About Us Advertise with us Be a Reporter E-Paper

ಅಂಕಣಗಳು

ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ…

ರ್ಜುನಃ ಫಲ್ಗುಣಃ ಪಾರ್ಥಃ ಕಿರೀಟೀ ಶ್ವೇತವಾಹನಃ ಬೀಭತ್ಸುರ್ವಿಜಯೋ ಜಿಷ್ಣುಸ್ಸವ್ಯಸಾಚೀ ಧನಂಜಯಃ ಇವು ಅರ್ಜುನನ ಹತ್ತು ಹೆಸರುಗಳು. ದೇವೇಂದ್ರನೇ ಅರ್ಜುನನಿಗೆ ಇವುಗಳನ್ನು ದಯಪಾಲಿಸಿದನು ಎನ್ನುತ್ತವೆ ಪುರಾಣಗಳು. ಒಂದೊಂದು ಹೆಸರಿನ ಹಿಂದೆಯೂ ಒಂದೊಂದು ಕಥೆಕಾರಣ. ಅರ್ಜುನನಿಗೆ ಫಲ್ಗುಣ ಎಂಬ ಹೆಸರು ಉತ್ತರಾಫಲ್ಗುಣೀ ನಕ್ಷತ್ರದಲ್ಲಿ ಹುಟ್ಟಿದವನಾದ್ದರಿಂದ ಬಂದದ್ದು. ಪಾರ್ಥ ಎಂದರೆ ಪೃಥೆಯ(ಕುಂತಿಯ) ಮಗ. ಕಿರೀಟಿ ಎಂಬ ಹೆಸರು ಬರಲು ಕಾರಣ ನಿವಾತಕವಚ ಪೌಲೋಮ ಮುಂತಾದ ದುಷ್ಟದೈತ್ಯರನ್ನೆಲ್ಲ ಸಂಹರಿಸಿದ್ದಕ್ಕೆ ಸಂತುಷ್ಟನಾದ ಇಂದ್ರನು ಅರ್ಜುನನನ್ನು ತನ್ನ ಸಿಂಹಾಸನದಲ್ಲಿ ಕುಳ್ಳಿರಿಸಿ ಅಮೂಲ್ಯವಾದ ಕಿರೀಟವನ್ನು ತೊಡಿಸಿದ ಕಥೆ. ಅರ್ಜುನನ ರಥದ ಕುದುರೆಗಳು ಅಚ್ಚಬಿಳಿ ಬಣ್ಣದವು. ಆದ್ದರಿಂದ ಅವನು ಶ್ವೇತವಾಹನ. ಬೀಭತ್ಸು ಎಂದರೆ ರಣರಂಗದಲ್ಲಿ ಯುದ್ಧ ಮಾಡುವಾಗ ಅನುಚಿತವಾದ ಯಾವ ಕಾರ್ಯವನ್ನೂ ಮಾಡದವನು. ವಿಜಯ ಎಂದರೆ ಯಾವಾಗಲೂ ಜಯಶಾಲಿಯಾಗಿಯೇ ಹಿಂದಿರುಗುವವನು. ಜಿಷ್ಣು ಎಂದರೆ ಎಲ್ಲವನ್ನೂ ಗೆಲ್ಲಬಲ್ಲವನು. ಸವ್ಯಸಾಚಿ ಎಂದರೆ ಬಲ ಮತ್ತು ಎಡ ಕೈಗಳೆರಡರಿಂದಲೂ ಅಸ್ತ್ರಗಳನ್ನು ಪ್ರಯೋಗಿಸಬಲ್ಲವನು. ಧನಂಜಯ ಎಂದರೆ ಸಿರಿಸಂಪತ್ತನ್ನು ತರುವವನು ಎಂದು ಅರ್ಥ. ಇವಿಷ್ಟೇ ಅಲ್ಲದೆ ಹನ್ನೊಂದನೆಯದಾಗಿ ‘ನರ’ ಎಂಬ ಹೆಸರೂ ಅರ್ಜುನನಿಗಿದೆ. ಭಗವದ್ಗೀತೆಯು ನರನಿಗೆನಾರಾಯಣ(ಶ್ರೀಕೃಷ್ಣ)ನ ಉಪದೇಶ ಎಂದೇ ಪ್ರಸಿದ್ಧಿ ತಾನೆ? ಈ ಸಂದರ್ಭದಿಂದಾಗಿ ಅರ್ಜುನ ನರ.

