About Us Advertise with us Be a Reporter E-Paper

ಅಂಕಣಗಳು

ಹೆಣ್ಣಿನ ಮಿದುಳಿಗೂ, ಗಂಡಿನ ಮಿದುಳಿಗೂ ವ್ಯತ್ಯಾಸವುಂಟೇ?

ಅದೂ ಒಂದು ಪ್ರಶ್ನೆಯೇ? ಮಿದುಳು  ತಾನೆ ವ್ಯತ್ಯಾಸದ ಮಾತು? ಎನ್ನಬಹುದು, ನಾಲಗೆಯನ್ನು ಗಟ್ಟಿಯಾಗಿ ಗಲ್ಲದೊಳಕ್ಕೆ ತೂರಿಸುತ್ತ ಕೆಲವರು. ಆದರೆ ಸ್ವಲ್ಪ ತಾಳಿ. ನನ್ನ ಮೇಲೆ ಸಿಟ್ಟಾಗುವ ಮುನ್ನ ದಯವಿಟ್ಟು ಗಮನಿಸಿ. ನಾನಂತೂ ಲಿಂಗಭೇದ ಮಾಡಿಲ್ಲ, ಯಾರಿಗೆ ಮಿದುಳಿದೆ ಯಾರಿಗೆ ಮಿದುಳಿಲ್ಲ ಅಂತೆಲ್ಲ ಹೇಳಿಲ್ಲ. ಮನುಷ್ಯನ ಮಿದುಳಿನ ಬಗೆಗಿನ ಕೆಲವು ಮಿಥ್ಯೆಗಳನ್ನು, ನಿಜ ಸಂಗತಿಗಳಲ್ಲಿನ ಸೋಜಿಗಗಳನ್ನು ಈ ವಾರದ ಅಂಕಣಕ್ಕೆ ಸಾಮಗ್ರಿಯಾಗಿ ಎತ್ತಿಕೊಂಡಾಗ, ಸ್ವಲ್ಪ ಲೈಟಾಗಿ ತಿವಿಯುವಂಥ, ಅಲ್ಪಸ್ವಲ್ಪ ಕೆರಳಿಸುವಂಥ ಶೀರ್ಷಿಕೆ ಮತ್ತು ಪೀಠಿಕೆ ಇರಲಿ  ಹಾಗೆ ಬರೆದೆ. ಮುಂದೆ ಈ ಲೇಖನದಲ್ಲಿಯೇ ತಿಳಿದುಕೊಳ್ಳುವಂತೆ, ನಿಜವಾಗಿಯಾದರೆ ಹೆಣ್ಣಿನ ಮಿದುಳಿಗೂ ಗಂಡಿನ ಮಿದುಳಿಗೂ ಅಂಥದೇನೂ ವ್ಯತ್ಯಾಸ ಇಲ್ಲವೆಂದು ವಿಜ್ಞಾನಿಗಳ ಅಂಬೋಣ. ಅಷ್ಟೇ ಅಲ್ಲ, ಮಿದುಳಿನ ಬಗ್ಗೆ ಕೆಲವೆಲ್ಲ ಊಹಾಪೋಹಗಳು, ಮಿಥ್ಯೆಗಳು ಎಲ್ಲರ ಮಿದುಳನ್ನೂ ಹೊಕ್ಕು ಕುಳಿತಿವೆ. ಅವುಗಳನ್ನು ಅಲ್ಲಿಂದ ಒದ್ದೋಡಿಸಿದರೆ ಒಳ್ಳೆಯದು. ಆಗ ನಮ್ಮ ತಿಳಿವಳಿಕೆಯಾದರೂ ಸ್ವಲ್ಪ ಹೆಚ್ಚುತ್ತದೆ. ಆ ದಿಸೆಯಲ್ಲೊಂದು ಪ್ರಯತ್ನ ಇಲ್ಲಿದೆ. ಸಾಮಾನ್ಯವಾಗಿ ‘ಮಿದುಳಿಗೆ ಒಂದಿಷ್ಟು ಮೇವು’ ರೀತಿಯಲ್ಲಿ ಪ್ರಸ್ತುತಗೊಳ್ಳುವ ಅಂಕಣದಲ್ಲಿ ಈ ಬಾರಿ  ಮೇವು. ಮತ್ತೆ, ಇದು ನನ್ನ ಜ್ಞಾನಭಂಡಾರದ ಸರಕು ಅಂತಾಗಲೀ ಅನುಭವಾಮೃತ ಅಂತಾಗಲೀ ತಿಳಿದುಕೊಳ್ಳದಿರಿ! ನನಗೆ ಆಸಕ್ತಿಕರವಾಗಿ ಕಂಡುಬಂದ ಓದನ್ನು ನಿಮಗೂ ಇಷ್ಟವಾದೀತೆಂದು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ.

