ಈ ದೇಶದ ಭವಿಷ್ಯ ನಿರ್ಧರಿಸುವವರು ಯಾರು?

Posted In : ಅಂಕಣಗಳು, ಯಾರಿಗೆ ಹೇಳೋಣ?

ಸಾರ್ವಜನಿಕನೊಬ್ಬ ಸಮಸ್ಯೆಗಳಿಗೆ ಸಿಲುಕಿಕೊಂಡಾಗ ತಕ್ಷಣ ದೂರುವುದು ಸರಕಾರವನ್ನು ಹಾಗೂ ಜನಪ್ರತಿನಿಧಿಯನ್ನು. ಪ್ರಕೃತಿ ವಿಕೋಪದಿಂದಾಗಿ ಧಾರಕಾರ ಮಳೆ ಸುರಿದಾಗ, ಕೆರೆ, ಕಾಲುವೆ, ಚರಂಡಿಗಳು ತುಂಬಿ ಸಾರ್ವಜನಿಕ ರಸ್ತೆ ಬೀದಿಗಳಿಗೆ ನುಗ್ಗಿದಾಗ ತಕ್ಷಣ ಜನಪ್ರತಿನಿಧಿಯನ್ನು ಶಪಿಸುತ್ತಾನೆ. ಅಪಘಾತಗಳು ಸಂಭವಿಸಿದಾಗ ರಸ್ತೆಗಳಲ್ಲಿ ವೇಗ ನಿಯಂತ್ರಣ ಹಂಪ್ ನಿರ್ಮಿಸದಿರುವ ಬಗ್ಗೆ ಜನಪ್ರತಿನಿಧಿ ಬೈಸಿಕೊಳ್ಳುತ್ತಾನೆ. ಬೀದಿ ನಾಯಿಗಳು ಅಮಾಯಕರನ್ನು ಅಟ್ಟಾಡಿಸಿ ಕಚ್ಚಿದಾಗ, ಅನುಭವಿಸುವ ಉರಿ ಶಮನವಾಗುವುದು ಸರಕಾರ ಹಾಗೂ ಜನಪ್ರತಿನಿಧಿಗಳನ್ನು ಮಂಗಳಾರತಿ ಎತ್ತಿದಾಗಲೇ. ಇಂತಹ ಯಾವುದೇ ಸಮಸ್ಯೆಗಳಿರಲಿ, ಬರ ಪರಸ್ಥಿತಿ ಎದುರಾಗಲಿ, ಭೂಕಂಪಗಳಾಗಲಿ, ಸರಕಾರಿ ಕಚೇರಿಗಳಲ್ಲಿ ಲಂಚದ ನಗ್ನನರ್ತನವಾಗಲಿ ಮುಂತಾದ ಸಂದರ್ಭಗಳಲ್ಲಿ ಎಲ್ಲರೂ ಗುರಿಯಾಗಿಸುವುದು ಜನಪ್ರತಿನಿಧಿಯನ್ನು. ಆಕಸ್ಮಿಕ ವಿದ್ಯುತ್ ಆಘಾತದಿಂದ ಮನೆ ಸುಟ್ಟು ಹೋದಾಗ, ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಕೈಗೊಂಡಾಗ, ಬೆಳೆದ ಫಸಲುಗಳು ಕೀಟಭಾದೆಗೆ ಆಹುತಿಯಾದಾಗ, ಗುಣಮಟ್ಟದ ಇಳುವರಿ ಬಂದು ಮಾರುಕಟ್ಟೆಯಲ್ಲಿ ದರ ಕುಸಿತಗೊಂಡಾಗಿನಿಂದ ಹಿಡಿದು ಕುಟುಂಬದ ಸದಸ್ಯರು ತೀರಿ ಹೋದಾಗ, ಸೂತಕದ ಮನೆಗೆ ಭೇಟಿ ನೀಡಲು ವಿಫಲವಾದಾಗ, ನಾಮಕರಣ, ವಾಸ್ತುಶಾಂತಿ ಮುಂತಾದ ಮನೆ ಕಾರ್ಯಕ್ರಮಗಳಿಗೆ ಹಾಜರಾಗುವಲ್ಲಿ ತಪ್ಪಿದಾಗ ಕೆಂಗಣ್ಣಿಗೆ ಗುರಿಯಾಗುವುದು ಜನಪ್ರತಿನಿಧಿಗಳು. ಇಷ್ಟೆಲ್ಲ ಆಲೋಚಿಸುವ ಜನರು ಜನಪ್ರತಿನಿಧಿಯ ಆಯ್ಕೆಯ ವಿಷಯದಲ್ಲಿ ಎಡವುವುದಾದರೂ ಎಲ್ಲಿ?

ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ತಮ್ಮ ತಮ್ಮ ಚಟುವಟಿಕೆಗಳನ್ನು ಗರಿಗೆದರಿಸಿಕೊಂಡಿವೆ. ಕರ್ನಾಟಕದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಪ್ರಾರಂಭವಾದ ಪರಿವರ್ತನಾ ರ್ಯಾಲಿ ಉಳಿದ ರಾಜಕೀಯ ಪಕ್ಷಗಳನ್ನು ಚುಚ್ಚಿ ಎಬ್ಬಿಸಿದಂತಾಗಿದೆ. ಕಾಂಗ್ರೆಸ್ ಪಕ್ಷವು ಸಾಧನಾ ಸಮಾವೇಶವನ್ನು ಕೈಗೊಳ್ಳುವುದರ ಮೂಲಕ ಮುಖ್ಯಮಂತ್ರಿಯವರು ಇಡೀ ರಾಜ್ಯವನ್ನು ಸುತ್ತಾಡಿದರು. ಸಾರ್ವಜನಿಕರ ತೆರಿಗೆಯ ಹೆಲಿಕಾಪ್ಟರ್ ಮೂಲಕ ಸಾಧನಾ ಸಮಾವೇಶ ಹಾಗೂ ಸರಕಾರಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗಳು ಎಂಬ ಶೀರ್ಷಿಕೆಯನ್ನಿಟ್ಟುಕೊಂಡಿದ್ದರೂ ಸಹ ಉದ್ದೇಶ ಮಾತ್ರ ರಾಜಕೀಯ ಪ್ರೇರಿತವೇ ಆಗಿತ್ತು! ಹೀಗೆ ರಾಜ್ಯಾದ್ಯಂತ ಕೈಗೊಳ್ಳಲಾದ ಪ್ರವಾಸದಲ್ಲಿ ಹಮ್ಮಿಕೊಂಡಿದ್ದ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳಿಗೆ ಸಣ್ಣದೊಂದು ವೇದಿಕೆಯನ್ನು ಸಿದ್ಧಪಡಿಸಿ ಕಾಟಾಚಾರಕ್ಕೆಂಬಂತೆ ಕಾರ್ಯಕ್ರಮಗಳನ್ನು ನೇರವೇರಿಸಿ, ಅದೇ ಕ್ಷೇತ್ರದಲ್ಲಿ ಅಣತಿದೂರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಾಜಕೀಯ ಕಾರ್ಯಕ್ರಮದಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪಗಳು, ಟೀಕೆ ಟಿಪ್ಪಣಿಗಳು ಉದುರಿ ಬಿದ್ದವು. ಜೆಡಿಎಸ್ ಪಕ್ಷದವರೂ ಕುಮಾರ ಪರ್ವವೆಂಬ ಅಧ್ಯಾಯವನ್ನೆ ತೆರೆದಿಡಲು ಸಿದ್ಧರಾದರು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಲಿದ್ದ ನರೇಂದ್ರ ಮೋದಿಯವರ ಕಾರ್ಯಕ್ರಮದ ದಿನದಂದು ಮಹದಾಯಿ ಸಮಸ್ಯೆಯ ಇತ್ಯರ್ಥಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಬಂದ್ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸರಕಾರವೆಂಬುದು ಅಭಿವೃದ್ಧಿಯ ಸಾಧನೆಗೆ ಚಲಿಸುವ ಯಂತ್ರದಂತಿರಬೇಕೆಂಬುದು ಚಿಂತಕರ ಆಲೋಚನೆಯಾಗಿದೆ. ರಾಜಕೀಯ ಕಾರಣಗಳಿಗಾಗಿ ಕೆಲವೊಂದು ಸಂದರ್ಭಗಳಲ್ಲಿ ಸರಕಾರಗಳು ಕೆಲವು ಸಂಘಟನೆಗಳು ಹಮ್ಮಿಕೊಳ್ಳುವ ಬಂದ್ ಕಾರ್ಯಕ್ರಮಗಳಿಗೆ ಪರೋಕ್ಷವಾಗಿ ಸಹಕಾರ ನೀಡಿದ್ದನ್ನು ಸ್ಮರಿಸಬಹುದು. ಆದರೆ ರಾಜಕೀಯ ಉದ್ದೇಶಕ್ಕಾಗಿ ಸರಕಾರವೇ ಮುಂದೆ ನಿಂತು ಮುಷ್ಕರ ಆಯೋಜಿಸುವಂತೆ ಪ್ರೇರಣೆ ನೀಡಿದ ಉದಾಹರಣೆ ಬೇರೆಯಲ್ಲಿಯೂ ಸಿಗಲಿಕ್ಕಿಲ್ಲ! ಅಷ್ಟರ ಮಟ್ಟಿಗೆ ಹೊಸದೊಂದು ಪೂರಕವಲ್ಲದ ಪ್ರಕ್ರಿಯೆಗೆ ಭಾಗಿದಾರನಾದ ಹೊಣೆಯನ್ನು ಅಸ್ತಿತ್ವದಲ್ಲಿರುವ ಸರಕಾರ ಹೊತ್ತುಕೊಂಡಂತಾಗಿದೆ. ಈ ಕಾರಣಕ್ಕಾಗಿ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಮುಷ್ಕರಕ್ಕೆ ಅನುಮತಿ ನೀಡಲಾರದಂತೆ ಎಚ್ಚರಿಸಿದ್ದು, ಅಷ್ಟರ ಮಟ್ಟಿಗೆ ಸರಕಾರಗಳೆಂಬ ಸಂಸ್ಥೆಗಳು ವೈಯಕ್ತಿಕ ಹಿತಾಸಕ್ತಿಗೆ ಬಳಕೆಯಾಗಬಾರದೆಂಬ ಸಂದೇಶವನ್ನು ರವಾನಿಸದಂತಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಅಂಶಗಳಲ್ಲಿ ಸರಕಾರದ ಮೇಲೆ ಗಂಭೀರ ಆರೋಪವನ್ನು ತದನಂತರದಲ್ಲಿ ಪರ ವಿರೋಧ ಅಭಿಪ್ರಾಯಗಳು ದೇಶದ ತುಂಬೆಲ್ಲ ವ್ಯಕ್ತವಾದವು. ಒಂದು ಸಮಾವೇಶಕ್ಕೆ ಪರ್ಯಾಯವೆಂಬಂತೆ ಮತ್ತೊಂದು ಸಮಾವೇಶಗಳು ಮೈತೆರೆದುಕೊಳ್ಳುತ್ತಲಿವೆ. ಹಾಗಿದ್ದರೆ ಚುನಾವಣೆ ಸಮಿಪಿಸುತ್ತಿದ್ದಂತೆ ಮತದಾರರನ್ನು ಓಲೈಸಲು ಇಂತಹ ಸಮಾವೇಶಗಳು ರೂಪುಗೊಳ್ಳುತ್ತವೆಯೆ? ಹೀಗೆ ಆಯೋಜನೆಗೊಳ್ಳುವ ರಾಜಕೀಯ ಬೃಹತ್ ಕಾರ್ಯಕ್ರಮಗಳ ಮೂಲ ಉದ್ದೇಶ ಜನರ ಮನೋಭಾವನೆಯನ್ನು ಜಾಗೃತಗೊಳಿಸುವುದಾಗಿರುತ್ತದೆಯೊ ಅಥವಾ ಅವರನ್ನು ಉದ್ರೇಕಗೊಳಿಸಿ ಚುನಾವಣೆಯ ಪ್ರಹಸನವನ್ನು ಈಡೇರಿಸಿಕೊಳ್ಳುವುದಾಗಿರುತ್ತದೆಯೊ? ಎಂಬ ಜಿಜ್ಞಾಸೆ ಬಹಳಷ್ಟು ಜನರಲ್ಲಿ ಮೂಡುವುದಂತೂ ಸತ್ಯ. ಚುನಾವಣೆಗಳೆಂದರೆ ಕೇವಲ ಆಲೋಚನೆಯನ್ನಅವಲಂಬಿಸಿರುವುದಿಲ್ಲ. ಮಾನಸಿಕ ಉನ್ಮಾದದ ಪರಾಕಾಷ್ಠೆಯೂ ಹಿಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಬಹಳಷ್ಟು ಐ.ಎ.ಎಸ್ ಅಧಿಕಾರಿಗಳು ಸೋತು ಇಂದಿಗೆ ಮೂಲೆಗುಂಪಾಗಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿದ ಹೃದಯವಂತರನ್ನು ಮಾತ್ರ ಜನರು ಒಪ್ಪಿಕೊಳ್ಳುತ್ತಾರೆ ಎನ್ನಲಾಗುವುದಿಲ್ಲ. ಅದು ನಿಜವಾಗಿದ್ದಲ್ಲಿ ಬಹಳಷ್ಟು ಜನ ಸನ್ಯಾಸಿಗಳು ವಿಧಾನಸೌಧದಲ್ಲಿ ತುಂಬಿ ತುಳುಕಾಡಬೇಕಾಗಿತ್ತು. ಬುದ್ಧಿವಂತ ಮತದಾರರನ್ನು ಹೊಂದಿದ್ದಾರೆಂದು ಪರಿಗಣಿಸಲ್ಪಟ್ಟ ಕರಾವಳಿಯಲ್ಲಿ ಸ್ಪರ್ಧಿಸಿದ್ದ ಶಿವರಾಮ ಕಾರಂತರು ಹೀನಾಯವಾಗಿ ಸೋಲನ್ನನುಭವಿಸಿದ್ದರು. ಹಾಗಿದ್ದರೆ ಚುನಾವಣೆಯಲ್ಲಿ ಪ್ರಮುಖವಾಗುವ ಅಂಶಗಳಾವವು? ಜನಸಾಮಾನ್ಯರು ಕೇವಲ ಅಭಿವೃದ್ಧಿಯನ್ನು ಬಯಸುತ್ತಾರೆಯೆ? ಅಥವಾ ತಮ್ಮ ನಾಯಕನ ಬುದ್ಧಿವಂತಿಕೆಯನ್ನು ಶ್ಲಾಘಿಸುತ್ತಾರೆಯೆ? ಅಥವಾ ವೈಯಕ್ತಿಕ ಮಾತ್ರ ಮೆಚ್ಚುತ್ತಾರೆಯೆ? ಚುನಾವಣೆ ಗೆಲ್ಲಲು ಇಂತಹುದೆ ಮಾರ್ಗ ನಿಯಮಗಳಿವೆಯೆ?

