ವಿಷ್ಣುವರ್ಧನ್‌ಗೆ ನಾಮಕರಣ ಮಾಡಿದವರು ಹೆತ್ತವರಲ್ಲ!

Posted In : ಅಂಕಣಗಳು, ಬಾಳ ಬಂಗಾರ

ಅಭಿನಯ ರಂಗದಲ್ಲಿರುವ ಬಹುತೇಕ ನಟ ನಟಿಯರು ಯಾವತ್ತೂ ಸುಂದರವಾಗಿ ಕಾಣುತ್ತಾರೆ, ಅವರ ಆರೋಗ್ಯ ಕಾಂತಿಯುತವಾಗಿ ಕೂಡಿರುತ್ತದೆ. ಯಾವತ್ತಾದರೂ ನೀವು ಈ ಪ್ರಶ್ನೆಯನ್ನು ಕೇಳಿಕೊಂಡು ಅಥವಾ ಪತ್ರಿಕೆ, ಟಿವಿಗಳಲ್ಲಿ ನೋಡಿ ಆಶ್ಚರ್ಯಪಟ್ಟಿದ್ದೀರಾ? ಕೆಲವರು ಅದು ಮುಖಕ್ಕೆ ಹಚ್ಚುವ ಬಣ್ಣದಿಂದ ಎಂದು ಹೇಳಿ ತಮಗೆ ತಾವೇ ಸಮಾಧಾನ ಪಟ್ಟುಕೊಳ್ಳಬಹುದು.

ಬಣ್ಣದ ಹೊರತಾಗಿಯೂ ನಾವು ಕಲಾವಿದರು ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ನಿಯಮಿತ ಮತ್ತು ಪೋಷಕಾಂಶಯುಕ್ತ ಆಹಾರ ಸೇವನೆ, ವ್ಯಾಯಾಮ ಹೀಗೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೇವೆ. ಆದರೆ ಅದು ಹೊರ ಜಗತ್ತಿಗೆ ಕಾಣುವುದಿಲ್ಲ ಅಷ್ಟೇ. ಕಾಣುವುದು ಅವೆಲ್ಲದರ ಪರಿಣಾಮವಷ್ಟೆ. ಕಲಾವಿದರು ಸೌಂದರ್ಯ ಮತ್ತು ಫಿಟ್‌ನೆಸ್ ಕಡೆಗೆ ಗಮನ ನೀಡುವುದು ಈ ಕ್ಷೇತ್ರದ ಅಗತ್ಯ ಕೂಡ ಹೌದು. ಇದೇ ವಿಚಾರವಾಗಿ ಕೆಲವರು ಸಿನಿಮಾ ಮಂದಿ ಯಾವತ್ತೂ ಚೆನ್ನಾಗಿಯೇ ಕಾಣುತ್ತಾರೆ, ಅದು ಕೃತಕ ಒಂದು ರೀತಿಯ ಶೋಕಿ ಅಥವಾ ಆಡಂಬರ ಎಂದೆಲ್ಲಾ ತಪ್ಪು ಭಾವಿಸುತ್ತಾರೆ. ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಲು ನಾನು ಇಚ್ಚಿಸುತ್ತೇನೆ. ಚೆನ್ನಾಗಿ ಕಾಣುವುದು ನಮ್ಮ ಉದ್ಯೋಗದ ಒಂದು ಭಾಗ ಎಂದು ಹೇಳಲು ನಾನು ಇಷ್ಟಪಡುತ್ತೇನೆ.

