ವಿಶ್ವವಾಣಿ

‘ಬ್ರಾ’ ಬಗ್ಗೆ ಮಾತಾಡುವವರು, ‘ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ’ ಶ್ಲೋಕ ನಿಷೇಧಕ್ಕೆ ಆಗ್ರಹಿಸುತ್ತಾರಾ?’

ಈ ವಿಷಯದ ಬಗ್ಗೆ ಬರೆಯಬಾರದು ಎಂದು ನಿರ್ಧರಿಸಿದ್ದೆ. ಆದರೆ ಅಪಚಾರವಾಗುತ್ತದೆಂದು ಅನಿಸಿದ್ದರಿಂದ ಬರೆಯುತ್ತಿದ್ದೇನೆ. ನಾವು ಎಂಥ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಅರಿಯಲು ಈ ಪ್ರಸಂಗ ತೋರುಬೆರಳಾಗುವುದರಿಂದ ಇದರ ಕುರಿತು ಬರೆಯುವುದು ಅವಶ್ಯಕ ಎಂದೆನಿಸುತ್ತಿದೆ.

ಸುಮಾರು ಹದಿನೈದು ದಿನಗಳ ಹಿಂದೆ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರಭಟ್ ಅವರು ‘ಭಟ್ಟರ ಸ್ಕಾಚ್’ ಎಂಬ ಅಂಕಣದಲ್ಲಿ ಓದುಗರು ಕೇಳಿದ ಒಂದು ಪ್ರಶ್ನೆಗೆ ನೀಡಿದ ಉತ್ತರ ಭಾರಿ ಚರ್ಚೆಗೆ ಕಾರಣವಾಯಿತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು, ಟ್ರೋಲ್ ಆಯಿತು. ಫೇಸ್‌ಬುಕ್‌ನಲ್ಲಂತೂ ಮೂರು ದಿನಗಳ ಚರ್ಚೆಗೆ ಗ್ರಾಸವಾಯಿತು. ಹೆಸರೇ ಸೂಚಿಸುವಂತೆ, ಭಟ್ಟರ್‌ಸ್ಕಾಚ್ ಒಂದು ಐಸ್‌ಕ್ರೀಮ್‌ನ ಬಗೆಯನ್ನು ಸೂಚಿಸುವ ತಂಪು ಹಾಗೂ ಸ್ಕಾಚ್‌ನ ಬಿಸಿ(ಹಾಟ್)ಯನ್ನು ಓದುಗರಿಗೆ ಸಮಸಮನಾಗಿ ನೀಡುವ, ಪ್ರಶ್ನೋತ್ತರ ಅಂಕಣ. ಪ್ರತಿದಿನ ನೂರಾರು ಓದುಗರು ಭಟ್‌ರಿಗೆ ಪೋಸ್‌ಟ್ಕಾರ್ಡ್, ಇಮೇಲ್, ವಾಟ್ಸಪ್ ಮೂಲಕ ಪ್ರಶ್ನೆಗಳನ್ನು ಕಳಿಸಿಕೊಡುತ್ತಾರೆ. ಅವರು ಪ್ರತಿನಿತ್ಯ (ಭಾನುವಾರ ಹೊತುಪಡಿಸಿ) ಹತ್ತು ಓದುಗರ ಪ್ರಶ್ನೆಗಳಿಗೆ ಒಂದು ಸಾಲಿನಲ್ಲಿ ‘ಬಾಣಭಟ್ಟ’ ಎಂಬ ಹೆಸರಿನಲ್ಲಿ ಉ್ತರಿಸುತ್ತಾರೆ. ಮೂಲತಃ ಇದು ತಮಾಷೆಯ ಅಂಕಣ. ಎಲ್ಲ ವಾರಪತ್ರಿಕೆಗಳಲ್ಲೂ ಈ ‘ಪ್ರಶ್ನೋತ್ತರ’ ಬೀಚಿ ಅವರು ‘ಸುಧಾ’ ವಾರಪತ್ರಿಕೆಗೆ ‘ಉತ್ತರಭೂಪ’ ಎಂಬ ಹೆಸರಿನಲ್ಲಿ ಓದುಗರ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಇದು ಅತ್ಯಂತ ಜನಪ್ರಿಯ ಅಂಕಣವಾಗಿತ್ತು. ಕನ್ನಡದ ಖ್ಯಾತ ಸಾಹಿತಿಗಳಾದ ನವರತ್ನರಾಜಾರಾಮ್, ಪಾವೆಂ ಆಚಾರ್ಯ, ನಾ. ಕಸ್ತೂರಿ, ಶಿವರಾಂ, ಎಚ್.ಎಸ್.ಕೆ., ಮಾಸ್ಟರ್ ಹಿರಣ್ಣಯ್ಯ, ನಾಡಿಗೇರ ಕೃಷ್ಣರಾಯ, ಎನ್ಕೆ ಕುಲಕರ್ಣಿ, ಟಿ.ಪಿ ಕೈಲಾಸಂಮುಂತಾದವರು ಓದುಗರ ಪ್ರಶ್ನೆಗಳಿಗೆ ಬೇರೆ ಬೇರೆ ಪತ್ರಿಕೆಗಳಲ್ಲಿ ಉತ್ತರ ಬರೆಯುತ್ತಿದ್ದ ಅಂಕಣಗಳು ಈಗಲೂ ಓದುಗರ ಮನಸ್ಸಿನಲ್ಲಿವೆ. ಲಂಕೇಶ ಹಾಗೂ ರವಿ ಬೆಳಗೆರೆ ಸಹ ತಮ್ಮ ಪತ್ರಿಕೆಗಳಲ್ಲಿ ಈ ಅಂಕಣವನ್ನು ರಸವತ್ತಾಗಿಟ್ಟಿದ್ದರು.

