About Us Advertise with us Be a Reporter E-Paper

ಅಂಕಣಗಳು

ಆಯುಷ್ಯವನ್ನು ವಿಶೇಷವಾಗಿ ಬದುಕಿದ ಧೀಮಂತ!

ರಾಜಕಾರಣಿಗಳಲ್ಲಿ ಎರಡು ವಿಧ. ಒಂದು – ಸತ್ತ ಮೇಲೆ ಸಂತರಾಗುತ್ತಾರೆ. ಬದುಕಿದ್ದಾಗ ಅವರು ಪಡೆದ ಗೌರವ, ಮರ್ಯಾದೆ, ನಮಸ್ಕಾರಗಳೆಲ್ಲ ಅವರ ಹುದ್ದೆ ಮತ್ತು ಕಾಂಚಾಣದ ಸಂಪತ್ತಿನಿಂದ ಅವರಿಗೆ ದಕ್ಕಿದ್ದವುಗಳು. ಅಷ್ಟು ಬಿಟ್ಟರೆ ಜನರಿಗೆ ಅವರ ಬಗ್ಗೆ ಗೌರವ ಭಾವನೆಯೇನೂ ಇರುವುದಿಲ್ಲ. ಅವರಲ್ಲಿ ಕೆಲವು ರಾಜಕಾರಣಿಗಳು ಜೀವಂತವಿದ್ದಾಗ ಸಾಧ್ಯವಾದಷ್ಟು ದುಡ್ಡು, ಆಸ್ತಿಪಾಸ್ತಿ ಮಾಡಿರುತ್ತಾರೆ. ಭ್ರಷ್ಟಾಚಾರವಂತೂ ಅವರಿಗೆ ಗಾಳಿಸೇವನೆಯಷ್ಟೇ ಸಹಜವಾಗಿರುತ್ತದೆ. ಕೆಲವೊಮ್ಮೆ  ಆರೋಪದ ಮೇಲೆ ಜೈಲುವಾಸವನ್ನೂ ಮಾಡಿ ಬಂದಿರುತ್ತಾರೆ. ರಾಜಕಾರಣವೆಂಬುದು ಕಳ್ಳ ಕೊರಮರ ಕೊನೆಯ ನಿಲ್ದಾಣ ಎಂಬ ಇಂಗ್ಲೀಷ್ ಮಾತಿಗೆ ಅನ್ವರ್ಥದಂತೆ ಬದುಕಿ ಹೋಗುವ ಇಂಥ ವ್ಯಕ್ತಿಗಳು ತೀರಿಕೊಂಡಾಗ ದುಃಖಪಡುವವರು ಯಾರು? ಕೆಲವೊಮ್ಮೆ ಅತ್ತ ಅಂತ್ಯಸಂಸ್ಕಾರದ ಕೆಲಸಗಳೂ ಶುರುವಾಗುವ ಮೊದಲೇ ಸ್ವಂತ ಮಕ್ಕಳು ಮತ್ತು ದಾಯಾದಿಗಳಲ್ಲಿ ಆಸ್ತಿಪಾಸ್ತಿಗಾಗಿ ಕಲಹ ಪ್ರಾರಂಭವಾಗಿರುತ್ತದೆ! ಆದರೂ ಈ ರಾಜಕಾರಣಿಗಳು ಸತ್ತ ತಕ್ಷಣ ಪಡೆಯುುದು ಸಂತ ಪದವಿಯನ್ನೇ. ಅದುವರೆಗೆ ಆ ವ್ಯಕ್ತಿಯ ಬೆನ್ನ ಹಿಂದೆ ಮಾತಾಡಿಕೊಳ್ಳುತ್ತಿದ್ದ ಪ್ರಪಂಚ  ಆತನನ್ನು ಇಂದ್ರ ಚಂದ್ರ ಎಂದು ಹೊಗಳತೊಡಗುತ್ತದೆ. ತೀರಿಕೊಂಡವರ ವಿಷಯದಲ್ಲಿ ಕೆಟ್ಟದು ಮಾತಾಡಬಾರದು ಎಂಬ ಸಂಸ್ಕೃತಿಯ ಕಟ್ಟಳೆಯೊಂದೇ ಇಲ್ಲಿ ಕೆಲಸ ಮಾಡುವುದು. ಇನ್ನು ಎರಡನೆ ವರ್ಗ – ಬದುಕಿದ್ದಾಗ, ತಮ್ಮ ಜೀವನದ ಒಂದು ಘಟ್ಟದಲ್ಲಿ ಮೆರೆದಿರುತ್ತಾರೇನೋ ಸರಿಯೇ. ಆದರೆ ತಮ್ಮ ಅತ್ಯಂತ ಫಲಪ್ರದ ದಿನಗಳು ಕಳೆದ ಮೇಲೆ ತೆರೆಮರೆಗೆ ಸರಿಯುತ್ತಾರೆ. ಅಧಿಕಾರದಿಂದ ಕೆಳಗಿಳಿದ ಕ್ಷಣದಿಂದ ಇವರನ್ನು ಯಾರೂ ದರಕರಿಸುವುದಿಲ್ಲ. ಸಿಂಹಾಸನದಲ್ಲಿ ಕೂತಿದ್ದಾಗ ಕೈಗೊಂದು ಕಾಲಿಗೊಂದು ಎಂಬಂತೆ ಎಡತಾಕುತ್ತಿದ್ದ ಆಳುಕಾಳುಗಳೆಲ್ಲ ಈಗ  ಬಹುಶಃ ಅದೇ ಕಾರಣಕ್ಕೆ ಇರಬೇಕು, ಕರುಣಾನಿಧಿಯಂತಹ ರಾಜಕಾರಣಿಗಳು ಜೀವನದ ಕೊಟ್ಟಕೊನೆಯ ಕ್ಷಣದವರೆಗೂ ಅಧಿಕಾರದಲ್ಲಿರಲು ಹಂಬಲಿಸಿದ್ದು. ಮುಂದಿನ ಮುಖ್ಯಮಂತ್ರಿ ನಾನೇ ಎಂಬ ಅರ್ಥರಹಿತ ಘೋಷಣೆ ಮಾಡುತ್ತಿದ್ದದ್ದು. ಬದುಕಿದ್ದಾಗಲೇ ಅಜ್ಞಾತರಾಗುವ ಇವರನ್ನು ತೀರಿಕೊಂಡ ಮೇಲೆ ನೆನಪಿಸಿಕೊಳ್ಳುವವರುಂಟೆ? ಎಲ್ಲೋ ಮೂಲೆಯಲ್ಲಿ ಅವರ ಅಂತ್ಯಸಂಸ್ಕಾರದ ಕಾರ್ಯಕ್ರಮ ಸದ್ದಿಲ್ಲದೆ ನಡೆದುಹೋಗುತ್ತದೆ.

