About Us Advertise with us Be a Reporter E-Paper

ಅಂಕಣಗಳು

ನಾವೇ ಭಾಗ್ಯವಂತರು! ನಾವೇ ತೀರ್ಮಾನಿಸುವವರು!

ನಾವೇ ಭಾಗ್ಯವಂತರು ಎಂದು ಹೇಳಿಕೊಳ್ಳುವುದರ ಜತೆಗೆ ತೀರ್ಮಾನ ಮಾಡುವವರೂ ನಾವೇ! ಅದರ ಬಗ್ಗೆಯೇ ಇರುವ ಇಲ್ಲಿರುವ ಕುತೂಹಲಕಾರಿ ಪ್ರಸಂಗವನ್ನು ಹೇಳಿದವರು ರಿಸರ್ವ್ ಬ್ಯಾಂಕಿನ ನಿವೃತ್ತ ಅಧಿಕಾರಿ ಮತ್ತು ಒಳ್ಳೆಯ ವ್ಯಕ್ತಿತ್ವ ವಿಕಸನದ ಉಪನ್ಯಾಸರೂ ಆದ ವೈ.ವಿ.ಗುಂಡೂರಾವ್ ಅವರು. ಆ ಪ್ರಸಂಗ ಹೀಗಿದೆ.

ಒಮ್ಮೆ ಸೂಟುಬೂಟುಹ್ಯಾಟ್ ಧರಿಸಿದ್ದ ವ್ಯಕ್ತಿಯೊಬ್ಬ ಏರ್ಪೋರ್ಟಿಗೆ ಹೋಗಲು ಟ್ಯಾಕ್ಸಿ ಹತ್ತಿದನಂತೆ. ಟ್ಯಾಕ್ಸಿಯಲ್ಲಿ ಗಂಭೀರವಾಗಿ ಕುಳಿತಿದ್ದ ಅವರನ್ನು ಗಮನಿಸಿದ ಟ್ಯಾಕ್ಸಿ ಡ್ರೈವರ್ ‘ನೀವೇನೋ ಚಿಂತೆಯಲ್ಲಿರುವಂತಿದೆ. ಏರೋಪ್ಲೇನಿನಲ್ಲಿ ಹಾರಾಡುವ ನಿಮಗೇತರ ಚಿಂತೆ ಸಾರ್?’ ಎಂದ. ಆ ‘ವಿಮಾನ ಹಾರಾಟದ ಕಷ್ಟ ಅನುಭವಿಸಿದವರಿಗೇ ಗೊತ್ತು. ನೆಲದ ಮೇಲಿನಿಂದ ನಲವತ್ತು ಸಾವಿರ ಅಡಿಗಳ ಎತ್ತರದಲ್ಲಿ ವಿಮಾನ ಹಾರುತ್ತದೆ. ಅಲ್ಲಿ ಏನಾದರೂ ಆದರೆ ಎಲುಬೂ ಸಿಕ್ಕುವುದಿಲ್ಲ. ಕೆಳಗಿಳಿದು ಬಂದರೆ ಮತ್ತೊಂದು ಪುನರ್ಜನ್ಮ. ವಿಮಾನದೊಳಗಡೆ ಹವಾನಿಯಂತ್ರಿತ ವಾತಾವರಣ. ಉಸಿರಾಡಿದ ಗಾಳಿಯನ್ನೇ ಮತ್ತೆ ಮತ್ತೆ ಉಸಿರಾಡಿ ತಲೆಯೆಲ್ಲ ಬಿಸಿಯಾಗುತ್ತದೆ. ವಿಮಾನ ಪ್ರಯಾಣಿಕರಲ್ಲಿ ಬಹಳ ಜನ ತಾವು ಅಸಮಾನರು ಎಂಬ ಅಹಮ್ಮಿನಲ್ಲಿರುತ್ತಾರೆ. ಗಂಟುಮುಖದವರು. ಕಷ್ಟಪಟ್ಟು ನಗುತ್ತಾರೆ. ಸದಾ ನಗುವ ಗಗನ ಸಖಿಯರದ್ದು ಪ್ಲ್ಯಾಸ್ಟಿಕ್ ನಗೆ. ಅಲ್ಲಿ ಕೊಡುವ ಊಟವೋ ಶ್ರೀಮಂತರ ಪುಷ್ಕಳ ಊಟ. ದಿನಾ ಅದನ್ನೇ ತಿನ್ನುವುದು ಕಷ್ಟ!’ ಎನ್ನುತ್ತ ತೊಂದರೆಗಳ ಸರಮಾಲೆಯನ್ನು ಪೇರಿಸಿದರು.

ಡ್ರೈವರ್ ಅವರನ್ನು ಸಹಾನುಭೂತಿಯಿಂದ ನೋಡುತ್ತ ‘ಹಾಗಿದ್ದರೆ ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೀರಿ? ರೈಲುಬಸ್ಸುಕಾರುಗಳಲ್ಲಿ ಹೋಗಬಹುದಲ್ಲ!’ ಎಂದು ಪ್ರಶ್ನಿಸಿದ. ಆತ ನಿಟ್ಟುಸಿರಿನೊಂದಿಗೆ ‘ವಿಮಾನದಲ್ಲೇ ಏಕೆ ಪ್ರಯಾಣಿಸುತ್ತೇನೆಂದರೆ ನಾನು ವೃತ್ತಿನಿರತ ವಿಮಾನದ ಪೈಲಟ್!’ ಎಂದ.

