ವಿಟ್ಠಲನ ನಾಮ ಶಾಂತಿಧಾಮ, ಸೌಖ್ಯದಾರಾಮ ಏಕೆ ಗೊತ್ತೇ?

Posted In : ಅಂಕಣಗಳು, ತಿಳಿರು ತೋರಣ

ಅಕ್ಷರಗಳು ಆರೋಗ್ಯವರ್ಧಕ ಟಾನಿಕ್ ಆಗಬಲ್ಲವೇ? ಇನ್ನೂ ನಿಖರವಾಗಿ ಹೇಳಬೇಕೆಂದರೆ, ಅಕ್ಷರಗಳ ಉಚ್ಚಾರ ನಮ್ಮ ಆರೋಗ್ಯವು ಸುಸ್ಥಿತಿಯಲ್ಲಿರುವುದಕ್ಕೆ ನೆರವಾಗಬಲ್ಲದೇ? ಮಹಾಪ್ರಾಣ ಅಕ್ಷರಗಳು ನಿಜಕ್ಕೂ ಪ್ರಾಣಪೋಷಕ ಆದ್ದರಿಂದಲೇ ಅವುಗಳಿಗೆ ಆ ಹೆಸರು ಬಂದದ್ದಿರಬಹುದೇ? ಕಳೆದವಾರ ನನ್ನ ಸ್ನೇಹಿತರೊಬ್ಬರು ಕಳಿಸಿದ ಮಿಂಚಂಚೆ ಓದಿದ ಮೇಲೆ ಈ ಬಗ್ಗೆ ತೀವ್ರ ಜಿಜ್ಞಾಸೆ, ಕುತೂಹಲ ಹುಟ್ಟಿದೆ. ಅದೇ ಕುತೂಹಲವನ್ನು ನಿಮಗೂ ಒಂಚೂರು ದಾಟಿಸಿಬಿಡುವಾ ಅಂದುಕೊಂಡು ಇವತ್ತಿನ ಈ ಲೇಖನ. ಯಾವುದೇ ರೀತಿಯಲ್ಲೂ ನಿಮ್ಮ ಬ್ರೈನ್‌ವಾಷ್ ಮಾಡುವ ಉದ್ದೇಶವಲ್ಲ. ‘ಇದಕ್ಕೆ ಲೈಕ್ ಒತ್ತಿ. ಸಾಧ್ಯವಾದಷ್ಟು ಶೇರ್ ಮಾಡಿ.’ ಎಂದು ಗೋಗರೆಯುವ ಧಾಟಿಯಂತೂ ಅಲ್ಲವೇ ಅಲ್ಲ.

ಹೆಚ್ಚೆಂದರೆ ಮಿದುಳಿಗೆ ಮೇವು ಅಷ್ಟೇ. ಮಿಂಚಂಚೆ ಕಳಿಸಿದ ಸ್ನೇಹಿತನ ಹೆಸರು ಕರುಣಾಕರ ಕಂಚುಕಾರ. ಮೂಲತಃ ಕುಂದಾಪುರದವರು. ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ, ಒಂದಷ್ಟು ವರ್ಷ ಸೌದಿ ಅರೇಬಿಯಾದಲ್ಲಿದ್ದು, ಈಗ ಬೆಂಗಳೂರಿಗೆ ಮರಳಿ ಸ್ವಂತ ಉದ್ಯಮ ನಡೆಸುತ್ತಿರುವ ಉತ್ಸಾಹಿ ಸಾಹಸಿ. ನನ್ನ ಸಮಾನವಯಸ್ಕ ಮತ್ತು ಸಮಾನಮನಸ್ಕ ಸಹ ಹೌದು. ನಾನು ಇದುವರೆಗೆ ಮುಖತಃ ಭೇಟಿಯಾಗಿಲ್ಲವಾದರೂ ಪರಸ್ಪರ ಪ್ರೀತಿವಿಶ್ವಾಸ ವರ್ಷಗಳಿಂದಲೂ ಇದೆ. ಯಾಕೆ ಇಷ್ಟು ಹೇಳಿದೆನೆಂದರೆ ಇವರು ಸುಮ್ಸುಮ್ನೆ ಕಾಲಕ್ಷೇಪಕ್ಕೆ ಫಾರ್ವರ್ಡೆಡ್ ಜೋಕುಗಳನ್ನೋ ಇನ್ನಿತರ ಇಂಟರ್‌ನೆಟ್ ಕಸವನ್ನೋ ತಂದು ಸುರಿಯುವವರ ಪೈಕಿ ಅಲ್ಲ. ಪ್ರತ್ಯೇಕವಾಗಿ ನನ್ನ ಗಮನಕ್ಕೆ ತರಲೆಂದು ಇಮೇಲ್ ಕಳಿಸಿದ್ದಾರೆಂದರೆ ಅದರಲ್ಲೇನೋ ತೂಕದ ಸರಕು ಇದೆಯಂತಲೇ ಲೆಕ್ಕ. ಹಾಗೆ ಮೊನ್ನೆಯ ಇಮೇಲ್ ನಲ್ಲಿದ್ದದ್ದು ಅವರ ಮಿತ್ರರೊಬ್ಬರು, ದುಬೈಯಲ್ಲಿರುವ ವೀರೇನ್ ನಾರ್ಕರ್ ಎಂಬುವವರು, ಬರೆದ ಒಂದು ಕುತೂಹಲಕಾರಿ ಸ್ವಾನುಭವ. ಅವರ ಮಿತ್ರವರ್ಗದಲ್ಲಿ ವಾಟ್ಸಾಪ್ ಮತ್ತು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದಂತೆ.