ಈ ಎರಡೂ ವರ್ಗಕ್ಕೆ ಸೇರದ ವ್ಯಕ್ತಿತ್ವವಾದ್ದರಿಂದಲೇ ಅಟಲ್ ಬಿಹಾರಿ ವಾಜಪೇಯಿಯವರನ್ನು ರಾಜಕಾರಣಿ ಎನ್ನಬೇಕೆ? ಆ ಕ್ಷೇತ್ರಕ್ಕೆ ಸೀಮಿತಗೊಳಿಸಿ ಮಾತಾಡಬೇಕೆ? ಎಂಬ ಜಿಜ್ಞಾಸೆ ಹುಟ್ಟುತ್ತದೆ. ಭಾರತದ  ಚರಿತ್ರೆಯಲ್ಲಿ ಅಜಾತಶತ್ರು ಎಂಬ ಬಿರುದಿಗೆ ಭಾಜನರಾಗಬಲ್ಲ ಏಕೈಕ ವ್ಯಕ್ತಿ ವಾಜಪೇಯಿ. ಅವರು, ಸತ್ತ ಮೇಲೆ ಕಾಟಾಚಾರಕ್ಕೆ ಸಂತರಾಗುವ ಖಳರಿಂದ ಗಾವುದ ಗಾವುದದಷ್ಟು ದೂರವೂ ಎತ್ತರವೂ ಇದ್ದವರು. ತನ್ನ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಅವರು ಅಧಿಕಾರವಿಲ್ಲದೆ ಖಾಸಗಿ ಮನುಷ್ಯನಂತೆ ಕಳೆದರೂ ಭಾರತ ಅವರನ್ನು ಎಂದೆಂದೂ ಮರೆಯಲಿಲ್ಲ. ಹತ್ತು ವರ್ಷಗಳ ಯುಪಿಎ ಸರಕಾರದ ಆಡಳಿತಕ್ಕೂ ವಾಜಪೇಯಿಯವರನ್ನು ದೇಶದ ಜನರ ಮನಸ್ಸಿನಿಂದ ಕಿತ್ತೆಸೆಯಲು ಆಗಲಿಲ್ಲ. ಪ್ರಾಮಾಣಿಕತೆ, ನಿಷ್ಠೆ, ದಕ್ಷತೆ, ಸೌಹಾರ್ದ, ಪ್ರಸಂಗಾವಧಾನ,  ಎಲ್ಲವೂ ಮೇಳೈಸಿದ ಭಾರತದ ಒಬ್ಬ ರಾಜಕಾರಣಿಯನ್ನು ಆರಿಸಿಕೊಡಿ ಎಂದರೆ ಜನರ ಆಯ್ಕೆ ನೆಹರೂ ಅಲ್ಲ, ಇಂದಿರಾ ಅಲ್ಲ, ಮೊರಾರ್ಜಿ ಅಲ್ಲ, ಮನಮೋಹನ್ ಅಂತೂ ಅಲ್ಲವೇ ಅಲ್ಲ – ಅದು ಏನಿದ್ದರೂ ವಾಜಪೇಯಿ ಮಾತ್ರ.

ಮೈಯ ಕಣಕಣದಲ್ಲೂ ಭಾರತ

ವಾಜಪೇಯಿಯವರದ್ದು ಅವಧೂತ ಪಥ. ಅವರು ವೇದಿಕೆಯಲ್ಲಿ ಮಾತಾಡಲು ನಿಂತರೆಂದರೆ ಎದುರಿಗಿರುವುದು ಮೊಗಸೊಯಿರಲಿ ಮೈದಾನವಿರಲಿ ಸ್ತಬ್ಧವಾಗಿಬಿಡುತ್ತಿತ್ತು. ಎದುರು ಕೂತವರು ನಾಲ್ಕೇ ಮಂದಿ ಇರಲಿ, ವಾಜಪೇಯಿಯವರು ಇಡೀ ದೇಶವನ್ನೇ ಎದುರಿಟ್ಟುಕೊಂಡು ಮಾತಾಡುತ್ತೇನೆ ಎಂಬ  ಸ್ಥಿತಿಯಲ್ಲೇ ತಮ್ಮ ವಾಗ್ಝರಿಯನ್ನು ಹರಿಯಬಿಡುತ್ತಿದ್ದರು. ಹಿಮಾಲಯದಿಂದ ಜುಳು ಜುಳು ಜುಳು ಹರಿದು ಕಣಿವೆಯ ಗಾಢ ಗೂಢಗಳಲ್ಲಿ ಪಥ ಕೊರೆದಂತೆ, ಜಲಪಾತವಾಗಿ ಧುಮ್ಮಿಕ್ಕಿದಂತೆ, ಮತ್ತೆ ಮರುಕ್ಷಣದಲ್ಲೇ ಪ್ರಶಾಂತ ಬಯಲಿನಲ್ಲಿ ವಿಸ್ತಾರವಾದಂತೆ – ಅವರ ಮಾತೆಂದರೆ ಅದು ಗಂಗಾವತರಣ. ಅದು ಅಸ್ಖಲಿತ ಮಾತಿನ ಧಾರೆ. ಕತ್ತಿನ ಅಂಚಿನಲ್ಲಿ ತೈಲ ಇಳಿದು ಬಂದಂತೆ ಅದರ ನಡೆ. ಮಾತಿನ ಓಘಕ್ಕೆ ತಕ್ಕ ಹಾಗೆ ಕೈ ಬೀಸಬೇಕು, ತಲೆಗೂದಲು ಕುಣಿಯಬೇಕು, ಕಣ್ಣುಗೋಲಿಗಳು ಮೇಲುಕೆಳಗಾಡಬೇಕು, ಮೈ ಕಂಪಿಸಬೇಕು!  ವಂದನ್ ಕೀ ಧರತೀ ಹೈ, ಅಭಿನಂದನ್ ಕೀ ಧರತೀ ಹೈ. ಯಹ್ ಅರ್ಪಣ್ ಕೀ ಭೂಮಿ ಹೈ, ದರ್ಪಣ್ ಕೀ ಭೂಮಿ ಹೈ. ಯಹ್ಞಾ ಕಿ ನದಿ ನದಿ ಹಮಾರೇ ಲಿಯೇ ಗಂಗಾ ಹೈ. ಇಸ್ಕಾ ಕಂಕರ್ ಕಂಕರ್ ಹಮಾರೇ ಲಿಯೇ ಶಂಕರ್ ಹೈ. ಹಮ್ ಜಿಯೇಂಗೇ ತೋ ಇಸ್ ಭಾರತ್ ಕೇ ಲಿಯೇ, ಮರೇಂಗೇ ತೋ ಇಸ್ ಭಾರತ್ ಕೇ ಲಿಯೇ. ಔರ್ ಮರ್ನೇ ಕೇ ಬಾದ್  ಗಂಗಾ ಜಲ್ ಮೈ ಬೆಹತೀ ಹುಯೀ ಹಮಾರೇ ಅಸ್ಥಿಯೋಂಕೋ ಕೊಯಿ ಸುನೇಗಾ, ತೋ ಏಕ್ ಹಿ ಆವಾಜ್ ಆಯೇಗಿ – ಭಾರತ್ ಮಾತಾ ಕೀ ಜೈ ಎಂದು ಕೈಗಳೆರಡನ್ನೂ ಬೀಸಾಡುತ್ತ ವಾಜಪೇಯಿಯವರು ವೇದಿಕೆಯಲ್ಲಿ ನಿಂತು ಮಾತಾಡುತ್ತಿದ್ದರೆ ಎದುರು ಕೂತ ಸಹಸ್ರ ಸಹಸ್ರ ಮಂದಿಯೂ ಮೈಯೆಲ್ಲ ವಿದ್ಯುತ್ಸಂಚಾರ ಅನುಭವಿಸುತ್ತಿದ್ದರು. ವಾಜಪೇಯಿ ಎಂದೂ ಲೆಕ್ಕಾಚಾರ ಇಟ್ಟುಕೊಂಡು ಮಾತಾಡುತ್ತಿರಲಿಲ್ಲ. ಯಾವ ವಿಷಯವನ್ನು ಎಷ್ಟು ಲಂಬಿಸಬೇಕು, ಎಷ್ಟು ಸಂಕ್ಷಿಪ್ತಗೊಳಿಸಬೇಕು ಎಂಬುದಕ್ಕೆ ಅವರೇನೂ ಪೂರ್ವತಯಾರಿ ನಡೆಸಿಕೊಳ್ಳುತ್ತಿರಲಿಲ್ಲ.  ಮಾತಿಗೆ ತೊಡಗದರೆಂದರೆ ಅದು ತಾನೇ ತಾನಾಗಿ ಶಿಸ್ತಿನ ಸಾಲಲ್ಲಿ ನಡೆವ ಯೋಧನ ಗತಿಯನ್ನು ಪಡೆದುಬಿಡುತ್ತಿತ್ತು. ಭಾವಾವೇಶದಿಂದ ಮಾತಾಡುತ್ತ ಯಾವ ವಿಷಯವನ್ನು ವಾಜಪೇಯಿಯವರು ಎತ್ತರಿಸುತ್ತಿದ್ದರೋ ಇಡೀ ಪ್ರೇಕ್ಷಕ ವರ್ಗವೂ ಆ ಎತ್ತರಕ್ಕೇ ಹೋಗಿಬಿಡುತ್ತಿತ್ತು. ಮಾತಿನ ಮಧ್ಯದಲ್ಲಿ ಅವರು ತಾವೇ ಬರೆದ ಕವಿತೆಗಳನ್ನು ಯಾವ ಪುಸ್ತಕ, ಚೀಟಿಗಳ ಬೆಂಬಲವಿಲ್ಲದೆ ಉದ್ಧರಿಸುತ್ತಿದ್ದರು. ಒಂದೆರಡು ಸಾಲುಗಳಲ್ಲ, ಕೆಲವೊಮ್ಮೆ ಇಡೀ ಕವಿತೆಗಳನ್ನೇ!