ವಿಷ್ಣು ಶೂಟಿಂಗ್ ಇರದಿದ್ದ ಸಮಯದಲ್ಲಿ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳಲು ಏನೇನು ಬೇಕೋ ಆಯಾ ಕಸರತ್ತುಗಳತ್ತ ಗಮನ ಹರಿಸುತ್ತಿದ್ದರು. ಅವರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದರು. ಸಾಮಾನ್ಯವಾಗಿ ಬೆಳಗ್ಗಿನ ಹೊತ್ತಿನಲ್ಲೇ ಅವರು ಯೋಗ ಮಾಡುತ್ತಿದ್ದುದು. ಆದರೆ ಕೆಲವು ಸಲ ಶೂಟಿಂಗ್ ಇದ್ದಾಗ ಮಾಡದೆ ಹೋಗಿಬಿಡುತ್ತಿದ್ದರು. ಸಂಜೆ ಶೂಟಿಂಗ್‌ನಿಂದ ಹಿಂದಿರುಗಿದ ನಂತರ ಮಾಡುತ್ತಿದ್ದ ಮೊದಲ ಕೆಲಸ ಅಂದರೆ ಯೋಗ. ಅದನ್ನು ಮುಗಿಸದೆ ಬೇರಾವ ಕೆಲಸವನ್ನೂ ಅವರು ಮಾಡುತ್ತಿರಲಿಲ್ಲ. ಯೋಗ ಮಾಡದೆ ಯಾವ ದಿನವೂ ಅವರು ನಿದ್ದೆ ಮಾಡಿದ್ದಿಲ್ಲ. ಅಷ್ಟು ಪ್ರಾಶಸ್ತ್ಯವನ್ನು ಅವರು ಯೋಗಕ್ಕೆ ನೀಡುತ್ತಿದ್ದರು. ಆಪ್ತರಿಗೂ ಅದನ್ನು ಅಭ್ಯಾಸ ಮಾಡುವಂತೆ ಹೇಳುತ್ತಿದ್ದರು.

ಇನ್ಸಪೆಕ್ಟರ್ ಧನುಷ್ ಎಂಬ ಹಿಂದಿ ಚಿತ್ರದಲ್ಲಿ ನಟಿಸುವಾಗ ಒಂದು ದೃಶ್ಯದಲ್ಲಿ ನಮ್ಮೆ ಯಜಮಾನರು ತಮ್ಮ ಕಾಲೊಂದನ್ನು ಎತ್ತಿ ಮಾರುತಿ ವ್ಯಾನಿನ ಟಾಪ್ ಮೇಲೆ ಇಡಬೇಕಾಗಿತ್ತು. ಅಷ್ಟೇ ಲೀಲಾಜಾಲವಾಗಿ ವಿಷ್ಣು ತಮ್ಮ ಕಾಲನ್ನು ವ್ಯಾನ್ ಟಾಪ್ ಮೇಲೆ ಕೆಲಸ ನಿಮಿಷಗಳ ಕಾಲ ಎತ್ತಿರಿಸುತ್ತಾರೆ. ಆ ದೃಶ್ಯವನ್ನು ಹೇಗೆ ಒಪ್ಪಿಕೊಂಡರೋ ನನಗೆ ತಿಳಿದಿಲ್ಲ. ಈಗಲೂ ಕೆಲ ಅಭಿಮಾನಿಗಳು ಅದನ್ನು ನೆನಪಿಸಿಕೊಳ್ಳುವಾಗ ಅದರ ಮಹತ್ವ ಅರಿವಾಗುತ್ತದೆ. ಅವರಿಗೆ ಮಾರ್ಷಲ್ ಆರ್ಟ್‌ಸ್‌‌ನಲ್ಲೂ ತುಂಬಾ ಆಸಕ್ತಿ. ಸಿನಿಮಾದಲ್ಲಿ ಮಾರ್ಷಲ್ ಆರ್ಟ್‌ಸ್‌‌ಅನ್ನು ಯಾರು ಬೇಕಾದರೂ ನಟನೆ ರೂಪದಲ್ಲಿ ಪ್ರದರ್ಶಿಸಬಹುದು. ಅದು ತಪ್ಪಾಗಿದ್ದರೂ ಅದನ್ನು ಸ್ವೀಕರಿಸುತ್ತಾರೆ ಪ್ರೇಕ್ಷಕರು. ಎಲ್ಲೋ ಕೆಲವರು, ಮಾರ್ಷಲ್ ಆರ್ಟ್‌ಸ್‌ ಕಲಿತವರು ಅದನ್ನು ಗುರುತುಹಿಡಿದು ಪತ್ತೆ ಮಾಡುವರಷ್ಟೆ. ವಿಷ್ಣು ನಟನೆಗೆ ಮಾತ್ರ ತೃಪ್ತನಾಗದೆ ನಿಜ ಜೀವನದಲ್ಲಿ ಸಮರಕಲೆಯನ್ನು ಅಭ್ಯಸಿಸಿದರು. ಒಮ್ಮೆ ಅದನ್ನು ಸಾರ್ವಜನಿಕವಾಗಿ ಹೇಳಿಯೂ ಇದ್ದರು. ಏನೆಂದರೆ ತಮ್ಮ ಕಾಲದ ನಾಯಕ ನಟರಲ್ಲಿ ಸಮರಕಲೆಯನ್ನು ಅಭ್ಯಾಸ ಮಾಡಿದವರೆಂದರೆ ತಾವು ಮತ್ತು ಕಮಲ್ ಹಾಸನ್ ಇಬ್ಬರೇ ಎಂದು.

