ವಿಶ್ವವಾಣಿ

ಮುಂಜಾಗ್ರತೆ ಅರಿಯದ ಬೊಡ್ಡು ತಲೆಯವರು ನಾವು!

ಭೂಕಂಪ, ಸುನಾಮಿ, ಮೇಘಸ್ಫೋಟ, ಪ್ರವಾಹ, ಭೂಕುಸಿತ ಹೀಗೆ ಯಾವುದೇ ಪ್ರಾಕೃತಿಕ ವಿಕೋಪಗಳು ಸಂಭವಿಸಿ ನಾಶವಾದಾಗಲೂ ಏಳುವುದು ಒಂದೇ ಪ್ರಶ್ನೆ. ನಮಗ್ಯಾಕೆ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂಬುದು. ಅದಕ್ಕೆ ಒಂದೇ ಸರಿಯಾದ ಉತ್ತರವೆಂದರೆ, ನಾವಿನ್ನೂ ಪರಿಹಾರ ಒದಗಿಸುವ ಸ್ಥಿತಿಯಲ್ಲೆ ಇದ್ದೇವೆಯೇ ಹೊರತು, ಮುಂಜಾಗ್ರತಾ ಸ್ಥಿತಿಯಲ್ಲಿ ಇಲ್ಲ

ಯಾವುದನ್ನೇ ತೆಗೆದುಕೊಳ್ಳಿ, ಬಿಲ್ಡಿಂಗ್ ಹಳೆಯದಾಗಿ ಅಲ್ಲಾಡುತ್ತಿದೆ, ಅದು ಬಳಕೆಗೆ ಯೋಗ್ಯವಾಗಿಲ್ಲ ಎಂದರೂ ನಾವದನ್ನು ಬಿಟ್ಟು ಹೊರಬರುವವರಲ್ಲ. ಒಂದು ದಿನ ಅದು ಬಿದ್ದು, ನೂರಾರು ಮಂದಿ ಸತ್ತಾಗ ಪರಿಹಾರ ಘೋಷಣೆ ಮಾಡಿ ಎಲ್ಲರೂ ಸುಮ್ಮನಾಗುತ್ತೇವೆ. ರಸ್ತೆಯಲ್ಲಿ ಹೊಂಡಗಳು ಬಿದ್ದರೆ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ತಿಳಿದಿದ್ದರೂ, ಅದನ್ನು ತಕ್ಷಣ ಸರಿಪಡಿಸುವ ಪರಿಪಾಠವಿಲ್ಲ. ಬದಲಿಗೆ ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳಬೇಕು ಹಾಗೂ ಪರಿಹಾರ ಘೋಷಿಸಬೇಕು.

 ಶಾಲಾ ಕಟ್ಟಡದಲ್ಲಿ ಅಗ್ನಿ ಅನಾಹುತವಾಗದಂತೆ ಮುನ್ನೆಚ್ಚರಿಕಾ  ಇರಲೇಬೇಕು ಎಂದಿದೆ. ಶಾಲೆಗೆ ಬೆಂಕಿ ಬಿದ್ದು ಮಕ್ಕಳು ಸತ್ತ ಮೇಲೆ ರಾಜ್ಯ ಸರಕಾರ ಪರಿಹಾರ ಘೋಷಣೆ ಮಾಡುತ್ತದೆ ಹಾಗೂ ಅಲ್ಲಿಗೆ ಎಲ್ಲ ಮುಗಿಯುತ್ತದೆ. ಮತ್ತೆ ಯಥಾ ಸ್ಥಿತಿ!

ಇವೆಲ್ಲ ನಾವೇ ಕಟ್ಟಿಕೊಂಡ ವ್ಯವಸ್ಥೆಯ ಭಾಗ. ಇಲ್ಲೇ ನಮ್ಮದು ಹೀನಾಮಾನ ಸೋಲಾಗಿರುವಾಗ ಪ್ರಕೃತಿ ವಿಕೋಪ ಎದುರಿಸಬಲ್ಲೆವೆ ನಾವು? ಸೂಕ್ಷ್ಮಗಳು ಅರ್ಥವಾಗದ ಬೊಡ್ಡು ತಲೆಯವರು ಎಂದು ಬೈಯ್ದರೆ ಅತಿ ಎನಿಸಬಹುದು. ಆದರೆ ಅದೊಂದೇ ನಮಗೆ ಅನ್ವಯವಾಗುವ ಪದ. ಬೆಟ್ಟ, ಗುಡ್ಡ, ಕಾಡು,  ಇವೆಲ್ಲ ನಮ್ಮಪ್ಪನ ಗಂಟು. ಅವನ್ನು ಹೇಗೆ ಬೇಕಾದರೂ ಬಳಸಬಹುದು ಎನ್ನುವುದು ಬಹುತೇಕರ ಧೋರಣೆ.

