About Us Advertise with us Be a Reporter E-Paper

ಗುರು

ಪೂಜೆಯ ವೇಳೆ ದೇವರಿಗೆ ಗಂಧ ಹಚ್ಚಿ, ಹೂಗಳನ್ನು ಏರಿಸುವುದೇಕೆ?

- ಡಾ. ಎ. ಮಾಧವ ಉಡುಪ

ಭಾವನಾಲೋಕದ ನಿಯಂತ್ರಣವೆಲ್ಲ ಇರುವುದು ದೇವರ ಕೈಯಲ್ಲಿ. ಭಾವನೆಗಳನ್ನೆಲ್ಲ-ಒಳ್ಳೆಯದೇ ಇರಲಿ, ಕೆಟ್ಟದೇ ಇರಲಿ, ಕರುಣಿಸುವವನು ಅವನೇ. ಕೆಟ್ಟ ಭಾವನೆಗಳನ್ನು ಹಿಂಗಿಸಿಕೊಂಡು, ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಳ್ಳುವುದರಿಂದಷ್ಟೇ ವ್ಯಕ್ತಿತ್ವ ವಿಕಸನ ಕೈಗೂಡೀತು. ಭಾವನೆಗಳಿಗೆ ಸಂಭವಿಸಿದ ಕಳೆಯುವ, ಬೆಳೆಯುವ ಕಾರ್ಯಗಳು ದೇವ ಕೃಪೆಯಿಂದಷ್ಟೇ ಕೈಗೂಂಡುವಂಥವು. ದೇವರೊಡನೆ ಆ ರೀತಿ ಭಾವ ಸಂಸ್ಕರಣಗೈಯುವಂತೆ ಮೊರೆ ಇಡುವ ಅಥವಾ ಆ ರೀತಿ ಭಾವ ಸಂವಾದಕ್ಕಿಳಿಯುವ ಪವಿತ್ರ ಅವಧಿಯೇ ಪೂಜೆಯ ಅವಧಿ.

ಈ ಬಗೆಯ ಭಾವಸಂಸ್ಕರಣದ ಪ್ರಾತ್ಯಕಿಕವಾಗಿಯೇ ದೇವರ ಮೂರ್ತಿಗೆ ತಣ್ಣೀರಿನ ಅಭಿಷೇಕ ಮಾಡಿದ ನಂತರ ವಿಗ್ರಹಕ್ಕೆ ಗಂಧವನ್ನು ಹಚ್ಚಲಾಗುತ್ತದೆ. ಬಣ್ಣ ಬಣ್ಣದ ಸೌರಭಯುತ ಅರಳಿದ ಹೂಗಳನ್ನು ಏರಿಸಿ ಅಲಂಕಾರ ಮಾಡಲಾಗುತ್ತದೆ. ಗಂಧದ ಕೊರಡನ್ನು ತೇಯ್ದಾಗ ಬರುವ ಗಂಧವನ್ನು ದೇವರಮೂರ್ತಿಗೆ ಹಚ್ಚುವಾಗ ‘ತ್ಯಾಗದ ಭಾವವನ್ನು ಮೈಗೂಡಿಸಿ ಇತರರ ಒಳಿತಿನ ಸೇವೆಯೇ ಸುಗಂಧ ಬೀರುವಂತೆ ಮಾಡಲಾರೆಯಾ ಪ್ರಭೂ!’ ಎಂಬ ಮೋರೆಯೇ ಮಿಡಿಯುತ್ತಿರಬೇಕು. ಅಣಿಗೊಳಿಸಿರುವ ಅರಳಿದ ಬಗೆಬಗೆಯ ಹೂಗಳನ್ನು ಭಾವಾರ್ಚನೆಗೆ ಸಿದ್ಧವಾದ ವಿವಿಧ ಭಾವಮುಸುಕಗಳೆಂದೇ ಪರಿಗಣಿಸಬೇಕು.

