About Us Advertise with us Be a Reporter E-Paper

ಅಂಕಣಗಳು

ಸ್ವತಂತ್ರ ಧರ್ಮ ಎಂದು ಹುಯಿಲೆಬ್ಬಿಸಿ ಗುರಿ ಮುಟ್ಟದವರು!

ಕೆ.ಪಿ. ವಿಶ್ರಾಂತ ಉಪನ್ಯಾಸಕರು

ಪೂರ್ವಗ್ರಹ ಪೀಡಿತ ಪ್ರಖ್ಯಾತ ಸಾಹಿತಿಗಳು, ಸ್ವಹಿತಾಸಕ್ತಿಯ ರಾಜಕೀಯ ಧುರೀಣರು, ಅರೆಬರೆ ಧಾರ್ಮಿಕ ಜ್ಞಾನ ಉಳ್ಳವರು, ಎಲ್ಲ ಪೂರ್ವಗ್ರಹ ಪೀಡಿತರ, ಸ್ವಹಿತಾಸಕ್ತಿ ಧುರೀಣರ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುವ ಆರ್ಥಿಕವಾಗಿ ಸದೃಢವಾಗಿರುವ ಕೆಲ ಮಠಪತಿಗಳು ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂದೂ, ವೀರಶೈವರು ಹಿಂದೂಗಳು ಮತ್ತು ಲಿಂಗಾಯತರು ಹಿಂದೂಯೇತರ ಸ್ವತಂತ್ರ ಧರ್ಮಿಗಳು ಎಂದು ಹುಯಿಲೆಬ್ಬಿಸಿ ಗುರಿ ಮುಟ್ಟಲಾರದೆ ಹತಾಶರಾಗಿ ಚಡಪಡಿಸುತ್ತಿರುವ ಸನ್ನಿವೇಶ ನಿರ್ಮಾಣವಾಗಿರುವ (ಅವರುಗಳು ಬ್ರಿಟಿಷರಂತೆ ಸಮಾಜ ವಿಘಟನೆ ಮಾಡಿ ಸಂತೋಷದ ಬೇಳೆ ಹೋಳಿಗೆ ತಿನ್ನುವವರು) ಸಮಾಜ ಹಿತಚಿಂತಕರಿಗೆ ನನ್ನ ವಿಚಾರ ತಿಳಿಸುವ ಉದ್ದೇಶ ಬರಹದ ಹಿಂದೆ ಇದೆ.

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಅದಕ್ಕೆ ಸಂವಿಧಾನಾತ್ಮಕ ಮನ್ನಣೆ ದೊರೆಯಬೇಕುಎಂದು ವಿವರಿಸುತ್ತಾ ದಿ. ಡಾ. ಎಂ.ಎಂ. ಕಲಬುರ್ಗಿ ಅವರು ಹೇಳಿರುವ ವಚನ ಸಾಹಿತ್ಯದ ವಿವರಣೆಯನ್ನು ಕೆಲ ದಿನಗಳ ಹಿಂದೆ ಗೊ.ರು. ಚನ್ನಬಸಪ್ಪನವರು ಪತ್ರಿಕೆಯಲ್ಲಿ ಬರೆದು ತಿಳಿಸಿದ್ದರು. ಅದೇ ಲೇಖನಕ್ಕೆ ಭಕ್ತಿಭಂಡಾರಿ ಬಸವಣ್ಣನವರ ಸಮಾಜೋಧಾರ್ಮಿಕ ಆಂದೋಲನ ಪೂರ್ವದಲ್ಲಿ ಹಾಗೂ ಆಂದೋಲನ ಕಾಲದಲ್ಲಿ ಮತ್ತು ನಂತರದಲ್ಲಿ ಸಹ ವಚನ ಸಾಹಿತ್ಯ ರಚಿತವಾಗಿದೆ. ಮೂರನೇ ಹಂತದಲ್ಲಿ ವೀರಶೈವ ಧರ್ಮಕ್ಕೆ ಹೊಂದಾಣಿಕೆ ಆಗುವಂತೆ ಕೆಲವು ವಚನ ರಚನೆಗಳಾಗಿವೆ ಮತ್ತು ಕೆಲವು ವಚನಗಳನ್ನು ತಿರುಚಲಾಗಿದೆ ಎಂದು ಗೊರುಚ ವಿವರಿಸಿದ್ದಾರೆ. (ಅಂದರೆ ಬಸವಪೂರ್ವ ಯುಗದಲ್ಲಿ ವಚನಗಳ ರಚನೆ ಪ್ರಾರಂಭವಾಗಿತ್ತು ಎಂಬ ಡಾ. ಎಂ. ಚಿದಾನಂದ ಮೂರ್ತಿಗಳ ಸಂಶೋಧನೆಯನ್ನು ಒಪ್ಪಿಕೊಂಡಂತಾಗಿದೆ.) ಇದು ನಿಜವಿದ್ದರೂ ಇರಬಹುದು. ಏಕೆಂದರೆ ಬಸವಣ್ಣನವರು, ಮತ್ತು ಅಕ್ಕಮಹಾದೇವಿಯಾದಿಯಾಗಿ ಶರಣ ಸಮೂಹದವರ ವಚನಗಳಲ್ಲಿ ವೀರಶೈವಪದ ಬಳಕೆಯಾಗಿದೆ.

