About Us Advertise with us Be a Reporter E-Paper

Breaking Newsಸಿನಿಮಾಸ್

ವಿಷ್ಣು ಸ್ಮಾರಕ: ಇಷ್ಟು ವರ್ಷದ ತಾಳ್ಮೆ ಈಗಿಲ್ಲ

ಭಾರತಿ ವಿಷ್ಣುವರ್ಧನ್ ಅಭಿಪ್ರಾಯ

ಈ ವರ್ಷ, ಮುಂದಿನ ವರ್ಷ ಅಂತ ಹೇಳುತ್ತಲೇ ಒಂಭತ್ತು ವರ್ಷ ಆಗೋಯ್ತು. ತಾಳ್ಮೆ ಅನ್ನೋದು ಎಲ್ಲಿಯವರೆಗೆ ಇರುತ್ತೆ. ನೋಡೋಣ, ಹತ್ತನೇ ವರ್ಷದ ಒಳಗೆ ಆಗದೇ ಇದ್ದರೆ, ಬೇಕಾಗಿಲ್ಲ. ಇಷ್ಟರಲ್ಲೇ ಒಂದು ನಿರ್ಧಾರಕ್ಕೆ ಬರುತ್ತೇವೆ …’ ಹೀಗೆ ಬೇಸರದಿಂದಲೇ ಹೇಳಿಕೊಂಡರು ಭಾರತಿ ವಿಷ್ಣುವರ್ಧನ್. ಅವರು ಹೇಳಿಕೊಂಡಿದ್ದು ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು. ಹೌದು, ವಿಷ್ಣು ಸ್ಮಾರಕ ಕುರಿತಂತೆ ಗೊಂದಲ ಉಂಟಾಗಿದ್ದು ಗೊತ್ತೇ ಇದೆ.

ಸರ್ಕಾರ ಮನಸ್ಸು ಮಾಡಿದರೆ, ಕೇವಲ ಗಂಟೆಗಳಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕಿರುವ ಅಡ್ಡಿ ದೂರ ಮಾಡಬಹುದು. ಆದರೆ, ಯಾಕೆ ಆಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆ. ಬೆಂಗಳೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಯ್ತು ಎಂಬ ಕಾರಣಕ್ಕೆ ವರ್ಷಗಟ್ಟಲೆ ಕಾಯಬೇಕಾಯ್ತು. ಇನ್ನೆಲ್ಲೋ ಜಾಗ ತೋರಿಸಿದರು. ಆ ಜಾಗ ಚಿಕ್ಕದ್ದಾಗಿತ್ತು. ಕೊನೆಗೆ ಅಲ್ಲಿ ಬೇಡ ಮೈಸೂರಲ್ಲಿ ಅಂದ್ರು. ಅಲ್ಲಿ ಹೋಗೋಣ ಅಂದಾಗ, ಅಭಿಮಾನಿಗಳು ಮನವಿ ಮಾಡಿ ಬೇಡ ಅಂದರು. ಕೊನೆಗೆ ಅಲ್ಲಿ ಹೋಗುವುದು ಬೇಡ ಅಂತ ನಿರ್ಧರಿಸಿದೆವು. ಅಷ್ಟರಲ್ಲೇ ಮೂರುವರೆ ವರ್ಷ ಕಳೆದುಹೋಯ್ತು.

ಮೈಸೂರಿನಲ್ಲಿ ತೋರಿಸಿದ ಜಾಗದಲ್ಲಿ ಪೂಜೆಯೂ ಆಯ್ತು. ಫೌಂಡೇಷನ್ ಆಗಿ, ಕಾಂಪೌಂಡ್ ಕೂಡ ಹಾಕಬೇಕಿತ್ತು. ಆ ವೇಳೆ ಯಾರೋ ಬಂದು ಗೋಮಾಳ ಜಾಗ ಅಂತ ಸಮಸ್ಯೆ ಮುಂದಿಟ್ಟರು. ಗೋಮಾಳ ಜಾಗ ರೈತರಿಗೆ ಹೇಗೆ ಸೇರುತ್ತೆ ಗೊತ್ತಿಲ್ಲ. ಸರ್ಕಾರ ಮುತುವರ್ಜಿ ವಹಿಸಿದರೆ ಎಲ್ಲವನ್ನೂ ಬೇಗ ಇತ್ಯರ್ಥ ಪಡಿಸಬಹುದು. ಆದರೆ, ಆಗುತ್ತಿಲ್ಲ.