ಜೀವಜಗತ್ತಿನಲ್ಲಿ ಮಿದುಳಿನ ಗಾತ್ರ ದೊಡ್ಡದಿದ್ದಷ್ಟೂ ಅದು ಹೆಚ್ಚು ವಿಕಾಸ ಹೊಂದಿರುವಂಥದ್ದು, ಹೆಚ್ಚು ಕಾರ್ಯಕ್ಷಮತೆಯುಳ್ಳದ್ದು ಎನ್ನುವುದು ಮೊದಲ ಮಿಥ್ಯೆ. ಇರುವೆ, ಜೇನುನೊಣ ಮುಂತಾದ ಚಿಕ್ಕಪುಟ್ಟ ಜೀವಿಗಳ ಕಾರ್ಯಕ್ಷಮತೆಯನ್ನು ನೋಡಿದ ಮೇಲೂ ಇಂಥದೊಂದು ತಪ್ಪು ಕಲ್ಪನೆ ಅದೇಕೆ ಬಂದಿದೆಯೋ ಗೊತ್ತಿಲ್ಲ. ಬಹುಶಃ ‘ಈ ಪ್ರಪಂಚದಲ್ಲಿ  ಎಲ್ಲ ಜೀವಿಗಳಿಗಿಂತ ತಾನೇ ಬುದ್ಧಿವಂತ ಎಂಬ ಮನುಷ್ಯನ ಅಹಂನಿಂದಲೂ ಇರಬಹುದು. ಆನೆಗಳ, ತಿಮಿಂಗಿಲಗಳ ಮಿದುಳು ಮನುಷ್ಯನ ಮಿದುಳಿಗಿಂತ ಕನಿಷ್ಠ ಮೂರು-ನಾಲ್ಕು ಪಟ್ಟು ದೊಡ್ಡದಿರುತ್ತದೆ. ಹಾಗೆ ನೋಡಿದರೆ ಯಾವುದೇ ಜೀವಿಯ ಇಡೀ ಶರೀರದ ಗಾತ್ರಕ್ಕೆ ಹೋಲಿಸಿದಾಗ ಮಿದುಳಿನ ಗಾತ್ರ ಎಷ್ಟು ಪ್ರತಿಶತ ಎನ್ನುವುದು ಕೂಡ ಮಿದುಳಿನ ಶ್ರೇಷ್ಠತೆಗೆ ಅಳತೆಗೋಲು ಎನಿಸದು. ಮನುಷ್ಯನ ಇಡೀ ಶರೀರದಲ್ಲಿ ಮಿದುಳಿನ ಭಾಗ ಬರೀ ಎರಡು ಪ್ರತಿಶತ. ಟ್ರೀ ಶ್ರೂ ಎಂಬ ಜಾತಿಯ ಮರಕೋತಿಗಳಲ್ಲಿ ದೇಹದ  ಶೇಕಡಾ ಭಾಗ ಮಿದುಳೇ ಆಗಿರುತ್ತದಂತೆ. ಆ ಕೋತಿಗಳು ಆಹಾರಕ್ಕಾಗಿ ಹೂಗಿಡಗಳಿಂದ ಒಸರುವ ಕಳ್ಳಿನಂಥ ಅಮಲು ಪದಾರ್ಥವನ್ನು ಕುಡಿಯುತ್ತವೆ. ಆದರೆ ಮನುಷ್ಯನಂತೆ ಮದ್ಯಸೇವನೆಯ ಅಭ್ಯಾಸ ಬೆಳೆಸಿಕೊಂಡದ್ದಲ್ಲ. ಮನುಷ್ಯನಷ್ಟು ಚಾಣಾಕ್ಷತನವೂ ಇಲ್ಲ. ಅಂತೂ ಮಿದುಳಿನ ಗಾತ್ರಕ್ಕೂ ಕಾರ್ಯಕ್ಷಮತೆಗೂ ಏನೂ ಸಂಬಂಧವಿಲ್ಲ. ಮನುಷ್ಯನ ಮಿದುಳು ಸಹಸ್ರಾರು ವರ್ಷಗಳ ಹಿಂದೆ ಈಗಿನದಕ್ಕಿಂತ ಕಡಿಮೆ ಗಾತ್ರದ್ದಿತ್ತು, ಜೀವವಿಕಾಸವಾದಂತೆಲ್ಲ ದೊಡ್ಡದಾಗುತ್ತ ಬಂತು. ಆದರೆ ಮಿದುಳು ದೊಡ್ಡದಾಗಿರುವುದರಿಂದ ನಮಗೆ ಜಾಣ್ಮೆ ಬಂದಿದ್ದೇನಲ್ಲ. ಅದೇನಿದ್ದರೂ ಮಿದುಳಿನ ಅದ್ಭುತವೆನ್ನಬಹುದಾದ ಸಂಕೀರ್ಣತೆಯಿಂದಾಗಿ ಬಂದಿರುವುದು.  ಅತ್ಯಂತ ಸಂಕೀರ್ಣ ವ್ಯವಸ್ಥೆಯೆಂದರೆ ಮನುಷ್ಯನ ಮಿದುಳಿನಲ್ಲಿರುವ ನ್ಯೂರಾನ್‌ಗಳ ಜಾಲ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ನ್ಯೂರಾನ್ ಜಾಲದಲ್ಲಿ ಒಂದೊಕ್ಕೊಂದು ಬೆಸೆದಿರುವ ಕೋಟ್ಯಂತರ ಕನೆಕ್ಷನ್‌ಗಳು. ಬಗೆದು ನೋಡಿದರೆ ಬ್ರಹ್ಮಾಂಡವೇ ಅಲ್ಲಿ ಅಡಗಿದೆಯೇನೋ ಅಂತನಿಸಬೇಕು.

