ವಿಷ್ಣು ಮೊದಲು ನಾಯಕನಾಗಬೇಕಾಗಿದ್ದಿದ್ದು ನಾಗರಹಾವಲ್ಲಲ್ಲ!

Posted In : ಅಂಕಣಗಳು, ಬಾಳ ಬಂಗಾರ

ವಿಷ್ಣು ತಮಗೆ ಸಿಕ್ಕ ಮೊದಲನೆಯ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿದ್ದು ಹೇಗೆ ಗೊತ್ತೇ? ಹೇಳುತ್ತೇನೆ ಕೇಳಿ. ಎಲ್ಲರಿಗೂ ಎರಡನೆಯ ಅವಕಾಶ ಅನ್ನೋದು ಬದುಕಿನಲ್ಲಿ ಯಾವಾಗಲೂ ಸಿಗೋದಿಲ್ಲ. ಅದಕ್ಕೇ, ಸಿಕ್ಕ ಮೊದಲ ಅವಕಾಶದಲ್ಲೇ ಸಾಧ್ಯವಾದಷ್ಟೂ ನಮ್ಮ ಕೈಲಾದ ಪ್ರಯತ್ನವನ್ನು ಮಾಡಿಬಿಡಬೇಕು. ಈ ಪ್ರಯತ್ನದಲ್ಲಿ ನಮ್ಮ ಕೈಲಾಗುವುದಕ್ಕಿಂತ ಒಂದು ಪಟ್ಟು ಹೆಚ್ಚೇ ಕಷ್ಟ ಪಟ್ಟರೂ ಸರಿಯೇ. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ ಇದು ಸ್ಪರ್ಧಾ–ಯುಗ. ನೀವಲ್ಲದಿದ್ದರೆ ಇನ್ನೊಬ್ಬರು ನಿಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಒಂದನೆಯ–ದಾಗಿ ಅವಕಾಶ–ಗಳು ಸಿಗುವುದೇ ಅಪರೂಪ, ಹಾಗಾಗಿ ಸಿಕ್ಕಾಗ ನಮ್ಮ ಕಂಫರ್ಟ್ ಝೋನಿನಿಂದ ಹೊರಗೆ ಬಂದು ನಾವು ಪ್ರಯತ್ನಪಡಬೇಕು.

ವಿಷ್ಣು ಆವಾಗಿನ್ನೂ ಕಾಲೇಜಿನಲ್ಲಿದ್ದರು. ಸಿನಿಮಾಗಳಲ್ಲಿ ತೋರಿ–ಸುವ ಹಾಗೆ ಅವರದೇ ಒಂದು ಹುಡುಗರ ತಂಡವಿತ್ತು. ಎಲ್ಲಿ ಹೋದರೂ ಅವರು ತಮ್ಮ ತಂಡದೊಡನೆಯೇ ಹೋಗುತ್ತಿದ್ದುದು, ಬರುತ್ತಿದ್ದುದು. ಕಾಲೇಜಿನ ಕಾರಿಡಾರಿನಲ್ಲೆಲ್ಲಾ ಇವರದೇ ಕಾರು–ಬಾರು. ಕಾಲೇಜಿನಲ್ಲಿ ಆವಾಗೆಲ್ಲಾ ತಂಡದೊಂದಿಗೆ ಗುರುತಿಸಿಕೊಳ್ಳು–ವುದೆಂದರೆ ಅದೊಂದು ತರಹದ ಶೋಕಿ ಅಲ್ಲವಾ ಆಗಿನ ಕಾಲದಲ್ಲಿ. ನಮ್ಮವರ ಗೆಳೆಯ ಒಬ್ಬರಿದ್ದರು. ಅವರಿಗೆ ಸಿನಿಮಾ ಮಂದಿಯೊಡನೆ ಒಡನಾಟವಿತ್ತು. ಸಿನಿಮಾ ಅಂದರೆ ಈಗಲೂ ಜನ ಹೇಗೆ ಆಸೆ ಪಟ್ಟು, ಮುಗಿಬಿದ್ದು ನೋಡುವ ಪರಿಸ್ಥಿತಿಯಿದೆಯೋ ಆಗಲೂ ಹಾಗೆಯೇ ಇತ್ತು. ಹಾಗಾಗಿ ಆ ಗೆಳೆಯ ಸಿಕ್ಕಾಗಲೆಲ್ಲ ಸಿನಿಮಾ ವಾರ್ತೆಗಳು, ಸುದ್ದಿಗಳನ್ನು ನಮ್ಮ ಮನೆಯವರು ಮತ್ತವರ ಸ್ನೇಹಿತರು ಕೇಳಿ ತಿಳಿದುಕೊಳ್ಳಲು ಕಾತರರಾಗಿರುತ್ತಿದ್ದರು. ಆ ಗೆಳೆಯರು ಬಂದಾಗಲೆಲ್ಲ ಅವರಿಗೆ ವಿಶೇಷ ಮರ್ಯಾದೆ, ಗೌರವ. ತಮ್ಮಿಷ್ಟದ ನಟ ನಟಿಯರ ವಿಚಾರದ ಕುರಿತು ಮಾತನಾಡುತ್ತಾರಲ್ಲ ಅಂತ.