ಕರುಣಾಕರ ಅದನ್ನು ನನಗೆ ಇಮೇಲ್‌ನಲ್ಲಿ ಕಳಿಸಿದ್ದಾರೆ. ‘ಮಹಾಪ್ರಾಣ ಅಕ್ಷರಗಳ ಪ್ರಾಮುಖ್ಯ ಅರಿತೆ’ ಎಂದು ಸಬ್ಜೆಕ್ಟ್‌‌ಲೈನ್ ಬೇರೆ ಕೊಟ್ಟಿದ್ದಾರೆ. ಇಂಗ್ಲಿಷ್‌ನಲ್ಲಿರುವ ಅದನ್ನು ನಾನಿಲ್ಲಿ ಕನ್ನಡೀಕರಿಸಿ ನಿಮ್ಮ ಓದಿಗೆ ಒದಗಿಸುತ್ತಿದ್ದೇನೆ. ಸ್ವತಃ ವೀರೇನ್ ನಾರ್ಕರ್ ನಿಮ್ಮೆದುರಿಗೆ ಕುಳಿತುಕೊಂಡು ಹೇಳುತ್ತಿರುವರೋ ಎಂಬಂತೆ ನೀವಿದನ್ನು ಓದಿಕೊಳ್ಳಿ. ‘ಏಟ್ರಿಯಲ್ ಫಿಬ್ರಿಲೇಷನ್ ಅನ್ನುವುದೊಂದು ಹೃದಯಕ್ಕೆ ಬರುವ ತೊಂದರೆ. ಪ್ರಪಂಚದಲ್ಲಿ ಅನೇಕರನ್ನು ಇದು ಬಾಧಿಸಿದೆ. ಅಷ್ಟೇನೂ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಎದೆಬಡಿತ ಆಗಾಗ ತಾಳ ತಪ್ಪುವುದರಿಂದ ಒಂದೊಮ್ಮೆಗೆ ಗಾಬರಿ ಹುಟ್ಟಿಸುತ್ತದೆ. ನನಗೆ ಸುಮಾರು 2005ರಿಂದೀಚೆಗೆ ಏಟ್ರಿಯಲ್ ಫಿಬ್ರಿಲೇಷನ್ ಇದೆ. ಒಮ್ಮಿಂದೊಮ್ಮೆಲೇ ಎದೆಬಡಿತ ಹೆಚ್ಚಾಗುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದಕ್ಕೋಸ್ಕರ 2006ರಲ್ಲೊಮ್ಮೆ ಮತ್ತು 2012ರಲ್ಲೊಮ್ಮೆ ಆರ್.ಎಫ್ ಎಬ್ಲೇಷನ್ ಎಂಬ ಚಿಕಿತ್ಸೆಯನ್ನೂ ಮಾಡಿಸಿಕೊಂಡಿದ್ದೇನೆ. ಕಳೆದವರ್ಷ ಮತ್ತೊಮ್ಮೆ ಕಾಣಿಸಿಕೊಂಡಿತು. ಮುಂಬಯಿಯಲ್ಲಿನ ಹೃದಯತಜ್ಞ ಡಾ. ಯಶ್ ಲೋಖಂಡ್ವಾಲಾ ಅವರ ಸಲಹೆಯಂತೆ ಮೊನ್ನೆ ಮಾರ್ಚ್ ತಿಂಗಳಲ್ಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಕಾರ್ಡಿಯೊ-ವಿಷನ್ ಮಾಡಿಸಿದೆ. ಏಪ್ರಿಲ್‌ವರೆಗೆ ಚೆನ್ನಾಗಿಯೇ ಇದ್ದ ಎದೆಬಡಿತ ಆಗ ಮತ್ತೊಮ್ಮೆ ಏರುಪೇರಾಯಿತು.