ಗುಡ್ಡ ಕಡಿದು ರಸ್ತೆ ಮಾಡಿ, ಅದರ ಮೇಲೆ ಟನ್ ಭಾರದ ಲಾರಿ ಓಡಿಸುತ್ತೇವೆ, ಮಗಿಡ ಕಡಿದು ಮಣ್ಣು ಸಡಿಲ ಮಾಡಿ, ಅಲ್ಲಿ ರೆಸಾರ್ಟ್ ಕಟ್ಟುತ್ತೇವೆ. ಎಲ್ಲಿಂದ ಎಲ್ಲಿಗೋ ನೀರು ಹಾಯಿಸುತ್ತೇವೆಂದು, ಸುರಂಗ ತೋಡುತ್ತೇವೆ. ಜಲಾಶಯದಲ್ಲಿ ತಿಂಗಳುಗಟ್ಟಲೆ ನೀರು ತುಂಬಿಸಿ, ಒಮ್ಮೆಲೆ ಎಲ್ಲ ಗೇಟ್ ತೆಗೆದುಬಿಡುತ್ತೇವೆ. ಇವೆಲ್ಲದರ ಪರಿಣಾಮ ಗುಡ್ಡ ಬೆಟ್ಟಗಳು ಕುಸಿದು, ಕುಸಿದು ಮನೆಮಠಗಳನ್ನು  ನೊಣೆಯುತ್ತವೆ. ಕೊನೆಗೆ ಮಹಾಮಳೆ, ರಣಮಳೆ, ಮರಣಮಳೆ ಎಂದು ಬಾಯಿ ಬಡಿದು ಕೊಳ್ಳುತ್ತೇವೆ.

ಮೊನ್ನೆ ಕೇರಳದಲ್ಲಿ ಪ್ರವಾಹ ಬಂದಾಗ ನದಿ ನೀರು ಸೇತುವೆ ಮೇಲೆ ಪ್ಲಾಸ್ಟಿಕ್ ಕಸಗಳನ್ನು ತಂದು ಎತ್ತಿ ಹಾಕಿ ಹೋಗಿತ್ತು. ಅದೆಷ್ಟು ಚಂದ ಸೋಸಿತ್ತು ಎಂದರೆ, ಇದೆಲ್ಲ ನಿಮ್ಮದೇ ಪಾಪ ಕರ್ಮಗಳು. ನನಗೆ ಬೇಡ ಎಂಬಂತಿತ್ತು. ಇಡೀ ಸೇತುವೆ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿ ಹೋಗಿತ್ತು. ಮಳೆ ನಿಂತ ಮೇಲೆ ನಾವು ಬುದ್ಧಿವಂತರು ಮಾಡಿದ್ದೇನು ಗೊತ್ತೆ?  ಅವನ್ನೆಲ್ಲ ಜೆಸಿಬಿ  ಎತ್ತಿ ಪುನಃ ನದಿಗೇ ಹಾಕಲಾಯಿತು.

