About Us Advertise with us Be a Reporter E-Paper

ಅಂಕಣಗಳು

ವಿಷ್ಣು, ಮೋಹಿನಿಯಾಗಿ ಭಸ್ಮಾಸುರನನ್ನು ವಧಿಸಿದ ಕತೆ!

- ಸುಧಾಮೂರ್ತಿ

ಒಂದು ಒಬ್ಬ ಅಸುರ ತನ್ನ ಆರಾಧ್ಯದೈವ ಬ್ರಹ್ಮನನ್ನು ಕುರಿತು ಪವಿತ್ರ ತಪಸ್ಸನ್ನಾಚರಿಸಿದ. ದೇವರು ಪ್ರತ್ಯಕ್ಷನಾದ ಕೂಡಲೇ, ತಲೆ ಬಾಗಿ ಅವನಿಗೆ ವಂದಿಸಿದ ಅಸುರ ಹೀಗೆ ಬೇಡಿಕೊಂಡ: ಓ ಬ್ರಹ್ಮನೇ, ನಾನು ಯಾರದ್ದಾದರೂ ಶಿರದ ಮೇಲೆ ಕೈ ಇರಿಸಿದ ತಕ್ಷಣ ಅವರು ಬೂದಿಯಾಗಬೇಕು, ಅಂತಹ ವರ ದಯಪಾಲಿಸು!

ಏಕೆ ಎಂದು ಬೆರಗಾಗುವ ಸರದಿ ಬ್ರಹ್ಮನದ್ದು. ಯಾವುದೇ ಸೇನೆ-ತುಕಡಿಗಳಿಲ್ಲದೆ, ಯುದ್ಧ-ಕದನ ಮಾಡದೆ ಇಡೀ ಜಗತ್ತನ್ನು ಅದರಿಂದ ಗೆಲ್ಲಬಹುದಲ್ಲವೇ ಎಂದುತ್ತರಿಸಿದ ಆ ಭಕ್ತ ಮಹಾಶಯ. ದೇವರು ಅಸ್ತು ಎಂದ. ಹಾಗೆಯೇ ಆಗಲಿ, ಇಂದಿನಿಂದ ನಿನ್ನ ಹೆಸರು ‘ಭಸ್ಮಾಸುರ’ ಎಂದಾಗಲಿದೆ ಎಂದು ಒಂದು ಹೆಸರನ್ನೂ ಕೊಟ್ಟ. ವರ ದೊರೆತ ಕೂಡಲೇ ಭಸ್ಮಾಸುರನ ತಲೆಗೆ ಮೊದಲು ಬಂದದ್ದು, ಇದರ ಬಲದಿಂದ ತ್ರಿಮೂರ್ತಿಗಳನ್ನು ಸೋಲಿಸಬೇಕು. ಅವರು ತಟಸ್ಥರಾದರೆ ಬೇರೆ ಯಾರೂ ನನ್ನ ದಾರಿಗೆ ಅಡ್ಡಬರಲಾರರು ಎಂದು.

