ಗೌರಿಯನ್ನು ಕೊಂದವರು ಯಾರು?

Posted In : ಸಂಗಮ, ಸಂಪುಟ

ನಕ್ಸಲ್ ವಿಶ್ವರೂಪ
ಎಡಪಂಥೀಯ ಆತಂಕವಾದಿಗಳ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಎಂಬ ಹೊಸಬಗೆಯ ಯೋಜನೆಯನ್ನು ಕರ್ನಾಟಕ ಸರಕಾರ ಪ್ರಾಾರಂಭಿಸಿದ್ದು 2010ರಲ್ಲಿ. ಇದ್ದ ಉದ್ದೇಶ – ಕರ್ನಾಟಕದ ಕಾಡುಗಳಲ್ಲಿ ಈಗಾಗಲೇ ನಕ್ಸಲ್‌ಗಳಾಗಿ ಓಡಾಡಿಕೊಂಡಿರುವ, ಆದರೆ ಅಲ್ಲಿಂದ ಹೊರಬಂದು ಎಲ್ಲರಂತೆ ಸಹಜ ಜೀವನ ನಡೆಸಲು ಬಯಸುವ ವ್ಯಕ್ತಿಗಳಿಗೆ ಒಂದು ಅವಕಾಶ ಕೊಟ್ಟುನೋಡುವುದು; ಆ ಮೂಲಕ ಶಾಂತಿ-ಸಮಾಧಾನಗಳ ಸಮಾಜ ಕಟ್ಟುವುದು; ಕಾಡಿನಲ್ಲಿ ಅಮಾಯಕರ ರಕ್ತಹೀರುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಕ್ರಾಂತಿಕಾರಿ ನಕ್ಸಲರ ಬೆನ್ನುಹುರಿ ಮುರಿಯುವುದು. ಯೋಜನೆ ಪ್ರಾರಂಭಗೊಂಡಾಗ, ತಾವಾಗಿ ಶರಣಾಗತರಾಗಿ ಬರುವವರಿಗೆ ಸರಕಾರ ಕೊಡುತ್ತಿದ್ದ ಪರಿಹಾರಧನ 1 ಲಕ್ಷ ರುಪಾಯಿ. ಮೂರೇ ವರ್ಷದಲ್ಲಿ ಸಿದ್ದರಾಮಯ್ಯನವರ ಸರಕಾರ ಆ ಕೊಡುಗೆಯನ್ನು 4 ಲಕ್ಷ ರುಪಾಯಿಗಳಿಗೆ ಏರಿಸಿತು.

ಮಾತ್ರವಲ್ಲದೆ, ಶರಣಾಗುವ ನಕ್ಸಲರನ್ನು ಕಾಡಿಂದ ನಾಡಿಗೆ ಕರೆತರುವ ಕಾರ್ಯಕ್ಕಾಗಿ ಗೌರಿ ಲಂಕೇಶ್, ಎಚ್.ಎಸ್. ದೊರೆಸ್ವಾಮಿ ಮತ್ತು ಎ.ಕೆ. ಸುಬ್ಬಯ್ಯನವರನ್ನು ನೇಮಿಸಿದರು ಸಿದ್ದರಾಮಯ್ಯ. ಈ ಮೂವರು ಯಾವ ಅರ್ಹತೆ ಮತ್ತು ಯೋಗ್ಯತೆಯ ಆಧಾರದಲ್ಲಿ ಆ ಕೆಲಸಕ್ಕೆ ನಿಯೋಜಿತರಾದರೋ ಯಾರಿಗೂ ಗೊತ್ತಿಲ್ಲ! ಎಡಪಂಥೀಯ ಆತಂಕವಾದಿಗಳು ಶರಣಾಗುವುದರ ಜೊತೆಗೆ ತಮ್ಮಲ್ಲಿದ್ದ ಎಕೆ 47, ಎಕೆ 74, ಎಕೆ 56ಎಸ್ ಮೊದಲಾದ ಶಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದರೆ 30,000 ರುಪಾಯಿ, ಮೆಷಿನ್‌ಗನ್ ಒಪ್ಪಿಸಿದರೆ 50,000 ರುಪಾಯಿ, ರಿವಾಲ್ವರ್ ಒಪ್ಪಿಸಿದರೆ 10,000 ರುಪಾಯಿಗಳ ಪ್ರತ್ಯೇಕ ಪರಿಹಾರ ಕೊಡುವುದೆಂದು ನಿರ್ಧಾರವಾಯಿತು. ಎಡಪಂಥೀಯ ಆತಂಕವಾದಿಗಳು ಕಾಡಿನ ಸಹವಾಸ ಬಿಟ್ಟುಬಂದು ನಾಡಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಮನಸ್ಸು ಮಾಡಿದರೆ ಅದಕ್ಕೂ ಅವಕಾಶವಿದೆ ಎಂದಿತು ಸರಕಾರ.

