ಬೇಡಲು ಮರೆಯುವುದಿಲ್ಲಾ! ಧನ್ಯವಾದಗಳು ಹೇಳಲು ಮಾತ್ರ ಮರೆಯುತ್ತೇವೆ!

Posted In : ಕ್ಷಣಹೊತ್ತು ಅಣಿ ಮುತ್ತು

ನಾವು ಯಾರನ್ನೂ, ಏನನ್ನೂ ಬೇಡುವುದಿಲ್ಲ. ಹಾಗೇನಾದರೂ ಬೇಡಿ ಪಡೆದಿದ್ದರೆ, ಕೊಟ್ಟವರಿಗೆ ಧನ್ಯವಾದಗಳನ್ನು ಹೇಳಲು ಮರೆಯುವುದೂ ಇಲ್ಲ ಎನ್ನುವವರು ನಾವಾದರೆ, ಇಲ್ಲಿರುವ ಪ್ರಸಂಗ ನಮಗೆ ಅನ್ವಯವಾಗುವುದಿಲ್ಲ. ಆದರೂ ಕುತೂಹಲಕಾರಿ ಯಾದ ಈ ಪ್ರಸಂಗವನ್ನು ನೋಡೋಣ. ಒಬ್ಬ ಸಜ್ಜನರಿದ್ದರಂತೆ. ಒಮ್ಮೆ ಅವರಿಗೆ ತಾವು ಸತ್ತು ಹೋದ ಹಾಗೆ ಕನಸು ಬಿತ್ತು.

ಸತ್ತ ಮೇಲೆ ಎಲ್ಲಿಗಾದರೂ ಹೋಗಲೇಬೇಕಲ್ಲ? ಅವರು ಶಿವಪೂಜೆ ಮಾಡುವವರಾದದ್ದರಿಂದ ಅವರು ಕೈಲಾಸಕ್ಕೆ ಹೋದರಂತೆ. (ವಿಷ್ಣುಪೂಜೆ ಮಾಡುವವರಾಗಿದ್ದರೆ ವೈಕುಂಠಕ್ಕೆ ಹೋಗುತ್ತಿದ್ದರೇನೋ?) ದೇವದೂತನೊಬ್ಬ ಅವರನ್ನು ಬಾಗಿಲಲ್ಲೇ ಸ್ವಾಗತಿಸಿದ. ಅವರಿಗಾಗಿ ಮೀಸಲಾಗಿರುವ ನಿವಾಸಕ್ಕೆ ಕರೆದುಕೊಂಡು ದಾರಿಯಲ್ಲಿ ಕೈಲಾಸವನ್ನು ಸುತ್ತಾಡಿಸಿ ವಿವಿಧ ಸ್ಥಳಗಳ ಪರಿಚಯ ಮಾಡಿಕೊಟ್ಟನಂತೆ.

ದಾರಿಯಲ್ಲಿ ಒಂದು ದೊಡ್ಡ ಕಚೇರಿಯಿತ್ತಂತೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿದ್ದರಂತೆ. ಎಲ್ಲರಿಗೂ ಬಿಡುವಿಲ್ಲದಷ್ಟು ಕೆಲಸ. ಸಜ್ಜನರು ಸಹಜವಾಗಿ ಇಲ್ಲೇನು ನಡೆಯುತ್ತಿದೆಯೆಂದು ಕೇಳಿದರಂತೆ. ದೇವದೂತ ‘ಇದು ದೇವರ ಗೃಹಕಚೇರಿ. ಇಲ್ಲಿ ಭೂಲೋಕದ ಭಕ್ತರು ಪರಮಾತ್ಮನಿಗೆ ಸಲ್ಲಿಸುವ ಬೇಡಿಕೆಗಳನ್ನೆಲ್ಲ ಸ್ವೀಕರಿಸಲಾಗುತ್ತದೆ. ಅವುಗಳಲ್ಲಿ ಯಾವ್ಯಾವುದನ್ನು ಮಂಜೂರು ಮಾಡಬಹುದು, ಯಾವುದನ್ನು ಮಂಜೂರು ಮಾಡಲಾಗುವುದಿಲ್ಲ ಎನ್ನುವುದನ್ನು ಆಯಾ ಭಕ್ತರ ಖಾತೆಗಳನ್ನು ನೋಡಿ ದೇವರಿಗೆ ಸಲಹೆ ನೀಡುತ್ತಾರೆ. ಅಸಂಖ್ಯ ಸಂಖ್ಯೆಯಲ್ಲಿ ಬೇಡಿಕೆಗಳನ್ನು ಸ್ವೀಕರಿಸಬೇಕಾಗಿರುವುದರಿಂದ ಇಲ್ಲಿ ಕೆಲಸ ಹೆಚ್ಚಾಗಿರುತ್ತದೆ’ ಎಂದು ವಿವರಿಸಿದರಂತೆ.

