About Us Advertise with us Be a Reporter E-Paper

ಅಂಕಣಗಳು

ಟಿಪ್ಪು ಜಯಂತಿ ಸರಕಾರ ಏಕೆ ಆಚರಿಸಬೇಕು?

- ಕೆ.ಎಂ. ಶಿವಪ್ರಸಾದ್

ರಾಜ್ಯದಲ್ಲಿ ಎರಡ್ಮೂರು ವರ್ಷಗಳಿಂದ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಕಿಚ್ಚು ಹೊತ್ತಿಕೊಂಡಿದೆ ಅನ್ನುವುದಕ್ಕಿಂತ ಹೊತ್ತಿಸುತ್ತಿದ್ದಾರೆ ಅನ್ನುವುದೇ ಸೂಕ್ತವಾದರೂ, ಅವರು ಬೆಂಕಿ ಹಚ್ಚಲು ಕಾರಣವಾಗುತ್ತಿರುವುದು ರಾಜ್ಯ ಸರಕಾರಗಳ ಮೊಂಡುತನದಿಂದಾಗಿಯೇ. ಟಿಪ್ಪು ಒಬ್ಬ ಮತಾಂಧ, ಕ್ರೂರಿ, ಕನ್ನಡ ವಿರೋಧಿ, ಹಿಂದೂ ವಿರೋಧಿ ಎಂಬ ಆರೋಪಗಳು ಬಿಜೆಪಿ ವಲಯದಿಂದ ಹಾಗೂ ಹಿಂದೂಪರ ಸಂಘಟನೆಗಳಿಂದ ಕೇಳಿ ಬರುತ್ತಿರುವ ಟೀಕೆಗಳಾದರೂ ಕೂಡ ಬಹುಸಂಖ್ಯಾತ ಹಿಂದೂಗಳಿಗೆ ಟಿಪ್ಪು ಆಚರಣೆ ಸ್ವಲ್ಪವೂ ಇಷ್ಟವಿದ್ದಂತೆ ಕಾಣುತ್ತಿಲ್ಲ. ಟಿಪ್ಪು ಮೈಸೂರು ಹುಲಿ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ ಹಾಗೆ ಹೀಗೆ ಎಂದು ಎಷ್ಟೇ ಗುಣಗಾನ ಮಾಡಿ ಮೆಚ್ಚಿಸಲು ಹೊರಟರೂ, ಜನರಿಗೇಕೋ ಸರಕಾರಗಳ ಮತ್ತು ಜಾತ್ಯತೀತವಾದಿಗಳ ಈ ಗುಣಗಾನ ರುಚಿಸುತ್ತಿಲ್ಲ. ಸಾರ್ವಜನಿಕರಿಗೆ ಬೇಡವಾದ ಈ ಜಯಂತಿಯ ಆಚರಣೆಯಿಂದ ಯಾರಿಗೆ ಲಾಭವಾಗುತ್ತಿದೆ ಎನ್ನುವುದೇ ಪ್ರಶ್ನೆ. ಒಂದು ಕಡೆ ಮುಸ್ಲೀಂ ವೋಟ್ ಬ್ಯಾಂಕ್ ತಮ್ಮ ಪಕ್ಷದೆಡೆಗೆ ವಾಲುತ್ತಿದೆ ಎಂದೆಣಿಸಿದರೂ ಕೂಡ ಮತ್ತೊಂದು ಕಡೆ ಒಂದು ಈ ಆಚರಣೆಯಿಂದ ಮುನಿಸಿಕೊಂಡು ಬೇರೆಡೆಗೆ ವಾಲುತ್ತಿದೆ ಎಂಬುದನ್ನು ಅಧಿಕಾರದಲ್ಲಿರುವವರು ಅರಿಯಲು ಸಾಧ್ಯವಾಗದಿರುವುದು ವಿಪರ್ಯಾಸ.

