About Us Advertise with us Be a Reporter E-Paper

ಅಂಕಣಗಳು

ಬರಹಗಾರನ ಬವಣೆಯ ಕುರಿತು ಯಾರು ಬರೆಯಬೇಕು…?

- ರೋಹಿತ್ ಚಕ್ರತೀರ್ಥ, ಲೇಖಕರು, ಅಂಕಣಕಾರರು

ನಾಲ್ಕೈದು ವರ್ಷಗಳ ಹಿಂದಿನ ಮಾತು. ಫೇಸ್‌ಬುಕ್‌ನಲ್ಲಿ ಸಂಪರ್ಕಿಸಿದ ವ್ಯಕ್ತಿಯೊಬ್ಬರು ತಾನು ಸಿನೆಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತೇನೆಂದೂ ಸದ್ಯಕ್ಕೊಂದು ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದೇನೆಂದೂ ಪರಿಚಯಿಸಿಕೊಂಡು ಆ ಸಂಭಾಷಣೆಯನ್ನು ಬರೆದುಕೊಡಲು ನನ್ನಲ್ಲಿ ಕೇಳಿಕೊಂಡರು. ಸಿನೆಮಾ, ಟಿವಿ ಮಾಧ್ಯಮಗಳಿಂದ ನಾನು ದೂರ.

ಹೆಚ್ಚು ಸಿನೆಮಾಗಳನ್ನೂ ನೋಡಿದವನಲ್ಲವಾದ್ದರಿಂದ ನನಗೆ ಸಂಭಾಷಣೆ, ಚಿತ್ರಕತೆ ಮೊದಲಾದವುಗಳ ಭಾಷೆಯೂ ಪೂರ್ಣವಾಗಿ ಗೊತ್ತಿರಲಿಲ್ಲ. ಅದನ್ನು ಅವರಿಗೆ ಪ್ರಾಮಾಣಿಕವಾಗಿ ಹೇಳಿದೆ. ಇಲ್ಲಿಲ್ಲ, ನೀವೇ ಬರೆದುಕೊಡಬೇಕು ಎಂದು ಒತ್ತಾಯ ಮಾಡಿದ ಮೇಲೆ, ಹಿಂದೊಮ್ಮೆ ಟಿವಿ ಚಾನೆಲ್ಲಿಗಾಗಿ ಎರಡು ವರ್ಷ ಸ್ಕ್ರಿಪ್‌ಟ್ ಬರೆದಿದ್ದ ಅನುಭವದ ಧೈರ್ಯದಲ್ಲಿ ಒಪ್ಪಿಕೊಂಡೆ. ಸಹ ನಿರ್ದೇಶಕರು ನನ್ನನ್ನು ನಿರ್ದೇಶಕರಿಗೆ ಪರಿಚಯಿಸಿದರು. ಆ ನಿರ್ದೇಶಕರಿಗೆ ಕನ್ನಡವೇ ಬರುತ್ತಿರಲಿಲ್ಲ! ನಾಲ್ಕೈದು ಸಿನೆಮಾ ತೆಗೆದಿದ್ದಾರೆಂದೂ ಈಗ ಚೇಂಜ್‌ಗಾಗಿ ಒಂದು ಕನ್ನಡ ಸಿನೆಮಾ ನಿರ್ದೇಶಿಸಿ ಕನ್ನಡಮ್ಮನ ಸೇವೆಯನ್ನೂ ಮಾಡಬೇಕೆಂದು ಬಯಸಿದ್ದಾರೆಂದೂ ಈ ಸಹ ನಿರ್ದೇಶಕರು ತಿಳಿಸಿದರು. ಸರಿ, ಹಾಗಾದರೆ ಹಾಗೆ ಎಂದು ಕೊಂಡು ನಾನು ಅವರಿಂದ ಕತೆ ಕೇಳಿ, ಅದಕ್ಕೆ ತಕ್ಕಂತೆ ಇಡೀ ಚಿತ್ರಕ್ಕೆ ಸಂಭಾಷಣೆ ಬರೆದುಕೊಟ್ಟೆ. ಆ ಪ್ರಕ್ರಿಯೆ ಒಂದೆರಡು ತಿಂಗಳು ತೆಗೆದುಕೊಂಡಿತು. ಬರವಣಿಗೆ, ಚರ್ಚೆ, ಬದಲಾವಣೆ, ಪರಿಷ್ಕರಣೆ, ಮತ್ತೆ ಬರವಣಿಗೆ.. ಹೀಗೆ ಹಲವು ಹಂತಗಳನ್ನು ಹಾದು ಕೊನೆಗೂ ಸಂಭಾಷಣೆ ಸಿದ್ಧಗೊಂಡಿತು. ಅದನ್ನು ಸಹ ನಿರ್ದೇಶಕರು ಒಯ್ದರು. ಒಯ್ದರು ಎಂಬಲ್ಲಿಗೆ ಆ ಕತೆ ಮುಗಿಯಿತು ಎನ್ನಬಹುದು! ಯಾಕೆಂದರೆ ಸ್ಕ್ರಿಪ್‌ಟ್ ಕೈಗೆ ಬರುವವರೆಗೆ ವಾರಕ್ಕೆ ಮೂರು ಸಲ ದುಂಬಾಲು ಬೀಳುತ್ತಿದ್ದವರು ಅನಂತರ ಭೂಮಿಯ ಗುರುತ್ವದಿಂದ ಕಳಚಿಕೊಂಡ ವಾಯೇಜರ್ ನೌಕೆಯಂತೆ ನನ್ನ ಕಣ್ಣಿಗೆ ಅಪ್ಪಿತಪ್ಪಿಯೂ ಸಿಗದಂತೆ ಮಾಯವಾಗಿಬಿಟ್ಟರು! ಆ ಸಿನೆಮಾ ಸೆಟ್ಟೇರಿತಾ, ತೆಲುಗಿನಲ್ಲಿ ಸಿನೆಮಾ ಆಗಿ ಬಂತಾ ಎಂಬುದು ಇಂದಿಗೂ ನನಗೆ ಗೊತ್ತಿಲ್ಲ. ಆದರೆ ಅದರಿಂದ ಕೇಡಾಗಲಿಲ್ಲ. ಸಿನೆಮಾ ಮಂದಿ ಸಂಪರ್ಕಿಸಿದಾಗ, ಅವರು ಕೊಟ್ಟರೆ ಮಾತ್ರ ಕೆಲಸ ಮಾಡಿಕೊಡಬೇಕೆಂಬ ಅದ್ಭುತವಾದ ಪಾಠವನ್ನು ಆ ಘಟನೆಯಿಂದ ನಾನು ಕಲಿತೆ ಎನ್ನಬಹುದು.