ಇತ್ತೀಚೆಗೆ ಲಿಂಗಾಯತಪದ ಪ್ರಯೋಗ ರುವ ವಚನಗಳನ್ನು ರಚಿಸಿ ವಚನ ಸಾಹಿತ್ಯಕ್ಕೆ ಸೇರಿಸಲಾಗಿದೆ. ತಿರುಚುವಿಕೆ, ಸೇರಿಸುವಿಕೆ ಪೂರ್ವಗ್ರಹ ಪೀಡಿತ ತಲೆತಿರುಕರ ಕೆಲಸ. ಏಕೆಂದರೆ, ‘ವೀರಶೈವಪದ ಸಾಹಿತ್ಯಕವಾಗಿ ಮತ್ತು ಲಿಂಗಾಯತಆಡುಮಾತಿನಲ್ಲಿ ಬಳಕೆಯಾಗುತ್ತಿದ್ದು ಎರಡೂ ಒಂದೇ ಸಮುದಾಯವನ್ನು ಸೂಚಿಸಲು ಬಳಸುತ್ತಾರೆ. ವೀರಶೈವ (ಲಿಂಗಾಯತ)ವು ಹಿಂದೂ ಧರ್ಮದ ಕವಲು. ಜಾತಿಗೆ ಬೇರು, ಕೊಂಬೆ, ರೆಂಬೆಗಳೆಲ್ಲಾ ಹಿಂದೂ ಬೃಹದಾಕಾರದ ಸರ್ವಋತುಗಳಲ್ಲಿ ನಿತ್ಯ ಹರಿದ್ವರ್ಣವಾಗಿದ್ದು ಹೂ, ಹಣ್ಣು ಬಿಡುತ್ತಿರುವ ಕಲ್ಪವೃಕ್ಷಕಾಮಧೇನು.