ಮುಂದಕ್ಕೆ ಹೋದಾಗ ಅಲ್ಲಿ ಇನ್ನೊಂದು ಕಚೇರಿಯಿತ್ತು. ಅಷ್ಟೇನೂ ದೊಡ್ಡದಲ್ಲದ ಕಚೇರಿ. ನೂರಿನ್ನೂರು ಜನ ಕೆಲಸ ಮಾಡುತ್ತಿರಬಹುದು. ಸಜ್ಜನರು ಇದೇನೆಂದು ಕೇಳಿದಾಗ, ದೇವದೂತ ‘ಇದು ದೇವರಿಗೆ ಬಂದು ಮಂಜೂರಾದ ಬೇಡಿಕೆಗಳನ್ನೆಲ್ಲ ಆಯಾ ಭಕ್ತರಿಗೆ ತಲುಪಿಸುವ ಕಚೇರಿ. ಬಂದ ಬೇಡಿಕೆಗಳನ್ನೆಲ್ಲ ಮಂಜೂರು ಮಾಡುವುದು ಯಾವ ದೇವರಿಗೂ ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಕಡಿಮೆ ಜನ ಕೆಲಸ ಮಾಡುತ್ತಾರೆ’ ಎಂದು ವಿವರಿಸಿದ. ಇನ್ನೂ ಮುಂದಕ್ಕೆ ಹೋದಾಗ ಅಲ್ಲಿ ಒಂದು ಸಣ್ಣ ಕಚೇರಿಯಿತ್ತಂತೆ. ಅಲ್ಲಿ ಒಬ್ಬಿಬ್ಬರು ಕೆಲಸ ಮಾಡುತ್ತಿದ್ದರಂತೆ. ಅವರಿಗೂ ಹೆಚ್ಚು ಕೆಲಸವಿರುವಂತೆ ಕಾಣಲಿಲ್ಲ.