ಕಾಂಗ್ರೆಸ್ಸೇತರ ಪೂರ್ಣಾವಧಿ ಪ್ರಧಾನಿ

ರಾಜಕಾರಣಿಗಳ ಜೀವನದಲ್ಲಿ ಹೇಳಬಹುದಾದ ಒಂದೋ ಎರಡೋ ವಿಶೇಷಗಳಿರಬಹುದು. ಆದರೆ  ಜೀವನವೇ ವಿಶೇಷ ಎಂಬಂತೆ ಬದುಕಿದವರು ಬಹಳ ಕಡಿಮೆ. ವಾಜಪೇಯಿಯವರ ಜೀವನದಲ್ಲಿ ವಿಶೇಷಗಳಿಗೇನು ಕಡಿಮೆ! ಕಾಂಗ್ರೆಸ್ಸೇತರ ಸರಕಾರವನ್ನು ಅಧಿಕಾರಕ್ಕೆ ತಂದದ್ದು ಮಾತ್ರವಲ್ಲ, ಭರ್ತಿ ಐದು ವರ್ಷ ಆಳುವುದಕ್ಕೂ ನಮಗೆ ಸಾಧ್ಯ ಎಂದು ತೋರಿಸಿದ ಮೊದಲ ವ್ಯಕ್ತಿ ವಾಜಪೇಯಿ. ಇಂದಿರಾ ಗಾಂಧಿಯ ಎಮರ್ಜೆನ್ಸಿಯ ನಂತರ 1977ರಲ್ಲಿ ಜನತಾ ಸರಕಾರ ಅಧಿಕಾರಕ್ಕೇನೋ ಏರಿತು. ಆದರೆ ಸಿಕ್ಕ ಅಧಿಕಾರವನ್ನು ಐದು ವರ್ಷ ಉಳಿಸಿಕೊಳ್ಳಲು ಮೊರಾರ್ಜಿ ನೇತೃತ್ವದ ಸರಕಾರಕ್ಕೆ ಆಗಲಿಲ್ಲ. ಭಾರತದಲ್ಲಿ ಕಾಂಗ್ರೆಸ್ ಹೊರತಾದ ಸರಕಾರವೊಂದು  ತನ್ನ ಪೂರ್ಣಾವಧಿ ಆಡಳಿತ ನಡೆಸಬೇಕು ಎಂಬ ಭಾರತೀಯರ ಬಹುದಿನಗಳ ಕನಸನ್ನು ಕೊನೆಗೂ ನನಸು ಮಾಡಿದ್ದು ವಾಜಪೇಯಿಯೇ. ಆದರೆ ಹಾಗೆ ಮಾಡುವುದಕ್ಕೆ ಮುನ್ನ ಅವರು ಎರಡು ಬಾರಿ ಪ್ರಧಾನಿ ಹುದ್ದೆಯನ್ನು ಏರಿ ಇಳಿಯಬೇಕಾಯಿತು. ಮೊದಲ ಸಲ 1996ರ ಮೇ 16ರಂದು ಅಧಿಕಾರ ವಹಿಸಿಕೊಂಡಾಗ, ಅವರು ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ಸಿಕ್ಕಿದ್ದು ಕೇವಲ 13 ದಿನಗಳ ಕಾಲ ಮಾತ್ರ. ಆಮೇಲೆ ಎರಡನೇ ಸಲ – 1998ರ ಮೇ 19ರಂದು ಪ್ರಧಾನಮಂತ್ರಿಯ ಪಟ್ಟ  ವಾಜಪೇಯಿ 13 ದಿನ ಅಲ್ಲ, 13 ತಿಂಗಳ ಕಾಲ ಪ್ರಧಾನಿಯಾಗಿದ್ದರು. ನಂತರ 1999ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಭಾಜಪಾ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ವಾಜಪೇಯಿ ಎನ್‌ಡಿಎ ಸರಕಾರ ರಚಿಸಿ ಆ ವರ್ಷದ ಅಕ್ಟೋಬರ್ 13ರಂದು ಅಧಿಕಾರ ಹಿಡಿದರು. 13 ಎಂಬ ಸಂಖ್ಯೆಗೂ ವಾಜಪೇಯಿಗೂ ಆಗಿಬರುವುದಿಲ್ಲ; ಅಂಥಾದ್ದರಲ್ಲಿ ಈಗ 13ನೇ ತಾರೀಖೇ ಅಧಿಕಾರ ಹಿಡಿದಿದ್ದಾರಲ್ಲ ಎಂದು ಫಲಜ್ಯೋತಿಷಿಗಳು ಗೊಣಗಿಕೊಂಡರೂ ವಾಜಪೇಯಿಯವರು ಭರ್ತಿ ಐದು ವರ್ಷಗಳ ಯಶಸ್ವೀ ಆಡಳಿತ ನಡೆಸಿ, ಕಾಂಗ್ರೆಸ್  ಭಾರತದಲ್ಲಿ ಪೂರ್ಣಾವಧಿ ಮುಗಿಸಿದ ಪ್ರಥಮ ಪ್ರಧಾನಿ ಎಂಬ ಅಭಿಧಾನಕ್ಕೆ ಪಾತ್ರರಾದರು.

