About Us Advertise with us Be a Reporter E-Paper

ಅಂಕಣಗಳು

ಪ್ರತ್ಯೇಕ ಹೋರಾಟದ ಕಿಚ್ಚು ಹೊತ್ತಿಸಿದವರು ಏನು ಸಾಧಿಸಿದ್ದಾರೆ?

ಆಕ್ರೋಶ: ಕೆ.ಎಂ. ಶಿವಪ್ರಸಾದ್

ಪ್ರತ್ಯೇಕ ಉತ್ತರ ಕರ್ನಾಟಕದ ಕಿಚ್ಚು ದಿನೇ-ದಿನೇ ವ್ಯಾಪಕವಾಗಿ ಹರಡುತ್ತಿದೆ ಅನ್ನುವುದಕ್ಕಿಂತ ಹರಡಲಾಗುತ್ತಿದೆ ಎನ್ನುವುದೇ ಸೂಕ್ತವೇನೋ. ಏಕೆಂದರೆ ಆ ದಿನದ, ಆ ಹೊತ್ತಿನ ಕೂಳಿಗೆ ಬದುಕುತ್ತಿರುವ ಬಹುಸಂಖ್ಯಾತ ಉತ್ತರ ಕರ್ನಾಟಕದ ಮಂದಿಗೆ ಈ ಯಾವ ಹೋರಾಟದ ಬಗ್ಗೆ, ಅದಕ್ಕಿಂತಲೂ ಹೆಚ್ಚಾಗಿ ಪ್ರತ್ಯೇಕ ಕಿಚ್ಚು ಹೊತ್ತಿಸುತ್ತಿರುವ ಪಾಳೇಗಾರ ನಾಯಕರ  ಬಲವಾದ ನಂಬಿಕೆಯೇನೂ ಇಲ್ಲ. ಇಂದು ಸರಕಾರಗಳ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತವಾಗಿದೆ, ಕುಡಿಯಲು ನೀರಿಲ್ಲ, ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ, ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ, ಜನ ಜೀವನ ದುಸ್ತರವಾಗಿದೆ… ಎಂದು ಈಗ ನಡು ರಸ್ತೆಯಲ್ಲಿ ನಿಂತು ಬೊಂಬಡ ಹೊಡೆಯುತ್ತಿರುವ ಜನನಾಯಕರೆಲ್ಲಾ ಆಯಾ ಜಿಲ್ಲೆಗಳಲ್ಲಿ, ಮತ್ತು ಆಯಾ ಮತಕ್ಷೇತ್ರಗಳಲ್ಲಿ ಏನಿಲ್ಲವೆಂದರೂ ಎರಡ್ಮೂರು ದಶಕಗಳ ಕಾಲ ತಮ್ಮ ಹಾಗೂ ತಮ್ಮ ಕುಟುಂಬಗಳ ಪಾರುಪತ್ಯ ಸಾಧಿಸಿರುವುದಲ್ಲದೆ ಪಾಳೇಗಾರಿಕೆಯ ಆಡಳಿತ ನಡೆಸಿದ್ದಾರೆ.  ಜೊತೆಗೆ ಪ್ರತಿ ಸರ್ಕಾರಗಳ ಅವಧಿಯಲ್ಲೂ ಘಟಾನುಘಟಿ ಮಂತ್ರಿ ಪದವಿಗಳನ್ನು ಅಲಂಕರಿಸಿದ್ದಾರೆ. ಇನ್ನು ಒಂದು ರೀತಿಯಲ್ಲಿ ವೈಭವೀಕರಿಸಿ ಹೇಳಬೇಕೆಂದರೆ ಸರಕಾರಗಳನ್ನೇ ನಿಯಂತ್ರಿಸಬಲ್ಲ, ಉರುಳಿಸಬಲ್ಲಷ್ಟು ಶಕ್ತಿಯುತವಾಗಿದ್ದವರು, ಈಗಲೂ ಇರುವವರು ಎಂದರೆ ತಪ್ಪಾಗಲಾರದೇನೋ.

 ಎಸ್.ಆರ್. ಕಂಠಿ, ಜೆ.ಎಚ್. ಪಟೇಲ್, ಧರ್ಮಸಿಂಗ್, ಬಿ.ಡಿ.ಜತ್ತಿ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರೆ, ಮಲ್ಲಿಕಾರ್ಜುನ ಖರ್ಗೆ, ಶಾಮನೂರು ಶಿವಶಂಕರಪ್ಪ, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಉಮೇಶ್ ಕತ್ತಿ, ಶ್ರೀರಾಮುಲು, ಜನಾರ್ದನ ರೆಡ್ಡಿ, ಎಂ.ಬಿ.ಪಾಟೀಲ್,  ಬೊಮ್ಮಾಯಿ, ಶಿವಾನಂದ ಪಾಟೀಲ್, ಎಚ್.ಕೆ. ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಬಸವರಾಜ್ ರಾಯರೆಡ್ಡಿ, ಎಸ್.ಆರ್.ಪಾಟೀಲ್ ಸೇರಿದಂತೆ ಇಂತಹ ಇನ್ನು ಹತ್ತಾರು ನಾಯಕರು ಒಂದೇ ಮತ ಕ್ಷೇತ್ರದಿಂದ ಮೂರು, ನಾಲ್ಕು, ಐದು, ಆರು, ಏಳು ಬಾರಿ ಗೆಲುವು ಸಾಧಿಸಿದ್ದರೆ, ಧರ್ಮಸಿಂಗ್ ಮಲ್ಲಿಕಾರ್ಜುನ್ ಖರ್ಗೆ ದಾಖಲೆಯ ಪಾರಮ್ಯ ಮೆರೆದಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕ ನಾಯಕರು ಆಯಾ ಜಿಲ್ಲೆಗಳನ್ನು ಮತ್ತು ತಾಲೂಕುಗಳನ್ನು ತಮ್ಮ ಕುಟುಂಬ ಒಡೆತನದ ಪಾಳೇಗಾರಿಕೆಯ ಖಾಸಗಿ ಕಂಪನಿಯನ್ನಾಗಿಸಿಕೊಂಡಿದ್ದಾರೆ. ಆದರೂ ಇದುವರೆವಿಗೂ ಆ  ಅಭಿವೃದ್ಧಿಯಿಂದ ವಂಚಿತವಾಗಿ ಆದರೂ ಅದೇ ನಾಯಕರು ಮತ್ತೇ-ಮತ್ತೇ ಅದೇ ಜನರಿಂದ ಆಯ್ಕೆಗೊಂಡು ಶಕ್ತಿಸೌಧ ಪ್ರವೇಶಿಸುತ್ತಿದ್ದಾರೆ. ಈಗಲೂ ಅದೇ ಘಟಾನುಘಟಿ ನಾಯಕರು ಪ್ರಸ್ತುತ ಸರಕಾರದಲ್ಲೂ ಪ್ರಭಾವಿಗಳಾಗಿದ್ದಾರೆ. ಹೀಗೆ ಪ್ರಭಾವಿಗಳಾಗಿರುವ ಮಂದಿಯೇ ಪ್ರತ್ಯೇಕ ರಾಜ್ಯದ ಕಿಚ್ಚು ಹೊತ್ತಿಸುತ್ತಿದ್ದಾರೆ ಅಂದರೆ ನಗಬೇಕೋ ಅಳಬೇಕೋ ಒಂದು ತಿಳಿಯದಾಗಿದೆ.