ಒಂದು ದಿನ ವಿಷ್ಣು ಆ್ಯಂಡ್ ಗ್ಯಾಂಗ್ ಯಥಾಪ್ರಕಾರ ಕಾಲೇಜು ಆವರಣದಲ್ಲಿ ಕುಳಿತಿದ್ದರು ಅದೂ ಇದೂ ಹರಟೆ ಮಾತನಾಡುತ್ತಾ. ಅಲ್ಲಿಗೆ ಅವರ ಸಿನಿಮಾ ಗೆಳೆಯರು ಬಂದರು. ನಮ್ಮವರಿದ್ದವರು ಸುಮ್ಮನಿರಲಾಗದೆ ‘ಏನಪ್ಪಾ ಸಿನಿಮಾದಲ್ಲಿ ಬಿಝಿಯಾದ ಮೇಲೆ ನಾವೆಲ್ಲಾ ಈಗ ಕಾಣಿಸೋದೇ ಇಲ್ಲ ನಿಂಗೆ. ಇರ್ಲಿ ಇರ್ಲಿ’ ಅಂದರಂತೆ. ಅದಕ್ಕೆ ಆ ಗೆಳೆಯರು ‘ಯಾಕಪ್ಪಾ ಹಂಗಂತೀಯಾ ನಿಮ್ಮನ್ನೆಲ್ಲಾ ಮರೆಯೋದುಂಟೇ’ ಎಂದುತ್ತರಿಸಿದರು. ವಿಷ್ಣು ಬಾಯಿಮಾತಿಗೆ ‘ಹಾಗಾದರೆ ನನಗೂ ಸಿನಿಮಾದಲ್ಲಿ ಒಂದು ಪಾರ್ಟು ಕೊಡಿಸು ನೋಡೋಣ ‘ಎಂದು ಕೇಳಿಯೇ ಬಿಟ್ಟಿದ್ದರು. ಆ ಕ್ಷಣಕ್ಕೆ ವಿಷ್ಣು ಅವರಿಗೆ ತಾವು ಅಂದು ಸುಮ್ಮನೆ ಬಾಯಿಮಾತಿಗೆ ಆಡಿದ ಮಾತು ತಮ್ಮ ಬದುಕಿನಲ್ಲಿ ಎಂತಹ ಮಹತ್ತರ ಬದಲಾವಣೆಯನ್ನು ತರಬಹುದು ಎಂಬುದರ ಕಲ್ಪನೆಯೇ ಇರಲಿಲ್ಲ. ಅವರ ಗೆಳೆಯರು ಆ ಕ್ಷಣಕ್ಕೆ ‘ಆಯ್ತು ಬಿಡಪ್ಪ ಕೊಡಿಸೋಣ ಅದಕ್ಕೇನು’ ಎಂದಿದ್ದಾರೆ. ಆಮೇಲೆ ಈ ವಿಚಾರ ಇಬ್ಬರಿಗೂ ಮರೆತೇ ಹೋಗಿದೆ. ನಿಜವಾಗಿ ಹೇಳಬೇಕು ಅಂದರೆ ಅದು ಸುಖಾಸುಮ್ಮನೆ ಆಡಿದ ಬಾಯಿಮಾತಾಗಿತ್ತಷ್ಟೇ.

