About Us Advertise with us Be a Reporter E-Paper

ಅಂಕಣಗಳು

ಪಾಶ್ಚಿಮಾತ್ಯರು ತೊಡಿಸಿದ ರಿಲಿಜನ್ ಅನ್ನುವ ಅಂಗಿಯನ್ನು ಕಳಚಿದಾಗ

- ಜಗದೀಶ ಮಾನೆ, ಸಂಶೋಧನ ವಿದ್ಯಾರ್ಥಿ

ಈ ದೇಶದಲ್ಲಿ ಬಹಳ ದೊಡ್ಡ ವಿಪರ್ಯಾಸದ ಸಂಗತಿ ಎಂದರೆ, ಒಂದು ಕಡೆ ಹಿಂದೂಧರ್ಮ ಎನ್ನುತ್ತೇವೆ, ಇನ್ನೊಂದು ಕಡೆ ಅದನ್ನೆ ಹಿಂದೂ ರಿಲಿಜನ್ ಎನ್ನುತ್ತೇವೆ. ಭಾರತದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕೇಳಿದರೆ ಅವರ ಉತ್ತರ ಏನಾಗಿರಬಹುದು? ಇವೆರಡರ ನಡುವೆ ವ್ಯತ್ಯಾಸವೇ ಇಲ್ಲವೆಂದು ಆತ್ಮವಿಶ್ವಾಸದಿಂದ ಎದೆ ತಟ್ಟಿಕೊಂಡು ಹೇಳುತ್ತಾರೆ. ವಾಸ್ತವವಾಗಿ ಈ ಎರಡೂ ಅಂಶಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯದೇ ಇರುವುದು ಭಾರತೀಯರ ಮುಖ್ಯ ಮಾನಸಿಕ ತೊಂದರೆ. ಹಾಗಾಗಿ ಪ್ರತಿ ನಿತ್ಯ ಅನೇಕರು ಗೊಂದಲದಲ್ಲಿ ಒದ್ದಾಡುತ್ತಾರೆ. ರಾಜಕೀಯದಲ್ಲಿ ಧರ್ಮ ಇರಬಾರದು, ಸಾಹಿತ್ಯದಲ್ಲಿ ಧರ್ಮ ಬರಬಾರದು, ಕೋಮು-ಗಲಬೆಗಳಿಗೆ ಧರ್ಮ ಕಾರಣ ಈ ರೀತಿಯ ಹೇಳಿಕೆಗಳನ್ನು ಕೇಳಿದಾಗ, ನಮಗೆ ಪುನಃ ಗೊಂದಲವಾಗುತ್ತದೆ. ಯಾಕೆಂದರೆ ಈ ಹೇಳಿಕೆಗಳನ್ನು ತೇಲಿ ಬುದ್ಧಿ ಭ್ರಮನರು. ಅವರುಗಳು ರಿಲಿಜನ್ ಎಂಬ ಕಲ್ಪನೆಯ ಮೇಲೆ ಪ್ರಜ್ಞಾಪೂರ್ವಕವಾಗಿ ವಾದಿಸುತ್ತಾರೆ. ಇವರ ಗುಂಪು ಒಂದು ಕಡೆಯಾದರೆ ಇನ್ನು ಸಾಮಾನ್ಯ ನಾಗರಿಕರು ಧರ್ಮ ಎಂಬ ಅರ್ಥದ ನೆಲೆಯಲ್ಲಿ ಅದನ್ನು ಗ್ರಹಿಸುತ್ತಾರೆ. ಹಾಗಾಗಿ ಅವು ನಮ್ಮ ಮನಸ್ಸಿಗೆ ಅರ್ಧಸತ್ಯ ಎನಿಸುತ್ತವೆ. ಧರ್ಮ ಬೇಡ ಎಂದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಕರ್ತವ್ಯ ಬೇಡವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾದರೆ ಧರ್ಮ ಮತ್ತು ರಿಲಿಜನ್ ಮಧ್ಯೆ ವ್ಯತ್ಯಾಸಗಳು ಇರಲೇಬೇಕೆಂದು ನಮ್ಮ ಗ್ರಹಿಕೆಗಳು ಸೂಚಿಸುತ್ತವೆ. ಒಂದೇ ಆಗಿದ್ದರೆ ಈ ರೀತಿ ಗೊಂದಲಗಳು ಏಕೆ ಸೃಷ್ಟಿಯಾಗುತ್ತವೆ? ಇಲ್ಲಿ ಅರ್ಥವಾಗದ ಅಂಶ ಅದೇ ಆಗಿರುತ್ತದೆ.