ಆಯಾ ಸರಕಾರಗಳು ಆಡಳಿತ ನಿರ್ವಹಿಸಿದ ಅವಧಿಯಲ್ಲಿ ಈ ಎಲ್ಲಾ ನಾಯಕರು ಪ್ರಭಾವಿ ಖಾತೆಯನ್ನು ಹೊಂದಿದ್ದಲ್ಲದೇ, ಮುಖ್ಯಮಂತ್ರಿಗಳ ಆಪ್ತ ವಲಯದಲ್ಲೂ ಪ್ರಬಲವಾಗಿ ಗುರುತಿಸಿಕೊಂಡು ರಾಜ್ಯಾದ್ಯಾಂತ ಸದ್ದು ಮಾಡಿದ್ದನ್ನು  ರಾಜ್ಯದ ಜನತೆಯೇ ಕಣ್ಣಾರೆ ಕಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯಂತೂ ರಾಷ್ಟ್ರಮಟ್ಟದಲ್ಲೂ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಂಡು ಮೋದಿ ಸರಕಾರಕ್ಕೆ ಸದನದಲ್ಲಿ ಚಾಟಿ ಬೀಸುತ್ತಿದ್ದಾರೆ. ಸದ್ಯದ ಕಾಂಗ್ರೆಸ್ ಪಕ್ಷದಲ್ಲಿ ಘಟಾನುಘಟಿ ನಾಯಕರೆಂಬ ಕೀರ್ತಿ ಗಳಿಸಿದ್ದಾರೆ. ಇನ್ನು ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳುವ ಮಾತನಾಡುತ್ತಿರುವ ಶ್ರೀರಾಮುಲು ಯಡಿಯೂರಪ್ಪ ಆಡಳಿತಾವಧಿಯುದ್ದಕ್ಕೂ ವೈಯಕ್ತಿಕ ಆಸೆ-ಕನಸುಗಳಿಗಾಗಿ, ಅಧಿಕಾರದ ಹಪಾಹಪಿಯಿಂದ ಇಡೀ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಯಡಿಯೂರಪ್ಪನಂತಹ ನಾಯಕನನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಎಂ.ಬಿ.ಪಾಟೀಲ್, ಎಸ್.ಆರ್. ಪಾಟೀಲ್, ವಿನಯ್  ಬಸವರಾಜ್ ರಾಯರೆಡ್ಡಿಯಂತಹ ಘಟಾನುಘಟಿ ನಾಯಕರು ಪ್ರತ್ಯೇಕ ಲಿಂಗಾಯುತ ಧರ್ಮದ ಹೋರಾಟಕ್ಕೆ ತಾವೇ ಖುದ್ದು ನೇತೃತ್ವ ವಹಿಸಿದ್ದರು ಅಲ್ಲದೇ ಇದೇ ವಿಚಾರವಾಗಿ ಸದನದ ಒಳಗೆ ಮತ್ತು ಹೊರಗೆ ಹಾಗೂ ಸರಕಾರದ ಮಟ್ಟದಲ್ಲಿ ದೊಡ್ಡ ಹೋರಾಟವನ್ನೇ ನಡೆಸಿದ್ದರು. ಸ್ವಂತ ಅಧಿಕಾರದ ಲಾಲಸೆಗೆ ಅಷ್ಟೆಲ್ಲಾ ಹೋರಾಟ ನಡೆಸಿದ, ಸರಕಾರಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿದ ನಾಯಕರು ಅದೇ ಹೋರಾಟವನ್ನು ಆ ಭಾಗಕ್ಕೆ ಅನುದಾನ ಕೊಂಡೊಯ್ಯಲು ನಡೆಸಲಿಲ್ಲ. ಪ್ರತ್ಯೇಕ ಧರ್ಮಕ್ಕೆ ತೋರಿದ ಒಗ್ಗಟ್ಟಿನ ನಡೆಯನ್ನು ರಾಜ್ಯ-ಕೇಂದ್ರ ಸರಕಾರಗಳ  ತೋರಿದ್ದರೆ ಇಷ್ಟೊತ್ತಿಗೆ ಮಹಾದಾಯಿಯೇ ದಕ್ಕಿಬಿಡುತ್ತಿದ್ದಳೇನೋ.