ಹಾಗೆ ನೋಡಿದರೆ, ದಿನಪತ್ರಿಕೆಗಳಲ್ಲಿ ಈ ರೀತಿಯ ಪ್ರಶ್ನೋತ್ತರ ಅಂಕಣ ಅಪರೂಪ. ದಿನಪತ್ರಿಕೆಯ ಭಾನುವಾರದ ಸಂಚಿಕೆಯಲ್ಲಿ ಮಾತ್ರ ಈ ಅಂಕಣ ಪ್ರಕಟಿಸುವ ಜಾಯಮಾನ ಈಗಲೂ ಇದೆ. ಆದರೆ ‘ವಿಶ್ವವಾಣಿ’ಯಲ್ಲಿ ಆರಂಭದಿಂದಲೂ ಈ ಅಂಕಣ ಓದುಗರ ಮನಸ್ಸನ್ನು ಗೆದ್ದಿದೆ. ಈ ಪ್ರಶ್ನೋತ್ತರ ವಿಭಾಗದಲ್ಲಿ ಓದುಗರು ಕೇಳುವ ತಮಾಷೆಯ, ತರಲೆ, ಚಟಾಕಿ, ಚುರುಕು, ಕಾಲೆಳೆಯುವ, ಚೋದ್ಯ, ವಿಡಂಬನೆಯ ಪ್ರಶ್ನೆಗಳಿಗೆ ಬಾಣಭಟ್ಟರು ಅಷ್ಟೇ ಲವಲವಿಕೆಯಿಂದ, ಚುರುಕಾಗಿ, ನವಿರು ಉತ್ತರಿಸುತ್ತಾರೆ. ಇದು ನನಗೆ ಅತ್ಯಂತ ಪ್ರಿಯವಾದ ಅಂಕಣ.

ಊಟವಾದ ಬಳಿಕ ಎಲೆಅಡಕೆ ಹಾಕಿದಂತೆ, ಪತ್ರಿಕೆ ಓದಿದ ನಂತರ ಇದನ್ನು ಓದುತ್ತೇನೆ. ಒಂದು ಸಣ್ಣ ಕಿಕ್ ಸಿಗುತ್ತದೆ. ಎರಡು ನಿಮಿಷಗಳಲ್ಲಿ ಓದಬಹುದಾದ ಈ ‘ಭಟ್ಟರ್‌ಸ್ಕಾಚ್’ ಅಂಕಣದ ಪ್ರಶ್ನೆಗಳಾಗಲಿ, ಉತ್ತರಗಳಾಗಲಿ ನಾಳೆ ನೆನಪಿರುವುದಿಲ್ಲ. ಇದು ಓದಿ, ನಕ್ಕು, ಮರೆಯಬಹುದಾದ ನಿರ್ಮಲ, ನವಿರು ತಿಳಿಹಾಸ್ಯದ ಹೊನಲು, ನಗೆ ಕಾರಂಜಿ. ಇಲ್ಲಿ ಗಹನ ಚರ್ಚೆಗೆ ಅವಕಾಶವಿಲ್ಲ. ಅಷ್ಟಕ್ಕೂ ಒಂದು ಸಾಲಿನಲ್ಲಿ ಏನು ಚರ್ಚೆ ಮಾಡಬಹುದು? ಕಾರಬಹುದು? ದ್ವೇಷ, ಅಸೂಯೆ ಪ್ರದರ್ಶಿಸಬಹುದು?