ಅದಷ್ಟೇ ಅಲ್ಲ, ಆ ದುಷ್ಟ ಅಸುರನ ತಲೆಗೆ ಇನ್ನೊಂದು ಘಾತುಕ ವಿಚಾರ ಮಿಂಚಿನ ವೇಗದಲ್ಲಿ ಬಂತು, ‘ಈಗೊಮ್ಮೆ ಬ್ರಹ್ಮನ ತಲೆಯ ಮೇಲೆಯೇ ಕೈ ಇಡಬಾರದು?’ ಭಕ್ತನ ಮನವನ್ನು ಬ್ರಹ್ಮ ಓದಲಾರನೇ? ಕ್ಷಣದ ಹಿಂದೆ ತನ್ನನ್ನು ಕುರಿತು ತಪಸ್ಸಾಚರಿಸಿದವ ಈಗ ತನ್ನನ್ನೇ ಬೂದಿ ಮಾಡಲು ಹೊರಟಿರುವುದನ್ನು ನೋಡಿ ಹೌಹಾರಿದ. ಆದರೆ ಆ ಕೂಡಲೇ ಅಲ್ಲಿಂದ ಓಡುವುದು ಬಿಟ್ಟು ಬೇರೇನೂ ಮಾಡುವಂತಿರಲಿಲ್ಲ. ಎದ್ದೆನೋ, ಬಿದ್ದೆನೋ ಎಂದು ದುಷ್ಟ ಅಸುರನಿಂದ ತಪ್ಪಿಸಿಕೊಳ್ಳಲು ಬ್ರಹ್ಮದೇವ ಓಟ ಕಿತ್ತ. ತಿಂಗಳುಗಟ್ಟಲೆ ಇವರಿಬ್ಬರ ರೇಸ್ ನಡೆಯಿತು. ಮುಂದೆ ಬ್ರಹ್ಮ, ಹಿಂದೆ ಅವನ ಬೆನ್ನಟ್ಟಿ ಭಸ್ಮಾಸುರ ಓಡುತ್ತಿರುವ ದೃಶ್ಯ ಒಳ್ಳೇ ಮೋಜಿನದಾಗಿತ್ತು.

ಬ್ರಹ್ಮ ಬೇರೆ ಮಾರ್ಗ ಕಾಣದೆ ಓಡುತ್ತ ಇರುವಾಗಲೇ ವಿಷ್ಣುವನ್ನು ಪ್ರಾರ್ಥಿಸಿಕೊಂಡ. ತಂದೆಯೇ ನನ್ನನ್ನು ಈ ದುಷ್ಟ ರಾಕ್ಷಸನಿಂದ ನೀನೇ ಕಾಪಾಡಬೇಕು ಎಂದ. ಸದಾ ಇಂತಹ ಪೇಚಿಗೆ ಸಿಲುಕಿಕೊಳ್ಳುವ ಮಗನನ್ನು ವಿಷ್ಣು ತರಾಟೆಗೆ ತೆಗೆದುಕೊಳ್ಳದೇ ಬಿಡಲಿಲ್ಲ. ಅಯೋಗ್ಯರಿಗೆ ಇಂತಹ ಶಕ್ತಿಯುತ ವರಗಳನ್ನು ನೀಡುವುದನ್ನು ನಿಲ್ಲಿಸು, ಯಾವಾಗಲೂ ನಿನ್ನದು ಇದೇ ಅವಾಂತರವಾಯಿತಲ್ಲ ಎಂದು ಛೇಡಿಸಿದ. ಏನು ಮಾಡುವುದು, ಭಕ್ತರು ಅಷ್ಟೊಂದು ಶ್ರದ್ಧಾಭಕ್ತಿಗಳಿಂದ ತಪಸ್ಸಾಚರಿಸಿ ನನ್ನನ್ನು ಒಲಿಸಿಕೊಂಡಾಗ ಅವರು ಕೇಳಿದ ವರ ನೀಡದೆ ಎಂಬಂತಾಗುತ್ತದೆ…ಎಂದು ಬ್ರಹ್ಮನೂ ಪೇಚಾಡಿದ. ಸದ್ಯ ನನ್ನ ಜೀವಕ್ಕೆ ಬಂದಿರುವ ಸಂಚಕಾರ ತೊಲಗಿಸು ಎಂದು ಮತ್ತೆ ಮತ್ತೆ ವಿನಂತಿಸುವುದನ್ನು ಮರೆಯಲಿಲ್ಲ. ಆಯ್ತು ಹೋಗು, ನೋಡೋಣ ಎಂದು ವಿಷ್ಣು ಸಹ ಮುಗುಂ ಆಗಿಯೇ ಉತ್ತರಿಸಿದ.

ಈ ಮಧ್ಯೆ ಒಂದು ಚಮತ್ಕಾರ ನಡೆಯಿತು. ಬ್ರಹ್ಮನ ತಲೆಯ ಮೇಲೆ ಕೈಯಿಡಲು ಅವನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಭಸ್ಮಾಸುರ, ಇನ್ನೇನು ಭೂ ಸೀಮೆ ದಾಟಬೇಕು ಎನ್ನುವಷ್ಟರಲ್ಲಿ ತುಂಬ ಸೌಂದರ್ಯವತಿಯೊಬ್ಬಳು ಹತ್ತಿರದ ಉದ್ಯಾನದಲ್ಲಿ ಅಡ್ಡಾಡುತ್ತಿರುವುದು ಅವನ ಕಣ್ಣಿಗೆ ಬಿತ್ತು. ಕಣ್ಣು ಕೀಳದಾದ ರಾಕ್ಷಸ, ಎಂತಹ ಅನುಪಮ ಚೆಲುವು, ನನ್ನ ಜೀವಮಾನದಲ್ಲಿಯೇ ಇಂತಹ ಸ್ತ್ರೀಯನ್ನು ನೋಡಿಲ್ಲವಲ್ಲ, ರಂಭೆ, ಮೇನಕೆಯಂತಹ ಅಪ್ಸರೆಯರನ್ನು ಈಕೆಯ ಮುಂದೆ ನೀವಾಳಿಸಬೇಕು ಅಂತಹ ಸೌಂದರ್ಯದ ಖನಿಯಾಗಿದ್ದಾಳೆ ಎಂದುಕೊಂಡ. ಈಗವನು ಬ್ರಹ್ಮನ ಬೆನ್ನತ್ತುವುದು ಮರೆತು ಉದ್ಯಾನ ಪ್ರವೇಶಿಸಿದ.

ತನ್ನೆದುರು ಬಂದು ನಿಂತ ಕಂಡ ಭಸ್ಮಾಸುರನನ್ನು ನೋಡಿ ಆ ಚೆಲುವೆ ಸೌಜನ್ಯಪೂರ್ವಕವಾಗಿ ಒಂದು ಮುಗುಳು ನಗೆ ಬೀರಿದಳು. ಉತ್ತೇಜಿತನಾದ ಭಸ್ಮಾಸುರ, ಆಕೆಯ ಮುಖಸ್ತುತಿ ಮಾಡಿ, ತನ್ನ ಮೆಚ್ಚುಗೆಯನ್ನು ಪ್ರಕಟಪಡಿಸಿ, ತನ್ನ ಹೇಳಿಕೊಂಡ. ಓ ಸೌಂದರ್ಯವತಿಯೇ, ನನ್ನ ಹೆಸರು ಭಸ್ಮಾಸುರ. ಬ್ರಹ್ಮನಿಂದ ಒಂದು ಶಕ್ತಿಶಾಲಿ ವರವನ್ನು ಪಡೆದಿದ್ದೇನೆ. ಯಾರದಾದರೂ ಶಿರದ ಮೇಲೆ ನಾನು ಕೈಯಿಟ್ಟ ಕೂಡಲೇ ಅವರು ಸುಟ್ಟು ಬೂದಿಯಾಗುತ್ತಾರೆ. ಈಗ ವರ ನೀಡಿದ ಬ್ರಹ್ಮನನ್ನೂ ಸೇರಿಸಿದಂತೆ ಯಾರೂ ನನ್ನನ್ನು ಮಣಿಸಲಾರರು. ನಾನು ನಿನ್ನನ್ನು ವರಿಸಲು ಬಯಸುತ್ತೇನೆ ಎಂದು ತನ್ನ ಮನದಿಂಗಿತ ಹೇಳಿಕೊಂಡ.

ಸುಂದರಿ ಈಗ ಮಂದಹಾಸ ಬೀರಿದಳು.
ಭಸ್ಮಾಸುರ ತನ್ನ ಪ್ರವರ ಮುಂದುವರಿಸಿದ. ನನ್ನಂತಹವನು ನಿನ್ನನ್ನು ಮದುವೆಯಾಗಲು ಇಚ್ಛಿಸುವುದು ನಿನ್ನ ಎಂದು ತಿಳಿದುಕೋ. ನನ್ನ ರಾಣಿಯಾಗಲು ಒಪ್ಪಿದರೆ ಎಲ್ಲರೂ ನಿನ್ನ ಕಾಲಬುಡದಲ್ಲಿ ನಿಲ್ಲುವಂತೆ ಮಾಡಬಲ್ಲ ಶಕ್ತಿಶಾಲಿ ನಾನು ಎಂಬುದನ್ನು ಅರಿತುಕೋ. ಅದೆಲ್ಲ ಹಾಗಿರಲಿ, ಮೊದಲು ನಿನ್ನ ಹೆಸರೇನು ಹೇಳು ಎಂದ.

