ಜಪಾನ್‌ನಲ್ಲಿ ಹೊಸ ಬೇಗುದಿ, ತಾಯ್ತನಕ್ಕೂ ಬೇಕು ಸಂಸ್ಥೆ ಮಾಲೀಕನ ಒಪ್ಪಿಗೆ

Posted In : ಸಂಗಮ, ಸಂಪುಟ

ವಿದೇಶ: ವಿ.ಎನ್‌. ವೆಂಕಟಲಕ್ಷ್ಮಿ

ಮಹಿಳೆಯರಿಗೆ ಮನೆ ಹಾಗೂ ಉದ್ಯೋಗ ಎರಡನ್ನೂ ಸಂಭಾಳಿಸಿಕೊಂಡು ಹೋಗುವುದು ಕಷ್ಟ ಎಂಬ ಭಾವನೆ ನಮ್ಮಲ್ಲಿದೆ. ಅದು ಭಾವನೆಯಷ್ಟೇ ಅಲ್ಲ, ವಾಸ್ತವ ಕಾರಣ ನಮ್ಮ ಸಮಾಜ ಹೆಣ್ಣು ಮನೆ ಹಾಗೂ ಮಕ್ಕಳನ್ನು ನೋಡಿಕೊಂಡಿರಲಿ ಸಾಕು. ಅವರೇಕೆ ದುಡಿಯಬೇಕು ಎಂಬ ಧೋರಣೆ ಹೊಂದಿದೆ. ಇಷ್ಟಾದರೂ ಹೆಣ್ಣು ಮಕ್ಕಳು ದುಡಿಯಬೇಕೆಂದರೆ ಅವರು ಎರಡನ್ನೂ ನಿಭಾಯಿಸಿಕೊಂಡು ಹೋಗಲೇಬೇಕೆಂದು ನಿರೀಕ್ಷಿಸುತ್ತಾರೆ. ಮಕ್ಕಳು, ಅಡುಗೆ, ಮನೆಯಲ್ಲಿ ಹಿರಿಯರಿದ್ದರೆ ಅವರ ಆರೈಕೆ, ಮನೆ ಕೆಲಸ ಇವಿಷ್ಟನ್ನು ಮುಗಿಸಿಯೇ ಆಕೆ ಉದ್ಯೋಗ ಮಾಡಬೇಕು. ಈ ವಿಚಾರದಲ್ಲಿ ಯಾವುದೇ ಹೊಂದಾಣಿಕೆಯಿಲ್ಲ. ಇಷ್ಟು ಮಾಡಲಾಗದಿದ್ದರೆ, ಕೆಲಸ ಬಿಡಬೇಕು. ಯಾರೂ ಆಕೆಯ ಬೆಂಬಲಕ್ಕೆ ನಿಲ್ಲುವುದಿಲ್ಲ.

ಇದು ಸಮಾಜದ ಮನಸ್ಥಿತಿ. ಹೆಣ್ಣು ಬೇರೆ ಬೇರೆ ಕ್ಷೇತ್ರಗಳಲ್ಲಿ ಇಷ್ಟೆಲ್ಲ ಸಾಧಿಸಿದ ಮೇಲೂ ಈ ಮನೋಭಾವದಲ್ಲಿ ಏನೂ ಬದಲಾವಣೆ ಬಂದಿಲ್ಲ. ಇದು ನಮ್ಮ ದೇಶದ ಸ್ಥಿತಿಯಾದರೆ, ಜಪಾನಿನಲ್ಲಿ ಇದು ಇನ್ನೊಂದು ಅತಿರೇಕ ತಲುಪಿದೆ. ಅಲ್ಲಿನ ಉದ್ಯೋಗಸ್ಥ ಮಹಿಳೆಯರು ಬಯಸಿದಾಗ ಬಸುರಿಯಾಗುವ ಅವಕಾಶವೂ ಇಲ್ಲ. ಜಪಾನಿನಂಥ ಮುಂದುವರಿದ ದೇಶದಲ್ಲಿ ಹೀಗಾ ? ಹಾಗಾದರೆ ಏನು ನಡೆಯುತ್ತಿದೆ ಜಪಾನಿನಲ್ಲಿ?