ಈ ಮಧ್ಯೆ ನಾನು ಉದ್ಯೋಗನಿಮಿತ್ತ ದುಬೈಯಲ್ಲಿ ಇರಬೇಕಾಗುವುದರಿಂದ ಇಲ್ಲಿನ ವೈದ್ಯರನ್ನೂ ಭೇಟಿಯಾದೆ. ಡಾ. ಕಿಶೋರ್ ನಿಮ್ಖೇಡ್ಕರ್ ಎಂಬುವರೊಬ್ಬರು ಒಳ್ಳೆಯ ವೈದ್ಯರಿದ್ದಾರೆ. ಅವರು ಇಸಿಜಿ ಪರೀಕ್ಷೆಗೆ ಶಿಫಾರಸು ಮಾಡಿದರು. ಪರೀಕ್ಷೆಯ ವರದಿ ಬಂತು, ಸ್ವಲ್ಪ ತೊಂದರೆ ಇದೆ ಎಂದೇ ಸೂಚಿಸಿತು. ಮುಂಬಯಿಗೆ ಡಾ.ಯಶ್ ಅವರಿಗೆ ಆ ರಿಪೋರ್ಟನ್ನು ಕಳಿಸಿದಾಗ ಅವರು ಇನ್ನೊಂದಾವರ್ತಿ ಕಾರ್ಡಿಯೊ-ವಿಷನ್ ಅಥವಾ ಆರ್.ಎಫ್ ಎಬ್ಲೇಷನ್ ಮಾಡಿಸುವುದು ಒಳ್ಳೆಯದೆಂದು ಸಲಹೆಯಿತ್ತರು. ಜೂನ್ 4ರಂದು ಮುಂಬಯಿಗೆ ಬಂದು ಬಾಂದ್ರಾದಲ್ಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಎಡ್ಮಿಟ್ ಆಗುವಂತೆ ತಿಳಿಸಿದರು. ಈನಡುವೆ ದುಬೈಯಲ್ಲಿದ್ದ ದಿನಗಳಲ್ಲೇ ವಾಟ್ಸಾಪ್‌ನಲ್ಲಿ ಸ್ನೇಹಿತರೊಬ್ಬರು ಕಳಿಸಿದ ಒಂದು ವಿಡಿಯೋಕ್ಲಿಪ್ ನೋಡಿದೆ. ಅದು, ಪಂಢರಾಪುರಕ್ಕೆ ಪ್ರತಿವರ್ಷ ಪಾದಯಾತ್ರೆ ಹೋಗುವ ‘ವಾರ್ಕಾರಿ’ ಭಕ್ತಜನರು ಹೇಗೆ ಹೃದಯದ ತೊಂದರೆಗಳನ್ನು ಮೆಟ್ಟಿನಿಲ್ಲುವವರಾಗುತ್ತಾರೆ ಎಂದು ವೈದ್ಯವಿಜ್ಞಾನ ಸಂಶೋಧಕರು ನಡೆಸಿದ ಒಂದು ಅಧ್ಯಯನದ ಕುರಿತಾದ್ದು.

ಮುಖ್ಯವಾಗಿ ಆ ಯಾತ್ರಿಗಳು ಜಪಿಸುವ ‘ವಿಟ್ಠಲ ವಿಟ್ಠಲ ಜೈ ಹರಿ ವಿಟ್ಠಲ…’ ನಾಮಸಂಕೀರ್ತನದ ಕುರಿತಾದ್ದು. ಪ್ರತಿವರ್ಷ ಆಷಾಢ ಮತ್ತು ಕಾರ್ತಿಕ ಏಕಾದಶಿಗಳಂದು ಪಂಢರಾಪುರದಲ್ಲಿರಲು ಅವರೆಲ್ಲ ಬಹಳ ದಿನಗಳ ಮೊದಲೇ ಪಾದಯಾತ್ರೆ ಆರಂಭಿಸುತ್ತಾರೆ. ಕೆಲವರಂತೂ 200-300 ಕಿ. ಮೀ ದೂರ ಕ್ರಮಿಸಿ ಪಂಢರಾಪುರಕ್ಕೆ ಬರಬೇಕಾಗುತ್ತದೆ. ಅವರಲ್ಲಿ ಪ್ರಾಯ ಸಂದವರು, ದೈಹಿಕವಾಗಿ ಗಟ್ಟಿತನ ಇಲ್ಲದವರು, ಚಿಕ್ಕಪುಟ್ಟ ಕಾಯಿಲೆಗಳಿಂದ ನರಳುವವರೂ ಇರುತ್ತಾರೆ. ಹೃದಯದ ತೊಂದರೆಯಿದ್ದು ವೈದ್ಯರಿಂದ ಬೈಸಿಕೊಂಡವರೂ ಇರುತ್ತಾರೆ. ಆದರೂ ಪಾಂಡುರಂಗ ವಿಟ್ಠಲನ ಮೇಲಿನ ಅದಮ್ಯ ಭಕ್ತಿ ಅವರನ್ನೆಲ್ಲ ಪ್ರತಿವರ್ಷವೂ ಪಂಢರಾಪುರಕ್ಕೆ ಸೆಳೆಯುತ್ತದೆ. ನೂರಾರು ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಿಬರುವ ಆ ವಾರ್ಕಾರಿಗಳು ಪಂಢರಾಪುರದಿಂದ ಊರಿಗೆ ಮರಳಿದಾಗ ಅವರ ಆರೋಗ್ಯದಲ್ಲಿ ಸುಧಾರಣೆ ಆಗಿರುತ್ತದೆ! ಹೃದಯದ ತೊಂದರೆಯಿದ್ದವರಂತೂ ಹೇಗೆ ಉಲ್ಲಸಿತರಾಗಿರುತ್ತಾರೆಂದರೆ ಅವರ ವೈದ್ಯರಿಗೇ ಆಶ್ಚರ್ಯವಾಗುತ್ತದೆ. ಪುಣೆಯಲ್ಲಿನ ಒಂದು ಸಂಶೋಧನಾ ಸಂಸ್ಥೆಯು ಈ ಕುರಿತು ಅಧ್ಯಯನ ನಡೆಸಿದೆ.

