About Us Advertise with us Be a Reporter E-Paper

ಅಂಕಣಗಳು

ಸಮುದ್ರದಲ್ಲಿ ಸಾಯುವುದು ಲೇಸೋ? ಹಡಗಿನಲ್ಲಿ ಹೊಯ್ದಾಡುವುದು ಲೇಸೋ?

ಎಸ್.ಷಡಕ್ಷರಿ

ಯಾವುದು ಲೇಸು? ತೀರ್ಮಾನಿಸುವುದಕ್ಕಿಂತ ಮುಂಚೆ ಇಲ್ಲಿರುವ ಸೂಫೀ ಓದಿನೋಡಿ! ವಿನೋದದ, ತತ್ವದ ಮಿಶ್ರಣ ಇಲ್ಲಿದೆ. ಒಬ್ಬ ಸುಲ್ತಾನರು ತನ್ನ ಆಸ್ಥಾನಿಕರೊಂದಿಗೆ ಹಡಗಿನಲ್ಲಿ ವಿಹಾರ ಹೊರಟರಂತೆ. ಆಸ್ಥಾನಿಕರಲ್ಲಿ ಒಬ್ಬಾತನಿಗೆ ಅದು ಮೊಟ್ಟಮೊದಲ ಸಮುದ್ರಯಾನ, ಸುತ್ತಲೂ ಅಪರಿಮಿತವಾದ ನೀರು. ಹಡಗು ಸಮುದ್ರದ ನೀರಿನಲ್ಲಿ ತೇಲಾಡುತ್ತಿತ್ತು. ಅತ್ತಿತ್ತ ಹೊಯ್ದಾಡುತ್ತಿತ್ತು. ಹೊಯ್ದಾಡುವ ಹಡಗು ಮುಳುಗುತ್ತದೇನೋ ಎಂದು ಭಯವಾಯಿತು. ಆತ ಪ್ರಾಣಭಯದಿಂದ ಕಿರುಚತೊಡಗಿದ. ಇತರರು ಆತನನ್ನು ಸಮಾಧಾನಗೊಳಿಸಲು ಯತ್ನಿಸಿದರು. ಧೈರ್ಯ ಹೇಳಿದರು. ಯಾರೇನು ಮಾಡಿದರೂ ಆತನ ಕಿರುಚಾಟ ನಿಲ್ಲಲಿಲ್ಲ. ಹೆಚ್ಚಾಗುತ್ತಲೇ ಹೋಯಿತು. ಅದು ಸುಲ್ತಾನರ ಬಿತ್ತು. ಸುಲ್ತಾನರಿಗೆ ಸಿಟ್ಟು ಬಂತು. ಆತ ತನ್ನ ಮಂತ್ರಿಯನ್ನು ಕರೆದು ಇವನ ಕಿರುಚಾಟ ವಿಹಾರದ ಆನಂದವನ್ನೇ ಹಾಳುಮಾಡುತ್ತಿದೆ. ಅದನ್ನು ಹೇಗಾದರೂ ನಿಲ್ಲಿಸಿ ಎಂದು ಆಜ್ಞಾಪಿಸಿದರು.