ಧರ್ಮ ಎನ್ನುವುದನ್ನು ಹಿಂದೂ ಪರಂಪರೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತದೆ. ಹಾಗೆ ಮಾಡುವಾಗ ನಮ್ಮ ಸಂಪ್ರದಾಯಗಳಲ್ಲೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಧರ್ಮದ ಪರಿಧಿಯಲ್ಲಿ ಸೇರಿಕೊಳ್ಳುತ್ತವೆ. ಹಾಗಾಗಿ ಇಡೀ ಹಿಂದೂ ಧರ್ಮ ಅಥವಾ ಭಾರತೀಯ ಧರ್ಮಕ್ಕೆ ವ್ಯಾಕರಣ ಸಹ ಏಕರೂಪವಾಗಿರಲಾರದು. ಆಯಾ ಸಂದರ್ಭಗಳಿಗೆ ಒಳಿತನ್ನು ನೀಡುವಾಗ ಧರ್ಮದ ಅರ್ಥಸಾಧ್ಯತೆಗೆಗಳು ಭಿನ್ನವಾಗುವ ಸಂಭವವಿದೆ. ನಮ್ಮಲ್ಲಿ ಎನ್ನುವ ವಾಸ್ತವ ಯಾವುದೇ ಸಿದ್ಧ ಶಾಸನಗಳ ಮೂಲಕ ನಿರೂಪಿತವಾಗುವದಿಲ್ಲ. ಆಯಾ ಸಂದರ್ಭಗಳ ಅನುಭವಗಳ ಮೂಲಕ ಅರ್ಥವನ್ನು ಪಡೆಯುತ್ತ ಸಾಗುತ್ತದೆ. ಧರ್ಮ ಸಂದಿಗ್ಧತೆಯನ್ನು ವ್ಯಕ್ತಿಗಳು ತಮ್ಮ ವೈಯಕ್ತಿಕ ನಿಷ್ಕರ್ಷಗಳ ಮೂಲಕ ನಿಭಾಯಿಸುತ್ತಾರೆಯೇ ವಿನಾ ಯಾವುದೇ ಶಾಸನಗಳ ಆಧಾರವಾಗಿಯಲ್ಲ. ಧರ್ಮ ಎಂದರೆ ಕರ್ತವ್ಯ ಎಂಬುದು ನಮ್ಮ ನಂಬಿಕೆ.

ಧರ್ಮವನ್ನು ಮೂರು ರೀತಿಯಲ್ಲಿ ನೋಡುವುದಾದರೆ ಮೊದಲನೆಯದು ವಿಧಿ; ಮನುಷ್ಯ ಅವಶ್ಯವಾಗಿ ಮಾಡಲೇಬೇಕಾದ ಧರ್ಮ, ಇದನ್ನು ನಾವು ವಿಧಿ ಎನ್ನುತ್ತೇವೆ. ಮುಂದುವರಿದು ಅದನ್ನು ಪ್ರಶ್ನಿಸುವುದು ಅವಶ್ಯಕ ಅನಿಸುವದಿಲ್ಲ. ಎರಡನೆಯ ಅಂಶ ನಿಷೇಧ; ಮನುಷ್ಯ ಯಾವುದೇ ಕಾರಣಕ್ಕೂ ಮಾಡಲೇಬಾರದ ಸಂಗತಿಗಳು. ಇದಕ್ಕೆ ಪಾಪ-ಪುಣ್ಯಗಳ ಕಟ್ಟುಪಾಡು. ಇನ್ನೂ ಮೂರನೆಯ ಅಂಶ ಅಪಧರ್ಮ; ಅನಿವಾರ್ಯದ ಸಂದರ್ಭಗಳಲ್ಲಿ ಮಾಡಬಹುದಾದ ಸಂಗತಿಗಳು. ಒಂದು ಕ್ರಿಯೆಯನ್ನು ಮಾಡುವದರಿಂದ ಅಥವಾ ಮಾಡದೇ ಇರುವುದರಿಂದ ಆ ಸಂದರ್ಭಕ್ಕೆ ಒಳಿತಾಗುತ್ತದೆ ಎಂದರೆ ಹಾಗೆ ಮಾಡಬಹುದು. ಹೀಗೆ ಧರ್ಮದಲ್ಲಿ ಕಾನೂನು ಇದೆ, ನೀತಿ ನಿಷ್ಕರ್ಷ ಮನುಷ್ಯತ್ವ, ವ್ಯಕ್ತಿಗತ ತರಬೇತಿ ಎಲ್ಲವೂ ಇವೆ. ಆದರೆ ಯಾವುದೋ ಶಾಸನ ರೂಪದಲ್ಲಿಲ್ಲ. ಧರ್ಮದ ಆಶಯ ಒಂದೇ ಆದರೂ ವ್ಯಕ್ತಿಯಿಂದ ವ್ಯಕ್ತಿಗೆ ಅದರ ಕುರಿತು ನಿರ್ಣಾಯಕ ನಿಲುವು ಭಿನ್ನವಾಗಿರುತ್ತದೆ. ಯಾವುದರಲ್ಲಿ ನಿಜವಾಗಿ ಏನು ಇರಬೇಕೋ ಅದು ಇರುವುದೇ ಧರ್ಮ. ನಮ್ಮ ಪ್ರತಿಯೊಂದು ಸಂಪ್ರದಾಯದಲ್ಲೂ ಈ ಧರ್ಮ ಇದೆ. ಧರ್ಮವು ತನ್ನ ನೈತಿಕ ಚೌಕಟ್ಟಿನಲ್ಲಿಯೇ ವ್ಯಕ್ತಿಗೆ ಸ್ವಾತಂತ್ರ್ಯದ ಪರಮಾಧಿಕಾರ ನೀಡುತ್ತದೆ. ಒಂದು ಸಮುದಾಯವನ್ನು ನೆಮ್ಮದಿಯಲ್ಲಿ ಬೆಸೆದಿಡಬಹುದಾದ ಸೂತ್ರವೇ ಧರ್ಮ, ಧರ್ಮ ಮನುಷ್ಯನ (ಕ್ರಿಯಾಜ್ಞಾನದಲ್ಲಿ) ಅರ್ಥ ಪಡೆಯುತ್ತ ಸಾಗುತ್ತದೆ.

ವಸ್ತುಸ್ಥಿತಿ ಹೀಗಿರುವಾಗ ಪ್ರಸ್ತುತ ಭಾರತದ ಅಸಂಖ್ಯ ಸಮಸ್ಯೆಗಳಿಗೆಲ್ಲ ಧರ್ಮವೇ ಕಾರಣ ಎಂದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ನಿಜ? ನಮ್ಮಲ್ಲಿ ಈ ಭಾವನೆಗಳು ಬರಲು ಕಾರಣವೇನು? ಇದಕ್ಕೆಲ್ಲ ಮುಖ್ಯ ಕಾರಣ ಭಾರತದಲ್ಲಿ ವಸಾಹತು ಆಳ್ವಿಕೆಯಿಂದ ಆಮದಾಗಿ ಬಂದ ರಿಲಿಜನ್ನಿನ ಕಥೆಗೆ ಈ ಧರ್ಮ ಎನ್ನುವ ತಲೆಬರಹ ಕೊಟ್ಟಿದ್ದು, ನಮಗೆ ಯಾವುದು ಧರ್ಮದ ಸಮಸ್ಯೆಯೆಂದು ಕಾಣುತ್ತಿದೆಯೋ ಅವೆಲ್ಲ ನಿಜವಾಗಿ ರಿಲಿಜನ್ನಿನ ಸಮಸ್ಯೆಗಳು. ಪ್ರೊ. ಬಾಲಗಂಗಾಧರರು ತಮ್ಮ ಸ್ಮತಿ-ವಿಸ್ಪತಿ ಭಾರತೀಯ ಸಂಸ್ಕೃತಿ ಗ್ರಂಥದಲ್ಲಿ ಈ ಸಮಗಿತಗಳನ್ನು ತರ್ಕಸಮೇತ ಪ್ರಮಾಣೀಕರಿಸುತ್ತಾರೆ. ನಮ್ಮ ಧರ್ಮಕ್ಕೆ ರಿಲಿಜನ್ ಅನ್ನುವ ತೊಡಿಸಲಾಗಿದೆ. ಈ ಬಟ್ಟೆಯನ್ನು ಬಿಚ್ಚಿ ಧರ್ಮವನ್ನು ನೋಡಿದಾಗ ಮಾತ್ರ ಭಾರತಕ್ಕೆ ಸದ್ಗತೊ, ಹಾಗಾದರೆ ರಿಲಿಜನ್ ಎಂದರೆ ಏನು? ಎಂಬುದನ್ನು ನೋಡೋಣ. ಎಲಿಜನ್ ಎಂದರೆ ಒಂದು ವರ್ಣನೆ. ಪಾಶ್ಚಾತ್ಯರ ಪ್ರಕಾರ ರಿಲಿಜನ್ ಎಂದರೆ ಸತ್ಯದೇವರು (ಗಾಡ್) ಮನುಕುಲಕ್ಕೆ ನೀಡಿದ ಕೊಡುಗೆ. ಅವರಪ್ರಕಾರ ಸತ್ಯದೇವ(ಗಾಡ್) ಒಬ್ಬನೇ ನಿಜವಾದ ದೇವರು. ಉಳಿದ ದೇವರು(ಗಾಡ್)ಗಳೆಲ್ಲ ಸುಳ್ಳು ದೇವರುಗಳು. ಇದರ ಹಿಂದೆ ಒಂದು ಥಿಯಾಲಜಿ ಇದೆ. ರಿಲಿಜನ್ ಎನ್ನುವುದು ಒಂದು ಬೌದ್ಧಿಕವಾದ ಸಂಗತಿ. ಇದರಲ್ಲಿ ಅರ್ಥ ಬಹಳಿಷ್ಟಿದೆ ಮತ್ತು ಅವುಗಳನ್ನು ಅದೇ ಅರ್ಥದಲ್ಲಿ ತಿಳಿದುಕೊಳ್ಳಬೇಕೆಂಬ ನಿರ್ಬಂಧ ಕೂಡ ಇದೆ. ತೀರ ಸರಳವಾಗಿ ಹೇಳಬಹುದಾದರೆ ರಿಲಿಜನ್ ಎಂದರೆ ಸಂವಿಧಾನಾತ್ಮಕವಾಗಿ ನೇಯಲ್ಪಟ್ಟ ಕಥೆ. ಬೈಬಲ್, ಖುರಾನ್‌ಗಳೇ ಈ ಸಂವಿಧಾನ. ಹಿಂದೂ ಧರ್ಮಕ್ಕೆ ಈ ರೀತಿಯ ಏಕರೂಪಿ ಸಂವಿಧಾನವಿಲ್ಲ. ಬದಲಿಗೆ ಜಗತ್ತೆ ಒಂದು ಮನೆ ಎನ್ನುವ ಮನೋಭಾವವಿದೆ. ನಾವೆಷ್ಟೆ ಶ್ರೇಷ್ಟ, ಉಳಿದವರೆಲ್ಲರೂ ಸುಳ್ಳು ಎನ್ನುವ ಭಾವನೆ ಇಲ್ಲ.

ಈ ಬ್ರಹ್ಮಾಂಡ ಹೇಗೆ ಉಗಮವಾಯಿತೆಂಬುದನ್ನಷ್ಟೇ ಅಲ್ಲ ಏಕೆ ಉಗಮವಾಯಿತೆಂದೂ ರಿಲಿಜನ್ ತಿಳಿಸುತ್ತದೆ. (ಗಾಡ್) ಈ ಪ್ರಪಂಚವನ್ನು ಸೃಷ್ಟಿಮಾಡಿದ್ದಲ್ಲದೇ ಅದು ತನ್ನ ಉದ್ದೇಶಗಳನ್ನು ಒಳಗೊಂಡಿದೆಯೆಂಬುದನ್ನು ತಿಳಿಸುತ್ತ ರಿಲಿಜನ್ ನೀಡುತ್ತಾನೆ ಎಂಬುದು ಪಾಶ್ಚಿಮಾತ್ಯರ ನಂಬಿಕೆ. ಆದ್ದರಿಂದ ರಿಲಿಜನ್ ತಿಳಿಸುವ ಸಂಗತಿಗಳನ್ನು ಸತ್ಯವೆಂದು ನಂಬಬೇಕು. ನಂಬದಿದ್ದರೆ ಆತ ಭ್ರಷ್ಟನಾಗುತ್ತಾನೆ. ರಿಲಿಜನ್ನಿನ ಪ್ರತಿಪಾದನೆಗಳು ಮನುಷ್ಯ ಜ್ಞಾನವೆಲ್ಲ ದೈವಿಜ್ಞಾನ ಎಂಬುದಾಗಿ ನಂಬಬೇಕು. ಪ್ರತಿಯೊಬ್ಬ ಮಾನವನ ಗುರಿ ಈ ಸತ್ಯದೇವನನ್ನು (ಗಾಡ್) ತಲುಪುವುದು. ಮನುಷ್ಯರ ಈ ಗುರಿ ತಪ್ಪಿಸಲಿಕ್ಕಾಗಿ ಸೈತಾನರು ಸುಳ್ಳು ದೇವರನ್ನು ಸೃಷ್ಟಿಸುತ್ತಾರೆ. ಈ ಸುಳ್ಳು ದೇವರುಗಳನ್ನು ಪೂಜಿಸುವರು ಹಾಳಾಗುತ್ತಾರೆ. ಹಾಗಾಗಿ ರಿಲಿಜನ್ ಒಂದೇ ದೇವರನ್ನು ನಂಬುತ್ತದೆ. ಸಾವಿರ ದೇವರನ್ನು ಪೂಜಿಸುವ ನಮ್ಮ ಧರ್ಮ ಅವರಿಗೆ ನೀತಿಭ್ರಷ್ಟತೆಯ ಹಾಗೆ ಕಾಣುತ್ತದೆ. ಅವರು ಅದನ್ನೇ ಹೇಳುತ್ತ ಇಷ್ಟು ವರ್ಷಗಳ ಕಾಲ ನಮ್ಮನ್ನು ಮೂರ್ಖರನ್ನಾಗಿಸಿದರು. ಅನೇಕ ಹಿಂದುಳಿದ ದಲಿತರ ಕೇರಿಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತ ಬಂದಿದ್ದಾರೆ. ಆಗ ನಮಗೆ ನಮ್ಮ ಧರ್ಮ ಮೌಢ್ಯವಾಗಿ ಕಾಣತೊಡಗಿತು. ಈ ಪರಿಸ್ಥಿತಿ ಅರ್ಥವಾಗಬೇಕಾದರೆ ಧರ್ಮ ಮತ್ತು ರಿಲಿಜನ್ನಿನ ನಡುವಿನ ಮುಖ್ಯ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳಬೇಕು.

ಸತ್ಯದೇವ(ಗಾಡ್) ಎಂಬ ಕೇಂದ್ರ ಕಲ್ಪನೆಯ ಮೇಲೆ ನಿಂತಿದೆ. ಧರ್ಮದಲ್ಲಿ ದೇವರ ಕಲ್ಪನೆಗೆ ಕೇಂದ್ರಸ್ಥಾನವಿಲ್ಲ.
ರಿಲಿಜನ್‌ಗೆ ಒಬ್ಬ ಸಂಸ್ಥಾಪಕ ಅಥವಾ ಪ್ರವಾದಿ ಇರುತ್ತಾನೆ. ಧರ್ಮ ಯಾವುದೇ ನಿರ್ಧಿಷ್ಟ ಏಕವ್ಯಕ್ತಿಯನ್ನು ತನ್ನ ಪ್ರವಾದಿ ಎಂದು ತಿಳಿಯುವದಿಲ್ಲ. ರಿಲಿಜನ್‌ಗೆ ಒಂದು ನಿರ್ಧಿಷ್ಟ ಗ್ರಂಥವಿರುತ್ತದೆ. ಬೈಬಲ್ ಮತ್ತು ಕುರಾನ್ ಧರ್ಮಕ್ಕೆ ನಿರ್ಧಿಷ್ಟ ಧರ್ಮಗ್ರಂಥ ಇರಲಾರದು. ರಿಲಿಜನ್ ಲೋಕಜ್ಞಾನದ ಮೇಲೆ ನಿಂತಿದೆ. ಆದರೆ ಧರ್ಮಕ್ರಿಯಾಜ್ಞಾನದ ಮೇಲೆ ಕೆಲಸ ಮಾಡುತ್ತದೆ. ಒಂದು ರಿಲಿಜನ್ ಇನ್ನೊಂದು ರಿಲಿಜನ್‌ನ್ನು ಸಹಿಸಲಾರದು. ರಿಲಿಜನ್ನಿನ ಲಕ್ಷಣ. ಆದರೆ ಸಹಿಷ್ಣುತೆ ಧರ್ಮದ ಲಕ್ಷಣ. ಧರ್ಮ ಇನ್ನೊಂದು ಧರ್ಮದೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ.ರಿಲಿಜನ್ ಎನುವುದು ಥಿಯಾಲಾಜಿಯಿಂದ ಹೆಣೆಯಲ್ಪಟ್ಟ ಏಕೈಕ ನೈತಿಕ ವ್ಯವಸ್ಥೆ, ಆದರೆ ಧರ್ಮ ಅನುಭವ ಪ್ರಮಾಣಿತವಾದದ್ದು. ರಿಲಿಜನ್ನಿಗೆ ಒಂದೇ ಒಂದು ಪವಿತ್ರ ಸ್ಥಳ ಇರಬೇಕು ಹಾಗೂ ಒಂದು ನಿರ್ಧಿಷ್ಟ ಸಂಸ್ಥೆ ಬೇಕು. ಆದರೆ ಧರ್ಮ ನಿರ್ದಿಷ್ಟ ಪವಿತ್ರ ಸ್ಥಳ ಹಾಗೂ ಸಂಸ್ಥೆಯನ್ನಾಧರಿಸಿ ನಿಂತಿಲ್ಲ.ರಿಲಿಜನ್ನಿನಲ್ಲಿ ಸಾರ್ವತ್ರಿಕ ಆಚರಣೆ ಅಥವಾ ನಂಬಿಕೆಯನ್ನು ಕಾಣುತ್ತೆವೆ. ಆದರೆ ಧರ್ಮದ ಸಮೂಹದಲ್ಲಿಪರಸ್ಪರ ಸಾಮ್ಯಕಾಣದೇ ಇರುವ ಸಾಧ್ಯತೆ ಇದೆ. ರಿಲಿಜನ್ ಏಕೈಕ ನೈತಿಕ ವ್ಯವಸ್ಥೆಯಾದ್ದರಿಂದ ಮತಾಂತರ ಅದರ ಅನಿವಾರ್ಯ ಲಕ್ಷಣ. ಧರ್ಮ ಮತಾಂತರವನ್ನು ವಿರೋಧಿಸುತ್ತದೆ. ಇನ್ನೊಂದು ಧರ್ಮದ ಸ್ವಾಯತ್ತತೆಯನ್ನು ಗೌರವಿಸುತ್ತದೆ. ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿ ಮತ್ತು ಆಚರಣೆಗಳನ್ನು ಮೌಢ್ಯ ಎಂದು ಗುರುತಿಸಿದ್ದು, ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಗೌರವಿಸಿದ್ದು ಈ ನೆಲೆಯಲ್ಲಿ.

ಇವುಗಳ ಹೊರತಾಗಿಯೂ ರಿಲಿಜನ್ನಿನ ಅಂತರ್ಗತವಾದ ಇನ್ನೂ ಹಲವು ಸಂಗತಿಗಳಿವೆ. ಫೇತ್, ಬಿಲೀಫ್ ಟ್ರಸ್‌ಟ್ ಇತ್ಯಾದಿಗಳು ರಿಲಿಜನ್ನಿನ ಪರಿಮಿತಿಯಲ್ಲಿ ಅದರದ್ದೇ ವಿಶೇಷ ಅರ್ಥ ಪಡೆಯುತ್ತವೆ. ಇವನ್ನು ಭಾರತೀಯ ಭಾಷೆಗೆ ತರ್ಜುಮೆ ಮಾಡುವಲ್ಲಿ ಅವಾಂತರವಾಗಿದೆ. ಇಂಗ್ಲಿಷ್‌ನ ಫೇತ್ ಮತ್ತು ಬಿಲೀಫ್ ಎರಡನ್ನೂ ನಾವು ನಂಬಿಕೆ ಎಂದು ಕರೆಯುತ್ತೇವೆ. ಅದು ಅರ್ಥ ಸಂಕುಚಿತತೆಗೆ ಕಾರಣವಾಗುತ್ತದೆ. ಈ ತೊಂದರೆಯಿಂದಲೇ ನಮಗೆ ನಮ್ಮ ಧರ್ಮದಲ್ಲೂ ರಿಲಿಜನ್ನಿನ ಹಲವು ಸಂಗತಿಗಳಿವೆ ಎಂದು ಭಾಸವಾಗುತ್ತವೆ. ಉದಾಹರಣೆಗೆ ಥಿಯಾಲಜಿಗೆ ಕನ್ನಡದಲ್ಲಿ ಆಧ್ಯಾತ್ಮ ಎಂಬ ನಿಘಂಟುವಿನ ಆರ್ಥವಿದೆ. ಅದು ನಿಜವಾದ ಅರ್ಥಅಲ್ಲ. ರಿಲಿಜನ್ನಿನ ಆಧ್ಯಾತ್ಮ ಇದೆ. ಆದ್ದರಿಂದ ರಿಲಿಜನ್ ಎಂದರೆ ಧರ್ಮ ತಿಳಿದುಬಿಡುತ್ತೇವೆ. ರಿಲಿಜನ್ನಿಗೆ ಸೇರಿದವರು ಕೇವಲ ಸತ್ಯದೇವನು ಇದ್ದಾನೆ ಎಂಬ ಹೇಳಿಕೆಯನ್ನು ಒಪ್ಪುವುದು ಮಾತ್ರವಲ್ಲ. ನಮ್ಮ ಜೀವನವೇ ಸತ್ಯದೇಶದ ಒಂದು ಭಾಗವಾಗಿದೆ ಎಂಬಂತೆ ನೋಡಬೇಕಾಗುತ್ತದೆ. ಧರ್ಮದಲ್ಲಿ ಬದುಕುವವರಿಗೆ ಅನುಭವ ಮುಖ್ಯವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಧರ್ಮಕ್ಕಿರುವ ಸರ್ವಸಾಧ್ಯತೆ ಅರಿವಿಗೆ ಬರುತ್ತದೆ. ಮನುಷ್ಯ ಸಂಸ್ಕೃತಿಗಳನ್ನು ರಚಿಸುವುದೇ ರಿಲಿಜನ್. ಆದ್ದರಿಂದ ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲೂ ರಿಲಿಜನ್ ಇರುತ್ತದೆ ಎಂಬುದು ಪಾಶ್ಚಿಮಾತ್ಯರ ವಾದ. ಅದೇ ದೃಷ್ಟಿಯಲ್ಲಿ ಅವರು ಭಾರತವನ್ನೂ ನೋಡಿದರು. ಆದರೆ ರಿಲಿಜನ್ ಸಂಸ್ಕೃತಿಗಳ ಲಕ್ಷಣವಲ್ಲ ಎಂಬುದು ಇತ್ತೀಚಿನ ಸಂಶೋಧನೆಯಾಗಿದೆ. ರಿಲಿಜನ್ ಇಲ್ಲದ ಸಂಸ್ಕೃತಿಯಲ್ಲಿ ರಿಲಿಜನ್‌ನ್ನು ಆರೋಪಿಸಿಕೊಂಡಾಗ ಸಮಸ್ಯೆಗಳು ಹೇಗೆ ಸೃಷ್ಠಿಯಾಗಬಹುದೆಂಬುದನ್ನು ಪ್ರೊ.ಬಾಲಗಂಗಾಧರ ಹಾಗೂ ಡೆವಿಡ್ ಪ್ರಾಲಿಯವರು ತಮ್ಮ ಸಂಶೋಧನೆಯಲ್ಲಿ ತೋರಿಸಿದ್ದಾರೆ. ಭಾರತದ ಮಟ್ಟಿಗಂತೂ ಇದು ನೂರಕ್ಕೆ ನೂರರಷ್ಟು ನಿಜ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಆದ್ದರಿಂದ ಧರ್ಮದ ಕುರಿತಾಗಿ ವಿಚಾರಿಸುವಾಗ ರಿಲಿಜನ್ ಎನ್ನುವ ಸಂಗತಿಯನ್ನು ನಮ್ಮ ಮನಸ್ಸುಗಳಿಂದ ತೊಡೆದು ಹಾಕಿಕೊಳ್ಳಬೇಕಾಗುತ್ತದೆ.

