ರೈತರ ಸಂಘದ ಹಸಿರು ಶಾಲು ಮಲಿನವಾಗಲು ಯಾರು ಕಾರಣ?

Posted In : ಸಂಗಮ, ಸಂಪುಟ

ರೈತ ಸಮುದಾಯದ ಒಳ ಆಕ್ರೋಶದ ಅಭಿವ್ಯಕ್ತಿಯಾಗಿದ್ದ ರೈತ ಚಳವಳಿಯ ಲಾಂಛನ ಹಸಿರು ಶಾಲು. ಅದು ರಾಜಕೀಯ ನಾಯಕರ ಕೈಗೆ ಸಿಲುಕಿ ಮಲೀನವಾಗಿದೆ. ಒಂದು ಕಾಲದಲ್ಲಿ ಚಳವಳಿ ಹೇಗಿರಬೇಕು, ಚಳವಳಿಗಾರ ಹೇಗಿರಬೇಕು, ಜನಪರ ಹೋರಾಟಗಾರನ ಸಾಮಾಜಿಕ ಬದ್ಧತೆ ಎಂಥದ್ದಾಾಗಿರಬೇಕು ಅವನಿಗೆ ಎಂಥ ಎದೆಗಾರಿಕೆ ಇರಬೇಕಾಗುತ್ತದೆ ಎನ್ನುವುದಕ್ಕೆ ರೋಲ್ ಮಾಡೆಲ್‌ನಂತಿತ್ತು ರೈತ ಚಳವಳಿ. ಅದು 90ರ ದಶಕದವರೆಗೂ ಹಾಗೇ ಇತ್ತು. ಈಗ ಹಾಗಿಲ್ಲ, ನಾಯಕರಿಗೆ ಹೇಗೆ ಬೇಕೋ ಹಾಗಾಗೇ ಬದಲಾಗಿದೆ. ಅವರವರ ರಾಜಕೀಯ ತೀಟೆ ತೀರಿಸಿಕೊಳ್ಳುವ, ನಾಯಕರ ಮತ ಕೇಳುವ ವೇದಿಕೆಯಾಗಿ ರೂಪಾಂತರಗೊಂಡಿದೆ. ನಾಯಕರು ಬದಲಾಗಲಿ, ಅವರ ಸೈದ್ಧಾಂತಿಕ ನಿಲುವುಗಳು ಬದಲಾಗಲಿ ಆದರೆ ತಮಗೆ ಬೇಕಾದಂತೆ ರೈತ ಚಳವಳಿಯನ್ನು ಬಳಸಿಕೊಳ್ಳುತ್ತಿರುವುದು ಮತ್ತು ಹಸಿರು ಶಾಲನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮಾತ್ರ ಅಕ್ಷಮ್ಯ.