ವರ್ಷಗಳ ಕಾಲ ಸಂಶೋಧನೆಯ ನಂತರ ಆ ತಜ್ಞರು ಕಂಡುಕೊಂಡಿರುವುದೇನೆಂದರೆ ವಾರ್ಕಾರಿ ಭಕ್ತರ ಆರೋಗ್ಯ ಪವಾಡಕ್ಕೆ ವಿಟ್ಠಲ ನಾಮಸಂಕೀರ್ತನವೇ ಕಾರಣ. ಅದರಲ್ಲೂ ‘ಟ್ಠ’ ಎಂಬ ಉಚ್ಚಾರವು ನೇರವಾಗಿ ಹೃದಯವನ್ನು ಮೀಟುತ್ತದೆ. ಹೃದಯಕ್ಕೆ ಒಂದು ರೀತಿಯ ಅನನ್ಯ ಕಂಪನವನ್ನು ಕೊಡುತ್ತದೆ. ಹೃದಯದ ಮಟ್ಟಿಗೆ ಅದೊಂದು ರೀತಿಯಲ್ಲಿ ವ್ಯಾಯಾಮ ಇದ್ದಂತೆ. ಒಮ್ಮೆ 25 ಮಂದಿ ಹೃದ್ರೋಗಿಗಳ ಮೇಲೆ ಒಂದು ಪ್ರಯೋಗ ನಡೆಸಲಾಯಿತು. ಅವರೆಲ್ಲರಿಗೂ 15 ದಿನಗಳ ಕಾಲ ಪ್ರತಿದಿನವೂ ಹತ್ತು ನಿಮಿಷ, ನಿಶ್ಶಬ್ದವಾದ ಜಾಗದಲ್ಲಿ ಕುಳಿತು ಅಥವಾ ನಿಂತುಕೊಂಡು ‘ವಿಟ್ಠಲ ವಿಟ್ಠಲ…’ ಎಂದು ಮೆಲುದನಿಯಲ್ಲಿ ಉಚ್ಚರಿಸಲಿಕ್ಕೆ ಹೇಳಲಾಯಿತು. 25 ಮಂದಿಯ ಹೃದಯಾರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂತು. ಅಧಿಕ ರಕ್ತದೊತ್ತಡವುಳ್ಳವರು, ಏಟ್ರಿಯಲ್ ಫಿಬ್ರಿಲೇಷನ್ ಇದ್ದವರು ಬಹಳವೇ ಗೆಲುವಿನಿಂದ ಇದ್ದರು. ಆ ವಿಡಿಯೋ ಕ್ಲಿಪ್ ನನ್ನನ್ನು ಗಾಢವಾಗಿ ಪ್ರಭಾವಿಸಿತು. ನಾನು ದುಬೈಯಲ್ಲಿರುತ್ತಲೇ ಮೇ 15ರಿಂದ ಪ್ರತಿದಿನ ಹತ್ತು ನಿಮಿಷ ವಿಟ್ಠಲ ನಾಮೋಚ್ಚರಣೆ ಮಾಡತೊಡಗಿದೆ. ವೈದ್ಯರು ಶಿಫಾರಿಸಿದ್ದರಾದರೂ ಇಸಿಜಿ ಮಾಡಿಸಿಕೊಳ್ಳಲು ನನಗೆ ಸಾಧ್ಯವಾಗಿರಲಿಲ್ಲ.