ಭಟ್ಟರ್‌ಸ್ಕಾಚ್ ಸ್ವಲ್ಪ ತಂಪು, ಸ್ವಲ್ಪ ಬಿಸಿ, ನನಗೆ ತಿಳಿದಂತೆ, ನಿಮಗೂ ಗೊತ್ತಿರುವಂತೆ ಅತಿ ಹೆಚ್ಚು ಸಲ ಇಣುಕಿದವರು ವೀರಪ್ಪ ಮೊಯಿಲಿ, ಯಡಿಯೂರಪ್ಪ, ಸಿದ್ದರಾಮಯ್ಯ, ಉಗ್ರಪ್ಪ, ಬರಗೂರು ರಾಮಚಂದ್ರಪ್ಪ ಇತ್ಯಾದಿಮೊಯಿಲಿ ಅರೇನಾದರೂ ಈ ಅಂಕಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಒಂದೋ ಮಹಾಕಾವ್ಯ ಬರೆಯುವುದನ್ನು ನಿಲ್ಲಿಸುತ್ತಿದ್ದರು. ಇಲ್ಲವೇ ಬಾಣಭಟ್ಟರ ಮೇಲೆ ಹಾಗೂ ಪತ್ರಿಕೆ ಮೇಲೆ ಕೇಸು ಹಾಕುತ್ತಿದ್ದರು. ಆದರೆ ಅವರು ಇಲ್ಲಿಯತನಕ ಅಂಥ ದುಸ್ಸಾಹಸಕ್ಕೆ ಮುಂದಾಗಿಲ್ಲ. ಸಾಹಿತಿ, ಕನ್ನಡ ಹೋರಾಟಗಾರರು, ನಟನಟಿಯರನ್ನು ಈ ಅಂಕಣದಲ್ಲಿ ಪ್ರಸ್ತಾಪಿಸಿದರೂ ಅವರ್ಯಾರೂ ಮುನಿಸಿಕೊಂಡಿದ್ದಿಲ್ಲ. ಈ ಅಂಕಣದಲ್ಲಿ ಬಾಣಭಟ್ಟರೂ ಸಹ ತಮ್ಮನ್ನೇ ಗೇಲಿ ಮಾಡಿಕೊಳ್ಳುವುದುಂಟು. ಇದು ಆ ದಿನದ ವಿದ್ಯಮಾನದ ಬಗ್ಗೆ ಓದುಗರ ಮನದಾಳದ ತಮಾಷೆ, ಗಂಭೀರ ಪ್ರಶ್ನೆಗಳಿಗೆ ಲಘು ಹಾಸ್ಯಮಿಶ್ರಿತ ಉತ್ತರಗಳನ್ನೊಳಗೊಂಡ, ಕೋಲ್ಮಿಂಚಿನ ಸೆಳಕಿನ ಅನುಭವ ನೀಡುವ ಪುಟ್ಟ ಅಂಕಣ.

ಸಂಪಾದಕೀಯ ಪುಟದಲ್ಲಿ ಪ್ರಕಟವಾಗುವ ಐದಾರು ಸುದೀರ್ಘ ಲೇಖನ ಓದಿದ ನಂತರ, ‘ಭಟ್ಟರ್ ಸ್ಕಾಚ್’ ಓದಿದರೆ, ಮನಸ್ಸು ಅರಳೆಯಷ್ಟು ಹಗುರ, ಭಾರ. ಈ ಅಂಕಣದಲ್ಲಿ ಬಾಣಭಟ್ಟರು ತಮ್ಮನ್ನೇ ಗೇಲಿ ಮಾಡಿಕೊಂಡಿದ್ದನ್ನು, ಸ್ವವಿಮರ್ಶೆ, ಸ್ವಯಂಟೀಕೆ ಮಾಡಿಕೊಂಡಿದ್ದನ್ನು ನೋಡಿದ್ದೇನೆ. ಆಗಾಗ ಭಟ್ಟರು ಕೆಲವರ ಕಾಲೆಳೆದಿದ್ದೂ ಇದೆ. ಗೌರಿಲಂಕೇಶ್ ಬದುಕಿದ್ದಾಗ, ಓದುಗರೊಬ್ಬರು ‘ಪಿ. ಲಂಕೇಶ ಅವರಿಗೆ ಎಷ್ಟು ಜನ ಗಂಡುಮಕ್ಕಳು, ಭಟ್ರೆ?’ ಎಂದು ಕೇಳಿದ್ದಕ್ಕೆ ‘ಗೌರಿ ಲಂಕೇಶ ಸೇರಿದಂತೆ ಇಬ್ಬರು!’ ಎಂಬ ಉತ್ತರ ಓದಿ ದಿನವಿಡೀ ನಕ್ಕಿದ್ದೆ. ಪ್ರಾಯಶಃ ಇದನ್ನು ಗೌರಿ ಲಂಕೇಶ ಓದಿದ್ದರೂ ತಪ್ಪು ಭಾವಿಸುತ್ತಿರಲಿಲ್ಲವೇನೋ? ನಕ್ಕು ಸುಮ್ಮನಾಗುತ್ತಿದ್ದರೇನೋ? ಇದರಲ್ಲಿ ಬೇಸರಪಟ್ಟುಕೊಳ್ಳುವುದೇನಿದೆ? ಇದೊಂದು ಚೋದ್ಯ ಅಷ್ಟೆ.