ಕೆಲವು ವರ್ಷಗಳ ಹಿಂದೆ ತೀರಿಕೊಂಡ ಸಾಹಿತಿಯೊಬ್ಬರು ಹೇಳುತ್ತಿದ್ದ ಒಂದು ಘಟನೆ ಇದು. ಅಷ್ಟಿಷ್ಟು ಕಾವ್ಯೋದ್ಯೋಗ ಮಾಡಿದ್ದ ಅವರನ್ನು ಸಂಪರ್ಕಿಸಿದ ಓರ್ವ ನಿರ್ದೇಶಕರು ಸನ್ನಿವೇಶ ವಿವರಿಸಿ, ಟ್ಯೂನ್ ಕೊಟ್ಟು, ಮೂರು ಹಾಡು ಬರೆಸಿದರಂತೆ. ಸಾಹಿತಿ ಪಾಪ, ಪ್ರಾಮಾಣಿಕ. ಅತ್ಯಂತ ಶ್ರದ್ಧೆಯಿಂದ ಹಾಡು ಬರೆದುಕೊಟ್ಟರು. ಅದಾಗಿ ಕೆಲವು ದಿನಗಳ ನಂತರ ಹಾಡುಗಳು ಓಕೆ ಆದ ಮೇಲೆ ಬಳಿ ಮುಜುಗರಪಡುತ್ತ ಆ ಸಾಹಿತಿ ಸಂಭಾವನೆಯ ಬೇಡಿಕೆ ಇಟ್ಟರಂತೆ. ನಿರ್ದೇಶಕ, ಇದೆಂಥಾ ಆಶ್ಚರ್ಯಭರಿತ ಘಟನೆ ಎಂಬಂತೆ ಸಾಹಿತಿಗಳನ್ನು ನೋಡಿ, ಆ ಹತ್ತಿಪ್ಪತ್ತು ಸಾಲುಗಳಿಗೆ ಸಂಭಾವನೆ ಕೇಳುತ್ತಿದ್ದೀರಾ?! ಎಂದು ಪ್ರಶ್ನಿಸಿದರಂತೆ. ಸಾಹಿತಿಗೆ ಆ ಅವಮಾನದಿಂದ ಅದೆಷ್ಟು ಮುಜುಗರವಾಯಿತೆಂದರೆ, ಸರಿ.. ಟೈಟಲ್ ಕಾರ್ಡಿನಲ್ಲಿ ದಯವಿಟ್ಟು ನನ್ನ ಹೆಸರು ಹಾಕಬೇಡಿ.. ಎಂದು ಬೇಡಿಕೊಂಡರು. ಅವರ ಬೇಡಿಕೆಗೆ ಯಾವುದೇ ಹಿಂಜರಿಕೆಯಿಲ್ಲದೆ ಅಸ್ತು ಎಂದ ನಿರ್ದೇಶಕರು, ಸಿನೆಮಾ ಬಿಡುಗಡೆಯಾದಾಗ ಟೈಟಲ್ ಕಾರ್ಡಿನಲ್ಲಿ ಗೀತರಚನಕಾರ ಎಂದು ತನ್ನ ಮುಲಾಜಿಲ್ಲದೆ ಬರೆಸಿಕೊಂಡಿದ್ದರಂತೆ!

ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಇಂಗ್ಲೀಷ್ ಜಾಣ್ನುಡಿಯಿದೆ. ಈ ಮಾತು ಸುಳ್ಳು ಎಂಬ ಅನುಭವ ಲೇಖಕರಿಗೆ, ಸಾಹಿತಿಗಳಿಗೆ, ಅಂಕಣಕಾರರಿಗೆ, ಸಿನೆಮಾಗಳಿಗೆ ಸಂಭಾಷಣೆ-ಚಿತ್ರಕತೆ-ಗೀತಸಾಹಿತ್ಯ ಬರೆವವರರಿಗೆ, ಟಿವಿ ಚಾನೆಲ್ಲುಗಳಲ್ಲಿ ಸ್ಕ್ರಿಪ್‌ಟ್ ಬರೆವವರಿಗೆ ಮತ್ತೆ ಮತ್ತೆ ಆಗುತ್ತಿರುತ್ತದೆ. ಯಾಕೆಂದರೆ ಖಡ್ಗ ತೋರಿಸಿ ಒಬ್ಬ ಅಪರಿಚಿತನನ್ನು ಬೇಕಾದರೂ ದರೋಡೆ ಮಾಡಬಹುದು. ಆದರೆ ಪೆನ್ನು ತೋರಿಸಿ ನಮ್ಮ ಪರಿಚಿತರಿಂದಲೇ ನಮಗೆ ನ್ಯಾಯವಾಗಿ ಸಲ್ಲಬೇಕಾದ ಸಂಭಾವನೆಯನ್ನು ಪಡೆಯುವುದಕ್ಕೂ ಆಗುವುದಿಲ್ಲ! ಬೇಕಾದರೆ ಕನ್ನಡದ ಪತ್ರಿಕೆಗಳನ್ನೇ ತೆಗೆದುಕೊಳ್ಳಿ.

