About Us Advertise with us Be a Reporter E-Paper

ವಿರಾಮ

ತೂಕದ ಇಳಿಕೆ, ನನ್ನ ಬಯಕೆ

ಜ್ಯೋತಿ ರಾಜೇಶ್, ಕುದುರೆಮುಖ

ಗ ಸಾಧಾರಣ ಹತ್ತು ಜನರಲ್ಲಿ ಏಳೆಂಟು ಜನರಿಗೆ ಈ ಬಂದೇ ಬಂದಿರುತ್ತದೆ. ನನಗೂ ಆಗಾಗ ಈ ಖಾಯಿಲೆ ಬರೋದುಂಟು. ಯಾಕೆ? ಯಾವ್ದಪ್ಪಾ ಅದು ಅಂತ ತಲೆ ಬಿಸಿ ಆಯ್ತಾ? ಅದೇ ಮಾರಾಯ್ರೆ, ದಪ್ಪಗಿದ್ದವರಿಗೆಲ್ಲ ಬರತ್ತಲ್ಲ, ಸಣ್ಣಗಾಗಬೇಕೆಂಬ ಖಾಯಿಲೆ, ಅದೇ. ಒಮ್ಮೆ ಟಿ.ವಿ ನಲ್ಲಿ ಬಂದ ಆರೋಗ್ಯದ ಬಗೆಗಿನ ಕಾರ್ಯಕ್ರಮ ನೋಡ್ತಿದ್ದೆ, ಇದ್ದಕ್ಕಿದ್ದ ಹಾಗೇ ನನ್ನ ಆರೋಗ್ಯದ ಬಗ್ಗೆ ಕಾಳಜಿ ಜಾಗೃತವಾಗಿಬಿಡ್ತು. ನನ್ನ ಅರಿವಿಗೇ ಬರದೇ ಜಾಸ್ತಿಯಾಗುತ್ತಿದ್ದ ನನ್ನ ತೂಕವನ್ನು ಕಡಿಮೆ ಮಾಡಬೇಕೆಂಬ ಹುಚ್ಚು ಶುರುವಾಯ್ತು.