ಈಗೀಗ ಯೋಗದ ಕುರಿತೂ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಅವರಿದ್ದಿದ್ದರೆ ಅದನ್ನು ಕಂಡು ಖುಷಿಪಟ್ಟಿರೋರು. ಶೂಟಿಂಗ್‌ನಿಂದ ಹಿಂದಿರುಗಿದ ನಂತರ ಅವರು ಸಂಗೀತಾಭ್ಯಾಸ ಮಾಡುತ್ತಿದ್ದರು. ಅಂದರೆ ಶಾಸ್ತ್ರೀಯ ಅಭ್ಯಾಸವಲ್ಲ, ಸಿನಿಮಾ ಹಾಡುಗಳನ್ನು ತಮ್ಮಷ್ಟಕ್ಕೆ ತಾವು ಹಾಡಿಕೊಳ್ಳುತ್ತಿದ್ದರು. ಹಾಡುಗಾರಿಕೆ ಮತ್ತು ಯೋಗಾಭ್ಯಾಸ ಇವೆರಡೂ ಇಲ್ಲದೆ ಅವರ ದಿನವೇ ಕಳೆಯುತ್ತಿರಲಿಲ್ಲ. ಹಾಂ ಇನ್ನೊಂದು ಅಭ್ಯಾಸವನ್ನೂ ಅವರು ಇಟ್ಟುಕೊಂಡಿದ್ದರು. ಅವರು ತಬಲಾ ನುಡಿಸುತ್ತಿದ್ದರು. ಈಗ ಯೋಚಿಸಿದರೆ ಕಲೆ, ಸಂಗೀತ, ವಾದ್ಯಗಳ ಕುರಿತು ಅವರಿಗಿದ್ದ ಆಸಕ್ತಿ ಅಚ್ಚರಿ ಹುಟ್ಟಿಸುತ್ತದೆ. ಬರಿಯ ನಟನೆ ಮಾಡಿಕೊಂಡು ಅದರಲ್ಲೇ ತೃಪ್ತಿ ಕಂಡುಕೊಂಡು ವ್ಯಾಾಪಾರಕ್ಕೆ ಇಳಿದುಬಿಡುವವರಿದ್ದಾರೆ ಅವರ ನಡುವೆ ವಿಷ್ಣು ನಿಜಾರ್ಥದಲ್ಲಿ ಕಲೆಯನ್ನೆ ಉಸಿರಾಗಿಸಿಕೊಂಡಿದ್ದಂತೆ ಬದುಕಿದರು. ಅವರ ಮನೆತನವೇ ಒಂದು ಲೆಕ್ಕದಲ್ಲಿ ಕಲಾವಂತರ ಬೀಡಾಗಿತ್ತು. ನಮ್ಮವರ ಸಹೋದರಿ ಮೈಸೂರು ಆಸ್ಥಾನದಲ್ಲಿ ಕಥಕ್ ನರ್ತಕಿಯಾಗಿದ್ದರು. ನಮ್ಮವರ ಹಿರೀಕರು ಮಂಡ್ಯದ ಹಲ್ಲೆಗೆರೆ ಹಳ್ಳಿಯಿಂದ ಬಂದವರಾಗಿದ್ದರು.

