About Us Advertise with us Be a Reporter E-Paper

ಅಂಕಣಗಳು

ನಾವು ಹೋರಾಡಬೇಕಾಗಿದ್ದು ಬೇರೆಯದೇ ಆದ ಸ್ವಾತಂತ್ರ್ಯಕ್ಕೆ!

ಸ್ವಾತಂತ್ರ್ಯ ಬಂದ ದಿನದ ಸಂಭ್ರಮ ಹೇಗಿತ್ತೋ ಸ್ವಾತಂತ್ರ್ಯ ಬಂದ ಮರುವರ್ಷದ ಸಂಭ್ರಮ ಹೇಗಿತ್ತೊ ಅದೂ ಗೊತ್ತಿಲ್ಲ. ಅದಾದ 10 ವರ್ಷದ ಬಳಿಕ? 15 ವರ್ಷದ ಬಳಿಕ? ಊಹುಂ. ಅದೂ ತಿಳಿದಿಲ್ಲ. ಇಂದಿನವರಿಗೆ ಸ್ವಾತಂತ್ರ್ಯ ದಿನ ಎಂದರೆ ಪ್ರತೀ ವರ್ಷ ಬರುವ ಒಂದು ದಿನದ ಆಚರಣೆ. ಸ್ವಾತಂತ್ರ್ಯ ದಿನಕ್ಕೆ ಮುನ್ನ ಒಂದು ವಾರದಿಂದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಮಿನಿ ಧ್ವಜಗಳ ಮಾರಾಟ ಶುರುವಾಗುತ್ತದೆ. ಇದಕ್ಕೆ ತಿಂಗಳುಗಳ ಮೊದಲೇ ಅವುಗಳ ಉತ್ಪಾದನೆ, ತಯಾರಿಕೆ, ಮಾರಾಟದ ತಂತ್ರಗಳನ್ನು ಹೆಣೆಯಲಾಗಿರುತ್ತದೆ. ವಾಹನ ಚಾಲಕರು ಟ್ಯಾಕ್ಸಿ, ಆಟೋ, ಲಾರಿ ಬಸ್ ಡ್ರೆûವರ್‌ಗಳು ಅವುಗಳ ಗ್ರಾಹಕರು. ರಾಷ್ಟ್ರಧ್ವಜದ ಸ್ಟಿಕ್ಕರ್, ಪೆನ್, ಕ್ಯಾಪ್, ಟೀ ಶರ್ಟ್, ದುಪಟ್ಟಾ ಇಂಥವಂತೂ ಬಹಳ ಕಾಮನ್. ಬೇಕರಿ, ಸ್ವೀಟ್ ಅಂಗಡಿಯವರು ತ್ರಿವರ್ಣದ ಸ್ವೀಟ್ ತಯಾರಿಸುತ್ತಾರೆ, ಶಾಲೆಗಳಲ್ಲಿ ಪೆಟ್ಟಿಗೆಯೊಳಗೆ ಒಪ್ಪ ಮಾಡಿಟ್ಟ ರಾಷ್ಟ್ರಧ್ವಜದ ಧೂಳು ಕೊಡವುತ್ತಾರೆ, ಇನ್ನು ನೆಟ್ಟಿಗರು ಎರಡು ದಿನ ಮೊದಲಿಂದಲೇ ರಾಷ್ಟ್ರಧ್ವಜದ ಡಿಪಿ ಹಾಕಲು ಶುರು ಮಾಡುತ್ತಾರೆ. ‘ಮೇರಾ ಭಾರತ್ ಮಹಾನ್ಎಂದೋ, ‘ಭಾರತ್ ಅಮರ್ ರಹೇಎಂದೋ ಸ್ಲೋಗನ್‌ಗಳನ್ನು ಜತೆಗೆ ಒಂದೆರಡು ಅಮರರಾದ ಸೈನಿಕರ ಚಿತ್ರಗಳನ್ನು ಶೇರ್ ಮಾಡಿ ಹ್ಯಾಪಿ ಇಂಡಿಪೆಂಡೆನ್‌ಸ್ ಡೇಎಂದು ವಿಶ್ ಮಾಡಿಕೊಳ್ಳುತ್ತಾ ದಿನ ಮುಗಿಸುತ್ತಾರೆ. ಬಹುಶಃ ವೀರ ಸೇನಾನಿಗಳ ಕುರಿತು ಪ್ರಬಂಧ, ಭಾಷಣ, ಸ್ಮರಣೆ ನಡೆಯುವುದು ಶಾಲೆಗಳಲ್ಲಿ ಮಾತ್ರ. ಸುಭಾಷ್‌ಚಂದ್ರ ಭೋಸ್, ಮಹಾತ್ಮಾಗಾಂಧಿ, ಪಟೇಲ್, ಶಾಸ್ತ್ರಿ ಇವರೆಲ್ಲ ಇರುವುದು ಶಾಲಾ ಮಕ್ಕಳಿಂದ ನೆನಪು ಮಾಡಿಸಿಕೊಳ್ಳಲು ಮಾತ್ರ!