ಮಂತ್ರಿ ತಾವು ಅನುಮತಿ ಕೊಟ್ಟರೆ ನಾನೊಂದು ಪ್ರಯೋಗ ಮಾಡುತ್ತೇನೆ ಎಂದು ಕೇಳಿಕೊಂಡರು. ಅವನ ಕಿರುಚಾಟ ನಿಂತರೆ ಸಾಕೆಂದುಕೊಳ್ಳುತ್ತಿದ್ದ ಸುಲ್ತಾನರು ತಕ್ಷಣ ಒಪ್ಪಿಗೆಯನ್ನಿತ್ತರು. ಮಂತ್ರಿ ರಾಜಭಟರನ್ನು ಕರೆದು ಹೊಸಬನನ್ನು ಸಮುದ್ರಕ್ಕೆ ಎಸೆಯುವಂತೆ ಹೇಳಿದರು. ರಾಜಭಟರು ಕಿರುಚಾಡುತ್ತಿದ್ದ ಅವನನ್ನು ಅನಾಮತ್ತಾಗಿ ಎತ್ತಿ ಸಮುದ್ರಕ್ಕೆಸೆದರು. ಸಮುದ್ರದ ನೀರಿನಲ್ಲಿ ಬಿದ್ದ. ಆತ ಇನ್ನೂ ಗಾಬರಿಗೊಂಡ. ಉಪ್ಪುನೀರು ಕುಡಿಯುತ್ತಾ, ಉಸಿರಾಡಲೂ ಒದ್ದಾಡುತ್ತಾ, ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಇದ್ದ.

ಹೇಗೋ ಏನೋ ಮಾಡಿ ಹಡಗಿನ ಒಂದು ಗೋಡೆಯನ್ನು ಆಸೆಯಾಗಿ ಹಿಡಿದುಕೊಂಡು ‘ಇನ್ನು ಕಿರುಚುವುದಿಲ್ಲ, ನನ್ನನ್ನು ಕಾಪಾಡಿ, ನನ್ನನ್ನು ಮೇಲಕ್ಕೆತ್ತಿಕೊಳ್ಳಿ’ ಎಂದು ಗೋಗರೆದ. ಮಂತ್ರಿಯ ಅನುಮತಿ ಪಡೆದು ರಾಜಭಟರು ಆತನನ್ನು ಮೇಲಕ್ಕೆತ್ತಿಕೊಂಡರು. ಹಡಗಿನೊಳಕ್ಕೆ ಬಂದ ಆತ ಒಂದು ಮೂಲೆಯಲ್ಲಿ ಗಂಭೀರವಾಗಿ ಕುಳಿತ. ಕೂಗಾಟವಿಲ್ಲ, ಕಿರುಚಾಟವಿಲ್ಲ. ಆಶ್ಚರ್ಯಗೊಂಡ ಸುಲ್ತಾನರು ಮಂತ್ರಿಯನ್ನು ನೀವು ಆತನನ್ನು ಸಮುದ್ರಕ್ಕೆ ಈಗ ಆತ ಸುಮ್ಮನೆ ಕುಳಿತಿರುವುದೇಕೆ? ಎಂದು ಪ್ರಶ್ನಿಸಿದರು. ಮಂತ್ರಿ ಆತ ಹಡಗಿನಲ್ಲಿ ಪ್ರಯಾಣ ಮಾಡುತ್ತಿರುವುದು ಮೊದಲನೆಯ ಬಾರಿ. ಹಡಗಿನ ಹೊಯ್ದಾಟ ಆತನಿಗೆ ಗಾಬರಿಯುಂಟು ಮಾಡಿತ್ತು. ತನಗೆ ಏನೋ ದೊಡ್ಡ ಕಷ್ಟ ಬಂದೊದಗಿದೆಯೆಂದು ಆತ ಭಾವಿಸಿದ. ಸಮುದ್ರಕ್ಕೆಸೆದಾಗ ಆತ ನೀರಿನಲ್ಲಿ ಬಿದ್ದ. ಉಪ್ಪುನೀರು ಕುಡಿದ. ಉಸಿರಾಟಕ್ಕೂ ಒದ್ದಾಡಿದ. ಹಡಗಿನಲ್ಲಿ ಹೊಯ್ದಾಟವಿತ್ತಾದರೂ ಉಸಿರಾಟಕ್ಕೆ ಪರದಾಟವಿರಲಿಲ್ಲ. ಮುಳುಗಿಹೋಗುವ ತಳಮಳವಿರಲಿಲ್ಲ. ಸಮುದ್ರದ ನೀರಿನಲ್ಲಿ ಬಿದ್ದು ಸಾಯುವುದಕ್ಕಿಂತ ಹಡಗಿನಲ್ಲಿದ್ದು ಹೊಯ್ದಾಡುತ್ತಿರುವುದೆಷ್ಟೋ ಒಳ್ಳೆಯದು ಎಂದು ಆತನಿಗೆ ಅನಿಸಿರಬೇಕು. ಸುಮ್ಮನೆ ಕುಳಿತಿದ್ದಾನೆ ಎಂದರು. ಮಂತ್ರಿಯ ಮಾತಿನಲ್ಲಿಯ ಸತ್ಯವನ್ನು ಅರ್ಥ ಮಾಡಿಕೊಂಡ ಸುಲ್ತಾನರು ಮೆಚ್ಚಿ ತಲೆದೂಗಿದರು.