ನನ್ನದ್ದೊಂದು ಪ್ಲಾನಿಂಗ್ ಇದೆ. ನೀವೆಲ್ಲರೂ ಒಪ್ಪಿದರೆ ಅದನ್ನು ಇಷ್ಟರಲ್ಲೇ ಹೇಳ್ತೀವಿ. ಯಜಮಾನರಿಗೆ ಮೈಸೂರಲ್ಲೇ ಇರಬೇಕೆಂಬ ಆಸೆ ಇತ್ತು. ನಮಗೂ ಅದೇ ಇದೆ. ಆದರೆ, ಯಾರ‍್ಯಾರೋ ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ತಪ್ಪು. ಯಾರಿಗೆ ಏನೇ ಪ್ರಶ್ನೆಗಳಿದ್ದರೂ ನೇರವಾಗಿ ಬಂದು ಕೇಳಲಿ.

ಯಜಮಾನರು ಇದ್ದಾಗ ಅಭಿಮಾನಿಗಳೇ ಮನೆಗೆ ಬರುತ್ತಿದ್ದರು. ಅವರು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಹಾಗೆಯೇ, ಬರುವ ಅಭಿಮಾನಿಗೆ ಹೂವು, ಹಾರ ತರಬೇಡಿ ಅನ್ನುತ್ತಿದ್ದರು. ಆ ಹಣದಲ್ಲಿ ನಿಮ್ಮ ಮಕ್ಕಳಿಗೆ ಪುಸ್ತಕ ಕೊಡಿಸಿ ಎನ್ನುತ್ತಿದ್ದರು. ಅವರ ಹೆಸರಲ್ಲಿ ಹಣ ಖರ್ಚು ಮಾಡಿ ಕಾರ್ಯಕ್ರಮ ನಡೆಸುವ ಬದಲು, ಮಕ್ಕಳಿಗೆ ಪುಸ್ತಕ, ಪೆನ್ನು ಅಗತ್ಯ ವಸ್ತು ಕೊಡಿಸಿ. ಅದು ಬಿಟ್ಟು, ವಿಷ್ಣುವರ್ಧನ್ ಕಾರ್ಯಕ್ರಮಕ್ಕೆ ಅವರ ಕುಟುಂಬದವರೇ ಇಲ್ಲ ಅಂತೆಲ್ಲಾ ಹೇಳುವುದು ಬೇಡ. ಆಹ್ವಾನಿಸಿದರೂ, ನಮಗೆ ಎಲ್ಲಾ ಕಡೆ ಹೋಗಲು ಸಾಧ್ಯವೂ ಇಲ್ಲ.

ಅವರ ಹೆಸರ ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ ಅಂತ ದಯವಿಟ್ಟು ಕರೆಯಬೇಡಿ. ಅಭಿಮಾನವಿದ್ದರೆ, ಒಳ್ಳೆಯ ಕೆಲಸ ಮಾಡಿ, ಖರ್ಚು ಮಾಡುವ ಬದಲು ಅಗತ್ಯವಿದ್ದವರಿಗೆ ನೆರವಾಗಿ’ ಎಂದು ಮನವಿ ಮಾಡಿಕೊಳ್ಳುತ್ತಾರೆ ಭಾರತಿ.

ಸೆ. 18ರಂದು ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬ. ಈ ಬಾರಿ  ಹಲವು ಕಾರ್ಯಕ್ರಮಗಳು ಜರುಗಲಿವೆ. ವಿಭಾ ಚಾರಿಟಬಲ್ ಟ್ರಸ್ಟ್ ಹಾಗು ರೋಟರಿ ಬೆಂಗಳೂರು ಸೌಥ್ ಈಸ್ಟ್ ಸಂಯೋಜನೆಯಲ್ಲಿ ಸೆ.14 ಹೃದಯ ಗೀತೆ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ನಡೆಯಲಿರುವ ಕಾರ್ಯಕ್ರಮ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ದೇಣಿಗೆಗಾಗಿ ನಡೆಯಲಿದೆ. ಆ ಕಾರ್ಯಕ್ರಮದಿಂದ ಬಂದಂತಹ ಹಣ ಸುಮಾರು 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ನಟ,ನಟಿಯರು, ಗಾಯಕ,ಗಾಯಕಿಯರು ಭಾಗವಹಿಸಲಿದ್ದಾರೆ.

ಸೆ.18 ರಂದು ಸುಚಿತ್ರಾ ಫಿಲ್ಮ್‌ಂ ಸೊಸೈಟಿಯಲ್ಲಿ ಅನಿರುದ್ಧ ಅವರು ರಚಿಸಿ, ಆರು ಕಿರುಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಎಂದಿನಂತೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದು ರಕ್ತದಾನ, ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮಗಳೂ ಜರುಗಲಿವೆ.

Tags

Related Articles

Leave a Reply

Your email address will not be published. Required fields are marked *

Language
Close