ಬರುಬರುತ್ತಾ ಸ್ವಾತಂತ್ರ್ಯ ದಿನಾಚರಣೆ ತನ್ನ ಸತ್ವ ಕಳೆದುಕೊಂಡು ಕೇವಲ ಆಚರಣೆಗೆ ಸೀಮಿತವಾಗುತ್ತಿದೆಯೆ? ಗಾಂಧಿಯಂತೂ ಇವತ್ತಿಗೆ ಅಪ್ರಸ್ತುತ. ತತ್ವ ಸಿದ್ಧಾಂತಗಳು ತೆರೆಮರೆಗೆ ಸಂದಿವೆ. ಶಾಸ್ತ್ರಿ, ಪಟೇಲ್ ಥರದವರು ಚಿತ್ರಪಟವಾಗಿ ಜನಸಾಮಾನ್ಯರ ಮನೆಯ ಗೋಡೆ ಮೇಲಿನಿಂದಲೂ ಮರೆಯಾಗಿದ್ದಾರೆ. ದೇಶಾಭಿಮಾನ ಉಕ್ಕಿಸುವ ಗೀತೆಗಳು ಇಂದಿಗೆ ಸವಕಲೆನಿಸಿವೆ ಅಥವಾ ಒಂದು ದಿನಕ್ಕೆ ಮಾತ್ರ ಸೀಮಿತವಾಗಿವೆ. ಅಂಥ ಸಿನಿಮಾಗಳೂ ಬರುವುದು ನಿಂತಿವೆ. ಹೋರಾಟ, ಕ್ರಾಂತಿ, ಚಳವಳಿಗಳೆಲ್ಲ ಮೆಲ್ಲಗೆ ಇತಿಹಾಸವಾಗುತ್ತಿವೆ. ಎಲ್ಲೋ ಭಗತ್‌ಸಿಂಗ್, ಸುಭಾಷ್‌ಚಂದ್ರ ಬೋಸ್, ಮಹಾತ್ಮಾ ಗಾಂಧೀಜಿಯಂಥವರು ಗೂಗಲ್ಲಿನಲ್ಲಿ ಬ್ಲಾಕ್ ಎಂಡ್ ವೈಟ್ ಚಿತ್ರಗಳಾಗಿ ಶಾಶ್ವತವಾಗಿದ್ದಾರೆ. ಸ್ವಾತಂತ್ರ್ಯ ದಿನದಂದು ಎಲ್ಲರ ವಾಲ್‌ಗಳಲ್ಲಿ ಕಾಣಿಸಿಕೊಂಡು ಹೀಗೆಲ್ಲ ಆಗಿರುವುದು ದುರಂತ ಎಂದು ಬಿಂಬಿಸುವುದು ಉದ್ದೇಶವಲ್ಲ. ಆಗಬಾರದು ಎಂದೂ ಅಲ್ಲ. ಬಹುಶಃ ಸ್ವಾತಂತ್ರ್ಯಾ ನಂತರದ ನೆಮ್ಮದಿಯ ದಿನಗಳಲ್ಲಿ ಒಂದು ದೇಶ ಸಹಜವಾಗೇ ಪ್ರತಿಕ್ರಿಯಿಸುವ ರೀತಿ ಇದಾಗಿರಬಹುದು. ಇಂದು ರಾಷ್ಟ್ರಾಭಿಮಾನದ ಪರಿಭಾಷೆಗಳು ಮೊದಲಿನಂತಿಲ್ಲ. ಸ್ವಾತಂತ್ರ್ಯ ವೀರ ಸೇನಾನಿಗಳ ಕಥೆಗಳು, ಅವರ ಜೀವನ ಚರಿತ್ರೆಗಳು,ಫೋಟೋಗಳು ಯಾರಲ್ಲೂ ದೇಶಾಭಿಮಾನ ಉಕ್ಕಿಸುವುದಿಲ್ಲ. ಇಂದಿನ ಯುವಭಾರತ ಹಿಂದಿನವರು ದೇಶ ಕಟ್ಟಲು ತೆಗೆದುಕೊಂಡ ಎಲ್ಲ ತೀರ್ಮಾನಗಳನ್ನೂ ಒಪ್ಪಿಕೊಳ್ಳುತ್ತಿಲ್ಲ. ಕಾರಣ ಸ್ವಾತಂತ್ರ್ಯದ ಸಿಹಿಯೊಂದಿಗೆ, ಅಂದಿನವರು ತೆಗೆದುಕೊಂಡ ಕೆಲ ಕಹಿಯನ್ನೂ ಉಣ್ಣುತ್ತಿದ್ದಾರೆ. ದೇಶವಿಭಜನೆ, ಜಾತ್ಯತೀತ ನಿಲುವು, ಸರ್ವಧರ್ಮ ಸಹಿಷ್ಣುತೆ, ಕೋಮು ಸಹಿಷ್ಣುತೆ ಇವೆಲ್ಲ ಆಗಿನಷ್ಟು ಈಗ ಆಕರ್ಷಣೀಯವಾಗಿ ಉಳಿದಿಲ್ಲ. ನಿಜ ಹೇಳಬೇಕೆಂದರೆ ಅವೇ ವರ್ತಮಾನಕ್ಕೆ ಭಾರವೆನಿಸುತ್ತಿವೆ.

