ಆರೋಪಿಗಳನ್ನು ರಕ್ಷಿಸುವ ಅಗತ್ಯವೇನು?

Posted In : ಸಂಪಾದಕೀಯ-1

ಕೆಲವೊಮ್ಮೆ ತಿಳಿಯದೇ ತಪ್ಪುಗಳು ಆಗಿಬಿಡುತ್ತವೆ. ಅಂಥ ತಪ್ಪುಗಳನ್ನು ಕ್ಷಮಿಸಬಹುದು. ಆದರೆ ಗೊತ್ತಿದ್ದೂ ಮಾಡುವ ತಪ್ಪುಗಳನ್ನು ಕ್ಷಮಿಸಬೇಕೆ? ಹೊಸ ವರ್ಷಾಚರಣೆಗೆ ಮಜಾ ಮಾಡುವ ನೆಪದಲ್ಲಿ ಚಿಕ್ಕಮಗಳೂರಿನಲ್ಲಿ ಎರಡು ಕಡವೆ ಕೊಂದ 12 ಮಂದಿಯನ್ನು ಬಂಧಿಸಲಾಗಿದೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಿದ್ದರೆ ಯಾವ ತೊಂದರೆಯೂ ಇರಲಿಲ್ಲ. ಆದರೆ ರಾಜ್ಯದ ವನ್ಯಜೀವಿ ವಿಭಾಗದ ಮುಖ್ಯಸ್ಥರು ಆರೋಪಿಗಳನ್ನು ತಿಪಟೂರು ಜೈಲಿನಲ್ಲಿ ಹೋಗಿ ಭೇಟಿ ಮಾಡುವ ಅಗತ್ಯವೇನಿತ್ತು? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಒಬ್ಬ ಹಿರಿಯ ಅಧಿಕಾರಿ ಸಂಬಂಧವೇ ಇಲ್ಲದೆ ಆರೋಪಿಗಳನ್ನು ಜೈಲಿನಲ್ಲಿ ಹೋಗಿ ಭೇಟಿ ಮಾಡುತ್ತಾರೆ ಎಂದರೆ ಅದಕ್ಕೆ ಸರಕಾರದ ಮಟ್ಟದಲ್ಲಿ ಒತ್ತಡ ಇರಬೇಕು. ಬಂಧಿತ ಆರೋಪಿಗಳ ಬಗ್ಗೆ ಕನಿಕರ ಏಕೆ? ಸರಕಾರದ ಮೇಲೆ ಕೆಲವರು ಆರೋಪಿಗಳ ಪರವಾಗಿ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಯಿದೆ.

ಆದರೆ ಸರಕಾರ ಇದರಲ್ಲಿ ಆರೋಪಿಗಳ ಪರ ವಹಿಸದಿರುವುದೇ ಉತ್ತಮ ಅನಿಸುತ್ತದೆ. ಯಾಕೆಂದರೆ ಬಂಧಿತರಲ್ಲಿ ಏಳೆಂಟು ಮಂದಿ ಬೆಂಗಳೂರಿನಲ್ಲಿ ಉತ್ತಮ ಉದ್ಯೋಗದಲ್ಲಿರುವವರು, ಸುಶಿಕ್ಷಿತರು. ಇಷ್ಟೆಲ್ಲ ಕಲಿತು, ಸಾಫ್ಟ್ ವೇರ್ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಅವರಿಗೆ ವನ್ಯಜೀವಿಗಳನ್ನು ಕೊಲ್ಲುವುದು ಅಪರಾಧ ಎಂಬುದು ಗೊತ್ತಿಲ್ಲದ ಸಂಗತಿಯಲ್ಲ. ಅದರಲ್ಲೂ ಸಲ್ಮಾನ್ ಖಾನ್ ಸೇರಿದಂತೆ ಖ್ಯಾತನಾಮರು ಈ ರೀತಿಯ ಪ್ರಕರಣಗಳಲ್ಲಿ ಸಿಲುಕಿರುವುದು ಸಾಕಷ್ಟು ಸುದ್ದಿಯಾಗಿದೆ. ಇದು ಅವರಿಗೆ ಗೊತ್ತಿಲ್ಲದೇ ಇರುವುದು ಸಾಧ್ಯವಿಲ್ಲ.