ಮಿದುಳಿಗೆ ಸಂಬಂಧಿಸಿದ ಇನ್ನೊಂದು ಮಿಥ್ಯೆಯೆಂದರೆ- ಕೆಲವರಿಗೆ ಮಿದುಳಿನ ಎಡ ಭಾಗದಲ್ಲಿ ನಿಯಂತ್ರಣ ಕೇಂದ್ರವಿದ್ದರೆ ಇನ್ನುಳಿದವರಿಗೆ ಮಿದುಳಿನ ಬಲ ಭಾಗದಲ್ಲಿ ಇರುತ್ತದೆ, ಮತ್ತು, ಈ ವ್ಯತ್ಯಾಸವು ಆಯಾ ವ್ಯಕ್ತಿಗಳ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂಬುದು. ಇದನ್ನು ವಿಜ್ಞಾನಿಗಳು ಒಪ್ಪುವುದಿಲ್ಲ. ನಾವು  ಕೆಲವು ಕೆಲಸಗಳಿಗೆ ನಮ್ಮ ಮಿದುಳಿನ ಒಂದು ಭಾಗಕ್ಕಿಂತ ಇನ್ನೊಂದು ಭಾಗ ಹೆಚ್ಚು ಬಳಕೆಯಾಗುವುದೇನೋ ಹೌದು. ಉದಾಹರಣೆಗೆ ತಾರ್ಕಿಕ ವಿಶ್ಲೇಷಣೆ, ಸಮಸ್ಯೆ ಬಿಡಿಸುವಿಕೆ ಮುಂತಾದವುಗಳಿಗೆ ಮಿದುಳಿನ ಒಂದು ಭಾಗ ಬಳಕೆಯಾದರೆ ಭಾವನಾತ್ಮಕ ಸ್ಪಂದನಕ್ಕೆ, ಸುಖದುಃಖಗಳ ಅನುಭವ-ಅನುಭೂತಿಗಳಿಗೆ ಇನ್ನೊಂದು ಭಾಗ ಬಳಕೆಯಾಗಬಹುದು. ಆದರೆ ಒಟ್ಟಾರೆಯಾಗಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಒಂದಲ್ಲಒಂದು ರೀತಿಯಲ್ಲಿ ಇಡೀ ಮಿದುಳು ಭಾಗಿ ಆಗಿಯೇಆಗುತ್ತದೆ. ಕ್ರಿಯೇಟಿವ್ ಚಟುವಟಿಕೆಗಳಿಗೆ ಮಿದುಳಿನ ಬಲ ಭಾಗ, ವಿಶ್ಲೇಷಣಾತ್ಮಕ ಆಲೋಚನೆಗಳಿಗೆ ಎಡ ಭಾಗ ಎನ್ನುವುದೆಲ್ಲ  ಸಿದ್ಧಾಂತ. ಅದಕ್ಕೆ ಪುರಾವೆ ಏನಿಲ್ಲ.

1970ರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ನ್ಯೂರೋಸೈಂಟಿಸ್‌ಟ್ ರೋಜರ್ ಡಬ್ಲ್ಯೂ ಸ್ಪೆರ್ರಿ ಎಂಬಾತ ಈ ರೀತಿಯ ಎಡ-ಬಲ ವಿಂಗಡಣೆ ಮಾಡಿ ಒಂದು ಪ್ರೌಢ ಪ್ರಬಂಧ ಮಂಡಿಸಿದ್ದ. ಅದನ್ನೇ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ಎಂಬಂತೆ ಆಗಿನ ಮಾಧ್ಯಮಗಳು ಪ್ರಚಾರ ಮಾಡಿದವು. ಅಲ್ಲಿಂದ ಮುಂದೆ ಜನರ ಮಿದುಳಲ್ಲಿ ಈ ಎಡ-ಬಲ ಥಿಯರಿ ಬಲವಾಗಿ ಬೇರೂರಿತು. ರೋಜರ್ ಸ್ಪೆರ್ರಿ ಮೊದಲೇ ಎಚ್ಚರಿಸಿದ್ದ. ಮಿದುಳಿನ ಎಡ-ಬಲ ಪ್ರಾಧಾನ್ಯವನ್ನು ಕಪ್ಪು-ಬಿಳುಪಿನಂತೆ ಸ್ಪಷ್ಟ ವ್ಯತ್ಯಾಸ  ಅಷ್ಟೊಂದು ಸರಳ ವರ್ಗೀಕರಣ ಮಾಡಲಿಕ್ಕಾಗದು ಎಂದು ಪ್ರೌಢ ಪ್ರಬಂಧದ ಡಿಸ್‌ಕ್ಲೇಮರ್ ರೀತಿಯಲ್ಲಿ ಬರೆದಿದ್ದ. ಆದರೂ ಮಾಧ್ಯಮಗಳ ಬಾಯಿಗೆ ಸಿಕ್ಕಿದ ಮೇಲೆ ಅವುಗಳೇ ವಿಜ್ಞಾನಿಗಿಂತಲೂ ದೊಡ್ಡ ಸಂಶೋಧಕರೆನಿಸಿಕೊಳ್ಳುವುದು ಇದ್ದೇಇದೆಯಲ್ಲ! ಕೆಲವೊಂದು ಅಪರೂಪದ ವೈದ್ಯಕೀಯ ಅನಿವಾರ್ಯಗಳಲ್ಲಿ ರೋಗಿಯ ಮಿದುಳಿನ ಅರ್ಧ ಭಾಗವನ್ನು ತೆಗೆಯುವ ‘ಹೆಮಿಸ್ಫೆರೋಕ್ಟಮಿ’ ಎಂಬ ಶಸ್ತ್ರಚಿಕಿತ್ಸೆ ಮಾಡುವುದಿದೆಯಂತೆ. ಹಾಗೆ ಅರ್ಧ ಮಿದುಳು ಕಳಕೊಂಡವರು ಆಮೇಲೆ ಯಾವುದೇ ಊನಗಳಿಲ್ಲದೆ ಸಾಮ್ಯಾರಂತೆ ಬದುಕು ನಡೆಸಿದ ಎಷ್ಟೋ ಉದಾಹರೆಗಳೂ ಇವೆಯಂತೆ. ಅಂತೂ ಎಡ-ಬಲ ಥಿಯರಿಯಲ್ಲಿ  ಎನ್ನುವುದು ದೃಢಪಟ್ಟಿದೆ.

