About Us Advertise with us Be a Reporter E-Paper

ಗುರು

ಭವ ಬಂಧನ ದಾಟಿಸುವ ಸರಳೋಪಾಯ ವಿಷ್ಣುಸಹಸ್ರನಾಮ

* ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಪರಮಾತ್ಮನನ್ನು ಪರಿಪರಿಯಾಗಿ ಬೇರೆ ಬೇರೆ ನಾಮಗಳಿಂದ ಅರ್ಚಿಸುವ, ಪಾರಾಯಣ ಮಾಡುವ ಸಂಪ್ರದಾಯಗಳು ಜಗತ್ತಿನ ನಾನಾ ಭಾಗಗಳಲ್ಲಿರುವ ಸಮುದಾಯಗಳಲ್ಲಿ ಬಹಳಷ್ಟಿವೆ. ಆದರೆ ಭಾರತದ ವಿಷ್ಣುಸಹಸ್ರನಾಮಕ್ಕೆ ಇರುವ ಪ್ರಾಚೀನತೆ, ಅದಕ್ಕೆ ಎಲ್ಲ ಕಾಲದಲ್ಲೂ ಇರುವ ಶ್ರೇಷ್ಠತೆ ಹಾಗೂ ಕೋಟಿ ಕೋಟಿ ಜನರು ಯುಗಯುಗಗಳಿಂದ ಹೇಳುತ್ತಾ ಬಂದು ಆ ಶಕ್ತಿಸಂಪನ್ನತೆಯಿಂದ ಬಂದಿರುವ ದಿವ್ಯತೆ ಹಾಗೂ ಪಾವಿತ್ರ್ಯತೆಗಳು ಅನನ್ಯ.

ಸಾವಿರಾರು ವರ್ಷಗಳಿಂದ ಭಕ್ತಕೋಟಿಯ ಅತ್ಯಂತ ಪ್ರೀತಿಪಾತ್ರವಾದ, ಎಲ್ಲ ಪರಿಹಾರಕವಾದ, ಇಷ್ಟಪ್ರದವಾದ, ಅನಿಷ್ಟ ನಿವಾರಕವಾದ ಪವಿತ್ರಸಹಸ್ರನಾಮವೆಂದೇ ವಿಶಿಷ್ಟವಾಗಿ, ಪ್ರಧಾನವಾಗಿ ಪರಿಗಣಿಸಲ್ಪಟ್ಟು ಇಂದಿಗೂ ಕೋಟ್ಯಾಂತರ ಜನ ಜಗತ್ತಿನಾದ್ಯಂತ ಪಾರಾಯಣ ಮಾಡುತ್ತಿರುವ ಸಹಸ್ರನಾಮವೆಂದರೆ ವಿಷ್ಣುಸಹಸ್ರನಾಮವೇ ಆಗಿದೆ.

ಬೃಹತೀ ಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದು ಸಾವಿರ ಋಕ್‌ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. ಒಂದು ಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೇಯವೇ ವಿಷ್ಣುಸಹಸ್ರನಾಮ

ನಮ್ಮ ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಿವೆ. ನಮ್ಮ ಆರೋಗ್ಯ ಈ ನಾಡಿಗಳ ಮೇಲೆ ಅವಲಂಬಿತವಾಗಿದೆ. ನಾಡಿ ಶುದ್ಧಿಯಾದರೆ ಪೂರ್ಣ ಆರೋಗ್ಯ. ವಿಷ್ಣುಸಹಸ್ರನಾಮದ ಪಾರಾಯಣವೆಂದರೆ 72 ಸಾವಿರ ಅಕ್ಷರಗಳ ಧ್ವನಿಮೂಲ ಹಾಗೂ ಅದರಿಂದ ಹೊರಡುವ ಕಂಪನಗಳು ನಮ್ಮ ದೇಹದ ಸಂದುಗೊಂದುಗಳಿಂದ, ಮೂಲೆ ಮೂಲೆಗಳಿಂದ ಹೊರಟು 72 ಸಾವಿರ ನಾಡಿಗಳ ಶುದ್ಧೀಕರಣ ಹಾಗೂ ಸಂಸ್ಕರಣ ಮಾಡುತ್ತವೆ. ಪ್ರತಿನಿತ್ಯ ವಿಷ್ಣುಸಹಸ್ರನಾಮವನ್ನು ಭಕ್ತಿಯಿಂದ ಜಪಿಸುವವರಿಗೆ ನಿರಂತರ ಆರೋಗ್ಯ ಹಾಗೂ 100 ವರ್ಷ ಪೂರ್ಣಾಯುಷ್ಯ ಲಭಿಸುತ್ತದೆ.