ಹಾಗೆಯೇ ಮುಂಬಯಿಗೆ ಬಂದಿಳಿದೆ. ಡಾ. ಯಶ್ ಅವರ ಎಪಾಯಿಂಟ್‌ಮೆಂಟ್ ನಂತೆ ಜೂನ್ 4ರಂದು ಬಾಂದ್ರಾದಲ್ಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಹೋದೆ. ಸರ್ಜರಿಗೆ ಮತ್ತು ಅದಾದ ಮೇಲೆ ಚಿಕಿತ್ಸೆಗೆಂದು ಐಸಿಯುದಲ್ಲಿ ಇರಬೇಕಾಗುತ್ತದೆ ಅಂತೆಲ್ಲ ನಾನು ಮಾನಸಿಕ ಸಿದ್ಧತೆ ಮಾಡಿಕೊಂಡೇ ಹೋಗಿದ್ದೆ. ಜೂನ್ 5ರಂದು ಡಾ. ಯಶ್ ನನ್ನ ತಪಾಸಣೆಗೆ ಬಂದರು. ಅವರಿಗೆ ಆಶ್ಚರ್ಯದಲ್ಲಿ ಪರಮಾಶ್ಚರ್ಯ! ನನ್ನ ಹೃದಯ ಠಾಕುಠೀಕಾಗಿ ಕೆಲಸ ಮಾಡುತ್ತಿತ್ತು! ದುಬೈಯಲ್ಲಿ ಏನಾದರೂ ಚಿಕಿತ್ಸೆ ಮಾಡಿಸಿಕೊಂಡ್ರಾ ಎಂದು ಅವರು ನನ್ನಲ್ಲಿ ಕೇಳಿದರು. ಏನಿಲ್ಲ, ದಿನಾ ಹತ್ತು ನಿಮಿಷ ವಿಟ್ಠಲ ನಾಮೋಚ್ಚರಣೆ ಮಾಡುತ್ತಿದ್ದೆ ಎಂದೆ. ಆದರೂ ಅವರು ದೃಢೀಕರಣಕ್ಕಾಗಿ ಹೋಲ್ಟರ್ ಟೆಸ್ಟ್‌ ಅಂತೊಂದು ಮಾಡಿಸಿದರು. 24 ಗಂಟೆ ಕಾಲ ಹೃದಯದ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗಮನಿಸುವ ಪರೀಕ್ಷೆ ಅದು. ಅದರಲ್ಲಿಯೂ ನನ್ನ ಹೃದಯ ಆರಾಮಾಗಿ ತೇರ್ಗಡೆ ಹೊಂದಿತು. ಸದ್ಯಕ್ಕೆ ಸರ್ಜರಿ ಅಗತ್ಯವಿಲ್ಲ ಎಂದು ಹೇಳಿ ಡಾ. ಯಶ್ ನನ್ನನ್ನು ತತ್‌ಕ್ಷಣ ಡಿಸ್‌ಚಾರ್ಜ್ ಮಾಡಿದರು. ಈಗ ನಾನು ದುಬೈಗೆ ಹಿಂದಿರುಗಿದ್ದೇನೆ. ನನ್ನ ಹೃದಯ ಆರೋಗ್ಯದಿಂದಿರುವುದು ಇಲ್ಲಿನ ನನ್ನ ವೈದ್ಯರಿಗೂ ತೃಪ್ತಿ ಕೊಟ್ಟಿದೆ.

ದಿನಾ ಹತ್ತು ನಿಮಿಷ ವಿಟ್ಠಲ ನಾಮೋಚ್ಚರಣೆ ಈಗಲೂ ಮುಂದುವರಿಸಿದ್ದೇನೆ. ಇದು ಪವಾಡ ಅಲ್ಲ ಏನಲ್ಲ. ಒಂದು ಸರಳ ವಿಚಾರ. ನಾನಿದರ ಫಲಾನುಭವಿ. ಆಸಕ್ತರಿಗೆ, ಅಗತ್ಯವಿದ್ದವರಿಗೆ ಉಪಯೋಗವಾಗಲಿ ಎಂದು ಫೇಸ್‌ಬುಕ್‌ನಲ್ಲಿ ಇದನ್ನು ಬರೆದಿದ್ದೇನೆ. ಇನ್ನೂ ವಿವರ ಬೇಕೆಂದರೆ ಫೋನ್‌ನಲ್ಲಿ, ಇಮೇಲ್‌ನಲ್ಲಿ ಕೊಡಬಲ್ಲೆ.’ -ವೀರೇನ್ ನಾರ್ಕರ್. ಕಂಚುಕಾರರು ಹಂಚಿಕೊಂಡ ಮಿಂಚಂಚೆ ಸಂಚಲನ ಮೂಡಿಸಿತು ನನ್ನಲ್ಲಿ! ಅವರಿಗೆ ಕೃತಜ್ಞತೆಯಿಂದ ಉತ್ತರಿಸಿದೆ. ‘ಇದು ನನಗೆ ತೀವ್ರ ಕುತೂಹಲ ಕೆರಳಿಸಿದೆ. ಅಂಕಣದಲ್ಲೂ ಪ್ರಸ್ತಾವಿಸಬೇಕೆಂಬ ಮನಸ್ಸಾಗಿದೆ. ವೀರೇನ್ ಅವರ ಬಳಿ ಇನ್ನೊಮ್ಮೆ ದೃಢಪಡಿಸಿಕೊಳ್ಳುವಿರಾ?’ ಎಂದು ಕೇಳಿದೆ. ಪಾಪ, ಮುತುವರ್ಜಿ ವಹಿಸಿ ಅದನ್ನವರು ಮಾಡಿದರು. ಈನಡುವೆ ‘ಟ್ಠ’ ಉಚ್ಚಾರ ನಿಜಕ್ಕೂ ‘ತಾಕಿತು ಎನ್ನೆದೆಯ…’ ಆಗುವುದು ಹೌದೇ ಎಂದು ತಿಳಿದುಕೊಳ್ಳಲು ನನ್ನದೇ ಆದ ಒಂದು ಪ್ರಯೋಗವನ್ನೂ ಕೈಗೊಂಡೆ. ನಾನೊಬ್ಬ ಬಾತ್‌ರೂಮ್ ಸಿಂಗರ್ ಆದ್ದರಿಂದ ಬಚ್ಚಲುಮನೆಯಲ್ಲಿದ್ದಾಗಲೇ ಅದು ನನಗೆ ಹೊಳೆದದ್ದು. ಆವತ್ತು ಸ್ನಾನ ಮಾಡುವಾಗ ಹಾಡುವ ಬದಲು ಕನ್ನಡ ವರ್ಣಮಾಲೆಯ ಒಂದೊಂದೇ ಅಕ್ಷರಗಳನ್ನು ನಿಧಾನಕ್ಕೆ ಉಚ್ಚರಿಸಿದೆ.