ಎಷ್ಟು ಸಂವೇದನಾಶೀಲರಲ್ಲವೆ ನಾವು? ಇದು ಜಾಲತಾಣದಲ್ಲಿ ಸಾಕಷ್ಟು ಟೀಕೆಗೊಳಗಾಯ್ತು. ಆದರೆ ಜಾಲತಾಣಿಗರು ಕೂಡ ಪ್ರಕೃತಿ ವಿಚಾರಕ್ಕೆ ಬಂದರೆ ಎಷ್ಟು ಸೆನ್ಸಿಬಲ್ ಆಗಿ ವರ್ತಿಸುತ್ತಾರೆ?  ಹೋಗಲಿ ಅವರದೇ ಖಾಸಗಿ ಜೀವನದ ವಿಚಾರದಲ್ಲಿ ಅದೆಷ್ಟು ಅಲಕ್ಷ್ಯವಿಲ್ಲವೆ? ಮನೆಗೆ ತಾಗಿಯೇ ಹೈ ಟೆನ್ಶನ್ ವೈರ್ ಹೋಗಿರುತ್ತದೆ. ಅದರ ಪಕ್ಕವೇ ಬಿದಿರುಮೆಳೆಯೋ, ಮರವೋ ಬೆಳೆದಿರುತ್ತದೆ. ಎಂದಿದ್ದರೂ ಅಪಾಯ ಕಟ್ಟಿಟ್ಟಿದ್ದೇ. ಆದರೂ ನಿರಾಳವಾಗಿ ಬದುಕುವ ಭಂಡರು ನಾವು. ಆದಾಗ ನೋಡಿಕೊಳ್ಳೋಣ  ಹೊಣೆಗೇಡಿತನವಿದೆಯಲ್ಲ, ಅದೇ ನಮ್ಮನ್ನು ಈ ಮಟ್ಟದ ಅಪಾಯಗಳಿಗೆ ಸಿಲುಕಿಸುತ್ತಿರುವುದು.

ಅಷ್ಟೊಂದು ಮಳೆ ಒಂದೇ ಸಮನೆ ಸುರಿದರೆ ನಾವೇನು ಮಾಡಕ್ಕಾಗತ್ತೆ? ನಿಂತ ನೆಲವೇ ಕುಸಿಯತೊಡಗಿದರೆ ಎಲ್ಲಿಗ್ ಹೋಗಕ್ಕಾಗತ್ತೆ? ಎಂದು ಕೇಳುವ ಹಕ್ಕೇ ನಮಗಿಲ್ಲ. ಕಾರಣ ಪ್ರಕೃತಿಯ ಕರುಣೆಯಿಂದ ಬದುಕುತ್ತಿರುವವರು ನಾವು. ಅದು ಮುನಿಸಿಕೊಂಡರೆ ಪ್ರಶ್ನಿಸುವ ಬದಲು ನಾನು ಅಂಥ ತಪ್ಪೇನು ಮಾಡಿದೆ ಎಂದು ಕೇಳಿಕೊಳ್ಳಬೇಕು. ಅದು ಬಿಟ್ಟು, ಭೂಮಿಯೇ ಬಾಯ್ದೆರೆದರೆ ಹೋಗುವುದು ಎಲ್ಲಿಗೆ ಎಂದು ಕೇಳಿದರೆ, ಹೋಗುವುದು ಭೂಮಿಯ ಒಳಗೇ

