ಕಾಶ್ಮೀರ ಪ್ರತ್ಯೇಕ ದೇಶ ಮಾಡಿ ಏನು ಮಾಡ್ತಾರೆ?

Posted In : ಸಂಗಮ, ಸಂಪುಟ

ನವೆಂಬರ್ 23ರಂದು ‘ಕಾಶ್ಮೀರ ಮತ್ತೆ ಸ್ವರ್ಗದತ್ತ’ ಎಂಬ ಉದ್ದೇಶದೊಂದಿಗೆ ಸಮಾವೇಶವೊಂದನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಆಯೋಜಿಸಿದ್ದರು. ಶ್ರೀ ಶ್ರೀ ರವಿಶಂಕರ್ ಅವರು 2011ರಿಂದಲೂ ಕಾಶ್ಮೀರದೊಂದಿಗೆ ಸಂಪರ್ಕ ಹೊಂದಿದ್ದಾರೆ. ಸೈನಿಕರು, ಕಾಶ್ಮೀರದ ಜನ, ಪ್ರತ್ಯೇಕತಾವಾದಿಗಳು ಹೀಗೆ ವಿವಿಧ ವರ್ಗದ ಜನರ ಜತೆ ಮಾತುಕತೆಯನ್ನೂ ನಡೆಸಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತಾಗಬೇಕು ಹಾಗೂ ಅಲ್ಲಿನ ಬಹುಸಂಖ್ಯಾತ ಜನರ ಭಾವನೆಗಳಿಗೆ ಬೆಲೆ ಸಿಗಬೇಕು ಎಂಬ ಕಾರಣಕ್ಕೆ ಕಾಶ್ಮೀರದ ಸಮಸ್ಯೆಯನ್ನು ಮಾತುಕತೆ, ಚರ್ಚೆ ಮೂಲಕ ಬಗೆಹರಿಸುವ ಯತ್ನಕ್ಕೆ ಮುಂದಾಗಿದ್ದಾರೆ. ನಮ್ಮ ದೇಶದ ವ್ಯವಸ್ಥೆ, ಸರಕಾರಗಳ ಮೇಲೆ ಅಲ್ಲಿನ ಜನರಿಗೆ ವಿಶ್ವಾಸ ಮೂಡಬೇಕು. ಅಂದಾಗ ಮಾತ್ರ ಕಾಶ್ಮೀರದಲ್ಲಿ ಶಾಂತಿ ನೆಲೆಸುವುದು ಸಾಧ್ಯ. ದೇಶದ ಮುಖ್ಯವಾಹಿನಿಗೆ ಕಾಶ್ಮೀರ ಹಾಗೂ ಕಾಶ್ಮೀರಿಗಳು ಸೇರಬೇಕು. ಆ ಮೂಲಕ ಸಮಗ್ರ ಅಭಿವೃದ್ಧಿಯಲ್ಲಿ ಅವರೂ ಭಾಗೀದಾರರಾಗಬೇಕು ಎಂಬುದು ಅವರ ಗುರಿ. ಆ ನಿಟ್ಟಿನಲ್ಲಿ ಪ್ರಯತ್ನದಲ್ಲಿ ತೊಡಗಿದ್ದಾರೆ. ಕೊಲಂಬಿಯಾದಲ್ಲಿ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಹೋಗುವ ಮೊದಲು ಅವರು ‘ವಿಶ್ವವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

 • ಹಾಗಿದ್ದರೆ ಅಷ್ಟೆಲ್ಲ ಯುವಕರು ಕಲ್ಲು ತೂರಾಟದಲ್ಲಿ ತೊಡಗುವುದೇಕೆ?