ಯೋಗ್ಯತೆ ಇತ್ತು, ಯೋಗ ಇರಲಿಲ್ಲ

ನಮ್ಮ ದೇಶದಲ್ಲಿ ಯೋಗ್ಯತೆ ಇದ್ದವರಷ್ಟೇ ಅಧಿಕಾರ ಹಿಡಿದದ್ದಲ್ಲ. ಬಹುತೇಕ ಸಮಯದಲ್ಲಿ ಅದು ಕೇವಲ ಯೋಗ ಇದ್ದವರ ಕೈಯಲ್ಲಿ ಇದ್ದ ಸಂದರ್ಭವೇ ಹೆಚ್ಚು. 1947ರಲ್ಲಿ ದೇಶ ಸ್ವತಂತ್ರವಾದಾಗ ನಿಜಕ್ಕಾದರೆ ಪ್ರಧಾನಿ ಪಟ್ಟದಲ್ಲಿ ಕೂರಬೇಕಿದ್ದುದು ಸರ್ದಾರ್ ಪಟೇಲರು. ಯಾಕೆಂದರೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ 90%ಕ್ಕೂ ಹೆಚ್ಚು ಓಟುಗಳು ಪಟೇಲರಿಗೆ ಬಿದ್ದಿದ್ದವು. ಪ್ರತಿಸ್ಪರ್ಧಿಯಾಗಿ ನಿಂತಿದ್ದ  ಒಂದೇ ಒಂದು ಪ್ರಾಂತೀಯ ಕಾಂಗ್ರೆಸ್ ಕಮಿಟಿಯೂ ಮತ ಹಾಕಿರಲಿಲ್ಲ. ಆದರೂ ಆ ಸಾಂವಿಧಾನಿಕ ಚುನಾವಣೆಯ ಫಲಿತಾಂಶವನ್ನು ತಿರುವುಮುರುವಾಗಿಸಿ ನೆಹರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು. ತನ್ಮೂಲಕ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯೂ ಆದರು! ಆ ನಂತರ ಬಂದ ಇಂದಿರಾ, ರಾಜೀವ್, ಸಿಂಗ್ ಮೊದಲಾದವರು ಯೋಗ್ಯತೆ ಇದ್ದು ಪ್ರಧಾನಿಯಾದರೋ ಅಥವಾ ಕೇವಲ ಯೋಗದ ಬಲ ಮಾತ್ರವೇ ಇದ್ದು ಪ್ರಧಾನಿಯಾದರೋ ಎಂಬುದು ದೇಶಕ್ಕೆ ಗೊತ್ತಿದೆ! ಪ್ರಧಾನಿಯಾಗುವ ಯೋಗ್ಯತೆ ಇದ್ದ ವಾಜಪೇಯಿ ಅಖಂಡ 47  ಕಾಲ ವಿರೋಧಪಕ್ಷದ ಕುರ್ಚಿಯಲ್ಲಿ ಕೂತು, ಕುಟುಂಬವೊಂದರ ರಾಜಕೀಯದ ದೊಂಬರಾಟಗಳನ್ನು ವೀಕ್ಷಿಸುತ್ತ ಕೂರಬೇಕಾಯಿತು. ವಾಜಪೇಯಿಯವರು ತಮ್ಮ ರಾಜಕೀಯ ಜೀವನದಲ್ಲಿ 11 ಬಾರಿ ಲೋಕಸಭೆಯ ಸದಸ್ಯರಾದರು, 2 ಸಲ ರಾಜ್ಯಸಭೆಯ ಸದಸ್ಯನಾಗಿ ಆಯ್ಕೆಯಾದರು. 1957ರಲ್ಲಿ ಅವರು ಸಂಸತ್ತಿಗೆ ಸ್ಪರ್ಧಿಸಿದ್ದು ಒಂದಲ್ಲ ಎರಡಲ್ಲ ಮೂರು ಕ್ಷೇತ್ರಗಳಿಂದ. ಆಗ ಜನಸಂಘದ ಹೆಸರು ಇನ್ನೂ ಚಾಲ್ತಿಗೇ ಬಂದಿರಲಿಲ್ಲ. ಅದು ಅಸ್ತಿತ್ವಕ್ಕೆ ಬಂದು ಕೇವಲ ಆರು ವರ್ಷಗಳಾಗಿತ್ತಷ್ಟೇ. ಆದರೆ ವಾಜಪೇಯಿಯವರಿಗೆ ಅದು ಮುಂದೊಂದು ದಿನ ರಾಷ್ಟ್ರೀಯ ಪಕ್ಷವಾಗಿ  ಎಲ್ಲ ಕುರುಹುಗಳೂ ಸಿಕ್ಕಿದ್ದವು. 57ರ ಚುನಾವಣೆಯ ಸಂದರ್ಭದಲ್ಲಿ ಜನಸಂಘದ ಕಡೆಯಿಂದ ನಿಲ್ಲುವುದಕ್ಕೆ ಅಭ್ಯರ್ಥಿಗಳೂ ಸಿಕ್ಕುತ್ತಿರಲಿಲ್ಲ. ಆಗ, ಪಕ್ಷವನ್ನು ಸಾಧ್ಯವಾದಷ್ಟು ಹೆಚ್ಚು ಕಡೆಗಳಲ್ಲಿ ಪ್ರಚಾರ ಮಾಡುವ ಏಕೈಕ ಉದ್ದೇಶದಿಂದ ವಾಜಪೇಯಿ ಮೂರು ಕಡೆಗಳಲ್ಲಿ – ಬಲರಾಮ್‌ಪುರ, ಲಖ್ನೋ ಮತ್ತು ಮಥುರಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು. ಅದರಲ್ಲಿ ಮಥುರಾ ಮತ್ತು ಲಖ್ನೋ ಕ್ಷೇತ್ರಗಳಲ್ಲಿ ಸೋತು ಬಲರಾಮ್‌ಪುರದಲ್ಲಿ ಮಾತ್ರ ಗೆದ್ದರು. ಗೆದ್ದು ಸಂಸತ್ ಪ್ರವೇಶಿಸಿದರು. ವಾಜಪೇಯಿ ಸಂಸದನಾಗಿ ಲೋಕಸಭೆಯಲ್ಲಿ ಮಾಡಿದ ಚೊಚ್ಚಲ ಭಾಷಣವೇ ಇಡೀ  ಅವರನ್ನೊಮ್ಮೆ ಕತ್ತೆತ್ತರಿಸಿ ನೋಡುವಂತೆ ಮಾಡಿತು. ಈ ಹುಡುಗ ಮುಂದೊಂದು ದೇಶದ ಪ್ರಧಾನಿ ಆಗುತ್ತಾನೆ ಎಂದು ನೆಹರೂ ಅವರೇ ಹೇಳಿದ್ದರಂತೆ.