ಎಲ್ಲ ಗೊತ್ತಿದ್ದೂ ಕೇವಲ ಮೋಜಿನ ಉದ್ದೇಶದಿಂದ ವನ್ಯಜೀವಿಗಳನ್ನು ಕೊಂದಿದ್ದಾರೆ. ಇದು ಅಪರಾಧ ಎಂಬುದು ಗೊತ್ತಿಲ್ಲದೇ ಇದ್ದಿದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ತಡೆದಾಗ, ಒಬ್ಬ ವಾಹನದಿಂದ ಇಳಿದು ಓಡಿ ಹೋಗುತ್ತಿರಲಿಲ್ಲ. ಕಾಡು ಪ್ರಾಣಿಗಳನ್ನು ಕೊಲ್ಲುವುದು ತಪ್ಪು ಎಂಬುದು ಗೊತ್ತಿದ್ದೂ, ಅವುಗಳನ್ನು ಕೊಂದಿರುವುದರಿಂದ ಕನಿಕರ ತೋರುವ ಅಗತ್ಯ ಖಂಡಿತ ಇಲ್ಲ. ಎಲ್ಲ ತಿಳಿದೂ ಮಾಡಿರುವ ತಪ್ಪಿಗೆ ಕ್ಷಮೆ ನೀಡುವ ಅಗತ್ಯವೇನಿದೆ? ಸಾಮಾನ್ಯ ಕಾಯಿದೆಯಲ್ಲಿ ಕೊಲೆ ಹಾಗೂ ಕೊಲೆ ಯತ್ನಕ್ಕೆ ಬೇರೆ ಬೇರೆ ಕಲಂ ಹಾಗೂ ಶಿಕ್ಷೆಯ ಪ್ರಮಾಣಗಳಿವೆ.

ಆದರೆ ವನ್ಯಜೀವಿ ರಕ್ಷಣೆಗೆಂದು ರೂಪಿಸಿದ ಕಾನೂನಿನಲ್ಲಿ ಬೇಟೆ ಮತ್ತು ಬೇಟೆಗೆ ಯತ್ನ ಎರಡೂ ಅಪರಾಧಕ್ಕೆ ಒಂದೇ ಕಲಂ ಮತ್ತು ಶಿಕ್ಷೆ ವಿಧಿಸಲಾಗಿದೆ. ಅವೆಲ್ಲಕ್ಕಿಂತ ಹೆಚ್ಚಾಗಿ ನೀವು ಕಾಡಿನ ದಾರಿಯಲ್ಲಿ ಹೋಗುವಾಗ ಯಾವುದೇ ವನ್ಯಜೀವಿಗೆ ನಿಮ್ಮ ವಾಹನ ಡಿಕ್ಕಿ ಹೊಡೆದರೆ ಅದು ಕೂಡ ಬೇಟೆಗೆ ಸಮನಾದ ಅಪರಾಧ ಎಂದು ಪರಿಗಣಿಸಲ್ಪಡುತ್ತದೆ. ಅಪಘಾತ ಆಕಸ್ಮಿಕವೇ ಆದರೂ ವನ್ಯಜೀವಿಗಳಿಗೆ ಹಾನಿಯಾದರೆ ಅಂಥ ಚಾಲಕರನ್ನು ಬಂಧಿಸಲಾಗುತ್ತದೆ.

ಹೀಗಿರುವಾಗ ಉದ್ದೇಶಪೂರ್ವಕವಾಗಿ ಎರಡು ಕಡವೆಗಳನ್ನು ಬೇಟೆಯಾಡಿದ, ವನ್ಯಜೀವಿಗಳನ್ನು ಬೇಟೆಯಾಡುವಂಥ ಮೋಜಿನ ಮನಸ್ಥಿತಿ ಹೊಂದಿರುವ ಆರೋಪಿಗಳನ್ನು ರಕ್ಷಿಸುವ ಅಗತ್ಯವೇನಿದೆ ಎಂಬ ಬಗ್ಗೆ ಸರಕಾರ ಚಿಂತನೆ ನಡೆಸಬೇಕು. ಇಂಥ ಆರೋಪಿಗಳ ರಕ್ಷಣೆಗೆ ಸರಕಾರ ಅಥವಾ ಸರಕಾರದ ಭಾಗವಾಗಿರುವ ಯಾರೇ ಮುಂದಾದರೂ ಅದು ಕೂಡ ಅಪರಾಧವಾಗುತ್ತದೆ. ಪರೋಕ್ಷವಾಗಿ ವನ್ಯಜೀವಿಗಳ ಬೇಟೆಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಇದನ್ನು ಆರೋಪಿಗಳ ರಕ್ಷಣೆಗೆ ಮುಂದಾಗುವವರೂ ಯೋಚಿಸಬೇಕು. ಮೋಜಿಗಾಗಿ ಮೂಕಪ್ರಾಣಿಗಳನ್ನು ಬಲಿ ತೆಗೆದುಕೊಂಡವರು ಕ್ಷಮೆಗೆ ಖಂಡಿತ ಅರ್ಹರಲ್ಲ.

Leave a Reply

Your email address will not be published. Required fields are marked *

4 × four =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top