ಕಳೆದ ಶತಮಾನದಲ್ಲಿ ಕರ್ನಾಟಕದಲ್ಲಿ ಜನ್ಮ ತಾಳಿದ ಅನೇಕ ಚಳವಳಿಗಳಲ್ಲಿ ಪ್ರಮುಖವಾದದ್ದು ರೈತ ಚಳವಳಿ. ಈ ರೈತ ಚಳವಳಿ ರೂಪಿಸಿದ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ, ಎಚ್.ಎಸ್. ರುದ್ರಪ್ಪ, ಎನ್.ಡಿ. ಸುಂದರೇಶ್, ಕಡಿದಾಳು ಶಾಮಣ್ಣ ಮುಂತಾದವರು ಅದಕ್ಕೆ ನೀಡಿದ ಬೌದ್ಧಿಕ ತ್ರಾಣ, ತುಂಬಿದ ಚೈತನ್ಯ ಅಸಾಧಾರಣವಾದುದು. ನಾಯಕರೆಲ್ಲ ಸೇರಿ ಅನಕ್ಷರಸ್ಥರ ಬೃಹತ್ ಚಳವಳಿಗೆ ಹಲವು ಆಯಾಮ ನೀಡಿದ್ದರು. ಭಾರತದ ಸಂಪತ್ತು ದೋಚಿದ್ದ ಸಾಮ್ರಾಜ್ಯಶಾಹಿ ದೇಶಗಳು ತಮ್ಮ ವಸಾಹತಿನ ಮರುಸ್ಥಾಪನೆಯ ಜಾಲವಾಗಿ ಉದಾರೀಕರಣದ ಹೆಸರು ಹೇಳುತ್ತಿದ್ದಾಗ ಅಂಥ ನೀತಿಗಳಿಂದ ಭಾರತ ಮತ್ತು ಅಭಿವೃದ್ಧಿಶೀಲ ದೇಶಗಳ ಸ್ವಾತಂತ್ರ್ಯ ಹೇಗೆ ಹರಣವಾಗುತ್ತದೆ, ಕೃಷಿ ಕ್ಷೇತ್ರ ಎಂತಹ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದು ರೈತ ಚಳವಳಿ. ಭಾರತದಲ್ಲಿ ಗುಲಾಮರಂತೆ ಬದುಕುತ್ತಿದ್ದ ರೈತ ಸಮುದಾಯಕ್ಕೆ ಮತ್ತು ನಿರಂಕುಶವಾಗಿದ್ದ ಪ್ರಭುತ್ವಕ್ಕೆ ಏಕಕಾಲಕ್ಕೆ ಛಡಿ ಏಟುಕೊಟ್ಟು ನಾಗರಿಕ ಹಕ್ಕುಗಳ ಬಗ್ಗೆ ಪಾಠ ಹೇಳಿತು. ಆಕ್ರಮಣಶೀಲ ಮಾತುಗಾರಿಕೆ ಎಲ್ಲರನ್ನೂ ಪ್ರಶ್ನಿಸುವ ಗುಣವನ್ನು ರೈತ ಸಮುದಾಯದಲ್ಲಿ ಬಿತ್ತಿತು.

ಅದರ ಪರಿಣಾಮ ಕರ್ನಾಟಕದಲ್ಲಿ ಗಾಂಧಿ ಹಾಗೂ ಲೋಹಿಯಾವಾದಗಳು ರೈತ ಚಳವಳಿಯ ಮುಖೇನ ಮರುಹುಟ್ಟು ಪಡೆದವು. ಸೀಳಬಲ್ಲ ವ್ಯಂಗ್ಯ, ಚುಚ್ಚಬಲ್ಲ ಮೊನಚು ಎರಡನ್ನೂ ರೈತರಿಗೆ ಕಲಿಸಿತು. ಬುದ್ಧಿ ಜೀವಿಯ ಸೋಗಲಾಡಿತನಗಳಿಲ್ಲದೆ, ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವ ಸಾಂಪ್ರದಾಯಿಕ ವಲಯವನ್ನು ಸಂದೇಹದಿಂದಲೇ ನೋಡುತ್ತ, ಬುದ್ಧಿ ಜೀವಿ ಎನಿಸಿಕೊಳ್ಳುವವನ ಸಮಗ್ರತೆ ಮತ್ತು ಚಲನಶೀಲತೆ ಎಂಥದ್ದಾಗಿರಬೇಕು ಎಂಬುದನ್ನು ರೈತ ಚಳವಳಿ ತೋರಿಸಿಕೊಟ್ಟಿತು. ವ್ಯಕ್ತಿಗತವಾದ ಚಿಂತನೆ, ಸಮಸ್ಯೆಗಳ ಅರಿವು, ಕಾಲಕ್ಕೆ ಎದುರಾಗುವ ಸವಾಲುಗಳಿಗೆ ಪರಿಹಾರ ಹುಡುಕುತ್ತ ಸಮುದಾಯದ ತಲ್ಲಣಗಳನ್ನು ಸ್ವತಃ ಅನುಭವಿಸುತ್ತಿದ್ದ ರೈತರು ಅದಕ್ಕೆ ಪರಿಹಾರ ಕಂಡುಕೊಳ್ಳುವ ದಾರಿ ತೋರಿತು. ಹೀಗೆ ರೈತ ಸಮುದಾಯದ ಸ್ವಾಭಿಮಾನ ಮತ್ತು ಆತ್ಮ ಗೌರವದ ಸಂಕೇತವಾಗಿದ್ದ ರೈತ ಚಳವಳಿ ರಾಜಕೀಯ ಶಕ್ತಿಿಯಾಗಿ ರೂಪಿಸಲು ಭಾರೀ ಪ್ರಯತ್ನಗಳು ನಡೆದವು.