ಸಧ್ಯಕ್ಕೆ ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ಪ್ರವಾಸ ಚಾಲ್ತಿಯಲ್ಲಿದೆ. ಇದು ಮುಗಿಯುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅಮೀತ್ ಶಾ ರವರು ಪ್ರವಾಸ ಕೈಗೊಳ್ಳಲಿದ್ದಾರೆಂದು ವರದಿಯಾಗಿದೆ. ಕೆಲ ರಾಜಕಾರಣಿಗಳು ಹಾಗೂ ಕೆಲ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ರೈತರು ಮತ್ತು ಬಡವರ ಕುರಿತು ಮಾತನಾಡಲಾರಂಭಿಸುತ್ತವೆ. ಆದರೆ ಕೆಲವೊಂದು ರಾಜಕೀಯ ಪಕ್ಷಗಳಿಗೆ ಇಂತಹ ಸಮಸ್ಯೆಗಳನ್ನು ಜೀವಂತವಾಗಿರಿಕೊಳ್ಳುವುದೆ ರಾಜಕೀಯ ಉದ್ದೇಶವೆಂಬಂತೆ ಗೋಚರಿಸುತ್ತದೆ. ಪ್ರಧಾನಮಂತ್ರಿಯವರು ಮಹದಾಯಿ ವಿಷಯದಲ್ಲಿ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಲಿಲ್ಲ ಎಂದು ಟೀಕಿಸುವ ಕಾಂಗ್ರೆಸ್ಸಿಗರು ಈ ಹಿಂದೆ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರು ಗೋವಾ ರಾಜ್ಯದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕಕ್ಕೆ ಮಹದಾಯಿ ನದಿಯ ಒಂದು ಹನಿ ನೀರನ್ನೂ ಬಿಟ್ಟು ಕೊಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಕರ್ನಾಟಕದ ಕಾಂಗ್ರೆಸ್ಸಿಗರು ಇಂತಹ ಹೇಳಿಕೆಗೆ ಪ್ರತಿಕ್ರಯಿಸಲಾರದಷ್ಟೂ ನಿರುತ್ತರಿಗಳಾಗಿದ್ದಾರೆ.

ಮಾತು ಮಾತಿಗೆ ಜೈಲಿಗೆ ಹೋಗಿ ಬಂದವರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವಿಲ್ಲವೆಂದು ಅಬ್ಬರಿಸುವ ಸಿದ್ಧರಾಮಯ್ಯನವರು ಯಾವ ಪ್ರಕರಣದಲ್ಲಿ ಯಾರನ್ನು ಬಂಧಿಸಲಾಗಿತ್ತೊ ಪ್ರಕರಣದ ವಿಚಾರಣೆ ಕೈಗೊಂಡ ನ್ಯಾಯಾಲಯವು ನಿರ್ದೋಷಿಗಳೆಂದು ತೀರ್ಪು ನೀಡಿರುವಾಗ ಇಂತಹ ಹೇಳಿಕೆಯನ್ನು ನೀಡಬಹುದೆ? ಅಮಾಯಕರು ಬಂಧನಕ್ಕೊಳಪಡುವಂತಾಗಲು ತನಿಖಾ ವ್ಯವಸ್ಥೆಯಲ್ಲಿನ ಲೋಪದೋಷಗಳು ಕಾರಣವಲ್ಲವೇ? ಇಂತಹ ಲೋಪದೋಷಗಳು ಮತ್ತೊಬ್ಬ ಅಮಾಯಕನನ್ನು ಬಲಿ ತೆಗೆದುಕೊಳ್ಳಲಾರದಂತೆ ಆಡಳಿತ ಪದ್ಧತಿಯ ಬದಲಾವಣೆಗಾಗಿ ಅಗತ್ಯ ಸುಧಾರಣೆ ಮತ್ತು ತಿದ್ದುಪಡಿಗಳ ಬಗ್ಗೆ ಚಕಾರವೆತ್ತದಿರುವುದು ಹೊತ್ತಿಕೊಂಡಿರುವ ಬೆಂಕಿ ತನ್ನ ಮನೆಯನ್ನು ಸುಡಲಿಲ್ಲವೆಂಬ ಅಹಂಭಾವ ತೃಪ್ತಿಯೆ?  ಯಾವುದೆ ರೀತಿಯ ನೋವುಗಳಿಗೆ, ಆಕಂದ್ರನಗಳಿಗೆ, ಶೋಷಣೆಗಳಿಗೆ, ಅಸಹನೆಗಳಿಗೆ ವ್ಯಕ್ತವಾಗದ ಜಾತಿಯ ಲೇಪನವು ಚುನಾವಣೆ ಸಮೀಪಿಸುತ್ತಿದ್ದಂತೆ ವಲಯದಲ್ಲಿ ಅಮಲೇರಿದಂತೆ ಕುಣಿಯಲಾರಂಭಿಸುತ್ತದೆ. ಆದರೆ ಯಾವ ಜಾತಿವಾದವೂ ನಿರ್ದಿಷ್ಟ ಕೋಮಿನ ಕಟ್ಟಕಡೆಯ ವ್ಯಕ್ತಿಗೆ ಬದುಕನ್ನು ರೂಪಿಸಿದ ಉದಾಹರಣೆಗಳಿಲ್ಲ.