ಪತ್ರಿಕಾ ಸಂಸ್ಥೆಗಳನ್ನು ಹೊರತುಪಡಿಸಿದರೆ ಮಿಕ್ಕ ಯಾವ ಪತ್ರಿಕೆಯೂ ಬರಹಗಾರರಿಗೆ ಸಂಭಾವನೆ ಕೊಡುವುದಿಲ್ಲ. ಕೊಟ್ಟರೂ ಬರಹಗಾರ ಅದನ್ನು ನಾಲ್ಕು ಜನರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಇರುವುದಿಲ್ಲ. ವ್ಯಂಗ್ಯಚಿತ್ರಕಾರರಿಗೆ ಒಂದು ಪಾಕೆಟ್ ಕಾರ್ಟೂನಿಗೆ 25 ರುಪಾಯಿ ಸಂಭಾವನೆ ಕೊಡುವ, ಒಂದು ಪದ್ಯಕ್ಕೆ 50 ರುಪಾಯಿಯ ಚೆಕ್ ಕಳಿಸುವ ಪತ್ರಿಕೆಗಳು ಇಂದಿಗೂ ಕನ್ನಡದಲ್ಲಿವೆ ಎಂದರೆ ನೀವು ನಂಬಲೇಬೇಕು! ಜಗತ್ತಿನಲ್ಲಿ 21ನೇ ಶತಮಾನ ಬಂದಿದೆ. ಪೆಟ್ರೋಲ್ ಬೆಲೆ ಲೀಟರಿಗೆ 70 ರುಪಾಯಿ ಮುಟ್ಟಿದೆ. ಚಿನ್ನದ ಬೆಲೆ 3,000 ರುಪಾಯಿ ದಾಟಿದೆ. ಆದರೆ ಪತ್ರಿಕಾಲೋಕದಲ್ಲಿ ಮಾತ್ರ ಬರಹಗಳ, ಕಾರ್ಟೂನುಗಳ, ಬೈಲೈನ್ ಸುದ್ದಿಗಳ ಸಂಭಾವನೆಯ ದರಗಳು 1947ರಲ್ಲಿ ಹೇಗಿತ್ತೋ ಹಾಗೆಯೇ ಇವೆ. ಹಿಂದೆಲ್ಲ ಶಿಕ್ಷಕರನ್ನು ಊಟಕ್ಕೇನು ಮಾಡುತ್ತೀರಿ? ಎಂದು ಕೇಳುವ ಪರಿಪಾಠ ಇತ್ತು. ಶಿಕ್ಷಕರಿಗಿದ್ದ ಕಡಿಮೆ ವೇತನದಲ್ಲಿ ಹೊಟ್ಟೆಬಟ್ಟೆಗಳ ಅಗತ್ಯಗಳನ್ನು ಪೂರೈಸಿಕೊಳ್ಳಲು ಕಷ್ಟವೆಂಬುದನ್ನು ಸೂಚ್ಯವಾಗಿ ಹೇಳುವ ಜೋಕ್ ಅದು. ಅದೇ ಜೋಕನ್ನು ಬರೆದೇ ಬದುಕುತ್ತೇನೆಂದು ಭಾವಿಸಿದ ಛಲದಂಕಮಲ್ಲರಿಗೂ ಅನ್ವಯಿಸಬಹುದು. ಲೇಖಕನಿಗೇನಾದರೂ ಬೀಡಿ ಎಳೆಯುವ ಚಟವಿದ್ದರೆ, ಬರೆದು ಸಂಪಾದಿಸಿದ್ದರಲ್ಲಿ ಬೀಡಿಯ ಏನೂ ಹುಟ್ಟಲಿಕ್ಕಿಲ್ಲ.