ಒಂದು ಹಂತದಲ್ಲಿ ರೈತ ಸಂಘ ರಾಜಕೀಯ ಶಕ್ತಿಯಾಗಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ನಂತರದ ದಿನಗಳಲ್ಲಿ ಆಂತರಿಕ ಕಿತ್ತಾಟಗಳಿಂದ ನಾಯಕರು ದೂರಸರಿದರು. ಕೆಲವರು ರಾಜಕೀಯ ನಾಯರೊಂದಿಗೆ ವೇದಿಕೆ ಹಂಚಿಕೊಂಡರು. ಇನ್ನು ಕೆಲವರು ಸಿದ್ಧಾಂತ ರಾಜಕಾರಣ ತೊರೆದು ಪಕ್ಷ ರಾಜಕಾರಣದ ಜತೆ ಗುರುತಿಸಿಕೊಂಡರು. ಅಂಥ ಸಂದರ್ಭಗಳಲ್ಲೆಲ್ಲ ಅವರು ರೈತ ಸಂಘದ ಲಾಂಛನವಾಗಿದ್ದ ಹಸಿರುಶಾಲು ತೆಗೆದಿಡದೆ ಅದನ್ನು ಹಾಕಿಕೊಂಡೇ ಪಕ್ಷದೊಳಗೆ ಪ್ರವೇಶ ಮಾಡಿದರು. ಅದು ನಮ್ಮ ಪಕ್ಷದ ಚಿಹ್ನೆಯಲ್ಲ ಅದನ್ನು ತೆಗೆದಿಟ್ಟು ಬನ್ನಿ ಎನ್ನುವ ಸಾಮಾನ್ಯ ಎಚ್ಚರವನ್ನೂ ನೀತಿಗೆಟ್ಟ ರಾಜಕೀಯ ನಾಯಕರು ನೀಡಲಿಲ್ಲ. ‘ಆ ಶಾಲು ಹೊದ್ದು ಬೇರೆ ಪಕ್ಷ ಪ್ರವೇಶಮಾಡಬೇಡಿ, ಬೇಕಿದ್ದರೆ ನೀವು ಮಾತ್ರ ಹೋಗಿ’ ಎನ್ನುವಷ್ಟು ಬದ್ಧತೆಯುಳ್ಳ ನಾಯಕರು ರೈತ ಸಂಘದಲ್ಲಿ ಇಲ್ಲದ ಕಾರಣ ರೈತ ಸಮುದಾಯದ ಸ್ವಾಭಿಮಾನ ಮತ್ತು ಆತ್ಮಗೌರವದ ಸಂಕೇತವಾಗಿದ್ದ ಹಸಿರು ಶಾಲು ಮಲಿನವಾಯಿತು. ನಂತರ ಬಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಮುಖಂಡರು ಯಾವ ನಾಚಿಕೆಯೂ ಇಲ್ಲದೆ ತಮ್ಮ ಭ್ರಷ್ಟ ಕೈಗಳಿಂದ ಮುಟ್ಟಿದರು. ಅದನ್ನು ಶುಚಿಗೊಳಿಸಬೇಕಾದ ಬಹಳದೊಡ್ಡ ಜವಾಬ್ದಾರಿ ಇವತ್ತು ರೈತ ಸಂಘದ ನಾಯಕರ ಹೆಗಲ ಮೇಲಿದೆ.

