ಓ ಹೆಂಗಸರೇ ನೀವೇಕೆ ಇಷ್ಟು ಕೆಟ್ಟವರು?

Posted In : ಅಂಕಣಗಳು, ಪ್ರಥಮ ಪೂಜೆ

indian-woman

ಪ್ರಕರಣ 1: ಮೈತ್ರಿಯಾ ಗೌಡ ಎಂಬ ನಟಿ ಕೇಂದ್ರ ಸಚಿವ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಅದೂ ಯಾವತ್ತು? 2014ರಲ್ಲಿ ಕಾರ್ತಿಕ್ ಗೌಡನ ನಿಶ್ಚಿತಾರ್ಥದ ದಿನವೇ ಆಕೆ ಮಾಧ್ಯಮಗಳೆದುರು ಕಾರ್ತಿಕ್ ಗೌಡನಿಗೂ ನನಗೂ ಮದುವೆಯಾಗಿದೆ ಎಂದಿದ್ದಳು. ಯಾಕೆ ದೂರು ಕೊಟ್ಟಿಲ್ಲ ಎಂಬ ಪ್ರಶ್ನೆ ಉದ್ಭವಿಸಿದ ನಂತರ ಪೊಲೀಸ್ ಠಾಣೆಗೆ ಹೋಗಿ ಅತ್ಯಾಚಾರ ದೂರು ನೀಡಿದ್ದಳು.
ಸಾಕಷ್ಟು ಗದ್ದಲ, ಗಲಾಟೆಗಳೆಲ್ಲ ನಡೆದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೂ ಏರಿತು. ಈಗ ನ್ಯಾಾಯಾಲಯ ಇದು ಅತ್ಯಾಚಾರವಾಗಲು ಸಾಧ್ಯವಿಲ್ಲ. ಇಬ್ಬರೂ ಇಷ್ಟಪಟ್ಟು ಓಡಾಡಿದ್ದಾರೆ. ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೀಗಿರುವಾಗ ಅತ್ಯಾಚಾರ ಹೇಗಾಗಲು ಸಾಧ್ಯ? ಇನ್ನು ಮದುವೆಯಾಗುತ್ತೇನೆಂದು ನಂಬಿಸಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಲ್ಲ. ಹೆಚ್ಚೆಂದರೆ ಅದು ಮೋಸವಾಗಬಹುದು. ಆದರೆ ಆಕೆ ಅಷ್ಟು ಸುಲಭಕ್ಕೆ ಮೋಸ ಹೋಗುವಷ್ಟು ಅಶಿಕ್ಷಿತಳಲ್ಲ. ಅಷ್ಟು ಅಗತ್ಯವಿದ್ದರೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಎಂದು ಹೇಳಿರುವ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣ 2: ಬೆಂಗಳೂರಿನ ಇಸ್ಕಾನ್‌ನಲ್ಲಿರುವ ಪ್ರಮುಖ ವ್ಯಕ್ತಿಯೊಬ್ಬರ ವಿರುದ್ಧ ಒಬ್ಬಳು ಯುವತಿ ಅತ್ಯಾಚಾರ ದೂರು ನೀಡಿದ್ದಾಳೆ. ಈಕೆ ಅದಕ್ಕೂ ಮೊದಲು ಅವರನ್ನು ಮದುವೆಯಾಗುವಂತೆ ಗೋಗರೆದಿದ್ದಳು. ಅವರು ಒಪ್ಪದಿದ್ದಾಗ ಮಹಿಳಾ ಆಯೋಗ, ಮುಖ್ಯಮಂತ್ರಿ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದಳು. ಅದ್ಯಾವುದೂ ಫಲ ನೀಡದಿದ್ದಾಗ ಆಕೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಳು. ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಕೂಡ ಸಲ್ಲಿಸಿದ್ದರು. ಇಷ್ಟಕ್ಕೇ ಸುಮ್ಮನಾಗದ ಆಕೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾಳೆ. ಅದಕ್ಕೀಗ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣ 3: ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧ ಒಬ್ಬಳು ಯುವತಿ 2014ರಲ್ಲಿ ದೂರು ದಾಖಲಿಸಿದ್ದಳು. ಅದರ ನಂತರ ಒಮ್ಮೆ ಮಾತ್ರ ಆಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾಳೆ. ಅದರ ನಂತರ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದರೂ ಆಕೆ ಹಾಜರಾಗಿಲ್ಲ. ಅಲ್ಲದೆ 2003ರಲ್ಲಿ ನಡೆದ ಅತ್ಯಾಚಾರಕ್ಕೆ ಆಕೆ 9 ವರ್ಷದ ನಂತರ ದೂರು ದಾಖಲಿಸಿದ್ದಾಳೆ. ಸ್ವಾಮೀಜಿ ವಿರುದ್ಧ ಪ್ರೇಮಲತಾ ದಿವಾಕರ ನೀಡಿದ್ದ ದೂರಿಗೆ ಸಂಬಂಧಿಸಿದಂತೆ 2013ರಲ್ಲಿ ಈಕೆ ಸಿಐಡಿಯಲ್ಲಿ ವಿಚಾರಣೆಗೆ ಹಾಜರಾಗಿ, ಹೇಳಿಕೆ ನೀಡಿದ್ದಾಳೆ. ಆದರೆ ಅಲ್ಲೆಲ್ಲೂ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿಲ್ಲ. ಈಗ ದೂರು ದಾಖಲಾಗಿ ಎರಡು ವರ್ಷವಾಗಿದೆ, ಪ್ರಕರಣ ಒಂದಿಂಚೂ ಮುಂದೆ ಹೋಗಿಲ್ಲ.
ಪ್ರಕರಣ 4: ಇದು ತಾಜಾ ಪ್ರಕರಣ. ಸಚಿವ ಎಚ್.ವೈ. ಮೇಟಿ ಮತ್ತು ಇನ್ನೊಬ್ಬ ಮಹಿಳೆಯ ಲೈಂಗಿಕ ಸಂಬಂಧದ ಸಿಡಿ ಬಹಿರಂಗವಾಗಿತ್ತು. ಅದೆಲ್ಲ ಆದ ನಂತರ ಈಗ ಆ ಮಹಿಳೆ ಮೇಟಿಯವರನ್ನು ಬಿಟ್ಟು ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಮೂವರ ವಿರುದ್ಧ ಅಪಹರಣ, ವಸ್ತ್ರಾಪಹರಣ, ಅತ್ಯಾಚಾರ ದೂರು ದಾಖಲಿಸಿದ್ದಾಳೆ.
ವಿಚಿತ್ರವೆಂದರೆ ಸಿಡಿ ಹೊರಬರುತ್ತದೆ ಎಂದು ದೊಡ್ಡ ಸುದ್ದಿಯಾದಾಗ ಪತ್ರಿಕಾಗೋಷ್ಠಿ ನಡೆಸಿದ್ದ ಈಕೆ ಇದ್ಯಾವುದನ್ನೂ ಹೇಳಿರಲಿಲ್ಲ. ಸಿಡಿ ಹೊರಬಂದು ಎರಡು ದಿನದ ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಅತ್ಯಾಾಚಾರ ಪ್ರಕರಣ ಯಾವ ಪ್ರಮಾಣದಲ್ಲಿ ದುರುಪಯೋಗ ಆಗುತ್ತಿದೆ ಎಂಬುದಕ್ಕೆ ಇವೆಲ್ಲ ನಮ್ಮ ಕಣ್ಣ ಮುಂದಿರುವ ನಮ್ಮದೇ ರಾಜ್ಯದ ಉದಾಹರಣೆಗಳು. ನಮ್ಮ ರಾಜ್ಯದಲ್ಲಿ ಮಾತ್ರ ದುರುಪಯೋಗ ನಡೆಯುತ್ತಿದೆ ಅಂದುಕೊಳ್ಳಬೇಡಿ. ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ ಸುನಿಲ್ ಪರಾಸ್ಕರ್ ವಿರುದ್ಧ ನಟಿಯೊಬ್ಬಳು ಅತ್ಯಾಚಾರ ದೂರು ದಾಖಲಿಸಿದ್ದಳು. ಅದು ಸುಳ್ಳು ಪ್ರಕರಣ ಎಂಬುದು ಸಾಬೀತಾಯಿತು. ದೇಶಾದ್ಯಂತ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಐದರಲ್ಲಿ ಒಂದು ಪ್ರಕರಣ ಸುಳ್ಳು ಪ್ರಕರಣವಾಗಿರುತ್ತದೆ!