ನಿಮಗೆ ಗೊತ್ತಿರಲಿ, ಜಗತ್ತಿನಲ್ಲಿ ಅತಿ ಹೆಚ್ಚು ಪ್ರಕೃತಿ ವಿಕೋಪಗಳನ್ನು ಎದುರಿಸುವ ದೇಶಗಳೆಂದರೆ ಫಿಲಿಪ್ಪೀನ್‌ಸ್, ಜಪಾನ್, ಚೀನಾ ಹಾಗೂ ಬಾಂಗ್ಲಾದೇಶಗಳು. ಇವುಗಳಲ್ಲಿ ಫಿಲಿಪ್ಪೀನ್‌ಸ್ ಹಾಗೂ ಬಾಂಗ್ಲಾ ದೇಶಗಳು ನಮ್ಮಷ್ಟೇ ಅಥವಾ ನಮಗಿಂತ ಕೆಟ್ಟದಾಗಿ ಅನುಭವಿಸುತ್ತವೆ.  ಆದರೆ ಚೀನಾ ಹಾಗೂ ಜಪಾನ್ ಇವುಗಳನ್ನು ಅತ್ಯಂತ ದಕ್ಷವಾಗಿ ಎದುರಿಸುತ್ತಿವೆ. ಇಂಥ ಸಂದರ್ಭದಲ್ಲಿ ಡಿಸಿಶನ್ ಮೇಕಿಂಗ್ (ತೀರ್ಮಾನ ಮಾಡುವುದು) ಹಾಗೂ ಟೆಕ್ನಿಕಲ್ ಸಪೋರ್ಟ್ (ತಂತ್ರಜ್ಞಾನದ ಬೆಂಬಲ) ಬಹುಮುಖ್ಯವಾಗುತ್ತದೆ. ಡಿಸಿಶನ್ ಮೇಕಿಂಗ್ ಅಲ್ಲದಿದ್ದರೂ ತಂತ್ರಜ್ಞಾನದ ವಿಚಾರದಲ್ಲಿ  ಜಗತ್ತಿನ ಬೆಸ್‌ಟ್ ಲಿಸ್‌ಟ್ನಲ್ಲೇ ಬರುತ್ತೇವೆ. ನಮ್ಮಲ್ಲಿ ಅತ್ಯುತ್ತಮ ಮುಂಗಾರು ಮಳೆ ಅಂದಾಜು ಮೀಟರ್‌ಗಳಿವೆ, ಚಂಡಮಾರುತ, ಬಿರುಗಾಳಿ ಮಾಪನಗಳಿವೆ, ತುರ್ತು ಪರಿಸ್ಥಿತಿಗೆ ಬೇಕಾದ ಸಲಕರಣೆಗಳು, ಹೆಲಿಕಾಪ್ಟರ್, ತರಬೇತಿ ಡೆದ ಸೇನೆಯಿದೆ. ಇಷ್ಟೆಲ್ಲ ಇದ್ದರೂ ನಮ್ಮ ನಗರಗಳು, ಜನವಸತಿ ಪ್ರದೇಶಗಳು ಪದೇಪದೆ ನೆರೆಗೆ ತುತ್ತಾಗುತ್ತಿರುವುದು ಏಕೆಂದರೆ ಮತ್ತದೇ ಮುಂಜಾಗ್ರತೆಯ ಕೊರತೆ, ತರಬೇತಿಯ ಕೊರತೆ ಹಾಗೂ ಸೂಕ್ಷ್ಮಗಳನ್ನು ಗ್ರಹಿಸದಿರುವ ಬೊಡ್ಡುತನ.

ಪ್ರತಿವರ್ಷ ಮುಂಗಾರಿನ ಸಮಯದಲ್ಲಿ ಪ್ರವಾಹ ಎದುರಿಸುವುದು ಸಾಮಾನ್ಯ ಸಂಗತಿ.

ಆದರೆ ಪ್ರತಿವರ್ಷ  ಒಂದು ಪ್ರದೇಶದಲ್ಲಿ ‘ಇಂಥ ಪ್ರವಾಹ ಹಿಂದೆಂದೂ ಬಂದಿರಲಿಲ್ಲ’ ಎನ್ನುವ ಸ್ಥಿತಿಯೇ ನಿರ್ಮಾಣವಾಗುತ್ತಿದೆ. ಉತ್ತರಾಖಂಡದ ಘಟನೆ ಮಾಸುವ ಮುನ್ನವೇ ಕೇರಳ ಹಾಗೂ ಕೊಡಗಿನ ಪ್ರವಾಹ ನಮ್ಮ ಕಂಗೆಡಿಸಿವೆ. ಪ್ರವಾಹವೇನೂ ಸುಮ್ಮನೇ ಬರುವುದಿಲ್ಲ. ಅದಕ್ಕೂ ಮುನ್ನ ಧಾರಾಕಾರ ಮಳೆ ಸುರಿಯುತ್ತದೆ. ಆದರೆ ನಾವು ಮಳೆಮೋಡ ಕಟ್ಟುವಿಕೆ, ಗಾಳಿ ಬೀಸುವಿಕೆ ಇವುಗಳ ಅಧ್ಯಯನದಲ್ಲಿ ಇನ್ನೂ ಸುಧಾರಿಸದೇ ಹೋಗಿದ್ದರಿಂದ ಅಪಾಯವನ್ನು ಅಳೆಯುವಲ್ಲೂ ಎಡವುತ್ತಿದ್ದೇವೆ. ಕೊಡಗು, ಕೇರಳದ ಸುತ್ತ ಮಳೆ ಸುರಿಯುವ ಮುನ್ನ ದಪ್ಪನೆಯ ಮೋಡ

