About Us Advertise with us Be a Reporter E-Paper

ಅಂಕಣಗಳು

ಸೆಕ್ಯುಲರಿಸಂ ಡೋಂಗಿಯೆನಿಸಲು ಕಾರಣವೇನು?

ಚಿಂತನ ಮಂಥನ: ಅಜಕ್ಕಳ ಗಿರೀಶ ಭಟ್

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸೆಕ್ಯುಲರಿಸಂ ಬಗೆಗಿನ ವಿಚಾರ ಸಂಕಿರಣದಲ್ಲಿ ಬಿಸಿಬಿಸಿ ವಾಗ್ವಾದ ನಡೆದ ಬಗ್ಗೆ ಫೇಸ್‌ಬುಕ್ಕಿನಲ್ಲಿ ಚರ್ಚೆಯಾಯಿತು. ಅಲ್ಲಿ ನಾನಾಡಿದ ಮಾತುಗಳು ಸಹಜವಾಗಿ ಬೆಳೆದು ಬಂದ ಅಸಡ್ಡೆಯ ವಾದ ಮತ್ತು ಆಪಾದನೆ ಎಂದೂ ಕೆಲವರು ಕರೆದಿದ್ದು, ವಾಟ್‌ಸ್ಆ್ಯಪ್‌ನಲ್ಲೂ ಇದರ ಬಗ್ಗೆ ವರದಿ ಹರಿದಾಡಿ ನನಗೂ ತಲುಪಿದೆ.

 ಆದರೆ ಅಲ್ಲಿ ಹಾಜರಿರದಿದ್ದವರಿಗೆ ಈ  ಪೂರ್ಣ ಚಿತ್ರಣ ಸಿಗದ ಸಾಧ್ಯತೆ ಹೆಚ್ಚು. ಹೀಗಾಗಿ ಅಲ್ಲಿ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳ ಅಥವಾ ಚರ್ಚಿಸಿದವರ ನಿಲುವುಗಳೇನು ಎಂಬುದು ಸ್ಪಷ್ಟವಾಗದೇ ಏನೋ ಜಗಳ ನಡೆದಿದೆ ಎಂಬ ಅಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಇಡೀ ಸಂಕಿರಣವು ಭಾರತದ ಸೆಕ್ಯುಲರಿಸಮ್ಮಿನ ತೋರಿಕೆಯ ಕಾಳಜಿ ಮತ್ತು ಡೋಂಗಿ ತನವನ್ನು ಬಯಲು ಮಾಡಿದೆ. ಅಲ್ಲದೆ ಚರ್ಚೆ ಬಿಸಿಯೇರಲು ನಾನು ಎತ್ತಿದ ಪ್ರಶ್ನೆಗಳೇ ಕಾರಣವಾದ್ದರಿಂದ ಕೆಲ ಅಂಶಗಳನ್ನು ನಾನು ಸ್ಪಷ್ಟಪಡಿಸುವುದು ಅಗತ್ಯ ಎಂದುಕೊಂಡಿದ್ದೇನೆ.

 ಮೊದಲಿಗೆ, ವಿಚಾರಸಂಕಿರಣದ ಕೊನೆಯ  ನಡೆದ ಚರ್ಚೆಯ ಹಿನ್ನೆಲೆ ನೀಡುವುದು ಉಚಿತ. 23 ಜುಲೈ 2018ರಂದು ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗವು ‘ಭಾರತೀಯ ಸೆಕ್ಯುಲರ್ ವಾದ ಮತ್ತು ಕನ್ನಡದ ಪ್ರತಿಕ್ರಿಯೆ’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು. ಹೆಸರಾಂತ ಗಾಂಧೀಮಾರ್ಗ ಚಿಂತಕರಾದ ಹೆಗ್ಗೋಡು ಪ್ರಸನ್ನ ಅವರು ಉದ್ಘಾಟಿಸಿದ್ದರು.

ಸಂಕಿರಣದ ಪೂರ್ವಾಹ್ನದ ಗೋಷ್ಠಿಯಲ್ಲಿ ಗಾಂಧೀಜಿಯವರ ಸಹನಾಧರ್ಮದ ಬಗ್ಗೆ ಪ್ರೊ. ನಿತ್ಯಾನಂದ ಶೆಟ್ಟಿ, ‘ಭಾರತೀಯ ಸೆಕ್ಯುಲರ್ ವಾದದ ಸಾಂಸ್ಕೃತಿಕ ನೆಲೆಗಳು’ ಎಂಬ  ಬಗ್ಗೆ ಪ್ರೊ. ರಾಜಾರಾಮ ತೋಳ್ಪಾಡಿ ಹಾಗೂ ‘ಅಂಬೇಡ್ಕರ್ ಮುಂಗಾಣುವಿಕೆಯಲ್ಲಿ ಸಹನಶೀಲತೆ’ ಎಂಬ ವಿಷಯದ ಬಗ್ಗೆ ಪ್ರೊ. ಐವನ್ ಫ್ರಾನ್ಸಿಸ್ ಲೋಬೋ ಮಾತನಾಡಿದರು. ಅಪರಾಹ್ನ ‘ದೇವನೂರು ಮಹಾದೇವರಲ್ಲಿ ಸಂಬಂಧ ಸೆಕ್ಯುಲರ್ ಆಗುವ ಬಗೆಗಳು’ ಎಂಬ ವಿಷಯದ ಬಗ್ಗೆ ಪ್ರೊ. ರಾಜೇಂದ್ರ ಚೆನ್ನಿ, ‘ಹಿಂದುತ್ವ ಅಥವಾ ಹಿಂದ್ ಸ್ವರಾಜ್: ಭಾರತದ ರಾಷ್ಟ್ರ ಪ್ರಭುತ್ವ ಕುರಿತು ಅನಂತ ುೂರ್ತಿ ಚಿಂತನೆಗಳು’ ಎಂಬ ವಿಷಯದ ಬಗ್ಗೆ ಜಿ. ರಾಜಶೇಖರ್ ಹಾಗೂ ‘ಭಾರತದ ಸೆಕ್ಯುಲರ್ ವಾದದ  ನಿರೂಪಣೆ: ಲಂಕೇಶ್ ಚಿಂನೆ’ ವಿಷಯದ ಬಗ್ಗೆ ಪ್ರೊ. ಬಿ. ಶಿವರಾಮ ಶೆಟ್ಟಿ ಮಾತನಾಡಿದರು.

‘ಸೆಕ್ಯುಲರಿಸಂ ಬೇಕು ಎನ್ನುವವರಿದ್ದಾರೆ, ಬೇಡ ಎನ್ನುವವರಿದ್ದಾರೆ’, ‘ಸೆಕ್ಯುಲರಿಸಂ ಪಶ್ಚಿಮ ಮೂಲದ್ದು ಅನ್ನುವ ಕಾರಣಕ್ಕೆ ಭಾರತಕ್ಕೆ ಸೆಕ್ಯುಲರಿಸಂ ಬೇಡ ಅನ್ನುವವರಿದ್ದಾರೆ’ ಎಂಬ ಮಾತು ಮತ್ತೆ ಮತ್ತೆ ಕೇಳಿ ಬಂತು. ಸಹಬಾಳ್ವೆಯೇ ಸೆಕ್ಯುಲರಿಸಂ, ಸಮಾನತೆಯೇ ಸೆಕ್ಯುಲರಿಸಂ, ಒಟ್ಟಿಗೆ ಬದುಕುವುದೇ ಸೆಕ್ಯುಲರಿಸಂ ಎಂಬಅರ್ಥದ ಮಾತುಗಳೂ ಸಂಕಿರಣದಲ್ಲಿ ಹಲವು ಬಾರಿ ಕೇಳಿಬಂದವು.