ಪ್ರಪ್ರಥಮವಾಗಿ, ಈಗ ಎಲ್ಲೆಡೆ ವ್ಯಾಯಾಮದ ಬಗೆಗಿನ ಮಾತುಗಳು ಜಾಸ್ತಿ ಕೇಳಿ ಬರುತ್ತಿರುವುದರಿಂದ, ಅದನ್ನೇ ಮಾಡಿ ತೂಕ ಇಳಿಸುವುದು ಒಳ್ಳೆಯದೆನಿಸಿತು. ಯಜಮಾನರಿಗೆ ತಿಳಿಸಿದೆ. ಅದೆಲ್ಲ ಯಾಕೆ ಬಿಡೆ, ಸುಮ್ಮನೆ ಕಷ್ಟಪಡ್ತಿ? ಅಂತಾರೇನೋ ಅಂತಿದ್ದೆ, ಆಗ ‘ನಾನೇನೋ ಕಷ್ಟ ಪಡಲು ತಯಾರಿದ್ದೆ, ಇವರೇ ಬೇಡ ಅಂದ್ರು’ ಅಂತ ಸಮಾಧಾನ ಮಡ್ಕೋಬಹುದು ಅಂತ. ಆದ್ರೆ ಪುಣ್ಯಾತ್ಮ, ತಕ್ಷಣ ಸಂತೋಷದಿಂದ ಒಪ್ಪಿಕೊಂಡು ಬಿಡೋದೆ? ಸರಿ ಇನ್ನೇನೂ ಉಪಾಯವಿಲ್ಲಾಂತ ಯೋಗ ಕ್ಲಾಸ್‌ಗೆ ಸೇರಲು ಹೋದೆ. ಅಲ್ಲಿ ಯೋಗ ಕಲಿಸುವಾಕೆಯನ್ನು ನೋಡಿಯೇ ಬಳುಕುವ ಬಳ್ಳಿಯ ಹಾಗಿದ್ದಳು ಪುಣ್ಯಾತ್ಗಿತ್ತಿ. ಅಲ್ಲಿ ಅವರೆಲ್ಲ ತಮ್ಮ ಕೈ, ಕಾಲು, ಸೊಂಟ, ಹೊಟ್ಟೆಗಳನ್ನು ಆಡಿಸುತ್ತ, ಬಾಗಿಸುತ್ತಿದ್ದ, ರೀತಿಗಳನ್ನು ನೋಡಿಯೇ ಛಳಿಜ್ವರ ಬಂದ ಹಾಗಾಯ್ತು. ಆದ್ರೂ ಇರಲಿ ನೋಡುವ ಅಂತ ಅದನ್ನೆಲ್ಲ ಕಲಿಸಲು ಕೊಡಬೇಕಾದ ಫೀಸ್ ಬಗ್ಗೆ ಕೇಳಿದೆ. ಆಗ ಅವರು ಹೇಳಿದ್ದು ಕೇಳಿದ ಮೇಲಂತೂ, ಪೂರ್ತಿ ಬೆಪ್ಪಾದೆ. ಇದನ್ನೆಲ್ಲ ಕಲಿಯಲು ಹೋಗಿ ಕಾಲು, ಸೊಂಟ ಉಳುಕಿಸಿಕೊಳ್ಳುವ ತಾಪತ್ರಯ ಯಾಕೆ? ಸುಮ್ಮನೆ ದುಡ್ಡು ಕೊಟ್ಟು ದುಃಖ ಪಡೆಯುವುದು ಬೇಡವೆನಿಸತೊಡಗಿತು. ಯೋಗಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ, ಆಯ್ತು, ಇನ್ನೊಮ್ಮೆ ಬರ್ತೀನೀಂತ ಹೇಳಿ, ಮೆಲ್ಲನೆ ಮನೆ ಕಡೆ ನಡೆದೆ. ಯಾಕೆ ಯೋಗಕ್ಕೆ ಸೇರಲಿಲ್ವಾ ಅಂದ ಮನೆಯವರಿಗೆ, ಇಲ್ಲರೀ ಅಲ್ಲಿ ಜನ ಭರ್ತಿ ಆಗಿದ್ದಾರಂತೆ ಅಂತ ಕಿವಿ ಮೇಲೆ ಹೂ ಇಟ್ಟೆ.