ಇಷ್ಟೆಲ್ಲ ಶೌರ್ಯಪರಾಕ್ರಮಗಳ ಗಣಿಯಾಗಿದ್ದ ಅರ್ಜುನ ಸದ್ಗುಣಸಂಪನ್ನನಾಗಿದ್ದರೂ ಸಾಕಷ್ಟು ಅಹಂಕಾರವೂ ಅವನನ್ನಾವರಿಸಿದ್ದದ್ದು ಹೌದು. ಬಭ್ರುವಾಹನನೊಂದಿಗೆ ಮುಖಾಮುಖಿಯಾಗುವ ಹೊತ್ತಿಗೆ ಬಹುಶಃ ಅದು ಅತಿರೇಕಕ್ಕೆ ತಲುಪಿತ್ತು. ಬಭ್ರುವಾಹನನಾದರೋ ಮೊದಲಿಗೆ ಅತಿ ವಿನಮ್ರನಾಗಿಯೇ ಅರ್ಜುನನೊಡನೆ ಸಂವಹನ ನಡೆಸಲು ಯತ್ನಿಸಿದ್ದ. ಆದರೆ ಅರ್ಜುನನ ಕೊಬ್ಬು ಅದಕ್ಕೆ ನೀಡಿದರಲ್ಲವೇ? ತಾನೊಬ್ಬನೇ ಪರಾಕ್ರಮಿಯೆಂದು ಕೊಚ್ಚಿಕೊಂಡ ಅರ್ಜುನ, ಬಭ್ರುವಾಹನನನ್ನು ಮೂದಲಿಸಿದ. ಮಾತಿನಲ್ಲೇ ತುಚ್ಛೀಕರಿಸಿದ. ಕೆರಳಿ ಕೆಂಡಾಮಂಡಲವಾಗುವಂತೆ ಮಾಡಿದ. ತಂದೆಮಗನ ತೀವ್ರ ಸೆಣಸಾಟದ ಆ ಸನ್ನಿವೇಶವನ್ನು ಬಭ್ರುವಾಹನ ಚಲನಚಿತ್ರದಲ್ಲಿ ಅಣ್ಣಾವ್ರ ದ್ವಿಪಾತ್ರಾಭಿನಯದಲ್ಲಿ ನೋಡಿ ರೋಮಾಂಚನಗೊಳ್ಳದ ಕನ್ನಡಿಗರಿರಲಿಕ್ಕಿಲ್ಲ. ಆ ಚಿತ್ರ ಬಿಡುಗಡೆಯಾಗಿ ನಲ್ವತ್ತು ವರ್ಷಗಳೇ ಸಂದಿದ್ದರೂ ಈಗಲೂ ಏಕಪಾತ್ರಾಭಿಯವೆಂದರೆ ಅರ್ಜುನಬಭ್ರುವಾಹನ ವಾಗ್ಯುದ್ಧ ಎಂದೇ ಆಗಿಹೋಗಿರುವುದರಿಂದ, ‘ಹೂಂ. ಎತ್ತು ನಿನ್ನ ಗಾಂಡೀವ. ಹೂು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ನನಗೂ ಸ್ವಲ್ಪ ತಿಳಿಯಲಿ. ಅಥವಾ, ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ!’ ರೀತಿಯ ಮಾತಿನ ಮಿಂಚುಗಳು ನಮ್ಮ ಕಿವಿಗಳನ್ನು ಅಪ್ಪಳಿಸುತ್ತಲೇ ಇರುತ್ತವೆ.

ಹರನೊಡನೆ ಹೋರಾಡಿ ಅರ್ಜುನನು ಪಾಶುಪತಾಸ್ತ್ರವನ್ನು ಪಡೆದದ್ದು ಯಾವಾಗ? ಅದೊಂದು ರೋಚಕ ಪ್ರಸಂಗ. ‘ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ…’ ಎಂದು ಹಳಗನ್ನಡದ ಕವಿ ನೇಮಿಚಂದ್ರನು ನಿಬ್ಬೆರಗಾಗಿ ಉಲ್ಲೇಖಿಸಿರುವ ಪ್ರಸಂಗ. ಅದೇ ಇವತ್ತಿನ ಅಂಕಣದ ಹೂರಣ.