ಸಯಾಕೋ ಎರಡನೇ ಮಗುವಿಗಾಗಿ ಕಳೆದ ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಾಳೆ. ಆದರೆ ‘ನಿಮ್ಮ ಸರದಿ ಅದನ್ನು ಕೈಬಿಡುವುದು ಒಳ್ಳೆಯದು’ ಎಂದು ಆಕೆ ಕೆಲಸಮಾಡುವ ‘ಡೇ ಕೇರ್ ಸೆಂಟರ್’ನ ಮಾಲೀಕ ಸಲಹೆ ನೀಡುತ್ತಾನೆ. ಇದು ಸಯಾಕೋಗೆ ಆಘಾತದಂತೆ ಬಂದೆರಗುತ್ತದೆ. ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರು ‘ರೋಸ್ಟರ್’ ಅನುಸರಿಸಿ ಸರದಿಯಲ್ಲಿ ಗರ್ಭಿಣಿಯರಾಗಬೇಕು, ಸರದಿ ಮೀರಿ ಮಗುವನ್ನು ಪಡೆಯಲು ಅವರು ಮುಂದಾದರೆ ಕಂಪನಿ ವಹಿವಾಟಿಗೆ ಧಕ್ಕೆ ಎಂದು ಯೋಚಿಸುವ ವ್ಯವಸ್ಥಾಪಕರು ಈ ಬಗೆಯ ನಿರ್ಬಂಧ ವಿಧಿಸುವುದು ಜಪಾನ್‌ನಲ್ಲಿ ಈಗ ಸಾಮಾನ್ಯವಾಗಿದೆ.

35 ವರ್ಷದ ಸಯಾಕೋಗೆ ತನ್ನ ಬಾಸ್ ಅಲಿಖಿತ ನೀತಿ ಪಾಲಿಸುತ್ತಾನೆ ಎಂಬುದು ತಿಳಿದಾಗ ಆದ ಆಶ್ಚರ್ಯ, ಆಘಾತ ಅಷ್ಟಿಷ್ಟಲ್ಲ. ‘ನಾನು ಸಂತಾನ ಪರಿಣತ ವೈದ್ಯರನ್ನು ಇದಕ್ಕಾಗಿ ಸಂಪರ್ಕಿಸುತ್ತಿದ್ದುದು ಅವರಿಗೆ ಗೊತ್ತಿತ್ತು.ಆದರೂ ಇಂತಹದೊಂದು ಸಲಹೆ ನೀಡುತ್ತಾರೆ ಎಂದರೆ’ ಎಂದು ದಿಗ್ಭ್ರಮೆಗೊಂಡ ಆಕೆ ಆ ಕೆಲಸ ಬಿಟ್ಟು ಬೇರೆ ಕಡೆ ಸೇರಿಕೊಂಡರು; ಮಗುವನ್ನೂ ಪಡೆದರು.

ಆದರೆ ಗರ್ಭಿಣಿಯಾಗಲು ‘ರೋಟಾ’ ಪಾಲಿಸಬೇಕು’ ಎಂಬ ವಿಷಯ ಇದೇ ವರ್ಷದ ಆರಂಭದಲ್ಲಿ ದೇಶದೆಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸರದಿ ಉಲ್ಲಂಘಿಸಿ ಗರ್ಭಿಣಿಯಾಗಿದ್ದಕ್ಕೆ ತನ್ನ ಅನುಭವಿಸಬೇಕಾದುದನ್ನು ಒಬ್ಬ ಪತಿ ಪತ್ರಿಕೆಯೊಂದರಲ್ಲಿ ಪ್ರಕಟಿಸಿದಾಗ. ನಾವಿಬ್ಬರೂ ಪತ್ನಿಯ ಮೇಲಧಿಕಾರಿಯನ್ನು ಕಂಡು ಹೀಗಾಗಿದ್ದಕ್ಕೆ ಕ್ಷಮಿಸಿ ಎಂದು ಮನವಿ ಮಾಡಿಕೊಂಡರೆ, ‘ನನ್ನನ್ನು ಕೇಳದೆ, ನಿಯಮಬಾಹಿರವಾಗಿ ವರ್ತಿಸಲು ನಿಮಗೆಷ್ಟು ಧೈರ್ಯ?’ ಎಂದು ಆತ ಕೂಗಾಡಿದ್ದ ಎಂದುಹೆಸರಾಂತ ಪತ್ರಿಕೆಗೆ ಬರೆದ ಪತ್ರದಲ್ಲಿ ಪತಿ ತಿಳಿಸಿದ್ದ. ಎಂಥ ವಿಚಿತ್ರ ಮನಸ್ಥಿತಿಯಿದು ನೋಡಿ. ಇದರಲ್ಲಿ ನಿಯಮಬಾಹಿರವಾಗಿದ್ದು ಏನಿದೆ?