ಡಯಟ್ ಆಯ್ತು ಎಡವಟ್

ನಂತರ ನನ್ನ ಮನಸ್ಸು ತಿರುಗಿದ್ದು ಡಯಟ್ ಕಡೆಗೆ. ಟಿ.ವಿ.ಯಲ್ಲಿ ಡಯಟ್ ಬಗ್ಗೆ ಹೇಳುವ ನೀಳಕಾಯದ ಸುಂದರಿಯನ್ನು ನೋಡಿದ್ದೆ, ನಾನೂ ಡಯಟ್ ಮಾಡಿ ಅವಳ ಹಾಗೆ ಆಗುವ ಕಾಣತೊಡಗಿದೆ. ಅವಳು ಹೇಳಿದ ಪಾಯಿಂಟ್ ಎಲ್ಲವನ್ನೂ ಗುರುತು ಹಾಕಿಕೊಂಡು ಮಾರನೇ ದಿನದಿಂದಲೇ ಜಾರಿಗೊಳಿಸಲು ನಿರ್ಧರಿಸಿದೆ. ಆದರೆ ಬೆಳಿಗ್ಗೆ ಎದ್ದಾಗ ಈವತ್ತೊಂದು ದಿನ ಆಸೆಯಾಗಿದ್ದನ್ನೆಲ್ಲ ಸರಿಯಾಗಿ ತಿಂದು ನಾಳೆಯಿಂದ ಶುರು ಮಾಡೋಣ ಅಂದ್ಕೊಂಡು, ಮನೆಯವರನ್ನೆಲ್ಲ ಸೇರಿಸಿಕೊಂಡು, ಹೋಟೆಲ್‌ಗೆ ಹೋಗಿ ಗಡದ್ದಾಗಿ ತಿಂದು ಬಂದಿದ್ದಾಯ್ತು. ಡಯಟ್ ಮಾಡುವಾಗ ತಿನ್ನಲು ಬೇಕೂಂತ ಹಣ್ಣುಗಳು, ಕಾಳುಗಳು, ಡ್ರೆ` ್ರೂಟ್‌ಸ್ ಅಂತ ಇನ್ನೂ ಏನೇನೋ, ತರಿಸಿ ಡಬ್ಬಗಳಲ್ಲಿ ತುಂಬಿಸಿಟ್ಟಿದ್ದಾಯ್ತು. ಅಂತೂ ಡಯಟ್ ಮಾಡಲು ಸರ್ವ ಸನ್ನದ್ಧಳಾಗಿದ್ದಾಯ್ತು. ಮಾರನೇ ದಿನ ಬೆಳಿಗ್ಗೆ ಬೆಳಿಗ್ಗೆಯೇ ಎಂದೂ ಇಲ್ಲದ್ದು ಎಷ್ಟು ಹಸಿವಾಗತೊಡಗಿತೂ ಅಂದ್ರೆ, ಆ ಡಯಟೀಷಿಯನ್ ಹೇಳಿದ ಕಾಳುಗಳನ್ನೂ, ಹಣ್ಣುಗಳನ್ನೂ ತಿನ್ನುವುದು ಊಟಕ್ಕಿಂತ ಮೊದಲೋ, ನಂತರವೊ ಅಂತ ಯೋಚಿಸುವ ಹಾಗಾಯ್ತು. ಅದೂ ಸಾಲದೂಂತ ಟಿ.ವಿ. ಯಲ್ಲಿ ದಿನವಿಡೀ ಒಂದಿಲ್ಲೊಂದು ಚಾನೆಲ್‌ನಲ್ಲಿ ಬರುವ ಹೊಸರುಚಿಯ ಕಾರ್ಯಕ್ರಮಗಳು ಮತ್ತು ಅವರು ಹೇಳುವ ‘ಮಾಡ್ಕೊಳಿ ತಿನ್ಕೊಳಿ, ವಾವ್, ತುಂಬ ಟೇಸ್ಟಿಯಾಗಿದೆ, ನೀವೂ ನಿಮ್ಮ ಮನೆಯಲ್ಲಿ ಟ್ರೆ` ಮಾಡಿ ನಮಗೆ ತಿಳಿಸಿ’ ಎನ್ನುವ ವಾಕ್ಯಗಳಿಂದ ನನ್ನ ಚಪಲ ಇನ್ನೂ ಜಾಸ್ತಿಯಾಗತೊಡಗಿತು. ಅದಕ್ಕೆ ಸರಿಯಾಗಿ ನಮ್ಮ ನೆಂಟರುಗಳಿಗೂ ಈಗಲೇ ನಮ್ಮ ನೆನಪಾಗಿ, ನಮ್ಮ ಮನೆಗೆ ಬರಲು ಇದೇ ಸುಸಮಯವಾಗಿತ್ತು. ಅವರು ಬಂದ್ರೂಂತ ಅವರಿಗೋಸ್ಕರ ಮಾಡಿದ, ಸ್ವೀಟ್ಸೂ, ಚಾಟ್ಸೂ ರುಚಿ ನೋಡಲಿಕ್ಕೇಂತ ಅವರಿಗಿಂತ ನಾನೇ ಜಾಸ್ತಿ ತಿಂದಿದ್ದಾಯ್ತು. ಇದಕ್ಕೆಲ್ಲ ಕಲಶವಿಟ್ಟಂತೆ ಮತ್ತೊಂದೆರೆಡು ದಿನಗಳಲ್ಲೇ ಕೆಲ ಸಮಾರಂಭಗಳಿಗೂ, ಮದುವೆಗಳಿಗೂ ಹೋಗಬೇಕಾಗಿ ಬಂತು. ಅಲ್ಲಂತೂ ನನ್ನ ಅವಸ್ಥೆ ಕೇಳಲೇ ಬೇಡಿ. ಅತಿಥೇಯರಿಗೆ ನನ್ನ ಮೇಲೆ ಏನು ದ್ವೇಷವೋ ಕಾಣೆ, ಯಾವುದನ್ನು ನಾನು ಅಂದುಕೊಂಡಿದ್ದೆನೋ ಅದನ್ನೇ ಮಾಡಿಸಿದ್ದರು ಆ ಪುಣ್ಯಾತ್ಮರು. ಬಫೆಗೆ ಹೋದರೆ ಒಂದಕ್ಕಿಂತ ಒಂದು ಖಾದ್ಯಗಳು ನನ್ನನ್ನು ಕೈ ಬೀಸಿ ಕರೆಯುತ್ತಿದ್ದವು. ನಮ್ಮವರು ದುರುಗುಟ್ಟಿ ನನ್ನೆಡೆಗೆ ನೋಡುವುದನ್ನೂ ಲೆಕ್ಕಿಸದೆ ಕಣ್ಮುಚ್ಚಿಕೊಂಡು ಚೆನ್ನಾಗಿ ತಿಂದುಬಿಟ್ಟೆ. ಹೀಗೆ ಒಂದು ದಿನ ಡಯಟ್, ನಾಲ್ಕು ದಿನ ಸರೀ ತಿನ್ನುವುದು ಮಾಡ್ತಾ, ಕೊನೆಗೆ ಒಂದು ದಿನ ‘ಅಯ್ಯೋ ಈ ಡಯಟ್ ಮನೆ ಹಾಳಾಗ್ಲಿ, ಎಷ್ಟು ದಿನ ಇರ್ತೀನೋ ಯಾರಿಗ್ಗೊತ್ತು ಇರುವಷ್ಟು ದಿನ ಹಾಯಾಗಿ ತಿಂದುಂಡು ಇರೋದು’ ಅಂತ ಅಧ್ಯಾತ್ಮದತ್ತ ಹೊರಳತೊಡಗಿತು. ಇದು ನನ್ನ ಡಯಟ್‌ನ ಅಂತ್ಯ ಅಂತ ಹೇಳ್ಬೇಕಾಗಿಲ್ಲ ತಾನೆ? ಕೊನೆಗೆ ಮನೆಯವರು ತಮಾಷೆ ಮಾಡಿದ್ರೆ ಅಂತ, ‘ಅಯ್ಯೊ ಈ ಡಯಟ್ ಮಾಡೋದ್ರಿಂದ ಹೊಟ್ಟೇಲಿ ಸಂಕಟ ಆಗುತ್ತೆ, ತಲೆ ತಿರುಗುತ್ತೆ’ ಅಂತ ಏನೇನೋ ರೀಲು ಬಿಟ್ಟು, ಅವರಿಂದಲೇ ‘ಬೇಡ ಬಿಡು, ಯಾಕೆ ಸುಮ್ನೆ ಕಷ್ಟ ಪಡ್ತಿ, ನೀನೀಗ ಸರಿಯಾಗೇ ಇದ್ದೀಯ’ ಅಂತ ಬಲವಂತದಿಂದ ಹೇಳಿಸಿಕೊಂಡು ಡಯಟ್‌ಗೆ ಮಂಗಳ ಹಾಡಿಬಿಟ್ಟೆ.