ಮಹಾನ್ ಮಾನವತಾವಾದಿ ಭಕ್ತಿ ಭಂಡಾರಿ ಬಸವಣ್ಣನವರು ಯಾರಿಗೆ ಪೂಜನೀಯರಲ್ಲ? ಯಾವುದೇ ವೀರಶೈವನು (ಅರ್ಥಾತ್ ಲಿಂಗಾಯತನು) ಪ್ರಾತಃ ಎಚ್ಚರಗೊಂಡ ತಕ್ಷಣ ಎದ್ದುಕುಳಿತು, ಅಂಗೈಗಳನ್ನು ಹೊಸಕಿ ದರ್ಶನ ಮಾಡುತ್ತಾ ಬಸವ, ಬಸವಎಂದು ಉಚ್ಚರಿಸಿ ಶಿವಶಕ್ತಿಯರನ್ನು ನೆನೆಯುತ್ತಾನೆ. ಏಕೆಂದರೆ ಪ್ರಾಚೀನ ಕಾಲದಲ್ಲಿ ರೇಣುಕಾಚಾರ್ಯರಾದಿಯಾಗಿ ಪಂಚ ಪ್ರಾಚಾರ್ಯರುಗಳಿಂದ ಸ್ಥಾಪಿಸಲ್ಪಟ್ಟ ವೀರಶೈವ ಧರ್ಮವನ್ನು ಪುನರುತ್ಥಾನಗೊಳಿಸಿ ವಚನ ಸಾಹಿತ್ಯದ ಮೂಲಕ ಜೀವನ ದರ್ಶನ, ಮಾರ್ಗದರ್ಶನವನ್ನು ಮಾಡದೇಹೋಗಿದ್ದರೆ ವೀರಶೈವರು ನಾಮಾವಶೇಷವಾಗಿಬಿಡುತ್ತಿದ್ದರು. ಬೌದ್ಧರೋ, ಜೈನರೋ ಇಲ್ಲ ಮುಸಲ್ಮಾನರೋ ಆಗಿರುತ್ತಿದ್ದರು. ಪರಶಿವನ ಅಪ್ಪಣೆ ಮೇರೆಗೆ, ನಂದೀಶನು ಬಸವಣ್ಣರಾಗಿ ಅವತರಿಸಿ, ಪ್ರಾಚೀನ ವೀರಶೈವವನ್ನು ಪುನರುತ್ಥಾನ ಮಾಡಿದರು ಎಂಬುದಾಗಿ ನಂಬಿದ್ದಾರೆ. ಅವರು ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ನೀತಿಯುತ ನೆಮ್ಮದಿಯ ಜೀವನ ನಡೆಸಲು, ಶಿವಶಕ್ತಿಯರನ್ನು ಆರಾಧಿಸುವ ಭಕ್ತಿ ಜೀವನ ನಡೆಸಲು ಸಮುದಾಯವನ್ನು ಪ್ರೇರೇಪಿಸಿದ್ದು ವೀರಶೈವರ ಪೂರ್ವ ಪುಣ್ಯ. ಅನುದಿನ ಇಷ್ಟಲಿಂಗ ಪೂಜೆ ಮಾಡುವಾಗ, ಶಿವ ಶಕ್ತಿ ಷಡಕ್ಷರ ಮಂತ್ರ ಪಠಣದ ಜತೆಗೆ ಪಠಿಸುತ್ತಾ ವೀರಶೈವರು ಪುಷ್ಪಾರ್ಚನೆ ಮಾಡುತ್ತಾರೆ.

ಇಷ್ಟಲಿಂಗಧಾರಿಗಳಾದ ವೀರಶೈವರು (ಲಿಂಗಾಯತರು) ಬಸವಪೂರ್ವ ಯುಗದಲ್ಲಿಯೇ ಇದ್ದರು ಎಂಬುದಕ್ಕೆ ಹರಪ್ಪಮೊಹೆಂಜೋದಾರೋ ಉತ್ಖನನದಲ್ಲಿ ದೊರೆತಿರುವ ಇಷ್ಟಲಿಂಗವನ್ನು ಎಡ ಅಂಗೈಯಲ್ಲಿಟ್ಟು ಧ್ಯಾನಮಗ್ನವಾಗಿರುವ ಶಿಲ್ಪಗಳು ದೊರೆತಿರುವುದಕ್ಕಿಂತಲೂ ಮಿಗಿಲಾದ ಸಾಕ್ಷಿ ಬೇಕೇ? ಲಿಂಗಾಯತರ (ವೀರಶೈವರ) ಅಷ್ಟಾವರಣಗಳಾದ ಮಂತ್ರ, ವಿಭೂತಿ, ರುದ್ರಾಕ್ಷಿ ಆದಿಗಳು ಬಸವಣ್ಣನವರ ಕೊಡುಗೆಯೇ? ಗುರುಲಿಂಗಜಂಗಮಪಾದೋದಕಪ್ರಸಾದ ಪ್ರಜ್ಞೆ ಹಿಂದೂಗಳೆಲ್ಲರಲ್ಲಿ ಇಲ್ಲವೇ? ಜಗದ್ಗುರು ಶಂಕರಾಚಾರ್ಯರಾದಿಯಾಗಿ ಧಾರ್ಮಿಕ ಪುರುಷರು ಬ್ರಾಹ್ಮಣರಿಗೆ (ಹಿಂದೂಗಳೆಲ್ಲರಿಗೂ) ಧಾರ್ಮಿಕ ಬೋಧನೆ ಮಾಡಿರುವುದರಿಂದ ಅವರೇ ಬ್ರಾಹ್ಮಣ ಮತ ಸ್ಥಾಪಕರು ಹೇಳಬಹುದೇ? ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜರು ತ್ರಿಮತಸ್ಥ ಬ್ರಾಹ್ಮಣ ಸ್ಥಾಪಕರೇ? ಮಹಾ ಮಾನವತಾವಾದಿ ಬಸಣ್ಣನವರು ಪ್ರಚಲಿತವಿದ್ದ ನಿಮ್ನ, ಪರಿಶಿಷ್ಟ ಮತಾವಲಂಬಿಗಳಿಗೆ ಇಷ್ಟಲಿಂಗಧಾರಣೆ ಮಾಡಿ ಮಂತ್ರೋಪದೇಶದಿಂದ ವೀರಶೈವರನ್ನಾಗಿ ಮಾಡಿದಂತೆ, ಶ್ರೀ ರಾಮಾನುಜಾಚಾರ್ಯರು ಪರಿಶಿಷ್ಟವರ್ಗದವರಿಗೆ ವೈಷ್ಣವ ತತ್ವ ಬೋಧಿಸಿ ಬ್ರಾಹ್ಮಣ ಶಾಖೆಗೆ ಸೇರಿಸಿದ ಮಾತ್ರಕ್ಕೆ ವೈಷ್ಣವರೆಲ್ಲಾ ವೈಷ್ಣವಧರ್ಮ ಸ್ವತಂತ್ರ ಧರ್ಮಎಂದು ಬೇಡಿಕೆ ಸಲ್ಲಿಸಬಹುದೇ?