ಇತ್ತೀಚೆಗೆ ನೂರೆಂಟು ವೆಬ್ ಪತ್ರಿಕೆಗಳು ಕಣ್ಣುಬಿಡುತ್ತಿವೆ. ಒಂದಿಲ್ಲೊಂದು ರಾಜಕೀಯ ಪಕ್ಷದ ಬೆನ್ನುಬಿದ್ದು ಒಂದಷ್ಟು ಸಾವಿರಗಳನ್ನೋ ಲಕ್ಷಗಳನ್ನೋ ತಮ್ಮತ್ತ ಸೆಳೆದುಕೊಂಡು ಹೇಗಾದರೂ ಬದುಕೋಣ ಎಂದುಕೊಳ್ಳುವವರು ಕೆಲವರು, ಒಂದಷ್ಟು ದಿನ ಸ್ವಂತ ಖರ್ಚಿನಲ್ಲಿ ನಡೆಸಿ ನಂತರ ಜಾಹೀರಾತುಗಳಿಗೆ ಬಲೆ ಬೀಸೋಣ ಎಂದು ಕನಸು ಕಾಣುವವರು ಇನ್ನು ಕೆಲವರು. ಜಾಹೀರಾತಿನ ಹಂಬಲವೂ ಬೇಡ, ಪಕ್ಷಗಳ ಬೆಂಬಲವೂ ಬೇಡ, ಕೇವಲ ಆಸಕ್ತಿಗಾಗಿ ನಡೆಸಿಕೊಂಡು ಹೋಗುತ್ತೇವೆ ಎಂಬ ಛಲದಲ್ಲಿ ಮುನ್ನುಗ್ಗುವವರೂ ಇದ್ದಾರೆ. ಏನೇ ಈ ವೆಬ್ ಪತ್ರಿಕೆಗಳು ನಡೆಯಲು ನಿರಂತರವಾಗಿ ಬರಹಗಳ ಪ್ರವಾಹ ಇರಬೇಕು. ಆದರೆ ಬರೆಯುವವರು ಯಾರು? ಅದಕ್ಕಾಗಿ ಒಂದಷ್ಟು ಮಂದಿ ಲೇಖಕರ ಬೆನ್ನುಹಿಡಿಯುವುದು ಅನಿವಾರ್ಯವಾಗುತ್ತದೆ. ಲೇಖಕರಾದರೂ ಎತ್ತು ಮೂತ್ರ ವಿಸರ್ಜನೆ ಮಾಡುತ್ತಹೋದಂತೆ, ಉದ್ದಾನುದ್ದ ಬರೆಯುತ್ತ ಹೋಗುವುದು ಸಾಧ್ಯವಿಲ್ಲ (ಕೆಲವರು ಹಾಗೆ ಬರೆಯುವವರೂ ಇದ್ದಾರೆನ್ನಿ!). ಬರಹಕ್ಕೆ ಅಧ್ಯಯನ ಬೇಕು, ಮಾಹಿತಿಯನ್ನು ಹತ್ತಾರು ಮೂಲ-ಮೂಲೆಗಳಿಂದ ಕಲೆ ಹಾಕಬೇಕು. ಕಲೆ ಹಾಕಿದ್ದನ್ನು ಅಷ್ಟೇ ಕಲಾತ್ಮಕವಾಗಿ ಓದುಗರಿಗೆ ದಾಟಿಸುವ ಜಾಣ್ಮೆ ಬೇಕು. ವೆಬ್ ಪತ್ರಿಕೆಗಳಿಗೆ ಬರೆಯುವ ಆ ಪತ್ರಿಕೆಗಳ ಹಿಟ್ ಸಂಖ್ಯೆಯನ್ನು ಎತ್ತರಿಸುವ ಒಂದು ಗುರುತರ ಜವಾಬ್ದಾರಿಯೂ ಇರುತ್ತದೆ. ಹಾಗಾಗಿ ಹೆಚ್ಚು ಜನಮನ್ನಣೆ ಸಿಗುವಂಥ ವಿಷಯಗಳನ್ನೇ ಆಯ್ದುಕೊಂಡು, ಹೆಚ್ಚು ಜನಕ್ಕೆ ರೀಚ್ ಆಗುವಂಥ ಭಾಷೆಯಲ್ಲೇ ಬರೆದು ಪ್ರಕಟಿಸುವ ಹೆಚ್ಚುವರಿ ಶ್ರಮವನ್ನೂ ಅವರು ಹಾಕಬೇಕಾಗುತ್ತದೆ. ಇಷ್ಟೆಲ್ಲ ಮಾಡಿದ್ದಕ್ಕೆ ಲೇಖಕನಿಗೆ ಸಿಗುವ ಸಂಭಾವನೆ ಏನು? ಬರಹವನ್ನು ಮೆಚ್ಚಿಕೊಂಡು ನೂರು ಜನ ಸೋಷಿಯಲ್ ಮೀಡಿಯಾದಲ್ಲಿ ಒತ್ತಿದ ಲೈಕ್‌ಗಳೇ ಅವನ ಪಾಲಿಗೆ ಸಂಭಾವನೆ! ಸಾಮಾಜಿಕ ಅಸಮಾನತೆಯ ಬಗ್ಗೆ ಭೀಕರವಾಗಿ ಬರೆದು ಚಚ್ಚಿಹಾಕಿದ ಬಂಡಾಯಗಾರ ಲೇಖಕನಿಗೆ ಬಿಟ್ಟಿಯಾಗಿ ಬರೆಸಿಕೊಂಡು ಪತ್ರಿಕೆ ತನ್ನನ್ನು ಶೋಷಿಸಿತೆಂಬುದರ ಅರಿವು ಮಾತ್ರ ಇರುವುದಿಲ್ಲ. ದುರಂತ ಅಲ್ಲವೆ ಇದು?

