About Us Advertise with us Be a Reporter E-Paper

ಅಂಕಣಗಳು

ದೇಶದ ಯುವ ಪಡೆಗೆ ದಾರಿ ಯಾವುದಯ್ಯಾ?

ಕೆಲವು ವರ್ಷಗಳ ಹಿಂದೆ  ಅಣ್ಣಾ ಹಜಾರೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಲೋಕಪಾಲ್ ಕಾಯಿದೆ ಜಾರಿಗೊಳಿಸಲು  ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಯುವಶಕ್ತಿಗೆ ಎಲ್ಲಿಲ್ಲದ ಮಹತ್ವ ಬಂದಿತ್ತು. ಒಂದು ರೀತಿಯಲ್ಲಿ ಯುವಕರು ಈ ದೇಶಕ್ಕಾಗಿ ಎಂತಹುದೇ ಬಲಿದಾನಕ್ಕೆ ಸಿದ್ಧರಾಗಬಲ್ಲರು, ಯಾವುದೇ ತ್ಯಾಗ ಮಾಡಬಲ್ಲರು, ರಾಷ್ಟ್ರಪ್ರೇಮ ಅವರಲ್ಲಿ ಪ್ರಜ್ವಲಿಸುತ್ತಿದೆ ಎಂದೆಲ್ಲಾ ಹೇಳಿಕೆಗಳು  ಸ್ವತಃ ಟೀಂ ಅಣ್ಣಾದ ನಾಯಕರು ತಮ್ಮೆಲ್ಲಾ ಸುದ್ದಿಗೋಷ್ಠಿಗಳಲ್ಲೂ ಯುವಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಲೂ ಸಿದ್ದವಾಗಿದ್ದಾರೆ ಎಂಬ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ಹತ್ತಾರು ಬಾರಿ ಹೇಳಿದ್ದರು. ಆ ನಂತರ ಕೋಟ್ಯಂತರ ಯುವಕರನ್ನು ರಾಷ್ಟ್ರನಿರ್ಮಾಣಕ್ಕೆ ಪ್ರೇರೇಪಿಸುವ, ಅವರಲ್ಲಿ ನೈತಿಕ ಶಕ್ತಿ ತುಂಬುವ, ಭ್ರಷ್ಟಾಚಾರ ಮತ್ತು ಅನ್ಯಾಯಗಳ ವಿರುದ್ಧ ದನಿ ಎತ್ತುವ ಯಾವುದೇ ರಾಷ್ಟ್ರವ್ಯಾಪೀ ಪ್ರಭಾವೀ ಆಂದೋಲನ, ಸಮಾವೇಶ ಎಲ್ಲೂ ನಡೆದಂತೆ ಕಾಣಲಿಲ್ಲ. ಈಗ ಯುವಜನರು ಎಲ್ಲಿದ್ದಾರೆ? ಎಂತಹ ಸಂದಿಗ್ಧದಲ್ಲಿದ್ದಾರೆ? ಅವರ ಮನಸ್ಥಿತಿ  ಹಿಂದೆ ಅಣ್ಣಾ ಹಜಾರೆ ಚಳುವಳಿಯಲ್ಲಿ ಪಾಲ್ಗೊಂಡ ಯುವಜನರ ಹಿನ್ನೆಲೆ ಏನು? ಈಗ ಯುವಕರು ಯಾವ ಕವಲು ದಾರಿಯಲ್ಲಿ ನಿಂತಿದ್ದಾರೆ ಎಂಬುದು  ಮಾತ್ರ ಗೊಂದಲಮಯವಾಗಿಯೇ  ಉಳಿದಿದೆ. ನಮ್ಮ ಯುವಕರು ಸರಿಯಾದ ದಾರಿಯತ್ತ ಸಾಗುತ್ತಿಲ್ಲ, ನಮ್ಮ ಯುವಜನತೆ ದಿಕ್ಕು ತಪ್ಪಿದೆ ಎಂದು ಪದೇ ಪದೆ ಭಾಷಣಗಳಲ್ಲಿ ಹೇಳುವುದು ಮಾತ್ರ ಮಾಮೂಲಾಗಿ ಹೋಗಿದೆ.