ಲಿಂಗಾಯತವು ಸ್ವತಂತ್ರ ಧರ್ಮವಾದರೆ ಲಿಂಗಾಯತರ ಗುರುಜಂಗಮಅರ್ಚಕರುಗಳೆಲ್ಲಾ ಕಾವಿ ಉಡುಪು ಧರಿಸುವುದನ್ನು ಬಿಡುವರೇ? ಅವರ ಭಕ್ತರಾದಿಯಾಗಿ ಎಲ್ಲರೂ ವಿಭೂತಿರುದ್ರಾಕ್ಷಿ ಅವರ ಮಹಿಳೆಯರು ಅರಿಶಿನಕುಂಕುಮ, ಮಾಂಗಲ್ಯ ಆದಿ ಮುತ್ತೈದೆ ಕುರುಹುಗಳನ್ನು ತ್ಯಜಿಸುವರೇ? ಏಕೆಂದರೆ ಅವೆಲ್ಲ ಸನಾತನ ಹಿಂದೂ ಧರ್ಮೀಯರ ಕುರುಹು, ಚಿಹ್ನೆಗಳು. ಹಿಂದೂಗಳು ಆಚರಿಸುವ ಗೌರಿಗಣೇಶ, ಯುಗಾದಿ, ನಾಗರಪಂಚಮಿ, ದೀಪಾವಳಿ ಮುಂತಾದ ಹಬ್ಬಗಳ ಆಚರಣೆ ಬಿಡುವರೇ? ಏಕೆಂದರೆ ಅವೆಲ್ಲಾ ಸನಾತನ ಹಿಂದೂ ಧರ್ಮೀಯರ ಆಚರಣೆಗಳು. ವೀರಶೈವರು ಸನಾತನ ಧರ್ಮದ ಭಾಗವೇ ಎಂಬುದು ಹಾಗೂ ಅದಕ್ಕೆ ಅನುಗುಣವಾಗಿ ಬಸವಣ್ಣನವರೂ ಸಹ ಇಷ್ಟಲಿಂಗ ಪೂಜೆ ಮೊದಲುಗೊಂಡು ಅವುಗಳನ್ನು ಅನುಸರಿಸಿರುವುದು ವಜ್ರಕಠೋರ ಸತ್ಯ.

ಸ್ವತಂತ್ರ ಧರ್ಮ ಪ್ರತಿಪಾದಕರು ಯಾವ ಧರ್ಮಗಳನ್ನು ಅವಲಂಬಿತ ಧರ್ಮಗಳುಎನ್ನುತ್ತಾರೆ? ಏಕೆ ಹಾಗೆ ಪ್ರತಿಪಾದಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ‘ಅತ್ಯಂತ ಪ್ರಾಚೀನ ಧರ್ಮ ಎನ್ನಲಾಗುತ್ತಿರುವ ವೀರಶೈವ ಧರ್ಮ (ಮತ) ಸೇರಿದಂತೆ ಹಿಂದೂ ಧರ್ಮ ಮಾತ್ರವಲ್ಲ, ವಿಶ್ವದ ಯಾವುದೇ ಧರ್ಮಕ್ಕಿಂತ ಭಿನ್ನವಾದ ವೈಚಾರಿಕ ಧರ್ಮ ಲಿಂಗಾಯತ ಧರ್ಮಎಂಬ ಮಾಣಿಕ್ಯನುಡಿಗಳನ್ನು ಪ್ರಖ್ಯಾತ ಸಾಹಿತಿಯೊಬ್ಬರ ಲೇಖನದಲ್ಲಿ ಓದಿದ್ದೇನೆ. ‘ಪ್ರಗತಿಪರ ವಿಚಾರಧಾರೆಯ ವಚನ ಸಾಹಿತ್ಯವೇ ಲಿಂಗಾಯತ ಧರ್ಮಕ್ಕೆ ಮೂಲಾಧಾರಎಂಬುದು ಮತ್ತೊಂದು ಅವರವರ ಧರ್ಮಕ್ಕೆ ಅವರವರ ಧಾರ್ಮಿಕ ಸಾಹಿತ್ಯವೇ ಆಧಾರ ಅಲ್ಲವೇ?