ಇಲ್ಲಿ ಬಾರದ ಇಚ್ಛಾಶಕ್ತಿ ಅಲ್ಲಿ ಬರುವುದಾದರೂ ಹೇಗೆ? ಯಡಿಯೂರಪ್ಪ ಸರಕಾರ ಆಡಳಿತ ಶುರುವಿಟ್ಟುಕೊಂಡ ಆ ದಿನದಿಂದಲೂ ಪ್ರತ್ಯೇಕ ರಾಜ್ಯದ ಕೂಗು ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಸರಕಾರಗಳು ಜಾರಿಗೆ ಬಂದ ಸಂದರ್ಭದಲ್ಲಿ ತಾವು ಬಯಸಿದ ಮಂತ್ರಿ ಪದವಿ ಮತ್ತು ಬಯಸಿದ ಹುದ್ದೆಗಳು ಸಿಗದ ಕಾರಣಕ್ಕೆ ಇಲ್ಲಿನ ನಾಯಕರು ಪ್ರತ್ಯೇಕತೆಯ ಬಾಂಬ್ ಸಿಡಿಸಿ ತಮಗೆ ಬೇಕಾದ್ದನ್ನು ಪಡೆದುಕೊಂಡಿದ್ದಾರೆಯೇ ಹೊರತು, ಹಾಗೆ ಪಡೆದುಕೊಂಡ ಅಧಿಕಾರ ವಲಯದ  ಬಳಸಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿಗೊಳಿಸುವ ರೂಪುರೇಷೆಗಳನ್ನು ಸಿದ್ದಪಡಿಸಲಿಲ್ಲ. ಅಧಿಕಾರದ ಸಿಗದೇ ಇದ್ದಾಗ ಪ್ರತ್ಯೇಕತೆಯ ಕೂಗು ಎಬ್ಬಿಸುವ ಇದೇ ಮಂದಿ ತಾವೂ ಬಯಸಿದ ಅಧಿಕಾರ ಸಿಕ್ಕ ನಂತರ ಅದೇ ಮುಖ್ಯಮಂತ್ರಿಗಳ ಹಿಂದೆ-ಮುಂದೆ ಓಡಾಡಿಕೊಂಡು ಕಾಲಕಳೆದಿದ್ದಾರೆಯೇ ಹೊರತು ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಿಲ್ಲ. ನೀರಾವರಿಯಿಂದ ವಂಚಿತವಾಗಿರುವ ಭೂ ಪ್ರದೇಶವನ್ನೇ ಅತೀ ಹೆಚ್ಚು ಹೊಂದಿರುವ ಉತ್ತರ ಕರ್ನಾಟಕಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಕನಸಿನ ಯೋಜನೆಗಳನ್ನು ಕೈಗೊಳ್ಳಲು ಈ ಯಾವ ನಾಯಕರಿಗೂ ಸಾಧ್ಯವಾಗಿಲ್ಲ.  ಇದುವರೆವಿಗೂ ಅದ್ಭುತವೆನಿಸುವಂತಹ ಒಂದೇ-ಒಂದು ಕನಸಿನ ಯೋಜನೆಯನ್ನು ಸರಕಾರದ ಮುಂದೆ ನೀಲಿನಕ್ಷೆ ಸಹಿತ ಮುಂದಿಟ್ಟು ಹೋರಾಟ ಮಾಡಿದ್ದಾರಾ ಅಂದರೆ ಅದೂ ಇಲ್ಲ. ಹೋಗಲೀ ಇದುವರೆವಿಗೂ ಬಿಡುಗಡೆಯಾದ ಸಾವಿರಾರು-ಲಕ್ಷಾಂತರ ಕೋಟಿ ರು.ಅನುದಾನವನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯ ಮಂತ್ರ ಪಠಿಸಿದ್ದಾರಾ ಅಂದರೆ ಅದರಲ್ಲೂ ಪೂರ್ಣ ಅಂಕ ನೀಡಲೂ ಸಾಧ್ಯವಿಲ್ಲ . ಅಂದರೆ ಮತ್ತೆ ಅದೇ ಪ್ರಶ್ನೆ ಎದುರಾಗುತ್ತದೆ: ಇಲ್ಲೇ ಬಾರದ ಅಭಿವೃದ್ಧಿಯ ಇಚ್ಛಾಶಕ್ತಿ ಪ್ರತ್ಯೇಕ ರಾಜ್ಯವಾದ ಮೇಲೆ ಬರುವುದಾದರೂ ಹೇಗೆ?