ಈ ಮೇಲಿನ ಸಂದರ್ಭಗಳಲ್ಲೆಲ್ಲ ಬರಹಗಾರರು ಮೋಸದ ಸಣ್ಣಪುಟ್ಟ ಹೊಂಡಗಳಲ್ಲಿ ಬಿದ್ದರು ಎನ್ನಬಹುದು. ಆದರೆ ಅವರನ್ನು ಬೀಳಿಸಲೆಂದೇ ತೋಡಿದ ಒಂದು ಖೆಡ್ಡಾ ಕೂಡ ಇದೆ. ಅದಕ್ಕೆ ಪುಸ್ತಕ ಪ್ರಕಾಶನ ಎಂದು ಹೆಸರು. ಕೆಲವು ತಿಂಗಳ ಹಿಂದೆ ಓರ್ವ ಪರಿಚಿತ ಲೇಖಕ ನನ್ನನ್ನು ಸಂಪರ್ಕಿಸಿ ಒಂದು ಮಾಹಿತಿ ಬೇಕು ಎಂದರು. ಏನು ಎಂದು ಅವರು ಹೇಳಿದ್ದು, ನಾನು ಇದುವರೆಗೆ ಬರೆದ ಹಲವಾರು ಲೇಖನಗಳನ್ನು ಒಟ್ಟು ಸೇರಿಸಿ ಪುಸ್ತಕ ಮಾಡಲೆಂದು ಒಂದು ಪ್ರಕಾಶನ ಸಂಸ್ಥೆ ಮುಂದೆ ಬಂತು. ಪ್ರಕಾಶಕರು ನನ್ನಿಂದಲೇ ಆ ಬರಹಗಳ ಡಿಟಿಪಿ ಕೆಲಸ ಮಾಡಿಸಿದರು. ಅಚ್ಚುಕಟ್ಟಾಗಿ ಮಾಡಿಸಿಕೊಟ್ಟೆ. ಈಗ, ತಮ್ಮ ಪ್ರಕಾಶನದಿಂದ ಹೊರತರುವುದಾದರೆ 30,000 ರುಪಾಯಿ ಖರ್ಚಾಗುತ್ತದೆ, ಅದನ್ನು ಭರಿಸಿ ಎಂದು ಹೇಳುತ್ತಿದ್ದಾರೆ. ಏನು ಮಾಡಲಿ? ಪುಸ್ತಕ ಪ್ರಕಟಿಸಿ, ಪ್ರಕಟವಾದ ಪುಸ್ತಕದ ಬೆಲೆಯ ಮೇಲೆ 8ರಿಂದ 10% ರಾಯಧನ ಕೊಡುವುದು ಹಿಂದೆ ಪದ್ಧತಿ. ಹಾಗೆ ರಾಯಧನ ಕೊಡುವುದನ್ನು ಇಂದು ಕನ್ನಡದ ಬಹುತೇಕ ಸಂಸ್ಥೆಗಳು ನಿಲ್ಲಿಸಿವೆ. ಪುಸ್ತಕ ಮಾರಾಟವಾಗುವುದಿಲ್ಲ ಎಂಬುದು ಅವುಗಳ ನಿತ್ಯದ ಗೊಣಗಾಟ. ತಮಾಷೆಯೆಂದರೆ ಹಾಗೆ ಗೊಣಗುವ ಯಾವೊಬ್ಬ ಪ್ರಕಾಶಕನೂ ಇದುವರೆಗೆ ತನ್ನ ವ್ಯಾಪಾರ ಬಿಟ್ಟು ಜವಳಿ ಅಂಗಡಿ ಇಟ್ಟಿಲ್ಲ! ಕನ್ನಡದಲ್ಲಿ ಪುಸ್ತಕ ಪ್ರಕಟಿಸುತ್ತಿರುವ ಬಹಳಷ್ಟು ಲೇಖಕರಿಗೆ, ಪ್ರಸಿದ್ಧರಿಗೂ ಕೂಡ, ಸಂಭಾವನೆ ಸಿಗುವುದಿಲ್ಲ ಎಂಬುದು ನಗ್ನಸತ್ಯ. ತಾನೆಷ್ಟು ಪ್ರತಿಗಳನ್ನು ಅಚ್ಚು ಹಾಕಿದನೆಂದು ಪ್ರಕಾಶಕ ಲೇಖಕನಿಗೆ ಸತ್ಯ ಹೇಳುವುದಿಲ್ಲ. ಹೊಸ ಮುದ್ರಣ ಹಾಕಿಸಿದಾಗ ತಿಳಿಸುವುದಿಲ್ಲ. ಇನ್ನು ಕೆಲವು ಕಡೆ ಮೊದಲ ಮುದ್ರಣಕ್ಕೆ 10% ರಾಯಧನ ಕೊಟ್ಟು, ಎರಡನೇ ಮುದ್ರಣಕ್ಕೆ 5% ರಾಯಧನ ಕೊಡುವ ಪದ್ಧತಿ ಇದೆ. ಇದು ಯಾವ ಲೆಕ್ಕ ಎಂಬುದು ನನಗಂತೂ ಅರ್ಥವಾಗಿಲ್ಲ. ರಾಯಲ್ಟಿ ಕೊಡುವುದು ಹಾಗಿರಲಿ, ಪುಸ್ತಕಕ್ಕೆ ನೀವೇ ದುಡ್ಡು ಕೊಡಿ, ಪ್ರಕಟಿಸಿ ಕೊಡುತ್ತೇವೆ ಎನ್ನುವುದು ಈಗಿನ ಟ್ರೆಂಡ್. ಸಾಯುವ ಮೊದಲು ತಮ್ಮ ಹೆಸರಲ್ಲಿ ಒಂದಾದರೂ ಪುಸ್ತಕವಿರಬೇಕೆಂಬುದು ಬಹಳಷ್ಟು ಸಾಹಿತಿಗಳ ಹಂಬಲವಾಗಿರುವುದರಿಂದ ಅವರ ಆ ಆಸೆಯನ್ನು ಪ್ರಕಾಶಕರು ಹೀಗೆ ಎನ್‌ಕ್ಯಾಶ್ ಎನ್ನಬಹುದು.

