About Us Advertise with us Be a Reporter E-Paper

ಅಂಕಣಗಳು

ಸಮಸ್ಯೆಯ ಮೂಲ ಯಾವುದು?

ಕೆಲವು ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಡೆದರೆ ಪಕ್ಕದ ಮನೆಯಲ್ಲಿದ್ದವರಿಗೂ ಗೊತ್ತಾಗುವುದಿಲ್ಲ. ಕಾರಣ, ಅದಕ್ಕೆ ರಾಜಕೀಯ ಸ್ಪರ್ಶವಾಗಿರುವುದಿಲ್ಲ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಗೆ ರಾಜಕೀಯ ಬೆರೆತಿದ್ದರಿಂದ ಇಡೀ ರಾಜ್ಯವೇ ಅತ್ತ ತಿರುಗಿ ನೋಡುವಂತಾಗಿತ್ತು. ಅಷ್ಟು ಮಾತ್ರವಲ್ಲ ರಾಜ್ಯ ಸರಕಾರವೇ ಪತನವಾಗುತ್ತದೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಜಾರಕೀಹೊಳಿ ಸಹೋದರರ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಗುರ ಪದಗಳಿಂದ ಮಾತನಾಡಿದ್ದರು ಎನ್ನವುದು ಒಂದು ಕಾರಣವಾದರೆ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ವಾಕ್ಸಮರಕ್ಕೂ ದಾರಿಮಾಡಿಕೊಟ್ಟಿತ್ತು. ಹೀಗೆ ಹಂತ ಹಂತವಾಗಿ ಬೇರೆ ಬೇರೆ ದಿಕ್ಕು ಪಡೆದುಕೊಂಡಿತ್ತು. ಈ ಎಲ್ಲ ಕುತೂಹಲ ಕೆರಳಿಸಿದ್ದ ಚುನಾವಣೆ ತಣ್ಣಗೆ ಮುಗಿದು ಹೋಗಿದೆ.

ಆದರೆ ರಾಜಕೀಯದಲ್ಲಿ ಯಾವ ಕಲ್ಲಿಗೆ ಯಾವ ಕಲ್ಲು ತಾಗಿ ಕಿಡಿ ಹೊತ್ತಿಕೊಳ್ಳುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಈ ಕ್ಷಣಕ್ಕೆ ತಣ್ಣಗಾಗಿದೆ. ಅಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಮಹಾದೇವ್ ಪಾಟೀಲ್, ಉಪಾಧ್ಯಕ್ಷರಾಗಿ ಬಾಬು ಸಾಹೇಬ್ ಜಮಾದಾರ್ ಅವರು ಅವಿರೋಧವಾಗಿ ಆಯ್ಕೆ ನಡೆಯುವಮೂಲಕ ಸರಕಾರ ನಿಟ್ಟುಸಿರು ಬಿಟ್ಟಿದೆ. ಈ ಗೊಂದಲಕ್ಕೆ ತೇಪೆ ಹಚ್ಚಲು ಕೆಪಿಸಿಸಿಯಿಂದ ಹಲವು ಸುತ್ತಿನ ಮಾತುಕಥೆಗಳು ನಡೆದಿದ್ದವು. ರಾಜ್ಯ ನಾಯಕರು ಬಣಗಳ ನಾಯಕರ ನಡುವೆ ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿದ್ದವು. ಆದರೆ ಚುನಾವಣೆ ಕೊನೇ ಕ್ಷಣದವರೆಗೂ ಏನಾದರೂ ನಡೆದುಬಿಡಬಹುದು ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಕೊನೆಯದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಮೇಲುಗೈ ಸಾಧಿಸಿದೆ.

ಸಂಧಾನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಬೆಳಗಾವಿಗೆ ಕಳುಹಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಲಹೆ ನೀಡಿದ್ದರು.

ಬೆಳಗಾವಿಯ ಕಾಂಗ್ರೆಸ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಇರುವುದೊಂದೆ ಕಾಂಗ್ರೆಸ್ ಬಣ ಎಂದು ರಾಜ್ಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಇವರು ಆ ಬಣ, ಅವರು ಈ ಬಣ ಎಂದು ಹೇಳುವುದಿಲ್ಲ ನಮ್ಮಲ್ಲಿ ಬಣಗಳೇ ಇಲ್ಲ ನಮ್ಮದೇನಿದ್ದರೂ ಕಾಂಗ್ರೆಸ್ ಬಣ. ಒಮ್ಮತದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದಿದ್ದಾರೆ ನಾಯಕರು. ಎಲ್ಲರೂ ಸಮಸ್ಯೆ ಇಲ್ಲ ಎಂದು ಹೇಳುತ್ತಿದ್ದರೂ ಈಗ ಆಗಿದ್ದ ಸಮಸ್ಯೆಯ ಮೂಲ ಯಾವುದು ಎನ್ನುವದೇ ಎಲ್ಲರೆದುರಿನ ಪ್ರಶ್ನೆ.

Tags

Related Articles

Leave a Reply

Your email address will not be published. Required fields are marked *

Language
Close