ಮೊದಲನೆಯದಾಗಿ ಯುವಜನರು ಎಂದು  ಯಾರತ್ತ ಬೆರಳು  ತೋರಿಸಿ ಎಲ್ಲರೂ ಮಾತನಾಡುತ್ತಾರೋ ಆ ಬಹುತೇಕ ಯುವಕರು  ಐಡೆಂಟಿಟಿ ಕ್ರೈಸಿಸ್‌ನಿಂದ ನರಳುತ್ತಿದ್ದಾರೆ.  ಮನಸ್ಸಿನ ತುಂಬಾ  ನೂರಾರು ಆಸೆ ಆಕಾಂಕ್ಷೆಗಳು, ಗೊಂದಲಗಳು, ಕನಸುಗಳು, ಗೂಡು ಕಟ್ಟಿ ನಿಂತಿವೆ.  ಇವೆಲ್ಲವುಗಳನ್ನು ದಾಟಿಕೊಂಡು ತನ್ನನ್ನು  ತಾನು ಎಲ್ಲಿ, ಹೇಗೆ, ಯಾವ ರೀತಿಯಲ್ಲಿ  ಸ್ಥಾಪಿಸಿಕೊಳ್ಳಬೇಕೆನ್ನುವ  ಗೊಂದಲ ಅವರನ್ನು ಕಾಡುತ್ತಿದೆ.

ಎರಡನೆಯದಾಗಿ ಬಹಳಷ್ಟು ಯುವಕರು  ಇಂದು ಹಲವಾರು ವ್ಯಸನಗಳ ಬೆನ್ನು ಹತ್ತಿರುವುದು ತೀರಾ ಆತಂಕದ ಸಂಗತಿಯಾಗಿದೆ. ಆಧುನಿಕತೆ ಬೆಳೆದಂತೆಲ್ಲಾ ಸವಲತ್ತುಗಳು ಹಾಗೂ ಐಷಾರಾಮಿ ಬದುಕು ಅವರ ಬೆರಳ ತುದಿಯಲ್ಲೇ ಇದೆಯೇನೋ ಎಂಬ  ಭ್ರಮೆ ಅವರನ್ನು ಕಾಡುತ್ತಿದೆ. ನೈತಿಕ ಶಿಕ್ಷಣ  ಯಾರಿಗೂ ಬೇಡವಾಗುತ್ತಿದೆ. ರಾಷ್ಟ್ರಭಕ್ತಿ, ದೇಶಪ್ರೇಮ ಎನ್ನುವುದು ಕೇವಲ ಭಾಷಣ, ಸಿನಿಮಾಗಷ್ಟೇ ಸೀಮಿತವಾಗಿದೆ. ಹಿಂದಿದ್ದ ಯುವಕ ಸಂಘಗಳು, ಯುವಕ ಮಂಡಲಗಳು, ಸಂಘಟನಾಶೀಲತೆ ಇಂದು ಮಾಯವಾಗಿದೆ. ಗ್ರಾಮೀಣ ಪ್ರದೇಶದ ಒಂದು ಸ್ವಯಂ ಸೇವಾಸಂಸ್ಥೆ  ಕಳೆದ 20 ವರ್ಷಗಳಿಂದ ಯುವಕರನ್ನು ಸಂಘಟಿಸಲು ಪ್ರಯತ್ನಿಸುತ್ತಿದೆ. ಅಲ್ಲಿನ ಪದಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ  ಸಾವಿರಾರು ಯುವಕರಿಗೆ ನಿರಂತರವಾಗಿ ಗ್ರಾಮಗಳ ಅಭಿವೃದ್ಧಿ ಬಗ್ಗೆ, ಕೆರೆ-ಕಟ್ಟೆ ಪರಿಸರ ಸಂರಕ್ಷಣೆ ಬಗ್ಗೆ ಹೇಳುತ್ತಾ ಬಂದಿದ್ದಾರೆ.  ವ್ಯವಸ್ಥೆಗೆ ಕಾಯಕಲ್ಪ ಮಾಡುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯಿದೆಯ ಉಪಯೋಗ ಮಾಡಿಕೊಂಡು ಕ್ರಿಯಾಶೀಲರಾಗುವಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ. ನಮ್ಮ ಪುರಾತನ ದೇವಾಲಯಗಳನ್ನ ಸಂರಕ್ಷಿಸುವಂತೆ, ಗ್ರಾಮಗಳನ್ನು ಪಾನಮುಕ್ತಗೊಳಿಸಲು ಹೋರಾಟ ನಡೆಸುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ! ಈವರೆಗೆ ಒಬ್ಬ ಯುವಕನೂ ಸಹ ಇಂತಹ ಅನುಕರಣೀಯ ಮಾದರಿಯನ್ನು ಅನುಸರಿಸಿದ್ದೇನೆ ಎಂದು ಮುಂದೆ ಬಂದಿಲ್ಲ ಎಂದು ಸಂಸ್ಥೆಯ ಸಂಚಾಲಕರು ವಿಷಾದಿಸುತ್ತಾರೆ. ಈ ಯುವಕರು ಗ್ರಾಮೀಣ ಪ್ರದೇಶದಲ್ಲಿ ಯಾವೊಂದು ಸುಧಾರಣೆಗೂ ಮುಂದಾಗಿಲ್ಲ.  ಕಾಲ ಮೇಲೆ ಸ್ವಾಭಿಮಾನಿಗಳಾಗಿ ನಿಲ್ಲದವರು, ತಮ್ಮದೇ  ಗ್ರಾಮಗಳಲ್ಲಿ ಸುಧಾರಣೆ ಮಾಡಲಾಗದವರು ದೇಶ ಕಟ್ಟುತ್ತಾರೆ ಎಂಬ ಮಾತು ನಿಜಕ್ಕೂ ಹಾಸ್ಯಾಸ್ಪದ.