ಯಾವುದೋ ಒಂದು ಜಯಂತಿಯ ಆಚರಣೆಯಿಂದ ಒಂದು ಸಮುದಾಯದ ಮತಗಳೆಲ್ಲ ತಮ್ಮ ಪಕ್ಷಕ್ಕೆ ಹರಿದು ಬರುತ್ತದೆ ಅನ್ನುವುದಾದರೆ, ಅಭಿವೃದ್ಧಿ ಯೋಜನೆಗಳೇಕೆ ಬೇಕು? ಆಯಾ ಸಮುದಾಯದ ಮಹಾನ್ ವ್ಯಕ್ತಿಗಳ ಆಚರಣೆಗಳನ್ನೆಲ್ಲ ವರ್ಷವಿಡೀ ಮಾಡಿಕೊಂಡು ಕಾಲ ಕಳೆದರಾಯಿತಲ್ಲವೇ? ಆಗ ಇಷ್ಟೊಂದು ಕೋಟ್ಯಂತರ ರುಪಾಯಿ ಖರ್ಚು ಮಾಡುವ ಅಗತ್ಯವೇ ಇರುವುದಿಲ್ಲ. ದೇಶ ಅಭಿವೃದ್ಧಿಯ ನಾಗಾಲೋಟದಲ್ಲಿ ಸಾಗುತ್ತಿರುವ ಈ ಸಂದರ್ಭದಲ್ಲಿ ಜಾತಿಗೊಂದು ಆಚರಣೆ ಮಾಡಿಕೊಂಡು ಜನರ ಭಾವನೆಗಳ ನಡುವೆ ಬೆಂಕಿ ಹಚ್ಚಿ ಇಷ್ಟೊಂದು ದುಂದುವೆಚ್ಚ ಮಾಡುತ್ತಿರುವುದಾದರೂ ಏಕೆ? ಜನಸಾಮಾನ್ಯರ ನಡುವಿನ ಸಾಮರಸ್ಯವನ್ನು ಹಾಳು ಮಾಡುವ ಈ ಜಯಂತಿಗಳಿಂದ ಎಷ್ಟು ಬಡಜನರ ಹೊಟ್ಟೆ ತುಂಬುತ್ತಿದೆ? ಪ್ರತಿಯೊಬ್ಬ ಮಹನೀಯರ ಜಯಂತಿಗಳಲ್ಲಿ ಆಯಾ ಜಾತಿಯ ಒಂದಷ್ಟು ಸಂಘಟನೆಗಳಿಗೆ ಒಂದಷ್ಟು ಗಳಿಕೆ ದೊರೆತರೆ, ಈ ಸಮಾರಂಭಗಳ ವೇದಿಕೆಗಳಲ್ಲಿ ನಿಂತು ಇತರ ಜಾತಿಯ ಜನರು ಮತ್ತು ನಾಯಕರ ಮೇಲೆ ದ್ವೇಷದ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಲು ಕೆಲವೊಂದು ಕುತಂತ್ರಿಗಳಿಗೆ ಕೋಟ್ಯಂತರ ಹಣ ಖರ್ಚು ಮಾಡಿ ವೇದಿಕೆ ಒದಗಿಸಿಕೊಡುತ್ತಿರುವುದು ನಾಚಿಕೆಗೇಡು.

ಕಳೆದ ಬಾರಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ಟಿಪ್ಪು ಜಯಂತಿಯ ಆಚರಣೆಗೆ ಕೈಹಾಕಿ ಕೈಸುಟ್ಟುಕೊಂಡಿದೆ. ಸಿದ್ದರಾಮಯ್ಯನವರ ಜನಪ್ರಿಯ ಯೋಜನೆಗಳು, ಭ್ರಷ್ಟಾಚಾರ ರಹಿತ ಆಡಳಿತದ ನಡುವೆಯೂ ಬಿಜೆಪಿಯ ನಾಯಕರು ಹಚ್ಚಿದ ಕೋಮು ಬೆಂಕಿಗೆ ಇಡೀ ರಾಜ್ಯದ ಜನರೇ ಮಾನಸಿಕವಾಗಿ ಬೆಂದು ಹೋಗಿದ್ದಾರೆ. ಮಾತೆತ್ತಿದರೆ ಟಿಪ್ಪು ಹಿಂದೂ ವಿರೋಧಿ, ಕನ್ನಡ ದ್ರೋಹಿ ಅದಕ್ಕಾಗಿ ಇಂತಹ ನೀಚ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡಕೂಡದೆಂದು ಬಾರಿಸುವ ಈ ನಾಯಕರು ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ, ಕೆಂಪೇಗೌಡ ಜಯಂತಿಯನ್ನು ಅದೆಷ್ಟು ವೈಭವಯುತವಾಗಿ ಆಚರಿಸಿದ್ದಾರೆ ಎಂಬುದು ಅವರಿಗೇ ಗೊತ್ತು. ಕೇವಲ ಬಹುಸಂಖ್ಯಾತ ಹಿಂದೂಗಳ ಮತವನ್ನು ತನ್ನೆಡೆ ಸೆಳೆಯಲು, ಮುಸ್ಲಿಂರ ವಿರೋಧಿಯಾಗಿ ಹಿಂದೂಗಳ ಹಿತಕಾಯಲು ಉದ್ಭವವಾಗಿರುವ ಮಹಾನ್ ತಾವು ಎಂದು ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆಯೇ ಹೊರತು ಇದುವರೆಗೂ ಹಿಂದೂಗಳ ಹಿತಕಾಯುವ ಕನಿಷ್ಠ ಮಟ್ಟದ ಕೆಲಸವನ್ನು ಈ ನಾಯಕರು ಮಾಡಿಲ್ಲ ಅನ್ನುವುದೇ ಸತ್ಯ. ಹೀಗೆ ಹಳೇ ಸರಕಾರವೂ ಕೂಡ ಅವರ ಅರಿಯದೇ ಅವರು ಆಡಿದ ಮಂಗಾಟಗಳು ಮತ್ತು ಕುತಂತ್ರಗಳಿಗೆ ತಾವೇ ಕೊರಳೊಡ್ಡಿ ಅದರ ಪಾಪ ಫಲವನ್ನು ಇಂದು ಅನುಭವಿಸುತ್ತಿದ್ದಾರೆ. ಹೀಗಿರುವಾಗ ನೂತನ ಸಮ್ಮಿಶ್ರ ಸರಕಾರವೂ ಕೂಡ ಈ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವುದು ಇದುವರೆಗೂ ರಾಜ್ಯದ ಜನರ ನಡುವೆ ಬೆಂಕಿ ಹಚ್ಚಲು ಯಾವ ವಿಷಯವೂ ಇಲ್ಲದೇ ಕೈಕಟ್ಟಿ ಕುಳಿತಿದ್ದ ಬಿಜೆಪಿಗರಿಗೆ ಮತ್ತೊಂದು ಅಸ್ತ್ರವನ್ನು ತಾವೇ ಕೊಟ್ಟಂತಾಗಿದೆ.