ಇಳಿಮುಖವಾಗುತ್ತಿರುವ ಜನಸಂಖ್ಯೆ ಜಪಾನಿನಲ್ಲಿ ಕಾರ್ಮಿಕರ ಕೊರತೆ ಉಂಟುಮಾಡಿದೆ.ಇದರಿಂದಾಗಿ ತಮ್ಮಲ್ಲಿ ನೇಮಕಗೊಂಡ ನೌಕರರು ದೀರ್ಘ ಗಂಟೆಗಳ ಕಾಲ ಕೆಲಸ ಮಾಲೀಕರು ಅಪೇಕ್ಷಿಸುತ್ತಾರೆ. ಮನೆ ನಿರ್ವಹಣೆ, ಮಕ್ಕಳನ್ನು ಪೋಷಿಸುವುದು ಇಂದಿಗೂ ಮಹಿಳೆಯರ ಜವಾಬ್ದಾರಿಯೇ ಆಗಿರುವ ಜಪಾನೀ ಸಮಾಜದಲ್ಲಿ ಉದ್ಯೋಗ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುವುದು ಮಹಿಳೆಯರಿಗೆ ಕಷ್ಟ. ಹೀಗಾಗಿ ಮಕ್ಕಳನ್ನು ಹೊಂದಬೇಕೆಂದರೆ ಕೆಲಸ ಬಿಡುವುದು ಅಥವಾ ಕುಟುಂಬ ಬೆಳೆಸುವುದನ್ನು ತ್ಯಾಗ ಮಾಡಿ ನೌಕರಿ ಉಳಿಸಿಕೊಂಡು ಬಡ್ತಿ ಗಳಿಸಿಕೊಳ್ಳಬೇಕಾಗಿದೆ.

ಪ್ರಯಾಸದಿಂದ ದೊರಕಿದ ಉದ್ಯೋಗಿಗಳು ಮಹಿಳೆಯರಾಗಿದ್ದಾಗ, ಅವರು ಸರದಿಯನ್ನು ಮೀರಿ ಗರ್ಭಿಣಿಯರಾದರೆ, ಕುಟುಂಬಕ್ಕೆ ಪೂರ್ಣ ಸಮಯ ನೀಡಲು ಕೆಲಸ ಬಿಡುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಈ ರೀತಿ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಾರೆ ಎನ್ನುತ್ತಾರೆ, ಕನಾಕೊ ಅಮಾನೊ ಎಂಬ ಒಬ್ಬ ಸಂಶೋಧನಾರ್ಥಿ. ಕೆಲಸ ಉಳಿಸಿಕೊಳ್ಳಬೇಕು ಎಂದರೆ ಸರದಿಯ ಪ್ರಕಾರವೇ ಗರ್ಭಿಣಿಯಾಗಬೇಕು ಎಂಬುದು ಅವರ ಧೋರಣೆ ಎಂದಾಕೆ ವಿವರಿಸುತ್ತಾರೆ. ಉದ್ಯೋಗಿಗಳಲ್ಲಿ ಇಬ್ಬರು ಮೂವರು ಒಟ್ಟೊಟ್ಟಿಗೆ ಗರ್ಭಿಣಿಯರಾಗಿ ಬಿಟ್ಟರೆ ಕಂಪನಿ ನಡೆಸುವುದು ಕಷ್ಟ. ಹೊಸ ಕೆಲಸದವರು ಸಿಗುವುದೂ ಕಷ್ಟ. ಹೀಗಾಗಿ ತಾಯ್ತನವನ್ನೂ ಉದ್ಯೋಗದಾತನ ಆಣತಿ ಮೇರೆಗೇ ಹೊಂದಬೇಕಾದ ಅನಿವಾರ್ಯತೆ.

ಕಿರಿಯ ವಯಸ್ಸಿನ ಮಹಿಳೆಯರನ್ನು ನೇಮಿಸಿಕೊಳ್ಳುವ ಉದ್ಯೋಗ ವಲಯಗಳಲ್ಲಿ ‘ಪ್ರೆಗ್ನೆನ್ಸಿ ಒಂದು ಮಾಮೂಲಿ ಪದ್ಧತಿಯಾಗಿಬಿಟ್ಟಿದೆ ಎನ್ನುತ್ತಾಳೆ ಜಪಾನಿ ಮಹಿಳೆ ಅಮಾನೊ. ‘ಇದು ಅನ್ಯಾಯ ಎಂದು ಕೂಡ ಅನೇಕರಿಗೆ ಅರ್ಥವಾಗುವುದಿಲ್ಲ, ಬದಲಾಗಿ ಹೆರಿಗೆ ರಜೆ ತೆಗೆದುಕೊಳ್ಳುವಾಗ ತಪ್ಪಿತಸ್ಥ ಭಾವನೆ ಅನುಭವಿಸುತ್ತಾರೆ’ ಎನ್ನುತ್ತಾರೆ. ಗರ್ಭಿಣಿಯಾಗಲು ಮಹಿಳಾ ಉದ್ಯೋಗಿಗಳು ಅವರಿಗೆ ಬೇಕಾದಾಗ ಮುಂದಾಗುವುದು ಕಾರ್ಮಿಕ ಕೊರತೆ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುವುದು ಉದ್ಯೋಗದಾತರ ವಾದವಾದರೂ ಹೀಗೆ ಸರದಿ ಯಾದಿ ಸೃಷ್ಟಿಸುವ ಮೂಲಕ ಅವರು ಜನಸಂಖ್ಯೆಯನ್ನು ಇನ್ನಷ್ಟು ಕ್ಷೀಣಿಸುವಂತೆ ಮಾಡಿ ತಮ್ಮ ಸಮಸ್ಯೆಯನ್ನುಉಲ್ಬಣಗೊಳಿಸಿಕೊಳ್ಳುತ್ತಿದ್ದಾರೆ ಎಂದು ಅಮಾನೊ
ಸಂತಾನಹೊಂದುವ ಅಪೇಕ್ಷೆ ಹೊಂದಿರುವ ದಂಪತಿಯನ್ನು ‘ಪ್ರೆಗ್ನೆನ್ಸಿ ಸರತಿ ಸಾಲಿ’ನಲ್ಲಿ ನಿಲ್ಲಿಸುವುದು ಕಾನೂನು ಬಾಹಿರ ಎಂದು ಪರಿಣತರು ಅಭಿಪ್ರಾಯಪಟ್ಟರೆ ಅದು ಅನಿವಾರ್ಯವಾಗಿದೆ ಎನ್ನುತ್ತಾರೆ, ಟೋಕಿಯೋದ ಶಿಶು ಆರೋಗ್ಯ ಹಾಗೂ ಶಿಕ್ಷಣ ಸಂಶೋಧನಾ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿಯಾಗಿರುವ ನವೋಲಿ ಸಕಸಾಯ್.