ಒಂದು ದಿನ ವಿಷ್ಣು ಅವರ ಸಿನಿಮಾ ಗೆಳೆಯರ ಕಿವಿಗೆ ಒಂದು ಸುದ್ದಿ ಬೀಳುತ್ತದೆ. ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಅವರ ಚಿತ್ರಕ್ಕೆ ಹೊಸ ಕಲಾವಿದರನ್ನು ಹುಡುಕುತ್ತಿದ್ದಾರೆ ಎಂಬುದೇ ಆ ಸುದ್ದಿ. ಮುಂದೆ ಯಾವತ್ತೋ ಒಂದು ದಿನ ವಿಷ್ಣು ಅವರಿಗೆ ಆ ಗೆಳೆಯರು ಸಿಕ್ಕಿ ಹೀಗೆ ಹೀಗೆ ಕನ್ನಡ ಸಿನಿಮಾಗೆ ನವ ನಟರನ್ನು ಹುಡುಕುತ್ತಿದ್ದಾರೆ ಅಂತ ಹೇಳಿದಾಗ ಇವರು ಆಯ್ತು ಪ್ರಯತ್ನ ಪಡುತ್ತೀನಿ ಅಂದಿದ್ದಾರೆ. ಗಿರೀಶ್ ಕಾಸರವಳ್ಳಿಯವರು ವಂಶವೃಕ್ಷ ಸಿನಿಮಾ ಮಾಡುತ್ತಿದ್ದ ಸಂದರ್ಭ ಅದು. ವಿಷ್ಣುವರ್ಧನ್ ಪಾರ್ಟು ಕೇಳಲು ಹೋದರು. ಹೋಗುವುದು ಹೋಗಿದ್ದಾರೆ ಆದರೆ ಅಲ್ಲಿಗೆ ತಾವೊಬ್ಬರೇ ಹೋಗದೆ ತಮ್ಮ ಇಡೀ ಪಟಾಲಂ ಅನ್ನೇ ಕರೆದೊಯ್ದಿದ್ದಾರೆ. ಅಲ್ಲಿದ್ದವರೆಲ್ಲಾ ಇವರನ್ನೇ ವಿಚಿತ್ರವಾಗಿ ನೋಡುತ್ತಿದ್ದರಂತೆ. ಅಲ್ಲಿ ನಟನೆಗಾಗಿ ಪಾರ್ಟು ಕೇಳಲು ಅನೇಕರು ಬಂದಿದ್ದರು. ಸಿನಿಮಾದ ಮುಖ್ಯ ಪಾತ್ರಧಾರಿಗಳ ಆಯ್ಕೆಯೂ ನಡೆದೇ ಇತ್ತು. ನೋಡುವುದಕ್ಕೆ ಸ್ಫುರದ್ರೂಪಿಯಾಗಿದ್ದ ವಿಷ್ಣುವನ್ನು ಕಂಡು ಸಿನಿಮಾದವರಿಗೆ ಖುಷಿಯಾಗಿದೆ. ನಾಯಕನ ಪಾತ್ರಕ್ಕೆ ಈತನನ್ನೇ ಆಯ್ಕೆ ಮಾಡುವ ಉಮೇದಿ ಬಂದಿದೆ. ಈ ವಿಚಾರಗಳ್ಯಾವುದೂ ವಿಷ್ಣುವಿಗೆ ತಿಳಿದಿಲ್ಲ. ಆಮೇಲೆ ಅಲ್ಲಿ ಹೋದ ಮೇಲೆ ನಾಯಕನ ಪಾತ್ರ ಮಾಡುತ್ತೀಯಾ ಎಂದು ಕೇಳಿದಾಗ ಇವರಿಗೆ ಸಖತ್ ಆಶ್ಚರ್ಯ. ಆಯಿತು ಅಂತ ತಲೆ ಆಡಿಸಿದ್ದಾರೆ.