ಕೆಲವರು ನನ್ನ ಹೆಸರು ಕೇಳಿ, ‘ಇದೇನು ಹೆಸರಾ ಅಥವಾ ಮನೆಮಂದಿಯವರ ವಿವರವಾ ಅಂತ ಕೇಳುತ್ತಾರೆ.’ ಇನ್ನು ಕೆಲವರು Instead of naming you, your father has “sentenced’ you ಎಂದು ಗೇಲಿ ಮಾಡುತ್ತಾರೆ. ನಾನು ಅವರ ಈ ಪಲಕುಗಳನ್ನು ಎಂಜಾಯ್ ಮಾಡುತ್ತೇನೆ. ಇನ್ನು ಕೆಲವರು ‘ನಿನ್ನ ಹೆಸರು ಜಯವೀರ ಓಕೆ. ನಿನಗೆ ವಿಕ್ರಂ ಹಾಗೂ ಸಂಪತ್ ಎಂಬ ಇಬ್ಬರು ತಂದೆಯರಾ?’ ಎಂದು ಕೇಳುವುದುಂಟು. I really enjoy their sense of humour ಮತ್ತೆ ಕೆಲವರು ‘ಜಯವೀರ ಒಬ್ಬನೇ ಬರೊಲ್ಲ ಜತೆಗೆ ಮತ್ತಿಬ್ಬರನ್ನು (ವಿಕ್ರಂ,ಸಂಪತ್) ಕರೆದುಕೊಂಡು ಬರುತ್ತಾನೆ’ ಎಂದೂ ಹೇಳುವುದುಂಟು. Its sheer fun ಆದರೆ ನಾನೇನಾದರೂ ಹೀಗೆ ಹೇಳಿದವರ, ಕೇಳಿದವರ ಜತೆ ‘ಯುದ್ಧಕ್ಕೆ ನಿಂತರೆ ಅದೆಷ್ಟು ಕ್ರೂರ. ಅವಮಾನವೀಯ ಅಥವಾ ತಿಕ್ಕಲುತನದ ಪರಮಾವಧಿ ಅಲ್ಲವೇ?’ ‘ಭಟ್ಟರ್‌ಸ್ಕಾಚ್’ನಲ್ಲಿ ನಾನೂ ಅನೇಕ ಸಲ ಟೀಕೆಗೆ, ಹಾಸ್ಯಕ್ಕೆ ತುತ್ತಾಗಿದ್ದೇನೆ. ನನಗೆ ಆ ಬಗ್ಗೆ ಖುಷಿಯಿದೆ.

ಆದರೆ ವಿಷಯವೇನೆಂದರೆ, ಇಷ್ಟೆಲ್ಲ ಏಕೆಂದರೆ, ಹದಿನೈದು ದಿನಗಳ ಹಿಂದೆ, ‘ಭಟ್ಟರ್‌ಸ್ಕಾಚ್’ ಅಂಕಣಕ್ಕೆ ಹಾಸನದ ಬಾಲಚಂದ್ರ ಹಿರಣ್ಣಯ್ಯ ಎಂಬ ಓದುಗರೊಬ್ಬರು, ‘ಒಂದು ಹಳ್ಳಿ ಮುಂದುವರಿದಿದೆ ಎಂದು ನಿರ್ಧರಿಸುವುದು ಹೇಗೆ?’ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಭಟ್ಟರು ಬಹಳ ತಮಾಷೆಯಾಗಿ, ಚೂಟಿಯಾಗಿ, ‘ಯಾವ ಹಳ್ಳಿಯ ಹೆಂಗಸರೆಲ್ಲ ಬ್ರಾ ಧರಿಸಿರುತ್ತಾರೋ. ಆ ಹಳ್ಳಿ ಮುಂದುವರಿದೆ ಎನ್ನಬಹುದು!’ ಎಂಬ ಉತ್ತರ ನೀಡಿದ್ದರು. ಪತ್ರಿಕೆಯಲ್ಲಿ ಬಂದ ಈ ಉತ್ತರವನ್ನು ಓದಿ ನಾನು ಜೋರಾಗಿ ನಕ್ಕಿದ್ದೆ. ನನ್ನ ಕೆಲವು ಸ್ನೇಹಿತರ ಮುಂದೆ ಈ ಪ್ರಶ್ನೆಉತ್ತರವನ್ನು ಹೇಳಿದಾಗ ಅವರೂ ನಕ್ಕಿದ್ದರು. ಇಲ್ಲಿ ಬಾಣಭಟ್ಟರು ‘ಬ್ರಾ’ವನ್ನು ಆಧುನಿಕತೆಯ ಸಂಕೇತವಾಗಿ ಬಳಸಿದ್ದು ತಿಳಿಹಾಸ್ಯವಷ್ಟೇ ಅಲ್ಲ, ಮಾರ್ಮಿಕ ಕೂಡ. ಇಂದಿಗೂ ಕೂಡ ಹಳ್ಳಿಗಳಲ್ಲಿ ನ್ಯಾಪಕಿನ್ ಪ್ಯಾಡ್, ಬ್ರಾ ಆಧುನಿಕತೆಯ ಸಂಕೇತಗಳಾಗಿವೆ. ‘ಟಾಯ್ಲೆಟ್’ ಹಾಗೂ ‘ಪ್ಯಾಡ್‌ಮನ್’ ಸಿನಿಮಾಗಳಲ್ಲಿ ಈ ಅಂಶ ಮನೋಜ್ಞವಾಗಿ, ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಬಡ ಹೆಂಗಸರು, ಸಂಪ್ರದಾಯಸ್ಥ ಮಹಿಳೆಯರು ಬ್ರಾ ಧರಿಸುವುದಿಲ್ಲ. ಕೆಲವು ಬುಡಕಟ್ಟು ಜನಾಂಗದಲ್ಲಿ ಬ್ರಾ ಧರಿಸುವುದು ನಿಷಿದ್ಧ. ಸಾಂಪ್ರದಾಯಿಕ ಹಾಲಕ್ಕಿ ಜನಾಂಗದ ಮಹಿಳೆಯರು ಇಂದಿಗೂ ಇದನ್ನು ಧರಿಸುವುದಿಲ್ಲ. ಹಾಗೆಂದು ಅದನ್ನು ಧರಿಸುವ ಮಹಿಳೆಯರು ಸಾಂಪ್ರದಾಯವಾದಿ ಮಹಿಳೆಯರ ದೃಷ್ಟಿಯಲ್ಲಿ ಮುಂದುವರಿದವರೇ.