  ಸಾಮಾನ್ಯ ಜನರನ್ನು ಕೆಲವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಬಂದ್‌ಗಳಲ್ಲಿ ಭಾಗವಹಿಸುವಂತೆ ಬೆದರಿಸುತ್ತಾರೆ. ಭಾಗವಹಿಸದವರಿಗೆ ಕಿರುಕುಳ ನೀಡುತ್ತಾರೆ. ಕೆಲವೊಮ್ಮೆ ಘರ್ಷಣೆಗಳಿಂದಾಗಿ ಪರಿಸ್ಥಿತಿಯ ಅನಿವಾರ್ಯಕ್ಕೆ ಸಿಕ್ಕು ಗಲಾಟೆಗಳಾಗುವುದೂ ಇದೆ. ಆದರೆ ಈ ಸಂಘರ್ಷವನ್ನೇ ಸಂಪನ್ಮೂಲವಾಗಿ ಕೆಲವು ಬಳಸುತ್ತಿದ್ದಾರೆ. ಅದರಿಂದಲೇ ಸಂಪಾದಿಸ್ತಾ ಇದಾರೆ. ಸಮಸ್ಯೆ ಪರಿಹಾರವಾಗಲು ಅವರು ಬಿಡುವುದಿಲ್ಲ. ನಿರುದ್ಯೋಗವೂ ಇದಕ್ಕೆ ಒಂದು ಕಾರಣ ಎನ್ನಲಾಗುತ್ತದೆ. ಆದರೆ ಹಿಂಸೆ ಸಿಗದೆ ಕೆಲಸ ಸಿಗದು, ಕೆಲಸ ಸಿಗದೆ ಹಿಂಸೆ ನಿಲ್ಲದು ಎಂಬಂತಾಗಿದೆ. ಹೀಗೇ ಮುಂದುವರಿದರೆ ಸಮಸ್ಯೆ ಪರಿಹಾರವಾಗದು.
 • ನಿಮ್ಮ ಪ್ರಕಾರ ಕಾಶ್ಮೀರದ ಸಮಸ್ಯೆಗೆ ಪರಿಹಾರವೇನು?
  ಮಾತುಕತೆಯೇ ಪರಿಹಾರ. ಗಲಾಟೆ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಪ್ರದೇಶದಲ್ಲಿ ಶಿಕ್ಷಣ, ಆರ್ಥಿಕ ಅಭಿವೃದ್ಧಿ ನಡೆಯದಿದ್ದರೆ ಉದ್ಯೋಗ ಎಲ್ಲಿಂದ ಸಿಗುತ್ತದೆ? ಎಲ್ಲರೂ ಸ್ವಾತಂತ್ರ್ಯ ಬಯಸುವುದು, ನಾವು ಸ್ವಾತಂತ್ರ್ಯ ಬಯಸಿದ್ದು ಆರ್ಥಿಕ ಸಮೃದ್ಧಿಗಾಗಿ. ಆದರೆ ಗದ್ದಲ, ಹಿಂಸಾಚಾರದಿಂದ ಆರ್ಥಿಕ ಪ್ರಗತಿ ಸಾಧ್ಯವಿಲ್ಲ. ಒಗ್ಗಟ್ಟಿನಿಂದ ಅಭಿವೃದ್ಧಿ ಸಾಧ್ಯವಿದೆ. ಯುರೋಪ್‌ನಲ್ಲಿ 48 ದೇಶಗಳು ಆರ್ಥಿಕ ಅಭಿವೃದ್ಧಿಗಾಗಿ ಒಂದಾಗಿವೆ. ಒಟ್ಟಾಗುವುದೇ ಅಭ್ಯುದಯಕ್ಕೆ ದಾರಿ ಎಂಬುದನ್ನು ಅವರು ಅರಿತಿದ್ದಾರೆ. ನಾವಿನ್ನೂ ಪ್ರತ್ಯೇಕತೆಯ ಹಾದಿಯಲ್ಲಿದ್ದೇವೆ. ಕಾಶ್ಮೀರ ಪ್ರತ್ಯೇಕ ದೇಶ ಮಾಡಿ ಏನು ಮಾಡುತ್ತಾರೆ? ಸಂಬಳ ಕೊಡಲೂ ದುಡ್ಡು ಇರಲ್ಲ. ದೇಶದ ಜತೆಗೆ ಒಂದಾಗಿ ನಡೆದರೆ ಮಾತ್ರ ಒಳ್ಳೆಯದು. ಇದನ್ನು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡಬೇಕು. ಅದರಿಂದ ಅವರಿಗೆ ಹಾಗೂ ದೇಶಕ್ಕೆ ಒಳ್ಳೆಯದು.
 • ಕಾಶ್ಮೀರ ಸಮಸ್ಯೆಗೆ ರಾಜಕೀಯ ಎಷ್ಟರ ಮಟ್ಟಿಗೆ ಕಾರಣ?