ಮೂರನೆಯದು, ನಾವು ನಮ್ಮ ಇಡೀ ಮಿದುಳಿನ ಕೇವಲ ಹತ್ತನೆಯ ಒಂದಂಶವನ್ನು ಮಾತ್ರ ಬಳಸುತ್ತೇವೆ, ಉಳಿದ ತೊಂಬತ್ತು ಶೇಕಡಾ ಭಾಗವು ಸುಮ್ಮನೆ ವ್ಯರ್ಥವಾಗುತ್ತ ಇರುತ್ತದೆ ಎಂಬುವ ಮಿಥ್ಯೆ. ನಮ್ಮ ಪ್ರತಿಯೊಂದು ಚಟುವಟಿಕೆಗಳಿಗೆ ಮಿದುಳಿನ ಎಲ್ಲ ಭಾಗಗಳೂ ಬೇಕಾಗುವುದಿಲ್ಲ ಎನ್ನುವುದು ಒಪ್ಪತಕ್ಕ ವಿಚಾರವೇ. ಹಾಗಾಗಿ ಪ್ರತಿ ಕ್ಷಣವೂ ನಮ್ಮ ಮಿದುಳು ಸಂಪೂರ್ಣ ವ್ಯಸ್ತವಾಗಿಯೇನೂ ಇರುವುದಿಲ್ಲ. ಅಂದಮಾತ್ರಕ್ಕೆ ಉಸಿರಾಟ, ನಿದ್ದೆ, ಆಹಾರ ಜೀರ್ಣಿಸುವಿಕೆ, ಚಿಂತೆ-ಚಿಂತನೆ, ಉರು ಹೊಡೆದು ಕಲಿಯುವಿಕೆ, ಅರ್ಥ  ಕಲಿಯುವಿಕೆ ಮುಂತಾದ ಹತ್ತಾರು ಕೆಲಸಗಳನ್ನು ಮಿದುಳಿನ ಹತ್ತು ಶೇಕಡಾ ಭಾಗವಷ್ಟೇ ನಿಭಾಯಿಸುತ್ತದೆನ್ನುವುದು ಕಪೋಲಕಲ್ಪಿತ ಸುಳ್ಳು. ಈ ಮಿಥ್ಯೆ ಹರಡುವುದರಲ್ಲಿ ಕೆಲವೊಂದು ಸೈನ್‌ಸ್ ಫಿಕ್ಷನ್ ಸಿನಿಮಾಗಳ ಪಾತ್ರವೂ ಇದೆ. 2014ರಲ್ಲಿ ಬಿಡುಗಡೆಯಾಗಿದ್ದ ‘ಲೂಸಿ’ ಎಂಬ ಇಂಗ್ಲಿಷ್ ಸಿನಿಮಾದಲ್ಲಿ ಇದೇ ‘ಹತ್ತು ಶೇಕಡಾ ಮಿದುಳಿನ ಬಳಕೆ’ ಥಿಯರಿಯನ್ನೇ ಕಥೆಯ ಮೂಲಾಧಾರ ಮಾಡಲಾಗಿತ್ತು. ನಾಯಕಿಗೆ ವಿಶೇಷವಾದೊಂದು ಡ್ರಗ್ ಕೊಟ್ಟು ಆಕೆಯ ಮಿದುಳಿನ ಉಳಿದ 90 ಶೇಕಡಾ ಭಾಗವನ್ನೂ ಕಾರ್ಯೋನ್ಮುಖಗೊಳಿಸಲಾಗುತ್ತದೆ. ಹಾಗೆ ಅವಳಿಗೆ ಅತಿಮಾನುಷ  ಒದಗಿಸುವವ ಒಬ್ಬ ವಿಜ್ಞಾನಿ.

ಸಿನಿಮಾಗಳಂತೆಯೇ, ವ್ಯಕ್ತಿತ್ವ ವಿಕಸನ ತರಬೇತುದಾರರೂ ಈ ಮಿಥ್ಯೆಯನ್ನು ಬಳಸುತ್ತಾರೆ. ‘ನಿಮಗೆ ಭಗವಂತನು ಕೊಟ್ಟಿರುವ ಶಕ್ತಿಯ ಹತ್ತು ಪ್ರತಿಶತವನ್ನಷ್ಟೇ ಉಪಯೋಗಿಸುತ್ತಿದ್ದೀರಿ. ಇನ್ನುಳಿದ 90 ಶೇಕಡಾ ಭಾಗವು ವ್ಯರ್ಥವಾಗಿ ಹೋಗುತ್ತಿದೆಯಲ್ಲ, ಅದನ್ನೇಕೆ ನೀವು ವಿವಿಧ ಚಟುವಟಿಕೆಗಳಿಗೆ, ಹೊಸ ಹವ್ಯಾಸಗಳಿಗೆ, ಸಾಹಕಾರ್ಯಗಳಿಗೆ ಬಳಸಬಾರದು?’ ಎಂದು ಅಭ್ಯರ್ಥಿಗಳನ್ನು ಹುರಿದುಂಬಿಸಲಿಕ್ಕೆ ಪರ್ಸನಾಲಿಟಿ ಡೆವಲಪ್‌ಮೆಂಟ್ ಟ್ರೆûನರ್‌ಗಳಿಗೆ ಈ ಥಿಯರಿ ವರವಾಗಿ ಪರಿಣಮಿಸಿದೆ. ಕೆಲ ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆಸಿದ ಒಂದು ಸಮೀಕ್ಷೆಯಲ್ಲಿ ಸುಮಾರು  ಎಡರಷ್ಟು ಜನರು ಈ ‘10 ಶೇಕಡಾ ಮಿದುಳಿನ ಬಳಕೆ’ ಥಿಯರಿಯನ್ನು ನಂಬಿದ್ದಾರೆಂದು ತಿಳಿದುಬಂದಿತ್ತು. ಅದಕ್ಕಿಂತಲೂ ಹಿಂದೊಮ್ಮೆ ಬ್ರಿಟಿಷ್ ಮೆಡಿಕಲ್ ಜರ್ನಲ್ ನಡೆಸಿದ ಸಮೀಕ್ಷೆಯಲ್ಲಿ ಕೆಲವು ವೈದ್ಯರು ಸಹ ಇದನ್ನು ನಂಬುತ್ತಾರೆಂದು ಜಾಹೀರಾಗಿತ್ತು. ಆದರೆ ವಾಸ್ತವವೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿದುಳಿನ ಪೂರ್ಣ ಭಾಗವನ್ನು ಬಳಸಲೇಬೇಕಾಗುತ್ತದೆ.

ವಯಸ್ಸಾದಂತೆಲ್ಲ ಮಿದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತ ಹೋಗುತ್ತದೆ ಎನ್ನುವುದು ನಾಲ್ಕನೆಯ ಮಿಥ್ಯೆ. ಇದೂ ಅಷ್ಟೇ, ಕಪ್ಪುಬಿಳುಪೆಂದು ಇದಮಿತ್ಥಂ ಮಾಡುವಂಥದ್ದಲ್ಲ. ಅಲ್ಪ ಕಾಲದ ಸ್ಮರಣಶಕ್ತಿ, ಏಕಾಗ್ರತೆ,  ಭಾಷೆ ಕಲಿಯಬಲ್ಲ ಸಾಮರ್ಥ್ಯ ಮುಂತಾದುವೆಲ್ಲ ವಯಸ್ಸು ಹೆಚ್ಚಾದಂತೆ ಕ್ಷೀಣಿಸುವುದು ಹೌದು. ಆದರೆ ಬೇರೆ ಹಲವಾರು ಬೌದ್ಧಿಕ ಕೌಶಲಗಳು ವಯಸ್ಸಿನೊಂದಿಗೆ ಬಲಗೊಳ್ಳುತ್ತ ಹೋಗುತ್ತವೆ. ಸಾಮಾಜಿಕ ಸಂಬಂಧಗಳು, ಭಾವನಾತ್ಮಕ ಬೆಸುಗೆಗಳು ಮುಂತಾದವೆಲ್ಲ ಈ ವರ್ಗಕ್ಕೆ ಸೇರುತ್ತವೆ. ವಯಸ್ಸಾದವರಲ್ಲಿ ಶಬ್ದಭಂಡಾರ ಶ್ರೀಮಂತವಾಗಿರುತ್ತದೆ. ಸಂದರ್ಭೋಚಿತವಾಗಿ ಆಯಾ ಶಬ್ದಗಳನ್ನು ಬಳಸುವ ತಾಕತ್ತೂ ಅವರಲ್ಲಿರುತ್ತದೆ. ವ್ಯಕ್ತಿಸಂಬಂಧಗಳು ಹಸನಾಗಿರುತ್ತವೆ. ಅವರಿಗೆ ಬದುಕಿನಲ್ಲಿ ತೃಪ್ತಿ, ಧನ್ಯತೆಗಳಿಂದಾಗಿಯೇ ಒಂಥರದ ವಿಶೇಷ ಖುಷಿ ಇರುತ್ತದೆ. ಬದುಕಿನ ಅನುಭವಗಳ ಉಗ್ರಾಣದಲ್ಲಿ ಸಮಸ್ಯೆ-ಪರಿಹಾರಗಳ ದೊಡ್ಡ ಮೂಟೆಯೇ  ಹೊಸದಾಗಿ ಉದ್ಭವಿಸುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಬಲ್ಲವರಾಗಿರುತ್ತಾರೆ. ‘ಮಾಗುವುದು’ ಎಂಬ ಪದ ಬಹುಶಃ ಇದೆಲ್ಲವನ್ನೂ ಸಮರ್ಥವಾಗಿ ಪ್ರತಿಬಿಂಬಿಸುವಂಥದ್ದು. ಜ್ಞಾನವೃದ್ಧರೂ ವಯೋವೃದ್ಧರೂ… ಎಂದು ಹಿರಿಯರನ್ನು ಗೌರವಿಸುವ ಕ್ರಮವೂ ಆ ದೃಷ್ಟಿಯಿಂದಲೇ ಬಂದದ್ದಿರಬಹುದು. ಮಾಗಿದವರ ಮಿದುಳು ಸಹ ಮಾಗಿರಲೇಬೇಕಲ್ಲ?

