About Us Advertise with us Be a Reporter E-Paper

ಅಂಕಣಗಳು

ಸೀಮಂತೋನ್ನಯನ ಮಾಡುವುದೇಕೆ?

ಡಾ. ಎ.ಮಾಧವ ಉಡುಪ

ಗಂಡಸು ಮುಳ್ಳು ಹಂದಿಯ ಮೊನಚಾದ ಕಣೆಯ ಮೂಲಕ ಗೀರುತ್ತ ಗರ್ಭಿಣಿಯಾದ ತನ್ನ ಹೆಂಡತಿಯ ಬೈತಲೆ ತೆಗೆದು ತಲೆಗೂದಲನ್ನು ಹಿಂದಕ್ಕೆ ಬಾಚುತ್ತಾನೆ. ಆನಂತರ ಗರ್ಭಿಣಿಯ ತಲೆಯ ಮೇಲೆ ಸಿಂಗಾರ ಹೂವಿನ ಗೊನೆಯ ಜತೆ ಹಣ್ಣಾದ ಅಡಕೆಗಳನ್ನಿಟ್ಟು ಕಟ್ಟಲಾಗುತ್ತದೆ. ಕೊನೆಗೆ ಹೂ ಮುಡಿಸಿ ಆರತಿ ಬೆಳಗಲಾಗುತ್ತದೆ. ಸಾಮಾನ್ಯವಾಗಿ 8 ತಿಂಗಳ ಗರ್ಭಿಣಿಗೆ ಮಾಡುವ ಈ ಸೀಮಂತೋನ್ನಯನ ಸಂಸ್ಕಾರದ ಉದ್ದೇಶವಾದರೂ ಏನು?

ಸಾಮಾನ್ಯವಾಗಿ ಎಂಟನೆಯ ತಿಂಗಳಿನಲ್ಲಿ ಗರ್ಭದಲ್ಲಿರುವ ನರವ್ಯೂಹ, ಶ್ವಾಸಾಂಗವ್ಯೂಹ, ಜೀರ್ಣಾಂಗವ್ಯೂಹಗಳೇ ಮೊದಲಾದ ಆಂತರಿಕ ಅಂಗವ್ಯೂಹಗಳ ಬೆಳವಣಿಗೆ ಉಂಟಾಗುತ್ತದಲ್ಲದೆ, ಚರ್ಮ, ಮೂಳೆ, ಮಾಂಸ ಖಂಡಗಳೂ ಗಟ್ಟಿಯಾಗುತ್ತವೆ. ಆ ಸಮಯದಲ್ಲಿ ತಾಯಿಯಲ್ಲಿ ಉಂಟಾಗುವ ಸದ್ಭಾವನೆಗಳು, ಸದ್‌ಸ್ಪಂದನಗಳು ಮಗುವಿಗೂ ತಟ್ಟಿ, ಮಗುವಿನ ಆ ಬೆಳಸಿನ ಮೇಲೆ ಪರಿಣಾಮ ಬೀರುತ್ತದೆ. ದೇವರ ನೆನಕೆಯ, ಹಿರಿಯರ ಹರಕೆಯ ದಿವ್ಯವಾದ ಪ್ರೀತಿಯ ಪರಿಸರ ನಿರ್ಮಿಸಿ, ಗರ್ಭಿಣಿಯು ಸಂತೋಷವಾಗಿರುವಂತೆ ನೋಡಿಕೊಳ್ಳುವುದರಿಂದ ಸದ್ಭಾವನೆಗಳೇ ಉದ್ದೀಪನಗೊಂಡು, ಗರ್ಭದಲ್ಲಿರುವ ಮಗುವಿನ ಬೆಳಸು ಆರೋಗ್ಯಕರವಾಗಿಯೂ, ಚೆನ್ನಾಗಿಯೂ ಆಗುತ್ತದೆ. ಎಂಟನೆಯ ತಿಂಗಳಿನಲ್ಲಿ ಗರ್ಭಿಣಿಗೆ ಸೀಮಂತೋನ್ನಯನ ಎಂಬ ಸಂಸ್ಕಾರದ ಉದ್ದೇಶ ಅದೇನೇ.