ಹೌದು. ಸಿದ್ದರಾಮಯ್ಯ ನೇತೃತ್ವ ಸರಕಾರ ಇದ್ದ ಅಷ್ಟು ದಿವಸ ಕೇವಲ ಕೋಮುಭಾವನೆಗಳ ಪ್ರಚೋದಿಸುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಕರಾವಳಿಯಲ್ಲಿ ಆದ ಹತ್ಯೆಗಳಿಗೆಲ್ಲ ಕೇಸರಿ ಶಾಲು ಹೊದಿಸಿಕೊಂಡು ಬೀದಿ-ಬೀದಿಯಲ್ಲಿ ಕೀಳು ಪದ ಪ್ರಯೋಗಿಸಿ ನಿಂದಿಸಿದ ರಾಜ್ಯ ಬಿಜೆಪಿಯ ನಾಯಕರು ನಂತರ ದಿನಗಳಲ್ಲಿ ಆ ಹತ್ಯೆಗಳಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲು ಅದೆಷ್ಟು ಹೋರಾಟ ಮಾಡಿದ್ದಾರೆ? ಅಂದು ಬೀದಿ-ಬೀದಿಯಲ್ಲಿ ಆದ ಹತ್ಯೆಗಳ ತನಿಖೆಯನ್ನು ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಹಠ ಹಿಡಿದು ಕುಳಿತಿದ್ದವರು ಚುನಾವಣೆ ಮುಗಿಯುತ್ತಿದ್ದಂತೆ ಅಧಿಕಾರದ ಕುರ್ಚಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸುವುದರಲ್ಲಿ ಮಗ್ನರಾದರು. ಹೊರತು ಹತ್ಯೆಯಾದವರ ಆತ್ಮಕ್ಕೆ ಶಾಂತಿ ದೊರಕಿಸಿಕೊಡುವ, ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸುವ ಪ್ರತಿಜ್ಞೆ ಮರೆತೇ ಹೋಯಿತು. ಅಂತಹ ಒಂದೇ-ಒಂದು ಪ್ರಯತ್ನ ಕೂಡ ಬಿಜೆಪಿ ನಾಯಕರಿಂದ ಆಗಿಲ್ಲ. ಪರಿಸ್ಥಿತಿ ಹೀಗಿರುವಾಗ, ವಿವಾದದಿಂದ ದೂರವುಳಿದು ಅಂತರ ಕಾಯ್ದುಕೊಳ್ಳದೇ ಹಾಲಿ ಮುಖ್ಯಮಂತ್ರಿಯೂ ಎಡವುತ್ತಿರುವುದು ಅಪೇಕ್ಷಣೀಯವಲ್ಲ. ಈ ಹಿಂದೆ ತನ್ನ ಸರಕಾರ ಯಾವುದೇ ಮತೀಯ ಭಾವನೆ ಕೆರಳಿಸುವ ಕೆಲಸ ಮಾಡುವುದಿಲ್ಲ. ಅಂತಹ ಕೆಲಸಗಳಿಗೆ ಯತ್ನಿಸುವವರಿಗೆ ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಮತ್ತೆ ಟಿಪ್ಪು ಆಚರಣೆಗೆ ಅಸ್ತು ಎಂದಿರುವುದು ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ದೊಡ್ಡಮಟ್ಟದ ಎಡವಟ್ಟು ಸೃಷ್ಟಿಸಲಿದ್ದು ಬಹುಸಂಖ್ಯಾತ ಹಿಂದೂಗಳ ಮತ ಕ್ರೋಡೀಕರಣಕ್ಕೆ ಬೀಸಿದ ಬಲೆಯಾಗಿದೆ ಅಷ್ಟೇ.