ನಮ್ಮ ಬದುಕಿನಲ್ಲಿ ಯಾವಾಗಲಾದರೊಮ್ಮೆ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ಬೇರೆಯವರೆಲ್ಲ ಸುಖವಾಗಿದ್ದಾರೆ. ಅವರಿಗೆ ಕಷ್ಟಗಳೇ ಇಲ್ಲ. ಇದ್ದರೂ ಅವು ಸಣ್ಣಪುಟ್ಟ ಕಷ್ಟಗಳು. ನಮಗೆ ಬಂದೊದಗಿರುವ ಕಷ್ಟ ಬಹಳ ದೊಡ್ಡದು. ನಮ್ಮ ಅದೃಷ್ಟ ಸರಿಯಿಲ್ಲ. ದೇವರಿಗೆ ಕರುಣೆಯಿಲ್ಲ. ನಾವು ಇಲ್ಲಿಯೇ ಒದ್ದಾಡುತ್ತಿದ್ದೇವೆ ಎಂದೆಲ್ಲ ಯೋಚಿಸುವುದು ಸಹಜ. ಆದರೆ ನಮಗಿಂತ ಕಷ್ಟದಲ್ಲಿರುವರೊಂದಿಗೆ ಹೋಲಿಸಿಕೊಂಡು ಸಮಾಧಾನ ಮಾಡಿಕೊಳ್ಳುವುದು ಈ ಕಷ್ಟದಿಂದ ಬಗ್ಗೆ ಯೋಚಿಸುವುದು ಉಚಿವಲ್ಲವೇ? ಸಮುದ್ರಕ್ಕೆ ಬಿದ್ದು ಒದ್ದಾಡುತ್ತಾ ಸಾಯುವುದು ಲೇಸೋ? ಅಥವಾ ಹಡಗಿನಲ್ಲಿ ಹೊಯ್ದಾಡುತ್ತಾ ಸಾಗುವುದು ಲೇಸೋ? ಹಡಗಿನಲ್ಲಿ ಹೊಯ್ದಾಡುವುದು ಕೊಂಚ ಸಮಯದ ನಂತರ ರೂಢಿಯಾಗಿ ಬಿಡುತ್ತದೆ! ಬದುಕಿನಲ್ಲೂ ಅಷ್ಟೇ! ಕಷ್ಟಗಳು ಕೊಂಚ ಸಮಯದ ನಂತರ ರೂಢಿಯಾಗಿ ಬಿಡುತ್ತವೆ! ಹೌದಲ್ಲವೇ? ಮುಂಜಾನೆ ನನ್ನ ಕಾಲಿಗೆ ಪಾದರಕ್ಷೆಗಳನ್ನು ಕೊಡದ ದೇವರನ್ನು ನಾನು ಶಪಿಸಿದೆ! ಸಂಜೆ ರಸ್ತೆಯಲ್ಲಿ ಕಾಲೇ ಇಲ್ಲದವನನ್ನು ಕಂಡಾಗ, ಆ ದೇವರಿಗೆ ನಾನು ನಮಿಸಿದೆ!

Tags

Related Articles

Leave a Reply

Your email address will not be published. Required fields are marked *

Language
Close