ದೆಹಲಿ ನಮ್ಮ ದೇಶದ ಅತ್ಯಾಚಾರದ ರಾಜಧಾನಿ ಎಂಬ ಕೆಟ್ಟ ಹೆಸರನ್ನೂ ಹೊಂದಿದೆ. ಅಲ್ಲಿ ಪ್ರತಿ ವರ್ಷ 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತವೆ. ‘ದಿ ಹಿಂದು’ ಪತ್ರಿಕೆ ಈ ಅತ್ಯಾಾಚಾರಗಳ ಬಗ್ಗೆ ಒಂದು ಅಧ್ಯಯನ ಕೈಗೊಂಡು, ಅವುಗಳನ್ನು ವಿಸ್ತೃತವಾಗಿ ವರದಿ ಮಾಡಿತ್ತು. ಆ ಅಧ್ಯಯನದ ಪ್ರಕಾರ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ಶೇ.40ರಷ್ಟು ಪ್ರಕರಣದಲ್ಲಿ ಒಪ್ಪಿಗೆಯ ಅಥವಾ ಇಷ್ಟಪಟ್ಟು ನಡೆಸಿದ ಲೈಂಗಿಕ ಸಂಪರ್ಕವಾಗಿರುತ್ತದೆ. ಶೇ.25ರಷ್ಟು ಪ್ರಕರಣಗಳಲ್ಲಿ ಮದುವೆಯಾಗುತ್ತೇನೆಂದು ಹೇಳಿ ಅಥವಾ ಮದುವೆಯಾಗುವುದೆಂದು ನಿರ್ಧರಿಸಿ ನಡೆಸಿದ ಲೈಂಗಿಕ ಕ್ರಿಯೆಯಾಗಿರುತ್ತದೆ ಎಂಬ ಅಂಶ ಪತ್ತೆಯಾಗಿದೆ. ಅಂದರೆ ಅಲ್ಲಿಗೆ ಶೇ.35ರಷ್ಟು ಮಾತ್ರ ಸರಿಯಾದ ಅಥವಾ ಸತ್ಯಕ್ಕೆ ಹತ್ತಿರವಾದ ಅತ್ಯಾಚಾರ ಪ್ರಕರಣ ಎಂದಾಯಿತು.
ನ್ಯಾಯ ದೊರಕಿಸಲು ಮಾಡಿದ ಕಾನೂನೇ ಅನ್ಯಾಯಕ್ಕೆ ಕಾರಣವಾಗುತ್ತಿದೆ!