ಬೆಳಗಿನ ಗೋಷ್ಠಿಯ ಕೊನೆಯಲ್ಲಿ ಹೇಳಬೇಕೆನಿಸಿದ ಅಭಿಪ್ರಾಯಗಳು  ಕೇಳಬೇಕೆನಿಸಿದ ಪ್ರಶ್ನೆಗಳು ನನ್ನಲ್ಲಿ ಇರಲಿಲ್ಲ ವೆಂದಲ್ಲ. ಆದರೆ ಪೂರ್ವಾಹ್ನ ಪ್ರಸ್ತಾಪವಾಗದೇ ಇದ್ದ ಅಂಶಗಳು ಅಪರಾಹ್ನದ ಗೋಷ್ಠಿಯಲ್ಲಿ ಬರಬಹುದು ಎಂದುಕೊಂಡು ನಾನು ಮಾತನಾಡಿರಲಿಲ್ಲ. ಅಷ್ಟೇ ಅಲ್ಲ, ನನ್ನ ಪ್ರಶ್ನೆಗಳಾಗಲೀ, ಅಭಿ ಪ್ರಾಯಗಳಾಗಲೀ ಈ ಮೊದಲೇ ಇತರೆಡೆ ಬರೆದವುಗಳೇ ಆಗಿ ದ್ದವು. ಮತ್ತೆ ಮತ್ತೆ ಅದನ್ನೇ ಹೇಳುವುದೇಕೆ ಅಂತಲೂ ಅನ್ನಿಸಿತ್ತು.

ಆದರೆ ಅಪರಾಹ್ನದ ಗೋಷ್ಠಿಯ ಕೊನೆಯಲ್ಲಿ ಸಭಿಕನಾಗಿ ಮಾತಾಡುವುದು ಅನಿವಾರ್ಯವಾಯಿತು. ಏಕೆಂದರೆ, ಭಾರತೀಯ ಸೆಕ್ಯುಲರ್ ವಾದದ ಬಗ್ಗೆ ಯಾರೊಬ್ಬರೂ ಭಾರತೀಯ ಸೆಕ್ಯುಲರಿಸಂನ  ಸಮಸ್ಯೆ ಏನು ಎಂಬ ಬಗ್ಗೆ ಹೇಳಿದಂತೆ ನನಗೆ ತೋರಲಿಲ್ಲ. ಆಶಿಸ್ ನಂದಿ ಹೇಳುವಂಥ ಒಂದು ಅಂಶವನ್ನು ಮಾತ್ರ ಬೇರೆ ಬೇರೆ ಪದಗಳಲ್ಲಿ ಹೇಳಿದಂತೆ ಕಂಡಿತು. ಅದೇನೆಂದರೆ, ನಮ್ಮ ದೇಶದ ಸೆಕ್ಯುಲರ್ ವಾದದ ಕೊರತೆ ಅಥವಾ ಸಮಸ್ಯೆಗೆ ಕಾರಣ ಧರ್ಮವನ್ನು ಕಡೆಗಣಿಸಿದ್ದು ಅಥವಾ Disengagement with the religion ಎಂಬ ಅಂಶ. ಹೀಗಾಗಿ ಅವರೆಲ್ಲ ಸೂಚಿಸಿದ ಪರಿಹಾರವೂ ಸರಳ. ಮತಾಂಧತೆಗೆ ಎದುರಾಗಿ ಧರ್ಮದ ಉದಾರವಾದಿ ಮುಖವನ್ನು ನಿಲ್ಲಿಸುವುದು ಅಥವಾ  ಅಧ್ಯಾತ್ಮ ಪರಂಪರೆಯನ್ನು ಜನರಿಗೆ ನೆನಪು ಮಾಡಿಸುವುದು ಇತ್ಯಾದಿ.

ಈ ಮೇಲಿನ ಅಂಶ ಪೂರ್ತಿ ಸರಿಯಲ್ಲವೆಂದು ನಾನು ಹೇಳುತ್ತಿಲ್ಲ. ಯಾಕೆಂದರೆ ಅದು ತಥಾಕಥಿತ ಭಾರತೀಯ ಸೆಕ್ಯುಲರ್ ಚಿಂಕರ ಬಹುಮುಖ್ಯ ಸಮಸ್ಯೆಯೂ ಹೌದು. ಹಾಗಂತ ನಮ್ಮ ದೇ

ಶದ ಕೋಮುಸಂಬಂಧಿ ಸಮಸ್ಯೆಗಳಿಗೆ, ಸಂಘರ್ಷಗಳಿಗೆ ಅದು ಕಾ ಣವಲ್ಲ. ಯಾಕೆಂದರೆ ದೇಶದ ಪ್ರಭುತ್ವದ ಒಟ್ಟಾರೆ ನೀತಿ ನಿರೂಪಣೆ ಪರಿಗಣಿಸಿದರೆ ಆ ಪ್ರಭುತ್ವವು ಧರ್ಮವನ್ನು ಕಡೆಗಣಿಸಿದೆ ಎನ್ನುವುದು ಕಷ್ಟ. ಒಟ್ಟಿನಲ್ಲಿ ಚರ್ಚೆಯಾಗಬೇಕಾದ ಅಂಶಗಳು  ಯಲ್ಲಿ ಚರ್ಚೆಗೆ ಬರಲಿಲ್ಲ ಎಂಬುದೇ ನನ್ನ ಕೆಲ ಮಾತಿಗೆ ಒಂದು ಕಾರಣ.

ಇನ್ನೊಂದು ಕಾರಣ, ಗೋಷ್ಠಿಯಲ್ಲಿ ಮಾತನಾಡಿದವರ ಗ್ರಹಿಕೆಗಳಲ್ಲಿ ಇದ್ದ ಸಮಸ್ಯೆಗಳು ಅಥವಾ ಅವರು ಹೇಳಿದ ಸತ್ಯವಲ್ಲದ ಮಾತುಗಳು. ಅಂಥ ಮಾತುಗಳನ್ನು ಕೇಳಿಯೂ  ಮೌನ ಸಮ್ಮತಿ ನೀಡುವುದು ಸರಿಯಲ್ಲ ಅನಿಸಿತು. ಇದರಿಂದಲೇ ಬಹಳಷ್ಟು ಮಂದಿ ತಪ್ಪುತಪ್ಪು ಸಂಗತಿಗಳನ್ನೇ ಮತ್ತೆ ಮತ್ತೆ ಹೇಳಲು ಅವಕಾಶ ಸಿಕ್ಕಿದ್ದಲ್ಲವೇ? ಹೀಗಾಗಿ ಸಭಿಕರಿಗೆ ಚರ್ಚೆಯ ಅವಕಾಶ ನೀಡಿದಾಗ ವೇದಿಕೆಯಲ್ಲಿದ್ದವರ ಜತೆಗೆ ಒಟ್ಟು ಉಪನ್ಯಾಸಗಳು ಅಥವಾ  ಬಗ್ಗೆ ಕೆಲ ಮಾತುಗಳನ್ನು ಆಡಿದೆ. ಕೆಲವು ಪದಗಳಿಲ್ಲಿ ಆಚೀಚೆ ಆದರೂ, ತಾತ್ಪರ್ಯವಂತೂ ಅದೇ.