ಪಾಂಡವರು ವನವಾಸದಲ್ಲಿದ್ದಾಗ, ಕಾಮ್ಯಕವನದಿಂದ ದ್ವೈತವನಕ್ಕೆ ಬಂದಾಗ, ವೇದವ್ಯಾಸ ಒಮ್ಮೆ ಪಾಂಡವರನ್ನು ಭೇಟಿಯಾಗಲಿಕ್ಕೆ ಬರುತ್ತಾರೆ. ಆದರಾತಿಥ್ಯಗಳನ್ನೆಲ್ಲ ಸ್ವೀಕರಿಸಿದ ಮೇಲೆ ಯುಧಿಷ್ಠಿರನನ್ನುದ್ದೇಶಿಸಿ ‘ಅಯ್ಯಾ, ನಿನ್ನ ಸತ್ಯಸಂಧತೆ ಹಾಗೂ ಪ್ರಾಮಾಣಿಕ ಜೀವನ ನಿಮಗೆ ರಕ್ಷಾಕವಚವೇನೋ ನಿಜ. ವನವಾಸ, ಅಜ್ಞಾತವಾಸಗಳನ್ನು ನೀವು ನಿರ್ವಿಘ್ನರಾಗಿ ಕಳೆಯುವಿರಿ. ಆದರೆ ಕೌರವರೊಡನೆ ಯುದ್ಧ ಮಾಡದೆ ನಿಮ್ಮ ರಾಜ್ಯವನ್ನು ನೀವು ಪಡೆಯಲಾರಿರಿ. ದೇವರ ದಯವಿಲ್ಲದೆ ನಿಮಗೆ ಯುದ್ಧದಲ್ಲಿ ಜಯವೂ ದೊರಕದು. ಆದ್ದರಿಂದ ಅರ್ಜುನನು ಮಹಾದೇವನನ್ನು ತಪಸ್ಸಿನಿಂದ ಮೆಚ್ಚಿಸಲಿ. ಪರಶಿವನಿಂದ ದಿವ್ಯಾಸ್ತ್ರವನ್ನು ಪಡೆಯಲಿ’ ಎಂದು ಸಲಹೆ ನೀಡುತ್ತಾರೆ. ಯುಧಿಷ್ಠಿರನೂ, ಅರ್ಜುನನೂ ಮಾತಿಗೆ ಒಪ್ಪುತ್ತಾರೆ. ಆಮೇಲೆ ಅರ್ಜುನನು ತಪಸ್ಸಿಗಾಗಿ ಹಿಮಾಲಯದಲ್ಲಿನ ಇಂದ್ರಕೀಲ ಪ್ರದೇಶಕ್ಕೆ ತೆರಳುತ್ತಾನೆ. ಸಂಗಡ ಬಿಲ್ಲುಬಾಣಗಳನ್ನೂ ತೆಗೆದುಕೊಂಡೇ ಹೋಗುತ್ತಾನೆ. ಭಯಂಕರವಾದ ಅಡವಿ ಅದು! ಮನುಷ್ಯರ ಸುಳಿವೇ ಇಲ್ಲ. ಆದರೆ ತಪಸ್ಸಿಗೆ ಯೋಗ್ಯವಾದ ಸ್ಥಳ. ಅಲ್ಲಿ ಅರ್ಜುನನು ಉಗ್ರ ತಪಸ್ಸಿಗೆ ತೊಡಗುತ್ತಾನೆ. ನಿದ್ದೆಯಿಲ್ಲ ನೀರಡಿಕೆಯಿಲ್ಲ. ಊಟವಿಲ್ಲ ಉಡಿಗೆಯಿಲ್ಲ. ಮೊದಮೊದಲು ಗೆಡ್ಡೆಗೆಣಸುಗಳು, ಮುಂದೆ ಬರಿಯ ಹಣ್ಣೆಲೆಗಳಷ್ಟೇ ಆಹಾರ. ಆಮೇಲೆ ಅವನ್ನೂ ಬಿಟ್ಟುಬಿಡುತ್ತಾನೆ. ಬಿಸಿಲೆನ್ನದೆ ಚಳಿಯೆನ್ನದೆ ಮಳೆಗಾಳಿಗಳಿಗೆ ಜುಮ್ಮೆನ್ನದೆ ಒಂದೇ ಮನದಿಂದ ಶಿವನ ಧ್ಯಾನ ಹಗಲೂ ಇರುಳೂ ಶಿವಧ್ಯಾನ, ಶಿವಮಂತ್ರ ಜಪ. ತಪಸ್ಸನ್ನು ಭಂಗಪಡಿಸಲು ಅಪ್ಸರಸ್ತ್ರೀಯರೇ ಮೊದಲಾದವರು ಯತ್ನಿಸುತ್ತಾರೆ. ಆದರೆ ಅರ್ಜುನನ ಏಕಾಗ್ರತೆ ಮತ್ತಷ್ಟು ಹೆಚ್ಚುತ್ತದೆ. ಅರಸು ಮಗನಾಗಿ ಎಂಥ ಕಠೋರ ತಪಸ್ಸು! ಪರಮೇಶ್ವರನು ಅರ್ಜುನನ ತಪಸ್ಸಿಗೆ ಬೆರಗಾಗುತ್ತಾನೆ, ಏಕನಿಷ್ಠೆಯ ಭಕ್ತಿಗೆ ಒಲಿಯುತ್ತಾನೆ. ಆತನ ಬಯಕೆಯನ್ನು ಈಡೇರಿಸಬೇಕೆಂದು ಮನದಲ್ಲೇ ಅಂದುಕೊಳ್ಳುತ್ತಾನೆ.