ನಡಿಗೆ ಮಧ್ಯೆ ಪಾನಿಪೂರಿ

ಮತ್ತೊಮ್ಮೆ, ಒಂದು ದಿನಪತ್ರಿಕೆಯಲ್ಲಿನ ಆರೋಗ್ಯದ ಕಡೆಗೆ’ ಎಂಬ ಲೇಖನವೊಂದನ್ನು ಓದುತ್ತಿದ್ದಂತೆ ಪುನ: ನನಗೆ ತೂಕ ಇಳಿಸಿಕೊಳ್ಳುವ ಹುಚ್ಚು ಹಿಡಿಯಿತು. ಹೋಯ್ ನಗಬೇಡಿ, ನಮ್ಮ ದೇಹಕ್ಕೇ ಪುನರಪಿ ಜನನಮ್, ಪುನರಪಿ ಮರಣಂ ಎನ್ನುವ ಶಾಪ ಇರಬೇಕಾದ್ರೆ ಅದೇ ದೇಹವನ್ನು ಫಿಟ್ ಆಗಿಟ್ಟುಕೊಳ್ಳುವ ಆಸೆಗೆ ಪುನಃ ಪುನಃ ಜೀವ ಬರುವುದರಲ್ಲಿ ಸೋಜಿಗವೇನಿದೆ? ನನ್ನ ವಾಕಿಂಗ್ ತಯಾರಿ ಭರದಿಂದ ಶುರುವಾಯ್ತು. ಅದಕ್ಕೆ ಬೇಕಾದ ಶೂಸ್, ಸಾಕ್‌ಸ್, ಡ್ರೆಸ್ ಎಲ್ಲ ಜೋಡಿಸಿಕೊಂಡಿದ್ದಾಯ್ತು. ಬೆಳಗಿನ ವಾಕ್ ಒಳ್ಳೆಯದೂಂತ ಬೇರೆ ಕೇಳಿದ್ದರಿಂದ ಐದು ಘಂಟೆಗೆ ಅಲಾರಾಂ ಇಟ್ಟುಕೊಂಡು ಮಲಗಿದೆ. ಇನ್ನೇನಿದ್ರೂ ಬೆಳಿಗ್ಗೆ ಬೆಳಿಗ್ಗೆ ಆ ಸಿಹಿ ನಿದ್ರೆಯನ್ನು ದೂಡಿ ಏಳೋದೊಂದೆ ಬಾಕಿ. ಆ ಖುಷಿಗೇ ರಾತ್ರಿ ಎಷ್ಟೋ ಹೊತ್ತು ನಿದ್ರೇನೆ ಬರ್ಲಿಲ್ಲ. ಬೆಳಿಗ್ಗೆ ಅಲಾರಾಂ ಕೂಗಿ ಕರೆದಾಗ ಮಾತ್ರ ನಿದ್ದೆಯೋ ನಿದ್ದೆ. ಅಯ್ಯೋ, ಇಷ್ಟು ಬೇಗ ಬೆಳಗಾಯ್ತಾ? ನಿದ್ದೇನೆ ಮುಗ್ದಿಲ್ಲಾ, ನಾಳೆಯಿಂದ ಖಂಡಿತ ಏಳ್ತೀನಿ ಅಂದ್ಕೊಂಡು ಬೆಚ್ಚಗೆ ಹೊದ್ದು ಮಲಗಿ ಗೊರಕೆ ಹೊಡೆಯತೊಡಗಿದೆ. ಇದೇ ರೀತಿ ಮತ್ತೆರೆಡು ದಿನ ಪುನರಾವರ್ತನೆಯಾದಾಗ, ನಮ್ಮವರಿಗೆ ಕೊಡಿಸಿದ ಶೂಸ್, ಸಾಕ್‌ಸ್ ಎಲ್ಲ ದಂಡವಾಗುತ್ತೆ ಅನಿಸಿತೋ ಏನೋ, ‘ನೀನು ಸಂಜೆ ಬೇಕಾದ್ರೂ ವಾಕ್ ಮಾಡ್ಬಹುದು, ಅದೂ ಒಳ್ಳೆಯದೇ’ ಅಂದ್ರು. ನಾವ್ ಕಷ್ಟ ಪಟ್ರೆ ಈ ಗಂಡಸರಿಗೆ ಎಷ್ಟು ಖುಷಿಯೋ ಅಂತ ಸಿಟ್ಟಲ್ಲಿ ಮೈ ಉರಿದು ಹೋಯ್ತು. ಜೊತೆಗೆ ನನ್ನ ಒಳ್ಳೆಯದಕ್ಕೇ ಹೇಳಿದ್ದಲ್ವಾ ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಮಾರನೇ ದಿನದಿಂದಲೇ ಸಂಜೆ ವಾಕ್ ಶುರು ಮಾಡಿಬಿಟ್ಟೆ. ಒಬ್ಬಳೇ ಹೋಗಲು ಬೇಜಾರು ಅಂತ ತೂಕದಲ್ಲಿ ನನ್ನಷ್ಟೇ ಇದ್ದ ಜೊತೆ ಮಾಡಿಕೊಂಡೆ. ಬೆಳಿಗ್ಗೆ ಹೇಗಾದ್ರೂ ಹೋಗಬಹುದಾದ್ರೂ, ಸಂಜೆ ಮೇಕಪ್ ಇಲ್ದೇ ಹೊರಗೆ ಹೊರಡಕ್ಕಾಗುತ್ತಾ? ಮತ್ತೆ ಮೇಕಪ್, ಡ್ರೆಸ್ ಅಪ್ ಎಲ್ಲ ಆಗಿ ಹೊರಟಾಗ, ನೀನು ಹೊರಟಿದ್ದು ವಾಕಿಂಗ್ ಗೊ, ಫಂಕ್ಷನ್‌ಗೊ ಅಂತ ಮನೆಯವ್ರ ಕೊಂಕು ಮಾತು ಬೇರೆ ಕೇಳಿಸಿಕೊಂಡಿದ್ದಾಯ್ತು. ಅಂತೂ ಸಾಹಸ ಮಾಡಿ ಒಂದು ಕಿಲೋಮೀಟರ್ ನಡೆದು ಮನೆಗೆ ಬಂದ್ರೆ ಹಸಿವೋ ಹಸಿವು. ಮನೆಯಿಂದ ಹೊರಟಾಗಲೇ ಹಸಿವಾಗಬಾರದೆಂದು ತಿಂಡಿ ತಿಂದಿದ್ರೂ, ಮತ್ತೆ ಒಂದಿಷ್ಟು ತಿಂದಿದ್ದಾಯ್ತು. ಮಾರನೇ ದಿನ ಏಳುವುದೇ ಎನ್ನುವಷ್ಟು ಕೈ ಕಾಲು ನೋವು, ಸುಸ್ತು. ಆದರೂ ಬಾರದ ಉತ್ಸಾಹ ಬರಿಸಿಕೊಂಡು ಮತ್ತೆ ಸಂಜೆ ಹೊರಟಿದ್ದೂ ಆಯ್ತು. ಆ ದಿನ ಮನೆಗೆ ಹೋದಮೇಲೆ ಹೇಗೂ ಹಸಿವಾಗತ್ತೆ, ಮನೇಲಿ ಏನು ತಿಂಡಿ ಮಾಡೋದು ಅಂತ ಯೋಚಿಸಿ ದಾರಿಯಲ್ಲೇ ಪಾನೀಪೂರಿ, ಮತ್ತಿತರ ಚಾಟ್‌ಸ್ ತಿಂದು ಬಂದಿದ್ದಾಯ್ತು. ಹಾಗೂ ಪ್ರತೀ ದಿನ ಇದೊಂದು ನಮ್ಮ ಭಾರೀ ಇಷ್ಟದ ಕೆಲಸವೂ ಆಯ್ತು. ಹಾಗೇ ಇನ್ನೊಂದು ನಾಲ್ಕು ದಿನ ಕಳೆಯುವಷ್ಟರಲ್ಲಿ ಒಂದು ದಿನ ವಾಕಿಂಗ್ ಹೋಗುವ ಸೀರೆಗಳ ಸೇಲ್‌ಸ್ ಹಾಕಿದ್ದು ನೋಡಿದ್ವಿ. ಮತ್ತೆ ಸುಮ್ನೆ ಬರೋಕ್ಕಾಗತ್ತಾ? ಒಂದಿಷ್ಟು ಶಾಪಿಂಗ್ ಮಾಡಿಯೇ ಬಂದ್ವಿ. ಹೀಗೆಲ್ಲ ಮಾಡ್ತಾ ಮಾಡ್ತಾ ಅಂತೂ ಇಂತೂ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿ ವಿಜಯದ ನಗೆ ಬೀರಿದ್ವಿ. ಈ ಒಂದು ತಿಂಗಳಿನಲ್ಲೇ ನಾನು ಮನೆಯವರಲ್ಲಿ ಒಂದು ಹತ್ತು ಸಲವಾದ್ರೂ ‘ಏನ್ರೀ ನಾನು ಎಷ್ಟು ಸಣ್ಣಗಾಗಿದ್ದೀನಿ? ಸುಳ್ಳು