ಅವರೆಲ್ಲ ಆಕಳಿಸುತ್ತ ಕುಳಿತಿದ್ದರು. ಎಲ್ಲವೂ ನಿಧಾನಗತಿಯಲ್ಲಿ ಸಾಗುತ್ತಿತ್ತು. ಸಜ್ಜನರಿಗೆ ಆಶ್ಚರ್ಯವಾಯಿತು. ‘ಇಲ್ಲೇನೂ ಹೆಚ್ಚು ಕೆಲಸ ನಡೆಯುತ್ತಿಲ್ಲವಲ್ಲ! ಇದೇನು ಸರಕಾರಿ ಕಚೇರಿಯೇ?’ ಎಂದು ಕೇಳಿದಾಗ ದೇವದೂತ ‘ತಮ್ಮ ಬೇಡಿಕೆಗಳು ಮಂಜೂರಾಗಿ
ಅವುಗಳು ಈಡೇರಿದ ಮೇಲೆ ಭಕ್ತರು ದೇವರಿಗೆ ತಿಳಿಸುವ ಧನ್ಯವಾದಗಳನ್ನು ಸ್ವೀಕರಿಸುವ ಕಚೇರಿ ಇಲ್ಲಿದೆ. ಬೇಡಿಕೆ ಮಂಡಿಸುವವರು ಲಕ್ಷಾಂತರ ಜನ. ತಮ್ಮ ಬೇಡಿಕೆಗಳು ಮಂಜೂರಾಗಿ ಅವು ಸಿಕ್ಕ ಮೇಲೆ ಪರಮಾತ್ಮನಿಗೆ ಧನ್ಯವಾದಗಳನ್ನು ಹೇಳುವವರು ಕೆಲವೇ ಜನ ಅಥವಾ ಕೆಲವರು ತಮ್ಮ ಪರಿಶ್ರಮದಿಂದಾಗಿ ಫಲ ಸಿಕ್ಕಿತು, ಪರಮಾತ್ಮನಿಂದ ಅಲ್ಲವೆಂದು ಭಾವಿಸುತ್ತಾರೆ. ಹಾಗಾಗಿ ಧನ್ಯವಾದಗಳು ತಿಳಿಸುವವರ ಸಂಖ್ಯೆ ಬಹಳ ಕಡಿಮೆ. ಇಲ್ಲಿ ಕೆಲಸವೂ ಕಡಿಮೆ’ ಎಂದು ನಿಟ್ಟುಸಿರು ಬಿಡುತ್ತ ಮುಂದಕ್ಕೆ ಹೋದ.

ಸಜ್ಜನರನ್ನು ಆವಾಸಕ್ಕೆ ತಲುಪಿಸಿ ಶಿವದೂತ ಹೊರಟು ಹೋದ. ಬಹಳ ಹೊತ್ತಿನವರೆಗೆ ಸಜ್ಜನರು ಭಕ್ತಜನರ ಮನೋಭಾವವನ್ನು ಕುರಿತು ಚಿಂತಿಸುತ್ತಾ ಇದ್ದರು. ಈಗ ಆ ಸಜ್ಜನರ ಕನಸಿನ ಅನುಭವವನ್ನು ಅವರಿಗೇ ಬಿಟ್ಟು ನಾವೂ ಸ್ವಲ್ಪ ಚಿಂತಿಸೋಣ. ನಾವೂ ಬದುಕಿನುದ್ದಕ್ಕೂ ಹಲವಾರು ದೇವಸ್ಥಾನಗಳಿಗೆ ಹೋಗಿ ದೇವರಿಗೆ ಬೇಡಿಕೆಗಳನ್ನು ಸಲ್ಲಿಸುತ್ತಲೇ ಬಂದಿದ್ದೇವೆ! (ಅನೇಕ ಬಾರಿ ಮನುಷ್ಯರಿಗೂ ಬೇಡಿಕೆ ಸಲ್ಲಿಸಿದ್ದೇವೆ!) ಕೆಲವೊಮ್ಮೆ ನಮ್ಮ ಬೇಡಿಕೆಗಳು ಮನ್ನಿಸಲ್ಪಟ್ಟಿವೆ. ಅದರ ಫಲಗಳನ್ನು ಸಂತೋಷದಿಂದ ಅನುಭವಿಸಿದ್ದೇವೆ. ಆದರೆ ಎಷ್ಟು ಬಾರಿ ಮತ್ತದೇ ದೇವಸ್ಥಾನಕ್ಕೆ ಹೋಗಿ ಆಯಾ ದೇವರಿಗೋ, ಆ ಮನುಷ್ಯರಿಗೋ ಧನ್ಯವಾದ ಅರ್ಪಿಸಿದ್ದೇವೆ? ಚಿಂತನೆಗೆ ಅರ್ಹವಾದ ವಿಷಯವಲ್ಲವೇ?

-ಎಸ್.ಷಡಕ್ಷರಿ

Leave a Reply

Your email address will not be published. Required fields are marked *

four + 8 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 20.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಪಂಚಮಿ, ಶುಕ್ರವಾರ, ನಿತ್ಯನಕ್ಷತ್ರ-ಮೃಗಶಿರಾ, ಯೋಗ-ಶೋಭನ, ಕರಣ-ಬವ

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top