 ಗಣಿಧಣಿಗಳ ಆಪ್ತ  ಶ್ರೀರಾಮುಲು ಈಗ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ನೇತೃತ್ವ ವಹಿಸಿಕೊಳ್ಳುವ ಮಾತನಾಡುತ್ತಿದ್ದಾರೆ. ಪಾಪ ಇವತ್ತಿಗೂ ಶುದ್ಧ ಕನ್ನಡ ಮಾತನಾಡಲೂ ಬಾರದಿರುವ ಈ ನಾಯಕ ಅಧಿಕಾರದಲ್ಲಿದ್ದಷ್ಟು ದಿನ ಗಣಿಧಣಿಗಳ ಬೆನ್ನಿಗೆ ನಿಂತು ರಾಜ್ಯದ ಸಂಪತ್ತನ್ನು ಲೂಟಿ ಹೊಡೆಯಲು ಬೆಂಬಲ ಕೊಟ್ಟಿದ್ದಲ್ಲದೇ, ಆಪ್ತರನ್ನು ರಕ್ಷಿಸಿಕೊಳ್ಳಲು ನಡೆಸಿದ ಹೋರಾಟ, ಅದಕ್ಕಾಗಿ ಯಡಿಯೂರಪ್ಪನವರನ್ನು ಕಾಡಿದ ಪರಿ ಇಡೀ ರಾಜ್ಯದ ಜನ ಅವರ ವಿರುದ್ದ ಆಕ್ರೋಶಗೊಳ್ಳುವಂತೆ ಮಾಡಿತ್ತು. ಒಂದು ಸಮಯದಲ್ಲಂತೂ ಇವರ ಪಾಡು ಕಂಡು ಇಡೀ  ಗೆಲುವಿನ ಕೇಕೆ ಹಾಕಿತ್ತು. ಆದರೆ ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳದ ಶ್ರೀರಾಮುಲು ಈಗ ಹೋರಾಟದ ನೇತೃತ್ವ ವಹಿಸುವ ಮಾತನಾಡುತ್ತಿರುವುದಲ್ಲದೇ, ಅಖಂಡ ಕರ್ನಾಟಕದ ಕನಸು ಹೊತ್ತು ಹರಿದು ಹಂಚಿ ಹೋಗಿದ್ದ ನಾಡನ್ನು ಒಂದೂಗೂಡಿಸಿದ ಆ ಮಹಾನ್ ಚೇತನಗಳ ಆತ್ಮಗಳಿಗೆ ಅಪಚಾರವೆಸಗುತ್ತಿದ್ದಾರೆ.