ಸಂಗೀತ ಕೇಳುವುದು ಮಿದುಳಿಗೆ ಶಕ್ತಿವರ್ಧಕ ಟಾನಿಕ್ ಆಗಬಲ್ಲದು ಎನ್ನುವವರಿದ್ದಾರೆ. ಈ ಬಗ್ಗೆ ಸುಮಾರಷ್ಟು ಸಂಶೋಧನೆಗಳು, ಸಮೀಕ್ಷೆಗಳು ನಡೆದದ್ದೂ ಇವೆ. ಮೊಝಾರ್ಟ್ ಮ್ಯೂಸಿಕ್ ಕೇಳುವ ಅಭ್ಯಾಸವಿದ್ದವರು ಕುಶಾಗ್ರಮತಿಗಳಾಗುತ್ತಾರೆ, ತಾರ್ಕಿಕ ವಿಶ್ಲೇಷಣಾ ಸಾಮರ್ಥ್ಯ  ಎಂದು 1993ರ ಒಂದು ಸಮೀಕ್ಷೆಯು ಕಂಡುಕೊಂಡಿತ್ತಂತೆ. 15ರಿಂದ 20 ನಿಮಿಷ ಮೊಝಾರ್ಟ್ ಮ್ಯೂಸಿಕ್ ಕೇಳಿದರೆ ಆಮೇಲಿನ ಸ್ವಲ್ಪ ಹೊತ್ತು ಮಿದುಳು ತುಸು ಹೆಚ್ಚು ತಾಜಾತನದಿಂದ, ಲವಲವಿಕೆಯಿಂದ ಇರುವುದು ಹೌದೆಂದು ಈ ಸಮೀಕ್ಷೆ ದೃಢಪಡಿಸಿತ್ತು. ಆದರೆ ಇಡೀ ಮಿದುಳೇ ಶಕ್ತಿಶಾಲಿಯಾಗುತ್ತದೆ, ಹೆಚ್ಚಿನ ಚಟುವಟಿೆಗಳನ್ನು ಮಾಡಬಲ್ಲದಾಗುತ್ತದೆ ಎನ್ನುವುದೆಲ್ಲ ಸತ್ಯಕ್ಕೆ ದೂರವಾದ ಮಾತು. ದಶಕಗಳ ಹಿಂದೆ ಮಾಡಿದ್ದ ಆ ಪ್ರಯೋಗಗಳನ್ನೆಲ್ಲ 2010ರಲ್ಲಿ ಮತ್ತೊಮ್ಮೆ ಮಾಡಿದಾಗ ಈ ಹಿಂದಿನ ಫಲಿತಾಂಶಗಳು ಬರಲೇ ಇಲ್ಲ. ಮೊಝಾರ್ಟ್  ಮಿದುಳಿನ ಆರೋಗ್ಯಕ್ಕೂ ಸಂಬಂಧ ಸ್ಥಾಪಿಸುವುದು ಸಾಧ್ಯವಾಗಲೇ ಇಲ್ಲ. ಕೇಳಲಿಕ್ಕೆ ಇಷ್ಟ ಅಂತಾದರೆ ಸಂಗೀತ ಕೇಳಬೇಕೇ ವಿನಾ ಮಿದುಳನ್ನು ಬಲಪಡಿಸುತ್ತೇನೆ ಎಂದುಕೊಂಡು ಸಂಗೀತ ಆಲಿಸಿದರೆ ಉಪಯೋಗವಿಲ್ಲ.

ಸಂಗೀತದಂತೆಯೇ ಇನ್ನೊಂದು ಟಾನಿಕ್ ಎಂದು ನಂಬಲಾಗಿರುವುದು ಪದಬಂಧ, ಸುಡೊಕು ಮುಂತಾದ ‘ಮಿದುಳಿಗೆ ವ್ಯಾಯಾಮ ಒದಗಿಸುವ ಆಟ’ಗಳು. ತುಕ್ಕು ಹಿಡಿದ ಮಿದುಳನ್ನು ಸಾಣೆಗೆ ಉಜ್ಜಿ ಹೊಳಪು ತಂದಂತಾಗುತ್ತದೆ. ಒಣಗಿ ಬರಡಾದ ಗದ್ದೆಯನ್ನು ಹನಿನೀರಾವರಿ ಒದಗಿಸಿ ನೇಗಿಲಿನಿಂದ ಉತ್ತಂತೆ ಆಗುತ್ತದೆ ಅಂತೆಲ್ಲ ಈ ಪದಬಂಧ/ಸುಡೊಕು ಚಟುವಟಿಕೆಗಳ  ನಾವು ಮಾತಾಡುತ್ತೇವೆ. ಆದರೆ ಜೀವನದುದ್ದಕ್ಕೂ ಪದಬಂಧ/ಸುಡೊಕುಗಳನ್ನು ತುಂಬಿಕೊಂಡು ಬಂದವರು ಮಿದುಳಿನ ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ಗಟ್ಟಿಗರಾಗಿರುತ್ತಾರೆ ಎಂದು ಯಾವ ಪುರಾವೆಯೂ ಸಿಕ್ಕಿಲ್ಲ. ಪದಬಂಧದಲ್ಲಿ ಅವರೆಲ್ಲ ಎಕ್‌ಸ್ಪರ್ಟ್ ಇರಬಹುದು. ಸುಳಿವುಗಳಲ್ಲಿ ಒಂದಿಷ್ಟು ಪ್ಯಾಟರ್ನ್‌ಗಳನ್ನು, ಪದೇಪದೇ ಬರುವಂಥವನ್ನು ಥಟ್ಟಂತ ಗುರುತಿಸುವುದು ಅವರಿಗೆ ನೀರು ಕುಡಿದಂತೆ ಸುಲಭ ಇರಬಹುದು. ಆ ಚಟುವಟಿಕೆಯನ್ನವರು ಬಲುಸಂತೋಷದಿಂದ ಮಾಡುತ್ತಾರೆ ಇರಬಹುದು. ಆದರೆ ಅಷ್ಟೇ ಅದರ ವ್ಯಾಪ್ತಿ.

