About Us Advertise with us Be a Reporter E-Paper

ಅಂಕಣಗಳು

ಕಬ್ಬು ಬೆಳೆದವರ ಅಳಲು ಕೇಳುವವರು ಯಾರು?

ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ಮತ್ತು ದರ ನಿಗದಿ ವಿಷಯವಾಗಿ ಸಕ್ಕರೆ ಕಾರ್ಖಾನೆಗಳು ಮತ್ತು ರಾಜ್ಯ ಸರಕಾರದ ವಿರುದ್ಧ ಕಬ್ಬು ಬೆಳೆಗಾರರು ಕಳೆದೆರಡು ತಿಂಗಳಿನಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಸರಕಾರ ಸೌಜನ್ಯಕ್ಕೂ ಪ್ರತಿಭಟನಾಕಾರರನ್ನು ಕರೆದು ಮಾತನಾಡಿಲ್ಲ.

ರಾಜ್ಯದಲ್ಲಿರುವ 71 ಸಕ್ಕರೆ ಕಾರ್ಖಾನೆಗಳು ರೈತರಿಗೆ 450 ಕೋಟಿ ರುಪಾಯಿ ಪಾವತಿಸಬೇಕು. ರಾಜ್ಯದಲ್ಲೇ ಅತಿ ಸಕ್ಕರೆ ಕಾರ್ಖಾನೆಗಳು ಇರುವ ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯ ಬಹುತೇಕ ಬೆಳೆಗಾರರು ಈ ಬಾರಿ ಕಬ್ಬು ಕಟಾವು ಮಾಡದೆ ಪ್ರತಿಭಟನೆಗಿಳಿದಿದ್ದಾರೆ. ಇತ್ತ ಮಂಡ್ಯ, ಚಾಮರಾಜನಗರ ಜಿಲ್ಲೆಯ ರೈತರು ಕಳೆದ ಒಂದು ತಿಂಗಳಿನಿಂದ ಧರಣಿ, ಪ್ರತಿಭಟನೆ, ರಸ್ತೆ ತಡೆ ಮಾಡುವ ಮೂಲಕ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಬ್ಬು ಬೆಳೆಗೆ ನ್ಯಾಯೋಚಿದ ದರ ನಿಗದಿ ಮಾಡುವಂತೆ ಆಗ್ರಹಿಸಿ ಕಳೆದೆರಡು ತಿಂಗಳಿನಿಂದ ದೊಡ್ಡ ಸಂಖ್ಯೆಯ ರೈತ ಸಮುದಾಯ ಹೋರಾಡುತ್ತಿದ್ದರೂ ರಾಜ್ಯ ಸರಕಾರಕ್ಕೆ ಕಾಣುತ್ತಿಲ್ಲ.

ಕಬ್ಬು ನುರಿಸಿದ 14ದಿನಗಳಲ್ಲಿ ಬಿಲ್ ಪಾವತಿಸಬೇಕು ಎಂಬ ಆದೇಶವಿದೆ. ಆದರೆ ಆರೇಳು ತಿಂಗಳು ಕಳೆದರೂ ಕಾರ್ಖಾನೆಗಳು ಬಿಲ್ ಪಾವತಿಸುತ್ತಿಲ್ಲ. ಮನಬಂದಂತೆ ದರ ನಿಗದಿಪಡಿಸುವ ಕಾರ್ಖಾನೆಗಳು ಕಬ್ಬು ಪೂರೈಕೆ ಕಡಿಮೆಯಾಗುತ್ತಿದ್ದಂತೆ ದರ ಇಳಿಸಿ ರೈತರನ್ನು ಗೊಂದಲಕ್ಕೀಡು ಮಾಡುತ್ತಿವೆ. ರಾಜಕೀಯ ನಾಯಕರ ಮಾಲೀಕತ್ವದಲ್ಲಿರುವ ಕಾರ್ಖಾನೆಗಳು ಹೆಚ್ಚಿನ ದರ ಘೋಷಣೆ ಮಾಡಿದರೂ ಕಬ್ಬು ನುರಿಸಿದ ಬಳಿಕ ಬೆಳೆಗಾರರಿಗೆ ಬೇರೊಂದು ದರ ಪಾವತಿಸಿ ಕಣ್ಣಿಗೆ ಮಣ್ಣೆರೆಚುತ್ತಿವೆ.

ಮುಖ್ಯವಾಗಿ ಪ್ರಭಾವಿ ರಾಜಕಾರಣಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳೇ ಕಬ್ಬು ಬಿಲ್ ಬಾಕಿ ಉಳಿಸಿಕೊಂಡಿವೆ. ಈ ವಿಷಯದಲ್ಲಿ ಅಧಿಕಾರಿಗಳೂ ಕೈ ಚೆಲ್ಲಿ ಕುಳಿತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಲಾಬಿಗೆ ಅಧಿಕಾರಿಗಳು ಮಣಿದಿದ್ದಾರೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ಹಿಂದೆ ಸಕ್ಕರೆ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಅವರನ್ನು ರಾತೋರಾತ್ರಿ ವರ್ಗಾವಣೆ ಮಾಡಿದ್ದೇ ಇಂದು ಅಧಿಕಾರಿಗಳ ಮೌನವಹಿಸಲು ಕಾರಣ ಎಂಬ ಮಾತುಗಳಿವೆ.

ಆದ್ದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೂಡಲೇ ಮಧ್ಯೆ ಪ್ರವೇಶಿಸಿ ಕಬ್ಬು ಬೆಳೆಗಾರರ ಹಿತ ಪ್ರತಿ ವರ್ಷವೂ ಕಬ್ಬು ಖರೀದಿ ಉದ್ದೇಶಕ್ಕೆ ಕೇಂದ್ರ ಸರಕಾರ ನಿಗದಿ ಮಾಡುವ ಎಫ್‌ಆರ್‌ಪಿ (ನ್ಯಾಯೋಚಿತ ಮತ್ತು ಲಾಭದಾಯಕ ದರ) ಆಧರಿಸಿ ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಒಂದು ವೇಳೆ ಎಫ್‌ಆರ್‌ಪಿ ಕಡಿಮೆಯಾದರೂ ರಾಜ್ಯದ ಕಡೆಯಿಂದ ಪ್ರೋತ್ಸಾಹ ಧನ ಸೇರಿಸಿ ಕೊಡುವ ಮೂಲಕ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಸಂಖ್ಯೆಯನ್ನು ತಡೆಯಬೇಕಿದೆ. ಇಲ್ಲವಾದಲ್ಲಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯೇ ಸರಕಾರಕ್ಕೆ ಸವಾಲಾಗಿ ಪರಿಣಮಿಸಲಿದೆ.

Tags

Related Articles

Leave a Reply

Your email address will not be published. Required fields are marked *

Language
Close