ನಾಯಕನ ಪಾತ್ರಕ್ಕೆ ಆಯ್ಕೆ ಮಾಡಿದ ಸಿನಿಮಾದವರು ಒಂದೇ ಒಂದು ಕಂಡೀಷನ್ ಹಾಕಿದ್ದಾರೆ. ಸಿನಿಮಾ ಕತೆಯಲ್ಲಿ ನಾಯಕನ ಪಾತ್ರಧಾರಿ ತಲೆ ಬೋಳಿಸಿಕೊಳ್ಳಬೇಕಿರುತ್ತದೆ. ಚಿಕ್ಕ ಪಾತ್ರವನ್ನು ಕೇಳಿ–ಕೊಂಡು ಬಂದಿದ್ದಾತನಿಗೆ ನೀಡಿದ ನಾಯಕನ ಪಾತ್ರವನ್ನು ನಿರ್ವಹಿ–ಸಲು ಆತ ಸಂತಸದಿಂದಲೇ ತಮ್ಮ ಕಂಡೀಷನ್‌ಗೆ ಒಪ್ಪಿಕೊಳ್ಳುತ್ತಾನೆ ಎಂದು–ಕೊಂಡಿದ್ದವರಿಗೆ ಆಶ್ಚರ್ಯ ಕಾದಿರುತ್ತದೆ. ಅಲ್ಲಿಯವರೆಗೆ ಖುಷಿಯಂದಲೇ ಇದ್ದ ವಿಷ್ಣುವಿಗೆ ಅದೇಕೋ ತಲೆ ಬೋಳಿಸಿಕೊಳ್ಳ–ಬೇಕು ಎನ್ನುವ ನಿಯಮ ಕೇಳಿಯೇ ಹಿಂಜರಿಯುತ್ತಾರೆ. ಸ್ವಲ್ಪ ಹೊತ್ತು ಯೋಚನೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತಾರೆ. ಅದೇನೆಂದರೆ ನಾಯಕನ ಪಾರ್ಟು ಬೇಡ ಎಂದು. ಗೆಳೆಯರೆಲ್ಲರಿಗೂ ದಿಗ್ಭ್ರಮೆಯಾಗುತ್ತದೆ. ಅಲ್ಲಾ ಸಿನಿಮಾಗಳಲ್ಲಿ ನಾಯಕನ ಪಾತ್ರಗಳಿಗೆ ನಟಿಸಬೇಕೆಂದು ಅದೆಷ್ಟೋ ಮಂದಿ ನಾನಾ ರೀತಿಯ ಪಾಡುಗಳನ್ನು ಪಡುತ್ತಾರೆ. ಅದೇ ವಿಷ್ಣು ಯಾಕೆ ನಾಯಕನ ಪಾರ್ಟು ಒಪ್ಪಿಕೊಂಡಿಲ್ಲ ಎಂದು. ಆಮೇಲೆ ಅವರಿಗೂ ವಿಷಯ ತಿಳಿದಾಗ ಅಯ್ಯೋ ಬರಿ ತಲೆಗೂದಲಿಗಾಗಿ ನಾಯಕನ ಪಾರ್ಟು ಬೇಡ ಅಂತಿದೀಯ ಎಂದು ತರಾಟೆಗೆ ತೆಗೆದುಕೊಂಡರಂತೆ.