ಕುಮಾರಣ್ಣನ ಮುಂದಿದೆ ಕೇವಲ ಅದೊಂದು ದಾರಿ…ಯಾರು ಏನೇ ತಡಬಡಾಯಿಸಿದರೂ ಎಷ್ಟೇ ಜಾತ್ಯತೀತವಾದಿಗಳೆಂದು ಪೋಸುಕೊಟ್ಟರು ಕೂಡ ಒಂದಲ್ಲ ಒಂದು ಬಗೆಯಲ್ಲಿ ಪ್ರತಿಯೊಬ್ಬರೂ ಒಂದೊಂದು ಜಾತಿಯನ್ನು ಓಲೈಸಲು ಪ್ರಯತ್ನಿಸುವುದು ಎದ್ದು ಕಾಣುತ್ತಿದೆ. ಈ ಮಧ್ಯೆ ಈಗ ಆಚರಿಸುತ್ತಿರುವ ಜಯಂತಿಗಳ ಆಚರಣೆಯನ್ನು ರದ್ದು ಪಡಿಸುವುದು ಟಿಪ್ಪು ಜಯಂತಿ ವಿವಾದದ ಮಧ್ಯೆ ತರಹದ ವಿವಾದಗಳಿಗೆ ಎಡೆಮಾಡಿಕೊಡಲು ಸಾಧ್ಯ. ಆದ್ದರಿಂದ ಎಲ್ಲಾ ಜಯಂತಿಗಳ ಆಚರಣೆಯನ್ನು ಆಯಾ ವರ್ಷದ ಒಂದು ದಿನದಲ್ಲಿ ಸರಕಾರಿ ರಜೆ ಸಹಿತ ನಾಡ ಉತ್ಸವವನ್ನಾಗಿ ಆಚರಿಸುವ ನಿರ್ಧಾರವನ್ನು ಪ್ರಕಟಿಸಿ ಮಹಾನ್ ವ್ಯಕ್ತಿಗಳಿಗೆ ಅಂಟಿರುವ ಜಾತಿ-ಧರ್ಮದ ಹಣೆಪಟ್ಟಿಯನ್ನು ಕಳಚುವಂತೆ ಮುಖ್ಯಮಂತ್ರಿಗಳು ಮಾಡಬಹುದು. ಈ ಮೂಲಕ ತಮ್ಮ ವಿಶೇಷತೆ ಮೆರೆಯಬಹುದು. ಅದು ಬಿಟ್ಟು ಕಾಂಗ್ರೆಸ್‌ನೊಂದಿಗೆ ಸರಕಾರ ರಚಿಸಿರುವ ಕಾರಣಕ್ಕೆ ಟಿಪ್ಪು ಜಯಂತಿಯ ಆಚರಣೆಗೆ ಮುಂದಾಗಿ ಎರಡು ರಾಷ್ಟ್ರೀಯ ಪಕ್ಷಗಳ ಇಕ್ಕಳದಲ್ಲಿ ಸಿಲುಕಿದ ಇಲಿಯಂತಾಗುವುದು ಏಕೆಂದರೆ ಒಂದು ಪ್ರಾದೇಶಿಕ ಪಕ್ಷಕ್ಕೆ ಕಳಂಕ ಅಂಟಿಕೊಂಡರೆ ಅದರಿಂದ ಹೊರಬರುವುದು ಅಷ್ಟೊಂದು ಸುಲಭವಲ್ಲ. ಆದರೆ ರಾಷ್ಟ್ರೀಯ ಪಕ್ಷಗಳಿಗೆ ಅದು ಅಷ್ಟೊಂದು ಕಷ್ಟದ ಕೆಲಸವಲ್ಲ ಅನ್ನುವುದನ್ನು ಸಿಎಂ ಅರಿಯಬೇಕು. ಸರಕಾರ ಟಿಪ್ಪು ಜಯಂತಿಯ ಆಚರಣೆಯಿಂದ ಹೊರಬರುವುದು ಒಟ್ಟಿನಲ್ಲಿ ಮುಖ್ಯ. ಯಾವುದೇ ಮತೀಯ, ಜಾತಿಯ ಕಲಹದೊಳಗೆ ತಲೆಹಾಕದೇ ಇರುವುದು ಒಂದು ವರ್ಗದಲ್ಲಿ ಒಳ್ಳೆಯ ಅಭಿಪ್ರಾಯ ರೂಪಿಸಬಹುದು. ಕುಮಾರ ಸ್ವಾಮಿ, ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಉತ್ತಮ ನಾಯಕರಾಗುತ್ತಾರೋ ಅಥವಾ ತಪ್ಪು ಹಾದಿ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕುತ್ತಾರೋ ಎಂಬುದು ಅವರ ಕೈಯಲ್ಲೇ ಇದೆ.