ತಲೆಬಾಗಿ ಅಸುರನಿಗೆ ವಂದಿಸಿದ ಸುಂದರಿ ಹೇಳಿದಳು: ದೊರೆಯೇ ನನ್ನ ಹೆಸರು ಮೋಹಿನಿ. ನಿನ್ನಂತಹ ಪರಾಕ್ರಮಶಾಲಿ ನನ್ನನ್ನು ವರಿಸಲು ಮುಂದೆ ಬಂದಿರುವುದು ನನಗಾದರೂ ಹೆಮ್ಮೆಯ ವಿಷಯವೇ. ಆದರೆ ಒಂದು ವಿಷಯ ಸ್ಪಷ್ಟಪಡಿಸುವೆ. ನಾನು ತುಂಬ ಒಳ್ಳೆಯ ನೃತ್ಯಾಂಗನೆಯಾಗಿರುವುದರಿಂದ ನನ್ನ ಪತಿಯಾಗುವಾತ ಉತ್ತಮ ನೃತ್ಯಪಟು ಆಗಿರಬೇಕೆಂದು ಬಯಸುತ್ತೇನೆ. ಅಂತಹವರನ್ನೇ ವರಿಸುವೆ ಎಂದು ಪ್ರತಿಜ್ಞೆ ಮಾಡಿದ್ದೇನೆ. ಹೀಗಾಗಿ ನನ್ನನ್ನು ವಿವಾಹವಾಗ ಬಯಸುವ ಯಾವುದೇ ಪುರುಷ ಈ ಷರತ್ತನ್ನು ಪೂರ್ಣಗೊಳಿಸುವಂತಿರಬೇಕು, ಉಳಿದ ಏನೂ ನನಗೆ ಲೆಕ್ಕವಿಲ್ಲ ಎಂದಳು.

ಭಸ್ಮಾಸುರನಿಗೆ ಈಗ ಪೇಚಿಗಿಟ್ಟುಕೊಂಡಿತು. ಅಯ್ಯೋ ನೃತ್ಯದ ಗಂಧ-ಗಾಳಿ ನನಗೆ ತಿಳಿಯದಲ್ಲ ಮೋಹಿನಿ ಎಂದು ಮುಜುಗರ ಪಟ್ಟುಕೊಂಡ. ಯಾರನ್ನು ಬೇಕಾದರೂ ನಿನ್ನ ತಾಳಕ್ಕೆ ತಕ್ಕಂತೆ ಕುಣಿಸುವ ಶಕ್ತಿ ಉಳ್ಳ ಈ ಅಸುರನಿಗೆ ಸ್ವತಃ ಕುಣಿಯುವುದು ಬರದಲ್ಲಾ ಎಂದು ಅಯ್ಯೋ ಶೂರನೇ, ನೃತ್ಯ ಕಲಿಯುವುದು ಯಾವ ಮಹಾ ಬ್ರಹ್ಮವಿದ್ಯೆ? ನೀನು ಬಯಸಿದರೆ ಈಗಿಂದೀಗ ನಿನ್ನ ಗುರುವಾಗಿ ಅದನ್ನುಕಲಿಸುತ್ತೇನೆ. ನಿನ್ನಂತಹ ಪ್ರತಿಭಾವಂತ ಅತಿ ಶೀಘ್ರವಾಗಿ ಅದನ್ನು ಕಲಿಯಬಲ್ಲ ಎಂಬ ವಿಶ್ವಾಸವೂ ನನಗಿದೆ. ಏನೆನ್ನುತ್ತೀ, ನೀನು ಆಗಲಿ ಎಂದು ಸಮ್ಮತಿಸಿದರೆ ನನ್ನ ಸಂತಸಕ್ಕೆ ಪಾರವೇ ಇಲ್ಲವಾಗುತ್ತದೆ. ದಯವಿಟ್ಟು ಒಪ್ಪಿಕೋ ಎಂದೆಲ್ಲ ಪುಸಲಾಯಿಸಿದಳು ಮೋಹಿನಿ.

