About Us Advertise with us Be a Reporter E-Paper

ಅಂಕಣಗಳು

ಕಸ ಗುಡಿಸುವ ಕಾಯಕ ಮುಗಿಯುವವರೆಗೆ ಕಾಯಬೇಕು…!

- ಎಸ್. ಷಡಕ್ಷರಿ

ಕುತೂಹಲಕಾರಿಯಾದ ನಿಜ ಜೀವನದ ಘಟನೆ ಒಂದು ಇಲ್ಲಿದೆ. ಮಹಾತ್ಮ ಗಾಂಧೀಜಿಯವರ ಜೀವನದಲ್ಲಿ ನಡೆದ ಘಟನೆ.
1936ರ ಸುಮಾರಿನಲ್ಲಿ ಗಾಂಧೀಜಿಯವರು ಮಹಾರಾಷ್ಟ್ರ ರಾಜ್ಯದ ವಾರ್ಧಾ ನಗರದ ಹೊರವಲಯದಲ್ಲಿ ಶೇಗಾವ್ ಎಂಬ ಹಳ್ಳಿಯಲ್ಲಿ ಪುಟ್ಟ ಪುಟ್ಟ ಕುಟೀರಗಳಿದ್ದ ಒಂದು ಆಶ್ರಮವನ್ನು ಸ್ಥಾಪಿಸಲಾಯಿತು. ಅದು ಎಷ್ಟು ಹಿಂದುಳಿದ ಪ್ರದೇಶವಾಗಿತ್ತು. ಎಂದರೆ ಅಲ್ಲಿ ಅಂಚೆ ಕಚೇರಿಯಾಗಲೀ, ಟೆಲಿಗ್ರಾಫ್ ಕಚೇರಿಯಾಗಲೀ ಇರಲಿಲ್ಲ. ಗಾಂಧೀಜಿಯವರ ಇಚ್ಛೆಯಂತೆ ಎಲ್ಲವೂ ಬಹಳ ಸರಳ ರೀತಿಯಲ್ಲಿ ನಡೆಯುತ್ತಿತ್ತು. ಕನಿಷ್ಠ ಸಂಖ್ಯೆಯ ಜನ ಆಶ್ರಮದಲ್ಲಿ ಇದ್ದರು. ಸರತಿಯ ಪ್ರಕಾರ ಆಶ್ರಮದ ಕಸ ಗುಡಿಸುವಿಕೆ, ಅಡುಗೆ ಮನೆಯ ಕೆಲಸ, ಸಂದರ್ಶಕರ ಉಪಚಾರಗಳನ್ನು ಆಶ್ರಮವಾಸಿಗಳೇ ಮಾಡುತ್ತಿದ್ದರು.

ಒಮ್ಮೆ ಗಾಂಧೀಜಿಯವರನ್ನು ಭೇಟಿಯಾಗಲು ಒಬ್ಬ ಹಿರಿಯ ಉದ್ಯಮಿ ಬಂದಿದ್ದರಂತೆ. ಅವರ ಭೇಟಿ ಬೆಳಗ್ಗೆ ಏಳು ಗಂಟೆಗೆ ನಿಗದಿಯಾಗಿತ್ತು. ಸೂಟು-ಬೂಟು ಶಿಸ್ತಾಗಿ ಬಂದಿದ್ದ ಅವರು ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಮುಂಚೆಯೇ ಬಂದಿದ್ದರಂತೆ. ಅವರು ಬಂದಾಗ ಆಶ್ರಮದಲ್ಲಿ ಹೆಚ್ಚು ಜನರಿರಲಿಲ್ಲ. ಅಲ್ಲೊಬ್ಬರು ಕಸ ಗುಡಿಸುತ್ತ ಇದ್ದರು. ಉದ್ಯಮಿ ಅವರನ್ನು ಕುರಿತು ‘ಏಯ್ ಯಾರಯ್ಯಾ ನೀನು? ಹೋಗಿ ಮಹಾತ್ಮಾಜಿಯವರಿಗೆ ನಿಮ್ಮನ್ನು ಕಾಣಲು ನಾನು ಬಂದಿದ್ದೇನೆಂದು ತಿಳಿಸು’ ಎಂದರಂತೆ. ಕಸಗುಡಿಸುತ್ತಿದ್ದವರು ಇವರನ್ನು ನೋಡಿ ಮುಗುಳ್ನಗೆ ಬೀರಿ ಗಾಂಧಿ ನಿಮ್ಮನ್ನು ಎಷ್ಟು ಹೊತ್ತಿಗೆ ಬರಲು ಹೇಳಿದ್ದಾರೆ? ಎಂದು ಕೇಳಿದರು.