ಆದರೇನು ಮಾಡುವುದು ವಿಷ್ಣು ಅವರದು ಮೊದಲಿನಿಂದಲೂ ಹಿಡಿದದ್ದೇ ಹಠ. ಒಮ್ಮೆ ಮನಸ್ಸು ಮಾಡಿದರೆಂದರೆ ಯಾವುದೇ ಕಾರಣಕ್ಕೂ ಅದರಿಂದ ಕಾಲ್ತೆಗೆಯುತ್ತಿರಲಿಲ್ಲ. ಸಿನಿಮಾ ವಿಚಾರದಲ್ಲೂ ಹಾಗೆಯೇ ಆಯಿತು. ಇಷ್ಟೆಲ್ಲಾ ಆಗಿಯೂ ವಿಷ್ಣುವಿಗೆ ವಂಶವೃಕ್ಷ ಸಿನಿಮಾದ ಸಂಬಂಧ ಕಡಿದುಹೋಗಲಿಲ್ಲ. ಅವರಿಗೆ ಆ ಚಿತ್ರದಲ್ಲಿ ಪುಟ್ಟ ಪಾತ್ರವೊಂದು ದೊರೆಯಿತು. ಒಂದು ಇಷ್ಟ ಆಗೋದು ಏನೂ ಅಂದರೆ ಒಂದೊಳ್ಳೆಯ ಆಮಿಷ ಜೀವನದಲ್ಲಿ ಬಂದಾಗಲೂ ವಿಷ್ಣು ಅವರು ತಮ್ಮತನವನ್ನು ಕಳೆದುಕೊಳ್ಳಲಿಲ್ಲ ಅನ್ನೋದು. ಆ ದಿನ ಅವರೇನಾದರೂ ಹೂಂ ಅಂದುಬಿಟ್ಟಿದ್ದರೆ ಆವತ್ತು ವಂಶವೃಕ್ಷ ಚಿತ್ರದಲ್ಲಿ ನಾಯಕನಾಗಿ ವಿಷ್ಣುವರ್ಧನ್ ನಟಿಸುತ್ತಿದ್ದರೇನೋ. ಒಂದು ವೇಳೆ ಹಾಗಾಗಿದ್ದರೆ ನಾಗರಹಾವು ಸಿನಿಮಾ, ನಾಯಕನಾಗಿ ನಟಿಸಿದ ಅವರ ಮೊದಲನೇ ಸಿನಿಮಾ ಆಗುತ್ತಿರಲಿಲ್ಲ. ಅಥವಾ ಮೊದಲನೇ ಚಿತ್ರದಿಂದ ಅವರ ಬದುಕು ಇನ್ಯಾವ ದಾರಿಯತ್ತ ಸಾಗುತ್ತಿತ್ತೋ, ಬಲ್ಲವರಾರು?

ಮೊದಲನೆಯ ಅವಕಾಶ ಕಳೆದುಕೊಂಡವರಿಗೆ ಜೀವನ ಎರಡನೆಯ ಅವಕಾಶವನ್ನೂ ನೀಡುತ್ತದೆ. ಅದು ಯಾವ ಸಮಯದಲ್ಲಿ ಎದುರಾಗುತ್ತದೋ ಆವಾಗ ಅಪ್ಪಿಕೊಂಡುಬಿಡ–ಬೇಕು. ಅದು ನಮ್ಮ ಆರಾಮಿನ, ಬಿಡುವಿನ ಸಮಯ ನೋಡಿ, ಕೇಳಿಕೊಂಡು ಬರುವುದಿಲ್ಲ. ಹಾಗಾಗಿ ಅವಕಾಶ ಯಾವ ಹೊತ್ತಿನಲ್ಲಿ ಎದುರಾದರೂ ಪಕ್ಕನೆ ಎದ್ದುಬಿಡಬೇಕು. ಮುಂಬರುವ ನಾಳೆಗಳನ್ನು ನಾವೇ ಬರೆಯುವ ನಿಟ್ಟಿನಲ್ಲಿ.

-ಭಾರತಿ ವಿಷ್ಣುವರ್ಧನ್

One thought on “ವಿಷ್ಣು ಮೊದಲು ನಾಯಕನಾಗಬೇಕಾಗಿದ್ದಿದ್ದು ನಾಗರಹಾವಲ್ಲಲ್ಲ!

Leave a Reply

Your email address will not be published. Required fields are marked *

1 × 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top