ಪರಮೇಶ್ವರನಿಗೆ ಆಗ ಇನ್ನೊಂದು ಕೆಲಸವೂ ಆಗಬೇಕಿತ್ತು. ‘ಮೂಕಾಸುರ’ ಎಂಬ ದಾನವನ ವಧೆ. ಆ ದುರುಳನು ಕಾಡುಹಂದಿಯ ರೂಪವನ್ನು ಧರಿಸಿ ಲೋಕಕ್ಕೆಲ್ಲ ಉಪದ್ರ ಕೊಡುತ್ತಿದ್ದನು. ಸಂಹರಿಸುವುದು ಮತ್ತು ಅರ್ಜುನನ ಮೇಲೆ ಅನುಗ್ರಹ ಮಾಡುವುದು ಈ ಎರಡೂ ಕಾರ್ಯಗಳನ್ನು ಒಂದೇ ಕಾಲಕ್ಕೆ ಮಾಡಬೇಕೆಂದು ಶಿವನು ಒಂದು ಆಟವನ್ನು ಹೂಡಿದನು. ಅದೇನೆಂದರೆ, ತಾನು ಬೇಡನ ವೇಷವನ್ನು ಹಾಕಿಕೊಂಡು, ಕಾಡುಹಂದಿಯಾಗಿ ಇದ್ದ ಮೂಕಾಸುರನನ್ನು ಬೆನ್ನಟ್ಟಿ ಓಡಿಸಿಕೊಂಡು ಇಂದ್ರಕೀಲದ ಕಡೆಗೆ ಹೋಗಬೇಕು. ಅಲ್ಲಿ ಅರ್ಜುನನೊಡನೆ ಕಾಲು ಕೆದರಿ ಜಗಳವಾಡಿ ಅವನೊಂದಿಗೆ ಯುದ್ಧ ಮಾಡಬೇಕು. ಆ ಮೂಲಕ ಆತನ ಪರಾಕ್ರಮ, ಶಿವಭಕ್ತಿಗಳನ್ನು ಜಗತ್ತಿಗೆ ತೋರಿಸುವಂತೆ ಮಾಡಬೇಕು ಎಂದು. ಅದರಂತೆಯೇ ಶಿವನು ಬೇಡನ ಹಾಕಿಕೊಂಡು ‘ಶಬರ ಶಂಕರ’ನಾದನು. ಆ ಕ್ಷಣವೇ ಪಾರ್ವತಿಯೂ ಬೇಡಿತಿಯಾದಳು. ಶಿವಗಣಗಳೆಲ್ಲ ಬೇಟೆಗಾರರಾದರು. ಬಿಲ್ಲುಬಾಣಗಳು, ಬೇಟೆನಾಯಿಗಳು, ಕೊಂಬು, ಹಲಗೆ ಮುಂತಾದ ವಾದ್ಯಗಳು, ಬೇಟೆಗಾರರ ಕೋಲಾಹಲ! ಇಂತಹ ಗೌಜಿಯೊಂದಿಗೆ ಈ ದೊಡ್ಡ ಬೇಡನು ಕಾಡುಹಂದಿಯನ್ನು ಬೆನ್ನಟ್ಟಿಕೊಂಡು ಇಂದ್ರಕೀಲದ ಕಡೆಗೆ ಬಂದನು. ಯಾವಾಗ ಅರ್ಜುನನೊಡನೆ ಯುದ್ಧದ ಆಟವನ್ನು ಹೂಡಿಯೇನು, ಯಾವಾಗ ಅವನಿಗೆ ಕರುಣೆಯನ್ನು ತೋರಿಸಿಯೇನು ಎಂದು ಶಬರ ಶಂಕರನಿಗೂ ಆತುರ. ಅವನ ಈ ಲೀಲೆಯನ್ನು ನೋಡಿ ನಲಿಯಬೇಕೆಂದು ದೇವತೆಗಳೆಲ್ಲ ಆಕಾಶದಲ್ಲಿ ನೆರೆದರು.

ಮೊದಲು ಶಂಕರನು ಆ ಕಾಡುಹಂದಿಗೆ ಒಂದು ಬಾಣ ಬಿಟ್ಟನು. ಆ ಬಾಣವು ಕಾಡುಹಂದಿಯ ಬಾಯಿಯೊಳಕ್ಕೆ ಹೊಕ್ಕು ಅದು ಪ್ರಾಣಸಂಕಟದಿಂದ ವಿಲವಿಲ ಒದ್ದಾಡುವಂತಾಯಿತು. ಗೊರಗೊರ ಶಬ್ದ ಮಾಡುತ್ತ ಅದು ಅರ್ಜುನನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಸಮೀಪಿಸಿತು. ಶಿವಧ್ಯಾನದಲ್ಲಿ ಮೈಮರೆತಿದ್ದ ಅರ್ಜುನನು ಈ ಬೇಡರ ಕೋಲಾಹಲ, ಕಾಡುಹಂದಿಯ ಗೊರಗೊರ ಸದ್ದಿಗೆ ಎಚ್ಚೆತ್ತು ಕಣ್ತೆರೆದನು. ಅರೆಜೀವದಲ್ಲಿದ್ದ ಕಾಡುಹಂದಿ ತನ್ನತ್ತಲೇ ಬರುತ್ತಿರುವುದನ್ನು ಗಮನಿಸಿದನು. ತತ್‌ಕ್ಷಣವೇ ಅವನ ಕ್ಷಾತ್ರತೇಜಸ್ಸು ಜಾಗ್ರತವಾಯಿತು. ಕಾಡುಹಂದಿಯತ್ತ ಗುರಿಯಿಟ್ಟು ಬಾಣ ಬಿಟ್ಟನು. ಅರ್ಜುನನ ಹೊಡೆತಕ್ಕೆ ಕಾಡುಹಂದಿ ಅಲ್ಲೇ ಸತ್ತುಬಿದ್ದಿತು. ಶಬರ ಶಂಕರನ ಪರಿವಾರದವರು ಇದು ತಾವೇ ಹೊಡೆದುರುಳಿಸಿದ ಬೇಟೆ ಎಂದು ಆ ಹಂದಿಯ ಹೆಣವನ್ನು ಸ್ವಾಧೀನಪಡಿಸಲು ಮುಂದಾದರು. ಅರ್ಜುನನು ಅವರನ್ನು ತಡೆದು ‘ನಿಲ್ಲಿ. ಇದನ್ನು ನಾನು ಹೊಡೆದಿದ್ದೇನೆ. ಇದು ನಿಮ್ಮದಲ್ಲ, ಒಯ್ಯಬೇಡಿರಿ’ ಎಂದು ಆಕ್ಷೇಪಿಸಿದನು. ಮಾತಿಗೆ ಮಾತು ಬೆಳೆಯಿತು. ಕೈಗೆ ಕೈ ಹತ್ತಿತು. ಶಬರ ಶಂಕರನೂ ಅಲ್ಲಿಗೆ ಬಂದು ಅರ್ಜುನನೊಡನೆ ಮಾತಿನ ದಾಳಿಯಿಟ್ಟನು. ‘ಎಲವೋ, ನೀನೆಂಥ ತಪಸ್ವಿ? ತಪಸ್ಸು ಮಾಡುವ ನಿನಗೆ ಬಿಲ್ಲುಬಾಣಗಳೇಕೆ? ಎಂದು ತಿವಿದನು. ಅರ್ಜುನನೇನು ಸುಮ್ಮನಿರುತ್ತಾನೆಯೇ? ‘ಎಲೈ ಮೂರ್ಖನೇ, ಮೊಲ, ಚಿಗರೆ ಮೊದಲಾದ ಸಣ್ಣಪುಟ್ಟ ಮೃಗಗಳ ಬೇಟೆಯಾಡಿ ಕಾಲ ಹಾಕುವ ನಿನಗೆ ನಮ್ಮ ಗೊಡವೆಯೇಕೆ? ನಾನು ಯಾರೆಂದು ತಿಳಿದೆ?’ ಎಂದು ಹೂಂಕರಿಸಿದನು. ಅದಕ್ಕೆ ಶಬರ ಶಂಕರನು ‘ನೀನು ಯಾರಾದರೆ ನನಗೇನಂತೆ? ನಿನ್ನ ಈ ಬಿಂಕದ ನುಡಿಗೆ ಬೆದರುವ ಬೇಡನಲ್ಲ ನಾನು. ಬಿಲ್ಲುಬಾಣಗಳ ಬಡಿವಾರಕ್ಕೆ ಸೊಪ್ಪು ಹಾಕುವವನಲ್ಲ’ ಎಂದು ಅಬ್ಬರಿಸಿದನು.