ಸೀಮಂತ ಎಂದರೆ ಬೈತಲೆ; ಉನ್ನಯನ ಎಂದರೆ ಮೇಲೆತ್ತಿ ಬಾಚುವುದು ಎಂದರ್ಥ. ಆದ್ದರಿಂದ ಸೀಮಂತೋನ್ನಯನವು ಬೈತಲೆ ತೆಗೆದು ಮೇಲೆತ್ತಿ ಬಾಚುವುದನ್ನೇ ಪ್ರತಿನಿಧಿಸುತ್ತದೆ. ತಲೆಯನ್ನು ನೇವರಿಸುವುದು, ಮುಂಗುರುಳನ್ನು ತೀಡುವುದು, ತಲೆಗೂದಲನ್ನು ಬಾಚುವುದುಇವೆಲ್ಲ ಪ್ರೀತಿಯ ಅಭಿವ್ಯಕ್ತಿಯನ್ನೇ ಬಿಂಬಿಸುತ್ತವೆ. ಸೀಮಂತೋನ್ನಯನದಲ್ಲಿ ಬೈತಲೆ ತೆಗೆದು ಬಾಚುವ ಮೂಲಕ ಗಂಡನೇ ಗರ್ಭಿಣಿಯಾದ ತನ್ನ ಹೆಂಡತಿಯ ಮೇಲೆ ಪ್ರೀತಿಯ ಮಳೆಗೆರೆಯುತ್ತಾನೆ. ಆತ ದೇವರನ್ನು ಆವಾಹಿಸಿ, ಪ್ರಾರ್ಥಿಸುತ್ತ ಮುಳ್ಳುಹಂದಿಯ ಮೊನಚಾದ ಕಣೆಯ ಗೀರುತ್ತಾ ಗರ್ಭಿಣಿಯಾದ ತನ್ನ ಹೆಂಡತಿಯ ಬೈತಲೆ ತೆಗೆದು ತಲೆಗೂದಲನ್ನು ಹಿಂದಕ್ಕೆ ಬಾಚುತ್ತಾನೆ. ದೇವರ ಕೃಪೆಯಿಂದ ಗರ್ಭಿಣಿಯಾದ ಆಕೆಗೆ ತೊಂದರೆದಾಯಕವಾದ (ಮುಳ್ಳು ಹಂದಿಯಂತಹ) ಅಪಾಯಕಾರಿ ದುಷ್ಟಶಕ್ತಿಗಳೆಲ್ಲ ಸೀಳಲ್ಪಟ್ಟು ನಾಶವಾಗುವಂತಾಗಲಿ, ಗರ್ಭದಲ್ಲಿರುವ ಮಗುವಿನಂತೆ (ಕಣೆಯಂತೆ) ಮೊನಚಾದ ಬುದ್ಧಿಶಕ್ತಿ ಪ್ರೇರಿಸಲ್ಪಡಲಿ; (ಬಾಚುವ ಮೂಲಕ) ತನ್ನ ಮನದನ್ನೆಯ ಮೇಲೆ ಹರಿಸುತ್ತಿರುವ ಪ್ರೀತಿಯ ಧಾರೆಯಿಂದ ಆಕೆ ಪ್ರಸೀದಳಾಗಿ ಮಗುವಿನ ಬೆಳಸು ತುಂಬ ಚೆನ್ನಾಗಿ ಆಗುವಂತಾಗಲಿ ಎಂಬ ಹಾರೈಕೆಗಳನ್ನೇ ಆ ಆಚರಣೆಯು ಧ್ವನಿಸುತ್ತದೆ.

ನಂತರ ಗರ್ಭಿಣಿಯ ತಲೆಯ ಸಿಂಗಾರಹೂವಿನ ಗೊನೆಯನ್ನೂ, ಹಣ್ಣಾದ ಅಡಕೆಗಳನ್ನೂ ಇಟ್ಟು ಕಟ್ಟಲಾಗುತ್ತದೆ. ಅದು ಗರ್ಭದಲ್ಲಿರುವ ಮಗುವಿನ ಬೆಳಸು ಚೆನ್ನಾಗಿ ಆಗಿ ಆಕೆಯು ಸುಫಲವತಿಯಾಗಿ ಕಂಗೊಳಿಸುವಂತಾಗಲಿ ಎಂಬ ಹಾರೈಕೆಯದೇ ದ್ಯೋತಕ. ಆ ವೇಳೆಯಲ್ಲಿ ಹೇಳುವ ಮಂತ್ರಗಳೂ ಆಕೆಯನ್ನು ಹರ್ಷಚಿತ್ತಳಾಗಿಸಿ, ಉಲ್ಲಾಸದಿಂದಿರಿಸುವ, ಭಾವದಿಂದೊಡಗೂಡಿವೆ. ಜತೆಜತೆಗೆ ಆಪ್ತ ಬಂಧುವರ್ಗದವರೂ ಪ್ರೀತಿಯಿಂದ ಆಕೆಯ ಉಡಿಲು ತುಂಬಿಸಿ ಅವಳನ್ನು ಪ್ರಸನ್ನಚಿತ್ತಳನ್ನಾಗಿಸಿ ಉಲ್ಲಾಸದಿಂದಿರುವಂತೆಯೇ ನೋಡಿಕೊಳ್ಳುತ್ತಾರೆ. ಕೊನೆಗೆ ಅರಳಿದ ಹೂ ಮೂಡಿಸಿ, ಆರತಿ ಬೆಳಗುವುದು, ಗರ್ಭದಲ್ಲಿರುವ ಮುದ್ದು ಕಂದನ ಶ್ರೇಯಸ್ಸು ಅರಳಿ, ಭವಿಷ್ಯತ್ತು ಎಂಬುದನ್ನೇ ಸಾಂಗವಾಗುವಂತೆ ಗುರು ಹಿರಿಯರ ಹರಕೆ, ಹಾರೈಕೆ, ದೇವರ ಅನುಗ್ರಹಗಳ ಮೊರೆ ಹೋಗಲು ಪ್ರೇರಿಸುವ, ದೇವರ ನಂಬಿಕೆಯನ್ನು ಬಿಡದೆ ಆಶ್ರಯಿಸಲು ನಿರ್ದೇಶಿಸುವ ಆಚರಣೆ ಇದು.

Tags

Related Articles

Leave a Reply

Your email address will not be published. Required fields are marked *

Language
Close