About Us Advertise with us Be a Reporter E-Paper

ಅಂಕಣಗಳು

ಸರಕಾರ ಅಸ್ಥಿರಗೊಳಿಸಲು ಕುತಂತ್ರ-ಷಡ್ಯಂತ್ರ ಮಾಡಬೇಕೇ…?!

- ಕೆ.ಎಂ. ಶಿವಪ್ರಸಾದ್

ಐದು ವರ್ಷಗಳ ಕಾಲ ಸಿದ್ದರಾಮಯ್ಯನವರನ್ನು ‘ನಿದ್ರಾಮಯ್ಯ’ ಅಂತ ನಿಂದಿಸಿ, ಅವರ ಆಡಳಿತಕ್ಕೆ ಹಿಂದೂ ವಿರೋಧಿ ಬಣ್ಣ ಕಟ್ಟಿ, ಹಾದೀ-ಬೀದಿಯಲ್ಲಿ ಬಾಯಿ ಬಡಿದುಕೊಂಡರೂ ಬಿಜೆಪಿಗೆ ರಾಜ್ಯ ಮತದಾರ ಸಂಪೂರ್ಣ ಅಧಿಕಾರ ನೀಡದೇ ಹೋದದ್ದು ಎಲ್ಲೋ ಒಂದು ಬಿಜೆಪಿ ನಾಯಕರನ್ನು ಇನ್ನಿಲ್ಲದ್ದಂತೆ ಚುಚ್ಚಿದೆ, ನಿದ್ದೆಗೆಡಿಸಿದೆ. ಹೇಗಾದರೂ ಸರಿಯೇ ಅಧಿಕಾರ ಪಡೆದೇ ತೀರಬೇಕೆಂಬ ಹಠಕ್ಕೆ ಬಿದ್ದಿರುವ ರಾಜ್ಯ ಭಾಜಪ ನಾಯಕರು ಕುಮಾರಸ್ವಾಮಿಯ ಮೇಲೂ ಅದೇ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು ಮಾತಿಗೆ ಮುಂಚೆ ‘37 ಸೀಟಿನಿಂದ ಮುಖ್ಯಮಂತ್ರಿಯಾಗಿದ್ದೀರಿ, ನಿಮಗೆ ಜನ ಬೆಂಬಲ ಇಲ್ಲ, ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರ ನೀವು ಮುಖ್ಯಮಂತ್ರಿ ಉತ್ತರ ಕರ್ನಾಟಕಕ್ಕಲ್ಲ, ನಾಲಾಯಕ್ ಮುಖ್ಯಮಂತ್ರಿ, ವಚನ ಭ್ರಷ್ಟ ನಾಯಕ ಹಾಗೇ-ಹೀಗೆ’ ಎಂಬೆಲ್ಲಾ ಹೇಳಿಕೆಗಳು, ಕುಹಕಗಳನ್ನು ಆಡುತ್ತಾ ದಿನಕ್ಕೊಂದು ಸೃಷ್ಟಿಸಿ ಆ ವಿವಾದಗಳ ಮೂಲಕವೇ ಅವರನ್ನು ಹಣಿದು ಈ ಸರಕಾರ ವನ್ನು ಅಸ್ಥಿರಗೊಳಿಸಬೇಕೆಂದು ಬೃಹನ್ನಾಟಕವಾಡುತ್ತಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮಾಡಬೇಕೆಂದು ಬೇಡಿಕೆ ಮುಂದಿಡುತ್ತಿರುವ ಘಟಾನುಘಟಿ ಜನನಾಯಕರು ಮತ್ತು ಹೋರಾಟಗಾರರು ಸತ್ಯಕ್ಕಿಂತ ಸುಳ್ಳನ್ನೇ ದೊಡ್ಡ ಮಟ್ಟದಲ್ಲಿ ಹರಡುತ್ತಾ ಸುಳ್ಳನ್ನೇ ಸತ್ಯವಾಗಿಸಲು ಹೊರಟಿದ್ದಾರೆ.