ಆಮೇಲೆ ಅರ್ಜುನನಿಗೂ ಶಬರ ಶಂಕರನಿಗೂ ಭೀಕರ ಯುದ್ಧ ನಡೆಯಿತು. ಅರ್ಜುನನ ಬಾಣಗಳು ಮುಗಿದವು. ಮಲ್ಲಯುದ್ಧ ಪ್ರಾರಂಭವಾಯಿತು. ಒಮ್ಮೆ ಅರ್ಜುನ ಕೆಳಗುರುಳಿದರೆ ಮತ್ತೆ ಚಂಗನೆ ಎದ್ದು ಶಂಕರನನ್ನು ಹಿಮ್ಮೆಟ್ಟುವನು. ಇನ್ನೊಮ್ಮೆ ಅರ್ಜುನನದೇ ಮೇಲುಗೈ ಎನಿಸುವುದರೊಳಗೆ ಶಂಕರನಿಂದ ಮತ್ತೊಂದು ಪ್ರಹಾರ. ಆವೇಶದಲ್ಲಿ ಅರ್ಜುನನು ಶಂಕರನ ಕುತ್ತಿಗೆಯನ್ನೇ ಕಾಲಿಂದ ಮೆಟ್ಟಿದ್ದೂ ಆಯ್ತು! ಆದರೂ ಅರ್ಜುನನ ಆಟ ಸಾಗದಂತಾಯ್ತು. ಶಂಕರನು ಬಾಣ ಬಿಟ್ಟು ಅರ್ಜುನನ ಬಿಲ್ಲನ್ನೂ ಕತ್ತರಿಸಿದನು. ಅವನನ್ನು ನೆಲಕ್ಕೆ ಕೆಡವಿ ತುಳಿದನು. ಅಷ್ಟಕ್ಕೆ ಅರ್ಜುನನ ಬಾಯೊಳಗಿಂದ ರಕ್ತ ಹರಿಯಿತು. ಮೂಗಿನ ಹೊರಳೆಗಳು ಹಿಡಿಸದಷ್ಟು ಉಸಿರು ಅರ್ಜುನ ನಿಜವಾಗಿಯೂ ಗಾಬರಿಗೊಂಡನು. ತನ್ನಂಥ ವೀರನನ್ನು ಸೋಲಿಸುವ ಬೇಡನೆಂದರೆ ಈತನು ಸಾಮಾನ್ಯ ಬೇಡನಲ್ಲ ಎಂದು ತಿಳಿದನು. ಆದರೂ ಎದೆಗುಂದದೆ ‘ಮಹಾದೇವನ ಬಲವೊಂದು ನನ್ನ ನೆರವಿಗೆ ಇದೆಯಲ್ಲ, ಅದನ್ನು ನಾನೀಗ ಪಡೆಯಬೇಕು. ಈ ಸಂಕಟದಲ್ಲಿ ಸಹಾಯ ಮಾಡೆಂದು ಆತನಿಗೆ ಮೊರೆಯಿಡಬೇಕು. ಆ ದಯಾಳು ಪರಶಿವನು ನನಗೆ ಸೋಲಿನ ಅವಮಾನ ತರಲಾರನು. ಈಗಲೇ ಮಿಂದು ಮಡಿಯಾಗಿ ಆತನನ್ನು ಪೂಜಿಸುವೆನು’ ಎಂದು ನಿಶ್ಚಯಿಸಿದನು. ಸ್ವಲ್ಪ ಹೊತ್ತು ತಾಳು ಎಂದು ಬೇಡನಿಗೆ ಹೇಳಿ, ಅಲ್ಲೇ ನೀರಿನ ಝರಿಯಲ್ಲಿ ಮಿಂದು ಮಡಿಯಾದನು. ಮಳಲಿನ ಲಿಂಗವೊಂದನ್ನು ಮಾಡಿಕೊಂಡು ಒಂದಿಷ್ಟು ಹೂವು ಪತ್ರೆಗಳನ್ನು ಕೊಯ್ದು ತಂದು ಶಿವಾರ್ಚನೆ ಕೈಗೊಂಡನು.