(1) ಸಮುದಾಯಗಳ ನಡುವೆ ಅಪನಂಬಿಕೆ, ಅಸಹನೆ, ಕೋಮುವಾದದ ವಾತಾವರಣದ ಆತಂಕದೊಂದಿಗೆ ನಾವಿಂದು ಬದುಕುತ್ತಿದ್ದೇವೆ ಎನ್ನುವುದು ನಿಜ. ಸಹಬಾಳ್ವೆ, ಸಾಮರಸ್ಯಕ್ಕೆ ಏನುಬೇಕು ಎಂಬ ಆಲೋಚನೆ ಅಗತ್ಯ. ಆದರಿಲ್ಲಿ ಉಲ್ಲೇಖಿತವಾದ ಸೆಕ್ಯುಲರಿಸಂ ಬೇಕು, ಬೇಡ ಎಂಬ ಚರ್ಚೆ ತುಂಬಾ ಸುಪರ್‌ಫಿಶಿಯಲ್ ಆದುದು. ಸಮುದಾಯಗಳ ನಡುವೆ ಸೌಹಾರ್ದ, ಸಹಬಾಳ್ವೆ ಬೇಕು-ಬೇಡ ಅನ್ನುವ ವಿಚಾರದಲ್ಲಿ ಗೋಷ್ಠಿಯಲ್ಲಿ ಚರ್ಚೆ ಮಾಡಲಿಕ್ಕೇನಿಲ್ಲ.  ಆದರೆ  ಬಗೆಯ ಸೆಕ್ಯುಲರಿಸಂ ನಮಗೆ ಬೇಕು ಎಂಬುದು ಮುಖ್ಯ. ಕೆಲವರು ಸೆಕ್ಯುಲರಿಸಂ ಬಗ್ಗೆ ಆಕ್ಷೇಪಿಸಲು ಮುಖ್ಯ ಕಾರಣ ಕೂಡ ಭಾರತದ ಸೆಕ್ಯುಲರಿಸಂ ಮಾದರಿ ಈ ದೇಶಕ್ಕೆ ಹೊಂದುತ್ತಿಲ್ಲ ಎಂಬುದೇ ಆಗಿದೆ. ಅಷ್ಟೇ ಅಲ್ಲ; ಸೆಕ್ಯುಲರಿಸಮ್ಮಿನ ಪಶ್ಚಿಮಮೂಲದ ಬಗ್ಗೆ ಆಕ್ಷೇಪದ ಧಾಟಿಯಲ್ಲಿ ಹೇಳುವವರು ಹಾಗೆ ಹೇಳಲು ಅದು ಪಶ್ಚಿಮದಿಂದ ಬಂತು ಎಂಬುದು ಮುಖ್ಯ ಕಾರಣವಲ್ಲ. ಬದಲಾಗಿ ಹಾಗೆ ಬರುವಾಗ ಅದರಲ್ಲಿ ಭಾರತಕ್ಕೆ ಹೊಂದದ ಅಂಶಗಳಿವೆ ಎಂಬುದು. ಹೀಗಾಗಿ ಸೆಕ್ಯುಲರಿಸಂ ಪಶ್ಚಿಮದಿಂದ ಬಂತು  ಕಾರಣಕ್ಕೆ ಅದು ತಿರಸ್ಕಾರ ಯೋಗ್ಯವಲ್ಲ ಎಂಬ ಮಾತುಗಳು ಕೂಡ ಸೂಪರ್‌ಫಿಶಿಯಲ್ ಆಗುತ್ತವೆ.

ಭಾರತದ ಸೆಕ್ಯುಲರಿಸಮ್ಮಿನ ಮುಖ್ಯ ಸಮಸ್ಯೆ ಎಂದರೆ ಅದು ಜನರನ್ನು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂದು ವಿಭಾಗಿಸುವುದು. ಧರ್ಮ(ರಿಲಿಜನ್) ಆಧರಿಸಿ ಈ ವಿಭಾಗೀಕರಣ ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಇನ್ನು ಬೇಡ ಎಂದು ಸಂವಿಧಾನ ರಚನಾ ಸಮಿತಿಯಲ್ಲಿದ್ದ ಪ್ರಾಜ್ಞರು ಹೇಳಿದ್ದರು. ಆದರೂ ಅದು ಸಂವಿಧಾನದಲ್ಲಿ ಸೇರಿಹೋಯಿತು.  ಭಾರತದಲ್ಲಿಂದು ಜಾತಿ -ಸಮಾಜಗಳು ಧರ್ಮಸಮಾಜಗಳಾಗಿ ಬದಲಾಗುತ್ತಿವೆ ಎಂದು ಗೋಷ್ಠಿಯಲ್ಲಿ ಡಾ. ಶಿವರಾಮ  ಹೇಳಿದ್ದರು. ಹಾಗಿದ್ದರೆ ಜಾತಿ ಸಮಾಜವಿದ್ದಾಗ ಎಲ್ಲ ಜಾತಿಗಳನ್ನು ಒಟ್ಟು ಸೇರಿಸಿ ಬಹುಸಂಖ್ಯಾತರು ಎಂದು ಹೇಗೆ ಪರಿಗಣಿಸಲಾಯಿತು? ಅಲ್ಪಸಂಖ್ಯಾತರ ಎದುರು ಒಂದು ಕಾಲ್ಪನಿಕ ಶತ್ರುವಾಗಿ ಬಹುಸಂಖ್ಯಾತರನ್ನು ಯಾಕೆ ನಿಲ್ಲಿಸಲಾಯಿತು? ಇದೇ ಕಾರಣವಾಗಿ ಹಿಂದೂ-ಮುಸ್ಲಿಂ ಧ್ರುವೀಕರಣ ಎಪ್ಪತ್ತು ವರ್ಷಗಳಲ್ಲಿ ಹೆಚ್ಚಿತು. ಹೀಗಾಗಿ ಯಾವ ಮಾದರಿಯ ಸೆಕ್ಯುಲರಿಸಂ ಬೇಕು ಎನ್ನುವುದೇ ಮುಖ್ಯ ಪ್ರಶ್ನೆ ಹೊರತು ಸೆಕ್ಯುಲರಿಸಂ ಬೇಕೇ ಬೇಡವೇ ಎಂಬುದಲ್ಲ. (ಅದರ ಉದ್ದೇಶ ಸಹಬಾಳ್ವೆ, ಸಮಾನತೆ, ಸೌಹಾರ್ದವನ್ನು ಸಾಧಿಸುವುದು, ಉಳಿಸಿ ಬೆಳೆಸುವುದು ಎಂದಾದರೆ.)

 ಸೆಕ್ಯುಲರಿಸಂ ಎಂದರೆ ಸಹಬಾಳ್ವೆ, ಸಮಾನತೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಸಹಬಾಳ್ವೆಗೆ, ಕೂಡಿ ಬಾಳುವುದಕ್ಕೆ ಇರಬೇಕಾದ ಪ್ರಿಕಂಡೀಷನ್‌ಗಳು ಏನು ಎಂಬ ಬಗ್ಗೆ ಸೆಕ್ಯುಲರ್‌ವಾದಿಗಳು ಚಿಂತಿಸುವುದಿಲ್ಲ. ಸಮುದಾಯಗಳು ಆಧುನಿಕತೆಗೆ ತೆರೆದುಕೊಳ್ಳುವ ಬಗೆಯೂ ಇಲ್ಲಿ ಗಮನಾರ್ಹ. ಎಲ್ಲ ಸಮುದಾಯಗಳು ಪ್ರಗತಿಪರತೆಗೆ ತೆರೆದುಕೊಳ್ಳಬೇಕೆಂಬ ಅಭಿಪ್ರಾಯವನ್ನು ಸೆಕ್ಯುಲರ್ ವಾದಿಗಳು ಹೊಂದಿಲ್ಲ. ಉದಾಹರಣೆಗೆ ಜಿ. ರಾಜಶೇಖರ್ ಸೇರಿದಂತೆ ಹಲವು ಸೆಕ್ಯುಲರ್ ಚಿಂತಕರು ಪಕ್ಕದ ಮನೆಯ ರೂಪಕವನ್ನು ಬಳಸಿ ಹಿಂದೂ-ಮುಸ್ಲಿಂ ಸಂಬಂಧವನ್ನು ಚಿತ್ರಿಸುತ್ತಾರೆ. ಪಕ್ಕದ ಮನೆಯಲ್ಲಿ ಕಸವಿದ್ದರೆ  ತಲೆಕೆಡಿಸಿಕೊಳ್ಳುತ್ತೀರಿ, ಪಕ್ಕದ ಮನೆ ಸೋರಿದರೆ ನೀವೇಕೆ ತಲೆಕೆಡಿಸಿಕೊಳ್ಳಬೇಕು? ಇತ್ಯಾದಿ. ಸಮಾಜದಲ್ಲಿ ಸಹಬಾಳ್ವೆ  ಎಂದರೆ ಪಕ್ಕದ ಮನೆಯ ಬದುಕಷ್ಟೇ ಅಲ್ಲ. ಒಂದೇ ಮನೆಯ ಬದುಕು ಎಂದು ತಿಳಿಯಬೇಕು. ಹೀಗಾಗಿ ಈ ಪಕ್ಕದ ಮನೆ ರೂಪಕ ಅರ್ಥಾತ್ ಸಮುದಾಯಗಳೆಲ್ಲ ಪ್ರತ್ಯೇಕವೆಂಬ ಭಾವನೆಯೇ ಸಮಸ್ಯೆಗೆ ಹೇತು.

