About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಹಿಳೆಯರು ಮುನ್ನಡೆಸಿದ ಕಾಂಗ್ರೆಸ್‌ ಏಕೆ ತ್ರಿವಳಿ ತಲಾಖ್‌ ನಿಷೇಧ ಮಾಡಲಿಲ್ಲ? ರವಿಶಂಕರ್‌ ಪ್ರಸಾದ್‌

ದೆಹಲಿ: ಕಾಂಗ್ರೆಸ್‌ ಪಕ್ಷ, ಸೋನಿಯಾ ಗಾಂಧಿ ಹಾಗು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ತ್ರಿವಳಿ ತಲಾಖ್‌ ವಿಚಾರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮತ ಬ್ಯಾಂಕ್ ರಾಜಕಾರಣದ ಕಾರಣದಿಂದ ಕಾಂಗ್ರೆಸ್‌ ತ್ರಿವಳಿ ತಲಾಖ್‌ನಂಥ ಪದ್ಧತಿಗಳಿಗೆ ಅಂತ್ಯ ಹಾಡಲು ಮನಸ್ಸು ಮಾಡಲಿಲ್ಲ ಎಂದು ಪ್ರಸಾದ್‌ ತಿಳಿಸಿದ್ದಾರೆ.

“ಪೂರ್ಣ ಜವಾಬ್ದಾರಿಯಿಂದ ಈ ವಿಚಾರವಾಗಿ ಗಂಭೀರ ಆಪಾದನೆ ಮಾಡುತ್ತಿದ್ದೇನೆ. ಪ್ರತಿಷ್ಠಿತ ಮಹಿಳೆಯೊಬ್ಬರಿಂದ ಮುನ್ನಡೆಸಲ್ಪಟ್ಟ ಕಾಂಗ್ರೆಸ್‌ ತ್ರಿವಳಿ ತಲಾಖ್‌ನಂಥ ಅಮಾನವೀಯ ಕೃತ್ಯಗಳಿಗೆ ಸಂಸದೀಯ ಕಾನೂನಿನ ಮೂಲಕ ಅಂತ್ಯ ಹಾಡಲು ಮುಂದಾಗಲಿಲ್ಲ. ಇದಕ್ಕೆಲ್ಲ ಮತಬ್ಯಾಂಕ್‌ ರಾಜಕೀಯವೇ ಕಾರಣ” ಎಂದು ಪ್ರಸಾದ್‌ ತಿಳಿಸಿದ್ದಾರೆ.

ತ್ರಿವಳಿ ತಲಾಖ್‌ಅನ್ನು  ಶಿಕ್ಷಾರ್ಹ ಅಪರಾಧ ಎಂದು ಕೇಂದ್ರ ಸಂಪುಟ ಸುಗ್ರೀವಾಜ್ಞೆ ಹೊರಡಿಸಿದ ಕೆಲವೇ ಗಂಟೆಗಳ ಬಳಿಕ ಪ್ರಸಾದ್‌ ಮಾತನಾಡಿದ್ದಾರೆ. ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧದ ಮಸೂದೆಗೆ ಅಡ್ಡಿಪಡಿಸಿದ ಕಾಂಗ್ರೆಸ್‌ ವಿರುದ್ಧ ಪ್ರಸಾದ್‌ ಟೀಕಾಪ್ರಹಾರ ಮಾಡಿದ್ದಾರೆ.

ಸುಗ್ರೀವಾಜ್ಞೆಯ ವಿವರಣೆ ನೀಡಿದ ಸಚಿವರು, “ಪ್ರಕರಣ ಸಂಬಂಧ ಸಂತ್ರಸ್ತ ಪತ್ನಿ ಅಥವಾ ಆಕೆಯ ಸಂಬಂಧಿಕರು ದೂರು ನೀಡಿದಲ್ಲಿ ಮಾತ್ರವೇ ಎಫ್‌ಐಆರ್‌ ದಾಖಲಿಸಲಾಗುವುದು. ಎರಡನೆಯದಾಗಿ , ಪತ್ನಿಯ ಒಪ್ಪಿಗೆ ಮೇರೆಗೆ ಮ್ಯಾಜಿಸ್ಟ್ರೇಟ್‌ ಸಮ್ಮುಖದಲ್ಲಿ ರಾಜಿ ಮಾಡಿಕೊಳ್ಳಬಹುದು. ಸೂಕ್ತ ಕಾರಣಗಳ ಆಧಾರದ ಮೇಲೆ ಆಪಾದಿತನಿಗೆ ಜಾಮೀನು ಮಂಜೂರು ಮಾಡುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ಗೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“ಒಂದು ವೇಳೆ ತಲಾಖ್‌ ಸಂತ್ರಸ್ತೆ ಅಪ್ರಾಪ್ತ ಮಕ್ಕಳ ತಾಯಿಯಾಗಿದ್ದಲ್ಲಿ ಅವುಗಳ ಜವಾಬ್ದಾರಿಯನ್ನು ತಾಯಿಗೆ ನೀಡಲಾಗುವುದು. ಅಲ್ಲದೇ ಜೀವನಾಂಶ ನೀಡುವ ಕುರಿತಾಗಿಯೂ ಮ್ಯಾಜಿಸ್ಟ್ರೇಟ್‌ ನಿರ್ಧಾರ ಮಾಡುವ ಅಧಿಕಾರವಿದೆ” ಎಂದು ಪ್ರಸಾದ್‌ ಸೇರಿಸಿದ್ದಾರೆ.

ಸಂಸತ್ತಿನ ಮೇಲ್ಮನೆಯಲ್ಲಿ ತ್ರಿವಳಿ ತಲಾಖ್‌ ನಿಷೇಧ ಸಂಬಂಧ ಮಸೂದೆಯನ್ನು ಅಂಗೀಕಾರ ಮಾಡಿಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರಕಾರ ಇದೀಗ  ಸುಗ್ರೀವಾಜ್ಞೆ ತಂದಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಐತಿಹಾಸಿಕ  ತೀರ್ಪು ನೀಡಿದ್ದ ಸುಪ್ರೀಂ ಕೊರ್ಟ್, ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ತೀರ್ಪಿತ್ತು, ಈ ಕುರಿತಂತೆ ಕಾನೂನು ರಚಿಸಲು ಕೇಂದ್ರ ಸರಕಾರಕ್ಕೆ ತಿಳಿಸಿತ್ತು.

Tags

Related Articles

Leave a Reply

Your email address will not be published. Required fields are marked *

Language
Close