ಅರ್ಜುನನು ತಾನು ಹೂವು ಏರಿಸಿದ ಶಿವಲಿಂಗವನ್ನು ನೋಡುತ್ತಾನೆ, ಅದರ ಮೇಲೆ ಹೂವುಗಳೇ ಇಲ್ಲ! ಅತ್ಯಂತ ಸೋಜಿಗ! ಹೊರಳಿ ನೋಡುತ್ತಾನೆ, ಬೇಡನ ತಲೆಯ ಮೇಲೆ ತಾನು ಲಿಂಗಕ್ಕೇರಿಸಿದ ಹೂವುಗಳು! ಮತ್ತೆ ಲಿಂಗಕ್ಕೆ ಹೂವುಗಳನ್ನೇರಿಸುತ್ತಾನೆ, ಅವೇ ಹೂವುಗಳು ಮತ್ತೆ ಬೇಡನ ತಲೆಗೆ ಹೋಗುತ್ತವೆ. ಅರ್ಜುನನ ಕಣ್ಣಿನ ಮಬ್ಬು ಹರಿಯಿತು. ತಾನೇ ಪರಾಕ್ರಮಿಯೆಂಬ ಕರಗಿತು. ‘ಈತನು ಬೇಡನಲ್ಲ. ನಾನು ಪೂಜಿಸುತ್ತಿದ್ದ ಪರಶಿವನೇ ಈತನು! ಅಯ್ಯೋ ನನ್ನ ದೇವನೊಡನೆ ಯುದ್ಧವೇ?’ ಎಂದು ಓಡೋಡಿ ಬಂದು ಶಬರಶಂಕರನ ಪಾದಕ್ಕೆರಗಿದನು. ತಾನು ಯುದ್ಧ ಮಾಡಿದ್ದು ಪರಶಿವನ ಜೊತೆ ಎಂದು ತಿಳಿದು ತನ್ನ ಅವಿವೇಕಕ್ಕೆ ನಾಚಿಕೊಂಡು ಕ್ಷಮೆ ಯಾಚಿಸಿದನು. ಶಂಕರನು ಅರ್ಜುನನನ್ನು ಬಿಗಿದಪ್ಪಿಕೊಂಡನು. ಪಾರ್ವತಿಯು ಅರ್ಜುನನ ಗಾಯಗೊಂಡ ಮೈಯನ್ನು ನೇವರಿಸಿದಳು. ಶಿವನ ಪರಿವಾರದವರು ಆನಂದದಿಂದ ಕುಣಿದಾಡಿದರು. ದೇವತೆಗಳು ಹೂಮಳೆಗರೆದರು. ಶಿವನು ತನ್ನ ನಿಜರೂಪವನ್ನು ತೋರಿ ಅರ್ಜುನನಿಗೆ ‘ಪಾಶುಪತ’ ಎಂಬ ಅಸ್ತ್ರವನ್ನು ದಯಪಾಲಿಸಿ ಅನುಗ್ರಹಿಸಿದನು. ಅದು ಅಂತಿಂಥ ಅಸ್ತ್ರವಲ್ಲ! ಶಿವನ ತ್ರಿಶೂಲದಂತೆಯೇ ಜ್ವಾಲಾಸ್ವರೂಪದ್ದು. ಸಮಸ್ತ ವಿಶ್ವವನ್ನೂ ನಾಶಮಾಡಬಲ್ಲ ಸಾಮರ್ಥ್ಯವುಳ್ಳದ್ದು. ಪ್ರಳಯಾಗ್ನಿಯ ತೇಜಸ್ಸು ಉಳ್ಳದ್ದು. ಅರ್ಜುನನಿಗೆ ಧನ್ಯತೆಯ ಆನಂದಾಶ್ರು ಉಕ್ಕಿ ಬಂತು. ಮುಂದೆ ವಿಧಿಲಿಖಿತವೋ ಎಂಬಂತೆ ಕೌರವರಿಗೂ ಪಾಂಡವರಿಗೂ ಯುದ್ಧವಾಗುತ್ತದೆ. ಹದಿನೆಂಟು ದಿನ ನಡೆದ ಆ ಯುದ್ಧದಲ್ಲಿ ಪಾಂಡವರಿಗೆ ಪಾಶುಪತಾಸ್ತ್ರದಿಂದ ಬಹಳ ಉಪಯೋಗವೂ ಆಗುತ್ತದೆ. ಅರ್ಜುನನು ಸೈಂಧವ(ಜಯದ್ರಥ)ನನ್ನು ಕೊಲ್ಲುವುದಕ್ಕೆ, ಕೊನೆಯಲ್ಲಿ ಕರ್ಣನನ್ನು ಮುಗಿಸಲಿಕ್ಕೂ ಪಾಶುಪತಾಸ್ತ್ರವನ್ನೇ ಬಳಸುತ್ತಾನೆ. ದೇವತೆಗಳಿಗೆ ಅವಧ್ಯರಾದ ಮಾಯಾವಿ ದೈತ್ಯರನ್ನು ಅರ್ಜುನನ ನೆರವಿಗೆ ಬಂದದ್ದು ಪಾಶುಪತಾಸ್ತ್ರವೇ. ಹಾಗಾಗಿಯೇ, ಬಭ್ರುವಾಹನನೊಂದಿಗೆ ಮುಖಾಮುಖಿಯಾದಾಗ ‘ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ’ ಎಂದು ಮೀಸೆ ಹುರಿಯುತ್ತ ಭುಜ ತಟ್ಟಿಕೊಳ್ಳುತ್ತ ಅರ್ಜುನ ತನ್ನ ಪರಾಕ್ರಮವನ್ನು ಕೊಚ್ಚಿಕೊಳ್ಳುತ್ತಾನೆ.