Bengaluru: JD(S) leader HD Kumaraswamy and party MLAs show victory sign to celebrate after chief minister BS Yediyurappa announced his resignation before the floor test, at Vidhana Soudha, in Bengaluru, on Saturday. Supreme Court had ordered Karnataka BJP Government to prove their majority in a floor test at the Assembly .(PTI Photo) (PTI5_19_2018_000197B)

ಹೌದು, ಇತ್ತೀಚಿನ ಕೆಲ ದಿನಗಳಿಂದ ಮುಖ್ಯಮಂತ್ರಿಯನ್ನು ‘ವಿವಾದ ಕುಮಾರ’ರನ್ನಾಗಿಸಲು ನಡೆಸುತ್ತಿರುವ ಷಡ್ಯಂತ್ರ ಮಾತ್ರ ತೀರಾ ಅಸಹ್ಯ ಹುಟ್ಟಿಸುವಂತಿದೆ. ಅದರಲ್ಲೂ ಇಡೀ ದೇಶದಲ್ಲಿ ಯಾವ ಮುಖ್ಯಮಂತ್ರಿಯೂ ದೃಢ ನಿರ್ಧಾರ ಮಾಡಿ, ರೈತರ 46 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿರುವ ಕುಮಾರಸ್ವಾಮಿಯನ್ನು ಕೇವಲ ಒಂದು ಭಾಗದ ಮುಖ್ಯಮಂತ್ರಿಯಷ್ಟೇ ಎಂಬಂತೆ ಪ್ರಚಾರ ಮಾಡುತ್ತಿರುವುದು, ಅದರ ಹಿಂದಿರುವ ತೀವ್ರ ಅಸಹನೆಯ ವಾತಾವರಣ ಅಕ್ಷಮ್ಯ.

ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಕೇವಲ ಟೀಕೆಗಳನ್ನು ಹರಿಬಿಡುತ್ತಿರುವ ರಾಜ್ಯ ಬಿಜೆಪಿ ನಾಯಕರು, ರಾಜ್ಯದ ಹಲವಾರು ಜ್ವಲಂತ ಸಮಸ್ಯೆಗಳ ಕುರಿತು, ರಾಜ್ಯದಲ್ಲಿ ಎದುರಾಗಿರುವ ಹಲವಾರು ಅತಿವೃಷ್ಟಿ-ಅನಾವೃಷ್ಟಿ, ಪ್ರಕೃತಿ ವಿಕೋಪಗಳಿಗೆ ಕೇಂದ್ರದಿಂದ ಹೆಚ್ಚುವರಿ ತರುವ, ನದಿ ನೀರಿನ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಂತೆ ಒತ್ತಡ ಹೇರುವ ಸರ್ವ ಪಕ್ಷಗಳ ನಿಯೋಗದಲ್ಲಿ ಇದುವರೆವಿಗೂ ಒಂದೇ-ಒಂದು ಬಾರಿಯೂ ರಾಜ್ಯ ಬಿಜೆಪಿಯ ನಾಯಕರು ಪಾಲ್ಗೊಂಡಿಲ್ಲ. ರಾಜ್ಯದ ರೈತ ಬರಗಾಲದ ಬೇಗುದಿಗೆ ಬಲಿಯಾಗಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಹಾದಿ ಹಿಡಿದಿದ್ದರೂ ಅದರ ಬಗ್ಗೆ ಎಂದೂ ಚಕಾರವೆತ್ತದವರು ಇದೀಗ, ರಾಜ್ಯದ ಪ್ರತಿಯೊಂದು ಸಮಸ್ಯೆಯನ್ನು ರಾತ್ರಿ ಕಳೆಯುವುದರೊಳಗೆ ಬಗೆಹರಿಸಬಿಡಬೇಕೆಂದು ಒತ್ತಡ ಹೇರುತ್ತಿರುವುದು ಹಾಸ್ಯಾಸ್ಪದ.

ಸಾಲ ಮನ್ನಾ ಯೋಜನೆಯಿಂದ ಹಿಡಿದು, ಕೊಡಗಿನಲ್ಲಾದ ಜಲಪ್ರಳಯ, ನಿನ್ನೆ-ಮೊನ್ನೆಯ ಕಬ್ಬು ಬೆಳೆಗಾರರ ಹೋರಾಟದವರೆವಿಗೂ ಇದೇ ಗಿಮಿಕ್ ರಾಜಕಾರಣವನ್ನೇ ಮಾಡ ಹೊರಟಿರುವ ರಾಜ್ಯ ಬಿಜೆಪಿ ನಾಯಕರು ಮತ್ತೊಂದು ತರಹದ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಏಕೆಂದರೆ ಹೀಗಾಗಲೇ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ನಾಯಕರು ರಾಜ್ಯವ್ಯಾಪಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ, ಹೋರಾಟ ಮಾಡುವಂತೆ ಸೂಚಿಸಿದ್ದಲ್ಲದೇ, ಬೆಳಗಾವಿ ಅಧಿವೇಶನ ಬಹಿಷ್ಕರಿಸಿ ಲಕ್ಷಕ್ಕೂ ಹೆಚ್ಚು ರೈತರನ್ನು ಸೇರಿಸಿ ಹೋರಾಟ ಮಾಡುವ ಮಾತನಾಡುತ್ತಿದ್ದಾರೆ; ಅದೇ ಪಕ್ಷದ ಉತ್ತರ ಕರ್ನಾಟಕದ ನಾಯಕರೇ ಆ ಸಕ್ಕರೆ ಕಂಪನಿಗಳ ಮಾಲೀಕರಾಗಿದ್ದಾರೆ ಎಂಬುದರ ಅರಿವಿದ್ದೂ. ಪ್ರತ್ಯೇಕ ಉತ್ತರ ಕರ್ನಾಟಕದ ಪರ ಧ್ವನಿಯೆತ್ತುವ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿಯಂತಹ ಮಹಾನ್ ನಾಯಕರೇ ಹತ್ತಾರು ಕೋಟಿ ರು. ಬಾಕಿ ಹಣ ನೀಡದೇ ರೈತರನ್ನು ಸತಾಯಿಸುತ್ತಿರುವುದನ್ನು ಮನಗಣದೇ ಪ್ರತಿಭಟನೆಗೆ ಆದೇಶ ನೀಡಿರುವುದು ನಿಜಕ್ಕೂ ದುರಂತವೇ ಸರಿ.