ಮೋದಿ ಪ್ರಧಾನಿಯಾದ ಬಳಿಕವಂತೂ ಹಿಂದೂ ರಾಷ್ಟ್ರವಾಗಬೇಕೆಂಬ ಕನವರಿಕೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಕಾಲ ಕಳೆದಂತೆ ಸ್ವತಂತ್ರ ಹೋರಾಟಗಾರರ ನೆನಪಿಸುವ ಬದಲು ಇತಿಹಾಸ ಪುರುಷರನ್ನು ಎದುರಿಗಿಟ್ಟುಕೊಂಡು ಕಾದಾಡುವ ಪ್ರವೃತ್ತಿ ಹೆಚ್ಚಿದೆ. ಅಂಬೇಡ್ಕರ್ ಮೂರ್ತಿ ಭಂಗವಾದರೆ ರಕ್ತಪಾತವನ್ನೇ ಮಾಡುತ್ತೇವೆ. ಬಸವಣ್ಣನ ವಿರುದ್ಧ ಯಾರೇ ಮಾತಾಡಿದರೂ ಜಯಂತಿಗಳ ಆಚರಣೆಯ ವಿಚಾರ ಇರಿಸಿಕೊಂಡು ತಿಂಗಳುಗಟ್ಟಲೆ ಕತ್ತಿ ಮಸೆಯುತ್ತೇವೆ. ವಾಲ್ಮೀಕಿ, ಕನಕದಾಸ, ಪೆರಿಯಾರ್, ಹನುಮಾನ್ ಹೀಗೆ ಎಲ್ಲರನ್ನೂ ಎಳೆದು ತಂದು ಗಲಾಟೆ ಮಾಡಿಕೊಳ್ಳುತ್ತೇವೆ. ಕೊನೆಗೆ ದೇಶದಲ್ಲಿ ಮೋದಿ ಬಂದಾಗಿನಿಂದ ಸಹಿಷ್ಣುತೆ ಹೊರಟುಹೋಗಿದೆ ಎಂದು ಆರೋಪಿಸುತ್ತೇವೆ. ಎಲ್ಲದರ ನಡುವೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜೀವತೆತ್ತ ಮಹಾನುಭಾವರು ಮಾತ್ರ ಬಡಪಾಯಿಗಳಾಗಿ ಹೋಗಿದ್ದಾರೆ. ಮಹಾತ್ಮಾಗಾಂಧಿ ಉಪ್ಪಿನ ಸತ್ಯಾಗ್ರಹ ಮಾಡಿದ್ದರು ಎನ್ನುವುದು ಆಶೀರ್ವಾದ್ ಉಪ್ಪು ತಿನ್ನುವಾಗ ಯಾರಿಗಾದರೂ ನೆನಪಾಗುತ್ತಿದೆಯೆ? ಲಾಲ್‌ಬಹದ್ದೂರ್ ಶಾಸ್ತ್ರಿಯವರ ಒಂದು ಓಗೊಟ್ಟು ಇಡೀ ದೇಶವೇ ರಾತ್ರಿ ಒಪ್ಪತಿನ ಅಭ್ಯಾಸ ಜಾರಿಗೆ ತಂದಿತ್ತು ಎಂಬುದು ಡಯಟ್ ಮಾಡುತ್ತಿರುವವರಿಗೆ ತಿಳಿದಿದೆಯೆ? ಮೋದಿಯ ಖಾದಿ ಕುರ್ತಾವನ್ನು ಪ್ಯಾಶನ್‌ಗಾಗಿ ತೊಡುವಾಗ ಹಿಂದೊಮ್ಮೆ ವಿದೇಶಿ ಬಟ್ಟೆಗಳನ್ನು ಸುಟ್ಟು ಖಾದಿ ಬಟ್ಟೆ ತೊಡುವ ಸ್ವದೇಶಿ ಚಳವಳಿ ನಡೆದಿತ್ತು ಎಂಬುದು ನೆನಪಿಗೆ ಬರುವುದೆ? ಇಲ್ಲ. ಇದ್ಯಾವುದೂ ಇಂದಿನ ಸುಖದ ಕಾಲದಲ್ಲಿ ನೆನಪಾಗುತ್ತಿಲ್ಲ. ಹಾಗಾದರೆ ಅವರ್ಯಾರಲ್ಲೂ ದಶಕಗಳ ನಂತರವೂ ಪ್ರಸ್ತುತವಾಗಿರಬಲ್ಲ ಅಂತಃಸತ್ವವಿರಲಿಲ್ಲವೆ? ಇರಲಿಲ್ಲ ಎಂದರೆ ತಪ್ಪಾದೀತು. ಆದರೆ ಕಾಲಕ್ರಮೇಣ ನಮ್ಮ ಗ್ರಹಿಕೆಗಳು ಹೋದವು. ಹೌದು, ಅವರು ಸ್ವಾತಂತ್ರ್ಯ ತಂದುಕೊಟ್ಟರು. ಹಾಗಂತ ಇಂದಿಗೂ ಅವರನ್ನೇ ನೆನಪಿಸುತ್ತಾ ಕೂರಕ್ಕಾಗತ್ತಾ? ಎಂದು ತುಡುಗು ಮಾತನಾಡುವವರಿದ್ದಾರೆ. ಆದರೆ ಅವರೇ ಅಂಬೇಡ್ಕರ್ ವಿಚಾರವಾಗಿ, ಬಸವಣ್ಣನ ವಿಚಾರವಾಗಿ ಬೀದಿಗಿಳಿಯುತ್ತಾರೆ. ಎಂಥ ವಿಪರ್ಯಾಸ ನೋಡಿ.