ವಿಶೇಷವಾಗಿ ನರ್ಸರಿ ಹಾಗೂ ಆಸ್ಪತ್ರೆಗಳಲ್ಲಿ ಉದ್ಯೋಗಿಗಳ ಕೊರತೆ ಉಂಟಾಗುವುದನ್ನು ತಡೆಗಟ್ಟಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದವರು ತಿಳಿಸುತ್ತಾರೆ. ಈ ನಿಯಮ ಲಿಖಿತವಾಗಿರಬಹುದು ಅಥವಾ ಇಲ್ಲದಿರಬಹುದು ಆದರೆ ಕೆಲಸಗಾರರ ಮನಸ್ಸಿನಲ್ಲಿಯಂತೂ ಇರುತ್ತದೆ ಸಕಾಯ್ ಹೇಳಿಕೆ. ಕೆಲ ಮಹಿಳೆಯರಿಗೆ ಈ ನೀತಿ ಅಪಥ್ಯವೇನೂ ಅಲ್ಲವಾದರೂ ನವ ವಿವಾಹಿತರಾಗಿರಲೀ ಅಥವಾ ಮದುವೆಯಾಗಿ ಒಂದಷ್ಟು ವರ್ಷ ಕಳೆದಿರಲೀ ಯಾರನ್ನಾದರೂ ಗರ್ಭಿಣಿಯರಾಗಲು ಅವಸರಿಸಿ ಒತ್ತಡ ಸೃಷ್ಟಿಸುವ ಪರಿಣಾಮ ಇದರಿಂದ ಉಂಟಾಗುತ್ತಿದೆ.ಹಾಗೆಯೇ ತಾಯ್ತನ ಹೊಂದದಿರುವಂತೆ ನಿರಾಕರಿಸುವುದು ಕೂಡ ಮನಸ್ಸಿನ ಮೇಲೆ ಅಗಾಧ ಒತ್ತಡ ಸೃಷ್ಟಿಸುತ್ತಿದೆ.

ಜಿ-7 ರಾಷ್ಟ್ರಗಳ ಪಟ್ಟಿಯಲ್ಲಿ ರಾಜಕೀಯ ಹಾಗೂ ವ್ಯಾಪಾರ-ಉದ್ದಿಮೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಅತಿ ಕಡಿಮೆ ಇರುವ ಕೊನೆಯ ಸ್ಥಾನ ಜಪಾನ್‌ಗೆ. ಉದ್ಯೋಗ ಸ್ಥಳದಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳಲ್ಲಿ ಈಗ ಸರದಿಯ ಪ್ರಕಾರ ಗರ್ಭಿಣಿಯರಾಗಬೇಕಾದ ಈ ನಿರ್ಬಂಧವೂ ಸೇರಿಕೊಂಡಿದೆ. ಉದ್ಯೋಗ ವಲಯಗಳಲ್ಲಿ ವರಿಷ್ಠ ಸ್ಥಾನ ಗಳಿಸಿರುವ ಮಹಿಳೆಯರು ಬೆರಳೆಣಿಕೆಯಷ್ಟು ಇರುವುದರಿಂದ ಉದ್ಯೋಗಸ್ಥ ಮಹಿಳೆಯರಿಗೆ ಯಾವ ‘ಆದರ್ಶ ಮಾದರಿ’ಯೂ ಇಲ್ಲ. ಮಕ್ಕಳನ್ನು ಪಡೆದ ಮೇಲೆ ನೌಕರಿಯಲ್ಲಿರುವ ಮಹಿಳೆಯರು ತಾರತಮ್ಯಕ್ಕೂ ಒಳಗಾಗುತ್ತಾರೆ. ಇದರಿಂದಾಗಿ ಉದ್ಯೋಗಸ್ಥ ಮಹಿಳೆಯರು ಮಗು ಪಡೆಯುವುದೇ ಅಪರಾಧ ಭಾವನೆ ಅವರಲ್ಲಿ ಮೂಡಿಸಿದಂತಾಗುತ್ತದೆ.

