About Us Advertise with us Be a Reporter E-Paper

ಅಂಕಣಗಳು

ಸಮಯಪಾಲನೆ ಮುಖ್ಯವೋ? ಸಂಕಷ್ಟದಲ್ಲಿರುವವರಿಗೆ ಸಹಾಯ ಮುಖ್ಯವೋ?

-ಎಸ್‌.ಷಡಕ್ಷರಿ

ಮೇಲಿನ ಪ್ರಶ್ನೆಗೆ ಉತ್ತರ ಕೊಡುವ ನಿಜಜೀವನದ ಪ್ರಸಂಗವೊಂದು ಇಲ್ಲಿದೆ. ಈ ಪ್ರಸಂಗದ ಪಾತ್ರಧಾರಿಗಳು ಸಾಮಾನ್ಯಲ್ಲ! ಇಬ್ಬರೂ ಪ್ರಮುಖರೇ! ಒಬ್ಬರು ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು! ಮತ್ತೊಬ್ಬರು ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿದ್ದ ಅಡ್ಮಿರಲ್ ಪೆರೇರಾರವರು!

ಒಮ್ಮೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರೊಂದಿಗೆ ಅಡ್ಮಿರಲ್ ಪೆರೇರಾ ಅವರ ಮುಂಜಾನೆ 10.30ಕ್ಕೆ ನಿಗದಿಯಾಗಿತ್ತಂತೆ. ಪೆರೇರಾರವರ ಕಾರು ಪ್ರಧಾನಿಯವರ ಕಚೇರಿಯತ್ತ ನವದೆಹೆಲಿಯ ಮುಖ್ಯರಸ್ತೆಯೊಂದರಲ್ಲಿ ವೇಗವಾಗಿ ಹೋಗುತ್ತಿತ್ತು. ಆಗ ಪೆರೇರಾರವರಿಗೆ ದಾರಿಯಲ್ಲೊಂದು ವಿಚಿತ್ರ ದೃಶ್ಯ ಕಂಡಿತ್ತು. ರಸ್ತೆಯಲ್ಲಿ ಯುವಕನೊಬ್ಬ ಒಬ್ಬ ಮುದುಕನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ. ಹರುಕು ಬಟ್ಟೆ ಧರಿಸಿದ್ದ ಆತ ನಡೆಯಲಾರದೆ ನಡೆಯುತ್ತಿದ್ದ. ಭಾರದಿಂದ ಮುಗ್ಗರಿಸುತ್ತಿದ್ದ. ಇದನ್ನು ಕಂಡ ಪೆರೇರಾ ಕಾರನ್ನು ನಿಲ್ಲಿಸಲು ಡ್ರೈವ0ರಿಗೆ ಹೇಳಿದರು. ಕಾರಿನಿಂದಿಳಿದು ಯುವಕನನ್ನು, ‘ಮನುಷ್ಯನನ್ನು ಏಕೆ ಹೊತ್ತುಕೊಂಡು ಹೋಗುತ್ತಿದ್ದೀಯ?’ ಎಂದು ಕೇಳಿದರು. ಯುವಕ ‘ಇವರು ನನ್ನ ತಂದೆಯವರು. ನಾನಿವರನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋಗುತ್ತಿದ್ದೇನೆ. ಅವರಿಗೆ ತೀವ್ರ ಅನಾರೋಗ್ಯ. ನಡೆಯಲಾಗುವುದಿಲ್ಲ, ಟ್ಯಾಕ್ಸಿಯಲ್ಲೋ, ಆಟೋದಲ್ಲೋ ಕರೆದುಕೊಂಡು ಹೋಗುವಷ್ಟು ಹಣ ನನ್ನಲಿಲ್ಲ. ಆದ್ದರಿಂದ ಹೊತ್ತುಕೊಂಡೇ ಹೋಗುತ್ತಿದ್ದೇನೆ’ ಎಂದ.

ಇದನ್ನು ಕೇಳಿದ ಪೆರೇರಾರವರ ಕರುಳು ಕಿವುಚಿದಂತಾಯಿತು. ಅವರು ಕಾರಿನ ಹಿಂದಿನ ಸೀಟಿನಲ್ಲಿ ತಂದೆ-ಮಗನನ್ನು ಕೂರಿಸಿಕೊಂಡರು. ಅವರನ್ನು ನೇರ ಒಂದು ದೊಡ್ಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಸೇನೆಯ ಉಡುಪಿನಲ್ಲಿದ್ದ ಆಜಾನುಬಾಹು ಪೆರೇರಾರವರನ್ನು ಕಂಡ ಆಸ್ಪತ್ರೆಯ ಮುಖ್ಯಸ್ಥರು ತಮ್ಮಿಂದ ಏನಾಗಬೇಕೆಂದು ಪೆರೇರಾರವರು ‘ಈ ರೋಗಿಗೆ ದಯವಿಟ್ಟು ತಕ್ಷಣ ಸೂಕ್ತ ಚಿಕಿತ್ಸೆ ಕೊಡಿ. ನಾನು ಪ್ರಧಾನಿಗಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಅದರ ನಂತರ ಮತ್ತೆ ಇಲ್ಲಿಗೆ ಬಂದು ಇವರ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತೇನೆ’ ಎಂದು ಹೇಳಿ ಮತ್ತೆ ಕಾರನ್ನೇರಿ ಹೊರಟರು.