(3)ಬಹಳಷ್ಟು ಸೆಕ್ಯುಲರ್ ವಾದಿಗಳು ಭಾರತದ ಪ್ರಭುತ್ವವು ಅನುಸರಿಸುತ್ತ ಬಂದ, ಸಂವಿಧಾನಾತ್ಮಕವಾದ, ಹಿಂದುಳಿದವರ ಮತ್ತು ದಲಿತರ ಸಬಲೀಕರಣದ ಕ್ರಮಗಳನ್ನು ಮತ್ತು ಆ ಮೂಲಕ ಅವರ ಪರಿಸ್ಥಿತಿ ಉತ್ತಮಗೊಂಡಿರುವುದನ್ನು  ಕೊಡುಗೆ ಎಂದು ಪರಿಗಣಿಸುತ್ತಾರೆ. ಆದರೆ ಈ ಮೀಸಲಾತಿಯಂಥ ಉಪಕ್ರಮಗಳು ಸಮುದಾಯಗಳ ನಡುವೆ ಹೊಕ್ಕು ಬಳಕೆಯನ್ನು ಹೆಚ್ಚಿಸಿದ್ದು ಮತ್ತು ಹಿಂದುಳಿದವರಿಗೆ ಅನುಕೂಲ ಮಾಡಿದ್ದು ನಿಜ. ಆದರೆ ಭಾರತದಲ್ಲಿ ಇರುವ ಮಾದರಿಯ ಸೆಕ್ಯುಲರಿಸಂ ಎಂಬುದು ಸಮುದಾಯಗಳ ನಡುವಿನ ಸಂಬಂಧವನ್ನು, ಮುಖ್ಯವಾಗಿ ಹಿಂದೂ ಮುಸ್ಲಿಂ ಸಂಬಂಧವನ್ನು, ಉತ್ತಮಗೊಳಿಸುವ ಬದಲು ಮತ್ತಷ್ಟು ಹದಗೆಡಿಸಿದೆ. ಹೀಗಾಗಿ ಜಾತಿ ತಾರತಮ್ಯ, ಅಸಮಾನತೆಯನ್ನು ಹೋಗಲಾಡಿಸುವುದು ಇತ್ಯಾದಿಗಳನ್ನು ಧಾರ್ಮಿಕ ಸೌಹಾರ್ದದ ಪರಿಕಲ್ಪನೆಯ ಜೊತೆಗೆ ಮಿಶ್ರ ಮಾಡಬಾರದು.

 (4) ಅನಂತಮೂರ್ತಿಯವರ ಹಿಂದುತ್ವ  ಹಿಂದ್ ಸ್ವರಾಜ್ ಪುಸ್ತಕದ ಬಗ್ಗೆ ಮಾತನಾಡುತ್ತ ಜಿ ರಾಜಶೇಖರ್ ಅವರು, ಸಾವರ‌್ಕರರ ಹಿಂದುತ್ವ ಕುರಿತ ಪುಸ್ತಕದ ಪ್ರಕಾರ ಮುಸ್ಲಿಮರು ಹಿಂದೂಗಳ ಔದಾರ್ಯದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿ ಅಷ್ಟೇ ಉಳಿಯಬಹುದು ಎಂದು ಹೇಳಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳಲ್ಲಿ ನನ್ನ ವಿನಂತಿ: ದಯವಿಟ್ಟು ಸಾವರ‌್ಕರ್ ಪುಸ್ತಕವನ್ನು ನೀವೇ ಓದಿ. ಅಂತರ್ಜಾಲದಲ್ಲಿ ಲಭ್ಯವಿದೆ. ಅನಂತಮೂರ್ತಿಗಳು ಹೇಳಿದ್ದಾರೆ ಅಂತ ಅಥವಾ ಜಿ. ರಾಜಶೇಖರ್ ಹೇಳಿದ್ದಾರೆ ಅಂತ ನಂಬಬೇಡಿ. ಯಾಕೆಂದರೆ ಮುಸ್ಲಿಮರು ಎರಡನೇ ದರ್ಜೆಯವರಾಗಿ ಇರಬೇಕು ಎಂದು  ಹೇಳಿಲ್ಲ. ಹಿಂದೂ-ಮುಸ್ಲಿಮ್ ಬಗ್ಗೆ ಸಾವರ‌್ಕರ್ ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಅಥವಾ ಅಂಬೇಡ್ಕರ್ ಅಭಿಪ್ರಾಯ ತಿಳಿಯಲು ಅವರ ಪಾಕಿಸ್ತಾನ ಅಥವಾ ಭಾರತ ವಿಭಜನೆ ಕುರಿತ ಸಂಪುಟವನ್ನು ಮೊದಲು ಓದಿ’ ಇದಿಷ್ಟೂ ಮಾತುಗಳನ್ನು ಆಡಿ ನಾನು ಕುಳಿತುಕೊಂಡೆ.

ಈ ಮೇಲಿನ ಅಂಶಗಳಲ್ಲಿ ಕೆಲವನ್ನು ನಾನು ಇನ್ನಷ್ಟು ವಿವರಿಸಬಹುದಿತ್ತು. ಆದರೆ ಗೋಷ್ಠಿಯ ಸಮಯವನ್ನೆಲ್ಲ ತಿನ್ನುವುದು ಬೇಡ ಎಂದು ವಿಸ್ತರಿಸಲಿಲ್ಲ. ಹೇಗಿದ್ದರೂ ನನ್ನ ಮಾತಿನ ವಾಚ್ಯ ಮತ್ತು ಸೂಚ್ಯಾರ್ಥಗಳು ಅಲ್ಲಿದ್ದ ಸಂಪನ್ಮೂಲ  ಗೊತ್ತಾಗುತ್ತವೆ ಎಂಬ ವಿಶ್ವಾಸ ಇತ್ತು. ಇಲ್ಲಿ ಅವಕಾಶವಿರುವುದರಿಂದ ಒಂದೆರಡು ವಿಚಾರ ಸ್ವಲ್ಪ ವಿಸ್ತರಿಸುತ್ತೇನೆ.

 ಮೊದಲ ಅಂಶ: ಸಂವಿಧಾನ ರಚನಾ ಸಮಿತಿಯಲ್ಲಿ ಅಲ್ಪ-ಬಹುಸಂಖ್ಯಾತ ವಿಭಾಗ ಬೇಡ ಎಂಬೊಂದು ಅಭಿಪ್ರಾಯ ಬಂದಿತ್ತು ಅಂತಂದೆ. ವಾಸ್ತವವಾಗಿ ಸಂವಿಧಾನ ಕೂಡ ಹೇಳುವುದು ರಿಲಿಜನ್, ಭಾಷೆಯ ನೆಲೆಗಳ ಅಲ್ಪಸಂಖ್ಯಾತರಿಗೆ ಸಮಾನ ಹಕ್ಕು ನೀಡಬೇಕು, ಅವರನ್ನು ಎರಡನೇ ದರ್ಜೆಯಾಗಿ ಕಾಣಬಾರದು ಎಂದೇ ಹೊರತು, ಹೆಚ್ಚು ಹಕ್ಕು ನೀಡಬೇಕು ಅಂತಲ್ಲ! ಸಂವಿಧಾನದ ಪ್ರಕಾರ ಹೆಚ್ಚು ಹಕ್ಕು/ಅವಕಾಶಗಳನ್ನು ಮೀಸಲಾತಿ ಮೂಲಕ  ಅಲ್ಪಸಂಖ್ಯಾತರೆಂದರೆ ಪರಿಶಿಷ್ಟ ಜಾತಿ, ಪಂಗಡದವರು/ಹಿಂದುಳಿದವರು.

ಎರಡನೇ ಅಂಶ: ನಾನು ಉಲ್ಲೇಖಿಸಿದ ಪಕ್ಕದ ಮನೆಯ ರೂಪಕ ನಮ್ಮ ದೇಶದ ಸೆಕ್ಯುಲರ್ ವಾದಿಗಳಿಗೆ ಬಹಳ ಪ್ರಿಯವಾದದ್ದು. ಸಮಾನ ನಾಗರಿಕ ಸಂಹಿತೆ, ಮಹಿಳೆಯರ ಸ್ಥಿತಿಗತಿ ಇತ್ಯಾದಿ ಅಂಶಗಳ ಚರ್ಚೆಯ ಸಂದರ್ಭದಲ್ಲೆಲ್ಲ ಇವರು ಆಶ್ರಯಿಸುವುದು ಇದೇ ರೂಪಕವನ್ನು ಅಥವಾ ಇದೇ ತರ್ಕವನ್ನು. ಅಮರ್ತ್ಯ ಸೇನ್, ಜಿ. ರಾಜಶೇಖರ್ ಎಲ್ಲರೂ ಇದನ್ನೇ ಮಾಡಿದ್ದಾರೆ. ಇವರ ಇನ್ನೊಂದು ತರ್ಕ ಏನೆಂದರೆ ಹೊರಗಿನವರು ಹೇಳುವುದಲ್ಲ, ಆಯಾ ಧರ್ಮದವರೇ  ಎನ್ನುವುದು. ಆಯಾ ಧರ್ಮಗಳಲ್ಲಿ ವಿಮರ್ಶಿಸುವವರೇ ಇಲ್ಲ ಅಂತಾದರೆ ಏನು ಮಾಡುತ್ತೀರಿ? ಸಚ್ಚಾರ್ ಸಮಿತಿಯ ಹಾಗೆ ಇನ್ನೊಬ್ಬರ ಮೇಲೆ ಹೊಣೆ ಹೊರಿಸುತ್ತೀರಿ!

ಮೂರನೇ ಅಂಶ: ಸಂಕಿರಣದಲ್ಲಿ ಜಾತಿ ಸಮಸ್ಯೆ, ಸಮಾನತೆ ಇವನ್ನು ಧಾರ್ಮಿಕ ಸೌಹಾರ್ದ ಅಥವಾ ಕೋಮುವಾದದ ಸಮಸ್ಯೆ ಜೊತೆ ಮಿಶ್ರ ಮಾಡಿದ್ದು ಸ್ಪಷ್ಟ. ಇದರಿಂದ ದೇವನೂರರ ಸಂಬಂಜದ ವಿಚಾರ, ದಲಿತರ ಸಂಕಟಗಳ ವಿಚಾರ ಇತ್ಯಾದಿ ಬಂದವು. ಲಂಕೇಶರ ಚಿಂತನೆಯನ್ನು ತರಲಾಯಿತು. ಹಿಂದುತ್ವ ಅಥವಾ ಹಿಂದ್ ಸ್ವರಾಜ್ ಬಗ್ಗೆ ಮಾತನಾಡಿದ  ರಾಜಶೇಖರರು ಶೋಷಿತ ಜಾತಿಗೆ ಸೇರಿದವರನ್ನು ಭೂಮಾಲಿಕರು ಸಜೀವ ದಹನ ಮಾಡಿದ ಸಂಗತಿಯನ್ನು ನೆನಪಿಸುವು ದರೊಂದಿಗೆ ಆರಂಭಿಸಿದರು. ಅಂಬೇಡ್ಕರ್ ಮುಂಗಾಣುವಿಕೆಯಲ್ಲಿ ಸಹನಶೀಲತೆ ಎಂಬ ವಿಷಯದ ಬಗ್ಗೆ ಮಾತನಾಡಿದ ಪ್ರೊ. ಐವನ್ ಲೋಬೋ ಅವರು ಅಂಬೇಡ್ಕರರ ಮೂರು ಬರಹಗಳನ್ನು ಮುಖ್ಯವಾಗಿ ಪರಿಗಣಿಸಿದರು. ಅವು ಬಹುಶಃ ಜಾತಿವಿನಾಶ, ರಾಜ್ಯ ಮತ್ತು ಅಲ್ಪಸಂಖ್ಯಾತರು ಮತ್ತು ಬುದ್ಧದಮ್ಮ ಈ ಮೂರು ಇರಬೇಕು ಅಂತ ನನ್ನ ನೆನಪು. ಧಾರ್ಮಿಕ ಸಹನಶೀಲತೆ ಬಗ್ಗೆ(ಅಥವಾ ಅಸಹನಶೀಲತೆ ಬಗ್ಗೆ) ವ್ಯಾಖ್ಯಾನ, ಮುಂಗಾಣುವಿಕೆಯುಳ್ಳ,  ಅವರ ಪಾಕಿಸ್ತಾನ ಅಥವಾ ಭಾರತ ವಿಭಜನೆ ಕುರಿತ ಸಂಪುಟದ ಒಂದೇ ಒಂದು ಅಂಶವೂ ಅವರ ಭಾಷಣದಲ್ಲಿ ಉಲ್ಲೇಖವಾಗಲಿಲ್ಲ ಎಂಬುದು ಮುಖ್ಯ ಸಂಗತಿಯೇ.