ಈ ನಿಟ್ಟಿನಲ್ಲಿ, ಈ ಪ್ರಶ್ನೆಗೆ ನೀಡಿದ ಉತ್ತರ ಹಾಸ್ಯವಾಗಿ ಸ್ವೀಕರಿಸಲಿ, ವಾಸ್ತವ ಅರ್ಥ ಅಥವಾ ಯತಾರ್ಥದಲ್ಲಿ ಸ್ವೀಕರಿಸಲಿ ತಪ್ಪೇನಿಲ್ಲ. ಸಾಹಿತ್ಯಕವಾಗಿ ಇದೊಂದು ಉತ್ತಮ ಕಲ್ಪನೆ, ಚೆಂದದ ರೂಪಕ. ಕುವೆಂಪು ಅವರ ಕಾದಂಬರಿಗಳಲ್ಲಂತೂ ಇಂಥ ಅಸಂಖ್ಯ ರೂಪಗಳನ್ನು ಸವಿಯಬಹುದು. ಪ್ರಕೃತಿಯನ್ನು ಹೆಣ್ಣಿಗೆ, ಹೆಣ್ಣಿನ ಅಂಗಾಂಗಗಳಿಗೆ ಅವರು ಹೋಲಿಸಿದ್ದಾರೆ. ನಾನು ಬಾಲ್ಯದಲ್ಲಿದ್ದಾಗ ಪ್ರಭಾತ ಅಥವಾ ಪ್ರಾತಃಸ್ಮರಣೆ ಶ್ಲೋಕವನ್ನು ಹೇಳುತ್ತಿದ್ದೆ. ‘ಕರಾಗ್ರೇ ವಸತೇ ಲಕ್ಷ್ಮೀ,ಕರಮಧ್ಯೇ ಸರಸ್ವತಿ, ಕರಮೂಲೇ ಸ್ಥಿತೇ ಗೌರೀ, ಪ್ರಭಾತೇ ಕರದರ್ಶನಂ’, ‘ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ’ ಎಂಬ ಶ್ಲೋಕ ಹೇಳುತ್ತಿದ್ದೆ. ಈಗಲೂ ಇದನ್ನು ಮನೆಗಳಲ್ಲಿ ಹೇಳುತ್ತಾರೆ. ಹಾಗಾದರೆ ಈ ಶ್ಲೋಕದಲ್ಲಿ ಬರುವ ‘ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ’ ಎಂಬ ಸಾಲಿನ ಅರ್ಥವೇನು? ಬೆಳಗ್ಗೆ ಎದ್ದು ಸ್ತನ (ಮೊಲೆ)ಎಂದು ಹೇಳುವುದು ಅಶ್ಲೀಲ ಅಲ್ಲವೇ? ಚಿಕ್ಕಮಕ್ಕಳಿಗೆ ಈ ಶ್ಲೋಕ ಹೇಳಿಸುವುದು ಸರಿಯಾ?… ಎಂದು ವಾದಿಸುವುದು ತಿಕ್ಕುಲುತನ, ಮೂರ್ಖತನದ ಪರಾಕಾಷ್ಠೆಯೋ, ಬ್ರಾ ರೂಪಕವನ್ನು ಅಶ್ಲೀಲ ಎಂದು ಪರಿಗಣಿಸುವುದು ಇನ್ನೂ ಹೇಯ, ಅಸಹ್ಯದ ಪರಮಾವಧಿ ಅಲ್ಲವೇ? ಪ್ರಭಾತ ಶ್ಲೋಕದಿಂದ ‘ಪರ್ವತಸ್ತನ ಮಂಡಲೇ’ ಎಂಬ ಸಾಲುಗಳನ್ನು ಕಿತ್ತು ಹಾಕಬೇಕು ಎಂದು ಯಾರೂ ಸೋಶಿಯಲ್ ಮಿಡಿಯಾದಲ್ಲಿ ಅಭಿಯಾನ ಆರಂಭಿಸಿಲ್ಲ ಏಕೆ? ಬ್ರಾ ಎಂಬ ಒಂದು ಪದ ಬಳಸಿದ್ದಕ್ಕೆ, ಅದನ್ನು ಅಭಿವೃದ್ಧಿ ರೂಪಕವಾಗಿ ಬಳಸಿದ್ದಕ್ಕೆ ಇಷ್ಟೆಲ್ಲ ಚೀರಾಡಿದರಲ್ಲ, ಅವರ ಮನಸ್ಸಿನಲ್ಲಿ ಅದೆಷ್ಟು ಹೊಲಸು, ಹೇಸಿಗೆ ತುಂಬಿರಬಹುದು?