ನನ್ನದೇ ಒಂದು ಅನುಭವ ಹೇಳುವುದಾದರೆ, ಪ್ರಧಾನಮಂತ್ರಿಗಳು ಬರೆದ ಒಂದು ಕೃತಿಯ ಕನ್ನಡ ಅನುವಾದವನ್ನು ಮಾಡಿಕೊಡಬೇಕಾದ ಕರ್ತವ್ಯ ನನ್ನ ಮೇಲೆ ಬಂತು. ಕೃತಿಯ ಹೂರಣಕ್ಕೆ ಮನಸೋತ ನಾನು ಆ ಕರ್ತವ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸಿದೆ. ಪುಸ್ತಕ ಅಚ್ಚುಮನೆಗೆ ಹೋಗುವವರೆಗೂ ಪ್ರಕಾಶಕರು ದಿನಕ್ಕೆರಡು ಬಾರಿಯೆಂಬಂತೆ ನನ್ನಲ್ಲಿ ಫೋನ್ ಮೂಲಕ ಸಂಭಾಷಿಸಿ ಬೆಣ್ಣೆ ಹಚ್ಚಿದರು. ಆದರೆ, ಪುಸ್ತಕ ಪ್ರಕಟವಾದ ಮರುದಿನವೇ ಅವರು ಅಂತರ್ಧಾನರಾದರು! ಪುಸ್ತಕದಲ್ಲಿ ಅನುವಾದಕರ ಹೆಸರು ಹಾಕದಿರುವುದಕ್ಕೆ ನನ್ನ ಆಕ್ಷೇಪವೇ ಇಲ, ಕನಿಷ್ಠ ಒಬ್ಬನ ಶ್ರಮವನ್ನು ಮುಕ್ತವಾಗಿ ಮೆಚ್ಚುವ ಮನಸ್ಥಿತಿಯಾದರೂ ಇರಬೇಕಲ್ಲ? ಈ ಪುಸ್ತಕವನ್ನು ಮೂವರು ಸಾಹಿತಿಗಳು (ಯಾರೆಂದು ಹೆಸರು ಹೇಳದೆ!) ಕನ್ನಡಕ್ಕೆ ಅನುವಾದಿಸಿದ್ದಾರೆ ಎಂದು ಆ ಪ್ರಕಾಶಕರು ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟರು. ಸಂಭಾವನೆಯ ಮಾತು ಅಂತಿರಲಿ, ನಾನೇ ಅನುವಾದಿಸಿಕೊಟ್ಟ ಪುಸ್ತಕದ ಒಂದೇ ಒಂದು ಗೌರವಪ್ರತಿ ಕೂಡ ನನಗೆ ಇದುವರೆಗೆ – ಕೆಲಸ ಮಾಡಿಕೊಟ್ಟು ವರ್ಷವಾದರೂ – ಬಂದಿಲ್ಲ! ಇದ್ದುದನ್ನು ಇದ್ದಂತೆ ಹೇಳುವ ನನ್ನಂಥವರಿಗೇ ಈ ಗತಿಯಾದರೆ ಇನ್ನು ಅಂಜು-ಅಳುಕಿನ ಮೃದು ಸಾಹಿತಿಗಳಿಗೆ ಆಗುವ, ಆಗಿರುವ ಅನ್ಯಾಯಗಳ ಪ್ರಮಾಣವೆಷ್ಟಿದ್ದೀತು? ಸಾಹಿತಿಗೆ ಸ್ವಾಭಿಮಾನ ಜಾಸ್ತಿ ನೋಡಿ. ಹಾಗಾಗಿ ಅವನು ತಾನಾಗಿ ಪ್ರಕಾಶಕನ ಮುಂದೆ ಅಹವಾಲು ಇಡುವುದಿಲ್ಲ. ಲೇಖಕನ ಈ ಸಂಕೋಚ ಸ್ವಭಾವವೇ ಪ್ರಕಾಶಕರ ಪಾಲಿನ ಅಕ್ಕಿಬೇಳೆ.

ಹಾಗಾದರೆ ಲೇಖಕರಾದವರೆಲ್ಲ ಕೂಳಿಗೆ ಗತಿಯಿಲ್ಲದೆ ಪರದಾಡುತ್ತಿದ್ದಾರೆಯೇ ಎಂದು ಕೇಳಬಹುದು ನೀವು. ಹಾಗೇನಿಲ್ಲ. ಲೇಖಕ ಎಂಬ ಬೋರ್ಡ್ ತಗಲಿಸಿಕೊಂಡೂ ಲಕ್ಷಗಟ್ಟಲೆ ದುಡಿಯುವ ದಾರಿಮಾಡಿಕೊಂಡ ಕೂಳರಿಗೂ ಕಡಿಮೆಯಿಲ್ಲ. ಟಿವಿ ಸೀರಿಯಲ್ಲುಗಳಲ್ಲಿ ತನ್ನ ಹೆಸರನ್ನು ಟೈಟಲ್ ಕಾರ್ಡ್‌ಗಳಲ್ಲಿ ಹಾಕಿಸಿಕೊಂಡು, ಸಂಚಿಕೆಗೆ ರುಪಾಯಿಯಂತೆ ರಾಯಲ್ಟಿ ಪಡೆದು, ತಮ್ಮ ಶಿಷ್ಯಂದಿರಿಂದ ಕೆಲಸ ಮಾಡಿಸಿಕೊಳ್ಳುವ ಸಂಭಾಷಣೆಕಾರರೂ ಕನ್ನಡದಲ್ಲಿದ್ದಾರೆ. ತಾವು ಬರೆದ ನಾಲ್ಕು ಸಂಗತಿಗಳನ್ನೇ ಮತ್ತೆ ಮತ್ತೆ ತಿರುವಿ, ಮಗುಚಿ ಹತ್ತುಹದಿನೈದು ಪುಸ್ತಕಗಳಾಗಿ ಪ್ರಕಟಿಸಿ, ಗ್ರಂಥಾಲಯ ಇಲಾಖೆಗೆ ದಾಟಿಸಿ ಕೈತುಂಬ ದುಡಿಯುವ ಲೇಖಕ-ಕಂ-ಪ್ರಕಾಶಕರೂ ಇದ್ದಾರೆ. ಇತ್ತೀಚೆಗೆ ಸಿಕ್ಕಿದ್ದ ಓರ್ವ ಹಿರಿಯ ಸಂಶೋಧಕರು ಹೇಳಿದರು.