ಹಾಗಾದರೆ ಅಧಿಕಾರಿಗಳಿಗೆ ಅದು ತಿಳಿಯಲೇ ಇಲ್ಲವೆ?  ಇಲ್ಲ ಎಂದೇ ಹೇಳಬೇಕಾಗುತ್ತದೆ ಈಗಿನ ಪರಿಸ್ಥಿತಿ ನೋಡಿದರೆ.  ನ್ಯಾಶನಲ್ ಡಿಸಾಸ್ಟರ್ ರಿಸ್‌ಕ್ ರಿಡಕ್ಷನ್ ಎನ್ನುವ ಸಂಸ್ಥೆಯೊಂದಿದೆ. ಅದರ ಪ್ರಕಾರ ಹವಾಮಾನ ಮುನ್ಸೂಚನೆ ನೀಡುವ ತಂತ್ರಜ್ಞಾನದಲ್ಲಿ ನಾವು ಇನ್ನಷ್ಟು ಸುಧಾರಿಸಬೇಕಿದೆ. ಇನ್ನಷ್ಟು ಉತ್ತಮ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕಿದೆ. ಅಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ತರಬೇತಿ ನೀಡಬೇಕಿದೆ. ಇದು ಸರಕಾರದ ಮಟ್ಟದಲ್ಲಿ ನಡೆಯಬೇಕಾಗಿದ್ದು. ಅಲ್ಲಿನ ಅಧಿಕಾರಿಗಳು ಹೇಳಿದ್ದನ್ನು ಜನರು ನಂಬುತ್ತಾರೆ. ಹೀಗಾಗಿ ಗ್ರಹಿಸುವ ಹಾಗೂ ಮುನ್ಸೂಚನೆ  ವ್ಯವಸ್ಥೆ ಸುಧಾರಿಸುವುದು ಸದ್ಯದ ತುರ್ತು.

 ಇತ್ತೀಚೆಗೆ ನಗರ ಪ್ರದೇಶದಲ್ಲಿ ಪ್ರವಾಹ ಬರುವುದು ಸಹಜವಾಗುತ್ತಿದೆ. ಚೆನ್ನೈ, ಬೆಂಗಳೂರು, ಉತ್ತರಾಖಂಡ, ದೆಹಲಿ, ಶ್ರೀನಗರ್, ಗುವಹಾಟಿ ಇವೆಲ್ಲ ಇತ್ತೀಚೆಗೆ ಪ್ರವಾಹಕ್ಕೆ ತುತ್ತಾದ ನಗರಗಳೇ. ಇದಕ್ಕೆ ಕಾರಣಗಳೇನೆಂದರೆ, ಒತ್ತುವರಿ ಹಾಗೂ ಅತಿಕ್ರಮಣ. ನದಿ, ಹಳ್ಳ, ಕಾಲುವೆಗಳ ಪ್ರದೇಶವನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಅದರಿಂದಾಗಿ ಹೀಗಾಗುತ್ತಿದೆ ಎಂಬುದು.

ಆದರೆ ಇದಕ್ಕಿಂತ ಮುಖ್ಯವಾಗಿ ಡಿಸಾಸ್ಟರ್ ಮ್ಯಾನೇಜ್‌ಮೆಂಟ್‌ನಲ್ಲಿ ಸೋತಿರುವುದೇ ಇದಕ್ಕೆ ಕಾರಣ. ನಗರಗಳನ್ನು ಯೋಜನೆಗಳಿಲ್ಲದೆ ಯದ್ವಾತದ್ವಾ ಕಟ್ಟಿದರೆ, ಹಳ್ಳಿಗಳನ್ನು ಅವೈಜ್ಞಾನಿಕ  ಯೋಜನೆಗಳಿಂದ ಹಾಳಗೆಡವಲಾಗುತ್ತಿದೆ. ಇದೇ ಮಲೆನಾಡು ಹಾಗೂ ಪಶ್ಚಿಮಘಟ್ಟ ಪ್ರದೇಶಗಳು ಅದೆಂಥ ಗಟ್ಟಿ ಪ್ರದೇಶಗಳಾಗಿದ್ದವೆಂದರೆ, ಎಂಥ ಮಹಾಮಳೆಗೂ ಜಗ್ಗುತ್ತಿರಲಿಲ್ಲ. ಈಗ ಸುರಿದಂಥ ಮಳೆ ಶತಮಾನದ ಹಿಂದೆಯೂ ಸುರಿದಿತ್ತು. ಆಗ್ಯಾಕೆ ಇಷ್ಟೊಂದು ಭೂಕುಸಿತವಾಗಿರಲಿಲ್ಲ? ಇದಕ್ಕೆ ಮತ್ತೆ ಮತ್ತೆ ಅದೇ ಉತ್ತರವನ್ನೇ ನೀಡಬೇಕು, ನಾವು ನಿಸರ್ಗದ ಸೂಕ್ಷ್ಮಗಳನ್ನು ಅರಿಯದ ಹೆಡ್ಡರು ಎಂದು.