ವಿಷ್ಣು ಅವರ ತಂದೆಯವರು ಮತ್ತು ತಾತನವರು ಮೈಸೂರು ಮಹಾರಾಜರ ಸಂಪರ್ಕವನ್ನು ಹೊಂದಿದ್ದರು. ಅವರು ಕವಿಗಳಾಗಿದ್ದರು. ಕುಳಿತಲ್ಲೇ ದೇವರ ನಾಮ, ಕೀರ್ತನೆ, ಭಜನೆಗಳನ್ನು ಬರೆಯುತ್ತಿಿದ್ದರಂತೆ ಅವರು. ಅವರ ಕೈಯಲ್ಲಿ ಮೂಡಿದ ಎಲ್ಲಾ ರಚನೆಗಳೂ ಜನರ ಮತ್ತು ಮಹಾರಾಜರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದವಂತೆ. ನಮ್ಮ ಮಾವನವರಿಗೆ ಶಾರೀರವೊಂದು ಶುದ್ಧವಾಗಿಲ್ಲವೆಂಬ ಚಿಂತೆ ಇದ್ದರೂ ಅವರದನ್ನು ಮೀರುವಂತೆ ಬರವಣಿಗೆಯಲ್ಲಿ ತೊಡಗಿಕೊಂಡರು. ಇಲ್ಲದೇ ಹೋಗಿದ್ದರೆ ಖಂಡಿತವಾಗಿ ಅವರು ಹಾಡುಗಾರಿಕೆಯಲ್ಲಿ ಹೆಸರು ಮಾಡುತ್ತಿದ್ದರು. ಆದರೇನಂತೆ ಅವರು ರಚಿಸಿದ ದೇವರನಾಮ, ಕೀರ್ತನೆಗಳಿಗೆ ಮನ್ನಣೆ ದೊರೆಯಿತಲ್ಲಾ. ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಹಾಗೆ ಏನು ಬರೆದರೂ ಚೆನ್ನಾಗಿರುತ್ತವೆಯಲ್ಲಾ, ಇದು ಹೇಗೆ ಸಾಧ್ಯ ಎಂದು ಯಾರಾದರೂ ಕೇಳಿದರೆ ಅವರು ಎಲ್ಲವೂ ದೈವೇಚ್ಚೆ, ದೈವದ ಪ್ರೇರಣೆ ಎಂದು ಮೇಲಕ್ಕೆ ಕೈ ತೋರಿಸುತ್ತಿದ್ದರಂತೆ. ಅಂದರೆ ಕಲೆ ಅನ್ನೋದು ಅವರ ವಂಶದಲ್ಲೇ ಹರಿದುಬಂದಿತ್ತೇನೋ. ಒಂದು ಪ್ರಸಂಗ ನೆನಪಾಗುತ್ತಿದೆ. ನಮ್ಮವರಿಗೆ ಅವರ ಮೂಲ ಹೆಸರು ಹೇಗೆಬಂದಿತೆಂಬ ಕುತೂಹಲವಿದ್ದವರಿಗೆ ಖಂಡಿತವಾಗಿ ಈ ಪ್ರಸಂಗ ಸ್ವಾರಸ್ಯಕರವಾಗಿ ತೋರುತ್ತದೆ.

ಚಾಮರಾಜ ಒಡೆಯರಿದ್ದಾಗ ಮಾವನವರು ಆಸ್ಥಾನಕ್ಕೆ ಹೋಗಿ ಬಂದು ಮಾಡುತ್ತಿದ್ದರು. ರಾಜರಿಗೂ ಮಾವನವರಿಗೂ ವಿಶಿಷ್ಟವಾದ ಅನ್ಯೋನ್ಯ ಬಾಂಧವ್ಯವಿತ್ತು. ನಮ್ಮ ಮಾವನವರ ಹೆಸರು ನಾರಾಯಣ ರಾವ್ ಎಂದು. ನಮ್ಮತ್ತೆಯವರು ಗರ್ಭಿಣಿಯಾಗಿದ್ದರು. ಈ ವಿಚಾರ ತಿಳಿದ ಒಡೆಯರರು ಕೇಳಿದರಂತೆ ಏನು ನಾರಾಯಣ ರಾಯರೇ… ತಂದೆ ಆಗ್ತಿದೀರಂತೆ. ಇವರು ಹೌದು ಸ್ವಾಮಿಗಳೇ ಎಂದುತ್ತರಿಸಿದರಂತೆ. ಆಗಿನ ಕಾಲದವರಿಗೆ ಅದ್ಯಾವ ಶಕ್ತಿ ಇತ್ತೋ ನನಗೆ ಗೊತ್ತಿಲ್ಲ, ಒಂದು ಕ್ಷಣ ಮೌನ ತಾಳಿದ ಒಡೆಯರರು ಹೇಳಿದ್ದಿಷ್ಟು ರಾಯರೇ ನಿಮಗೆ ಭಗವಂತನ ದಯೆಯಿಂದ ಗಂಡು ಮಗುವೇ ಹುಟ್ಟುತ್ತದೆ. ಅವನಿಗೆ ಸಂಪತ್ ಕುಮಾರನೆಂದು ಹೆಸರಿಡಿ, ಒಳ್ಳೆಯದಾಗುತ್ತದೆ. ಅದರಂತೆ ಮಾವನವರು ನಮ್ಮವರಿಗೆ ಅದೇ ಹೆಸರನ್ನಿಟ್ಟರು.