ಸರಕಾರ ಆಚರಣೆಗೆ ಮನಸ್ಸು ಮಾಡಿದ ಕೂಡಲೇ ಮಗದೊಂದು ಬಾರಿ ಟಿಪ್ಪು ಪರ-ವಿರೋಧಿ ಅಭಿಪ್ರಾಯಗಳು ಯಾವುದೇ ತಳಹದಿಯಿಲ್ಲದೆ ಮತ್ತೆ ಯದ್ವಾತದ್ವಾ ಹರಿದಾಡುತ್ತಿವೆ. ಟಿಪ್ಪು ಸುಲ್ತಾನ್ ವೀರಾಧಿವೀರನೋ ಅಥವಾ ಹಿಂದೂ ವಿರೋಧಿಯೋ, ಕನ್ನಡ ದ್ರೋಹಿಯೋ ಅಥವಾ ಈ ಹಿಂದೆ ಟಿಪ್ಪುವಿನ ಬಗೆಯಿದ್ದ ಇತಿಹಾಸಗಳೆಲ್ಲ ಸುಳ್ಳೇ, ಸುಳ್ಳು ಅನ್ನುವುದಾದರೆ ಸತ್ಯ ಯಾವುದು ಮುಂತಾದವೆಲ್ಲ ಬಿಡಿಸಲಾರದಷ್ಟು ಸಿಕ್ಕಾಗಿವೆ. ಇತಿಹಾಸಕಾರರು ಬರೆದಿಟ್ಟಿರುವ ಯಾವ ಇತಿಹಾಸದಲ್ಲಿ ಲೋಪವಿದೆ ಸತ್ಯ ಅರಿಯಲು ಒಂದು ಸಮಿತಿಯನ್ನು ರಚಿಸುವಂತೆ ಸ್ವತಃ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಕರ್ನಾಟಕ ಸಲ್ಲಿಸಬಹುದಲ್ಲ?. ಅಲ್ಲಿಯವರೆಗೂ ಟಿಪ್ಪು ಜಯಂತಿಯ ಆಚರಣೆಯನ್ನು ಸರಕಾರದ ಆಚರಣೆಯ ಬದಲಾಗಿ ಖಾಸಗಿ ಕಾರ್ಯಕ್ರಮದಂತೆ ಆಚರಿಸಿಕೊಳ್ಳಲು ಅನುಮತಿ ನೀಡಿದರೆ ವಿಹಿತ. ಹಾಗಲ್ಲದಿದ್ದರೆ, ಟಿಪ್ಪು ಜಯಂತಿ ಆಚರಣೆಗೆ ನೀಡುವ ಅನುಮತಿಯನ್ನು ಹನುಮ ಜಯಂತಿಯ ಆಚರಣೆಗೂ ನೀಡಿ, ಬಹುಸಂಖ್ಯಾತ ಹಿಂದೂಗಳ ಗಣೇಶ ಹಬ್ಬಕ್ಕೆ, ಹನುಮ ಜಯಂತಿಗೆ ಇನ್ನಿಲ್ಲದ ಷರತ್ತುಗಳನ್ನು ವಿಧಿಸಬೇಡಿ, ಅಲ್ಪಸಂಖ್ಯಾತರ ಓಲೈಕೆಗೆ ಬೇಡದ ಗೋಜಲು ಎಂಬ ಬೇಡಿಕೆಗಳು ಮತ್ತೆ ಮೊಳಗುತ್ತವೆ. ಇದಕ್ಕೆ ಕೊನೆ ಎಂಬುದೇನಾದರೂ ಇದೆಯೇ?

Tags

Related Articles

Leave a Reply

Your email address will not be published. Required fields are marked *

Language
Close