11 ಸಲ ಲೋಕಸಭೆಗೆ ಗೆದ್ದುಹೋದರೂ ವಾಜಪೇಯಿಯವರ ರಾಜಕೀಯ ಯಾತ್ರೆ ಹೂವಿನ ಹಾಸುವಿನಂತೆ ಇರಲಿಲ್ಲ. ಅದು ಏರಿಳಿತಗಳ ಹಾವುಏಣಿಯ ಆಟ. 1984ರಲ್ಲಿ ಅವರು ಗ್ವಾಲಿಯರ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರು. ಗ್ವಾಲಿಯರ್ ವಾಜಪೇಯಿಯವರ ಹುಟ್ಟೂರು. ಆದರೆ ಹುಟ್ಟೂರಿನಲ್ಲೇ ಸೋಲಿಸಿದ್ದು ಕಾಂಗ್ರೆಸ್ಸಿನ ವರ್ಚಸ್ವೀ ನಾಯಕರಾಗಿದ್ದ ಮಾಧವರಾವ್ ಸಿಂಧಿಯಾ. ವಾಜಪೇಯಿಯವರು ತಮ್ಮ ವೃತ್ತಿಜೀವನದಲ್ಲಿ ನಾಲ್ಕು  ಸ್ಪರ್ಧಿಸಿ ಗೆದ್ದು ಸಂಸದರಾದರು. ಬಲರಾಮ್‌ಪುರ, ಲಖ್ನೋ (ಎರಡೂ ಉತ್ತರ ಪ್ರದೇಶ), ನವ ದೆಹಲಿ (ದೆಹಲಿ), ವಿದಿಶಾ, ಗ್ವಾಲಿಯರ್ (ಎರಡೂ ಮಧ್ಯ ಪ್ರದೇಶ), ಗಾಂಧಿನಗರ (ಗುಜರಾತ್) – ಹೀಗೆ ಆರು ವಿಭಿನ್ನ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದರು. ನಾಲ್ಕು ರಾಜ್ಯಗಳಿಂದ, ಆರು ಕ್ಷೇತ್ರಗಳಿಂದ ಗೆದ್ದು ತೋರಿಸಿದ ಏಕೈಕ ಸಂಸದ ವಾಜಪೇಯಿ ಒಬ್ಬರೇ – ಇಡೀ ಲೋಕಸಭೆಯ ಚರಿತ್ರೆಯಲ್ಲಿ!

ಪ್ರಧಾನ ಮಂತ್ರಿಯಾಗಿ

ಇನ್ನು ಅವರು ಪ್ರಧಾನಿಯಾಗಿ ಆರಿಸಿಬಂದ ಮೇಲೆ ತಂದ ಸುಧಾರಣಾ ಕ್ರಮಗಳ  ಮಾಡುತ್ತ ಹೋದರೆ ಅದೇ ಪ್ರತ್ಯೇಕ ಲೇಖನವಾಗಬಹುದು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ (ಮಾರ್ಚ್ 3, 1999) ರಾಷ್ಟ್ರೀಯ ಟೆಲಿಕಾಂ ನೀತಿಯನ್ನು ಜಾರಿಗೆ ತಂದಿತು. ಆ ಮೂಲಕ ದೇಶದಲ್ಲಿ ಟೆಲಿಕಾಂ ಕ್ರಾಂತಿಗೆ ಶ್ರೀಕಾರ ಬರೆಯಲಾಯಿತು. 1999ರಲ್ಲಿ, ವಾಜಪೇಯಿ ಸರಕಾರ ಟೆಲಿಕಾಂ ಕ್ರಾಂತಿಯ ಶೈಶವ ಹೆಜ್ಜೆಗಳನ್ನಿಟ್ಟಾಗ ದೇಶದಲ್ಲಿ ಒಟ್ಟು ಜನಸಂಖ್ಯೆಯ ಕೇವಲ 3%ರಷ್ಟು ಮಂದಿ ಮಾತ್ರ ಟೆಲಿಫೋನ್ ಗ್ರಾಹಕರಿದ್ದರು. ಆದರೆ ಕೇವಲ 9 ವರ್ಷಗಳಲ್ಲಿ ಆ ಸಂಖ್ಯೆ 70%  ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಅರವಿಂದ್ ಪನಗಾರಿಯಾ ಪ್ರಕಾರ, ಈ ದೊಡ್ಡ ಪ್ರಮಾಣದ ಕ್ರಾಂತಿಗೆ ಅಡಿಗಲ್ಲು ಹಾಕಿದ್ದೇ 1999ರ ಟೆಲಿಕಾಂ ನೀತಿ. ವಾಜಪೇಯಿಯವರ ದೂರದರ್ಶಿತ್ವಕ್ಕೆ ಅದೊಂದು ಸಣ್ಣ ನಿದರ್ಶನ ಮಾತ್ರ. ದೂರಸಂಪರ್ಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯಂತೆಯೇ ಎನ್‌ಡಿಎ ಸರಕಾರ ರಸ್ತೆ ನಿರ್ಮಾಣದಲ್ಲೂ ದೊಡ್ಡ ಹೆಜ್ಜೆ ಇಟ್ಟಿತು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂತು. ಜೊತೆಜೊತೆಗೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಕೂಡ ತನ್ನ ಬಲಗಾಲಿಟ್ಟಿತು. ದೇಶ ಅಭಿವೃದ್ಧಿ ಎಂದರೆ  ಅಭಿವೃದ್ಧಿಪಡಿಸಿ ಗ್ರಾಮಗಳನ್ನು ಮರೆಯುವುದಲ್ಲ; ಗ್ರಾಮಗಳಿಗೆ ಒತ್ತುಕೊಟ್ಟು ನಗರಗಳನ್ನು ನಿರ್ಲಕ್ಷಿಸುವುದೂ ಅಲ್ಲ. ಎರಡೂ ಮನುಷ್ಯನ ಎಡ-ಬಲ ಕಾಲುಗಳಂತೆ ಜೊತೆ ಜೊತೆಯಾಗಿಯೇ ಹೆಜ್ಜೆ ಹಾಕಬೇಕು ಎಂಬುದು ವಾಜಪೇಯಿಯವರ ಕನಸಾಗಿತ್ತು.