ನಿಮಗೊಂದು ವಿಚಾರ ತಿಳಿದಿರಲಿ, ನಮ್ಮವರಷ್ಟು ಗಾಂಧಿ, ನೆಹರು ಹಾಗೂ ಸಾಲಿನ ನಾಯಕರನ್ನು ದೂಷಿಸುವವರು ಇನ್ಯಾರೂ ಇಲ್ಲ. ಯಾವ ಅಮೆರಿಕನ್‌ನನೂ ಅವನ ದೇಶದ ರಾಷ್ಟ್ರಪಿತನನ್ನು ಟೀಕಿಸುವುದಿಲ್ಲ. ಫ್ರೆಂಚರು ತಮ್ಮ ದೇಶದ ಹಿರಿಯ ನಾಗರೀಕರ ಬಗ್ಗೆ ಕೆಟ್ಟದಾಗಿ ಎಲ್ಲ ಹೋಗಲಿ, ನೆರೆಯ ಪಾಕಿಸ್ತಾನದವರು ಕೂಡ ಮಹಮದ್ ಅಲಿ ಜಿನ್ನಾರನ್ನು ಬೈಯುವುದಿಲ್ಲ. ಆದರೆ ನಾವಿದ್ದೇವಲ್ಲ, ಸ್ವತಂತ್ರ ರಾಷ್ಟ್ರದವರು, ನಮಗೆ ನಮ್ಮ ರಾಷ್ಟ್ರಪಿತನನ್ನು ಬೈದಷ್ಟೂ ಸಾಲದು. ಅವನಿಂದಲೇ ನಮ್ಮ ದೇಶ ಇವತ್ತು ಹೀಗಾಗಿದ್ದು ಎಂದು ಸುಲಭವಾಗಿ ಹೇಳಿಬಿಡುತ್ತೇವೆ. ಇಷ್ಟಕ್ಕೂ ನಮಗೇನು ಗೊತ್ತು ಅವರ ಬಗ್ಗೆ? ಅಂದಿನ ಜನಸಮೂಹದ ನಂಬಿಕೆ, ಆದರ್ಶ, ಮೌಲ್ಯಗಳನ್ನು ಮುಂದಿಟ್ಟುಕೊಂಡು ಸಂವಿಧಾನ ರಚಿಸಿದರು ಹಾಗೂ ದೇಶ ಕಟ್ಟಿದರು. ಕಾಲಘಟ್ಟದಲ್ಲಿ ಅನುಭವಿಸಿದ ಆಕ್ರಮಣ, ದಾಸ್ಯ, ಹಿಂಸೆ, ಬಹುಸಂಸ್ಕೃತಿ ದೃಷ್ಟಿಯಲ್ಲಿರಿಸಿಕೊಂಡು ನಿರ್ಮಿಸಿದ ಸಮಾಜ, ಸರಕಾರ ಇಂದಿನ ಸುಖದ ಕಾಲಕ್ಕೆ ಅನ್ವಯವಾಗುತ್ತಿಲ್ಲ. 71 ವರ್ಷಗಳ ಬಳಿಕ ಇಂದಿನ ತಲೆಮಾರು ನಮ್ಮ ಇತಿಹಾಸ, ಸಂಸ್ಕೃತಿಯನ್ನಿರಿಸಿಕೊಂಡು ದೇಶ ರಚನೆಯಾಗಲಿಲ್ಲ ಎಂದು ಆರೋಪಿಸತೊಡಗಿದೆ. ಇದಕ್ಕೆಲ್ಲ ಸಮರ್ಥನೆ ಕೊಡಲು ಹಿಂದಿನವರು ಈಗಿಲ್ಲ. ನಮ್ಮಲ್ಲೂ ವಿದೇಶಗಳಂತೆಯೇ ಒಂದೇ ಧರ್ಮವಿರಬೇಕಿತ್ತು ಎನ್ನುತ್ತೇವೆ. ಆದರೆ ನಮ್ಮ ರಸ್ತೆ, ಶೌಚಾಲಯ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಒಂದೇ ಧರ್ಮ ಬೇಕಿರಲಿಲ್ಲ. ನಮ್ಮ ಸುರಕ್ಷತೆಗಾಗಿಯೇ ಮಾಡಲಾದ ರಸ್ತೆ ನಿಯಮಗಳನ್ನು ಪಾಲಿಸಲು ಹಿಂದೂ ರಾಷ್ಟ್ರವೇ ಆಗಬೇಕೆಂದಿಲ್ಲ. ವಿರೋಧಿಸಲು ಮುಸ್ಲಿಮರನ್ನು ದೇಶಬಿಟ್ಟು ಓಡಿಸಬೇಕೆಂದಿಲ್ಲ. ನಮ್ಮ ಪೋಲಿಸ್ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಇನ್ನಷ್ಟು ಹಾಳಾಗದಂತೆ ಮಾಡಲು ಹಿಂದೂ ಧರ್ಮವೇ ನೆಲೆಸಬೇಕೆಂದಿಲ್ಲ