ಯಾವುದೇ ನೈಸರ್ಗಿಕ ಅನಾಹುತಗಳು ಸಂಭವಿಸಿದಾಗಲೂ ಅಳಿದು ಹೋದ ಪುರಾತನ ನಾಗರಿಕತೆಗಳು ನೆನಪಾಗುತ್ತವೆ. ಕಾರಣ ಅವು ಕೂಡ ಇಂಥದ್ದೇ ಯಾವುದೋ ಕಾರಣಕ್ಕೆ  ಹರಪ್ಪ ಮೊಹೆಂಜೊದಾರೊ, ಸಿಂಧೂನದಿ ನಾಗರಿಕತೆ, ದ್ವಾರಕೆ ಇವೆಲ್ಲವೂ ಒಂದಲ್ಲ ಒಂದು ನೈಸರ್ಗಿಕ ವಿಕೋಪದಿಂದ ಅಳಿದಿವೆ ಎಂದು ಇತಿಹಾಸ ಬೆಳಕು ಚೆಲ್ಲುತ್ತದೆ.

ರಣ ಭೀಕರ ಮಳೆ ಬಂದೋ, ಭೂಕಂಪನವಾಗಿ ನದಿ ತನ್ನ ದಿಕ್ಕು ಬದಲಿಸಿಯೋ, ಧೂಳಿನ ಸುನಾಮಿ ಬಂದೋ ಇಲ್ಲ ಪ್ರವಾಹ ಉಕ್ಕಿಯೋ ಹಿಂದಿನ ಅನೇಕ ನಗರ ಹಾಗೂ ನಾಗರಿಕತೆಗಳ ನಾಮಾವಶೇಷವಾಗಿವೆ. ಇಂದು ಕೊಡಗು ಮತ್ತೆ ಮೊದಲಿನ ಸ್ವರೂಪಕ್ಕೆ ಬರಲಾಗದಷ್ಟು ಬದಲಾಗಿಬಿಟ್ಟಿದೆ. ಅಲ್ಲಿನ ಭೂ ಸ್ವರೂಪವೇ ಗುರುತು ಸಿಗದಷ್ಟು ಬದಲಾಗಿದೆ.  ಹಾಗೂ ಜಾನುವಾರುಗಳ ಗೋಳು ಹೇಳಿ ಮುಗಿಯದಷ್ಟಿದೆ.

ಇನ್ನು ಮುಂದಿನ ದಿನಗಳಲ್ಲಿ ಮಳೆ ಹಾಗೂ ಮಳೆ ಮಾರುತಗಳೂ ಬದಲಾಗುತ್ತಲೇ ಹೋಗಲಿವೆ. ಹೀಗಾಗಿ ನಾವು  ಪ್ರಕೃತಿಯನ್ನು ಇನ್ನಷ್ಟು ಬಗೆಯದೇ, ಸೂಕ್ಷ್ಮಗ್ರಾಹಿಗಳಾಗಿ, ಸನ್ನದ್ಧರಾಗುವುದೊಂದೇ ಪರಿಹಾರ. ಆದರೆ ಅದು ಸದ್ಯದ ಭವಿಷ್ಯದಲ್ಲಿ ಸಾಧ್ಯವಿಲ್ಲ. ಕಾರಣ ಬಿಸ್ಕೆಟ್‌ನ್ನು ಕೂಡ ಸಭ್ಯ ಕ್ರಮದಲ್ಲಿ ಹಂಚಲು ಬಾರದವರು ನಾವು. ಇನ್ನು ಪ್ರಕೃತಿ ಬಗ್ಗೆ ಸಂವೇದನಾಶೀಲತೆ ಬೆಳೆಸಿಕೊಳ್ಳಲು ಸಾಧ್ಯವೆ?