ಇರಲಿ. ಪ್ರೊ. ರಾಜೇಂದ್ರ ಚೆನ್ನಿಯವರು ನನ್ನ ಮಾತಿಗೆ ಪ್ರತಿಕ್ರಿಯಿಸಿ, ಸೆಕ್ಯುಲರ್ ವಾದಿಗಳನ್ನು ನೀವು ಹಾಗೆ ಜನರಲೈಸ್ ಮಾಡಿ ದೂರುವಂತಿಲ್ಲ. ಅವರೂ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಸೆಕ್ಯುಲರಿಸಂನ ಕೊರತೆಗಳನ್ನು ಹೇಳಿದ್ದಾರೆ. ಮುಸಲ್ಮಾನರ ಬಗ್ಗೆ ಮಾತನಾಡುವಾಗ ನಮಗೆ ಆ ಸಮುದಾಯದ ಬಗ್ಗೆ ಏನಾದ್ರೂ ಗೊತ್ತಿರ ಬೇಕು. ಅವರ ಕಷ್ಟ,  ಬಗ್ಗೆ ಗೊತ್ತಾ? ಅವರ ಜಾತಿಗಳ ಬಗ್ಗೆ ಗೊತ್ತಾ? ಇದೇನೂ ಗೊತ್ತಿಲ್ಲದೇ ನೇರವಾಗಿ ಅವರನ್ನು ಆಪಾದಿಸುವುದು ಸರಿಯಲ್ಲ ಎಂದರು. (ಚೆನ್ನಿಯವರ ಅಭಿಮಾನಿ ಶರೀಫ್ ಸಾಲೆತ್ತೂರ್ ಫೇಸುಬುಕ್ಕಿನಲ್ಲಿ ಉದ್ಧರಿಸಿದಂತೆ)

ಅನಂತರ ಉತ್ತರಿಸಿದ ಜಿ. ರಾಜಶೇಖರ್ ಅವರು ‘ಸಾವರ‌್ಕರರ ಹಿಂದುತ್ವ ಕೃತಿಯನ್ನು ಓದಿದ್ದೇನೆ. ಅವರು ಹಾಗೆ ನೇರವಾಗಿ ಹೇಳದೆ ಇರಬಹುದು ಆದರೆ ಅವರ ಮಾತಿನ ಅರ್ಥ/ಧ್ವನಿ ಇದೇ ಆಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ರೋಹಿಣಾಕ್ಷರು ಮಾತನಾಡಿ, ‘ಸಾವರ‌್ಕರ್  ಹೇಳಿಲ್ಲದೆ ಇರಬಹುದು ಅಂತ ಈಗ ಹೇಳುತ್ತೀರಿ. ಹಾಗಿದ್ದರೆ ಹೇಳಿದ್ದಾರೆ ಅಂತ ಹೇಳಿದ ಮಾತನ್ನು ಹಿಂದೆಗೆದುಕೊಳ್ಳಿ. ನಿಮ್ಮ ಊಹೆಗೆ ಈ ವಿಚಾರ ಸಂಕಿರಣವನ್ನು ಬಳಸಿಕೊಳ್ಳಬೇಡಿ’ಎಂಬರ್ಥದಲ್ಲಿ ಹೇಳಿದರು. ಅದಕ್ಕೆ ಪ್ರತಿಯಾಗಿ ಜಿ. ರಾಜಶೇಖರರು, ‘ನಾನೇಕೆ ಕ್ಷಮೆ ಕೇಳಬೇಕು? ಸಾವರ‌್ಕರ್ ಮಾತಿನ ಅರ್ಥ ಅದೇ. ಅವರ ಮಾತಿನ ಸಾರಾಂಶವನ್ನು ನಾನು ಹೇಳಿದ್ದೇನೆ. ಸಾವರ‌್ಕರ್ ಆ ಮಾತನ್ನು ಹೇಳದಿದ್ದರೂ ಗೊಲ್ವಾಲ್ಕರ್ ಹೇಳಿದ್ದಾರೆ.’ ಎಂದರು. ವಾಸ್ತವವಾಗಿ, ಅನಂತಮೂರ್ತಿಯವರ ಪುಸ್ತಕ ಇರುವುದು ಸಾವರ‌್ಕರ್ ವಿಚಾರದ ಬಗ್ಗೆ. ಗೊಲ್ವಾಲ್ಕರ್  ಅಲ್ಲ. ಅವರಿಬ್ಬರನ್ನೂ ಒಂದೇ ಆಗಿ ಪರಿಗಣಿಸಲು ಅಥವಾ ಸಾವರ‌್ಕರರನ್ನು ಸಂಘದ ಇತರ ನಾಯಕರ ಜೊತೆಗೇ ಪರಿಗಣಿಸಲು ಬರುವುದಿಲ್ಲ ಎಂಬುದನ್ನು ಸರಿಯಾಗಿಯೇ ಅದೇ ಚರ್ಚೆಯ ಸಂದರ್ಭದಲ್ಲಿ ರಾಜರಾಮ ತೋಳ್ಪಾಡಿಯವರ ಮಾತು(ನೇರವಾಗಿ ಹಾಗೆ ಹೇಳಿದರೋ ಗೊತ್ತಾಗಲಿಲ್ಲ) ಸೂಚಿಸಿತು. ಅಂದರೆ ಸಾವರ‌್ಕರರ ಅಸ್ಪಶ್ಯತೆ ವಿರುದ್ಧದ ನಿಲುವುಗಳನ್ನು ತೋಳ್ಪಾಡಿಯವರು ನೆನಪಿಸಿದರು. ಅವರು ಹಾಗೆ ನೆನಪಿಸಿದಾಗ ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡ ರಾಜಶೇಖರರು 1920ರ ದಶಕದಲ್ಲಿಯೇ ಅಸ್ಪಶ್ಯತೆ ನಿವಾರಣೆಗೆ ಸಾವರ‌್ಕರ್ ಕೈಗೊಂಡ ಕ್ರಮದ ಬಗ್ಗೆ ಹೇಳಿದರು.  ಗೊತ್ತಿರುವ ರಾಜಶೇಖರ್, ತಮ್ಮ ಭಾಷಣವನ್ನು, ಸವರ್ಣೀಯರಿಂದ ಸಜೀವ ದಹನಕ್ಕೊಳಗಾದ ದಮನಿತರ ಬಗ್ಗೆ ಹೇಳುತ್ತ ಆರಂಭಿಸಿದ್ದರಾದರೂ, ತಮ್ಮ ಇಡೀ ಭಾಷಣದಲ್ಲಿ ಸಾವರ‌್ಕರರ ಈ ಅಸ್ಪೃಶ್ಯತಾ ವಿರೋಧೀ ಹೋರಾಟದ ಮುಖದ ಬಗ್ಗೆ ಚಕಾರ ಎತ್ತಿರಲಿಲ್ಲ. ಅನಂತಮೂರ್ತಿಯವರಿಗೂ ಅದು ಮುಖ್ಯವಾಗಲಿಲ್ಲ ಎಂಬುದು ಬೇರೆ ಮಾತು. (ಸೆಕ್ಯುಲರಿಸಂ ಎಂದರೆ ಸಹಬಾಳ್ವೆ, ಸಮಾನತೆಯ ತುಡಿತ ಅಂತಿರುವಾಗ ಚಕಾರ ಇರಬೇಕಿತ್ತಲ್ಲ!?) ಅನಂತಮೂರ್ತಿಯವರಾಗಲೀ, ಇತರ ಸೆಕ್ಯುಲರ್ ವಾದಿಗಳಾಗಲೀ ಸಾವರ‌್ಕರ್, ಗೊಲ್ವಾಲ್ಕರ್ ಮುಂತಾದವರನ್ನು ಮತ್ತೆ ಮತ್ತೆ ಎಳೆದು ತರುವುದು ಅವರ  ರಾಜಕೀಯದ ಅಗತ್ಯಕ್ಕೆ. ಆದರೆ ಸಾವರ‌್ಕರ್ ಹೇಳಿದ್ದರಲ್ಲಿ ಅಥವಾ ಗೋಲ್ವಾಲ್ಕರ್ ಹೇಳಿದ್ದರಲ್ಲಿ ಇಂದಿನ ಕಾಲಕ್ಕೆ ಹೊಂದದ ವಿಚಾರಗಳನ್ನು ಚಾಚೂ ತಪ್ಪದೆ ಪಾಲಿಸುವವರು ಅಥವಾ ಪ್ರಚಾರ ಮಾಡುವವರು ಈಗ ಯಾರಿದ್ದಾರೆ?