ಜಗತ್ತಿನ ಇತರೇ ಸಂಪ್ರದಾಯದಲ್ಲೂ ನಾಮಸ್ಮರಣೆ ಉಂಟು
ಪರಮಾತ್ಮನನ್ನು ಪರಿಪರಿಯಾಗಿ ಬೇರೆ ಬೇರೆ ನಾಮಗಳಿಂದ ಅರ್ಚಿಸುವ, ಪಾರಾಯಣ ಮಾಡುವ ಸಂಪ್ರದಾಯಗಳು ಜಗತ್ತಿನ ನಾನಾ ಭಾಗಗಳಲ್ಲಿರುವ ಸಮುದಾಯಗಳಲ್ಲಿ ಬಹಳಷ್ಟಿವೆ. ಮುಸ್ಲಿಮರು ‘ಮೋಸ್‌ಟ್ ಎಕ್‌ಸ್ಲೆಂಟ್ ನೇಮ್‌ಸ್’ ಎಂಬ ಹೆಸರಿನಿಂದ ಜಪ ಮಾಡುತ್ತಾರೆ. ಕ್ರಿಶ್ಚಿಯನ್ನರು ‘ಸ್ಸೇಂಟ್ ಬರ್ನಾರ್ಡ್’ನ ನಾಮ ನಿರೂಪಣೆಯನ್ನು ಪಠಿಸುತ್ತಾರೆ. ಜ್ಯೂಯಿಷ್ ಪರಂಪರೆಯಲ್ಲೂ ಪರಮಾತ್ಮನ ಪವಿತ್ರ ನಾಮಗಳ ಅನೇಕ ಪಟ್ಟಿಗಳೇ ಇವೆ. ಆದರೆ ಭಾರತದ ವಿಷ್ಣುಸಹಸ್ರನಾಮಕ್ಕೆ ಇರುವ ಪ್ರಾಚೀನತೆ, ಅದಕ್ಕೆ ಎಲ್ಲ ಇರುವ ಶ್ರೇಷ್ಠತೆ ಹಾಗೂ ಕೋಟಿ ಕೋಟಿ ಜನರು ಯುಗಯುಗಗಳಿಂದ ಹೇಳುತ್ತಾ ಬಂದು ಆ ಶಕ್ತಿಸಂಪನ್ನತೆಯಿಂದ ಬಂದಿರುವ ದಿವ್ಯತೆ ಹಾಗೂ ಪಾವಿತ್ರ್ಯತೆಗಳು ಅನನ್ಯ.

ಯಾವ ದೇವತೆಯ ಉಪಾಸನೆಯಿಂದ ಏನು ಸಿದ್ಧಿ
ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ. ಬೃಹಸ್ಪತಿ ಆರಾಧನೆಯಿಂದ ಬ್ರಹ್ಮವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ, ದಕ್ಷ ಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮಿ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು, ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ಸ್ವರ್ಗಪ್ರಾಪ್ತಿ, ವಿಶ್ವೇದೇವತೆಗಳಿಂದ ಭೂಸಂಪತ್ತು, ಅಶ್ವಿನಿ ದೇವತೆಗಳಿಂದ ಆಯುರ್ವೃದ್ಧಿ, ಗಂಧರ್ವರಿಂದ ಸ್ಫುರದ್ರೂಪ, ಸೌಂದರ್ಯ, ಊರ್ವಶಿಯಿಂದ ಸ್ತ್ರೀವಿಹಾರ, ಯಜ್ಞದಿಂದ ಕೀರ್ತಿ, ಈಶ್ವರನಿಂದ ವಿದ್ಯೆ ಹಾಗೂ ಒಳ್ಳೆಮನೋಭಾವ, ಗೌರೀಪೂಜೆಯಿಂದ ಅನ್ಯೋನ್ಯತೆ, ಸುಖದಾಂಪತ್ಯ, ಪಿತೃಗಳಿಂದ ಸಂತತಿ ವೃದ್ಧಿ ಹೀಗೆ ಒಬ್ಬೊಬ್ಬ ದೇವತೆಯಿಂದ ಒಂದೊಂದು ಸಿದ್ಧಿಯಾದರೆ, ವಿಷ್ಣುಸಹಸ್ರನಾಮ ಪಾರಾಯಣದ ಮೂಲಕ ಮಹಾವಿಷ್ಣುವಿನ ಉಪಾಸನೆ ಮಾಡಿದರೆ ಈ ಎಲ್ಲ ಸಿದ್ಧಿಗಳೂ ಒಟ್ಟಿಗೆ ಸುಲಭವಾಗಿ ಲಭಿಸುವುದು.

ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ ‘ಇಡೀ ಜಗತ್ತಿನ ದೈವ ? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಂಸಾರ ಚಕ್ರದ ಬಂಧನದಿಂದ, ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು’? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಒಂದೇ ಉತ್ತರ ಹೇಳುತ್ತಾರೆ ‘ಜಗತ್ಪ್ರಭುವೂ, ದೇವದೇವನೂ, ಅನಂತನೂ, ಪುರುಷೋತ್ತಮನೂ ಆದ ಮಹಾವಿಷ್ಣುವನ್ನು ವಿಷ್ಣುಸಹಸ್ರನಾಮದ ಮೂಲಕ ಸ್ತುತಿ ಮಾಡುವ ಎಲ್ಲರೂ ಸರ್ವದುಃಖಗಳಿಂದ ಪಾರಾಗುತ್ತಾರೆ. ಅಷ್ಟೇ ಅಲ್ಲ, ಅಂತಹವರು ನಿರಂತರವಾಗಿ ಪ್ರಗತಿಯ, ಅಭ್ಯುದಯದ, ಯಶಸ್ಸಿನ ಇರುತ್ತಾರೆ. ಮಂತ್ರದ್ರಷ್ಟ್ರಾರರಾದ ಋಷಿಮುನಿಗಳಿಂದ ಪರಿಪರಿಯಾಗಿ ಸ್ತುತಿಸಲ್ಪಟ್ಟ ಈ ವಿಷ್ಣುಸಹಸ್ರನಾಮದ ಪಾರಾಯಣದಿಂದ ಎಲ್ಲ ಪುರುಷಾರ್ಥಗಳೂ ಸಿದ್ಧಿಯಾಗುತ್ತವೆ’.

ವಿಷ್ಣುಸಹಸ್ರನಾಮದಿಂದ ಅನಂತ ಫಲ
ಆಳ್ವಾರರುಗಳಲ್ಲಿ ಪ್ರಸಿದ್ಧರಾದ ನಮ್ಮಾಳ್ವಾರ್ ಹೇಳುತ್ತಾರೆ. ತಿರುವಾಯ್ಮೊಳಿಯಲ್ಲಿ. ವಿಷ್ಣುಸಹಸ್ರನಾಮದ ಯಾವುದಾದರೂ ಒಂದು ನಾಮವನ್ನು ಶ್ರದ್ಧಾಭಕ್ತಿಯಿಂದ ಜಪಮಾಡಿದರೂ ಅನಂತ ಪುಣ್ಯಫಲ ದೊರೆಯುತ್ತದೆ ಎಂದು. ವಿಷ್ಣುಸಹಸ್ರನಾಮ ಪಠಿಸುವವರ ಮನೆಯಲ್ಲಿ ಅಶುಭವೆಂಬುದೇ ಇರುವುದಿಲ್ಲ.

ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಸ್ವಯಂ ವೇದ್ಯವಾಗಿತ್ತು. ಅವರು ಮೃತ್ಯುವನ್ನೂ ಸಹ ಆ ಶಕ್ತಿಯಿಂದ ದೂರ ಇಟ್ಟಿದ್ದರು. ಅಷ್ಟೇ ಅಲ್ಲ ಅವರ ಭಕ್ತಿಯ ಶಕ್ತಿಯಿಂದ ಶ್ರೀ ಕೃಷ್ಣಪರಮಾತ್ಮ ಅವರು ಮಲಗಿದ್ದೆಡೆಯೇ ಬಂದು ದರ್ಶನ, ಸ್ಪರ್ಶನ ಭಾಗ್ಯನೀಡಿದ. ಭೀಷ್ಮಾಚಾರ್ಯರು ಹೇಳುತ್ತಾರೆ. ‘ನ ವಾಸುದೇವ ಭಕ್ತಾನಾಮ್ ಅಶುಭಂ ವಿದ್ಯತೇಕ್ಪಚಿತ್’ ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ. ಅಷ್ಟೇ ಅಲ್ಲ, ವಾಸುದೇವನ ಭಕ್ತರಿಗೆ ಅಶುಭವೆಂಬುದೇ ಇರುವುದಿಲ್ಲ. ಅವರಿಗೆ ಅಪಮೃತ್ಯು, ಮರಣ, ಮುಪ್ಪು ಹಾಗೂ ರೋಗಗಳ ಭಯವಿರುವುದಿಲ್ಲ.