ವಿದ್ಯಾವಂತರನ್ನು ಪ್ರಜ್ಞಾವಂತ ಮತದಾರರೆನ್ನಲಾಗುತ್ತದೆ. ಆದರೆ ಜಾತಿವಾದವನ್ನು ಅತಿ ಹೆಚ್ಚಾಗಿ ಮನಸ್ಸಿನಾಳಕ್ಕೆ ಇಳಿಸಿಕೊಂಡವರಲ್ಲಿ ವಿದ್ಯಾವಂತರೆ ಹೆಚ್ಚಾಗಿರುವುದು ದುರ್ದೈವವೆನಿಸುತ್ತದೆ. ಚುನಾವಣೆಯ ಹೊಸ್ತಿಲಲ್ಲಿರುವ ಬಹಳಷ್ಟು ರಾಜಕಾರಣಿಗಳು ಕೇವಲ ಸಾರ್ವಜನಿಕರನ್ನು ಉದ್ರೇಕಗೊಳಿಸಿ ಮತ ಪಡೆದುಕೊಳ್ಳುವ ಹೊಂಚುಗಾರಿಕೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಮುಗಿದ ನಂತರದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದಕ್ಕಾಗಿ ಮತ್ತು ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸುವುದಕ್ಕಾಗಿ ಪ್ರಯತ್ನ ನಡೆಸಿದ ಬಹಳಷ್ಟು ರಾಜಕಾರಣಿಗಳಲ್ಲಿ ಕಂಡು ಬರುವುದಿಲ್ಲ.

ಹಾಗಿದ್ದಲ್ಲಿ ನಾವೇನು ಕ್ರಮಕೈಗೊಳ್ಳಬಹುದು? ಯಾವ ಸಮಾಜದಲ್ಲಿ ಹಸಿವಿನ ಆಕಂದ್ರನವಿರುವದಿಲ್ಲವೋ, ಆರೋಗ್ಯ ರಕ್ಷಣೆಯ ಕುರಿತ ಆತಂಕಗಳಿರುವುದಿಲ್ಲವೊ, ಸಾರ್ವತ್ರಿಕವಾದ ಸಮಾನ ಹಾಗೂ ಸ್ವತಂತ್ರ ಶಿಕ್ಷಣದ ಬಗ್ಗೆ ಗೊಂದಲಗಳಿರುವುದಿಲ್ಲವೋ, ಅಂತಹ ಸಮಾಜ ಮಾತ್ರ ಮುಂದಾಲೋಚನೆಯ ತೀರ್ಮಾನಗಳಿಗೆ ಸನ್ನದ್ಧವಾಗಲು ಸಾಧ್ಯವಿರುತ್ತದೆ. ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದ ನಂತರ ದೇಶಾದ್ಯಂತ ಉಚಿತವಾಗಿ ಅಥವಾ ಒಂದೆರಡು ರೂಪಾಯಿಗಳಂತೆ ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಪೂರೈಸಲಾಗುತ್ತಿದೆ. ಆದರೆ ಇಂದಿಗೂ ಅರ್ಹ ಬಡ ನೂರಕ್ಕೆ ನೂರರಷ್ಟು ಪಡಿತರ ಚೀಟಿಗಳನ್ನು ಪಡೆದುಕೊಂಡಿದೆ ಎಂದು ಹೇಳಲು ನಮ್ಮ ದೇಶದ ಯಾವ ಸರ್ಕಾರಗಳಿಗೂ ಧೈರ್ಯವಿರುವುದಿಲ್ಲ. ಈ ದೇಶದ ಜನಸಾಮಾನ್ಯನ ಆರೋಗ್ಯವಂತೂ ಗಾಳಿಗೆ ತೆರೆದಿಟ್ಟ ದೀಪದಂತಾಗಿದೆ.