ಮುಂದೆ ನನ್ನ ಮಾತಿಗೆ ತಮ್ಮ ಪ್ರತಿಕ್ರಿಯೆಯನ್ನು ಮುಂದುವರಿಸುತ್ತಾ ಜಿ. ರಾಜಶೇಖರ್ ‘ನೀವು ಯಾಕೆ ಧಾರ್ಮಿಕ ಅಲ್ಪಸಂಖ್ಯಾತತ್ವದ ಬಗ್ಗೆ ಮಾತ್ರ ಮಾತನಾಡುತ್ತೀರಿ? ಬೇರೆ ರೀತಿಯ ಅಲ್ಪಸಂಖ್ಯಾತರಿಲ್ಲವೇ? ಶ್ರೀಮಂತರು ಬಡವರು ಅಂತ ಇಲ್ಲವೇ? ಗಂಡು ಹೆಣ್ಣು ಅಂತ ಇಲ್ಲವೆ? ಇಲ್ಲೆಲ್ಲ ಅಲ್ಪಸಂಖ್ಯಾತರು ಬಹುಸಂಖ್ಯಾತರು  ಇಲ್ಲವೆ? ಹೀಗೆ ವಿವಿಧ ನಮೂನೆಯ ಅಲ್ಪಸಂಖ್ಯಾತರ ಬಗ್ಗೆ ನೀವೇಕೆ ಗಮನ ನೀಡುವುದಿಲ್ಲ?’ ಎಂಬರ್ಥದಲ್ಲಿ ಪ್ರಶ್ನಿಸಿದರು. ವಾಸ್ತವವಾಗಿ, ದ್ಯಾಟ್ ಈಸ್ ಪ್ರಿಸೈಸ್ಲೀ ಮೈ ಪಾಯಿಂಟ್. ಅಸಂಖ್ಯ ಅಸ್ಮಿತೆಗಳ ಎಡೆಯಲ್ಲಿ ಅಲ್ಪಸಂಖ್ಯೆ, ಬಹುಸಂಖ್ಯೆಯೆಂಬ ಅಪಕಥನ ಅಂತ ನಾನು 2007ರಲ್ಲಿ ಬರೆದದ್ದು ಇದನ್ನೇ! ಹಲವಾರು ನಮೂನೆಗಳಲ್ಲಿ ಎಲ್ಲ ಜಾತಿಗಳೂ ಭಾಷೆಗಳೂ ಅಲ್ಪಸಂಖ್ಯೆಯವೇ ಆಗಿರುವಾಗ ಕೆಲವು ಧರ್ಮಗಳನ್ನು(ರಿಲಿಜನ್ ಎಂಬರ್ಥದಲ್ಲಿ) ಮತ್ತು ಭಾಷೆಗಳನ್ನು ಆಧರಿಸಿ ನೀವು ಹೇಗೆ ಮತ್ತು ಯಾಕೆ ಅಲ್ಪಸಂಖ್ಯೆ ಬಹುಸಂಖ್ಯೆ ಅಂತ ಜನರನ್ನು  ಮಾಡುತ್ತೀರಿ? ಇದು ನನ್ನ ಪ್ರಶ್ನೆ. ಗೆದ್ದ ರಾಜಕೀಯ ಪಕ್ಷಗಳ ಬೆಂಬಲಿಗರು ಬಹುಸಂಖ್ಯಾತರಾದರೆ ಸೋತ ಪಕ್ಷಗಳ ಬೆಂಬಲಿಗರು ಅಥವ ಸೋತವರಿಗೆ ಮತ ನೀಡಿದವರು ಅಲ್ಸಂಖ್ಯಾತರು. ಇಂಥ ಬಹುಸಂಖ್ಯಾತತ್ವವು ಪಶ್ಚಿಮ ಬಂಗಾಳ ಮತ್ತು ಕೇರಳಲ್ಲಿ ಮಾಡಿರುವ ಹಾನಿಯೇನು ಕಡಮೆಯೇ? ಇದನ್ನೆಲ್ಲ ಅಲ್ಲಿ ನಾನು ಬರೆದಿದ್ದೆ. ಹೀಗಾಗಿ ಈ ನನ್ನ ಪ್ರಶ್ನೆಯನ್ನೇ ಮತ್ತೆ ನನಗೆ ಕೇಳುವ ಬದಲು ಜಿ. ರಾಜಶೇಖರ್ ತಮ್ಮ ಓರಿಗೆಯ ಸೆಕ್ಯುಲರ್‌ವಾದಿಗಳನ್ನು ಕೇಳಬೇಕಾಗಿತ್ತು! ಯಾಕೆಂದರೆ ಈ ವಿಭಾಗೀಕರಣವೆಂಬ ಉಸುಕಿನ ಮೇಲೆಯೇ  ಸೆಕ್ಯುಲರ್ ವಾದವೆಂಬ ಬಹುದೊಡ್ಡ ಸೌಧ ಕಟ್ಟಲಾಗಿದೆ!

ಒಟ್ಟಿನಲ್ಲಿ ನಾನು ಎತ್ತಿದ್ದ, ಉತ್ತರಿಸಬೇಕಾಗಿದ್ದ ಪ್ರಶ್ನೆಗಳನ್ನು ರಾಜಶೇಖರ್ ಆಗಲೀ ಚೆನ್ನಿಯವರಾಗಲೀ ಎತ್ತಿಕೊಳ್ಳಲೇ ಇಲ್ಲ ಎನ್ನುವುದು ಯಾರಿಗಾದರೂ ಮನವರಿಕೆಯಾದೀತು.

ರೋಹಿಣಾಕ್ಷರು ಜಿ. ರಾಜಶೇಖರರನ್ನು ಉದ್ದೇಶಿಸಿ ‘ನಿಮ್ಮ ಮಾತು ತಪ್ಪು ಎಂದು ಒಪ್ಪಿಕೊಳ್ಳಿ, ಮಾತನ್ನು ಹಿಂದೆಗೆದುಕೊಳ್ಳಿ’ ಎಂದಾಗ ಇದು ಬೇಡವಿತ್ತು ಎಂದು ನನಗೂ ಒಮ್ಮೆ ಅನಿಸಿತು. ಆದರೆ ರೋಹಿಣಾಕ್ಷರು ಹಾಗೆ ಹೇಳಿದ್ದರಿಂದ, ಹಿಂದುತ್ವ ಪುಸ್ತಕದಲ್ಲಿ ಸಾವರ‌್ಕರರು ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರು ಎಂದು ಸ್ಪಷ್ಟ  ಹೇಳಿದ್ದಾರೆ ಎಂಬ ಖಡಾಖಡಿಯ ನಿರ್ಣಾಯಕ ಮಾತನ್ನು ಹೇಳಿದ ರಾಜಾರಾಮ ತೋಳ್ಪಾಡಿಯವರ ಸುಳ್ಳು ಕೂಡ ಹೊರಬರಲು ಅನುಕೂಲವೇ ಆಯಿತು. ಹಾಗಾಗಿ ರೋಹಿಣಾಕ್ಷರು ಹಾಗೆ ಮಾತಾಡಿದ್ದು ಒಳ್ಳೆಯದೇ ಆಯಿತು. ಆಗುವುದೆಲ್ಲಾ ಒಳ್ಳೆಯದಕ್ಕೇ.