1999ರಲ್ಲಿ ಪಾಕಿಸ್ತಾನ ಕಾಲು ಕೆರೆದು ಜಗಳವಾಡಿದ್ದಾಗ ಭಾರತ ಕಾರ್ಗಿಲ್ ಸಮರದ ಮೂಲಕ ಸಮರ್ಥ ಉತ್ತರ ಕೊಟ್ಟಿತ್ತು. ಯುದ್ಧದಿಂದಾಗಿ ಸರಕಾರದ ಬಜೆಟ್ ಸ್ವಲ್ಪಮಟ್ಟಿಗೆ ಅಲುಗಾಡಿದ್ದು ನಿಜ. ಆದ್ಯತೆಗಳು ಆಚೀಚೆ ಆಗಿದ್ದವು. ಯುದ್ಧ ಗೆಲ್ಲುವುದೇ ಆ ಕ್ಷಣಕ್ಕೆ ಸರಕಾರದ, ಮಾತ್ರವಲ್ಲ ದೇಶದ, ಪ್ರಥಮಾದ್ಯತೆಯಾಗಿತ್ತು. 99ರ  ವೈಟುಕೆ ಸಮಸ್ಯೆ ಪ್ರಪಂಚವನ್ನು ನಡುಗಿಸಿಬಿಟ್ಟಿತು. ಏನೋ ಅಲ್ಲೋಲ ಕಲ್ಲೋಲಗಳಾಗುತ್ತವೆ ಎಂದು ಜನರೆಲ್ಲ ಗಾಬರಿಬಿದ್ದರು. ಇನ್ನು ಆ ಸಮಯದಲ್ಲಿ ಕಾಣಿಸಿಕೊಂಡ ಪ್ರಾಕೃತಿಕ ವೈಪರೀತ್ಯಗಳೇನು ಕಡಿಮೆಯೇ? 1999 ಮತ್ತು 2000 – ಎರಡೂ ವರ್ಷಗಳಲ್ಲಿ ಚಂಡಮಾರುತದ ಸಮಸ್ಯೆಗಳಿಗೆ ಭಾರತ ಸಿಲುಕಿತು. 2001ರಲ್ಲಿ ದೇಶ ಕಂಡುಕೇಳರಿಯದ ಭೂಕಂಪ ಗುಜರಾತ್‌ನ ಕಚ್‌ನಲ್ಲಿ ಸಂಭವಿಸಿತು. 2002-03ರ ಎರಡೂ ವರ್ಷಗಳಲ್ಲಿ ದೇಶ ಭೀಕರ ಬರಗಾಲಕ್ಕೂ ತುತ್ತಾಯಿತು (ಕರ್ನಾಟಕದಲ್ಲಂತೂ ಎಸ್.ಎಂ. ಕೃಷ್ಣ ಕಾಲದಲ್ಲಿ ಐದು ವರ್ಷವೂ ಬರದ ಬರೆ!).  ಸಮಸ್ಯೆಗಳು ಒಂದು ಹಂತಕ್ಕೆ ಪರಿಹಾರವಾದವು ಎನ್ನುವಷ್ಟರಲ್ಲಿ 2003ರಲ್ಲಿ ತೈಲ ಸಮಸ್ಯೆ ಕಾಣಿಸಿಕೊಂಡಿತು. ಜಗತ್ತಿನ ಮಾರುಕಟ್ಟೆಯಲ್ಲಿ ತೈಲ ತುಟ್ಟಿಯಾಯಿತು. ಇವೆಲ್ಲದರ ಮಧ್ಯೆ, 1998ರ ಮೇ 13ರಂದು ಆಪರೇಶನ್ ಶಕ್ತಿ ಎಂಬ ಹೆಸರಲ್ಲಿ ರಾಜಸ್ಥಾನದ ಮರಳುಗಾಡಿನಲ್ಲಿ ನಡೆದ ಪೋಖರಾನ್ ಪರಮಾಣು ಪರೀಕ್ಷೆಯ ನಂತರ ಅಮೆರಿಕಾ ಕೂಡ ಇಲ್ಲದ ತಗಾದೆ ತೆಗೆದು ಹಲವು ಆರ್ಥಿಕ ದಿಗ್ಬಂಧಗಳನ್ನು ವಿಧಿಸಿತು. 2001-02ರಲ್ಲಿ ದೇಶ ಭಯೋತ್ಪಾದಕರ ದಾಳಿಗಳಿಗೂ ತುತ್ತಾಗಬೇಕಾಯಿತು. ಅಲ್ಲಿ ಇಲ್ಲಿ ಅಲ್ಲ, ದೇಶದ ಸಂಸತ್ತನ್ನೇ ಭಯೋತ್ಪಾದಕರು  ಬಂದಿದ್ದರು! ಇಷ್ಟೆಲ್ಲ ಅಪಸವ್ಯಗಳ ನಡುವೆಯೂ ಒಂದು ಸುಸ್ಥಿರವಾದ ಸರಕಾರ ಕೊಡಬೇಕಾದರೆ ವಾಜಪೇಯಿಯವರು ಅದೆಷ್ಟು ಹೆಣಗಾಡಿರಬೇಕು! ಇಷ್ಟೆಲ್ಲ ಸಾಧನೆಯ ಹೊರತಾಗಿಯೂ ವಾಜಪೇಯಿಯವರಿಗೆ 2004ರ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ದೇಶದ ಬಹ್ವಂಶ ನಾಗರಿಕರು 2004ರ ಚುನಾವಣೆ ಫಲಿತಾಂಶಗಳನ್ನು ಕಂಡು ದಿಗ್ಭ್ರಮೆಗೊಳಗಾದದ್ದು ನಿಜ. ಯಾಕೆಂದರೆ ವಾಜಪೇಯಿಯವರು ದೇಶದ ಅಭಿವೃದ್ಧಿಯ ಕನಸನ್ನಷ್ಟೇ ಕಂಡಿದ್ದರು. ಸರಕಾರದ ವಿರುದ್ಧ ಕೆಲಸ ಮಾಡುತ್ತಿದ್ದ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡುವ ಆಸಕ್ತಿ ತೋರಲಿಲ್ಲ; ಹಾಗೆ ನಿರ್ಬಂಧಿಸಿ ಇಡುವ ಕಲೆಯೂ ಅವರಿಗೆ ಗೊತ್ತಿರಲಿಲ್ಲ. ವಾಜಪೇಯಿ  ಹಸುವನ್ನು ಈ ದೇಶದ ಲ್ಯೂಟೇನ್ ಹುಲಿ ಚುನಾವಣೆಯೆಂಬ ಬೇಟೆಯಲ್ಲಿ ನುಂಗಿನೀರುಕುಡಿದಿತ್ತು.