ಲಿಂಗಾಯತ ಧರ್ಮದ ಮೂಲಾಧಾರಗಳಾದ ಅಷ್ಟಾವರಣ, ಷಟ್‌ಸ್ಥಲ, ಪಂಚಾಚಾರಗಳ ವಿವರಣೆ, ಅವುಗಳ ಶ್ರೇಷ್ಠತೆ, ಆಚರಣೆಗಳ ವ್ಯಾಖ್ಯಾನಗಳ ಮೂಲಾಧಾರ ಸಾಹಿತ್ಯ ಸಿದ್ಧಾಂತ ಶಿಖಾಮಣಿಗ್ರಂಥವೇ ಎಂಬುದನ್ನು ಡಾ. ಜಚನಿ ಅವರು ತಮ್ಮ ಬೃಹತ್ ಗ್ರಂಥ ಜೀವನ ಸಿದ್ಧಾಂತದಲ್ಲಿ ವಿವರಿಸಿರುವುದನ್ನು ಮತ್ತು ತತ್ವಗಳಿಗೆ ಅನುಗುಣವಾದ ವಚನಗಳನ್ನು ಬಸವಾದಿ ಶರಣರು ರಚಿಸಿರುವುದನ್ನು ಲಿಂಗಾಯತರೆಲ್ಲರೂ ತಿಳಿದಿದ್ದಾರೆ. ನಮ್ಮ ವಚನ ಸಾಹಿತ್ಯ ಮಾತ್ರ ವಿಚಾರ ಸಾಹಿತ್ಯ ನಾವು ಲಿಂಗಾಯತರು ಹೇಳಿಕೊಂಡರೆ, ಬಾವಿಯೊಳಗಿನ ಕಪ್ಪೆಯಾಗುತ್ತೇವೆ. ಆಧುನಿಕ ವಿಚಾರವಾದಿಗಳೆಲ್ಲಾ ಅದನ್ನು ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂಬ ಮತ್ತೊಂದು ಸುವರ್ಣ ಲೇಪಿತಅಂಶವನ್ನು ಮುಂದಿಡಲಾಗುತ್ತಿದೆ.

ಆಧುನಿಕ ವಿಚಾರವಾದಿಗಳು ಕಾಕ(ಕಾಂಗ್ರೆಸ್, ಕಮ್ಯುನಿಸ್‌ಟ್) ಪ್ರೇರಿತರು ಎಂಬುದು ಜಗಜ್ಜಾಹೀರಾಗಿದೆ. ಅವರಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಮಾತ್ರವಲ್ಲ, ವೇದಗಳು, ಆಗಮ, ಶ್ರುತಿಸ್ಮೃತಿಗಳೆಲ್ಲವೂ ಕಾಗಕ್ಕಗುಬ್ಬಕ್ಕನ ಅಡಗೂಲಜ್ಜಿ ಕತೆಗಳು. ಅವರ ಪ್ರಕಾರ ದ್ರಾವಿಡರೇ ಭರತ ಭೂಮಿಯ ಮೂಲ ನಿವಾಸಿಗಳು. ಇತಿಹಾಸ ತಿಳಿಯದ, ಧಾರ್ಮಿಕ ಸಾಹಿತ್ಯ ಓದಿ ಅರ್ಥಮಾಡಿಕೊಳ್ಳದ ವಿಘಟಕರ, ಏನಕೇನ ಪ್ರಸಿದ್ಧಿ ಬಯಸುವವರ ವಾದಗಳನ್ನುಕೇಳಿ ನಗೆಯು ಬರುತಿದೆ, ಎನಗೆ ನಗೆಯು ಬರುತಿದೆ!’

Tags

Related Articles

Leave a Reply

Your email address will not be published. Required fields are marked *

Language
Close