ಅತ್ಯಾಚಾರ ಎಂಬುದು ಕೆಟ್ಟದ್ದು. ಅದನ್ನು ತಡೆಯಲೇಬೇಕು. ಅದಕ್ಕೆ ಕಠಿಣ ಕಾನೂನಿನ ಅಗತ್ಯವೂ ಇದೆ. ಆದರೆ ನಿಜವಾಗಿಯೂ ಅತ್ಯಾಚಾರ ನಡೆದರೆ ತಕ್ಷಣ ಗೊತ್ತಾಗುವುದಿಲ್ಲವೇ? ತಕ್ಷಣಕ್ಕೆ ಪೊಲೀಸ್ ಠಾಣೆಗೆ ಬರಬೇಕು ಎಂದು ಹೇಳುವುದೂ ಸರಿಯಲ್ಲ. ಯಾಕೆಂದರೆ ಹಲವು ಅಂಶಗಳನ್ನು ಪರಿಗಣಿಸಿ, ಶಾಕ್‌ನಿಂದ ಹೊರಬಂದು ದೂರು ನೀಡಲು ಒಂದೆರಡು ದಿನ ಅವಕಾಶ ನೀಡಬಹುದು. ಅತ್ಯಾಚಾರ ನಡೆದಿದ್ದಕ್ಕೆ ವೈಜ್ಞಾನಿಕವಾಗಿ ಸಾಕ್ಷ್ಯಗಳು ಸಿಗಬೇಕೆಂದರೆ ಅತ್ಯಾಚಾರ ನಡೆದ 72 ಗಂಟೆಗಳ ಒಳಗೆ ಆಕೆಯ ವೈದ್ಯಕೀಯ ತಪಾಸಣೆ ನಡೆಸಬೇಕು.
ಎರಡು ಮೂರು ದಿನವಲ್ಲ, ವಾರವೂ ಅಲ್ಲ, ಕೆಲವರಿಗೆ ಅತ್ಯಾಚಾರವಾಗಿದ್ದು ಎರಡು ಮೂರು ವರ್ಷ ಬಿಟ್ಟು ಗೊತ್ತಾಗುತ್ತದೆ ಅಂದರೆ ಏನನ್ನೋಣ!
ಎಲ್ಲದಕ್ಕೂ ಒಂದು ಡೇಟ್‌ಬಾರ್ ಅಥವಾ ಎಕ್ಸ್‌‌ಪೈರಿ ದಿನ ಇರುತ್ತದೆ. ಆದರೆ ನಮ್ಮ ದೇಶದಲ್ಲಿ ಎಕ್ಸ್‌‌ಪೈರಿ ಇಲ್ಲದ ಏಕೈಕ ವಿಚಾರವೆಂದರೆ ಅತ್ಯಾಚಾರ ಪ್ರಕರಣ. ಒಬ್ಬ ಧೀರ, ದಿಟ್ಟ ಮಹಿಳೆ ಪಾಪ 165 ಬಾರಿ ಅತ್ಯಾಚಾರವಾಗುವತನಕ ಕಾದು, ಇನ್ನು ಸಾಧ್ಯವಿಲ್ಲ ಎಂದು ದೂರು ಕೊಟ್ಟಳು. ಆಶ್ಚರ್ಯವೆಂದರೆ ಅತ್ಯಾಚಾರವಾದರೆ ದೂರು ಕೊಡಬೇಕು ಎಂದು ಅರಿವೂ ಇಲ್ಲದ ಮಹಿಳೆ ಅತ್ಯಾಚಾರವಾಗಿದೆ ಎಂಬ ದಿನ ಹಾಕಿದ್ದ ಚಡ್ಡಿಗಳನ್ನು ಮಾತ್ರ ತೊಳೆಯದೇ ಹಾಗೇ ಇರಿಸಿದ್ದಳು! ಇನ್ನೊಬ್ಬಳಿಗೆ ಅತ್ಯಾಚಾರವಾಗಿದೆಯೆಂದು ದೂರಿನ ಪಲ್ಲವಿ ಬರೆಯಲು 9 ವರ್ಷ ಬೇಕಾಯಿತು! ಇನ್ನೊಬ್ಬಳಿಗೆ ಅಜ್ಜನ ಜತೆ ಇರುವ ಸಿಡಿ ಬಿಡುಗಡೆಯಾದ ಮೇಲೆ ಬೇರೆಯವರೂ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದು ನೆನಪಾಗುತ್ತದೆ!
