸೂಚಿಸಿತ್ತು. ಪರೀಕ್ಷೆಗೆ ಯೋಗ್ಯವಾಗಿಲ್ಲವೆಂದು ಎಫ್‌ಎಸ್‌ಎಲ್ ಅಧಿಕಾರಿಗಳು ವರದಿ ನೀಡಿದ್ದರು.ಆಯೋಗವು ಜೂ.30ಕ್ಕೆ ಹೈದರಾಬಾದ್ ಕೇಂದ್ರದ ಎಫ್ ,ಎಸ್‌ಎಲ್‌ಗೂ ಡಿವಿಆರ್ ರವಾನಿಸಿ ವರದಿ ಕೇಳಿತ್ತು.

ಸೆ.7 ಮತ್ತು 8ಕ್ಕೆ ಆಯೋಗದ ಮುಂದೆ ಹಾಜರಾಗಿ ಅಲ್ಲಿನ ವಿಜ್ಞಾನಿ ಈಶ್ವರಪ್ರಸಾದ್ ಹೇಳಿಕೆ ದಾಖಲಿಸಿದಾಗ ರಹಸ್ಯವೊಂದು ಹೊರಬಂದಿತ್ತು. ಲಾಡ್ಜ್‌‌ನಲ್ಲಿ ಜಪ್ತಿ ಮಾಡಿದ ಸಿಸಿ ಕ್ಯಾಮೆರಾ ಡಿವಿಆರ್ 2013ರಲ್ಲಿ ಥಾಯ್ಲೆಂಡ್‌ನಲ್ಲಿ ತಯಾರಾಗಿದೆ. ಇದೇ ಡಿವಿಆರ್‌ನಲ್ಲಿ 1999, 2000, 2003, 2004, 2014 ಮತ್ತು 2015ರಲ್ಲಿ ಚಿತ್ರೀಕರಣದ ತುಣುಕುಗಳೂ ಇದ್ದವು ಎಂದು ಹೇಳಿಕೆ ನೀಡಿದ್ದಾರೆ.  ಹಾಗಾದರೆ 2013ರಲ್ಲಿ ತಯಾರಾದ ಸಿಸಿ ಕ್ಯಾಮರಾ ಡಿವಿಆರ್‌ಲ್ಲಿ 14 ವರ್ಷದ ಹಳೇ ವಿಡಿಯೋ ತುಣುಕುಗಳು ಸಿಕ್ಕಿದ್ದು ಹೇಗೆ ? ಸಾಕ್ಷಿ ನಾಶ ಮಾಡುವಾಗ ಇದೆಲ್ಲ ಅವಾಂತರ ನಡೆದಿರಬೇಕಲ್ಲವೇ ? ಜು.9ರಂದು ಲಾಡ್ಜ್‌‌ನ ಸಿಸಿ ಕ್ಯಾಮೆರಾದ ರೆಕಾರ್ಡ್ ಆದ ವಿಡಿಯೋ ಅದರಲ್ಲಿದೆ. ಉಳಿದಂತೆ 2016ರ ಯಾವುದೇ ವಿಡಿಯೋ ತುಣುಕುಗಳಿಲ್ಲ ! ಇದರಿಂದ ಹಳೆಯ ವಿಡಿಯೋಗಳನ್ನು ಅಳಿಸಿ ಹಾಕಿರುವುದು ಎಫ್,ಎಸ್,ಎಲ್ ಪರೀಕ್ಷೆಯಲ್ಲಿ ದೃಢವಾಗಿದೆ.

ಸದ್ಯಕ್ಕೆ ಆಯೋಗವು ಮಡಿಕೇರಿ ಟೌನ್ ಠಾಣೆ ಇನಸ್ಪೆಕ್ಟರ್ ಮೆದಪ್ಪ, ಕೊಡಗು ಜಿಲ್ಲೆ ಎಸ್ ಪಿ, ರಾಜೇಂದ್ರಪ್ಪ ಹಾಗೂ ಸಿಐಡಿ ತನಿಖಾಧಿಕಾರಿ ಡಿವೈಎಸ್ಪಿ ಶ್ರೀಧರ್‌ಗೆ ಸೆ.25ಕ್ಕೆ ಆಯೋಗದ ಕೋರ್ಟಿಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್ ನೀಡಿದೆ. ನಿಜವಾಗಿ ನೋಟಿಸ್ ಪಡೆಯಬೇಕಾಗಿದ್ದವರು ಅಧಿಕಾರ ಅನುಭವಿಸಿಕೊಂಡು ಹಾಯಾಗಿದ್ದಾರೆ. ದೊಡ್ಡ ಮೀನುಗಳು ಬಲೆಗೆ ಬೀಳಲು ಸಿಬಿಐ ಬಲೆ ಹಿಡಿದುಕೊಂಡು ಬರಬೇಕಷ್ಟೇ.  ಗಣಪತಿ ಅವರು ಮಂಗಳೂರು ಚರ್ಚ್ ದಾಳಿ ವೇಳೆ, ಇನ್ನೊಮ್ಮೆ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ್ದ ಡಿವೈಎಫ್‌ಐ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದರು. ಆದ್ದರಿಂದ ಗಣಪತಿ ಕೋಮುವಾದಿ, ಸಂಘ ಪರಿವಾರ ಎಂದು ಪ್ರಗತಿ ಪರ ಎನ್ನುವ ಒಂದು ವರ್ಗ ಅಪಪ್ರಚಾರ ನಡೆಸಿಕೊಂಡು ಬಂದಿತ್ತು. ಆದರೆ ಗಣಪತಿ ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಆಗಿದ್ದರು. ಒಂದುವೇಳೆ ಕೋಮುವಾದಿಯೇ ಆಗಿದ್ದರೆ ಶಾಸಕ ಯು.ಟಿ.ಖಾದರ್ 2003ರಲ್ಲಿ ಉಳ್ಳಾಲ ಉದ್ವಿಗ್ನವಾಗಿದ್ದಾಗ ಗಣಪತಿ ಅವರನ್ನು ವಾಪಸ್ ಉಳ್ಳಾಲಕ್ಕೆ ಕರೆಸಿಕೊಳ್ಳುತ್ತಿದ್ದರೇ? 2005ರಲ್ಲಿ ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಬೊಳಿಯಾರ್ ಅನುಮತಿ ಪಡೆಯದೆ ಮೆರವಣಿಗೆ ಮಾಡಿದಾಗ ಗಣಪತಿ ಬಂಧಿಸಿದ್ದರು. ಸಂಘಪರಿವಾರದ ಪಕ್ಷ ಪಾತಿಯಾಗಿದ್ದರೆ ಇದು ಸಾಧ್ಯವಿತ್ತೇ ?