ಪ್ಯಾಡ್‌ಮನ್’ ಚಿತ್ರದಲ್ಲಿ ಹಳ್ಳಿಗಳಲ್ಲಿ ಹೆಂಗಸರೂ ಮುಟ್ಟಿನ ಸಂದರ್ಭದಲ್ಲಾಗುವ ರಕ್ತಸ್ರಾವ ತಡೆಗೆ ಕೊಳಕು ಬಟ್ಟೆಯನ್ನೇ ಉಪಯೋಗಿಸುವುದನ್ನು ತೋರಿಸಲಾಗಿದೆ. ಅದರಿಂದಾಗುವ ಇನ್‌ಫೆಕ್ಷನ್(ಸೋಂಕು)ನಿಂದಾಗಿ ಲಕ್ಷಾಂತರ ಮಹಿಳೆಯರು ಸಾಯುತ್ತಿದ್ದಾರೆ. ಅಂಥವರ ಪಾಲಿಗೆ ಸ್ಯಾನಿಟರಿ ನ್ಯಾಪಕಿನ್ ಅಥವಾ ಪ್ಯಾಡ್ ಇಂದಿಗೂ ಲಕ್ಷುರಿಯೇ. ಅದು ಅಭಿವೃದ್ಧಿಯ ಸಂಕೇತವೇ. ಕಾರಣ ಅರ್ಧ ಡಜನ್ ಪ್ಯಾಡ್‌ಗಳುಳ್ಳ ಪ್ಯಾಕ್‌ಗೆ ನೂರಾರು ರೂಪಾಯಿ ಕೊಡಬೇಕು. ಹಳ್ಳಿಗಳ ಎಷ್ಟು ಬಡ ಮಹಿಳೆಯರಿಗೆ ಇದನ್ನು ಖರೀದಿಸುವ ಸಾಮರ್ಥ್ಯವಿದೆ? ತುತ್ತು ಅನ್ನಕ್ಕೆ ತತ್ವಾರವಾಗಿರುವವರಿಗೆ ಪ್ಯಾಡು, ಬ್ರಾಗಳೆಲ್ಲ ಇನ್ನೂ ಮರೀಚಿಕೆಗಳೇ. ಯಾವ ಹಳ್ಳಿಗಳಲ್ಲಿ ಇವೆರಡನ್ನೂ ಬಳಸುತ್ತಾರೋ ಆ ಹಳ್ಳಿ ಅಭಿವೃದ್ಧಿಯಾಗಿದೆ ಎಂದು, ಇವೆರಡನ್ನು ಒಂದು ‘ಮಾನದಂಡ’ವಾಗಿ ಬಳಸಲು ಹೇಳಿದರೆ ತಪ್ಪೇನು ಬಂತು ಸ್ವಾಮಿ? ಅದರಲ್ಲಿ ಅಶ್ಲೀಲತೆಯೇನಿದೆ? ಅದು ಹಳ್ಳಿಯ ಮಹಿಳೆಯರ ಅವಮಾನ ಹೇಗಾಗುತ್ತದೆ? ‘ಪ್ಯಾಡ್‌ಮನ್’ ಚಿತ್ರದ ನಿರ್ಮಾಪಕರಲ್ಲಿ ಒಬ್ಬಳಾದ, ಆ ಚಿತ್ರದ ಅಟಿಛಿಠಿಣ ರೂಪಿಸಿದವರಲ್ಲಿ ಒಬ್ಬರಾದ, ಚಿತ್ರದ ನಾಯಕ ಅಕ್ಷಯ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಇಂಗ್ಲಿಷ್ ಪತ್ರಿಕೆಯೊಂದಕ್ಕೆ ಬರೆಯುವ ಅಂಕಣದಲ್ಲಿ I am extreamely happy to see innumerable varieties of sanitary pad and bra in the market to satisfy every woman ಎಂದು ಹೇಳುತ್ತಾರೆ. ಆ ಚಿತ್ರದಲ್ಲಿನ ನಾಯಕಿಯ ಬಾಯಲ್ಲೂ ಈ ಮಾತುಗಳು ಬರುತ್ತವೆ. ಅದರಲ್ಲಿ ಅಶ್ಲೀಲತೆಯೇನು ಬಂತು? ಇದರಿಂದ ಹೇಗೆ ಮಹಿಳಾ ಸಂವೇದನೆಯನ್ನು ಘಾಸಿಗೊಳಿಸಿದಂತಾಯಿತು? ಹಳ್ಳಿಯ ಹೆಂಗಸರನ್ನು ಅವಮಾನಗೊಳಿಸಿದಂತಾಯಿತು? ಹಳ್ಳಿ ಹೆಂಗಸರಿಗೆ ಬ್ರಾ ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ಅಗತ್ಯ ವಸ್ತುಗಳು. ಆದರೆ ಎಷ್ಟೋ ಹಳ್ಳಿ ಹೆಂಗಸರಿಗೆ ಇವೆರಡೂ ಕೈಗೆಟುಕದ ವಸ್ತುಗಳೇ. ಹೀಗಾಗಿ ಇದನ್ನು ಅಭಿವೃದ್ಧಿಯ ರೂಪಕವಾಗಿ ಅದೇನು ಅಪರಾಧನಾ? ನಾನ್‌ಸೆನ್‌ಸ್! ನಾವಿನ್ನೂ ಯಾವ ಕಾಲದಲ್ಲಿ ಇದ್ದೇವೆ?