ಪಾಶ್ಚಾತ್ಯರು ಹೀಗೆ ತಮ್ಮ ರಿಲಿಜನ್ನಿನ ಹಿನ್ನೆಲೆಯಲ್ಲಿ ಭಾರತವನ್ನು ಗ್ರಹಿಸಿದರು. ಮೊದಮೊದಲು ಅವರಿಗೂ ಗೊಂದಲಗಳು ಆಗಿರಬಹುದು? ರಿಲಿಜನ್ನಿನ ಸಂಗತಿಗಳನ್ನು ಪರ್ಯಾಯವಾಗಿ ಹಿಂದೂ ಸಂಪ್ರದಾಯಗಳಲ್ಲಿ ಗುರುತಿಸಿದರು. ಅವುಗಳಿಗೆ ಭಾರತೀಯ ಭಾಷೆಗಳಲ್ಲಿ ಪರ್ಯಾಯ ಶಬ್ದಗಳನ್ನು ಸೃಷ್ಟಿಸಿದರು. ಆಗ ಹಿಂದೂ ಸಂಪ್ರದಾಯ ಅಪಭ್ರಂಶಗೊಂಡು ರಿಲಿಜನ್ ಆಗಿ ಹಿಂದೂಯಿಸಂ ಎಂದು ಕರೆಸಿಕೊಂಡಿತು. ಆಗಲೇ ಧರ್ಮ ರಿಲಿಜನ್‌ಗೆ ಪರ್ಯಾಯ ಪದವಾಯಿತು. ಈ ತಪ್ಪು ತಿಳುವಳಿಕೆಯ ಮೇಲೆ ಭಾರತೀಯ ಸಮಾಜ ವಿಜ್ಞಾನಗಳು ರಚಿತವಾದವು. ಈ ಸಮಾಜ ವಿಜ್ಞಾನಕ್ಕೆ ಪೂರಕವಾಗಿ ಇಲ್ಲಿನ ರಾಜಕೀಯ ಆಡಳಿತ, ಚಿಂತನಾಕ್ರಮ, ಕಾನೂನು, ಸಾಮಾಜಿಕ ನ್ಯಾಯದ ಕಲ್ಪನೆ ಬೆಳೆಯುತ್ತ ಅಂತಿಮವಾಗಿ ನಮ್ಮ ಧರ್ಮವೇ ನಮಗೆ ಅರ್ಥವಾಗದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಪೂರಕವಾಗಿ ಪಾಶ್ಚಾತ್ಯರು ಹಿಂದೂಯಿಸಂನ್ನು ಒಂದು ಅರ್ಥಹೀನ ಮುಖಾಭಿನಯ ಎಂದರು. ಅಪ್ರಮಾಣಿಕತೆ, ವಿಷಯ ಲಂಪಟತೆ, ಅನ್ಯಾಯ, ಕ್ರೌರ್ಯ, ಸುಲಿಗೆ ಇವುಗಳ ಆಗರವೇ ಹಿಂದುಯಿಸಂ ಎಂದು ಬಾಯಿಗೆ ಬಂದಂತೆ ತಮ್ಮ ಎಲುಬಿಲ್ಲದ ನಾಲಿಗೆಯಿಂದ ಹಲುಬಿದರು. ಅಷ್ಟರಲ್ಲಿ ನಮಗೆ ರಿಲಿಜನ್ನಿನ ಭ್ರಮೆ ಹಿಡಿದಿದ್ದರಿಂದ ಅವರ ಹೇಳಿಕೆಗಳು, ಅನುಭವಗಳು ನಿಜ ಅನ್ನಿಸತೊಡಗಿದವು. ಪರಿಣಾಮವಾಗಿ ನೂರಾರು ವರ್ಷಗಳು ಕಳೆದರೂ ನಮ್ಮ ತಪ್ಪು ನಂಬಿಕೆಯನ್ನು ಮನದ್ವಿಮರ್ಶೆಗೆ ಕೆಲವೊಂದು ಅಂಕಗಳಲ್ಲಿ ಬದಲಾವಣೆಗೆ ಪ್ರಯತ್ನ ನಡೆಸಿದರೆ ಅದನ್ನು ಕೇಸರಿಕರಣ ಎಂಬ ಹೊಯಿಲೆಬ್ಬಿಸಿದರು. ಈ ಎಲ್ಲ ಸಂಗತಿಗಳಿಗೆ ಉತ್ತರ ಕೊಡುವ ಕಾಲವಂತು ಇದೀಗ ಬಂದಂತಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close