ಆ ವ್ಯಕ್ತಿತ್ವವೇ ಹಾಗಿತ್ತು

ಅಟಲ್‌ಜೀ ಅವರಿಗಿದ್ದ ಬಿರುದು ಅಜಾತಶತ್ರು. ಹಿಟ್ಲರ್ ಕೂಡ ಅಜಾತಶತ್ರುವಾಗಿದ್ದ – ಯಾಕೆಂದರೆ ತನ್ನ ಶತ್ರುಗಳನ್ನೆಲ್ಲ ಆತ ಪರಿಹರಿಸಿಬಿಟ್ಟಿದ್ದ! ಆದರೆ ಅಟಲ್‌ಜಿ ಅಜಾತಶತ್ರುವಾದದ್ದು ಶತ್ರುಗಳನ್ನು ಪರಿಹರಿಸಿ ಅಲ್ಲ; ಅವರ ಮನಸ್ಸುಗಳನ್ನೂ ಗೆದ್ದುಕೊಂಡು! ಅದಕ್ಕೊಂದು ಸಣ್ಣ ಉದಾಹರಣೆ ನೋಡಿ – 1977ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದಾಗ ವಿದೇಶಾಂಗ ಸಚಿವರಾಗಿ ಆಯ್ಕೆಯಾದದ್ದು ಅಟಲ್‌ಜೀ. ಮಂತ್ರಿಯಾಗಿ ಅಧಿಕಾರ  ಅವರು ಸಂಸತ್ತಿನ ಸೌತ್ ಬ್ಲಾಕ್‌ನಲ್ಲಿದ್ದ ತಮ್ಮ ಸಚಿವಾಲಯಕ್ಕೆ ಬಂದಾಗ, ಅಲ್ಲಿ ಅಷ್ಟು ಕಾಲದವರೆಗೆ ಇದ್ದ ನೆಹರೂ ಚಿತ್ರ ಕಾಣಲಿಲ್ಲವಂತೆ. ಸರಕಾರ ಬದಲಾದ ಮೇಲೆ ಹಳೆ ಪ್ರಧಾನಿಗಳ ಚಿತ್ರ ಯಾಕೆ ಅಲ್ಲಿಡಬೇಕು ಎಂದು ಸಿಬ್ಬಂದಿಯೇ ಅದನ್ನು ಸಾಗಹಾಕಿದ್ದರು. ಚಿತ್ರವಿಲ್ಲದ ಖಾಲಿ ಗೋಡೆಯನ್ನು ಕಂಡ ವಾಜಪೇಯಿಯವರು, ಇಲ್ಲಿ ನೆಹರೂಜಿ ಚಿತ್ರ ಇತ್ತಲ್ಲ? ಎಂದು ಪ್ರಶ್ನಿಸಿದರಂತೆ. ಅವರ ಮಾತಿನ ಇಂಗಿತ ಅರ್ಥ ಮಾಡಿಕೊಂಡ ಸಿಬ್ಬಂದಿ ಮರುಮಾತಾಡದೆ ಆ ಚಿತ್ರವನ್ನು ಮತ್ತೆ ಗೋಡೆಗೆ ಏರಿಸಿದರು!

 ತಮ್ಮ ಪ್ರಾರಂಭದ ದಿನಗಳಲ್ಲಿ ಕಮ್ಯುನಿಸ್‌ಟ್ ಆಗಿದ್ದರು. ಹದಿಹರೆಯದ ಪ್ರತಿಯೊಬ್ಬನೂ ಕಮ್ಯುನಿಸ್‌ಟ್ ಆಗಿರಬೇಕು; ಆದರೆ ಹದಿಹರೆಯದ ಹುಚ್ಚು ಆವೇಶಗಳೆಲ್ಲ ಇಳಿದ ಮೇಲೆ ಕಮ್ಯುನಿಸಮ್‌ನ ತೆಕ್ಕೆಯಿಂದ ಈಚೆ ಬರಬೇಕು ಎಂಬ ಮಾತಿದೆ. ಹಾಗೆ, ಕಾಲೇಜಿನ ಬಿಸಿರಕ್ತದ ದಿನಗಳು ಕಳೆದ ಮೇಲೆ ದೇಶದ ವಾಸ್ತವಗಳಿಗೆ ತೆರೆದುಕೊಂಡ ಅಟಲ್‌ಜಿ ಜನಸಂಘ ಪ್ರಾರಂಭಿಸಿದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಪ್ರಭಾವಕ್ಕೆ ಒಳಗಾದರು. ಮುಖರ್ಜಿಯವರಿಗೆ ಎಷ್ಟು ಅಂಟಿಕೊಂಡರೆಂದರೆ 1953ರಲ್ಲಿ ಕಾಶ್ಮೀರದ ವಿಷಯದಲ್ಲಿ ನಡೆದ ದಂಗೆಯಲ್ಲಿ ಮುಖರ್ಜಿಯವರು ತೀರಿಕೊಂಡಾಗ ವಾಜಪೇಯಿ

 ದಿನಗಳ ಕಾಲ ಆಘಾತವನ್ನನುಭವಿಸಿದರು. ತಮ್ಮ ಗುರು, ಸ್ನೇಹಿತ, ಹಿತೈಷಿ, ಬಂಧು ಎಲ್ಲವೂ ಆಗಿದ್ದ ಓರ್ವ ಸಮರ್ಥ ನಾಯಕನನ್ನು ಕಳೆದುಕೊಂಡ ಶೂನ್ಯತೆ ಅಟಲ್‌ಜಿಯನ್ನು ಅಲುಗಿಸಿಹಾಕಿತು. ಆ ನಂತರವೇ ಅವರು ಅಡ್ವಾಣಿಯವರ ಜೊತೆ ಸೇರಿ ತಮ್ಮ ರಾಜಕೀಯ ಜೀವನದ ಎರಡನೇ ಇನ್ನಿಂಗ್‌ಸ್ ಆರಂಭಿಸಿದ್ದು; ಸಿಕ್ಸರ್‌ಗಳ ಮೇಲೆ ಸಿಕ್ಸರ್‌ಗಳನ್ನು ಬಾರಿಸತೊಡಗಿದ್ದು.

ವಾಜಪೇಯಿಯವರಿಗೆ ಭಾರತವನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕೆಂಬ ಸ್ಪಷ್ಟವಾದ ಕನಸು, ಕಲ್ಪನೆಗಳಿದ್ದವು. ಆದರೆ, ಯೋಗ್ಯತೆ ಇದ್ದರೂ ಪ್ರಧಾನಿ ಪಟ್ಟದಲ್ಲಿ ಕೂರುವ ಯೋಗ ಮಾತ್ರ  ಐದು ದಶಕಗಳ ಕಾಲ ಬರಲಿಲ್ಲ. ಕೊಟ್ಟಕೊನೆಯದಾಗಿ ಅಂಥದೊಂದು ಸುಸಂದರ್ಭ ಒದಗಿಬಂದಾಗ ವಾಜಪೇಯಿಯವರು ಅದನ್ನು ಅರ್ಥಪೂರ್ಣವಾಗಿ ಬಳಸಿಕೊಂಡರು ಎಂಬುದರಲ್ಲಿ ಎರಡು ಮಾತಿಲ್ಲ. ಲಾಹೋರ್‌ಗೆ ಬಸ್ ಸಂಚಾರ ಕಲ್ಪಿಸಿ ಎರಡೂ ದೇಶಗಳ ನಡುವೆ ಸೌಹಾರ್ದ ಬೆಳೆಯಲು ಅನುವು ಮಾಡಿಕೊಟ್ಟದ್ದು, ಕಾಶ್ಮೀರದ ನೆಲದಲ್ಲಿ ಎದೆಗೆ ಎದೆ ಒಡ್ಡಿ ನಿಂತು ಕಾರ್ಗಿಲ್ ಅನ್ನು ರಕ್ಷಿಸಿಕೊಂಡದ್ದು, ದೇಶಾದ್ಯಂತ ಸರ್ವ ಶಿಕ್ಷಣ ಅಭಿಯಾನವನ್ನು ಚಳವಳಿಯ ರೂಪದಲ್ಲಿ ಹಮ್ಮಿಕೊಂಡದ್ದು, ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್ ಘೋಷವನ್ನು  ಮತ್ತು ಎಲ್ಲಕ್ಕಿಂತ ಮುಖ್ಯವಾಗಿ – ಎರಡನೆ ಪೀಳಿಗೆಯ ನಾಯಕರನ್ನು ಸರ್ವಸಮರ್ಥರಾಗುವಂತೆ ಬೆಳೆಸಿದ್ದು – ಇವೆಲ್ಲ ವಿಷಯಗಳಲ್ಲೂ ಅಟಲ್‌ಜಿಯವರ ಸರಕಾರ ಉಳಿದೆಲರಿಗೆ ಮಾದರಿಯಾಗುವಂತೆ ನಡೆದುಕೊಂಡಿತು ಎಂದು ಹೇಳಬಹುದು.