ಅಣ್ಣಾ ಹಜಾರೆ ಅವರ ಚಳವಳಿ ಪ್ರಾರಂಭವಾದಾಗ ಇಂತಹದೇ ಒಂದು  ಸುಧಾರಣೆಯ ಅಭಿಯಾನಕ್ಕೆ  ಹಲವು ಕ್ರಿಯಾಶೀಲ ವ್ಯಕ್ತಿಗಳು, ಸಂಸ್ಥೆಗಳು ಸಿದ್ಧತೆ ನಡೆಸಿದ್ದರು. ಕೆಲವು ಸಂಘ-ಸಂಸ್ಥೆಗಳ ಜತೆ ಸೇರಿ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ, ಅಣ್ಣಾ ಹಜಾರೆ ಅವರ ಧ್ಯೇಯೋದ್ದೇಶಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ  ಆದರೆ ಅದು ಕೇವಲ ವ್ಯರ್ಥ ಪ್ರಯತ್ನವಾಗಿಯೇ ಉಳಿಯಿತು. ವಿದ್ಯಾರ್ಥಿಗಳು ಅವರ ಮನವಿಗೆ ಪೂರಕವಾಗಿ ಸ್ಪಂದಿಸಲಿಲ್ಲ.  ಚಳವಳಿಗೆ ಬಂದ ಹಲವು ವಿದ್ಯಾರ್ಥಿಗಳಿಗೆ ಯಾವುದೇ ಬದ್ಧತೆ ಇರಲಿಲ್ಲ. ಬಸ್ ಓಡಿಸುವುದಕ್ಕೋ, ಪಾಸ್ ಕೊಡಲು ಒತ್ತಾಯಿಸುವುದಕ್ಕೋ ಮಾಡುವ ಸಾಮಾನ್ಯ ಮುಷ್ಕರದಾಚೆ ಅವರ ಮನೋಭಾವ ಹಾಗೂ ಬದ್ಧತೆ ಇರಲಿಲ್ಲ. ಇದು ತೀರಾ ವಿಷಾದದ ಸಂಗತಿ.