ಕಾರ್ಯಕರ್ತರಲ್ಲಿ ಹೋರಾಟದ ಹುರುಪು, ಜ್ಞಾನದ ಬೀಜ ಬಿತ್ತಬೇಕಾಗಿದ್ದ ರೈತ ನಾಯಕರು ರಿಯಲ್‌ಎಸ್ಟೇಟ್ ಕುಳಗಳೊಂದಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಕಾರ್ಯಕರ್ತರು ಸಹಜವಾಗಿಯೇ ಹತಾಶರಾಗಿ ಸಂಘಟನೆಯಿಂದ ವಿಮುಖರಾಗಿದ್ದಾರೆ. ಹೊಸಬರು ಸಂಘಟನೆಯೊಳಗೆ ಬರಲು ಹಿಂಜರಿಯುತ್ತಿದ್ದಾರೆ.  ರೈತನಾಯಕರು ಬರುತ್ತಿದ್ದಾರೆಂದರೆ ಕಂದಾಯ ಇಲಾಖೆ ಕಚೇರಿಗಳು ನಡುಗುತ್ತಿದ್ದವು. ಸ್ವತಃ ತಹಸೀಲ್ದಾರ್ ಬಂದು ಸಮಸ್ಯೆ ಆಲಿಸುತ್ತಿದ್ದರು. ಈಗ ರೈತ ನಾಯಕರು ಬರುತ್ತಿದ್ದಾರೆ ಎಂದರೆ ‘ಯಾವುದೋ ವ್ಯವಹಾರವಿರಬೇಕು’ ಎಂದು ಹಾಸ್ಯ ಮಾಡುವಂತಾಗಿದೆ. ಹೊಸದನ್ನು ಓದಿ ರೈತರಿಗೆ ತಿಳಿ ಹೇಳಬೇಕಾಗಿದ್ದ ನಾಯಕರು ಹೊಸದನ್ನು ಅರಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ‘ನಮ್ಮ ಬೆಳೆಗಳಿಗೆ ನ್ಯಾಾಯಯುತವಾದ ಬೆಲೆ ಕೊಡಿ’ ಎನ್ನುವ ಇಪ್ಪತ್ತು ವರ್ಷಗಳ ಹಿಂದಿನ ಬೇಡಿಕೆಯನ್ನೇ ಇಟ್ಟುಕೊಂಡು ಈಗಲೂ ಓಡಾಡುತ್ತಿದ್ದಾರೆ.

ನಿಜ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬೇಕು ಎನ್ನುವುದು ನಿರ್ವಿವಾದ. ಆದರೆ ಅದೊಂದೇ ಸಮಸ್ಯೆ ಇವತ್ತು ರೈತರನ್ನು ಕಾಡುತ್ತಿಲ್ಲ. ಉದಾರೀಕರಣದ ಇಂದಿನ ದಿನಗಳಲ್ಲಿ ಕೃಷಿ ಕ್ಷೇತ್ರವೇ ಪಲ್ಲಟವಾಗುತ್ತಿದೆ. ಕಂಪನಿಗಳು ಕೃಷಿ ಕ್ಷೇತ್ರವನ್ನು ತಮ್ಮ ಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಲು ಸರಕಾರದ ಮಟ್ಟದಲ್ಲೇ ಪ್ರಯತ್ನ ಮಾಡುತ್ತಿವೆ. ಅದರ ಸಾಧಕ ಬಾಧಕಗಳನ್ನು ಅರ್ಥಮಾಡಿಕೊಂಡು ಸಂಘಟನೆಗೆ ತಿಳಿಸುವಷ್ಟು ಜಾಗೃತರಾರಬೇಕು. ಅದನ್ನು ಬಿಟ್ಟು ತಿಳಿಹಾಸ್ಯ ಮತ್ತು ಅನಗತ್ಯ ಆಕ್ರೋಶಗಳು ಚಳವಳಿಯ ಗಂಭೀರತೆಯನ್ನು ಹಾಳುಮಾಡುತ್ತಿವೆ. ನಾನೇ ರೈತಸಂಘ, ನನ್ನಿಂದಲೇ ಚಳವಳಿ ಎನ್ನುವ ನಾಯಕರ ಧೋರಣೆಗಳೂ ಕೂಡಾ ಇಡೀ ಸಂಘಟನೆಯನ್ನು ದಿಕ್ಕುತಪ್ಪಿಸುತ್ತಿವೆ. ಹಿಂದಿನ ನಾಯಕರು ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನೆಲ್ಲ ಬದಿಗಿಟ್ಟು ಸಂಘಟನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ನಿಧನದ ನಂತರ ಎಲ್ಲರೂ ಸೇರಿ ಒಂದು ಹೋರಾಟ ಮಾಡಲಿಲ್ಲ, ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಲಿಲ್ಲ. ಒಂದು ಗುಂಪು ಚಳವಳಿ ಮಾಡುತ್ತಿದ್ದರೆ ಇನ್ನೊಂದು ಗುಂಪು ಅದರಿಂದ ಅಂತರ ಕಾಯ್ದುಕೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ರೈತ ಸಂಘ ಇದೆ ಎನ್ನುವ ಬಗ್ಗೆಯೇ ಅನುಮಾನಗಳು ಬರುವಷ್ಟರ ಮಟ್ಟಿಗೆ ಮೌನವಾಗಿದೆ.