ಎಲ್ಲಿಯವರೆಗೆ ನಾವು ನಮ್ಮ ನಿತ್ಯ ಬದುಕಿನ ಅಧ್ವಾನಗಳನ್ನು ಪರಿಹರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸ್ವಾತಂತ್ರ್ಯ ಸುಂದರವಾಗುವುದಿಲ್ಲ. ಸ್ವಾತಂತ್ರ್ಯ ಬಂದು 71 ವರ್ಷದ ಮೇಲೂ ನಮಗೆ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗಿಲ್ಲ.ಕೇಬಲ್ ವಾಯರ್‌ಗಾಗಿ ರಸ್ತೆ ಅಗೆಯುವ ದುರವಸ್ಥೆಗೊಂದು ಪರಿಹಾರ ಸಿಕ್ಕಿಲ್ಲ, ಬಯಲು ಶೌಚ ಅವಮಾನಕರ ಎಂಬುದೇ ಅರ್ಥವಾಗಿಲ್ಲ. ಅತ್ಯಾಚಾರ ಇಷ್ಟು ವರ್ಷದ ಸ್ವಾತಂತ್ರ್ಯಕ್ಕೆ ಇಟ್ಟ ಮಸಿ. ಸಂದರ್ಭದಲ್ಲಿ ನಾವು ಹೋರಾಡಬೇಕಾಗಿದ್ದು ಬೇರೆಯದೇ ಆದ ಸ್ವಾತಂತ್ರ್ಯಕ್ಕೆ. ನಮ್ಮೊಳಗೆ ದೇಶದ ಬಗ್ಗೆ ಬೆಳೆಸಿಕೊಂಡ ತಾತ್ಸಾರ ಭಾವನೆಯಿಂದ ಸ್ವಾತಂತ್ರ್ಯ ಪಡೆಯಬೇಕು, ಎಲ್ಲವನ್ನೂ ಸರಕಾರವೇ ಮಾಡಬೇಕೆಂಬ ನಿರೀಕ್ಷೆಯ ಭಾರದಿಂದ ಸ್ವಾತಂತ್ರ್ಯ ಪಡೆಯಬೇಕು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡಗುವ ದುರ್ಬುದ್ಧಿಯಿಂದ ಸ್ವಾತಂತ್ರ್ಯ ಪಡೆಯಬೇಕು, ಇತಿಹಾಸ ಪುರುಷರು ಮಾತ್ರ ಗೌರವಕ್ಕೆ ಅರ್ಹರು, ಅವರ ಮೌಲ್ಯಗಳೇ ಇವತ್ತಿಗೂ ಪ್ರಸ್ತುತ ಎಂಬ ತಪ್ಪು ನಂಬಿಕೆಯಿಂದ ಸ್ವಾತಂತ್ರ್ಯ ಪಡೆಯಬೇಕು, ಅವರನ್ನು ಮುಂದಿರಿಸಿಕೊಂಡು ವರ್ತಮಾನವನ್ನು ಹಾಳು ಮಾಡಿಕೊಳ್ಳುವ ದಡ್ಡತನದಿಂದ ಸ್ವಾತಂತ್ರ್ಯ ಪಡೆಯಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟ ರಾಜಕಾರಣಿಗಳು ಇನ್ನೆಲ್ಲೂ ಹುಟ್ಟುವುದಿಲ್ಲ. ಅವರು ಹುಟ್ಟುವುದು ಸಮಾಜದ ನಡುವಿನಿಂದಲೇ ಎಂಬ ತಿಳಿವಳಿಕೆ ಮೊದಲು ಬೆಳೆಸಿಕೊಳ್ಳಬೇಕು.