ರೈತರನ್ನು ವಿಧಾನಸೌಧದ ಮಹಡಿಗೆ ಕರೆತಂದ ಮೊದಲ ಮುಖ್ಯಮಂತ್ರಿಯೆಂದರೆ ಅದು ಕುಮಾರಸ್ವಾಮಿ ಮಾತ್ರ. ಇಂದು ಅವರ ಹೇಳಿಕೆಗಳು, ಮತ್ತು ನಡೆನುಡಿಗಳು, ನಿರ್ಧಾರಗಳನ್ನು ಟೀಕೆ ಮಾಡಿದರು ಕೂಡ, ಅಭಿವೃದ್ಧಿ ವಿಚಾರದಲ್ಲಿನ ಅವರ ಚಿಂತನೆಗಳು-ಆಲೋಚನೆಗಳು, ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಗಳು ಅವರ ರೈತಪರವಾದ ಪ್ರಾಮಾಣಿಕ ಕಾಳಜಿಯನ್ನು ಬಿಂಬಿಸುತ್ತಿವೆ. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದರೆ ಇದ್ಯಾವುದನ್ನು ಅರ್ಥೈಸಿಕೊಳ್ಳದೇ ಬೆಳಗಾವಿಯಲ್ಲಿ ಕಬ್ಬು ಹೋರಾಟಗಾರರು ಹೋರಾಟ ನಡೆಸಿದ ರೀತಿ, ಅವರು ತೋರಿದ ನಡೆವಳಿಕೆಗಳು, ಹೇಳಿಕೆಗಳು, ವರ್ತನೆಗಳು ತೀರಾ ಬಾಲಿಶವಾಗಿದ್ದವು. ರಾಜ್ಯದ ಮುಖ್ಯಮಂತ್ರಿಯೇ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರೂ, ವಿಧಾನಸೌಧದಲ್ಲೇ ಮಾತುಕತೆ ಮೂಲಕ ಆ ಸಮಸ್ಯೆಗೆ ಪರಿಹಾರ ನೀಡುವ ನೀಡಿದರೂ ಸಹ ಇನ್ಯಾರದ್ದೋ ಚಿತಾವಣೆ ಮತ್ತು ಕುತಂತ್ರಗಳಿಗೆ ತಮ್ಮನ್ನು ಬಲಿ ಕುರಿಯನ್ನಾಗಿಸಿಕೊಂಡು ರಾಜ್ಯದ ಮುಖ್ಯಮಂತ್ರಿಯನ್ನೇ ಕೀಳು ಮಟ್ಟದಲ್ಲಿ ನಿಂದಿಸಿದ್ದು ವಿಪರ್ಯಾಸ.