ಕ ದಿಂದ ಮ ವರೆಗಿನ ವರ್ಗೀಯ ವ್ಯಂಜನಗಳ ಉಚ್ಚಾರದ ವೇಳೆ ಹೆಚ್ಚು ಗಮನ ಹರಿಸಿದೆ. ಬೇರೆಬೇರೆ ಪರ್ಮ್ಯುಟೇಶನ್ ಕಾಂಬಿನೇಷನ್ ಗಳಲ್ಲಿ ಅವುಗಳ ಒತ್ತಕ್ಷರ (ಸಂಯುಕ್ತಾಕ್ಷರ) ರೂಪಗಳನ್ನು ಉಚ್ಚರಿಸಿ ನೋಡಿದೆ. ನಡುನಡುವೆ ‘ಟ್ಠ’ ಉಚ್ಚಾರವನ್ನೂ ಸೇರಿಸಿದೆ. ಮಿಕ್ಕವುಗಳಿಗೂ ಇದಕ್ಕೂ ಏನಾದರೂ ವ್ಯತ್ಯಾಸ ಗೊತ್ತಾಗುತ್ತಾ ಎಂದು ಸೂಕ್ಷ್ಮವಾಗಿ ಗಮನಿಸಿದೆ. ತಾರಕದಲ್ಲಿ ಉಚ್ಚರಿಸುವಾಗಿನಕ್ಕಿಂತಲೂ ಮಂದ್ರದಲ್ಲಿ ಉಚ್ಚರಿಸಿದಾಗ ಮಹಾಪ್ರಾಣ ಅಕ್ಷರಗಳು, ಮಹಾಪ್ರಾಣವಿರುವ ಒತ್ತಕ್ಷರಗಳು ಧ್ವನಿಕಂಪನವನ್ನು ದೇಹದ ಒಳಗೆ ಎದೆಯವರೆಗೂ ಮುಟ್ಟುವುದನ್ನು ಗಮನಿಸಲು ಸಾಧ್ಯವಾಯಿತು. ಅದರಲ್ಲೂ ‘ಟ್ಠ’ ಉಚ್ಚಾರವು ಹೃದಯವನ್ನೊಮ್ಮೆ ಲಘುವಾಗಿ ಜಗ್ಗಿದಂತೆ ಮಾಡುತ್ತದೆಂದು ತಿಳಿದುಕೊಂಡೆ! ಯುರೇಕಾ ಎಂದು ಚೀರುತ್ತ ಆರ್ಕಿಮಿಡಿಸ್‌ನಂತೆ ಬಚ್ಚಲುಮನೆಯಿಂದ ಬೆತ್ತಲೆ ಓಡಿ ಬರುವಂಥ ಸನ್ನಿವೇಶವೇ ಅದು! ನಾನು ಹಾಗೆಲ್ಲ ಓಡಲಿಲ್ಲವೆನ್ನಿ. ಆದರೂ, ಪಂಢರಾಪುರಕ್ಕೆ ಹೋಗುವ ವಾರ್ಕಾರಿ ಭಕ್ತಜನರ ಆರೋಗ್ಯದ ಗುಟ್ಟು ವಿಟ್ಠಲ ನಾಮಸ್ಮರಣೆಯಲ್ಲಿ ಇರುವುದು ಎಂದು ನನಗೆ ಆ ಪ್ರಯೋಗದಿಂದ ಮನವರಿಕೆಯಾಯಿತು.