ಭ್ರಮಿಷ್ಟನಂತೆ ಆಕೆಯತ್ತ ನೋಡಿದ ಭಸ್ಮಾಸುರ. ಮಿಂಚುವ ಆಕೆಯ ಕಂದುಕಣ್ಣುಗಳ ಆಕರ್ಷಣೆಯಲ್ಲಿ ಕೊಚ್ಚಿಹೋದ. ನೃತ್ಯಗಾರನನ್ನೇ ಮದುವೆಯಾಗಬೇಕೆಂಬ ಆಕೆಯ ಅಭಿಲಾಶೆ, ಅವನಿಗೆ ಶಂಕೆ ಕಾಣಲಿಲ್ಲ. ಏನಂತೆ, ಮೋಹಿನಿಯನ್ನು ಸಂಪ್ರೀತಗೊಳಿಸಲು ಸ್ವಲ್ಪ ನೃತ್ಯ ಕಲಿತರೆ ನನ್ನ ಗಂಟೇನೂ ಹೋಗುವುದಿಲ್ಲ ಎಂದುಕೊಂಡ. ಆಕೆಯನ್ನು ಮೆಚ್ಚಿಸಿದರೆ ಸುಂದರಿ ಒಲಿದು ಬರುತ್ತಾಳೆ. ನನ್ನ ಪರಾಕ್ರಮ ಹಾಗೂ ಆಕೆಯ ಸೌಂದರ್ಯ ಎಂತಹ ಒಳ್ಳೆಯ ಸಂಯೋಗ…ಎಂದೆಲ್ಲ ಮನದಲ್ಲೇ ಯೋಚಿಸಿದ. ಈ ಲೋಕದ ಅತ್ಯಂತ ಪರಿಪೂರ್ಣ ಜೋಡಿ ನಮ್ಮದು ಎಂದೆನಿಸಿಕೊಳ್ಳುತ್ತದೆ. ಎಲ್ಲರನ್ನೂ ಆಳಿ, ಹಿಡಿತದಲ್ಲಿಟ್ಟುಕೊಳ್ಳಬಹುದು ಎಂಬ ಯೋಚನೆ ಬಂದ ಕೂಡಲೇ ಆಯಿತು ನೃತ್ಯ ಕಲಿಯುತ್ತೇನೆ ಎಂದು ಸಿದ್ಧನಾಗಿ ನಿಂತ.
ವಿಳಂಬ ಮೋಹಿನಿ ನರ್ತನದ ಪಾಠಗಳನ್ನು ಪ್ರಾರಂಭಿಸಿಯೇ ಬಿಟ್ಟಳು.

‘ಎಲ್ಲಿ ಎಡಕ್ಕೆ ತಿರುಗು, ಅಲ್ಲಿ ಎರಡು ಹೆಜ್ಜೆ ಇಡು, ಈಗ ಬಲಕ್ಕೆ, ಹ್ಞಾಂ, ತುಂಬ ಸರಿಯಾಗಿದೆ’, ಎಂದು ಪುಸಲಾಯಿಸುತ್ತಾ, ಅನುನಯಿಸುತ್ತಾ ಭಸ್ಮಾಸುರನನ್ನು ಕುಣಿಸಹತ್ತಿದ್ದಳು, ಮೋಹಿನಿ. ಮೂರ್ಖ ಅಸುರ ಮೊದಲೇ ಆಕೆಯ ಚೆಲುವಿಗೆ ಚಿತ್ತಾಗಿದ್ದ. ಈಗಂತೂ ಅವಳ ಹೊಗಳಿಕೆಯಿಂದ ಉಬ್ಬಿಹೋದ. ನರ್ತನವೇನೋ ಭಯಂಕರವಾಗಿತ್ತು. ಅನುಪಮ ಲಾವಣ್ಯದಿಂದ ಅಂಗಚಲನೆ ಮಾಡುತ್ತಾ, ಮೋಹಕವಾಗಿ ಆ ರಾಕ್ಷಸನನ್ನು ಸೆಳೆಯುತ್ತಾ ಇದ್ದ ಮೋಹಿನಿಯ ಪಾಶದಲ್ಲಿ ಅವನು ಸಂಪೂರ್ಣ ಸಿಕ್ಕಿಬಿದ್ದ.