ಹೆರಿಗೆ ರಜೆ ಪೂರೈಸಿ ತನ್ನ ನರ್ಸಿಂಗ್ ವೃತ್ತಿಗೆ ಮರಳಿದಾಗ ಅನೇಕ ಸಂಗತಿಗಳು ನಿರಾಸೆ ಮಾಯು(ಕಲ್ಪಿತ ಹೆಸರು) ಮಹಿಳೆ ಹೇಳುತ್ತಾರೆ. ತಮ್ಮ ಬಡ್ತಿಗೆ ಸಹಾಯಕವಾಗುವ ವೃತ್ತಿಪರ ತರಬೇತಿಯೊಂದಕ್ಕೆ ತಮ್ಮನ್ನು ಕಳುಹಿಸುವಂತೆ ಮೇಲಧಿಕಾರಿಣಿಗೆ ಮನವಿ ಮಾಡಿಕೊಂಡರೆ, ‘ಹೆರಿಗೆ ರಜೆ ತೆಗೆದುಕೊಂಡು ಕಡಿಮೆ ಗಂಟೆಗಳು ಕೆಲಸ ಮಾಡಿದ್ದು ಸಾಲದೇ? ಇನ್ನೂ ಎಷ್ಟು ಉಪಕಾರ ಬಯಸುತ್ತೀರಿ ನೀವು?’ ಎಂದು ಬಯ್ಗಳು ತಿನ್ನಬೇಕಾಯಿತು ಎನ್ನುತ್ತಾರೆ. ಕಳೆದ ಐದು ವರ್ಷಗಳಲ್ಲಿ ಮೂವರು ಬಾಸ್‌ಗಳು ನನಗೆ ಇದೇ ಬಗೆಯ ಉತ್ತರ ನೀಡಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಇವನ್ನೆಲ್ಲ ನೋಡಿದಾಗ ಇಲ್ಲಿ ಮಾನವೀಯತೆಯೇ ಸತ್ತು ಅನ್ನಿಸದಿರದು.

ಜಪಾನೀ ಭಾಷೆಯ ಪದಪುಂಜ ‘ಮೆಶಿ ಬವ್‌ಕೌ’ ಅರ್ಥವೆಂದರೆ ‘ಸೇವೆಗಾಗಿ ಖಾಸಗಿ ಜೀವನವನ್ನು ಬಲಿ ಕೊಡುವುದು’ ಎಂದು ಉಲ್ಲೇಖಿಸುತ್ತಾರೆ ಮಾಯು. ಇದನ್ನು ಅತಿಗೆ ಕೊಂಡೊಯ್ದ ಕಾರ್ಯನಿರ್ವಹಿಸುವಿಕೆ ಅಥವಾ ‘ವರ್ಕ್ ಕಲ್ಚರ್’ ಸದ್ಯದ ಸನ್ನಿವೇಶದಲ್ಲಿ ವ್ಯಾಪಿಸಿರುವುದು ಈ ಎಲ್ಲಾ ಕೆಡುಕಿಗೂ ಮೂಲವಾಗಿ ತೋರುತ್ತಿದೆ. ಅಲ್ಲಿನ ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗಸ್ಥರಾಗಲು ಬಯಸುತ್ತಿರುವುದು, ಜನಸಂಖ್ಯೆಯಲ್ಲಿ ಕಡಿತ, ಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಇಳಿತ, ವೃದ್ಧರ ಸಂಖ್ಯೆಯಯಲ್ಲಿ ಹೆಚ್ಚಳ ಇವು ಕೂಡ ಇಂಥದೊಂದು ಅಮಾನವೀಯ ಕಾರಣವಾಗಿದೆ. ಏನೇ ಅದಲ್ಲದೆ ಸಾಮಾಜಿಕ ವ್ಯವಸ್ಥೆಯೂ ತನ್ನದೇ ಆದ ಕೊಡುಗೆ ನೀಡುತ್ತಿದೆ. ಏನೇ ಆದರೂ ತಾಯ್ತನ ಹೊಂದುವುದಕ್ಕೂ ಕಂಪನಿಯ ಮಾಲೀಕನ ಒಪ್ಪಿಗೆಗೆ ಕಾಯುವುದು ನಿಜಕ್ಕೂ ಹೇಯ. ಅದರಲ್ಲೂ ಮಗು ಪಡೆಯಲು ಸರತಿಗಾಗಿ ಕಾಯುತ್ತಾ, ಸರತಿ ಬಂದಾಗ ಇತರರಿಂದ ಒತ್ತಡಕ್ಕೆ ಒಳಗಾಗುವುದು ಆಧುನಿಕ ಜೀವನದ ಇನ್ನೊಂದು ದುರಂತ ಎನ್ನಬಹುದು.

Leave a Reply

Your email address will not be published. Required fields are marked *

one × five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top