ಇಲ್ಲಿ ನಾವು ವಿದ್ಯಾರ್ಥಿಗಳನ್ನು ದೂರಿ ಪ್ರಯೋಜನವಿಲ್ಲ. ನಮ್ಮ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತಿದ್ದೇವೆ? ಎಂದು ಪ್ರತಿಯೊಬ್ಬ ತಂದೆ-ತಾಯಿ ಮತ್ತು  ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದುಡ್ಡು, ಸೌಲಭ್ಯ, ಪ್ರತಿಷ್ಠಿತ ಕಾಲೇಜಿನಲ್ಲಿ ಶಿಕ್ಷಣಕ್ಕೆ ಅವಕಾಶ ದೊರಕಿಸಿಕೊಡುವುದಷ್ಟೇ ನಮ್ಮ ಕೆಲಸ ಎಂದುಕೊಳ್ಳುವಷ್ಟು ದಿವಸ ವಿವೇಕಾನಂದರು ಹೇಳಿದ ಪರಿಪೂರ್ಣ ವ್ಯಕ್ತಿತ್ವದ, ಕಬ್ಬಿಣದ ಸ್ನಾಯುಗಳ, ಉಕ್ಕಿನ ನರಗಳ, ಸಿಡಿಲು, ಗುಡುಗಿನ ಗುಂಡಿಗೆಯುಳ್ಳ ಯುವಕರು ನಮ್ಮ ಮುಂದೆ ರೂಪುಗೊಳ್ಳಲಾರರು ಎಂಬುದರ ಅರಿವು ನಮಗಿರಬೇಕು. ದುಡಿಮೆ ಇಲ್ಲದ ಸಂಪತ್ತು, ಐಷಾರಾಮಿ ಜೀವನದ ಸುಖಲೋಲುಪತೆ ಅನುಭವಿಸಿದ ಯುವಕರು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮನಸ್ಥಿತಿ ಪಡೆಯುವುದಾದರೂ ಹೇಗೆ? ತಮ್ಮ ಮೂಲಗಳಲ್ಲೇ ಚಾರಿತ್ರ್ಯ ಹಾಗೂ  ಇಲ್ಲದ ಯುವಕರು ನೈತಿಕ ಪರಂಪರೆಯ ವಾರಸುದಾರರಾಗುತ್ತಾರೆ ಎಂದು ನಾವು ನಿರೀಕ್ಷಿಸಲು ಹೇಗೆ ಸಾಧ್ಯ? ಅಪ್ಪ ಯಾವುದೋ ಅಕ್ರಮ ಗುತ್ತಿಗೆದಾರನಾಗಿಯೋ, ಅಕ್ರಮ ಗಣಿ ವ್ಯವಹಾರಸ್ಥನಾಗಿಯೋ, ಕಳ್ಳಭಟ್ಟಿ ದಂದೆಯಲ್ಲಿ ತೊಡಗಿದವನಾಗಿಯೋ, ಲಂಚಕೋರನೋ ಆಗಿದ್ದು ಕೋಟ್ಯಂತರ ರೂಪಾಯಿ ಆಸ್ತಿ ಮಾಡಿ ಆ ದುಡ್ಡಿನಲ್ಲೇ ಮಗ ಕಾರು, ಇಂಜಿನಿಯರಿಂಗ್ ಸೀಟು, ಪಾಕೆಟ್ ಮನಿ ಪಡೆಯುವ ಪರಿಸ್ಥಿತಿ ಹೆಚ್ಚುತ್ತಿರುವಾಗ ಈ ಯುವಕರು ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವುದಾದರೂ ಹೇಗೆ? ಅಂತಹ ಮನಸ್ಥಿತಿ ರೂಪಿಸುವವರು ಯಾರು? ಈ  ವೈಭೋಗವನ್ನೂ ರಾತ್ರೋ ರಾತ್ರಿ ಬಿಟ್ಟು ಬೋಧಿವೃಕ್ಷದ ಕೆಳಗೆ ಕೂರುವಷ್ಟು ಪ್ರೇರಣೆ ನಮ್ಮ ಯುವಕರಿಗೆ ಎಲ್ಲಿಂದ ಬಂದೀತು? ವಾಸ್ತವವಾಗಿ ಇದು ಒಂದೇ ದಿನದಲ್ಲಿ, ಒಂದು ವಾರದಲ್ಲಿ ಆಗುವ ಪರಿವರ್ತನೆಯೇ? ಆದರೂ ಮೂರು ವಂಶ ತಿಂದರೂ ಕರಗದಷ್ಟು ಆಸ್ತಿ ಹೊಂದಿರುವವರು, ಕೆಲಸವಿಲ್ಲದವರು, ಕೈತುಂಬ ಕಾಸಿದ್ದರೂ ಏನು ಮಾಡಬೇಕೆಂದು ತೋಚದವರು, ಜೀವನಪ್ರೀತಿಗಿಂತಲೂ, ತಮ್ಮ ಸಮುದಾಯಕ್ಕಿಂತಲೂ ಹೆಚ್ಚಾಗಿ ಅನ್ಯರನ್ನು ಓಲೈಸುವ ಸ್ವಾರ್ಥಿಗಳು, ಮೂಲಭೂತವಾದ ಹೊಂದಿದವರು, ಚಳವಳಿಗಳಲ್ಲಿ ಭಾಗವಹಿಸುವ ಚಟವುಳ್ಳವರು, ಬದುಕಿಗಿಂತಲೂ ಹೆಚ್ಚಾಗಿ ಸಿದ್ಧಾಂತಗಳ ಮೇಲೆ  ಹಲವು ವೇಳೆ ಈ ಚಳವಳಿಗಳ ಹರಿಕಾರರಾಗಿ ರೂಪುಗೊಳ್ಳುತ್ತಾರೆ ಎನ್ನುವುದೇ ಒಂದು ದುರಂತ. ಇದಕ್ಕಿಂತ ತಮ್ಮ ಪಾಡಿಗೆ ತಾವು ಬದುಕು ಕಟ್ಟಿಕೊಳ್ಳುತ್ತಿರುವ ಯುವಕರೇ ವಾಸಿ ಎನ್ನಬಹುದು.