ಏಳನೆಯ ಮಿಥ್ಯೆಯೇ ಗಂಡು-ಹೆಣ್ಣಿನ ಮಿದುಳುಗಳಲ್ಲಿ ವ್ಯತ್ಯಾಸ ಇರುತ್ತದೆ ಎಂಬ ಪ್ರಚಾರ. ಅದಕ್ಕೆ  ಪ್ರಸಿದ್ಧ ಲೇಖಕ ಜಾನ್ ಗ್ರೇ ಬರೆದಿರುವಂಥ ‘ಮೆನ್ ಆರ್ ಫ್ರಮ್ ಮಾರ್ಸ್, ವಿಮೆನ್ ಆರ್ ಫ್ರಮ್ ವೀನಸ್’ (ಗಂಡಸರು ಮಂಗಳಗ್ರಹದಿಂದ ಬಂದವರು, ಹೆಂಗಸರು ಶುಕ್ರಗ್ರಹದಿಂದಿಳಿದವರು) ರೀತಿಯ ಪುಸ್ತಕಗಳ ಕುಮ್ಮಕ್ಕು. ಗಣಿತ ಸಮಸ್ಯೆಗಳನ್ನು ಬಿಡಿಸುವುದು, ವೈಜ್ಞಾನಿಕ ವಿಶ್ಲೇಷಣೆ ಮಾಡುವುದು ಹುಡುಗಿಯರಿಗಿಂತ ಹುಡುಗರಿಗೆ, ಹೆಂಗಸರಿಗಿಂತ ಗಂಡಸರಿಗೆ ಸಲೀಸು ಎಂಬ ಸಾಮಾನ್ಯ ಭಾವನೆ ಬೇರುಬಿಟ್ಟಿದೆ. ಆದರೆ ಇದಕ್ಕೆ ನೈಸರ್ಗಿಕ ಕಾರಣಗಳೇನಿಲ್ಲ. ಜಗತ್ತಿನಲ್ಲಿ ಹೆಚ್ಚೂಕಡಿಮೆ ಎಲ್ಲ ಸಂಸ್ಕೃತಿಗಳಲ್ಲೂ ಹೆಣ್ಣು ಮತ್ತು ಗಂಡನ್ನು ಪೋಷಿಸುವ ಕ್ರಮದಲ್ಲಿನ  ಈ ಅಬದ್ಧಕ್ಕೆ ಮುಖ್ಯ ಕಾರಣ. ಅಂದರೆ, ಹುಟ್ಟಿದಾಗ ಜೀವಶಾಸ್ತ್ರದ ದೃಷ್ಟಿಯಲ್ಲಿ ಹೆಣ್ಣಿನ ಮತ್ತು ಗಂಡಿನ ಮಿದುಳು ಒಂದೇ ರೀತಿ ಇರುತ್ತದೆ. ಆಮೇಲೆ ಬೆಳವಣಿಗೆಯ ವೇಳೆ ಹೊರಜಗತ್ತು ತೋರುವ ಭೇದಭಾವದಿಂದಾಗಿ ಮಿದುಳಿನಲ್ಲಿಯೇ ವ್ಯತ್ಯಾಸವಿದೆಯೇನೋ ಅಂತನಿಸುತ್ತದೆ. ಬೇಕಿದ್ದರೆ ನೋಡಿ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶಗಳಲ್ಲಿ ಬಾಲಕಿಯರೇ ಮೇಲುಗೈ ಎಂದು ಪ್ರತಿವರ್ಷವೂ ಪತ್ರಿಕೆಗಳಲ್ಲಿ ಹೆಡ್‌ಲೈನ್ ಸುದ್ದಿ ಬರುತ್ತದೆ. ಆದರೆ ಪದವಿ ತರಗತಿಗಳಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗಗಳಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ. ಕಲಾವಿಭಾಗದಲ್ಲಿ  ಹೆಚ್ಚು. ಹೀಗೇಕೆ? ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್, ಇವೆಲ್ಲ ಹುಡುಗಿಯರ ಮಿದುಳಿಗೆ ಸಾಧ್ಯವಾಗದ ವಿಚಾರಗಳೇ? ಇದು ಸಮಾಜದ ಕಟ್ಟುಪಾಡುಗಳ ಕೈವಾಡ ಅಲ್ಲವೇ? ಆದರೂ ಈಗ ಬದಲಾದ ಕಾಲಘಟ್ಟದಲ್ಲಿ ಈ ಎಲ್ಲ ಕ್ಷೇತ್ರಗಳಲ್ಲಿ ಗಂಡು-ಹೆಣ್ಣು ಅಂತರ ಕ್ರಮೇಣ ಕಡಿಮೆಯಾಗುತ್ತಿರುವುದು ಆರೋಗ್ಯಕರ ಬೆಳವಣಿಗೆ ಎನ್ನಬೇಕು.