  ಸಾವರ‌್ಕರ ಒಟ್ಟು ಬರಹ, ಭಾಷಣಗಳ ಧ್ವನಿ ಅಥವಾ ಸಾರಾಂಶ ಏನು? ಇದನ್ನು ಹೇಳಲು ಅಂಬೇಡ್ಕರರಿಗಿಂತ ಸೂಕ್ತ ವ್ಯಕ್ತಿ ಯಾರಿದ್ದಾರೆ? ಸಾವರ‌್ಕರರ ನಿಲುವುಗಳ ಬಗ್ಗೆ ಅಂಬೇಡ್ಕರರು ಪಾಕಿಸ್ತಾನ ಅಥವಾ ಭಾರತ ವಿಭಜನೆ ಎಂಬ ಸಂಪುಟದಲ್ಲಿ ಹೇಳಿರುವದನ್ನು ಗಮನಿಸಿದರೆ ಸಾವರ‌್ಕರರ ಮಾತುಗಳ  ಸಾರಾಂಶ ಗೊತ್ತಾಗುತ್ತದೆ. ಹೇಗಿದ್ದರೂ ಜಿ. ರಾಜಶೇಖರ್ ಮತ್ತು ರಾಜಾರಾಮ ತೋಳ್ಪಾಡಿಯವರಿಗಿಂತ ಅಂಬೇಡ್ಕರರು ಕಾಲದ ದೃಷ್ಟಿಯಿಂದ ಸಾವರ‌್ಕರರಿಗೆ ಹೆಚ್ಚು ಹತ್ತಿರದವರು. ಅವರ ಬರಹ, ಮಾತುಗಳ ಬಗ್ಗೆ ಹತ್ತಿರದಿಂದ ತಿಳಿದವರು. ಅಲ್ಲದೆ, ಮಾತುಗಳ ಹಿಂದಿರುವ ಧ್ವನಿಯನ್ನು ಅರಿಯುವ ಸಾಮರ್ಥ್ಯ ಕೂಡ ಅಂಬೇಡ್ಕರರಿಗೆ ಇವರಷ್ಟೇ ಚೆನ್ನಾಗಿ ಇತ್ತು ಅಂತ ನಾನು ನಂಬಿದ್ದೇನೆ.

ಅಂಬೇಡ್ಕರ್ ಹೇಳುವಂತೆ, ‘ಸಾವರ‌್ಕರರು ಮುಸ್ಲಿಂ ಜನರನ್ನು ನಿಗ್ರಹಿಸಲು ಸೂಚಿಸುತ್ತಿಲ್ಲ. ತದ್ವಿರುದ್ಧವಾಗಿ, ಆ ರಾಷ್ಟ್ರದ ಸತ್ವವನ್ನು ಕಾಪಾಡುವಂಥ ಅವರ ಧರ್ಮ, ಭಾಷೆ  ಸಂಸ್ಕೃತಿಗಳನ್ನು ಇರಲು ಬಿಟ್ಟು ಆ ಜನಾಂಗವನ್ನು ಅವರು ಪೋಷಿಸಿ ಬೆಳೆಸುತ್ತಾರೆ… ಹಿಂದುಗಳು ಮತ್ತು ಮುಸ್ಲಿಮರು ತಂತಮ್ಮ ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಸಂರಕ್ಷಿಸಿಕೊಂಡು ಒಂದೇ ದೇಶದೊಳಗೆ ಎರಡು ಪ್ರತ್ಯೇಕ ರಾಷ್ಟ್ರಗಳಾಗಿ ಬಾಳಬೇಕೆಂಬುದು ಅವರ ಅಪೇಕ್ಷೆ..’

ಅಂಬೇಡ್ಕರ್ ಅವರು ಹೇಳುವಂತೆ, ಅಲ್ಪಸಂಖ್ಯಾತತೆ ಯಾವುದೇ ವಿಶೇಷ ಸೌಲಭ್ಯಕ್ಕೆ ಸಮರ್ಥನೆಯಲ್ಲ, ಅಂತೆಯೇ ಬಹುಸಂಖ್ಯಾತತೆ ಯಾವುದೇ ಶಿಕ್ಷೆಗೆ ಕಾರಣವಲ್ಲ. ಮುಸ್ಲಿಂ ಧರ್ಮ ಮತ್ತು ಮುಸ್ಲಿಂ ಸಂಸ್ಕೃತಿಗಳ ರಕ್ಷಣೆಗೆ ಬೇಕಾದ ರಾಜಕೀಯ ಶಕ್ತಿಯನ್ನು ನಿರ್ದಿಷ್ಟ ಪ್ರಮಾಣದಲ್ಲಿ  ಒದಗಿಸುವ ಹೊಣೆ ರಾಷ್ಟ್ರದ್ದು. ಆದರೆ ಶಾಸನ ಸಭೆ ಅಥವಾ ಆಡಳಿತದಲ್ಲಾಗಲಿ ಅವರಿಗೆ ಸ್ಥಾನ ಭದ್ರತೆ ಕೊಡಬಾರದು, ಮುಸಲ್ಮಾನರು ಅಂಥ ಭದ್ರತೆಯನ್ನು ಒತ್ತಾಯಿಸಿದರೆ ಅದು ಸಾಮಾನ್ಯ ಜನಸಂಖ್ಯೆಯಲ್ಲಿ ಅವರಿಗಿರುವ ಪ್ರಮಾಣಕ್ಕಿಂತ ಮೀರಿರಬಾರದು. ಈ ರೀತಿಯಾಗಿ ಸಾವರ‌್ಕರರು ಇಲ್ಲಿಯವರೆಗೆ ಮುಸ್ಲಿಂ ಜನಾಂಗಕ್ಕಿದ್ದ ಎಲ್ಲ ರಾಜಕೀಯ ಸವಲತ್ತುಗಳನ್ನು ಕಿತ್ತು ಹಾಕುತ್ತಾರೆ.’

ನಿಜವಾಗಿ ಸಾವರ‌್ಕರರ ಈ ಮಾತುಗಳು ಹೇಳುವುದು ಪ್ರತಿಯೊಬ್ಬ ಪ್ರಜೆಯನ್ನೂ ಪ್ರಭುತ್ವವು ಸಮಾನವಾಗಿ ಪರಿಗಣಿಸಬೇಕು ಎಂದು ತಾನೆ? ಸಾವರ‌್ಕರರು ಇನ್ನೊಂದು ವಾದ ಮುಂದಿಟ್ಟದ್ದಿದೆ.  ಮರಿಗೆ ವಿಶೇಷ ಮತ್ತು ಕೋಮು ಆಧಾರಿತ ಪ್ರಾತಿನಿಧ್ಯ ಇರಬಹು ದಾದರೆ, ಸಿಖ್ಖರು, ಜೈನರು, ಲಿಂಗಾಯತರು, ಬ್ರಾಹ್ಮಣೇತರರು, ಬೇಕಾದರೆ ಬ್ರಾಹ್ಮಣರು ಕೂಡ ಅಂಥ ವಿಶೇಷ ಮತ್ತು ಕೋಮು ಆಧಾರಿತ ಪ್ರಾತಿನಿಧ್ಯ ಹೊಂದಲು ಅರ್ಹರೆಂದು ಪ್ರತಿಪಾದಿಸಿದ್ದರು.

ಒಟ್ಟಿನಲ್ಲಿ, ಕನ್ನಡದ ಪ್ರಮುಖ ಸೆಕ್ಯುಲರ್ ವಾದಿಗಳನ್ನು ಕರೆಸಿ ಮಾತನಾಡಿಸಿ ವಿಚಾರ ಸಂಕಿರಣ ನಡೆಸಿದ ಸಂತ ಅಲೋಶಿಯಸ್ ಕಾಲೇಜಿನ ಉದ್ದೇಶ ಈಡೇರಿತೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಚಾರ ಸಂಕಿರಣವು ತಥಾಕಥಿತ ಸೆಕ್ಯುಲರಿಸ್ಟುಗಳ ಟೊಳ್ಳುತನವನ್ನು ಬಯಲು  ಅಷ್ಟರಮಟ್ಟಿಗೆ ಈ ವಿಚಾರಸಂಕಿರಣ ಅದ್ಭುತ ಯಶಸ್ಸನ್ನು ಕಂಡಿತು.

Tags

Related Articles

Leave a Reply

Your email address will not be published. Required fields are marked *

Language
Close