ಅಂಥವರಿಗೆ 2ರಿಂದ 5 ಎಕರೆ ಕೃಷಿಯೋಗ್ಯ ಭೂಮಿ ಕೊಡುವುದಾಗಿಯೂ ಭರವಸೆ ಕೊಟ್ಟಿತು. ಕೌಶಲ ತರಬೇತಿಗೆ ಸೇರುವ ಮನಸ್ಸು ಮಾಡಿದವರಿಗೆ ಮಾಸಿಕ 5,000 ರುಪಾಯಿ ಸ್ಟೆ ಫಂಡ್ ಸಿಕ್ಕಿತು. ಈ ಎಲ್ಲ ಸವಲತ್ತುಗಳ ಘೋಷಣೆ ಮಾಡಿದ ಮೇಲೆ ಕಾಡಿನಲ್ಲಿ ಇಷ್ಟು ವರ್ಷ ಬಂದೂಕು ಹಿಡಿದು ಓಡಾಡಿಕೊಂಡಿದ್ದ ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಅಲಿಯಾಸ್ ನೂರ್ ಶ್ರೀಧರ್ – ಇಬ್ಬರು, ತಮಗಿನ್ನು ಕಾಡಿನ ಸಹವಾಸ ಸಾಕು; ನಾಡಿನಲ್ಲಿ ಗೌರವಯುತವಾದ ಜೀವನ ಕಟ್ಟಿಕೊಳ್ಳುತ್ತೇವೆ ಎಂದು ಹೇಳಿ ಮುಂದೆ ಬಂದರು. ಅಥವಾ ಹೀಗೆ ಹೇಳಬಹುದು: ಪೊಲೀಸರಿಗೆ ಅವಕಾಶ ಕೊಟ್ಟಿದ್ದರೆ ಇನ್ನೇನು ಕೆಲವೇ ದಿನ ಅಥವಾ ವಾರಗಳಲ್ಲಿ ಎನ್‌ಕೌಂಟರ್‌ನಲ್ಲಿ ಬಲಿಯಾಗಿಹೋಗಲಿದ್ದವರನ್ನು ಅಂಥ ಅವಕಾಶದಿಂದ ತಪ್ಪಿಸಿ, ಅವರನ್ನು ಶರಣಾಗತಿಯೆಂಬ ನಾಟಕದ ಮೂಲಕ ಮುಖ್ಯವಾಹಿನಿಗೆ ತಂದು ಉತ್ಸವಮೂರ್ತಿಗಳಂತೆ ಮೆರೆಸಲಾಯಿತು. ಅವರನ್ನು ಮುಖ್ಯವಾಹಿನಿಗೆ ತಂದದ್ದೇ ತನ್ನ ಜೀವಮಾನದ ಸಾಧನೆ ಎಂಬಂತೆ ಅಂದು ಗೌರಿ ಕುಣಿದಾಡಿದ್ದರು.