  ಕೆಲವು ಸಮಸ್ಯೆಗಳನ್ನು ರಾಜಕೀಯ ಬಿಟ್ಟು ನೋಡ ಬೇಕು. ಸಮಸ್ಯೆಗೆ ರಾಜಕೀಯವೂ ಕಾರಣವಿರಬಹುದು. ಆದರೆ ರಾಜಕೀಯವೇ ಕಾರಣ ಎಂದು ದೂರುವುದರಿಂದ ಪರಿಹಾರ ಸಿಗುವುದಿಲ್ಲ. ಬದಲಾಗಿ ಇನ್ನಷ್ಟು ಜಟಿಲವೂ ಆಗಬಹುದು. ಆದ್ದರಿಂದ ರಾಜಕೀಯ ಬಿಟ್ಟು ಈ ಸಮಸ್ಯೆ ನೋಡಲು ಬಯಸುತ್ತೇವೆ. ಜನರ, ದೇಶದ ಹಿತ ಮತ್ತು ಉನ್ನತಿಗಾಗಿ ವಿಶಾಲ ಮನಸ್ಸಿನಿಂದ ಸಮಸ್ಯೆಯನ್ನು ನೋಡಿದಾಗ ಪರಿಹಾರ ಸಿಗಲು ಸಾಧ್ಯ. ರಾಜಕೀಯ ಪಕ್ಷಗಳೂ ಇದನ್ನು ಅರ್ಥಮಾಡಿಕೊಂಡು ಇದಕ್ಕೆ ಸಹಕರಿಸುತ್ತವೆ ಎಂಬ ನಂಬಿಕೆಯಿದೆ.
 • ಈಗ ಕಾಶ್ಮೀರದಲ್ಲಿ ಮಾತುಕತೆ ನಡೆಸಬೇಕು ಅನ್ನಿಸಲು ಕಾರಣ?
  ಜನರಲ್ಲಿ ಆಳುವವರ ಬಗ್ಗೆ, ಭವಿಷ್ಯದ ಬಗ್ಗೆ ಅವಿಶ್ವಾಸವಿದೆ. ನಮ್ಮನ್ನು ಕಾಯುವ ಸೈನಿಕರನ್ನೇ ವಿರೋಧಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಇಷ್ಟೆಲ್ಲ ಸಮಸ್ಯೆ ಆಗುತ್ತಿದೆ. ವಿಶ್ವಾಸ ಇರುವವರು, ವಿಶ್ವಾಸ ಮೂಡುವ ರೀತಿಯಲ್ಲಿ ಹೇಳಿದಾಗ ಜನ ಖಂಡಿತ ಸ್ಪಂದಿಸುತ್ತಾರೆ. ಹರತಾಳ, ಹಿಂಸೆ, ಕರ್ಫ್ಯೂಗಳ ನಡುವೆ ಸಿಕ್ಕು ಜನ ಹೈರಾಣಾಗಿದ್ದಾರೆ. ಅದರಿಂದ ಅವರಿಗೆ ಬಿಡುಗಡೆ ಬೇಕಿದೆ. ಹೀಗಾಗಿ ಮಾತುಕತೆ ಮೂಲಕ ಶಾಂತಿ ಸ್ಥಾಪಿಸಲು ಇದು ಸಕಾಲ.
  ನಾನು ಸೌತ್ ಏಷ್ಯಾ ಫೋರಂ ಫಾರ್ ಪೀಸ್ ಮೂಲಕ ಚರ್ಚೆಗೆ ಆಹ್ವಾನಿಸಿದಾಗ ಅಷ್ಟೆಲ್ಲ ಜನ ಬರಲು ಕಾರಣ, ನಾನು ರಾಜಕೀಯೇತರ ವ್ಯಕ್ತಿ. ಕಾಶ್ಮೀರದ ಬಗ್ಗೆ ನನಗೆ ಯಾವುದೇ ಪೂರ್ವಗೃಹವಿಲ್ಲ. ಅಲ್ಲಿನ ನನಗೆ ಹಿತಾಸಕ್ತಿ ಗಳೂ ಇಲ್ಲ. ಕಾಶ್ಮೀರದ ಜನ ಹಾಗೂ ದೇಶ ಬಗೆಗಿನ ಕಾಳಜಿ ಯಿಂದ ಅಲ್ಲಿ ಶಾಂತಿ ಸ್ಥಾಪಿಸುವ ಕೆಲಸಕ್ಕೆ ಮುಂದಾಗಿದ್ದೇನೆ. ಪೂರ್ವಗೃಹವಿಲ್ಲದ ವಿಶಾಲ ಮನಸ್ಸಿನಿಂದ ಸಮಸ್ಯೆಯನ್ನು ನೋಡಿದಾದ ಪರಿಹಾರ ಸಾಧ್ಯ.
 • ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಿದ್ದೇ ಸಮಸ್ಯೆಗೆ ಕಾರಣವೇ?