ಸಂಸ್ಕೃತದಲ್ಲಿ ಕವಿಶ್ರೇಷ್ಠರಲ್ಲೊಬ್ಬನೆನಿಸಿದ ಭಾರವಿಯು ‘ಕಿರಾತಾರ್ಜುನೀಯಂ’ ಕಾವ್ಯವನ್ನು ಇದೇ ಕಥೆಯನ್ನು ಆಧರಿಸಿ ಬರೆದಿದ್ದಾನೆ. ‘ಉಪಮಾ ಕಾಲಿದಾಸಸ್ಯ ಭಾರವೇರರ್ಥಗೌರವಂ’.. ಎನ್ನುತ್ತೇವಲ್ಲ ಅದೇ ಭಾರವಿ. ಸರಿಸುಮಾರು ಆರನೆಯ ಶತಮಾನದಲ್ಲಿ ಬಾಳಿದವನು. ಪಾತ್ರಚಿತ್ರಣದಲ್ಲಿ, ವಿಷಯ ನಿರೂಪಣೆಯಲ್ಲಿ ಭಾರವಿಯ ಕೌಶಲ ಅಪ್ರತಿಮ. ಪ್ರತಿಭೆ ಉಜ್ವಲ. ಚಿತ್ರಬಂಧದಂಥ ಶಬ್ದಚಮತ್ಕಾರಗಳು ಕಿರಾತಾರ್ಜುನೀಯಂ ಕಾವ್ಯದಲ್ಲಿ ಹರನರ ಕಾಳಗವನ್ನು ಬಣ್ಣಿಸುವ ಒಂದು ಶ್ಲೋಕದಲ್ಲಿ, ಶಿವನ ಎದೆಯ ಮೇಲೆ ಅರ್ಜುನನೆಸಗಿದ ಮುಷ್ಟಿಪ್ರಹಾರವನ್ನು ಭಾರವಿಯು ಸಹ್ಯಾದ್ರಿಯ ವಿಶಾಲವಾದ ತಪ್ಪಲುಪ್ರದೇಶದ ಮೇಲೆ ಅಪ್ಪಳಿಸಿ ಹಿಂದೂಡಲ್ಪಡುವ ಸಮುದ್ರದ ಅಲೆಗಳಿಗೆ ಹೋಲಿಸಿದ್ದಾನೆ. ಸಮುದ್ರದಲ್ಲಿ ಸೂರ್ಯಾಸ್ತದ ವರ್ಣನೆಯೂ ಕೆಲವು ಶ್ಲೋಕಗಳಲ್ಲಿದೆ. ಇದನ್ನು ಗಮನಿಸಿಯೇ ವಿದ್ವಾಂಸರು ಭಾರವಿಯ ವಾಸಸ್ಥಳವು ಅರಬ್ಬೀಸಮುದ್ರ ತೀರದಲ್ಲಿದ್ದಿರುವ ಸಾಧ್ಯತೆಗಳೂ ಇವೆಯೆನ್ನುತ್ತಾರೆ. ಆದರೆ ಕವಿಕಲ್ಪನೆಗೆ ಎಣೆಯಿರುವುದಿಲ್ಲವಲ್ಲ?