ಪ್ರತಿಯೊಂದು ಕುಟುಂಬದ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಬದ್ಧತೆಯನ್ನು ಜನಸಾಮಾನ್ಯರ ತೆರಿಗೆ ಹಣದಿಂದ ಲಕ್ಷಾಂತರ ಕೋಟಿ ರೂಪಾಯಿಗಳ ಬಜೆಟ್ ಮಂಡಿಸುವ ಯಾವ ಸರಕಾರಗಳೂ ವಹಿಸಿಕೊಳ್ಳಲು ಮುಂದಾಗದಿರುವುದು ದುರದೃಷ್ಟಕರ. ಇನ್ನು ಶಿಕ್ಷಣದ ವಿಚಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಣ್ಣು ಕೊರೆಸುವ ಆಡಂಬರದ ಪ್ರತಿಫಲನಕ್ಕೆ ಶಾಲೆಗಳು ಬಾಗಿಲು ಮುಚ್ಚಿಕೊಳ್ಳಲೇಬೇಕಾಗಿದೆ. ಇಂತಹ ಮೂಲ ಸವಾಲುಗಳನ್ನು ಮುಂದಿಟ್ಟುಕೊಂಡು ಚುನಾವಣೆಯ ದೊಂಬರಾಟ ನೋಡಲು ಸಿದ್ಧನಾಗುವ ಜನಸಾಮಾನ್ಯನ ಕಣ್ಣುಗಳು ಹೆಂಡ, ಕುರುಡು ಕಾಂಚಾಣ ಹಾಗೂ ಹುಟ್ಟಡಗಿಸುವ ಗೂಂಡಾಗಿರಿಗೆ ಮರುಳಾಗಿ ಮೌನವಾಗಲೇಬೆಕಲ್ಲವೇ? ಇದರೊಂದಿಗೆ ಇನ್ನೊಂದು ದೊಡ್ಡ ಆತಂಕವೆಂದರೆ ಜಾಣರ ಮತ್ತು ಸ್ವಾವಲಂಬನೆಯುಳ್ಳವರ ದಿವ್ಯ ಮೌನ. ಚುನಾವಣೆಯ ಸಂದರ್ಭದಲ್ಲಿ ಕನಿಷ್ಠ ಕೆಲ ನಿಮಿಷಗಳಷ್ಟು ಮತಗಟ್ಟೆಯ ಮುಂದಿನ ಕ್ಯೂನಲ್ಲಿ ನಿಂತು ಮತಚಲಾಯಿಸುವಷ್ಟು ಕರ್ತವ್ಯ ಪ್ರಜ್ಞೆಯೂ ಕೆಲವರಲ್ಲಿಲ್ಲದಿರುವುದು. ಹಾಗಿದ್ದರೆ ಈ ದೇಶದ ಭವಿಷ್ಯವನ್ನು ಸದ್ಯಕ್ಕೆ ನಿರ್ಧರಿಸುವವರು ಒಳ್ಳೆಯವರ ಮೌನವೇ ಅಥವಾ ಕೆಟ್ಟವರ ಅಟ್ಟಹಾಸವೇ?

Leave a Reply

Your email address will not be published. Required fields are marked *

20 − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top