  ಇರಬಹುದು. ಇಲ್ಲದೆಯೂ ಇರಬಹುದು. ಹಲವು ಕಾರಣಗಳಲ್ಲಿ ಅದೂ ಒಂದು ಕಾರಣವಾಗಿರಲೂಬಹುದು. ವಿಶೇಷ ಸ್ಥಾನಮಾನ, ಅನುದಾಣ ನೀಡದಿದ್ದರೂ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇತ್ತು. ಆದ್ದರಿಂದ ಏನು ಕಾರಣ ಎಂಬ ಬಗ್ಗೆ ಚಿಂತನೆ ನಡೆಯಬೇಕು. ಅದರ ಬಗ್ಗೆ ಹಲವಾರು ಅಭಿಪ್ರಾಯಗಳು ಬರಬಹುದು. ಎಲ್ಲ ಅಭಿಪ್ರಾಯಗಳನ್ನು ಒಟ್ಟುಗೂಡಿಸಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರ ನಂತರ ಸಮಸ್ಯೆ ನಿವಾರಣೆಯ ಕುರಿತೂ ಚರ್ಚಿಸಬೇಕು. ಎಲ್ಲರಿಗೂ ಈ ಪ್ರಕ್ರಿಯೆ ಬಗ್ಗೆ ವಿಶ್ವಾಸ ಮೂಡಿದಾಗ ಸಹಜವಾಗಿ ಕೆಲಸ ಇನ್ನಷ್ಟು ಸುಲಭವಾಗುತ್ತದೆ. ಚರ್ಚೆಯ ಸಂದರ್ಭದಲ್ಲಿ ನಾವೆಷ್ಟು ತೆರೆದ ಮನಸ್ಸು ಹೊಂದಿದ್ದೇವೆ ಎಂಬುದೂ ಮುಖ್ಯವಾಗುತ್ತದೆ.
 • ಸಮಸ್ಯೆಗೆ ಬುದ್ದಿಜೀವಿಗಳೂ ಕಾರಣವಲ್ಲವೇ?
  ಬುದ್ಧಿಜೀವಿಗಳು ಸಮಸ್ಯೆಗೆ ಎಷ್ಟು ಕಾರಣವೋ ಅಷ್ಟೇ ಸಮಸ್ಯೆ ಇತ್ಯರ್ಥಪಡಿಸಲೂ ಕಾರಣವಾಗಬಲ್ಲರು. ಅದಕ್ಕಾಗಿಯೇ ಸೌತ್ ಏಷ್ಯಾ ಫೋರಂ ಫಾರ್ ಪೀಸ್ ಸ್ಥಾಪಿಸಿರುವುದು. ಅವರಿಗೆಲ್ಲ ಒಂದು ವೇದಿಕೆ ಒದಗಿಸುತ್ತಿರುವುದು. ಆದರೆ ಇಲ್ಲಿ ಕಾಶ್ಮೀರದ ಜನತೆಯ ಭಾವನೆಗಳಿಗೆ, ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಒಂದು ಸಮೀತ ವರ್ಗಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುವುದಿಲ್ಲ. ಬುದ್ಧಿ ಜೀವಿಗಳ ಪಾತ್ರ ಮಹತ್ವದ್ದು ಎಂಬುದನ್ನು ಮರೆಯಬಾರದು. ಹಾಗಂತ ಅವರ ಮಾತಿಗೇ ಸಂಪೂರ್ಣ ಮಹತ್ವ ನೀಡುವುದೂ ಸರಿಯಲ್ಲ. ಆದರೆ ಶಾಂತಿ ಸ್ಥಾಪನೆಯಲ್ಲಿ ಅವರ ಜವಾಬ್ದಾರಿ ದೊಡ್ಡದು ಎಂಬುದನ್ನು ಬುದ್ಧಿಜೀವಿಗಳು ಮರೆಯಬಾರದು.
 • ಕಾಶ್ಮೀರಕ್ಕಾಗಿ ಆರ್ಟ್ ಆಫ್ ಲಿವಿಂಗ್ ಏನು ಮಾಡುತ್ತಿದೆ?