‘ತಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುತ್ತೇನೆ, ಹಾಗೆಯೇ ತನ್ನ ಕುಟುಂಬದ ಸದಸ್ಯನೊಬ್ಬ ಪ್ರತ್ಯೇಕ ರಾಜ್ಯವಾಗಿ ರಚನೆಯಾಗುವ ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗುತ್ತಾನೆ’ ಎಂಬ ಕನಸಿನ ಮಾತನ್ನು ಉಮೇಶ್ ಕತ್ತಿ ಸಾಹೇಬರು ಈ ಹಿಂದೆ  ವ್ಯಕ್ತಪಡಿಸಿದ್ದರು. ಅಂದರೆ, ಇವರ ಕುಟುಂಬ ಸದಸ್ಯರ ಮುಖ್ಯಮಂತ್ರಿ ಪದವಿ ಆಸೆ ಈಡೇರಿಸಲು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆ ಅನ್ನುವುದೇ ಬೇಸರದ ಸಂಗತಿ. ಅಭಿವೃದ್ಧಿಯ ಬಗೆಗಿನ ದೂರಾಲೋಚನೆಗಳೇ ಇಲ್ಲದೇ ತಮ್ಮ-ತಮ್ಮ ವೈಯಕ್ತಿಕ ಅಧಿಕಾರದ ಲಾಲಸೆಗಾಗಿ ಮತ್ತೆ ಮತ್ತೆ ಒಡೆದಾಳುವ ಮಾತನ್ನಾಡುತ್ತಿರುವ ಈ ರಾಜಕೀಯ ನಾಯಕರುಗಳು ಮುಗ್ದ ಜನರ ಜೀವನದ ಚೆಲ್ಲಾಟವಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ತಿಳಿವಳಿಕೆ ನೀಡಬೇಕಾಗಿದ್ದ ಮಠಾಧೀಶರು, ಸಂಘಟನೆಗಳ ಮುಖ್ಯಸ್ಥರು ಮತ್ತು ಹೋರಾಟಗಾರರು ರಾಜಕಾರಣಿಗಳ ಜೊತೆ ಸೇರಿ ಪ್ರತ್ಯೇಕ  ಬೇಡಿಕೆ ಮಂಡಿಸಲೂ ಸಿದ್ದವಾಗಿದ್ದಾರೆ. ಕೆಲ ತಿಂಗಳ ಹಿಂದೆ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಕಿಚ್ಚು ಹೊತ್ತಿಸಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡಿದ ಮಂದಿಯೇ ಈಗ ಮತ್ತೊಂದು ತರಹದ ನಾಟಕ ಶುರುವಿಟ್ಟುಕೊಂಡಿದ್ದಾರೆ ಇದ್ದರಿಂದ ಇನ್ನೆಷ್ಟು ಜನರ ಬಲಿಯಾಗುತ್ತದೋ? ಏಕೆಂದರೆ ಮಹದಾಯಿ ನೀರು ಕೇಳಿದ್ದಕ್ಕೆ ಪೋಲಿಸರಿಂದ ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ಜನರಿಗೆ ಬಡಿಗೆಗಳಿಂದ ಬಡಿಸಿದಾಗ ಒಂದೇ ಒಂದು ಹೇಳಿಕೆ ಕೊಡದ, ಸರಕಾರದ ನಡೆಯ ವಿರುದ್ಧ ಹೋರಾಟ ನಡೆಸದ ಮಂದಿಯಿಂದ ಜನಹಿತಕ್ಕಾಗಿ ಹೋರಾಟ ನಿರೀಕ್ಷಿಸುವುದು ದೂರದ  ಸರಿ.

ಕುಮಾರಸ್ವಾಮಿ ನೇತೃತ್ವದ ಸರಕಾರ ಜಾರಿಗೆ ಬಂದ ದಿನದಿಂದಲೂ ಪ್ರತ್ಯೇಕ ರಾಜ್ಯದ ಕೂಗು ಹೆಚ್ಚಾಗುವಂತಹ ಕೃತಕ ಸನ್ನಿವೇಶ ಸೃಷ್ಟಿಸಲು ಹಲವಾರು ರಾಜಕೀಯ ನಾಯಕರು ತೆರೆಮರೆಯಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ ನಂಬರ್ ಗೇಮ್ ಆಟದಲ್ಲಿ ಸೋತು ಅಧಿಕಾರದ ಶಕ್ತಿ ಸೌಧದಲ್ಲಿ ಪಾರಮ್ಯ ಸಾಧಿಸುವಲ್ಲಿ ವಿಫಲವಾದ ರಾಜ್ಯ ಬಿಜೆಪಿ ನಾಯಕರು ಜನರಲ್ಲಿ ಪ್ರಾಂತೀಯವಾರು ವಿಷಬೀಜ ಬಿತ್ತಲು ಶುರುವಿಟ್ಟುಕೊಂಡಿದ್ದಾರೆ. ತಮ್ಮದೇ ಕೇಂದ್ರ ಸರಕಾರವಿದ್ದರೂ ಗೋವಾ ಮನವೊಲಿಸಿ ಮಹಾದಾಯಿ ನೀರು ತರಲು ಸಾಧ್ಯವಾಗದ ನಾಯಕರು  ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವೆಸಗಲಾಗಿದೆ ಎಂದೂ ಸಲ್ಲದ ಸುಳ್ಳು ಸುದ್ದಿ ಹರಡುವ ಯತ್ನ ನಡೆಸುತ್ತಿದ್ದಾರೆ. ಇದರ ಬದಲು ಇದೇ ಒಗ್ಗಟ್ಟನ್ನು ಮಹಾದಾಯಿ ನೀರು ಪಡೆಯಲು ಪ್ರಯೋಗಿಸಿದ್ದರೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ರಚನಾತ್ಮಕ ಹೋರಾಟ ನಡೆಸಲು ಉಪಯೋಗಿಸಿಕೊಂಡಿದ್ದರೆ ಮತ ಹಾಕಿದ ಮತದಾರನ ಅಲ್ಪ-ಸ್ವಲ್ಪ ಋಣವನ್ನಾದರೂ ತೀರಿಸಿದಂತಾಗುತ್ತಿತ್ತು.