ದುರಂತವೆಂದರೆ ಈ ‘ಬ್ರಾ’ ಉತ್ತರಕ್ಕೆ ವಿರೋಧ ವ್ಯಕ್ತಪಡಿಸಿದವರಲ್ಲಿ ಮಹಿಳೆಯರೇ ಹೆಚ್ಚಿದ್ದರು. ಹಳ್ಳಿ ಹೆಂಗಸರೆಂದರೆ ಇಷ್ಟು ಕೇವಲವಾ ಎಂದು ಆರಂಭವಾದ ಇವರ ಆಕ್ರೋಶ, ಸಭ್ಯತೆಯ ಎಲ್ಲ ಬೇಲಿ ದಾಟಿದ್ದು ದುರಂತ. ಕೆಲವರಂತೂ ‘ಭಟ್ಟರಿಗೆ ಬ್ರಾ ಕಳಿಸಿ ಆಂದೋಲನ ಮಾಡೋಣ. ಪ್ರತಿಭಟನೆ ಮಾಡೋಣ’ ಎಂದು ಕರೆಕೊಟ್ಟರು. ಅದಕ್ಕೆ ಮತ್ತೆ ಕೆಲವರು ‘ಯಸ್, ಅದೇ ಸರಿಯಾದ ಶಾಸ್ತಿ’ ಎಂದು ಕಾಮೆಂಟ್ ಬರೆದರು. ನಾನು ಅವರನ್ನು ಸಂಪರ್ಕಿಸಿ, ‘ನಿಮ್ಮ ಕಚೇರಿಗೆ ಎಷ್ಟು ಒಳ ಉಡುಪುಗಳು ಬಂದವು?’ ಎಂದು ಕೇಳಿದೆ. ಅದಕ್ಕೆ ಅವರು, ‘ಈ ಪ್ರತಿಭಟನೆಯ ಮೊದಲ ಸೊಲ್ಲೆತ್ತಿದ ಒ‘ಬ್ರಾ’ದರೂ ಕಳಿಸಿಕೊಡಬಹುದು ಅಂದುಕೊಂಡಿದ್ದೆ. ಅವರೂ ಕಳಿಸಿಲ್ಲ’ ಎಂದರು. ನಾವಿಬ್ಬರೂ ಜೋರಾಗಿ ನಕ್ಕೆವು. ‘ಈ ಬ್ರಾ ಕಳಿಸುವ ಆಂದೋಲನ’ಕ್ಕೆ ಲೈಕ್‌ಸ್ ಒತ್ತಿದ ಹಾಗೂ ಕಾಮೆಂಟ್ ಬರೆದವರೆಲ್ಲ ಕನಿಷ್ಠ ಒಂದಾದರೂ ಕಳಿಸಿದ್ದಿದ್ದರೆ, ಕನಿಷ್ಠ ಒಂದೂವರೆ ಸಾವಿರ ಬ್ರಾಗಳಾದರೂ ಬರಬಹುದು ಎಂದು ನಿರೀಕ್ಷಿಸಿದ್ದೆ.  No ‘bra’vo!  ಎಂದರು. ನನಗೆ ನಗು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.