ಕೃಷಿ ಮಾರುಕಟ್ಟೆಯನ್ನು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಡಬ್ಲ್ಯೂಟಿಒ ಮೂಲಕ ಹೇಗೆ ಸಂಚು ರೂಪಿಸಿದೆ ಎನ್ನುವ ವಿವರಗಳು ದೇಶದ ಆರ್ಥಿಕ ತಜ್ಞರೆನಿಸಿಕೊಂಡವರಿಗೆ ಅರ್ಥವಾಗುವ ಮುನ್ನವೇ ರೈತನಾಯಕರು ಅವನ್ನು ಅರ್ಥ ಮಾಡಿಕೊಂಡು ಸಮುದಾಯಕ್ಕೆ ವಿವರಿಸುತ್ತಿದ್ದರು. ಜಾಗತೀಕರಣದ ಹಿಂದೆಂದಿಗಿಂತಲೂ ಇದು ಹೆಚ್ಚು ಪ್ರಭಾವ ಬೀರುತ್ತಿದೆ ಅದನ್ನು ಅರ್ಥ ಮಾಡಿಕೊಂಡು ಮಾತನಾಡುವ ರೈತ ನಾಯಕರೇ ಇವತ್ತು ಕಾಣುತ್ತಿಲ್ಲ. ಪೇಟೆಂಟ್ ಲಾ ಬಂದಾಗ ಅದರಿಂದ ದೇಶ ಎಂಥ ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಮೊಟ್ಟ ಮೊದಲು ಹೇಳಿದ್ದು ರೈತ ಚಳವಳಿ. ಬೀಜದ ಮೇಲಿನ ಹಕ್ಕು ಕಸಿಯುವ ಹುನ್ನಾರವನ್ನು ತೀವ್ರವಾಗಿ ಖಂಡಿಸಿದ್ದು ರೈತ ಚಳವಳಿ. ಕೆಂಟುಕಿ ಫ್ರೈಡ್ ಚಿಕನ್ ಹಾಗೂ ಕಾರ್ಗಿಲ್ ಬೀಜ ಕಂಪೆನಿಗಳ ಮೇಲಿನ ದಾಳಿ ಮಾಡಿ, ಬಿಟಿ ಹತ್ತಿ ಸುಟ್ಟು ಇಡೀ ವಿಶ್ವವೇ ಕರ್ನಾಟಕದತ್ತ ನೋಡುವಂತೆ ಮಾಡಿದ್ದ ಚಳವಳಿ ಸದ್ಯದ ಮೌನ ಒಪ್ಪುುವಂಥದ್ದಲ್ಲ.  ಪ್ರತೀ ಪಕ್ಷಕ್ಕೂ ಅದರದ್ದೇ ಆದ ಲಾಂಛನವಿದೆ ಹಾಗೆಯೇ ರೈತ ಸಂಘದ ಲಾಂಛನವನ್ನು ರಾಜಕೀಯ ನಾಯಕರು ಮುಟ್ಟದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಸಂಘಟನೆಯ ಮೇಲಿದೆ. ಬಹಳ ಮುಖ್ಯವಾಗಿ ಇಡೀ ಚಳವಳಿಗೆ ಹೊಸ ರೂಪಕೊಡಬೇಕಾದ ಅನಿವಾರ್ಯತೆ ಈಗಿನ ತುರ್ತು ಅಗತ್ಯ.

-ವೀರಭದ್ರಪ್ಪ ಬಿಸ್ಲಳ್ಳಿ

Leave a Reply

Your email address will not be published. Required fields are marked *

three + 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

 

Wednesday, 21.03.2018

ಉತ್ತರಾಯಣ, ವಸಂತಋತು, ಚೈತ್ರಮಾಸ, ಶುಕ್ಲಪಕ್ಷ, ಚತುರ್ಥಿ, ಬುಧವಾರ, ನಿತ್ಯ ನಕ್ಷತ್ರ -ಭರಣಿ, ಯೋಗ-ವೈಧೃತಿ, ಕರಣ-ಭದ್ರೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.30

Read More

Back To Top