ಸಕಲ ಶಾಸ್ತ್ರಗಳಲ್ಲಿ ಶ್ರೇಷ್ಠ
ಭಗವದ್ಗೀತೆಯಲ್ಲಿ ಕೃಷ್ಣ ಯಜ್ಞಗಳಲ್ಲಿ ‘ಜಪಯಜ್ಞ ಶ್ರೇಷ್ಠ’ ಎಂದಾಗ ಭೀಷ್ಮಾಚಾರ್ಯರು ಜಪಗಳಲ್ಲಿ ಜಪದ ಸರ್ವಶ್ರೇಷ್ಠ ಎಂದು ಉತ್ತರಿಸುತ್ತಾರೆ. ವಿಷ್ಣುಸಹಸ್ರನಾಮದ ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳಿವೆ. ಮಧ್ವಾಚಾರ್ಯರು ಸ್ಪಷ್ಟ ಮಾಡುತ್ತಾರೆ.‘ತ್ರಯೋರ್ಥಾಃ ಸರ್ವವೇದೇಷು ದಶಾರ್ಥಾಃಸರ್ವಭಾರತೇವಿಷ್ಣೋ ಸಹಸ್ರನಾಮಾಪಿ ನಿರಂತರ ಶತಾರ್ಥಕಮ್’ ವೇದದ ಮಾತುಗಳಿಗೆ ಮೂರು ರೀತಿಯ ಅರ್ಥಗಳಿವೆ. ಮಹಾಭಾರತದ ಮಾತುಗಳಿಗೆ ಹತ್ತು ರೀತಿಯ ಅರ್ಥಗಳಿವೆ. ವಿಷ್ಣುಸಹಸ್ರನಾಮದ ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳಿವೆ. ಕ್ರಿ.ಶ. 13ನೆಯ ಶತಮಾನದಲ್ಲಿ ಮಧ್ವಾಚಾರ್ಯರು ಪಯಸ್ವಿನೀ ನದಿ ತೀರದ ಕಾಸರಗೋಡಿನ ಪರಿಸರದ ದೇವಾಲಯದಲ್ಲಿ ನೆರೆದ ವಿದ್ವತ್ ಮಂಡಲದ ಎದುರಿಗೆ ವಿಶ್ವನಾಮಕ್ಕೆ ಅರ್ಥಾನುಸಂಧಾನಗಳನ್ನು ಮಾಡಿ ತೋರಿಸಿದರು.

ಈ ಧ್ಯಾನ ಮೌನಗಳ ಸಾಧನೆಯಾಗಿ ಏಕಾಗ್ರತೆ ಸಿದ್ಧಿಸಲು ಜಪ ಬೇಕು. ತಪದಂತಹ ಜಪಬೇಕು. ಶ್ರೇಷ್ಠ ಜಪ ಬೇಕು. ಯಾವ ಜಪವನ್ನು ಮಾಡಿದರೆ ಯಾರ ಜಪವನ್ನು ಮಾಡಿದರೆ, ಯಾರನ್ನು ಕುರಿತು ಜಪಮಾಡಿದರೆ, ಜನ್ಮ ಸಂಸಾರಗಳ ಎಲ್ಲ ಬಂಧನಗಳೂ ಕಳಚುವುದೋ ಅದೇ ವಿಷ್ಣು ಸಹಸ್ರನಾಮ. ವಿಷ್ಣುವಿನ ಸಹಸ್ರನಾಮಗಳು ಜನನ ಮರಣಗಳ ಚಕ್ರ ಕಳಚುತ್ತವೆ. ಭವಸಾಗರ ದಾಟುವ ನೌಕೆ ಕಾಣುತ್ತದೆ.

ವಿಷ್ಣುಸಹಸ್ರನಾಮ ಸಪ್ತಾಹ
ವಿಷ್ಣುಸಹಸ್ರನಾಮ ವಿಚಕ್ಷಣ, ಖ್ಯಾತಿಯ ವಿದ್ವಾಂಸ, ವಿದ್ಯಾವಾಚಸ್ಪತಿ ಡಾ॥ ಅರಳುಮಲ್ಲಿಗೆ ಪಾರ್ಥಸಾರಥಿ ರವರಿಂದ ಆಂಗ್ಲ ನೂತನ ಸಂಭ್ರಮಾಚರಣೆಯನ್ನು ವಿಷ್ಣು ಸಹಸ್ರನಾಮದ ವಿಶಿಷ್ಟ ಚಿಂತನೆಗಳ ಸಪ್ತಾಹವಾಗಿ ಜನವರಿ 1ರಿಂದ 7 2019ರ ವರೆಗೆ ನಗರದ ಜಯನಗರ 9ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಮಂದಿರದಲ್ಲಿ ಆಯೋಜಿಸಲಾಗಿದೆ. ವಿಷ್ಣು ಸಹಸ್ರನಾಮ ತರಂಗಗಳನ್ನು ದೇಶಾದ್ಯಂತ ಹಾಗೂ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಪ್ರಸರಿಸುತ್ತಿರುವ ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೇಡರೇಷನ್‌ನ ಸಂಸ್ಥಾಪಕರಾದ ಡಾ. ಅರಳುಮಲ್ಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close