About Us Advertise with us Be a Reporter E-Paper

ಅಂಕಣಗಳು

ಒಡಕಿನ ದನಿ ಏಕೆ?

ಕನ್ನಡನಾಡಿಗೊಂದು ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ- ಸಾರಸ್ವತ ಲೋಕದ ಚಳವಳಿಯ ಇತಿಹಾಸ, ಪ್ರಕೃತಿಯ ಸೊಬಗಿನ ಹೆಸರಿದೆ. ಈ ನಾಡು-ನುಡಿಗೆ ಆಗೊಮ್ಮೆ-ಈಗೊಮ್ಮೆ  ಮಸಿ ಬಳಿಯುವ ಕೆಲಸಗಳೂ ನಡೆದಿವೆ. ಇಂತಹ ಪ್ರಯತ್ನಗಳೆಲ್ಲವನ್ನೂ ಕರುನಾಡಿನ ಜನತೆ ಏಕಧ್ವನಿಯಲ್ಲಿ ಹಿಮ್ಮೆಟ್ಟಿಸಿರುವ ನಿದರ್ಶನಗಳೂ ನಮ್ಮ ಮುಂದಿವೆ. ಆದರೆ, ಈ ರಾಜಕಾರಣ ನಾಡು-ನುಡಿ ಸಂಸ್ಕೃತಿಗಳ ಮಧ್ಯೆ ತೂರಿ ಘಾಸಿ ಮಾಡಲು ಸದಾ ಯತ್ನಿಸುತ್ತಲೇ ಇರುತ್ತದೆ ಮತ್ತು ಇದಕ್ಕೆ ಸಂಬಂಧಿಸಿದ ವಿವಾದವೊಂದನ್ನು ಜೀವಂತವಾಗಿಡುವಂತೆ ನೋಡಿಕೊಳ್ಳುತ್ತದೆ. ಪ್ರಸ್ತುತ ರಾಜ್ಯದಲ್ಲಿ ಅದೇ ರೀತಿಯ ವಾತಾವರಣ ಎದುರಾಗಿದೆ. ಒಗ್ಗಟ್ಟಿನ ರಾಜ್ಯದಲ್ಲಿ ವಿಭಜನೆ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ರಾಜಕಾರಣಿಗಳು ನೀರೆರೆದು ಪೋಷಣೆಗೆ ನಿಂತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ  ಸ್ವಾತಂತ್ರ್ಯದ ಹಕ್ಕು ಇದೆ. ಅದೇ ರೀತಿ ತಮಗೆ ದಕ್ಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವ ಹಕ್ಕೂ ಇದೆ. ಆದರೆ, ಅದಕ್ಕೊಂದು ಕ್ರಮ ಇರುತ್ತದೆ. ಆ ಕ್ರಮದ ಮೂಲಕವೇ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಆದರೆ, ರಾಜಕೀಯ ಪ್ರೇರಿತವಾದ ಯಾವುದೇ ಚಳವಳಿಗಳು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿಲ್ಲ. ಏಕೆಂದರೆ, ಒಂದು ವಿವಾದ ಅಥವಾ ವಿಚಾರವನ್ನು ಮುಂದಿ ಟ್ಟುಕೊಂಡು ನಡೆಸುವ ಹೋರಾಟದ ಮುಂಚೂಣಿಯಲ್ಲಿರುವ ಪಕ್ಷಗಳು ಅಧಿಕಾರಕ್ಕೆ ಬಂದಾಗ ಏನೆಲ್ಲಾ ಮಾಡಿವೆ ಎಂಬ  ಚಿತ್ರಣ ನಮ್ಮ ಕಣ್ಣ ಮುಂದಿದೆ. ಇದೀಗ ಪ್ರತ್ಯೇಕ ರಾಜ್ಯದ ಕೂಗು ಸಹ ಆ ರೀತಿ ಆಗಬಾರದು. ರಾಜಕಾರಣಿಗಳು ತಮ್ಮ ಲಾಭಕ್ಕೋಸ್ಕರ ಈ ಪ್ರತ್ಯೇಕತೆಯ ಹುಯಿಲೆಬ್ಬಿಸುವ ಮೂಲಕ ಅಧಿಕಾರಕ್ಕೇರುವ ಹಿಡನ್ ಅಜೆಂಡಾ ಇಟ್ಟುಕೊಂಡಿರುತ್ತವೆ. ಇನ್ನು ನೆರೆಯ ಆಂಧ್ರಪ್ರದೇಶ ವಿಭಜನೆಯಾಗಿದೆ. ಆದರೆ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಜನರಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಹೆಣಗಾಡುತ್ತಿರುವುದು ಒಂದು ತಾಜಾ ನಿದರ್ಶನವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇ ಕತೆಯ ಮಾತು ಬಿಟ್ಟು ತಲೆ ತಲಾಂತರದಿಂದ ಸೋದರರಂತೆ  ಸಮಸ್ತ ಕನ್ನಡನಾಡಿನ ಜನತೆಯ ಬದುಕು ಇನ್ನಷ್ಟು ಹಸನಾಗುವಂತೆ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ.

Tags

Related Articles

Leave a Reply

Your email address will not be published. Required fields are marked *

Language
Close