ಕೇವಲ ಯೂರಿಯಾ ಕೇಳಿದ್ದಕ್ಕೆ ಅಂದು ಯಡಿಯೂರಪ್ಪ ಸರಕಾರ ರೈತರ ಮೇಲೆ ಗೋಲಿಬಾರ್ ಅಸ್ತ್ರ ಪ್ರಯೋಗಿಸಿತ್ತು. ಆದರೆ ಇದೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಬೆಳಗಾವಿಯ ಸುವರ್ಣ ಸೌಧದ ಗೇಟ್ ಒಡೆದು ಕಬ್ಬಿನ ಲಾರಿಯನ್ನು ಒಳ ನುಗ್ಗಿಸಲು ಪ್ರಯತ್ನಿಸಿದರು ಕೂಡ ರೈತರ ಮೇಲೆ ಪೋಲಿಸ್ ಅಸ್ತ್ರ ಪ್ರಯೋಗಿಸಲಿಲ್ಲ. ಅವರ ಸಲ್ಲದ ಕೇಸುಗಳನ್ನು ಹೇರಲು ಹೊರಡಲಿಲ್ಲ. ಸಲ್ಲಿಲ್ಲ. ಹತ್ತಾರು ವರ್ಷಗಳ ಸಮಸ್ಯೆಯನ್ನು ಕುಮಾರಸ್ವಾಮಿಯ ತಲೆಗೆ ಕಟ್ಟಿ, ಅವರ ಹೇಳಿಕೆಗಳನ್ನು ವಿವಾದವನ್ನಾಗಿಸಿ, ಮಹಿಳೆಯನ್ನು ಮುಂದಿಟ್ಟುಕೊಂಡು ಕಣ್ಣೀರಿನ ರಾಜಕೀಯ ಮಾಡಲು ಹೊರಟಿದ್ದು ಆ ಮಹಾನ್ ರೈತ ಹೋರಾಟಗಾರರಿಗೆ ಶೋಭೆ ತರುವಂಥದ್ದಲ್ಲ ಎಂದಂತೂ ಹೇಳಬೇಕು.

ಮಾತೆತ್ತಿದರೆ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಬೊಂಬಡ ಹೊಡೆಯುವ ಜಾರಕಿಹೊಳಿ ಬ್ರದರ್ಸ್, ಉಮೇಶ್ ಕತ್ತಿ, ಎಸ್.ಆರ್. ಪಾಟೀಲ್, ಮುರುಗೇಶ್ ನಿರಾಣಿ, ಜೊತೆಗೆ ಉಪ ಚುನಾವಣೆಯ ವಿಜೇತ ಅಭ್ಯರ್ಥಿ ಆನಂದ್ ಕುಟುಂಬ ಒಡೆತನದ ಸಕ್ಕರೆ ಕಂಪನಿಗಳೇ ನೂರು ಕೋಟಿಗೂ ಅಧಿಕ ಬಾಕಿ ಹಣ ಪಾವತಿ ಮಾಡಬೇಕಿರುವುದು ನಾಯಕರ ರೈತಪರ ಕಾಳಜಿಯೇ? ಇವರಿಗೆ ಮತ ಹಾಕಿ ಗೆಲ್ಲಿಸುತ್ತಿರುವ ಆ ಮಹಾನ್ ರೈತ ಹೋರಾಟಗಾರರು, ಉತ್ತರ ಕರ್ನಾಟಕ ರೈತರು ಅದೆಷ್ಟು ಪ್ರಜ್ಞಾವಂತರೋ ತಿಳಿಯದು. ಕುಮಾರಸ್ವಾಮಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಬೇಕಿದ್ಧ ಸಭೆಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದು ಉತ್ತರ ಕರ್ನಾಟಕದ ಮೇಲಿನ ಮಲತಾಯಿ ಧೋರಣೆಯಾದರೆ, ಸ್ವತಃ ತಮ್ಮ ಪಕ್ಷದ ನಾಯಕರೇ ನೀಡಬೇಕಾದ ರೈತರ ಬಾಕಿಯನ್ನು ಕೊಡಿಸದೇ ಗೋಸುಂಬೆ ರಾಜಕಾರಣ ಮಾಡುತ್ತಿರುವ ಯಡಿಯೂರಪ್ಪ ಉತ್ತರ ಕರ್ನಾಟಕದ ಜನರ ಕಣ್ಮಣಿ ಆಗಿರುವುದು ದುರಂತ. ಅವರ ಈ ಢೋಂಗಿ ಮಾತುಗಳು, ಹೋರಾಟದ ಎಚ್ಚರಿಕೆಗಳು, ಭೂತದ ಬಾಯಲ್ಲಿ ಭಗವದ್ಗಿತೆ ಕೇಳಿದ್ದಕ್ಕಿಂತ ಹೋಮ-ಹವನಗಳ ಮಂತ್ರೋಚ್ಚಾರಣೆ ಕೇಳಿದಂತೆ ರಾಜ್ಯದ ಜನರಲ್ಲಿ ಭಾಸವಾಗುತ್ತಿದೆ.