ಕನ್ನಡದ ಹೆಸರಾಂತ ಇತಿಹಾಸ ಸಂಶೋಧಕರೊಬ್ಬರು ತನ್ನ ಒಂದು ಪುಸ್ತಕಕ್ಕೆ ಸರಕಾರದ ಕಡೆಯಿಂದ 10 ಲಕ್ಷ ರುಪಾಯಿಗಳ ಅನುದಾನ ಪಡೆದಿದ್ದರಂತೆ. ಆದರೆ, ಆ ಪುಸ್ತಕವನ್ನು ಇನ್ನೊಬ್ಬರಿಂದ ಕೇವಲ 5000 ರುಪಾಯಿಗಳಿಗೆ ಬರೆಸಿ (ಇದನ್ನು ಘೋಸ್‌ಟ್ ರೈಟಿಂಗ್ ಎನ್ನುತ್ತಾರೆ) ಉಳಿದ 9 ಲಕ್ಷ 95 ಸಾವಿರ ರುಪಾಯಿಗಳನ್ನು ತನ್ನ ಜೇಬಿಗೆ ಆರಾಮಾಗಿ ಇಳಿಸಿಕೊಂಡರಂತೆ. ಕನ್ನಡದಲ್ಲಿ ನಾವು ಯಾರನ್ನೆಲ್ಲ ಗಂಜಿಗಿರಾಕಿಗಳು ಎಂದು ಕರೆಯುತ್ತೇವೋ ಅವರೆಲ್ಲರ ಬರಹಗಳ ಹಣೆಬರಹವೂ ಇದೇ. ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಚಂದ್ರಶೇಖರ ಪಾಟೀಲ, ಮೊಗಳ್ಳಿ ಗಣೇಶ, ರಾಜೇಂದ್ರ ಚೆನ್ನಿ ಮುಂತಾದ ಕನ್ನಡದ ಘನ ಸಾಹಿತಿಗಳ ಒಂದಾದರೂ ಪುಸ್ತಕ ನಿಮಗೆ ನೆನಪಿಗೆ ಬರುತ್ತದೆಯೇ? ಅವರು ಬರೆದ ಒಂದೊಂದೇ ಕೃತಿಗಳು ಕೂಡ ಅವರ ಪಾಲಿಗೆ ಜೀವಮಾನದ ಜೀವನೋಪಾಯಗಳು. ಪುಸ್ತಕ ಬರೆಯಲೊಂದು ಅನುದಾನ, ಪುಸ್ತಕ ಬರೆದಾದ ಮೇಲೆ ಅದಕ್ಕೊಂದು ದೊಡ್ಡ ಸಂಚಿಯ ಪ್ರಶಸ್ತಿ, ಇವೆರಡು ಬಂದರೆ ನಮ್ಮ ರಾಜ್ಯದ ಬಹುತೇಕ ಗಂಜಿಗಿರಾಕಿಗಳು ಖುಷ್.

ಸಾಹಿತಿ ಎಂಬ ಹೆಸರಿಟ್ಟುಕೊಂಡು ಲಕ್ಷವಲ್ಲ, ಕೋಟಿಗಳಲ್ಲಿ ದುಡಿಯಲು ಕೂಡ ಒಂದು ಮಾರ್ಗವಿದೆ. ಅದನ್ನು ಪೀತ ಪತ್ರಿಕೋದ್ಯಮ ಎನ್ನುತ್ತಾರೆ. ಕನ್ನಡದ ಒಬ್ಬರು ಪ್ರಸಿದ್ಧ ಪತ್ರಕರ್ತರು ಮಾತು ಮಾತಿಗೆ ತಾವು 50 ಪೈಸೆಯ ರಿಫಿಲ್ ಬದುಕುತ್ತೇನೆ ಎನ್ನುವುದುಂಟು. ಅಂಥ ಅರ್ಧ ರುಪಾಯಿಯ ರಿಫಿಲ್ ಹಿಡಿದವರ ಇಂದಿನ ಆಸ್ತಿ ಬರೋಬ್ಬರಿ 300 ಕೋಟಿ ರುಪಾಯಿ! ಹೀಗೆ ಸಂಪಾದನೆ ಮಾಡಲು ಸ್ವಲ್ಪ ಗಂಡೆದೆ ಬೇಕು. ಮಾನ ಮರ್ಯಾದೆಗಳು ಕಳಚಿಬಿದ್ದರೂ ನಗ್ನವಾಗಿ ನಿಲ್ಲುವ ಛಾತಿ ಬೇಕು. ಅಂಡರ್ ವರ್ಲ್‌ಡ್ ದೊರೆಗಳನ್ನು ಸಂಭಾಳಿಸುವ ಕಸುವು ಬೇಕು. ಮಧ್ಯೆ ಒಂದೊಮ್ಮೆ ಲಾತಾ ಬಿದ್ದರೂ ತಾಳಿಕೊಳ್ಳುವ, ತಾಳಿಕೊಂಡು ಏನೂ ಆಗಿಲ್ಲವೆಂಬಂತೆ ನಗಬಲ್ಲ ಉಡಾಳತನ ಬೇಕು. ಇಷ್ಟಿದ್ದರೆ ಸಿಕ್ಕಸಿಕ್ಕವರ ಮೇಲೆ ಮುಗಿಬೀಳುತ್ತ ಬರೆದು ಬರಹರಾಕ್ಷಸರೆಂದು ಸಾಕಷ್ಟು ದುಡ್ಡನ್ನು ನೇರವಾಗಿ ಮತ್ತು ಬೇನಾಮಿ ಮಾರ್ಗಗಳಲ್ಲಿ ಮಾಡಿ ಕೂಡಿಹಾಕಬಹುದು. ಸಂಚಿತಪಾಪದಲ್ಲಿ ಸ್ವಲ್ಪವನ್ನಾದರೂ ತೊಳೆದುಕೊಳ್ಳಲು ನಾಲ್ಕು ಜನರ ಕಣ್ಣುಕುಕ್ಕುವಂತೆ ಸ್ವಲ್ಪ ಸಮಾಜ ಕಲ್ಯಾಣದ ಕಾರ್ಯಕ್ರಮಗಳನ್ನೂ ಮಾಡಬಹುದು.