  ಇತ್ತೀಚೆಗೆ ಬೆಂಕಿ ಹಚ್ಚಿ ನಾಶಮಾಡಲಾದ ಶಾಲೆಗಳನ್ನು ಪುನರ್‌ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕೌಶಲ ಅಭಿವೃದ್ಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ ಏಳು ವರ್ಷ ಹುಡುಗ ಹಾಗೂ ಹುಡುಗಿಯರಿಗಾಗಿ ಪ್ರತ್ಯೇಕ ಅನಾಥಾಲಯ ನಡೆಸಿದ್ದೇವೆ. 300ಕ್ಕೂ ಹೆಚ್ಚು ಮಕ್ಕಳಿದ್ದರು. ಎರಡೂವರೆ ವರ್ಷದ ಹಿಂದೆ ಈ ಅನಾಥಾಲಯಗಳಲ್ಲಿ ಕೆಲವರು ಬಂದು ಗಲಾಟೆ ಮಾಡಿ, ಅದನ್ನು ಮುಚ್ಚಿಸಿದ್ದಾರೆ. ಆದರೆ ಅದರಿಂದ ಆರ್ಟ್ ಆಫ್ ಲಿವಿಂಗ್‌ನ ಆಸಕ್ತಿ ಕುಂದಿಸುವುದು ಅವರಿಂದ ಸಾಧ್ಯವಿಲ್ಲ. ಬೇರೆ ಬೇರೆ ರೀತಿಯಲ್ಲಿ ಕಾಶ್ಮೀರದ ಜನರಿಗೆ ಸಹಾಯ ಆಗುವಂತಹ ಕೆಲಸ ಮಾಡಲು ಆರ್ಟ್ ಆಫ್ ಲಿವಿಂಗ್ ಸದಾ ಶ್ರಮಿಸುತ್ತದೆ.
 • ಕಾರ್ಯಕ್ರಮದಿಂದ ಹಾಗೂ ಇಷ್ಟು ವರ್ಷದ ಕಾಶ್ಮೀರದ ಒಡನಾಟದಿಂದ ನೀವು ಕಂಡುಕೊಂಡಿದ್ದೇನು?
  2001ರಿಂದಲೂ ನಾನು ಕಾಶ್ಮೀರದೊಂದಿಗೆ ಸಂಬಂಧ ಹೊಂದಿದ್ದೇನೆ. ಆರ್ಟ್ ಆಫ್ ಲಿವಿಂಗ್‌ನಿಂದ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ. ಆಗಿನಿಂದಲೂ ಸಾಕಷ್ಟು ಜನರನ್ನು ಭೇಟಿ ಮಾಡಿದ್ದೇನೆ. ಇತ್ತೀಚೆಗೆ ಮೃತಪಟ್ಟ ಬುರ್ಹಾನ್ ವನಿ ತಂದೆ ಮುಜಪ್ಫರ್ ಅಹ್ಮದ್ ವನಿ ಕೂಡ ನನ್ನನ್ನು ಭೇಟಿ ಮಾಡಿದ್ದರು. ಎಲ್ಲರೂ ಹೇಳುವ ಏಕೈಕ ಅಭಿಪ್ರಾಯವೆಂದರೆ ‘ಉಗ್ರಗಾಮಿಗಳಿಂದ ನಮಗೆ ಸಾಕು ಸಾಕಾಗಿದೆ’ ಎಂದು. ಆದರೆ ಅವರ ಅಳಲೆಂದರೆ ಅವರ ಮಾತನ್ನು ಯಾರೂ ಕೇಳುತ್ತಿಲ್ಲ. ಅವರ ಅಭಿಪ್ರಾಯಕ್ಕೆ ಬೆಲೆ ಅಥವಾ ಮಹತ್ವ ಇಲ್ಲದಂತಾಗಿದೆ. ಬಂದೂಕು ಹಿಡಿದು ಓಡಾಡುವ ಕೆಲವೇ ಜನರ ಮಾತಿಗೆ, ಕಾಶ್ಮೀರದ ಸಾತಂತ್ರ್ಯಕ್ಕಾಗಿ ಒತ್ತಾಯಿಸುವವರಿಗೆ ಬೆಲೆ ಸಿಗುತ್ತಿದೆ. ಅವರ ಮಾತಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳ ಮಾತನ್ನೇ ಕಾಶ್ಮೀರದ ಅಭಿಪ್ರಾಯ ಎಂಬಂತೆ ಬಿಂಬಿಸಲಾಗುತ್ತದೆ. ಸಾಮಾನ್ಯ ಜನರ ಅಭಿಪ್ರಾಯ ಏನಿದೆ? ಅವರ ಭಾವನೆಗಳೇನು ಎಂಬುದನ್ನು ಯಾರೂ ಗಮನಿಸುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

-ಸಂದರ್ಶನ: ವಿನಾಯಕ ಭಟ್ಟ ಮೂರೂರು

Leave a Reply

Your email address will not be published. Required fields are marked *

3 − one =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 24.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ನವಮಿ, ಮಂಗಳವಾರ, ನಿತ್ಯನಕ್ಷತ್ರ-ಆಶ್ಲೇಷ, ಯೋಗ-ಗಂಡ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top