ಅಧಿಕಾರದ ಹಪಾಹಪಿಯಿಂದ ರಾಜ್ಯ ಬಿಜೆಪಿ ನಾಯಕರು ಇನ್ನಿಲ್ಲದ ಷಡ್ಯಂತ್ರ, ಕುತಂತ್ರ, ಜಾತಿ ವಿವಾದಗಳು, ಪ್ರಾದೇಶಿಕ ಅಸಮಾನತೆಯ ಕೂಗೆಬ್ಬಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸಲು ಹೊರಟಿರುವುದು ಇಂದಿನ ದಿನಗಳಲ್ಲಿ ಗುಟ್ಟಾಗೇನೂ ಉಳಿದಿಲ್ಲ. ತಿಳಿದೋ-ತಿಳಿಯದೆಯೋ ಮುಖ್ಯಮಂತ್ರಿ ಆಡುತ್ತಿರುವ ಮಾತುಗಳು ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿವೆ. ಅಲ್ಲದೇ ಅವರ ಸಂಪುಟದ ಕೆಲವು ಸಚಿವರ ನಡವಳಿಕೆ, ಅಸಮರ್ಥತೆ ಕುಮಾರಸ್ವಾಮಿಯ ಆಲೋಚನೆಗಳ ಓಟಕ್ಕೆ ತಡೆಯೊಡ್ಡುತ್ತಿವೆ. ಅದರಲ್ಲೂ ಕಾಂಗ್ರೆಸ್ ನ ಕೆಲವು ನಾಯಕರ ವರ್ತನೆ, ಕಾರ್ಯವೈಖರಿಗಳು ಸಮ್ಮಿಶ್ರ ಸರಕಾರಕ್ಕೆ ಕಪ್ಪು ಚುಕ್ಕೆಯೇ ಸರಿ. ಅಲ್ಲದೆ ಕಳೆದ ಬಾರಿ ಇಪ್ಪತ್ತು ತಿಂಗಳ ಕುಮಾರಸ್ವಾಮಿಯ ಆಡಳಿತವನ್ನು ಕಣ್ಣಾರೆ ಕಂಡಿರುವ ಜನತೆ ಮತ್ತೆ ಅದೇ ಮಾದರಿಯ ಆಡಳಿತವನ್ನು ಬಯಸುತ್ತಿದ್ದಾರೆಯೇ ವಿನಃ ಕಣ್ಣೀರಿನ, ಭಾವನಾತ್ಮಕ ಮಾತುಗಳ, ಭಾಷಣಗಳು-ಹೇಳಿಕೆಗಳ ನಡೆನುಡಿಯನ್ನಲ್ಲ.

ಅದರಲ್ಲೂ ವಿರೋಧಿಗಳು ಖೆಡ್ಡಾ ತೋಡಿ ಕಾದು ಕುಳಿತಿರುವ ಸಂದರ್ಭದಲ್ಲಿ ಒಂದು ಚೌಕಟ್ಟು ಮೀರಿ ಆಡುತ್ತಿರುವ ಮಾತುಗಳು ಕುಮಾರಸ್ವಾಮಿಯ ವರ್ಚಸ್ಸಿಗೆ ಅಲ್ಲದೇ ಅವರ ಆರಾಧಿಸುವ, ಪ್ರೀತಿಸುವ, ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕುಳ್ಳಿರಿಸುವ ಕನಸೊಂದಿಗೆ ಶ್ರಮಿಸಿದ ಅದೆಷ್ಟೋ ಮಂದಿಗೆ ಇರಸು-ಮುರಸು ಉಂಟು ಮಾಡುತ್ತಿದೆ. ಆದ್ದರಿಂದ ಇಂತಹ ವರ್ತನೆಗಳು, ವಿವಾದಗಳಿಂದ ದೂರಾಗಿ, ಜನರೊಳಗೆ ಒಬ್ಬರಾಗಿ ಆಡಳಿತ ನಡೆಸುವ ತಮ್ಮ ಹಳೆ ಶೈಲಿಯ ರಾಜಕಾರಣ ಮಾಡಿದರೆ ಒಳಿತು. ಇಲ್ಲದೇ ಹೋದಲ್ಲಿ ಬಿಜೆಪಿಯ ಕುತಂತ್ರ ಷಡ್ಯಂತ್ರಗಳಿಗೆ ಬಲಿಯಾಗಿ ಕೆಟ್ಟ ಮುಖ್ಯಮಂತ್ರಿಯೆಂಬ ಹಣೆಪಟ್ಟಿಯೊಂದಿಗೆ ಇತಿಹಾಸದ ಪುಟ ಸೇರಬೇಕಾದ ಸಂದರ್ಭ ಒದಗಿ ಬರಬಹುದು.

Tags

Related Articles

Leave a Reply

Your email address will not be published. Required fields are marked *

Language
Close