ಬಯಲನ್ನು ಕಾವಲು ಕಾಯವ ಸಂಪ್ರದಾಯ

Posted In : ಕ್ಷಣಹೊತ್ತು ಅಣಿ ಮುತ್ತು

ಬಯಲು ಎನ್ನುವುದು ಬಹಳ ಅರ್ಥಪೂರ್ಣವಾದ ಶಬ್ಧ! ಶರಣರ ಮಾತುಗಳಲ್ಲಿ ಬಯಲಿಗೆ ಗಹನವಾದ ಅರ್ಥವಿದೆ! ವೇದಾಂತಿ ಗಳ ಮಾತುಗಳಲ್ಲಿ ಬಯಲಿಗೆ ಮತ್ತೊಂದು ಅರ್ಥವಿದೆ! ಕೆಲವು ಕಡೆ ಬಯಲು ಎನ್ನುವುದಕ್ಕೆ ಬೇರೆಯೇ ಅರ್ಥ ಇರಬಹುದು! ಆದರೆ ಇಲ್ಲಿ ಬಯಲನ್ನು ಕಾಯುವ ಸಂಪ್ರದಾಯದ ಬಗೆಗಿನ ಒಂದು ಪ್ರಸಂಗ ಇದೆ.

ಒಂದು ಮಧ್ಯರಾತ್ರಿ ರಷ್ಯಾದ ಚಕ್ರವರ್ತಿಯವರು ಅರಮನೆಯ ತೋಟದಲ್ಲಿ ಸುತ್ತಾಡುತ್ತಿದ್ದರು. ಅವರಿಗೆ ಇನ್ನೂ ನಿದ್ದೆ ಬಂದಿರಲಿಲ್ಲ. (ಕಿರೀಟಧಾರೀ ತಲೆಗಳಿಗೆ ಸಮಾಧಾನವೂ ಕಡಿಮೆ! ಅವರಿಗೆ ನಿದ್ದೆಯೂ ಕಡಿಮೆ!) ಅವರು ಸುತ್ತಾಡುತ್ತಿದ್ದಾಗ ಉದ್ಯಾನವನದ ಮೂಲೆಯಲ್ಲಿ ಒಬ್ಬ ಸೈನಿಕ ನಿಂತದ್ದನ್ನು ನೋಡಿದರು. ಅವರು ಅಲ್ಲಿ ಹೋಗಿ ಆತನಿಗೆ ಇಷ್ಟು ಹೊತ್ತಿನಲ್ಲಿ ಈ ಮೂಲೆಯಲ್ಲಿ ಏಕೆ ನಿಂತಿದ್ದೀಯಾ? ಎಂದು ಕೇಳಿದರು. ಅದಕ್ಕೆ ಆತ ನನಗೆ ‘ನನ್ನ ಮೇಲ್ವಿಚಾರಕರು ದಿನವೂ ಇಲ್ಲೇ ಕಾಯುವ ಕೆಲಸ ಕೊಡುತ್ತಾರೆ.