 ಇದು ಉಳ್ಳವರ ಒಂದು ವರ್ಗದ ಯುವಕರ ಸಮಸ್ಯೆ ಆದರೆ ಮತ್ತೊಂದು ಮಧ್ಯಮ ವರ್ಗದ ಯುವಕರ ಪರಿಸ್ಥಿತಿಯೇ ಬೇರೆ!  ನಮ್ಮ ದೇಶದ ಈ  ಯುವ ಪೀಳಿಗೆ ಅನ್ನ-ನೀರು-ಸೂರು ಸಿಕ್ಕಿ ನೆಮ್ಮದಿಯಾಗಿದ್ದಾರೆ, ಅವರ ಬದುಕನ್ನು ಅವರೇ ಕಟ್ಟಿಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಯಾರಾದರೂ ಭಾವಿಸಿದರೆ ಅದು ದೊಡ್ಡ  ಸರಿ. ಇವತ್ತಿಗೂ ಸಾವಿರಾರು ಯುವಕರು ಸರಿಯಾದ ಶಿಕ್ಷಣವಿಲ್ಲದೆ, ವೃತ್ತಿ ಇಲ್ಲದೆ, ದುಡಿಮೆ ಇಲ್ಲದೆ ಮುಂದಿನ ಬದುಕು ಹೇಗೋ ಎಂಬ ಆತಂಕದಲ್ಲಿದ್ದಾರೆ.

ಇವತ್ತಿಗೂ ಹಳ್ಳಿಗಳಲ್ಲಿ ಕೃಷಿ ಕೂಲಿ ಕಾರ್ಮಿಕರಿಗಾಗಿ ನೀಡುವ ಕೂಲಿಯ ಪ್ರಮಾಣ ಬೆಚ್ಚಿಬೀಳಿಸುವಂತಿದೆ. ದಿನವಿಡೀ ಮಣ್ಣು ಹೊತ್ತರೂ ಗಂಡಸಿಗೆ ಇನ್ನೂರು ರೂಪಾಯಿ, ಹೆಣ್ಣಾಳಿಗೆ ನೂರು ರೂಪಾಯಿ ಕೊಟ್ಟರೆ ಹೆಚ್ಚು, ನಮ್ಮ ಹಳ್ಳಿಗಳಲ್ಲಿ ಅಪ್ಪ ಹೆಂಡ ಕುಡಿಯಲು ಪಡೆದ ಸಾಲಕ್ಕೆ ದುಡಿಯವ ಮಗ ಅಥವಾ ಮಗಳು ಜೀತದೋಪಾದಿಯಲ್ಲಿ ಕತ್ತೆ ದುಡಿಮೆ  ಅನಿವಾರ್ಯತೆಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ತಾತನ ಕಾಲದ ಬಗರ್ ಹುಕುಂ ತುಂಡು ಜಮೀನಿಗೆ  ಉಳುಮೆ ಚೀಟಿ ಸಿಗದೆ, ಅಪ್ಪ ಅಮ್ಮನನ್ನು ಸಾಕಲಾಗದೆ  ಬದುಕನ್ನು ಕಟ್ಟಿಕೊಳ್ಳಬೇಕೆಂಬ  ಸ್ವಾಭಿಮಾನದಿಂದ ನಗರಗಳಿಗೆ ಗುಳೆ ಎದ್ದು ಬಂದಿರುವ ನೂರಾರು ಯುವಕರು ಚಳಿ, ಮಳೆ, ಗಾಳಿ ಎನ್ನದೆ ಸಿಕ್ಕ ಅಂಗೈ ಅಗಲದ ಜಾಗದಲ್ಲಿ ಅರಮನೆ ಕಟ್ಟುವ ಕನಸು ಕಾಣುತ್ತಾ ದಿನಗಳೆಯುತ್ತಿದ್ದಾರೆ. ಬೆಂಗಳೂರಿನ ಬಹುತೇಕ ಬೀದಿಗಳಲ್ಲಿ ನಸುಕಿನಲ್ಲೇ ಎದ್ದು ವಾಕ್ ಅಥವಾ ಜಾಗ್ ಮಾಡುವ ಯುವಜನಕ್ಕಿಂತ ಗಾರ್ಮೆಂಟ್‌ಸ್  ಅಥವಾ  ಕೆಲಸಕ್ಕೆ ಅವಸರವಸರವಾಗಿ ಹೆಜ್ಜೆ ಹಾಕುವ ಯುವಜನರೇ ಅಧಿಕ. ವೆಲ್ಡಿಂಗ್ ಶಾಪು, ಗ್ಯಾರೇಜುಗಳಲ್ಲಿ ಕೆಲಸ ಮಾಡುವವರು, ಆಟೋ ಓಡಿಸುವವರು,  ಹೋಟೆಲು, ಕ್ಯಾಟರಿಂಗ್ ಸರ್ವೀಸ್‌ನವರು,  ಮೆಡಿಕಲ್ ರೆಪ್‌ಗಳು, ವಿವಿಧ ಕಂಪನಿಗಳ ಅರೆಕಾಲಿಕ ಮಾರಾಟಪ್ರತಿನಿಧಿಗಳು, ಗುತ್ತಿಗೆ ಆಧಾರದಲ್ಲಿ ಕೆಲಸ ಹಿಡಿದವರು ಹೀಗೆ ಹಗಲು ಯಾರದೋ ಮರ್ಜಿಗೆ ಕೈತುಂಬಾ ಕೆಲಸ ಮಾಡಿ ರಾತ್ರಿ  ಮತ್ತೊಂದು ಹೊಸ ಹಗಲಿಗೆ ಕಸನು ನೇಯುತ್ತಿರುವ ಹುಡುಗರು..ಇಂತಹ ಸಾವಿರಾರು ಯುವಜನರಿಗೆ ದೇಶಪ್ರೇಮ, ಕನ್ನಡ ಪ್ರೀತಿ ಅಂತ ಎಷ್ಟೇ ತಿಪ್ಪರಲಾಗ ಹಾಕಿದರೂ   ಪ್ರಯೋಜನವಿಲ್ಲ ಏಕೆಂದರೆ ನಾಳಿನ ಬದುಕಿನ ಭರವಸೆಯೇ ಇಲ್ಲದವರು ಯಾವ ದೇಶ ಕಟ್ಟುವ ಕನಸು ಹೆಣೆದಾರು?ಈ ಯುವಕರ  ದೃಷ್ಟಿಯಲ್ಲಿ ಅವರ ಬದುಕನ್ನು ಚಂದವಾಗಿಸಿಕೊಳ್ಳುವುದೇ ದೇಶವನ್ನು ಹಸನಾಗಿಸುವ ಕೆಲಸ, ಹಾಗಾಗಿ ಅವರ್ಯಾರಿಗೂ ಚಳವಳಿಗಳಲ್ಲಿ ಭಾಗವಹಿಸುವಷ್ಟು, ರಾಜಕಾರಣದ ಕುರಿತು ರಸಮಯವಾಗಿ ಹರಟುವಷ್ಟು ಪುರಸೊತ್ತಿಲ್ಲ.