ಇವನ್ನೆಲ್ಲ ಯಾರಾದರೂ ಅತ್ಯಾಚಾರ ಎಂದು ಕರೆಯಲು ಸಾಧ್ಯವೇ?
ಮಹಿಳೆಯರ ಹಕ್ಕು, ಅವರ ರಕ್ಷಣೆ ಎಲ್ಲವೂ ಮುಖ್ಯ. ಆದರೆ ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವ ಆತುರದಲ್ಲಿ ನಾವು ಪುರುಷರಿಗಾಗುತ್ತಿರುವ ಅನ್ಯಾಯ ಮರೆಯುತ್ತಿದ್ದೇವೆ. ಒಬ್ಬರ ಹಕ್ಕುಗಳನ್ನು ಕಾಪಾಡುವುದು ಅಂದರೆ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಳ್ಳುವುದು ಎಂದರ್ಥವಲ್ಲ.
ಅತ್ಯಾಚಾರ ಸಂತ್ರಸ್ತೆಯರ ಕುರಿತು ಎಷ್ಟೆಲ್ಲ ಜನ ಮಾತನಾಡುತ್ತಾರೆ. ಅದಕ್ಕೋಸ್ಕರ ಕೆಲಸ ಮಾಡುವ ಎನ್‌ಜಿಒಗಳಿವೆ. ಸರಕಾರದ ಸಹಾಯ ವಾಣಿಗಳಿವೆ. ನಕಲಿ ಅತ್ಯಾಚಾರ ಪ್ರಕರಣಗಳಿಂದ ನೊಂದ ಪುರುಷರಿಗೆ ಯಾವ ಸೌಲಭ್ಯವಿದೆ? ನಕಲಿ ಅತ್ಯಾಚಾರ ಪ್ರಕರಣಗಳಿಂದ ಉದ್ಯೋಗ ಕಳೆದುಕೊಂಡ, ಸಮಾಜದಲ್ಲಿ ಮಾನ- ಮರ್ಯಾದೆ ಕಳೆದುಕೊಂಡ ಅದೆಷ್ಟೋ ಜನರಿದ್ದಾರೆ. ಸಮಾಜವನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವರೂ ಇರಬಹುದು.
ಅತ್ಯಾಚಾರಕ್ಕೊಳಗಾದ ಹುಡುಗಿ ಅಥವಾ ಮಹಿಳೆಯ ಹೆಸರು ಹಾಕಬಾರದು ಎಂದಿದೆ. ಅತ್ಯಾಚಾರ ಪ್ರಕರಣ ದೂರು ನೀಡಿದ ಪ್ರೇಮಲತೆಯೊಬ್ಬಳು ಅತ್ಯಾಚಾರವಾಗಿದೆ ಎನ್ನಲಾದ ಐದಾರು ವರ್ಷಗಳ ನಂತರ ಟಿವಿ ಮುಂದೆ ಪ್ರವಾಹ ಬರುವಂತೆ ಅತ್ತಿದ್ದಳು. ಆದರೆ ಆಕೆಯ ಹೆಸರು ಹಾಕಿದ್ದಕ್ಕೆ ‘ಕನ್ನಡಪ್ರಭ’ ಪತ್ರಿಕೆಗೆ ಮಹಿಳಾ ಆಯೋಗದಿಂದ ನೋಟಿಸ್ ಕೊಡಿಸಲಾಗಿತ್ತು. ಟಿವಿ ಪರದೆಯಲ್ಲಿ ಮೂರ್ನಾಲ್ಕು ತಾಸು ಕಾರ್ಯಕ್ರಮ ನೀಡಿ, ಹಾಡಿದರೂ ಹೋಗದ ಮರ್ಯಾದೆ, ಪತ್ರಿಕೆಯಲ್ಲಿ ಫೋಟೊ ಬಂದಾಗ ಮಾತ್ರ ಜಾಗೃತವಾಗಿತ್ತು.