ಸತತ ಕೋಮು ಗಲಭೆಗಳು ನಡೆದ ಉಳ್ಳಾಲದಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಜನಪ್ರತಿನಿಧಿಗಳ (ಕಾಂಗ್ರೆಸ್) ಬೇಡಿಕೆ ಮೇರೆಗೆ ಮೂರುವರೆ ವರ್ಷ ಕರ್ತವ್ಯ ನಿರ್ವಹಿಸಿದ್ದರು. ಯಶವಂತ ಪುರದಲ್ಲಿ ರೌಡಿ ಮಚ್ಚು ಝಳಪಿಸುವಾಗ ಕೈಗೆ ಗಾಯವಾಗಿದ್ದರೂ ಬೆದರದೆ ಎನ್‌ಕೌಂಟನರ್‌ನಲ್ಲಿ ಮುಗಿಸಿದ್ದರು. ಚರ್ಚ್ ಗಲಾಟೆ ಸಂದರ್ಭ ಉದ್ರಿಕ್ತರು ಕಲ್ಲು ಎಸೆಯುತ್ತಿದ್ದರೂ ಬೆದರದೆ ಮುನ್ನುಗ್ಗುತ್ತಿದ್ದ ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿ ವ್ಯವಸ್ಥೆಗೆ ಬೆದರಿ ಹೇಡಿಯಂತೆ ಆತ್ಮ ಹತ್ಯೆ ಮಾಡಿಕೊಂಡರೇ ? ಅಂತಹ ಪರಿಸ್ಥಿತಿ ನಿರ್ಮಿಸಿದರೇ ಅಥವಾ ಇದು ಮಾನವೀಯತೆಯ ಕಗ್ಗೊಲೆಯೇ ? ಸಿಬಿಐ ಈ ಸತ್ಯವನ್ನು ಹೊರ ತರಬಹುದು ಎಂಬ ನಿರೀಕ್ಷೆ ಕರ್ನಾಟಕದ ಜನರದ್ದು. ಈಗ ಗೌರಿ ಲಂಕೇಶ್ ಕೊಲೆ ಕುರಿತು ಐಜಿಪಿ ಕಚೇರಿ ಯಾಂಕ್ ಅಧಿಕಾರಿ, 3 ಐಪಿಎಸ್, 20 ಇನ್ಸ್‌‌ಪೆಕ್ಟರ್ ಸೇರಿ ಹತ್ತು ತಂಡ ತನಿಖೆ ನಡೆಸುತ್ತಿದೆ. ಒಳ್ಳೆಯದೇ ಆದರೆ ಗಣಪತಿಯಂಥ ಹಿರಿಯ ಪೊಲೀಸ್ ಅಧಿಕಾರಿಯ ತನಿಖೆಯನ್ನು ಮುಚ್ಚಿ ಹಾಕುವ ರೀತಿಯಲ್ಲಿ ಹುನ್ನಾರ ನಡೆಸಿದ್ದು ಸರಿಯೇ ? ಒಂದು ವೇಳೆ ಗೌರಿ ಕೊಲೆ ಪ್ರಕರಣದಲ್ಲಿ ಆರೋಪಿಗಳು ಸಿಕ್ಕಿದರೆ, ಅವರು ಸರಕಾರ ನಿರೀಕ್ಷಿಸುತ್ತಿರುವ ಸಂಘಟನೆಯವರು ಆಗದಿದ್ದರೆ ಇಲ್ಲೂ ಸಾಕ್ಷಿ ನಾಶ ನಡೆಯುವ ಸಾಧ್ಯತೆ ಇರಬಹುದೇ ? ಸಮಾಜ ಸೇವೆಯ ಹೆಸರಲ್ಲಿ ರಾಜಕಾರಣಿಗಳು ಡಕಾಯಿತಿ ಮಾಡುತ್ತಿದ್ದಾರೆ. ಇದು ಪೊಲೀಸ್ ಅಧಿಕಾರಿ ಶಂಕರ ಬಿದರಿ ಹಿಂದೊಮ್ಮೆ ಫೇಸ್‌ಬುಕ್‌ನಲ್ಲಿ ಹಾಕಿಕೊಂಡ ಸ್ಟೇಟಸ್ ಇದನ್ನೆಲ್ಲಾ ನೋಡುವಾಗ ನಿಜವೇ ಇರಬಹುದು ಎಂಬ ಭಾವನೆ ಬಾರದೆ ಇರದು.

-ಜಿತೇಂದ್ರ ಕುಂದೇಶ್ವರ, ಮಂಗಳೂರು

Leave a Reply

Your email address will not be published. Required fields are marked *

eight − eight =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top