ಬೇರಾವ ಒತ್ತಕ್ಷರಗಳಿಗೂ ಇಲ್ಲದ ವಿಶೇಷ ಶಕ್ತಿಯೊಂದು ‘ಟ್ಠ’ ಒತ್ತಕ್ಷರಕ್ಕಿದೆ ಎಂಬುದು ಸ್ಪಷ್ಟವಾಗಿ ಮನದಟ್ಟಾಯಿತು. ಅಷ್ಟಾಗಿ ನನ್ನ ಪ್ರಯೋಗ ಯಾವುದೇ ಯಂತ್ರೋಪಕರಣ ಬಳಸಿ, ಸ್ವರಕಂಪನದ ಪ್ರಮಾಣ ಶಕ್ತಿ ಸಾಮರ್ಥ್ಯಗಳನ್ನು ಲೆಕ್ಕ ಹಾಕಿ ಮಾಡಿದ್ದಲ್ಲ. ನಿಖರತೆಯಿಂದ ಕೂಡಿದ್ದಲ್ಲ. ಕೇವಲ ಅನುಭವಕ್ಕೆ ಏನು ಬಂತೋ ಅಷ್ಟೇ. ಪುಣೆಯಲ್ಲಿ ಸಂಶೋಧಕರು ಪ್ರಯೋಗಾರ್ಥಿಗಳ ವಿಟ್ಠಲ ನಾಮೋಚ್ಚಾರದ ವೇಳೆ ಶಬ್ದಗ್ರಾಹಿ ವೈಜ್ಞಾನಿಕ ಉಪಕರಣಗಳನ್ನೆಲ್ಲ ಬಳಸಿ ಇನ್ನೂ ಕರಾರುವಾಕ್ಕಾಗಿ ಕಂಡುಕೊಂಡದ್ದಿರಬಹುದು. ಒಟ್ಟಿನಲ್ಲಿ ವೀರೇನ್ ನಾರ್ಕರ್ ಬಣ್ಣಿಸಿದ ಸ್ವಾನುಭವ ಬುರುಡೆಪುರಾಣ ಖಂಡಿತ ಅಲ್ಲ. ಅದರಲ್ಲಿ ತಿರುಳಿದೆ, ಸತ್ಯವಿದೆ. ಮರಾಠಿ ಅಭಂಗಗಳನ್ನು ಕೇಳುವ, ಗುನುಗುನಿಸುವ ಅಭ್ಯಾಸ ನನಗೆ ಮೊದಲಿಂದಲೂ ಇದೆ. ಪಂಡಿತ್ ಭೀಮಸೇನ ಜೋಶಿಯವರು ಹಾಡಿದ ‘ವಿಟ್ಠಲ ವಿಟ್ಠಲ ವಿಟ್ಠಲ ವಿಟ್ಠಲ… ಮಾಝೆ ಮಾಹೇರ ಪಂಢರೀ…, ‘ ತೀರ್ಥ ವಿಟ್ಠಲ ಕ್ಷೇತ್ರ ವಿಟ್ಠಲ…, ‘ವಿಟ್ಠಲ ಗೀತಿ ಗಾವಾ ವಿಟ್ಠಲ ಚಿತ್ತೀ ಘ್ಯಾವಾ… ಮುಂತಾದ ಅಭಂಗಗಳನ್ನೆಲ್ಲ ಅದೆಷ್ಟು ಬಾರಿ ಕೇಳಿದ್ದೇನೋ ಲೆಕ್ಕವೇ ಇಲ್ಲ. ಇದುವರೆಗೂ ಅವುಗಳಲ್ಲಿನ ವಿಟ್ಠಲನನ್ನು ನಾನು ವಿಶೇಷವಾಗಿ ಗಮನಿಸಿರಲಿಲ್ಲ. ಆದರೆ ಈಗ ಆ ವಿಟ್ಠಲನನ್ನು ಕಾಣುವ ನನ್ನ ದೃಷ್ಟಿಕೋನವೇ ಬದಲಾಗಿದೆ. ಎಂತಹ ಅದ್ಭುತ!

ಪಂಢರಾಪುರಕ್ಕೆ ನಾನು ಇದುವರೆಗೆ ಹೋಗಿದ್ದಿಲ್ಲ. ವಾರ್ಕಾರಿಗಳನ್ನು ಕಣ್ಣಾರೆ ನೋಡಿದ್ದಿಲ್ಲ. ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಅದು. ಜ್ಞಾನೇಶ್ವರ, ನಾಮದೇವ, ತುಕಾರಾಮ, ಏಕನಾಥ ಮುಂತಾದ ಸಂತವರೇಣ್ಯರು ರಚಿಸಿದ ಅಭಂಗಗಳು, ಅವುಗಳಲ್ಲಿನ ವಿಟ್ಠಲ ನಾಮೋಚ್ಚಾರ, ಅದು ಅಕ್ಷರಶಃ ಹೃದಯಸ್ಪರ್ಶಿ ಆಗುವುದು, ಹೃದಯವನ್ನು ಸುಸ್ಥಿತಿಯಲ್ಲಿ ಇಡುವುದು… ನಮ್ಮ ಚಿತ್ಪಾವನ ಮರಾಠಿ ಸಮುದಾಯದಲ್ಲೂ ಹಿರಿಯ ತಲೆಮಾರಿನವರು ಪುಟ್ಟ ಮಗುವಿನ ಕೈಯಲ್ಲಿ ಚಪ್ಪಾಳೆ ತಟ್ಟಿಸುತ್ತ ವಿಟ್ಠಲ ವಿಟ್ಠಲ ಎಂದು ಹೇಳಿಸುವುದು… ಅಬ್ಬಾ! ಆಚಾರಗಳಿಗೂ ಆರೋಗ್ಯಕ್ಕೂ ಇರುವ ತಳುಕು ಗಮನಿಸಿದರೆ ಆಶ್ಚರ್ಯವಾಗುತ್ತದೆ! ವಿಟ್ಠಲ ನಾಮೋಚ್ಚಾರ ಎಂದಾಗ ನನಗೆ ಕನ್ನಡದ ಭಕ್ತ ಕುಂಬಾರ ಚಿತ್ರದ ದೃಶ್ಯಗಳೂ, ಹಾಡುಗಳೂ ನೆನಪಾಗುತ್ತವೆ.