ನಾನು ದಿನವೂ ನನ್ನ ಕೆಲಸದ ಅವಧಿ ಮುಗಿಯುವವರೆಗೂ ಇಲ್ಲೇ ನಿಂತಿರುತ್ತೇನೆ ಎಂದರು. ಚಕ್ರವರ್ತಿಯವರು ಇಲ್ಲೇಕೆ ನಿಂತಿರುತ್ತೀಯ? ಈ ಬಯಲಿನಲ್ಲಿ ಕಾಯುವಂಥದ್ದು ಏನಿದೆ? ಎಂದರು. ಅದಕ್ಕೆ ಆತ ನನಗೇನೇನೂ ಗೊತ್ತಿಲ್ಲ. ನನ್ನ ಮೇಲ್ವಿಚಾ ರಕರು ಇಲ್ಲಿ ನಿಲ್ಲಲು ಹೇಳುತ್ತಾರೆ. ನಾನಿಲ್ಲಿ ನಿಂತಿರುತ್ತೇನೆ ಅಷ್ಟೇ ಎಂದರು. ಉದ್ಯಾನವನದ ನಿರುಪಯುಕ್ತ ಬಯಲು ಮೂಲೆ. ಮಹತ್ತರವಾದ ವಸ್ತುಗಳಿಲ್ಲ, ಪ್ರತಿಮೆಗಳಿಲ್ಲ, ಗಂಧದ ಮರವಿಲ್ಲ. ಆದರೂ ಇಲ್ಲೇಕೆ ಕಾವಲುಗಾರನನ್ನು ನಿಯೋಜಿಸಲಾಗಿದೆ ಎಂಬ ಕುತೂಹಲವುಂಟಾಯಿತು. ಅವರು ತಕ್ಷಣ ಆ ಸೈನಿಕನ ಮೇಲ್ವಿಚಾರಕರನ್ನು ಕರೆದು ಈತನನ್ನು ಇಲ್ಲೇಕೆ ನಿಲ್ಲಿಸಿದ್ದೀರಿ? ಇಲ್ಲಿ ಕಾಯುವಂಥದ್ದು ಏನಿದೆ? ಎಂದು ಕೇಳಿದರು. ಅದಕ್ಕೆ ಮೇಲ್ವಿಚಾರಕ ‘ನನಗೆ ಗೊತ್ತಿಲ್ಲ ಮಹಾಪ್ರಭು!

ಇಲ್ಲೊಬ್ಬ ಸೈನಿಕನನ್ನು ಕಾವಲು ನಿಲ್ಲಿಸುವ ಪದ್ಧತಿ ಎಷ್ಟೋ ವರ್ಷಗಳಿಂದ ನಡೆದು ಬಂದಿದೆ. ಹೆಚ್ಚಿನ ವಿವರಗಳು ಬೇಕಿದ್ದರೆ ಸೇನೆಯ ದಂಡ ನಾಯಕರನ್ನು ಕೇಳಬಹುದು ಎಂದರು. ಚಕ್ರವರ್ತಿಗಳು ಆ ಮಧ್ಯರಾತ್ರಿಯಲ್ಲಿ ಸೇನೆಯ ದಂಡನಾಯಕರನ್ನು ಕರೆಸಿದರು. ಚಕ್ರವರ್ತಿಗಳು ಮಧ್ಯರಾತ್ರಿಯಲ್ಲಿ ಏಕೆ ಕರೆಸಿದ್ದಾರೆಂದು ಹೆದರಿಕೊಂಡೇ ಅವರು ಬಂದರು. ಚಕ್ರವರ್ತಿಗಳು ಅವರಿಗೂ ಅದೇ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ದಂಡನಾಯಕರು ನಾನು ಸೇವೆಗೆ ಸೇರಿದಾಗಿನಿಂದಲೂ ಇಲ್ಲೊಬ್ಬ ಸೈನಿಕನನ್ನು ಕಾವಲು ನಿಲ್ಲಿಸುವ ಸಂಪ್ರದಾಯವನ್ನು ಕಂಡಿದ್ದೇನೆ. ಆದರೆ ಏಕೆಂಬುದು ನನಗೂ ಗೊತ್ತಿಲ್ಲ ಎಂದರು. ಇದನ್ನು ಕೇಳಿ ಚಕ್ರವರ್ತಿಗಳಿಗೆ ಇನ್ನೂ ಹೆಚ್ಚಿನ ಆಶ್ಚರ್ಯ. ಕುತೂಹಲ. ಅವರು ಮರುದಿನ ಮುಂಜಾನೆಯೇ ಅರಮನೆಯ ನಿವೃತ್ತ ಅಧಿಕಾರಿಗಳನ್ನೂ, ಇತಿಹಾಸಕಾರರನ್ನೂ ಕರೆಸಿದರು.