ಅತ್ಯಾಚಾರ ದೂರು ನೀಡಿದ ಮಹಿಳೆ, ಯುವತಿಯರ ಮರ್ಯಾದೆ ಬಗ್ಗೆ ಸಾಕಷ್ಟು ಕಾಳಜಿ ವಹಿಸಲಾಗಿದೆ. ಆದರೆ ಅತ್ಯಾಚಾರ ಆರೋಪಕ್ಕೊಳಗಾದವರಿಗೆ ಅಥವಾ ಪುರುಷರಿಗೆ ಮರ್ಯಾದೆಯೇ ಇಲ್ಲ ಎಂದು ಸಮಾಜ, ಸರಕಾರ ನಿರ್ಧರಿಸಿದಂತಿದೆ. ಅವರ ಮರ್ಯಾದೆ ಹರಾಜಾಗಿದ್ದಕ್ಕೆ ಯಾರು ಹೊಣೆ? ಆರೋಪಿಗಳ ಫೋಟೊ ಹಾಕಬಹುದು. ಏನು ಬೇಕಾದರೂ ಬರೆಯಬಹುದು. ಅವರ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಬಹುದು. ನಂತರ ಅತ್ಯಾಚಾರ ಪ್ರಕರಣ ಖುಲಾಸೆಯಾದರೆ ಒಂದು ಪ್ಯಾರಾ ಸುದ್ದಿ ಹಾಕಿ ಸುಮ್ಮನಾಗಬಹುದು. ಅವರಿಗಾದ ಹಾನಿಗೆ, ಮಾನಸಿಕ ನೋವಿಗೆ, ಅಪಮಾನಕ್ಕೆ ಯಾರು ಹೊಣೆ? ಅದಕ್ಕೆ ಪರಿಹಾರವುಂಟೇ? ಪ್ರಕರಣ ದಾಖಲಿಸಿದವರು ಅದನ್ನು ಮರಳಿಸಲು ಸಾಧ್ಯವೇ? ಅವನ ಉದ್ಯೋಗ ಮತ್ತೆ ಸಿಗಲು ಸಾಧ್ಯವೇ? ಅದೆಲ್ಲಕ್ಕಿಂತ ಹೆಚ್ಚಾಗಿ ನ್ಯಾಯಾಲಯದಲ್ಲಿ ಪ್ರಕರಣ ಸೇರಿದಂತೆ ಆದ ಖರ್ಚುಗಳಿಂದ ಹಾಗೂ ಇತರೆ ಕಾರಣಗಳಿಂದಾದ ಹಿನ್ನಡೆಯನ್ನು ಸರಿದೂಗಿಸಲು ಅವಕಾಶವಿದೆಯೇ? ಸರಕಾರ ಇದಕ್ಯಾವ ಸಹಾಯವಾಣಿ ಸ್ಥಾಪಿಸಿದೆ? ಮಹಿಳೆಯರಿಗೆ ಸಹಾಯ ಬೇಕು, ಪುರುಷರಿಗೆ ಯಾವ ಸಹಾಯ ಇಲ್ಲದಿದ್ದರೂ ನಡೆಯುತ್ತದೆ ಎಂಬ ಧೋರಣೆಯೇ?
2016ರ ಜನವರಿ 12ರಂದು ದೆಹಲಿ ನ್ಯಾಯಾಲಯವೊಂದು ‘ನಕಲಿ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಹೊಸ ಕಾನೂನಿನ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ. ಮಹಿಳೆಯೊಬ್ಬಳು ಅತ್ಯಾಚಾರವಾಗಿದೆಯೆಂದು ಸುಳ್ಳು ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಅವಳ ವಿರುದ್ಧವೇ ಪ್ರಕರಣ ದಾಖಲಿಸಲು ಆರೋಪಿಗೆ ಅವಕಾಶ ನೀಡಿತ್ತು.