ಮತ್ತೆ ಬಡಲೇಖಕನ ಕತೆಗೇ ಬರುತ್ತೇನೆ. ಒಂದು ಕಾಲದಲ್ಲಿ ಖುಷ್ವಂತ್ ಸಿಂಗ್ ಬರೆದೇ ಬದುಕುತ್ತೇನೆ ಎಂದು ಹಠ ಹಿಡಿದು ಬರೆದು ದಕ್ಕಿಸಿಕೊಂಡರು. ಅವರಿಗೆ ಪ್ರಧಾನಿ-ರಾಷ್ಟ್ರಪತಿಗಳೆಲ್ಲರ ಸಂಗವೂ ಇದ್ದುದರಿಂದ ಬದುಕಿನ ಖರ್ಚು ವೆಚ್ಚಗಳನ್ನು ಬೇರೆ ದಾರಿಯಲ್ಲೂ ತೂಗಿಸಿಕೊಂಡರು ಎನ್ನೋಣ. ಆದರೆ, ಕನ್ನಡದಂಥ ಪ್ರಾದೇಶಿಕ ಭಾಷೆಗಳಲ್ಲಿ ಕತೆ ಏನು? ಸೈಂಟಿಫಿಕ್ ಅಮೆರಿಕನ್ ಪತ್ರಿಕೆಗೆ ಪ್ರತಿ ತಿಂಗಳು ಬರೆಯುತ್ತಿದ್ದ ಮಾರ್ಟಿನ್ ಗಾರ್ಡ್‌ನರ್, ಕೇವಲ ಅದೊಂದೇ ಪತ್ರಿಕೆಗೆ ಅಖಂಡ 25 ವರ್ಷಗಳ ಕಾಲ ಬರೆದು ಆರಾಮಾದ ಜೀವನ ನಡೆಸಿದ. ಅಂಥದೊಂದು ಉದಾಹರಣೆ ಕನ್ನಡದಲ್ಲಿ, ತಮಿಳಿನಲ್ಲಿ, ತೆಲುಗಿನಲ್ಲಿ ಸಿಕ್ಕಲು ಸಾಧ್ಯವೆ? ಇವತ್ತು ಪತ್ರಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಬಂದ ಉದ್ದನೆ ಪೋಸ್ಟುಗಳನ್ನು ಕೂಡ ಲೇಖನಗಳಾಗಿ ಪ್ರಕಟಿಸುವ ಹಂತಕ್ಕೆ ಬಂದಿವೆ.

ಬರಹಗಾರರ ಬಾಹುಳ್ಯವಾಗಿರುವುದರಿಂದ ದಿನಪ್ರತಿ ಪುಟ ತುಂಬಿಸಲು ಏನಾದರೂ ಸಿಕ್ಕೇ ಸಿಗುತ್ತದೆ ಎಂದು ಭಾವಿಸಿರಬಹುದು. ದುಡ್ಡು ಕೇಳದೆ ಕೆಲಸ ಮಾಡಿ. ನಿಮಗೆ ಈಗ ಸಂಭಾವನೆ ಸಿಗದೇ ಇದ್ದರೂ ನಿಮ್ಮನ್ನು ಜನ ಗುರುತಿಸುವುದೇ ನಿಮಗೊಂದು ದೊಡ್ಡ ಪ್ರಶಸ್ತಿ, ಎಂದು ಸಿನೆಮಾ ನಿರ್ದೇಶಕರು ಅಮಾಯಕ ಪ್ರತಿಭೆಗಳನ್ನು ರೈಲು ಹತ್ತಿಸುತ್ತಾರಲ್ಲ? ಹೀಗೇ ಒಂದೆರಡು ವರ್ಷ ನಮ್ಮ ಚಾನೆಲ್ಲಿಗೆ ಸ್ಕ್ರಿಪ್‌ಟ್ ಬರೆಯುತ್ತಿದ್ದರೆ ಒಂದಿಲ್ಲೊಂದು ದಿನ ಟೈಟಲ್ ಕಾರ್ಡ್‌ನಲ್ಲಿ ನಿಮ್ಮ ಹೆಸರೂ ಕಾಣಿಸಿಕೊಳ್ಳುತ್ತದೆ ಎಂದು ಭರವಸೆಯ ಬಲೂನನ್ನು ಟಿವಿಯವರು ಹಾರಿಸುತ್ತಾರಲ್ಲ? ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿ ನಾಲ್ಕು ಜನರ ಕಣ್ಣಿಗೆ ಬಿದ್ದು ಸಿಗುತ್ತೆ ನೋಡಿ – ಅದೇ ನಾವು ನಿಮಗೆ ಕೊಡುವ ಸಂಭಾವನೆ ಎಂದು ಪತ್ರಿಕೆಯವರು ಬುರುಗುನೊರೆ ಊದುತ್ತಾರಲ್ಲ? ನೀವು ಹಸ್ತಪ್ರತಿ ಮತ್ತು ಮೋಲೊಂದಿಷ್ಟು ಸಾವಿರಗಳಷ್ಟು ದುಡ್ಡು ಕೊಟ್ಟರೆ ಸಾಕು, ನಾವು ನಿಮ್ಮ ಕೃತಿಯನ್ನು ಮುದ್ರಿಸಿ ಜಗತ್ತಿನಾದ್ಯಂತ ಹಂಚಿ ನಿಮಗೆ ಉಪಕಾರ ಮಾಡುತ್ತೇವೆ ಎಂದು ಪ್ರಕಾಶಕರು ಕಾಮನಬಿಲ್ಲು ತೋರಿಸುತ್ತಾರಲ್ಲ? ಇವೆಲ್ಲ ಶೋಷಣೆಯ ಹಲವು ಮುಖಗಳು ಎಂದು ಬರಹಗಾರನಿಗೆ ಅನ್ನಿಸದಿದ್ದರೆ ಆತ ಜೀವನಪೂರ್ತಿ ಅವರಿವರ ಕತೆಗಳನ್ನು ಐವತ್ತು ಪೈಸೆಯ ರೀಫಿಲ್ಲಿನಲ್ಲಿ ಗೀಚುತ್ತಲೇ ಇರಬೇಕಾಗುತ್ತದೆ. ಮೆಣಸಿನಕಾಯಿ ಬಜ್ಜಿ ಮಾರುವವನು ಕೂಡ ದಿನಕ್ಕೆ 2000 ರುಪಾಯಿ ಸಂಪಾದಿಸುತ್ತಾನೆ. ಲೇಖಕ ಮಾತ್ರ ಬಿಟ್ಟಿ ಬರೆಯಬೇಕೆಂಬುದು ಯಾವ ನ್ಯಾಯ?

Tags

Related Articles

Leave a Reply

Your email address will not be published. Required fields are marked *

Language
Close