ಹೀಗೆ ತಾವಾಗಿಯೇ ಮಾವನನ್ನು ಕೇಳಿಕೊಂಡು ಮಗುವಿಗೆ ಹೆಸರಿಡುವುದೆಂದರೆ ಅದು ದೈವಲೀಲೆಯೇ ಸರಿ. ನಾವೆಲ್ಲಾ ಕತೆ ಪುರಾಣಗಳಲ್ಲಿ ಓದುತ್ತಿದ್ದೆವು ಈ ರೀತಿ ನಾಮಕರಣ ಮಾಡುವ ಸನ್ನಿವೇಶಗಳನ್ನು ಆದರೆ ನಮಗೆ ಹತ್ತಿರದ ಕಾಲದಲ್ಲೆ ಅದು ಅಪ್ತರಿಗೇ ಘಟಿಸಿದ ಘಟನೆ ಎನ್ನುವುದನ್ನು ಮನಗಂಡಾಗ ಮನಸ್ಸು ತುಂಬಿ ಬರುತ್ತದೆ. ಆ ಭಗವಂತನ ಕೃಪೆಗೆ ಶರಣು. ನಮ್ಮಲ್ಲಿ ಕುಟುಂಬದವರನ್ನು ಅನೇಕ ಹೆಸರುಗಳಿಂದ ಕರೆಯುವುದು ವಾಡಿಕೆ. ಶಾಲೆಯಲ್ಲಿ ಒಂದು ಹೆಸರಿದ್ದರೆ ಮನೆಯಲ್ಲಿ ಇನ್ನೊಂದು. ಅದರ ಜತೆಗೆ ಅಡ್ಡ ಹೆಸರು ಬೇರೆ. ಕಡೆಯಲ್ಲಿ ಹೇಗಾಗುತ್ತದೆಂದರೆ ಹೊರಗೆ ಎಲ್ಲರೂ ಕರೆಯುವ ಹೆಸರೇ ಶಾಶ್ವತವಾಗಿ ಉಳಿದುಬಿಡುತ್ತದೆ. ಆದರೆ ವಿಷ್ಣುವಿಗೆ ತಮ್ಮ ಮೂಲ ಹೆಸರಿನ ಮೇಲೆ ವಿಶೇಷವಾದ ಮಮತೆ ಮತ್ತು ಪ್ರೀತಿ. ಸಂಪತ್ ಕುಮಾರನೆಂದರೆ ಮೇಲುಕೋಟೆಯ ಚೆಲುವ ನಾರಾಯಣನಲ್ಲವೆ. ಅದಕ್ಕೇ ಅಂತಲೇ ಕಾಣುತ್ತೆ ನಮ್ಮವರಿಗೆ ಮೇಲುಕೋಟೆಯೆಂದರೂ ತುಂಬಾ ಅಚ್ಚುಮೆಚ್ಚು. ಆ ಸ್ಥಳದೊಂದಿಗೆ ಆತ್ಮೀಯ ಬಾಂಧವ್ಯವನ್ನಿರಿಸಿಕೊಂಡಿದ್ದರು.

Leave a Reply

Your email address will not be published. Required fields are marked *

five × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top