ಭಾವಭಂಗಿ ಕಲಿಸುತ್ತೇನೆ ಎಂದು ಮೋಹಿನಿ, ಎಡ ಕೈ ಚಾಚು, ಅದನ್ನು ಎಡ ಭುಜದ ಮೇಲಿಟ್ಟುಕೋ, ಈಗ ಬಲಗೈ ಚಾಚು, ಅದನ್ನು…ಎಂದು ನಿರ್ದೇಶನ ನೀಡುತ್ತಾ, ಒಮ್ಮೆಗೇ ಈಗ ಎಡ ತೋಳನ್ನು ಹಿಂದೆ ಮುಂದೆ ಆಡಿಸುತ್ತಾ, ಬಲಗೈಯನ್ನು ಶಿರದ ಮೇಲಿಟ್ಟುಕೋ ಅಂದಳು.

ಮೋಹಿನಿ ಏನು ಹೇಳುತ್ತಿದ್ದಾಳೆ, ಆಕೆ ಹೇಳಿದಂತೆ ಮಾಡಿದರೆ ಆಗುವ ಪರಿಣಾಮ ಏನು ಎಂಬುದು ಭಸ್ಮಾಸುರನಿಗೆ ಸ್ವಲ್ಪವೂ ಅರಿವಾಗದಷ್ಟು ಮೋಹದಲ್ಲಿ ಅವನು ಕುರುಡಾಗಿದ್ದ. ಚಾಚೂ ತಪ್ಪದೆ, ಎಡ ತೋಳನ್ನು ಹಿಂದೆ ಆಡಿಸುತ್ತಾ ತನ್ನ ಬಲಗೈಯನ್ನು ತೆಗೆದು ತಲೆಯ ಮೇಲಿಟ್ಟುಕೊಂಡ. ಅಷ್ಟೇ. ಮರುಕ್ಷಣ ಆಕೆಯ ಮುಂದೆ ಒಂದು ಬೂದಿಯ ರಾಶಿ ಇತ್ತು. ಭಸ್ಮಾಸುರ ತಾನು ಪಡೆದುಕೊಂಡ ವರಕ್ಕೆ ಸ್ವಯಂ ಬಲಿಯಾಗಿದ್ದ.

ಮೋಹಿನಿ ತತ್‌ಕ್ಷಣ ವಿಷ್ಣುವಿನ ರೂಪ ತಳೆದು ನಿಂತಳು! ಮೋಹಿನಿ ಮತ್ತು ಭಸ್ಮಾಸುರರ ನಡುವೆ ನಡೆದ ಈ ಘಟನೆಯನ್ನು ಕಲಾಕೃತಿಯಾಗಿಸಿದ ಅನೇಕ ಪೇಂಟಿಂಗ್‌ಗಳಿವೆ. ಅವುಗಳಲ್ಲಿ ಕರ್ನಾಟಕದ ಬೇಲೂರು ದೇವಸ್ಥಾನದಲ್ಲಿರುವ ಶಿಲ್ಪ ಅತ್ಯಂತ ಚಿತ್ತಾಕರ್ಷಕವಾಗಿದೆ. ತನ್ನ ಬಲಗೈ ತಲೆಯ ಮೇಲಿಟ್ಟು ನರ್ತಿಸುತ್ತಿರುವ ಮೋಹಿನಿಯನ್ನು ಅಲ್ಲಿ ಅಮರವಾಗಿಸಿದ್ದಾನೆ.

Tags

Related Articles

Leave a Reply

Your email address will not be published. Required fields are marked *

Language
Close