ಕೊನೆಯದಾಗಿ ಇನ್ನೂ ಒಂದು ಮಿಥ್ಯೆ ಇದೆ- ನಮ್ಮ ಜನ್ಮದಾರಭ್ಯ ಏನಿತ್ತೋ ಅದೇ ಸಂರಚನೆ ನಮ್ಮ ಮಿದುಳಿಗೆ ಈಗಲೂ ಇರುವಂಥದು, ಮುಂದೆಯೂ ಇರುವುದು ಎಂಬುದು. ಹಾಗೇನಿಲ್ಲ. ನಮ್ಮ  ಜೀವಕೋಶಗಳು ಬದಲಾಗುತ್ತಲೇ ಇರುತ್ತವೆ. ಮಿದುಳು ಅಂತಲ್ಲ, ಇಡೀ ಶರೀರದಲ್ಲಿ ಈ ಬದಲಾವಣೆ ನಿರಂತರ ಆಗುತ್ತಲೇ ಇರುತ್ತದೆ. ಹಾವು ಪೊರೆ ಕಳಚಿದಷ್ಟು ಅಥವಾ ನಮ್ಮದೇ ಉಗುರುಗಳನ್ನು ಕತ್ತರಿಸಿ ತೆಗೆದಷ್ಟು ಸ್ಪಷ್ಟವಾಗಿ ನಮಗೆ ಈ ಪ್ರಕ್ರಿಯೆ ಕಾಣಸಿಗಲಿಕ್ಕಿಲ್ಲ, ಅನುಭವಕ್ಕೆ ಬರಲಿಕ್ಕಿಲ್ಲ ಅಷ್ಟೇ. ಇನ್ನೂ ಕೆಲವು ವಿಚಿತ್ರಗಳು ನಡೆಯುತ್ತವೆ- ನಾವು ಒಂದೊಮ್ಮೆ ಯಾವುದೋ ಅಪಘಾತದಿಂದ ಅಥವಾ ಕಣ್ಣುಗಳ ತೊಂದರೆಯಿಂದ ದೃಷ್ಟಿಹೀನವಾದರೆ ನಮ್ಮ ಶ್ರವಣ ಶಕ್ತಿ ಒಮ್ಮಿಂದೊಮ್ಮೆಗೇ ಹೆಚ್ಚಬಹುದು. ಅಥವಾ, ಕಿವಿ ಕೇಳುವುದು ಮಂದ  ಆಗ ಬೇರಾವುದೋ ಇಂದ್ರಿಯದ ಕಾರ್ಯಕ್ಷಮತೆ ಏಕಾಏಕಿ ಹೆಚ್ಚಬಹುದು. ಮೇಲೆ ಈಗಾಗಲೇ ವಿವರಿಸಿರುವಂತೆ, ಅರ್ಧ ಮಿದುಳನ್ನು ನಿಷ್ಕ್ರಿಯಗೊಳಿಸಿ ಕತ್ತರಿಸಿ ತೆಗೆದರೆ ಉಳಿದರ್ಧವು ಮಾಮೂಲಿನಂತೆ ಕಾರ್ಯವೆಸಗಬಲ್ಲದು. ಬಾಲ ಕಡಿದ ಹಲ್ಲಿ ಏನೂ ಆಗಲಿಲ್ಲವೆಂಬಂತೆ ಚಲಿಸುತ್ತದಲ್ಲ ಹಾಗೆ. ಮಿದುಳಿಗೆ ಇರುವ ಇಲಾಸ್ಟಿಸಿಟಿ ಅಥವಾ ಸ್ಥಿತಿಸ್ಥಾಪಕತ್ವ ಗುಣದಿಂದ ಇವೆಲ್ಲವೂ ಸಾಧ್ಯವಾಗುತ್ತವೆ.

ನಿಜಕ್ಕೂ ಮನುಷ್ಯನ ಮಿದುಳು ಎಂದರೆ ಒಂದು ಮಹಾ ಮಾಯೆಯೇ!

Tags

ಶ್ರೀವತ್ಸ ಜೋಶಿ

ವಾಷಿಗ್ಟಂನ್‌ ಡಿಸಿಯ ಅಪ್ಪಟ ಕನ್ನಡಿಗ. ಸಣ್ಣ ಕ್ರಿಮಿ ಕೀಟದಿಂದ ಬೃಹದಾಕಾರದ ಪರ್ವತದ ಬಗ್ಗೆಯೂ ಸೀಮಿತ ಪದಗಳಲ್ಲಿ, ಸುಸ್ಪಷ್ಟವಾಗಿ ಸವಿಸ್ತಾರವಾಗಿ ಬರೆಯಬಲ್ಲ ಅಂಕಣಕಾರ. ಹೊಸ ಪದಗಳ ಕಲಿಕೆಗೂ, ಬಳಕೆಗೂ ಇವರ ಅಂಕಣ ಸಿದ್ಧೌಷಧ! ಮಂಡೆಗೆ ಆರಾಮದಾಯಕವಾದ ಸಂಡೆ ಓದಿಗಾಗಿ ‘ತಿಳಿರುತೋರಣ’ ಓದಿ.

Related Articles

Leave a Reply

Your email address will not be published. Required fields are marked *

Language
Close