ಈಗಾಗಲೇ ರಾಜ್ಯದ ಜನಸಾಮಾನ್ಯ ರಾಜಕಾರಣಿಗಳು ಬಿತ್ತಿದ ಜಾತಿ ವಿಷಬೀಜದ ಸೇವನೆಯಿಂದ ನರಳಾಡುತ್ತಿದ್ದಾನೆ. ಅಂತಹುದರಲ್ಲಿ ಈಗ ಮತ್ತೊಂದು ಪ್ರಾಂತೀಯ  ಬೀಜವಿಕ್ಕುವ ಪ್ರಯತ್ನ ನಡೆಸುತ್ತಿರುವುದು ರಾಜ್ಯದ ಏಕತೆಯ ದೃಷ್ಟಿಯಿಂದ ಮತ್ತು ದೇಶದ ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಹಾಗೆಯೇ ಇಷ್ಟು ದಿನಗಳ ಕಾಲ ಬೇಕಾದ ಅಧಿಕಾರವನ್ನೆಲ್ಲಾ ಅದೇ ಸರಕಾರಗಳಲ್ಲಿ ಪಡೆದು, ಸಿಕ್ಕಿದ್ದನ್ನೆಲ್ಲಾ ತಿಂದು-ತೇಗಿ, ಈಗ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು, ಸರಕಾರದ ಮೇಲೆ ಗೂಬೆ ಕೂರಿಸಲು ಹೊರಟಿರುವುದಲ್ಲದೇ ರಾಜ್ಯವನ್ನೇ ಒಡೆಯಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ.

 ಅದರಲ್ಲೂ ರಾಜ್ಯ ಬಿಜೆಪಿ ನಾಯಕರು ಇಂತಹ ಕೀಳುಮಟ್ಟದ ರಾಜಕೀಯ ಮಾಡಲು ಹೋಗಿ ರಾಜ್ಯ ವಿಭಜನೆಗೆ ಕೈಹಾಕಿದರೆ ಮುಂದಿನ  ದೇಶಾದ್ಯಂತ ಇಂತಹ ಅನಾಹುತಗಳಿಗೆ ತಲೆ ಕೊಡಬೇಕಾಗುತ್ತದೆ. ಆದ್ದರಿಂದ ಅದೇನು ಅಭಿವೃದ್ಧಿ ಮುಂದೆ ಮಾಡಲು ಸಿದ್ದವಾಗಿದ್ದಾರೋ ಆ ಕನಸಿನ ಯೋಜನೆಗಳನ್ನು ಸರಕಾರಗಳ ಮುಂದಿಟ್ಟು ರಚನಾತ್ಮಕ ಹೋರಾಟದ ಮೂಲಕ ಜನರ ಹಕ್ಕುಗಳನ್ನು ಕೊಡಿಸಲು ಶಪಥ ಮಾಡಿದರೆ ಒಳಿತು. ಅದು ಬಿಟ್ಟು ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಹಳೇ ಮೈಸೂರು ಕರ್ನಾಟಕವೆಂದೂ ಒಡೆದು ಚೂರು ಚೂರು ಮಾಡಿದರೆ ಏನು ಬಂತು?

Tags

Related Articles

Leave a Reply

Your email address will not be published. Required fields are marked *

Language
Close