ಹಾಗಾದರೆ ನಿಮ್ಮ ಅಭಿಪ್ರಾಯ ಏನು? ಜೀವನದಲ್ಲಿ ಯಾವುದೋ ಪರಿಸ್ಥಿತಿಗೆ ಬಲಿಯಾಗಿ ನಕ್ಸಲ್ ಆಗಿ ಜೀವನ ಪ್ರಾರಂಭಿಸಿದವರು ಕೊನೆವರೆಗೂ ಆ ಕ್ಷೇತ್ರದಲ್ಲೇ ಜೀವಭಯದಲ್ಲಿ ಬದುಕಬೇಕೇ? ಅವರಿಗೆ ತಮ್ಮ ತಪ್ಪು ಅರ್ಥೈಸಿಕೊಂಡು ಜೀವನ ಸರಿಪಡಿಸಿಕೊಳ್ಳುವ ಅವಕಾಶವನ್ನೇ ನೀಡಬಾರದೇ? ಎಂದು ಕೇಳಬಹುದು ನೀವು. ಖಂಡಿತ ಅವಕಾಶವಿದೆ. ಯಾರನ್ನೂ ಅವರು ಮಾಡಿದ ತಪ್ಪುುಗಳಿಗಾಗಿ ಜೀವನಪೂರ್ತಿ ಜೈಲಿನಲ್ಲಿ ಹಾಕಿ ಕೊಳೆಸುವುದು ಸಲ್ಲ. ಆದರೆ ಶರಣಾಗತಿಯ ಯೋಜನೆಯಡಿ ಕಾಡಿಂದ ಬಂದವರಿಗೆ ಸರಕಾರ ಇಡುತ್ತಿದ್ದ ಮೊದಲ ನಿಬಂಧನೆ ಏನೆಂದರೆ, ನಕ್ಸಲ್ ಹೋರಾಟವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಆ ದಿಕ್ಕಿನತ್ತ ಹೊರಳಿಯೂ ನೋಡಬಾರದು. ಅದೇ ಕಾರಣಕ್ಕೆ ಅವರನ್ನು ಮಾಧ್ಯಮಗಳು ಮಾಜಿ ನಕ್ಸಲ್ ಎಂದು ಗುರುತಿಸುತ್ತವೆ. ಆದರೆ ಶರಣಾಗಿಬಂದ ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಮಾಜಿ ನಕ್ಸಲರೆಂದು ಕರೆಸಿಕೊಳ್ಳಲು ಅರ್ಹರೇ ಎಂದು ಕೇಳಿದರೆ ಇಲ್ಲ ಎಂಬುದೇ ಉತ್ತರ.