ಉದ್ಯಮಿ ‘ಏಳು ಗಂಟೆಗೆ ಭೇಟಿ ನೀನು ಹೋಗಿ ಅವರಿಗೆ ನಾನು ಬಂದಿದ್ದೇನೆಂದು ತಿಳಿಸಿಬಿಡು’ ಎಂದರು. ಆ ವ್ಯಕ್ತಿ ‘ಸಮಯಕ್ಕೆ ಸರಿಯಾಗಿ ಗಾಂಧೀಜಿ ಬರುತ್ತಾರೆ. ತಾವು ಕಾಯಬಹುದು’ ಎಂದರು. ಉದ್ಯಮಿ ‘ನಾನು ಗಾಂಧಿಯವರನ್ನು ಮಹಾತ್ಮ ಗಾಂಧಿ ಎಂದು ಕರೆಯುತ್ತಿರುವಾಗ ಕಸಗುಡಿಸುವವ ನೀನು ಕೇವಲ ಗಾಂಧಿ ಎನ್ನುತ್ತೀಯಲ್ಲಯ್ಯಾ? ಆದರೂ ನಿನಗೆ ಹೇಳಿದಷ್ಟು ಕೆಲಸ ಮಾಡು. ಮೊದಲು ಹೋಗಿ ಮಹಾತ್ಮರಿಗೆ ನಾನು ಬಂದಿರುವ ವಿಷಯ ತಿಳಿಸು’ ಎಂದು ಏರುದ್ವನಿಯಲ್ಲಿ ಹೇಳಿದರು. ಆದರೆ ಆತ ಅಲ್ಲಿಂದ ಕದಲಲಿಲ್ಲ. ತನ್ನ ಕೆಲಸದಲ್ಲಿ ಮಗ್ನನಾಗಿದ್ದ.

ಉದ್ಯಮಿ ಅಸಹನೆಯಿಂದ ನಾನು ಬಂದು ಒಂಬತ್ತು ನಿಮಿಷವಾಯಿತು. ಇಲ್ಲಿ ಕಾಯುತ್ತಲೇ ಇದ್ದೇನೆ. ನೀನು ಕಸಗುಡಿಸುತ್ತ ಏನೋ ಘನ ಕಾರ್ಯ ಮಾಡುವನಂತೆ ನಿಂತಿದ್ದೀಯ’ ಎಂದು ಗದರಿಸಿದರು. ಆತ ‘ಸ್ವಾಮಿ! ಗಾಂಧಿ ಸಮಯ ಪರಿಪಾಲನೆ ಮಾಡುತ್ತಾರೆ. ನೀವು ಚಿಂತಿಸಬೇಡಿ’ ಎನ್ನುತ್ತಿರುವಂತೆ ಗೋಡೆಯ ಮೇಲಿನ ಗಡಿಯಾರ ಡಣ್ ಡಣ್ ಎಂದು ಏಳು ಸಾರಿ ಗಂಟೆ ಬಾರಿಸಿತು.

ಕಸ ಗುಡಿಸುತ್ತಿದ್ದ ಆ ವ್ಯಕ್ತಿ ತನ್ನ ಕೈಯಲ್ಲಿದ್ದ ಕಸಬರಿಕೆಯನ್ನು ಮೂಲೆಯಲ್ಲಿಟ್ಟರು. ಕೈ ತೊಳೆದುಕೊಂಡು ಬಂದು ಮುಂದೆ ನಿಂತು ‘ಈಗ ಹೇಳಿ! ನನ್ನಿಂದ ಏನಾಗಬೇಕು?’ ಎಂದರು. ಉದ್ಯಮಿ ‘ನೀನೊಬ್ಬ ಅಧಿಕ ಪ್ರಸಂಗಿ! ನಾನು ಆಗಿನಿಂದಲೂ ಮಹಾತ್ಮರಿಗೆ ನಾನು ಬಂದಿದ್ದೇನೆಂದು ಹೋಗಿ ತಿಳಿಸು ಎನ್ನುತ್ತಿದ್ದರೂ, ನೀನು ಏನೂ ಮಾಡದೆ ಈಗ ನನ್ನಿಂದ ಏನಾಗಬೇಕೆಂದು ಕೇಳುತ್ತಿದ್ದೀಯ!’ ಎಂದು ರೇಗಿಬಿಟ್ಟರು.

ಆಗ ಆ ವ್ಯಕ್ತಿ ‘ಏಳು ಗಂಟೆಯವರೆಗೆ ಕಸಗುಡಿಸುವ ಕಾಯಕ ನನ್ನದು. ಹಾಗಾಗಿ ನಿಮ್ಮೊಂದಿಗೆ ಭೇಟಿ ಪ್ರಾರಂಭಿಸಲಾಗಲಿಲ್ಲ. ದಯವಿಟ್ಟು ಕ್ಷಮಿಸಿ. ನೀವು ಭೇಟಿಯಾಗಲು ಬಂದಿರುವ ಗಾಂಧಿ ನಾನೇ! ಈಗ ನನ್ನಿಂದ ಹೇಳಿ’ ಎಂದಾಗ, ತಾವು ಇಷ್ಟು ಹೊತ್ತು ಮಾತನಾಡಿದ್ದು. ರೇಗಿದ್ದು, ಗದರಿಸಿದ್ದು ಮಹಾತ್ಮ ಗಾಂಧಿಯವರನ್ನೇ ಎಂದು ಅರ್ಥಮಾಡಿಕೊಂಡ ಉದ್ಯಮಿಯವರು ಮಹಾತ್ಮರ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳಿದರಂತೆ!

ಈ ಘಟನೆ ಬಹಳ ಸರಳವಾಗಿದ್ದರೂ, ಅದರ ಸಂದೇಶ ಗಹನವಾಗಿದೆಯಲ್ಲವೇ? ಜನಸಾಮಾನ್ಯರಿಗೂ, ಅಸಾಮಾನ್ಯರಿಗೂ ಮಾರ್ಗದರ್ಶನ ಮಾಡುವಂತಿದೆಯಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close