ಈ ಮಧ್ಯೆ ಭಟ್‌ರು ನನಗೆ ಮೀನಾ ಭಾರಧ್ವಾಜ್ ಎಂಬ ಓದುಗರೊಬ್ಬರು ಕಳುಹಿಸಿದ ವಾಟ್ಸಾಪ್ ಸಂದೇಶವನ್ನು ಇ ಮೇಲ್‌ಮೂಲಕ ಕಳಿಸಿದ್ದರು. ಅದರಲ್ಲಿ ಬರೆದಿತ್ತು -‘ನಮಸ್ಕಾರ್ ಭಟ್ಟರಿಗೆ, ಹೇಗಿದ್ದೀರಿ? ನಿಮ್ಮ ಸ್ಕಾಚ್ ಕುಡಿದು ನಕ್ಕಿದ್ದೇ ನಕ್ಕಿದ್ದು ಸರ್. ಪ್ರಪಂಚದಲ್ಲಿ ಅತಿ ಹೆಚ್ಚು ಕಿಕ್ ಕೊಡುವ ಸ್ಕಾಚ್ ಭಟ್ಟರಸ್ಕಾಚ್! ಅದು ನನಗೆ ವಿಡಂಬನಾತ್ಮಕವಾಗಿ ಕಾಣುತ್ತಿದೆಯೇ ಹೊರತು ವಿವಾದಾತ್ಮಕವಾಗಿ ಕಾಣುತ್ತಿಲ್ಲ. ಈ ಅಂಕಣ ವಿನೋದಕ್ಕಾಗಿ ಅಲ್ಲವೇ?’ ಗೆಂಡೆತಿಮ್ಮ ಪೇಟೆಗೆ ಹೋಗಿ, ಕುಪ್ಪುಸ ಪೆಟ್ಟಿಕೋಟ್ ತಂದು, ಹಳ್ಳಿ ಹೆಂಗಸರಿಗೆ ಮಾರಿ, ಹೆಂಗಸರು ಅದನ್ನು ತೋರುವ ಹಾಗೆ ತೊಟ್ಟು, ಕಸ ಬಳಿಯುವಾಗ, ಅತ್ತೆ ಸೊಸೆಯನ್ನು ನೀನು ಇಷ್ಟು ಮುಂದುವರಿದೆಯಾ ಅಂತ ಸಿಟ್ಟಾಗುವುದು ನೆನಪಾಯಿತು. ವಂದನೆಗಳು’.

ಈ ಒಂದು ಪ್ರಶ್ನೋತ್ತರವನ್ನು ಇಟ್ಟುಕೊಂಡು ಮೂರು ದಿನ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದರಲ್ಲ, hate message ಕಳಿಸಿದರಲ್ಲ, ಅವಾಚ್ಯವಾಗಿ ನಿಂದಿಸಿದರಲ್ಲ, ಇವರ ಬುದ್ಧಿಗೆ ಯಾವಾಗ ತುಕ್ಕು ಹಿಡಿಯಿತು? ಕೆಲವು ಕವಯತ್ರಿಯರು ಯೋನಿ, ಶಿಶ್ನ, ಸಂಭೋಗ, ಮೊಲೆಗಳ ಕವನ ಬರೆದು, ಕವಿಗೋಷ್ಠಿಗಳಲ್ಲಿ ಅದನ್ನು ಹಾಡಿ ತಮ್ಮ ಅತೃಪ್ತ, ಆರ್ದ್ರ ಭಾವಗಳನ್ನೆಲ್ಲ ಹಾಡಿ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅಂಥವರ ಬಗ್ಗೆ ಈ ಮಹಿಳಾಮಣಿಗಳು ಯಾಕೆ ಸೊಲ್ಲೆತ್ತಿಲ್ಲ?

ಕೆಲವು ವರ್ಷಗಳ ಹಿಂದೆ, ಕನ್ನಡದ ಬರಹಗಾರ್ತಿ, ಕವಯತ್ರಿಯೊಬ್ಬಳು ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟದಿಂದ ಕೈ, ಕುತ್ತಿಗೆ, ಬೆನ್ನು ಸುಟ್ಟುಹೋಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಅವಳ ಯೋಗಕ್ಷೇಮ ನೋಡಲು ಹೋದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ, ‘ನಿನ್ನ ಆ ಭಾಗವೂ ಹೋಗಿದೆಯಾ?’ ಎಂದು ಕೇಳಿದ್ದರಂತೆ. ಆ ಕವಯತ್ರಿ ಈ ಪ್ರಸಂಗ ಬರೆದುಕೊಂಡಿದ್ದಾಳೆ. ಈ ಮಹಿಳಾಮಣಿಯರಿಗೆಲ್ಲ ಅನಂತಮೂರ್ತಿ ಹೆಸರು ಹೇಳಿದರೆ ‘ಕುಚ ಕುಚ ಹೋತಾ ಹೈ’. ಅವರು ಸತ್ತು ಇಷ್ಟು ವರ್ಷವಾದ ನಂತರವೂ ಅವರಿಗೊಂದು ಧಿಕ್ಕಾರ ಹೇಳಿದ್ದರೆ ಅವರ ಸ್ತ್ರೀತ್ವಕ್ಕೆ ಮರ್ಯಾದೆಯಾದರೂ ಸಿಗುತ್ತಿತ್ತು! ಅಷ್ಟೇ ಅಲ್ಲ, ತಮ್ಮ ಪತ್ರಿಕೆಯಲ್ಲಿ ಲಂಕೇಶ್ ‘ತುಂಟಾಟ’ ಎಂಬ ಶತಪೋಲಿ ಜೋಕುಗಳನ್ನು ಬರೆಯುತ್ತಿದ್ದರಲ್ಲ, ಅದು ಇವರಿಗೆಲ್ಲ ಅಶ್ಲೀಲ ಎನಿಸಲೇ ಇಲ್ಲವಾ? ಇವರಿಗೆ ಆವರಿಸಿದ ಭ್ರಾಂತಿ ಯಾವುದು?

ಥೂ..

ಬುದ್ಧಿಗಿಷ್ಟು..!

ಮೈಫುಟ್!