ಪ್ರೀತಿ, ತಾಳ್ಮೆ, ಕ್ಷಮೆ, ನಿಸ್ವಾರ್ಥತೆ. ಧ್ಯೆರ್ಯ, ಕೆಚ್ಚು , ದೃಢತೆ, ಆತ್ಮವಿಶ್ವಾಸವೇ ಮೊದಲಾದ ವಿವಿಧ ಭಾವಗಳನ್ನೇ ಪ್ರತಿನಿಧಿಸುತ್ತ ಯಾವತ್ತೂ ಇಚ್ಛಾಶಕ್ತಿಯನ್ನೇ ಅವು ಬಿಂಬಿಸುತ್ತವೆ. ಆ ದೇವರು ವ್ಯಕ್ತಿಯಲ್ಲಿ ಈ ಎಲ್ಲ ಭಾವಕುಸುಮಗಳನ್ನು ಅರಳಿಸದೇ ಹೋದರೆ ವ್ಯಕ್ತಿತ್ವ ವಿಕಸನ ಎಂದಿಗೂ ಕೈಗೂಡದು. ಜೊತೆಗ ಈ ಭಾವಗಳಿಗೆ ವಿರುದ್ಧವಾದ ದ್ವೇಷ, ಅಸಹನೆ, ಸ್ವಾರ್ಥತೆ, ಚಾಂಚಲ್ಯ ಭಯಗಳೇ ಮೊದಲಾದ ಭಾವಗಳನ್ನು ಹೋದರೂ ವ್ಯಕ್ತಿಯ ಸ್ಥಿತಿ ಶೋಚನೀಯವೇ ಸೈ. ಆದ್ದರಿಂದ ‘ಇಚ್ಚಾಶಕ್ತಿಯನ್ನು ಕರುಣಿಸಿ ಧನಾತ್ಮಕವಾದ ಪ್ರೀತಿಯೇ ಮೊದಲ ಭಾವಗಳನ್ನು ಅರಳಿಸಿ, ಋಣಾತ್ಮಕವಾದ ದ್ವೇಷವೇ ಮೊದಲಾದ ಭಾವಗಳನ್ನು ಹಿಂಗಿಸಿ ಭಾವ ಸಂಸ್ಕರಣಗೈದು ಭಾವೋದ್ಧಾರ ಗೈಯಲಾರೆಯಾ ಪ್ರಭೂ!’ ನಲಿವಿನ ಸೌರಭಸೂಸುತ್ತ ಬದುಕುವ ಭಾಗ್ಯ ಕರುಣಿಸಲಾರೆಯಾ ಪ್ರಭು! ಎಂಬ ದೀನಮೋರೆಯೇ ಆ ಹೂಗಳನ್ನು ಏರಿಸುವಾಗಲೆಲ್ಲ ಮಡಿಯುವಂತಾಗಬೇಕು.

ಹಸಿರು ಹೂಗಳಿಲ್ಲದ ಪ್ರಯುಕ್ತ ‘ನಿನ್ನ ನಾಮಸ್ಮರಣೆ ಮನದಲ್ಲಿ ಸದಾ ಹಸಿರಾಗಿರಲಿ!’ ಎಂದೇ ತುಳಸಿಯನ್ನು ಏರಿಸಬೇಕು. ಹೀಗೆಲ್ಲ ಏರಿಸುವಾಗ ಭಾವ ಕಂಗಳಿಂದ ಕಂಬನಿಯ ಕೋಡಿ ತಾನೇ ತಾನಾಗಿ ಹರಿಯುತ್ತದೆ. ಆಗಲೇ ಇಚ್ಛಾಶಕ್ತಿಯ ದಿವ್ಯ ಕೃಪೋದಯವಾಗುತ್ತದೆ. ಭಾವ ಸಂಸ್ಕರಣೆಗೈದು ಬಗೆಯಲ್ಲಿ ಇಚ್ಛಾಶಕ್ತಿಯ ಅವಿರ್ಭಾವಕ್ಕೆ ದಾರಿ ಮಾಡುವುದೇ ಪೂಜೆಯ ವೇಳೆ ಹೂಗಳನ್ನು ಏರಿಸಿ ಅಲಂಕರಿಸುವ ಉದ್ದೇಶ. ಆ ಹೂಗಳು ಆ ದೇವರ ದಿವ್ಯ ಕೃಪಾವಿಷ್ಟವಾಗಿರುತ್ತವೆಂದೇ ಅವುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close