ಯಾಕೆಂದರೆ ಇವರಿಬ್ಬರೂ ಕಾನೂನಿನ ಕಣ್ಣಲ್ಲಿ ಶರಣಾಗಿ ನಾಡಿಗೆ ಬಂದಿದ್ದಾಾರೆಂಬುದನ್ನು ಬಿಟ್ಟರೆ ನಕ್ಸಲ್ ಸಿದ್ಧಾಂತಗಳನ್ನು ಇನ್ನೂ ಬಿಟ್ಟು ಹೊರಬಂದಿಲ್ಲ. ಇಬ್ಬರೂ ನಕ್ಸಲಿಸಂನ ವಕ್ತಾರರಂತೆ ವರ್ತಿಸುತ್ತಾರೆ. ಸಿಕ್ಕಸಿಕ್ಕ ವೇದಿಕೆಗಳಲ್ಲೆಲ್ಲ ನಕ್ಸಲ್ ಪರವಾದ ವಾದಗಳನ್ನೇ ಮಂಡಿಸುತ್ತ ಬರುತ್ತಿದ್ದಾರೆ. ಇವರಿಬ್ಬರ ಮಾತುಗಳಲ್ಲಿ ಹಿಂಸೆ, ಕ್ರೌರ್ಯ, ಹೋರಾಟ ಇವುಗಳಿಗೆಲ್ಲ ಹೊಸ ಅರ್ಥಗಳೂ ಬಂದಿವೆ. ನಕ್ಸಲರ ಹೋರಾಟ ಸಾಮಾಜಿಕ ಸುಧಾರಣೆಗಾಗಿ; ಅಸಮಾನತೆ ದೂರ ಮಾಡಲು ಶಸ್ತ್ರ ಹಿಡಿದರೂ ತಪ್ಪಲ್ಲ ಎಂಬ ಅದೇ ಹಳೆ ನಕ್ಸಲ್ ವಾದಗಳನ್ನು ಈ ಇಬ್ಬರು ಆಕರ್ಷಕ ಭಾಷೆಯಲ್ಲಿ, ಹೊಸ ಪರಿಭಾಷೆಗಳ ನೆರಳಿನಲ್ಲಿ ಹೇಳುತ್ತ ನಗರದಲ್ಲಿರುವ ಅಮಾಯಕರನ್ನು ಕೂಡ ನಕ್ಸಲ್ ಚಳವಳಿಯ ಕಡೆ ವಾಲುವಂತೆ ಮಾಡುತ್ತಿದ್ದಾರೆ. ತಮಾಷೆಯೆಂದರೆ ಇವರಿಬ್ಬರ ಚಟುವಟಿಕೆಗಳು ಹಾಡುಹಗಲೇ ಎಲ್ಲರೆದರುರೇ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಅಥವಾ ಅದರ ಕಣ್ಣಿಗೆ ಪಟ್ಟಿಕಟ್ಟಿ ಕೂರಿಸಲಾಗಿದೆ. ಪಟ್ಟಿ ಕಟ್ಟಿರುವವರು ಯಾರು ಎಂಬುದನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಕರ್ನಾಟಕ ಸರಕಾರ ಎಡಪಂಥೀಯ ಆತಂಕವಾದಿಗಳ ಶರಣಾಗತಿಯ ಸ್ಕೀಮಿನಲ್ಲಿ ಪರಿಹಾರದ ಮೊತ್ತವನ್ನು ಲಕ್ಷಗಟ್ಟಲೇ ಏರಿಸಿದ ಮೇಲೆ ಇದ್ದಕ್ಕಿದ್ದಂತೆ ನಕ್ಸಲ್ ಕ್ಯಾಂಪುಗಳಲ್ಲಿ ಚಟುವಟಿಕೆಗಳು ಗರಿಗೆದರಿದವು. 2016ರ ನವೆಂಬರ್ 15ರಂದು ಮತ್ತೆ ನಾಲ್ಕು ಜನ: ನೀಲಗುಳಿ ಪದ್ಮನಾಭ, ಭಾರತಿ ಅಲಿಯಾಸ್ ದೀಪಾ, ಪರಶುರಾಮ ಅಲಿಯಾಸ್ ರಾಜು, ರಿಜ್ವಾನಾ ಬೇಗಂ ಅಲಿಯಾಸ್ ಕಲ್ಪನಾ ಅಲಿಯಾಸ್ ನಿರ್ಮಲಾ – ಶರಣಾಗತರಾದರು. ಪದ್ಮನಾಭ ಕೊಪ್ಪ ತಾಲೂಕಿನ ಸೋಮ್ಲಾಪುರದವನು. ಅವನ ಮೇಲೆ ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ತಲಾ 9, ಶಿವಮೊಗ್ಗದಲ್ಲಿ 1 – ಒಟ್ಟು 19 ಪ್ರಕರಣಗಳು ಪೊಲೀಸ್ ದಫ್ತರಗಳಲ್ಲಿ ದಾಖಲಾಗಿದ್ದವು. ಅವನ ಬಗ್ಗೆ ಸುಳಿವು ನೀಡಿದವರಿಗೆ ಸರ್ಕಾರ 5 ಲಕ್ಷ ರುಪಾಯಿ ಕೊಡುವೆನೆಂಬ ಭರವಸೆ ಕೊಟ್ಟಿತ್ತೆಂದರೆ ಆತ ಅದೆಷ್ಟು ದೊಡ್ಡ ಕ್ರಿಮಿನಲ್ ಇದ್ದಿರಬೇಕೆಂದು ಯೋಚಿಸಿ. ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಸಾಗಣೆಯ ಗಂಭೀರ ಆರೋಪಗಳು ದಾಖಲಾಗಿದ್ದವು. ರಿಜ್ವಾನಾ ಬೇಗಂ ಮೇಲೆ ಚಿಕ್ಕಮಗಳೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಕರಣಗಳಿದ್ದವು.

ಪೊಲೀಸರ ಮೇಲೆ ಗುಂಡು ಹಾರಿಸಿದ ಗುರುತರ ಆರೋಪವೂ ಆಕೆಯ ಮೇಲಿತ್ತು. ಉಳಿದಿಬ್ಬರ ಮೇಲೆ ಗಂಭೀರ ಪ್ರಕರಣಗಳು ದಾಖಲಾಗಿರಲಿಲ್ಲ. ಈ ನಾಲ್ಕು ಜನರನ್ನು ಶರಣಾಗಿಸಿ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಮುಖ್ಯವಾಗಿ ತೊಡಗಿಸಿಕೊಂಡಿದ್ದರು. ಶರಣಾಗತಿಯ ಕಾರ್ಯಕ್ರಮ ಮುಗಿಯುತ್ತಲೇ ಪೊಲೀಸರು ನೀಲಗುಳಿ ಪದ್ಮನಾಭನನ್ನು ವಿಚಾರಣೆಗೆಂದು ತಮ್ಮ ವಶಕ್ಕೆ ತೆಗೆದುಕೊಂಡರು. ಗೌರಿಹತ್ಯೆಯ ಬೇರುಗಳನ್ನು ಹುಡುಕುತ್ತ ಹೊರಟರೆ ನಾವು ಈ ಬಿಂದುವಿಗೆ ಬಂದು ನಿಲ್ಲುತ್ತೇವೆ. ಯಾಕೆ ಗೊತ್ತೆ? ಶರಣಾಗತಿಯ ಯೋಜನೆಯಲ್ಲಿ ಮುಖ್ಯವಾಗಿ ನಕ್ಸಲರಿಗೆ ಸರಕಾರ ಹೇಳುತ್ತಿದ್ಞದ್ದು – ನೀವು ಈಗಾಗಲೇ ಹಲವು ಪೊಲೀಸ್ ಪ್ರಕರಣಗಳಲ್ಲಿ ಬೇಕಾಗಿರುವ ಆರೋಪಿಗಳು. ಕಾಡಲ್ಲೇ ಉಳಿದುಬಿಟ್ಟರೆ ನಿಮ್ಮನ್ನು ಪೊಲೀಸರು ಒಂದೋ ಎನ್‌ಕೌಂಟರ್‌ನಲ್ಲಿ ಮುಗಿಸುತ್ತಾರೆ ಇಲ್ಲವೇ ಬಂಧಿಸಿ ಪ್ರಕರಣಗಳಲ್ಲಿ ಸಿಕ್ಕಿಸಿಹಾಕಿಸಿ ವರ್ಷಾನುಗಟ್ಟಲೆ ಜೈಲುಕಂಬಿ ಎಣಿಸುವಂತೆ ಮಾಡುತ್ತಾರೆ.

ನೀವು ನಕ್ಸಲರಾಗಿರುವುದರಿಂದ ನ್ಯಾಯಾಲಯದಲ್ಲಿ ಪ್ರಕರಣ ನಿಮ್ಮ ಪರವಾಗಿ ಇತ್ಯರ್ಥಗೊಳ್ಳುವುದು ಕೂಡ ಅನುಮಾನ. ಅಲ್ಲದೆ ನಿಮಗೆ ಸರಿಯಾದ ವಕೀಲರೂ ಸಿಗುವುದಿಲ್ಲ. ಜೀವಂತವಾಗಿ ನೀವು ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ನಿಮ್ಮ ಜೀವನ ಬರ್ಬಾದ್ ಆಗಬಹುದು. ಆದ್ದರಿಂದ ನಿಮಗೆ ಶರಣಾಗತಿಯೇ ಅತ್ಯಂತ ಸೂಕ್ತ ಆಯ್ಕೆ. ಯಾಕೆಂದರೆ ಇಲ್ಲಿ ನಿಮಗೆ ದೊಡ್ಡಮೊತ್ತದ ಪರಿಹಾರ ಸಿಗುತ್ತದೆ. ಆಯುಧಗಳನ್ನು ಒಪ್ಪಿಸಿದರೆ ಅದಕ್ಕೂ ಪರಿಹಾರಧನ ಉಂಟು. ನಿಮ್ಮ ಮೇಲಿನ ಕೇಸುಗಳು ಬೇಗಬೇಗ ಇತ್ಯರ್ಥವಾಗುವುದಕ್ಕೆ ಸರಕಾರ ಕೂಡ ಸ್ವಲ್ಪಮಟ್ಟಿನ ಸಹಾಯ ಮಾಡಬಹುದು. ಶರಣಾಗತಿ ಸಮಿತಿಯಲ್ಲಿರುವವರು ಕೂಡ ಆ ನಿಟ್ಟಿನಲ್ಲಿ ನಿಮಗೆ ನೆರವಾಗಬಹುದು. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಪ್ರಕರಣ ಎದುರಿಸುತ್ತಿರುವವರು ಮಾತ್ರ ಜೈಲಿಗೆ ಹೋಗಬೇಕಾಗುತ್ತದೆ. ಯಾಕೆಂದರೆ ಆ ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ. ಅವೆಲ್ಲವೂ ಕೇಂದ್ರದಿಂದ ನಡೆಯಬೇಕಾದ ಕೆಲಸಗಳು. ಆದರೆ ಆ ವಿಷಯದಲ್ಲೂ ನಾವು ಸಾಧ್ಯವಾದಷ್ಟು ಶರಣಾಗತರ ಪರವಾಗಿ ಬ್ಯಾಟಿಂಗ್ ಮಾಡುತ್ತೇವೆ.