ಅವರು ಪ್ರಧಾನಿಯವರ ಕಚೇರಿ ತಲುಪಿದರು. ಆದರೆ ಅವರು ಹದಿನೈದು ನಿಮಿಷ ತಡವಾಗಿ ಬಂದಿದ್ದರು. ಪ್ರಧಾನಿಗಳ ಕಚೇರಿಯ ಅಧಿಕಾರಿಗಳು ‘ನೀವು ಹದಿನೈದು ನಿಮಿಷ ತಡವಾಗಿ ಬಂದಿದ್ದೀರಿ! ರಾಷ್ಟ್ರಪ್ರಮುಖರನ್ನು ಭೇಟಿಯಾಗುವಾಗ ಸಮಯ ಪರಿಪಾಲನೆ ಮುಖ್ಯವೆಂದು ನಿಮಗೆ ಎಂದು ಕಟುವಾಗಿ ಕೇಳಿದರಂತೆ. ಪೆರೇರಾರವರು ತಾಳ್ಮೆಯಿಂದಲೇ ‘ರಾಷ್ಟ್ರಪ್ರಮುಖರನ್ನು ಭೇಟಿಯಾಗುವಾಗ ಸಮಯ ಪರಿಪಾಲನೆ ಮುಖ್ಯವೆಂದು ನಾನು ಬಲ್ಲೆ. ಆದರೆ ರಾಷ್ಟ್ರದ ಪ್ರಜೆಯೊಬ್ಬ ಕಷ್ಟದಲ್ಲಿದ್ದಾಗ ಅವನಿಗೆ ಸಹಾಯ ಮಾಡುವ ಕರ್ತವ್ಯ ಪರಿಪಾಲನೆಯೂ ಮುಖ್ಯವಲ್ಲವೇ? ನಾನು ಬರುವುದು ತಡವಾದುದಕ್ಕೆ ಕಾರಣವಿದೆ!’ ಎನ್ನುತ್ತಾ ದಾರಿಯಲ್ಲಿ ನಡೆದ ಘಟನೆಯನ್ನು ವಿವರಿಸಿದರಂತೆ. ತಕ್ಷಣ ಅಧಿಕಾರಿಯು ಶಾಂತರಾದರು. ‘ನೀವು ಒಳ್ಳೆಯದನ್ನೇ ಮಾಡಿದ್ದೀರಿ!’ ಎಂದು ಸಮಾಧಾನ ಹೇಳಿ ಪೆರೇರಾರವರನ್ನು ಪ್ರಧಾನಿಯವರ ಭೇಟಿಗೆ ಕರೆದೊಯ್ದರಂತೆ. ಪೆರೇರಾರವರು ಪ್ರಧಾನಿಯ ಭೇಟಿಯ ನಂತರ ಮರಳಿ ತೆರಳಿ ರೋಗಿಯ ಯೋಗಕ್ಷೇಮ ವಿಚಾರಿಸಿದರಂತೆ! ಪೆರೇರಾರವರ ಧೈರ್ಯವನ್ನೂ, ದಯಾಭಾವವನ್ನೂ ಮೆಚ್ಚಿಕೊಳ್ಳಬೇಕಲ್ಲವೇ? ಅವರಿಗೂ, ಈ ಘಟನೆಯನ್ನು ದಾಖಲಿಸಿದ ಅಹಮದಾಬಾದಿನ ಹೆಡ್ವಿಗ್ ಲೂಯಿಸ್ ಮಹಾಶಯರಿಗೂ ಧನ್ಯವಾದಗಳು.

ಒಬ್ಬ ಸಾಮಾನ್ಯ, ಬಡ ಅಪರಿಚಿತ ಪ್ರಜೆಗೆ ಸಹಾಯ ಮಾಡುವುದಕ್ಕಾಗಿ ಪ್ರಧಾನಿಯವರ ಭೇಟಿಗೆ ಹದಿನೈದು ನಿಮಿಷ ತಡವಾಗಿ ಹೋಗುವ ಧೈರ್ಯ ನಮ್ಮಲ್ಲಿ ಎಷ್ಟು ಜನಕ್ಕೆ ಬಂದೀತು? ಬಹುಶಃ ಕಷ್ಟದಲ್ಲಿರುವ ಸಹಪ್ರಜೆಯೊಬ್ಬನ ಬಗ್ಗೆ ತೋರುವ ದಯಾಭಾವವೂ ಕರ್ತವ್ಯವೆಂದು ಭಾವಿಸಿದರೆ ಆ ಧೈರ್ಯ ಬರಬಹುದೇನೋ? ಇಂತಹ ಸಂದರ್ಭದಲ್ಲಿ ನಾವೇ ಏನು ಮಾಡುತ್ತಿದ್ದೆವು? ಯೋಚಿಸಬೇಕಾದ ವಿಷಯವಲ್ಲವೇ? ಸಮಯಪಾಲನೆ ಮುಖ್ಯವೆಂಬುದು ನಿಜವಾದರೂ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೂ ಅಷ್ಟೇ ಮುಖ್ಯ ಅಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close