ಹೇಳ್ಬೇಡಿ ಮತ್ತೆ’ ಅಂತ ಪದೇ ಪದೇ ಕೇಳಿ, ಅವರ ತಲೆ ತಿಂದು ಮೆದುಳಿಗೆ ಕೈ ಹಾಕಿದ್ದೆ. ಮೊದಮೊದಲು ಪ್ರೋತ್ಸಾಹಿಸುವುದಕ್ಕಾಗಿ ಏನನ್ನಾದ್ರೂ ಹೇಳ್ತಿದ್ದವರು ಕೊನೆ ಕೊನೆಗೆ ‘ಹಾಂ! ಸಣ್ಣ ಆಯ್ತು ನನ್ನ ಪರ್ಸು’ ಅಂತ ರಾಗ ಹಾಡಲಾರಂಭಿಸಿದರು. ಇಷ್ಟೆಲ್ಲಾ ಆಗುವಾಗ ನಮ್ಮ ಕಾಲುಗಳಿಗೂ ಸಾಕಾಗಿತ್ತೇನೋ, ಅವೂ ನಾವು ಬರಲ್ಲಾಂತ ಮುಷ್ಕರ ಹೂಡತೊಡಗಿದವು. ಸಾಲದ್ದಕ್ಕೆ ಟಿ.ವಿ.ಯಲ್ಲಿ ಸರಗಳ್ಳರ ಹಾವಳಿ ಬಗ್ಗೆ, ಅವರುಗಳಿಗೆ ನಮ್ಮಂಥ ವಾಕಿಂಗ್ ಹೋಗುವವರ ಮೇಲೆಯೇ ಜಾಸ್ತಿ ಗಮನವಿರುವುದರ ಬಗ್ಗೆ ತಿಳಿದ ಮೇಲಂತೂ, ಒಂದು ಒಳ್ಳೆಯ ನೆಪ ಸಿಕ್ಕ ಹಾಗಾಗಿ, ವಾಕಿಂಗ್‌ಗೆ ಟಾಟಾ ಹೇಳಿಬಿಟ್ಟೆ. ಹಾಂ! ಇದರಲ್ಲಿ ನನ್ನ ಇರ್ಲಿಲ್ಲ ಮತ್ತೆ. ನಮ್ಮವರಿಗೂ ತನ್ನ ಜೇಬಿಗೆ ಕತ್ತರಿ ಬೀಳುವುದು ತಪ್ಪಿತೂಂತ ಅನ್ನಿಸಿರಬೇಕು. ದುಡ್ಡಾದ್ರೂ ಉಳೀಲಿ ಅಂತಲೋ ಏನೋ ನಾನು ವಾಕಿಂಗ್ ಬಿಟ್ಟ ಬಗ್ಗೆ ಏನೂ ಕೇಳಲೇ ಇಲ್ಲ ಮಹರಾಯ. ನಾನೂ ಸಮಾಧಾನದ ನಿಟ್ಟುಸಿರು ಬಿಟ್ಟೆ. ಹಾಗೇ, ಒಮ್ಮೆ ತೂಕದ ಯಂತ್ರದಲ್ಲಿ ತೂಕ ನೋಡಿದಾಗ, ಮೊದಲಿಗಿಂತ ಒಂದು ಕಿಲೋ ಜಾಸ್ತಿ ತೂಕ ತೋರಿಸಬೇಕೆ ಆ ಯಂತ್ರ! ಬಹುಷ ಯಂತ್ರ ಕೆಟ್ಟಿರಬೇಕು ಅಥವಾ ಪಾನಿಪೂರಿಯ ಪ್ರಭಾವವೆ? ಯೋಚಿಸಿದರೆ ಚಿಂತೆ ಆಗುತ್ತೆ ಅಂತ ವಿಷಯ ಯೋಚಿಸೋದನ್ನೇ ಬಿಟ್ಟುಬಿಟ್ಟೆ.

ಈಗ ಸಣ್ಣಗಾಗೋಕೆ ಇನ್ನೇನಾದ್ರೂ ಉಪಾಯ ಇದೆಯಾಂತ ಹುಡುಕ್ತಾ ಇದ್ದೀನಿ. ನಿಮಗೇನಾದ್ರೂ ಗೊತ್ತಾ? ಕಷ್ಟ ಪಡೋಕೆ ನಾನ್ ರೆಡಿ.

Tags

Related Articles

Leave a Reply

Your email address will not be published. Required fields are marked *

Language
Close