ಜೈಲು ಸೇರಿದವರು ಕೆಲವೇ ದಿನ, ತಪ್ಪಿದರೆ ತಿಂಗಳಲ್ಲಿ ಹೊರಬರುವಂತೆ ಮಾಡುವ ಜವಾಬ್ದಾರಿ ನಮ್ಮದು… ಈ ಮಾತುಗಳನ್ನು ಸರಕಾರ ಸುತ್ತೋಲೆ ಹೊರಡಿಸಿ ಹೇಳುತ್ತಿರಲಿಲ್ಲವಾದರೂ ಇವೆಲ್ಲ ತೆರೆಮರೆಯಲ್ಲಿ ಅನೌಪಚಾರಿಕ ಸಂಧಾನದ ಮಾತುಕತೆಗಳಲ್ಲಿ ಬಂದುಹೋಗುತ್ತಿದ್ದ ಮಾತುಗಳು. ಹೀಗೆ ಒಂದು ಗಟ್ಟಿ ಭರವಸೆ ಸಿಕ್ಕಿದರಷ್ಟೇ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಶರಣಾಗಲು ಮುಂದೆ ಬರುತ್ತಾರೆಂಬುದು ಕೂಡ ನಿಜ ತಾನೇ? ಇಂಥಾದ್ದೇ ಒಂದು ಮಾತಿನ ಬಲೆ ಬೀಸಿ ನೀಲಗುಳಿ ಪದ್ಮನಾಭನನ್ನು ಶರಣಾಗುವಂತೆ ಪುಸಲಾಯಿಸಿ, ಬೆಂಗಳೂರಿಗೆ ಕರೆತಂದು ನಂತರ ಬಂಧಿಸಲಾಗಿತ್ತು. ಬಂಧನದ ಸಮಯದಲ್ಲಿ ಕೂಡ ಆತನಿಗೆ ಶೀಘ್ರ ಬಂಧಮುಕ್ತಿಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ, ಈಗ ಕೇಂದ್ರದಲ್ಲಿದ್ದದ್ದು ಯುಪಿಎ ಸರಕಾರವಲ್ಲವಲ್ಲ! ಅಧಿಕಾರದಲ್ಲಿ ಬಂದು ಕೂತಿದ್ದ ಬಿಜೆಪಿ ಸರಕಾರ, ಶಸ್ತ್ರಾಸ್ತ್ರಗಳ ಮೇಲಿನ ಪ್ರಕರಣಗಳನ್ನೆಲ್ಲ ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದುದರಿಂದ ನೀಲಗುಳಿ ಪದ್ಮನಾಭನ ಪ್ರಕರಣ ಸುಲಭದಲ್ಲಿ ಮೂವ್ ಆಗಿ ಮುಂದೆಹೋಗಲಿಲ್ಲ. ನೀರಿಳಿಯದ ಗಂಟಲಲ್ಲಿ ತುರುಕಿದ ಕಡುಬಿನಂತೆ ಅದು ಕೇಂದ್ರ ಗೃಹಸಚಿವಾಲಯದ ಮೇಜುಗಳಲ್ಲಿ ಮುಂದಕ್ಕೆ ಹೋಗದೆ ಸಿಕ್ಕಿಕೊಂಡಿತು. ಪದ್ಮನಾಭನ ಬಂಧಮುಕ್ತಿಯ ಕನಸು ಮರೀಚಿಕೆಯಾಯಿತು. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಗೌರಿ ಲಂಕೇಶ್ ಪ್ರಧಾನಿ ಮೋದಿಯವರ ಮೇಲೆ ಕೆಂಡ ಕಾರುತ್ತಿದ್ದದ್ದು ಏಕೆ ಎಂಬುದಕ್ಕೆ ಇದು ಆಂಶಿಕ ಉತ್ತರ ನೀಡಬಹುದು.
(ಮುಂದುವರಿಯುವುದು…)

Leave a Reply

Your email address will not be published. Required fields are marked *

20 − 11 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top