ಅಂಕಣಗಳು
ನೀರು ವಿಚಕ್ಷಣೆ ನ್ಯಾಯಯುತವಾಗಿರಲಿ
ರಾಜ್ಯದಲ್ಲಿ ಹಲವಾರು ನೀರಾವರಿ ಯೋಜನೆಗಳಿವೆ. ಇದರಿಂದ ಲಕ್ಷಾಂತರ ರೈತರು ತಮ್ಮ ಸುಮಾರು 50 ಲಕ್ಷಕ್ಕೂ ಅಧಿಕ ಎಕರೆ ಪ್ರದೇದಲ್ಲಿ ಬೆಳೆಯನ್ನು ಬೆಳೆದು ಜೀವನ ಹಸನುಮಾಡಿಕೊಂಡಿದ್ದಾರೆ. ಈ ನೀರಾವರಿ ಯೋಜನೆಗಳ ಮೂಲಕ ಹಳ್ಳಿ ಹಳ್ಳಿಗಳಿಗೂ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ, ಈ ವಿಚಾರದಲ್ಲಿಯೇ ಹಳ್ಳಿ ಹಳ್ಳಿಗಳ ಮಧ್ಯೆ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ವಿಶೇಷವಾಗಿ ಕೃಷ್ಣಾ ಮತ್ತು ತುಂಗಭದ್ರಾ ನದಿ ಪಾತ್ರದ ಹಳ್ಳಿಗಳಲ್ಲಿ ಇಂತಹ ಗದ್ದಲಗಳು ನಡೆಯುವುದು ಸಾಮಾನ್ಯವಾಗಿದೆ. ಏಕೆಂದರೆ, ನಾಲೆಗಳ ಕೊನೆಯ ಭಾಗದ ರೈತರ ಹೊಲ–ಗದ್ದೆಗಳಿಗೆ ನೀರು ತಲುಪುವುದೇ ಇಲ್ಲ. ಮಧ್ಯದಲ್ಲಿನ ಹಳ್ಳಿಗಳ ರೈತರು ನಾಲೆಗಳಿಗೆ ಅಡ್ಡಲಾಗಿ ಏರಿಗಳನ್ನು ನಿರ್ಮಿಸಿ ಬರುವ ನೀರನ್ನೆಲ್ಲಾ ತಾವೇ ಬಳಸಿಕೊಳ್ಳುತ್ತಾರೆ. ಇದರಿಂದ ಕೊನೆಯ ಭಾಗದ ರೈತರು ನೀರಾವರಿ ಯೋಜನೆ ಇದ್ದರೂ ಬರಗಾಲ ಅನುಭವಿಸುವಂತಾಗುತ್ತದೆ. ಬೆಳೆ ಕೈಗೆ ಬಾರದೇ ನಷ್ಟ ಅನುಭವಿಸುವಂತಾಗುತ್ತಿದೆ. ಈಗ್ಗೆ ಹಲವು ಹಿಂದೆ ರಾಜ್ಯ ಸರಕಾರ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇದಿಂದ ನೀರು ಬಳಕೆ ಶುಲ್ಕವನ್ನು ವಿಧಿಸಲು ಪ್ರಯತ್ನ ನಡೆಸಿತ್ತು. ಆದರೆ, ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು. ಕಳೆದ ಹಲವು ದಶಕಗಳಿಂದ ಬೆಂಗಳೂರಿನ ಹಲವು ಉದ್ಯಮಗಳು ಮತ್ತು ಇತರೆ ಪ್ರದೇಶಗಳಲ್ಲಿ ಸಾರ್ವಜನಿಕರು ವಿದ್ಯುತ್ ಕಂಬಕ್ಕೇ ಕೊಕ್ಕೆ ಹಾಕಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಇದರಿಂದ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಾವಿರಾರು ಕೋಟಿ ರುಪಾಯಿಗಳ ನಷ್ಟವಾಗುತ್ತಿತ್ತು. ಇದಕ್ಕೆ ಹಾಕಲೆಂದೇ ಸರಕಾರ ಹತ್ತು ವರ್ಷಗಳ ಹಿಂದೆ ವಿದ್ಯುತ್ ವಿಚಕ್ಷಣಾ ದಳವನ್ನು ರಚನೆ ಮಾಡಿತ್ತು. ಇದರ ಪರಿಣಾಮ ವಿದ್ಯುತ್ ಕಳ್ಳತನದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಇದೇ ಮಾದರಿಯಲ್ಲಿ ನೀರಾವರಿ ಯೋಜನೆಗಳಿರುವ ಪ್ರದೇಶಗಳಲ್ಲಿ ನೀರು ವಿಚಕ್ಷಣಾ ದಳಗಳನ್ನು ರಚನೆ ಮಾಡುವ ಮೂಲಕ ನಾಲೆ ಇರುವ ಪ್ರದೇಶಗಳ ಎಲ್ಲಾ ರೈತರಿಗೂ ನ್ಯಾಯಯುತವಾಗಿ ನೀರು ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ. ಆದರೆ, ಈ ವಿಚಕ್ಷಣಾ ದಳಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಭಾಗದ ರೈತರೂ ತಮ್ಮ ಪಾಲಿನ ನೀರನ್ನು ಹೊಂದಲು ಸಾಧ್ಯವಾಗುತ್ತದೆ. ಇದಕ್ಕಾಗಿ ಈ ದಳಗಳು ಮೊದಲು ಎಲ್ಲಿ ನೀರು ಕಳ್ಳತನ ಆಗುತ್ತಿದೆ ಎಂಬುದರ ಸಮೀಕ್ಷೆ ಮಾಡಬೇಕು ಮತ್ತು ರೈತರಿಗೆ ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಏರಿಗಳನ್ನು ತೆಗೆಯದಿದ್ದರೆ ಕಾನೂನು ಅಸ್ತ್ರವನ್ನು ಬಳಸಿ ಎಲ್ಲಾ ರೈತರಿಗು ನ್ಯಾಯ ಒದಗಿಸಿಕೊಡಬೇಕು.