ಗೋರ ಮಣ್ಣು ತುಳಿಯುತ್ತ ವಿಟ್ಠಲ ವಿಟ್ಠಲ ಪಾಂಡುರಂಗ ಎಂದು ಮೈಮರೆತಾಗ ಅವನ ಮಗು ಬಂದು ಕಾಲಡಿ ಸಿಕ್ಕು ಸಾಯುವುದು, ಪ್ರಾಯಶ್ಚಿತ್ತವಾಗಿ ಕೈಗಳೆರಡನ್ನೂ ಕಡಿದುಕೊಂಡ ಗೋರ ‘ರಂಗಾ… ವಿಟ್ಠಲಾ… ಎಲ್ಲಿ ಮರೆಯಾದೆ? ಎಂದು ಹಾಡುತ್ತ ಮೈಮರೆತಿದ್ದಾಗಲೇ ಮತ್ತೆ ವಿಟ್ಠಲನ ಅನುಗ್ರಹದಿಂದ ಗೋರನಿಗೆ ಕೈಗಳು ಬರುವುದು… ಅದು ಭಕ್ತಿಯ ಪರಾಕಾಷ್ಠೆ. ಆ ಹಾಡುಗಳನ್ನು ಬರೆಯುವಾಗ ಹುಣಸೂರು ಕೃಷ್ಣಮೂರ್ತಿಯವರಿಗೆ, ಹಾಡುವಾಗ ಪಿ.ಬಿ.ಶ್ರೀನಿವಾಸ್ ಅವರಿಗೆ, ಅಭಿನಯಿಸುವಾಗ ಡಾ.ರಾಜಕುಮಾರ್ ಅವರಿಗೆ ಈ ‘ಟ್ಠ ವಿಚಾರ ಗೊತ್ತಿದ್ದಿರಬಹುದೇ? ಸಂತ ತುಕಾರಾಮ್ ಚಿತ್ರಕ್ಕಾಗಿ ‘ಜಯತು ಜಯ ವಿಟ್ಠಲ…’ ಗೀತೆ ಬರೆದ ಚಿ.ಸದಾಶಿವಯ್ಯ ‘ನಿನ್ನ ನಾಮವು ಶಾಂತಿಧಾಮವು ಸೌಖ್ಯದಾರಾಮ…’ ಎಂದು ಬರೆದದ್ದು ಇದೇ ಕಾರಣದಿಂದ ಇರಬಹುದೇ? ನನ್ನ ಕುತೂಹಲಿ ಮನಸ್ಸು ಪ್ರಶ್ನಿಸುತ್ತದೆ, ಅಚ್ಚರಿಪಡುತ್ತದೆ. ಹಾಗೆಯೇ, ಮಹಾಪ್ರಾಣ ಅಕ್ಷರಗಳ ಇಂತಹ ಅದ್ಭುತ ಮಾಯಾಶಕ್ತಿ ಅರಿಯದೆ ‘ನಮಗೆ ಅವು ಬೇಡವೇ ಬೇಡ’ ಎಂದು ಕೂತಿರುವ ಅಲ್ಪಪ್ರಾಣಿಗಳ ಬಗ್ಗೆ ಮರುಕವೂ ಉಂಟಾಗುತ್ತದೆ.

One thought on “ವಿಟ್ಠಲನ ನಾಮ ಶಾಂತಿಧಾಮ, ಸೌಖ್ಯದಾರಾಮ ಏಕೆ ಗೊತ್ತೇ?

 1. ಜೋಷಿಯವರಿಗೆ
  ನಾನು ನಿಮ್ಮ ಅಂಕಣ ಮೊದಲನೆಯ ಬಾರಿ ಕೇಳದ್ದೇನೆ.
  ನನ್ನ ಅಭಿನಂದನೆಗಳು

  ನೀವುಬರೆದ ವಿಟ್ಠಲ —-ವಿಠ್ಠಲ ಎಂದಿರಬೇಕಿತ್ತು ಎನಿಸುತ್ತದೆ

  ಜಿ ಎನ್ ಪ್ರಸಾದ್
  ಗೊರೂರು

Leave a Reply

Your email address will not be published. Required fields are marked *

one + 15 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top