ಎಷ್ಟೆಲ್ಲ ಮಾಡುವುದಿದೆ ನಾವು ಇನ್ನೂ! ಬಹುಶಃ 100ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ನನ್ನಂತೆಯೇ ಇನ್ಯಾರೋ ಕುಳಿತು ಹೀಗೆಯೇ ಇನ್ನೊಂದು ಲೇಖನ ಬರೆಯುತ್ತ ಕೂರಬಹುದು. ಏಕೆಂದರೆ ಅದು ಹೆಚ್ಚೇನೂ ದೂರವಿಲ್ಲ. ಇನ್ನು ಕೇವಲ ಮೂವತ್ತು ವರ್ಷ. ಅಷ್ಟರಲ್ಲಿ ಹೇಳಿಕೊಳ್ಳುವಂಥ, ಜಗತ್ತು ಕತ್ತು ನೋಡುವಂಥ ಬದಲಾವಣೆಯೇನೂ ನಮ್ಮಲ್ಲಿ ಬಂದಿರುವುದಿಲ್ಲ. ಏಕೆಂದರೆ 70 ವರ್ಷದಲ್ಲಿ ಬಾರದ್ದು ಇನ್ನು 30 ವರ್ಷಗಳಲ್ಲಿ ಬಂದೀತೇ?

Tags

Related Articles

Leave a Reply

Your email address will not be published. Required fields are marked *

Language
Close