About Us Advertise with us Be a Reporter E-Paper

ಅಂಕಣಗಳು

ಹಗರಣಗಳ ಮೂಟೆಯಾಗದಿರಲಿ

ಕಳೆದ ಬಜೆಟ್‌ನಲ್ಲಿ ಹಾಸನ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಕುಮಾರಸ್ವಾಮಿ, ಈ ಸಲದ ಬಜೆಟನ್ನು ಬಹಳ ಎಚ್ಚರಿಕೆಯಿಂದ ಮಂಡಿಸಿದ್ದರೂ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮರುವಿಂಗಡನೆ ಮಾಡಿ ತವರು ಜಿಲ್ಲೆ ಹಾಸನದಲ್ಲೊಂದು ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೇ ಬೆಳಗಾವಿಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜ್ಯಾದ್ಯಂತ 200ಕ್ಕಿಂತ ಅಧಿಕ ಎಂಜಿನಿಯರಿಂಗ್ ಕಾಲೇಜುಗಳನ್ನೊಳಗೊಂಡ ವಿಟಿಯುನಿಂದ ಪ್ರತಿವರ್ಷ 4 ಲಕ್ಷ ವಿದ್ಯಾರ್ಥಿಗಳು ಬಿಇ, ಎಂ.ಟೆಕ್, ಎಂಬಿಎ, ಎಂಸಿಎ ಸೇರಿದಂತೆ ಇತರೆ ಕೊರ್ಸ್‌ಗಳ ವ್ಯಾಸಂಗ ಮಾಡಿ ಹೊರಬರುತ್ತಿದ್ದಾರೆ. ಇದರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ದಕ್ಷಿಣ ಕರ್ನಾಟಕ ಭಾಗದವರು ಎಂದು ದಾಖಲೆಗಳು ತಿಳಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭೌಗೊಳಿಕ ಪ್ರದೇಶ ಆಧರಿಸಿ ವಿಟಿಯು ಮರುವಿಂಗಡಣೆ ಮಾಡುವ ನಿರ್ಧಾರ ಸ್ವಾಗತಾರ್ಹವೇ.

ವಿಟಿಯು ವಿಭಜನೆ ಮಾಡುವಂತೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಮಾಲೂರು, ಬಂಗಾರಪೇಟೆ, ಮುಳಬಾಗಿಲು ಕ್ಷೇತ್ರಗಳನ್ನು ಪ್ರತಿನಿಧಿಸುವ ಸಚಿವರು, ಶಾಸಕರ ಬಹುದಿನಗಳ ಬೇಡಿಕೆಯೂ ಆಗಿತ್ತು. ಬೆಂಗಳೂರು ವಿವಿ ವಿಭಜನೆ ಹಾಗೂ ಅವಿಭಜಿತ ಆಂಧ್ರಪ್ರದೇಶದ ಜೆಎನ್‌ಟಿಯು ವಿವಿಯನ್ನು ವಿಭಜಿಸಿದಂತೆ ವಿಟಿಯುವನ್ನು ಎರಡು ಭಾಗಗಳನ್ನಾಗಿ ಮಾಡಿ ಸರ್.ಎಂ. ವಿಶ್ವೇಶ್ವರಯ್ಯನವರ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ಇನ್ನೊಂದು ವಿವಿ ಅಸ್ತಿತ್ವಕ್ಕೆ ತರಬೇಕು ಎಂದು ಆ ಭಾಗದ ಶಾಸಕರು, ಸಚಿವರು, ಶಿಕ್ಷಣ ತಜ್ಞರು ಉನ್ನತ ಶಿಕ್ಷಣ ಇಲಾಖೆಗೆ ಈ ಹಿಂದೆಯೇ ಪತ್ರ ಬರೆದಿದ್ದರು. ಆದರೆ, ಕುಮಾರಸ್ವಾಮಿಯವರು ಮುದ್ದೇನಹಳ್ಳಿ ಬದಲು ಹಾಸನಕ್ಕೆ ವಿವಿಯನ್ನು ಕೊಡುಗೆಯಾಗಿ ನೀಡಲು ಮುಂದಾಗಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಯವರ ಸ್ವಹಿತಾಸಕ್ತಿ, ತವರು ಪ್ರೇಮ ಮೆರೆದಿದ್ದಾರಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಭೌಗೊಳಿಕ ಪ್ರದೇಶ ಆಧರಿಸಿ ವಿಟಿಯು ಮರುವಿಂಗಡಣೆ ಮಾಡುವ ನಿರ್ಧಾರ ಉತ್ತಮವಾದದ್ದೇ.

ಮೌಲ್ಯಮಾಪನ ವಿಳಂಬ, ಪರೀಕ್ಷೆ ಪದ್ಧತಿ, ಪಠ್ಯ ಬೋಧನೆ, ಸಿಬ್ಬಂದಿ ನೇಮಕ, ಆರ್ಥಿಕ ಮುಗ್ಗಟ್ಟು ಸೇರಿದಂತೆ ಮತ್ತಿತರ ವಿಷಯಕ್ಕೆ ಬೆಳಗಾವಿಯ ವಿಟಿಯು ಅನೇಕ ಬಾರಿ ಸದ್ದು ಮಾಡಿದೆ. ವಿಟಿಯು ಸ್ಥಾಪನೆಯಾದ 1998ರಿಂದ ಹಗರಣದ ವಿಷಯವಾಗಿಯೇ ಹೆಚ್ಚು ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಹಾಸನದಲ್ಲಿ ತಲೆ ಎತ್ತಲಿರುವ ನೂತನ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಈ ಸಮಸ್ಯೆಗಳು ಮರುಕಳಿಸದಿರದಂತೆ ಎಚ್ಚರ ವಹಿಸಬೇಕಾದದ್ದೂ ಅಷ್ಟೇ ಮುಖ್ಯವಾಗಿದೆ. ಸಿಬ್ಬಂದಿ ನೇಮಕದಲ್ಲಿ ಪಾರದರ್ಶಕತೆ ಅಳವಡಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಅಲ್ಲದೇ, ಬೆಂಗಳೂರು, ಮೆಸೂರು, ಬೆಳಗಾವಿ ಹಾಗೂ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಟಿಯು ಪ್ರಾದೇಶಿಕ ಕೇಂದ್ರಗಳ ಬಲವರ್ಧನೆಯತ್ತಲೂ ಗಮನಹರಿಸಬೇಕಿದೆ. ನೂತನ ವಿವಿ ಮತ್ತೊಂದು ಹಗರಣಗಳ ಮೂಟೆಯಾಗದಂತೆ ಎಚ್ಚರವಹಿಸಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close