ಎಲ್ಲರನ್ನೂ ವಿಚಾರಿಸಿದರು. ಅವರ ಪ್ರಶ್ನೆಗಳಿಗೆ ಸುಲಭದಲ್ಲಿ ಉತ್ತರ ಸಿಗಲಿಲ್ಲ. ಬಹಳ, ಬಹಳ ವಿಚಾರಣೆ ಮಾಡಿದ ನಂತರ ಅದರ ಕಾರಣ ಗೊತ್ತಾಯಿತು. ಎಷ್ಟೋ ದಶಕಗಳ ಹಿಂದೆ ಆಗಿದ್ದ ಚಕ್ರವರ್ತಿನಿಯವರು ಅಲ್ಲೊಂದು ಗುಲಾಬಿಯ ಗಿಡ ನೆಟ್ಟಿದ್ದರಂತೆ. ಆ ಗುಲಾಬಿಯ ಗಿಡವನ್ನು ಯಾವುದೋ ಪುಂಡು ದನವೋ ಅಥವಾ ಮತ್ಯಾರೋ ಕೀಳಬಾರದೆಂದು ಅಲ್ಲೊಬ್ಬ ಸೈನಿಕನನ್ನು ಕಾವಲು ಕಾಯಲು ನಿಯೋಜಿಸಿದ್ದ ರಂತೆ. ಅದು ಹಾಗೆಯೇ ಎಷ್ಟೋ ವರ್ಷಗಳಿಂದ ನಡೆದು ಬಂದಿತ್ತಂತೆ. ಆದರೆ ವರ್ಷಗಳು ಕಳೆದವು. ಚಕ್ರವರ್ತಿನಿಯವರೂ ತೀರಿಕೊಂಡರು. ಗುಲಾಬಿ ಗಿಡವೂ ಬಾಡಿ ಸತ್ತು ಹೋಯಿತು.

ಆನಂತರ ಅಲ್ಲಿ ಯಾರೂ ಏನೂ ನೆಡಲಿಲ್ಲ. ಆದರೂ ಅಲ್ಲೊಬ್ಬ ಸೈನಿಕನನ್ನು ಕಾವಲು ಕಾಯಲು ನಿಲ್ಲಿಸುವ ಸಂಪ್ರದಾಯ ಮಾತ್ರ ನಿಲ್ಲಲೇ ಇಲ್ಲವಂತೆ. ಆದರೆ ಆ ಗುಲಾಬಿ ಗಿಡವನ್ನು ಕಾಯಬೇಕಾದ ವಿಷಯವನ್ನು ಯಾರಿಗೂ ಅಂದರೆ ಅಲ್ಲಿ ನಿಲ್ಲುತ್ತಿದ್ದ ಸೈನಿಕರಿಗಾಗಲೀ, ಮೇಲ್ವಿಚಾರಕರಿಗಾಗಲಿ, ದಂಡನಾಯಕರಿಗಾಗಲೀ ಯಾರೂ ಹೇಳಿರಲಿಲ್ಲ. ಬಹುಶಃ ಅದಾದ ನಂತರ ಬಯ ಲನ್ನು ಕಾಯುವ ಆ ಅರ್ಥಹೀನ ಸಂಪ್ರದಾಯವನ್ನು ಚಕ್ರವರ್ತಿಗಳು ನಿಲ್ಲಿಸಿರಬಹುದು! ಇಂದು ಆ ಚಕ್ರವರ್ತಿಗಳೂ ನಮ್ಮ ಕಣ್ಣ ಮುಂದಿಲ್ಲ. ಆದರೆ ನಮ್ಮ ಕಣ್ಣ ಮುಂದೆಯೂ ಇಂತಹ ಅರ್ಥ ತಿಳಿಯದ ಆಚರಣೆಗಳೂ, ಸಂಪ್ರದಾಯಗಳೂ ನಡೆಯು ತ್ತಿರಬಹುದಲ್ಲವೇ? ಒಮ್ಮೆ ಯೋಚಿಸಿ ನೋಡಬಹುದು! ಉತ್ತರ ಗೊತ್ತಾದರೆ ಅದನ್ನು ನಿಲ್ಲಿಸಬಹುದು! ಗೊತ್ತಾಗದಿದ್ದರೆ, ಅದನ್ನು ಮುಂದುವರೆಸಬಹುದು!

Leave a Reply

Your email address will not be published. Required fields are marked *

16 + 18 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top