ಇದನ್ನು ಕೇಳಿ ಡ್ರೈವರಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಆತ ‘ಇಷ್ಟೆಲ್ಲ ಬೇಸರಗಳಿದ್ದರೆ ಪೈಲಟ್ ವೃತ್ತಿಯೇ ಏಕೆ?’ ಎಂದು ಅವರು ‘ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ, ಒಳ್ಳೆಯ ಯೂನಿಫಾರಂ, ಬಂಧುಬಳಗದಲ್ಲಿ ಘನತೆಗೌರವ ಮತ್ತೆಲ್ಲಿ ಸಿಗುತ್ತದೆ? ಅದಕ್ಕಾಗಿ ಈ ವೃತ್ತಿ!’ ಎಂದರು.

ಡ್ರೈವರ್ ‘ತಾವು ತಪ್ಪು ತಿಳಿಯದಿದ್ದರೆ ತಮಗೊಂದು ಮಾತು ಹೇಳಲೇ? ಕೆಲಸಕ್ಕೆ ಹೊರಟಾಗ ಕೈತುಂಬ ಸಂಬಳ, ದೇಶವಿದೇಶಗಳನ್ನು ನೋಡುವ ಅವಕಾಶ ಮುಂತಾದವುಗಳನ್ನು ಮನಸ್ಸಿನಲ್ಲಿ ತುಂಬಿಕೊಳ್ಳಿ. ‘ನಲವತ್ತು ಸಾವಿರ ಅಡಿ ಎತ್ತರ, ಕೃತಕ ನಗೆ, ಉಸಿರುಗಟ್ಟಿಸುವ ವಾತಾವರಣ ಕುರಿತು ಚಿಂತಿಸಬೇಡಿ. ನಾನು ನಿಮಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ. ಆದರೆ ನಾನು ಕಲಿತ ಪಾಠ. ನನ್ನದು ಟ್ಯಾಕ್ಸಿ ಓಡಿಸುವ ಕೆಲಸ. ಟ್ಯಾಕ್ಸಿಗೆ ನಾನೇ ಮಾಲೀಕ. ನಾನೇ ಚಾಲಕ. ನಾನು ಕೆಲಸಕ್ಕೂ ಹೋಗುತ್ತೇನೆ. ಮಕ್ಕಳೊಂದಿಗೆ ಕಾಲವನ್ನೂ ಕಳೆಯುತ್ತೇನೆ. ಬೆಂಗಳೂರು ಮತ್ತು ವಿಮಾನ ನಿಲ್ದಾಣ ಇವೆರಡೂ ಬಿಟ್ಟು ನಾನು ಮತ್ತೇನೂ ನೋಡಿಲ್ಲ. ನನ್ನ ತಿಂಗಳ ಸಂಪಾದನೆ ನಿಮ್ಮ ಒಂದು ದಿನದ ಸಂಪಾದನೆ ಇರಬಹುದು. ಆದರೆ ನಾನು ನಿಮಗಿಂತ ಆನಂದವಾಗಿದ್ದೇನೆ ಎನಿಸುತ್ತದೆ’ ಎಂದು ಹೇಳುವಷ್ಟರಲ್ಲಿ ಅವರು ವಿಮಾನ ನಿಲ್ದಾಣವನ್ನು ಮುಟ್ಟಿದರು.

ಆತ ಟ್ಯಾಕ್ಸಿಯಿಂದಿಳಿದು ಡ್ರೈವರಿಗೆ ರೂಪಾಯಿ ಟಿಪ್‌ಸ್ ಕೊಟ್ಟು ‘ನನಗೆ ನಿನ್ನ ಮಾತು ಹಿಡಿಸಿತು. ನೀನು ಹೇಳಿದುದನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತೇನೆ. ಭಗವಂತನ ದಯೆಯಿದ್ದರೆ ಮತ್ಯಾವಾಗಲಾದರೂ ಸಿಗೋಣ’ ಎಂದು ಹೇಳಿ ದಡಬಡ ಹೊರಟುಹೋದರು. ಈ ಪ್ರಸಂಗವನ್ನು ಹೇಳಿದ ಉತ್ತಮ ವಾಕ್ಪಟುಗಳಾದ ಗುಂಡೂರಾಯರಿಗೆ ಧನ್ಯವಾದಗಳು.

ನಾವು ಡ್ರೈವರೋ, ಪೈಲಟ್ಟೋ ಅಲ್ಲದಿರಬಹುದು. ಆದರೆ ನಮಗೊಂದು ಉದ್ಯೋಗವಿದೆ. ಬಿಡುವು ಸಿಕ್ಕಾಗ ನಮ್ಮ ಉದ್ಯೋಗದ ಅನುಕೂಲಗಳ ಅನಾನುಕೂಲಗಳ ಪಟ್ಟಿ ಮಾಡಿಕ್ಳೊಬಹುದು. ಅನುಕೂಲಗಳ ಪಟ್ಟಿ ದೊಡ್ಡದಿದ್ದರೆ ನಾವೇ ಭಾಗ್ಯವಂತರೆಂದು ತೀರ್ಮಾನಿಸಿಕೊಳ್ಳಬಹುದು. ಅನಾನುಕೂಲಗಳ ಪಟ್ಟಿ ನಿಧಾನವಾಗಿ ಮತ್ತೊಂದು ಕೆಲಸ ಹುಡುಕಿಕೊಳ್ಳಬಹುದು!

Tags

Related Articles

Leave a Reply

Your email address will not be published. Required fields are marked *

Language
Close