ನೆನಪು ಅಚಲ

ರಾಜಕೀಯಕ್ಕೆ ಬರದೇ ಹೋಗಿದ್ದರೆ ಅಟಲ್‌ಜೀ ಏನಾಗುತ್ತಿದ್ದರು? ಬಹುಶಃ ಹಿಂದಿಯ ಒಬ್ಬ ಅದ್ಭುತ ಕವಿಯಾಗಿ ಬೆಳೆಯುತ್ತಿದ್ದರು (ಹಿಂದಿ ಮಾತ್ರವಲ್ಲ, ಮರಾಠಿಯಲ್ಲೂ ಅವರಿಗೆ ಉತ್ತಮ ಪ್ರವೇಶವಿತ್ತು. ಸಾವರ್ಕರರ ಮರಾಠಿ ಪದ್ಯಗಳನ್ನು ಅಟಲ್‌ಜಿ ಹಿಂದಿಗೆ ಅನುವಾದ ಮಾಡಿದ್ದಾರೆ). ಅಥವಾ ಪತ್ರಿಕೋದ್ಯಮದಲ್ಲಿ ದೊಡ್ಡ ದೊಡ್ಡ  ಒಂದು ದೊಡ್ಡ ಪತ್ರಿಕಾ ಸಾಮ್ರಾಜ್ಯವನ್ನೇ ಕಟ್ಟುತ್ತಿದ್ದರು (ದೀನ ದಯಾಳ ಉಪಾಧ್ಯರ ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಪತ್ರಿಕೆಗಳಲ್ಲಿ ಅಟಲ್‌ಜಿ ಕೆಲವು ವರ್ಷ ಪತ್ರಕರ್ತರಾಗಿ, ಸಂಪಾದಕರಾಗಿ ಕೆಲಸ ಮಾಡಿದ್ದುಂಟು. ಹಾಗೆಯೇ ವೀರ್ ಅರ್ಜುನ್ ಮತ್ತು ಸ್ವದೇಶ್ ಎಂಬ ಎರಡು ದಿನಪತ್ರಿಕೆಗಳನ್ನೂ ಅವರು ಸಂಪಾದಕರಾಗಿ ನಡೆಸಿದ್ದುಂಟು). ಅವರು ರಾಜಕೀಯಕ್ಕೆ ಬಂದದ್ದರಿಂದ ಸಾಹಿತ್ಯ ಒಬ್ಬ ಕವಿಯನ್ನು ಕಳೆದುಕೊಂಡಿತು; ಮಾಧ್ಯಮಕ್ಷೇತ್ರ ಒಬ್ಬ ಸಮರ್ಥ ಪತ್ರಕರ್ತನನ್ನು ಕಳೆದುಕೊಂಡಿತು. ನಿಜ. ಆದರೆ ಅವರು ರಾಜಕೀಯಕ್ಕೆ ಬರದೇ ಹೋಗಿದ್ದರೆ ಈ  ಒಬ್ಬ ಸಮರ್ಥ ಆಡಳಿತಗಾರನನ್ನು, ಪ್ರಧಾನ ಮಂತ್ರಿಯನ್ನು, ಮುತ್ಸದ್ದಿಯನ್ನು, ಲೋಕನಾಯಕನನ್ನು ಕಳೆದುಕೊಳ್ಳುತ್ತಿತ್ತಲ್ಲ? ವಾಜಪೇಯಿ ಈ ದೇಶದ ರಾಜಕೀಯ ರಂಗದಲ್ಲಿ ಐವತ್ತು ವರ್ಷಗಳ ಕಾಲ ಸಕ್ರಿಯರಾಗಿ ಉಳಿಯದೇ ಇರುತ್ತಿದ್ದರೆ ಈ ದೇಶಕ್ಕೆ ಈಗಿನ ಮೋದಿ ಕೂಡ ಸಿಗುತ್ತಿರಲಿಲ್ಲ. ಭಾರತ ಸ್ವಾತಂತ್ರೊ್ಯೀತ್ತರ ಕಾಲದಲ್ಲಿ ನಡೆದ ಪಥದಲ್ಲಿ ಅಟಲ್‌ಜಿಯವರ ಹೆಜ್ಜೆಗುರುತು ಗುರುತರವಾದದ್ದು, ಎಂದೆಂದೂ ಅಳಿಸಿಹೋಗಲಾರದ್ದು.

ಈಗ ಅವರಿಲ್ಲ. ಆದರೆ ಅವರ ಹೆಸರು, ನೆನಪು ಭಾರತದ ಚರಿತ್ರೆಯ ಪುಟಗಳಲ್ಲಿ ಅಟಲ್ ಆಗಿ ಉಳಿಯುತ್ತದೆ.

Tags

ರೋಹಿತ್ ಚಕ್ರತೀರ್ಥ

ಶಿಕ್ಷಣ ಕ್ಷೇತ್ರದಲ್ಲಿ ಕನ್ಸ್‌ಲ್ಟೆಂಟ್‌ ಆಗಿರುವ ಅಂಕಣಕಾರರು, ಕನ್ನಡದ ಕೆಲವೇ ಕೆಲವು ವಿಜ್ಞಾನ ಲೇಖಕರಲ್ಲಿ ಒಬ್ಬರು. ಇದುವರಗೆ ಪ್ರಕಟವಾಗಿರುವ ಗಣಿತ, ವಿಜ್ಞಾನ, ರಾಜಕೀಯ ವಿಷಯದ ಪುಸ್ತಕಗಳು ಎಲ್ಲ ವರ್ಗದ ಓದುಗರಿಗೂ ಉಪಯುಕ್ತವಾದುದು. ಇವರ ಅಂಕಣ ಚಕ್ರವ್ಯೂಹವನ್ನು ಪ್ರತೀ ಮಂಗಳವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close