ಈಗ, ಆರಂಭದಲ್ಲಿ ಉಲ್ಲೇಖಿಸಿದ್ದ ‘ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ’ ಎಂಬ ಕವಿವಾಣಿಯನ್ನೊಮ್ಮೆ ಇದು, ಸುಮಾರು ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ನೇಮಿಚಂದ್ರನೆಂಬ ಕನ್ನಡ ಕವಿ ತನ್ನ ‘ಲೀಲಾವತಿ’ ಕಾವ್ಯದಲ್ಲಿ ಕವಿಗಳನ್ನು ಪ್ರಶಂಸಿಸುತ್ತ ಹೇಳಿರುವ ನುಡಿ. ‘ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂ ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್‌ ಮುಟ್ಟಿದರೊತ್ತಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ’ ಎಂದು ಅದರ ಪೂರ್ಣ ರೂಪ. ‘ರಾಮಾಯಣದಲ್ಲಿ ಕಪಿಸೇನೆಯು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿತೋ ಬಿಟ್ಟಿತೋ ಗೊತ್ತಿಲ್ಲ, ಕಾವ್ಯದಲ್ಲಿ ಕಪಿಗಳಲ್ಲದಿದ್ದರೆ ಕವಿಯಾದರೂ ಸೇತುವೆ ವಾಮನಾವತಾರದಲ್ಲಿ ವಿಷ್ಣುವು ತನ್ನ ಮೂರನೆಯ ಹೆಜ್ಜೆಯಿಂದ ಆಕಾಶವನ್ನು ಮುಟ್ಟಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಕವಿಯು ಹಾಗೆ ಮುಟ್ಟಿಸಿದ್ದಾನೆ. ಮಹಾಭಾರತದಲ್ಲಿ ಅರ್ಜುನನು ಶಿವನ ಗಂಟಲನ್ನು ಒತ್ತಿ ಮೆಟ್ಟಿದನೋ ಇಲ್ಲವೋ ತಿಳಿಯದು. ಆದರೆ ಕವಿಯಂತೂ ಮೆಟ್ಟಿಸಿದ್ದಾನೆ. ಈ ರೀತಿ ಕಟ್ಟಿ, ಮುಟ್ಟಿ, ಮೆಟ್ಟಿ ಅದ್ಭುತ ಕಾರ್ಯಗಳನ್ನು ಮಾಡಿಸುವ ಕವಿಗಳ ಮಹತ್ತ್ವವು ಅದೆಷ್ಟೋ! ಅವರೆಲ್ಲರ ಹಿರಿಮೆ ಅದೆಂಥದೋ!’ ಕವಿಗಳ ಪ್ರತಿಭೆ, ಶಕ್ತಿ, ಕಲ್ಪನೆ, ಜಾಣ್ಮೆ, ಚತುರತೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಹಿರಿಯ ಗುಣ ಬಗ್ಗೆ ನೇಮಿಚಂದ್ರನಿಗೆ ಅಪಾರ ಅಭಿಮಾನ, ವಿಶೇಷ ನಂಬಿಕೆ.

ನಮಗೂ ಹಾಗೆಯೇ ಅನಿಸುತ್ತದಲ್ಲವೇ? ಕಾವ್ಯದಲ್ಲಿ ಉಕ್ತವಾಗಿರುವುದೆಲ್ಲವೂ ನಿಜವೋ ಅಲ್ಲವೋ ಯಾರಿಗೆ ಗೊತ್ತು? ಅದೆಲ್ಲವನ್ನು ಕಂಡವರಾರು? ಆದರೆ ಒಂದು ಕೃತಿಯನ್ನು ಓದುವಾಗ ಅದರಲ್ಲಿ ಬರುವ ಸಂಗತಿಗಳು ನಿಜಕ್ಕೂ ನಡೆದವೆಂದೇ ನಮಗನಿಸುತ್ತದೆ; ನಮ್ಮ ಕಣ್ಣೆದುರಿಗೇ ಆ ದೃಶ್ಯಗಳು ನಡೆಯುತ್ತಿರುವಂತೆ ಭಾಸವಾಗುತ್ತದೆ. ಹೇಗೆ ಸಾಧ್ಯವಾಗುತ್ತದೆ ಇದೆಲ್ಲ? ಕವಿಸೃಷ್ಟಿಯ ಚಮತ್ಕಾರ!

ಇಂತು ಶ್ರಾವಣ ಮಾಸದಲ್ಲೊಂದು ಪುರಾಣ ಪಠಣಶ್ರವಣ ಹೂರಣ ತೋರಣ ಅಂಕಣ. ಶುಭಮಸ್ತು.

Tags

ಶ್ರೀವತ್ಸ ಜೋಶಿ

ವಾಷಿಗ್ಟಂನ್‌ ಡಿಸಿಯ ಅಪ್ಪಟ ಕನ್ನಡಿಗ. ಸಣ್ಣ ಕ್ರಿಮಿ ಕೀಟದಿಂದ ಬೃಹದಾಕಾರದ ಪರ್ವತದ ಬಗ್ಗೆಯೂ ಸೀಮಿತ ಪದಗಳಲ್ಲಿ, ಸುಸ್ಪಷ್ಟವಾಗಿ ಸವಿಸ್ತಾರವಾಗಿ ಬರೆಯಬಲ್ಲ ಅಂಕಣಕಾರ. ಹೊಸ ಪದಗಳ ಕಲಿಕೆಗೂ, ಬಳಕೆಗೂ ಇವರ ಅಂಕಣ ಸಿದ್ಧೌಷಧ! ಮಂಡೆಗೆ ಆರಾಮದಾಯಕವಾದ ಸಂಡೆ ಓದಿಗಾಗಿ ‘ತಿಳಿರುತೋರಣ’ ಓದಿ.

Related Articles

Leave a Reply

Your email address will not be published. Required fields are marked *

Language
Close