ಸರಕಾರ ಒಳ್ಳೆಯ ಉದ್ದೇಶದಿಂದಲೇ ಅತ್ಯಾಚಾರ ತಡೆ ಕಾನೂನು ಜಾರಿ ಮಾಡಿದ್ದರೂ, ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ಕಾನೂನು ರಕ್ಷಣೆಯ ಅಸ್ತ್ರವಾಗುವ ಬದಲು ಬೆದರಿಕೆಯ ಅಸ್ತ್ರವಾಗುತ್ತಿದೆ. ಸಾಕಷ್ಟು ಸ್ತ್ರೀಯರು ಅದನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಅತ್ಯಾಚಾರ ಪ್ರಕರಣ ದುರ್ಬಳಕೆ ಹೆಚ್ಚುತ್ತಿರುವ ಪ್ರಮಾಣವನ್ನು ನೋಡಿದರೆ ಗಂಡಸರೆಲ್ಲ ಭಯಪಡುವ ಸ್ಥಿತಿ ಇದೆ. ಹೀಗಿರುವಾಗ ಅದನ್ನು ತಡೆಯಲು ಹೊಸದೊಂದು ಕಾನೂನಿನ ಜರೂರತ್ತು ಖಂಡಿತ ಇದೆ.
ಅವೆಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀಯರು ಶೀಲದ ವಿಷಯದಲ್ಲಿ ಸುಳ್ಳು ಹೇಳಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಮಾಯವಾಗಿದೆ. ಲೈಂಗಿಕ ಕ್ರಿಯೆಯ ವಿಷಯದಲ್ಲೂ ಅವರು ಸುಳ್ಳು ಹೇಳಬಲ್ಲರು ಎಂಬುದು ಹಲವು ಪ್ರಕರಣಗಳಲ್ಲಿ ಬಯಲಾಗಿದೆ. ಒಂದು ಕಾಲದಲ್ಲಿ ‘ಓ ಹೆಂಗಸರೇ ನೀವೆಷ್ಟು ಒಳ್ಳೆಯವರು’ ಎಂದು ಪುಸ್ತಕ ಬರೆಯುವಂಥ ಸ್ಥಿತಿ ಇತ್ತು. ಹಾಗಂತ ಅತ್ಯಾಚಾರ ಮಾಡಿಸಿಕೊಂಡೂ ಸುಮ್ಮನಿರಬೇಕು ಎಂದಲ್ಲ. ಆದರೆ ಇಷ್ಟೆಲ್ಲ ಸುಳ್ಳು ಅತ್ಯಾಚಾರ ಪ್ರಕರಣಗಳು, ಮಹಿಳೆಯ ರಕ್ಷಣೆಗಿರುವ ಕಾನೂನನ್ನು ಮಹಿಳೆಯರೇ ಬೇರೆ ಬೇರೆ ಕಾರಣಕ್ಕೆ ದುರ್ಬಳಕೆ ಮಾಡುತ್ತಿಿರುವುದನ್ನು ನೋಡಿದರೆ ‘ಓ ಹೆಂಗಸರೇ ನೀವೇಕೆ ಇಷ್ಟು ಕೆಟ್ಟವರು’ ಎಂಬ ಪುಸ್ತಕ ಬಂದರೂ ಅಚ್ಚರಿಯಿಲ್ಲ.
(ವಿ.ಸೂ.: ಅತ್ಯಾಚಾರವಾಗಿದೆಯೆಂದು ಸುಳ್ಳು ದೂರು ದಾಖಲಿಸಿದ ಮತ್ತು ಕಾನೂನು ದುರ್ಬಳಕೆ ಮಾಡಿದ, ಮಾಡುತ್ತಿರುವ ಹೆಂಗಸರಿಗೆ ಮಾತ್ರ ಇದು ಅನ್ವಯವಾಗುತ್ತದೆ)

Leave a Reply

Your email address will not be published. Required fields are marked *

nineteen + fourteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top