ಇದರಲ್ಲಿ ತಪ್ಪೇನೂ ಇಲ್ಲ. ಮಾಡುವ ಕೆಲಸ ಬಿಟ್ಟು ಯಾರೂ ಉದ್ದುದ್ದ ಭಾಷಣ ಕೇಳುತ್ತಾ ರಸ್ತೆಗಿಳಿದು ಹೋರಾಟ ಮಾಡಬೇಕೆಂಬುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ನಿಜಕ್ಕೂ ಪ್ರತಿಯೊಬ್ಬನಿಗೂ ತನ್ನ ಬದುಕನ್ನು ಹಸನಾಗಿಸಿಕೊಳ್ಳುವುದೇ  ಕೆಲಸ. ಇಂತಹ ಸ್ವಾವಲಂಬಿ ಯುವಕರೇ ಈ ದೇಶದ ಆಸ್ತಿ. ಆದರೆ ಈ ಯುವಕರಿಗೆ ಇದನ್ನೆಲ್ಲಾ ತಾವು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿದ್ದೇವೆ ಎಂಬ ಅರಿವಿಲ್ಲ. ತಮ್ಮ ಬದುಕಿನಾಚೆಯ ಲೀವ್ ಅಂಡ್ ಲೆಟ್ ಲೀವ್ ಬಗ್ಗೆ ಸಾಕ್ಷಾತ್ಕಾರವಾಗಬೇಕಾಗಿದೆ. ತಮ್ಮ ದುಡಿಮೆ, ಬದುಕು ಎಲ್ಲಾ ತಮ್ಮ ಆನಂದ ವೈಭೋಗಗಳಿಗೆ ಮೀಸಲು ಎಂಬ ಮನೋಭಾವದಿಂದ ಈಚೆ ಬರಬೇಕಿದೆ. ತನಗಾಗಿ ಸ್ವಲ್ಪ, ದೇಶಕ್ಕಾಗಿ ಸರ್ವಸ್ವ ಎಂಬ ಸಮಷ್ಠಿ ಹಿತದ ಆದರ್ಶ ಹೆಪ್ಪುಗಟ್ಟಬೇಕಿದೆ. ಒಂದು ದೇಶ,  ನಾಡು, ಒಂದು ಸಂವಿಧಾನ, ಒಂದು ಸಂಸ್ಕೃತಿ, ಒಂದು ಜೀವನಶೈಲಿ  ಇಲ್ಲದೆ ತಮ್ಮ ಯಾವ ದುಡಿಮೆಗೆ ಬೆಲೆಯಿಲ್ಲ, ಸ್ವಾತಂತ್ಯ್ರಕ್ಕೆ ಅರ್ಥವೂ ಇಲ್ಲ, ಅಂತಹ ಒಂದು ಸ್ವಾತಂತ್ರ್ಯದ ಖುಷಿಯನ್ನು ಅನುಭವಿಸುವ ಮನಸ್ಥಿತಿಯೂ ಇರುವುದಿಲ್ಲ ಎಂಬುದು ಮನದಟ್ಟಾಗಬೇಕು. ನಮ್ಮ ಯೂನಿವರ್ಸಿಟಿ ಕ್ಯಾಂಪಸ್ಸುಗಳಲ್ಲಿ ಈ ಯುವಕರಿಗೆ ಇಂತಹ ಒಂದು ಅನೌಪಚಾರಿಕ ನೈತಿಕ ಶಿಕ್ಷಣ ಸಿಗಬೇಕಿದೆ. ತಮ್ಮ ಜೀವನದಲ್ಲಿ ಮುಂದೆಂದೋ ಪವಾಡ ನಡೆಯುತ್ತದೆ ಎಂದು ಕಾದು ಕುಳಿತ ಮಂದಿಗಿಂತ ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳುತ್ತಾ ದಿನವೂ   ಸೃಷ್ಟಿಸುತ್ತಿರುವ ಇಂತಹ ದೈತ್ಯ ಯುವಶಕ್ತಿ ತನ್ನ ಬೇರುಗಳನ್ನು ಹುಡುಕಬೇಕಿದೆ.  ಜಯ್ ಹೋ ಯುವಕರೇ..!

Tags

Related Articles

Leave a Reply

Your email address will not be published. Required fields are marked *

Language
Close